ಇಂದಿನ ಇತಿಹಾಸ
ಜೂನ್ 9
ನಂದಿನಿ ಸತ್ಪತಿ ಜನ್ಮದಿನ. ಇವರು ರಾಜಕಾರಣಿ ಹಾಗೂ ಒರಿಸ್ಸಾದ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ.
2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರನ್ನು ಮರಳಿ ಭೂಮಿಗೆ ಕರೆತರುವ ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯು ಯಶಸ್ವಿಯಾಗಿ ಗಗನಕ್ಕೆ ನೆಗೆಯಿತು. ಇದರೊಂದಿಗೆ ಆರು ತಿಂಗಳಿನಿಂದ ಬಾಹ್ಯಾಕಾಶ ನಿಲ್ದಾಣವಾಸಿಯಾದ ಸುನೀತಾ ವಿಲಿಯಮ್ಸ್ ಮತ್ತು ಇತರ ಗಗನಯಾನಿಗಳ ಮರುಪಯಣಕ್ಕೆ ದಿನಗಣನೆ ಆರಂಭವಾಯಿತು.
2007: ವಿಮಾನ ಪ್ರಯಾಣದ ಕಾಲದಲ್ಲಿ ಸಸ್ಯಾಹಾರದ ಬದಲು ಮಾಂಸಾಹಾರ (ಕೋಳಿಮಾಂಸ) ನೀಡಿ ಮಾನಸಿಕ ಯಾತನೆ, ಆಘಾತ ಮತ್ತು ಖಿನ್ನತೆಗೆ ಒಳಗಾಗುವಂತೆ ಮಾಡಿದ್ದಕ್ಕಾಗಿ ಬ್ರಾಹ್ಮಣ ಪ್ರಯಾಣಿಕ ಅರವಿಂದ ಶರ್ಮಾ ಅವರಿಗೆ 20 ಸಾವಿರ ರಿಂಗಿಟ್ (ಸುಮಾರು 2.35 ಲಕ್ಷ ರೂಪಾಯಿ) ಪರಿಹಾರ ನೀಡುವಂತೆ ಕ್ವಾಲಾಲಂಪುರದ ನ್ಯಾಯಾಲಯವು ಮಲೇಷಿಯಾ ಏರ್ ಲೈನ್ಸ್ ಕಂಪೆನಿಗೆ ಆದೇಶ ನೀಡಿತು.
2007: ಬುದ್ಧ ಜಯಂತಿ ಅಂಗವಾಗಿ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿದಲಿತ ಸಂಘರ್ಷ ಸಮಿತಿಯು ಏರ್ಪಡಿಸಿದ್ದ `ಬುದ್ಧನೆಡೆಗೆ ಮರಳಿ ಮನೆಗೆ' ಧಮ್ಮ ದೀಕ್ಷಾ ಸಮಾವೇಶದಲ್ಲಿ ಸಹಸ್ರಾರು ದಲಿತರು ಬೌದ್ಧ ಧರ್ಮ ಸ್ವೀಕರಿಸಿದರು.
2007: ಬೊಪೋರ್ಸ್ ಫಿರಂಗಿ ಖರೀದಿ ವಹಿವಾಟಿನಲ್ಲಿ ಬಹುಕೋಟಿ ಲಂಚ ಪಡೆದ ಆರೋಪಕ್ಕೆ ಒಳಗಾದ ಇಟಲಿ ವ್ಯಾಪಾರಿ ಒಟ್ಟಾವಿಯೋ ಕ್ವಟ್ರೋಚಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅರ್ಜೆಂಟೀನಾದ ಎಲ್ವೊರಡೊ ನ್ಯಾಯಾಲಯ ನಿರಾಕರಿಸಿತು.
2007 ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಂಧನಕ್ಕೆ ಒಳಗಾಗಿದ್ದ ಮಾಜಿ ಕ್ರಿಕೆಟ್ ಟೆಸ್ಟ್ ಆಟಗಾರ ಮಣಿಂದರ್ ಸಿಂಗ್ ಅವರು ಎರಡೂ ಕೈಗಳ ಮಣಿಕಟ್ಟುಗಳನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ಘಟಿಸಿತು. 1.5 ಗ್ರಾಂ ಕೊಕೇನ್ ಹೊಂದಿದ್ದ ಆರೋಪದಲ್ಲಿ ಅವರನ್ನು ಮಾದಕ ವಸ್ತು ವಿರೋಧಿ ಪೊಲೀಸರು ಮೇ 22ರಂದು ಬಂಧಿಸಿದ್ದರು..
2007: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್, ಶಬಾನಾ ಆಜ್ಮಿ ಹಾಗೂ ಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರಿಗೆ ಯಾರ್ಕ್ ಶೈರಿನ ಲೀಡ್ಸ್ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.
2007: ಗಣ್ಯ ಸಂಸ್ಕೃತ ವಿದ್ವಾಂಸರಲ್ಲಿ ಒಬ್ಬರಾದ ಮೈಸೂರಿನ ಜಿ.ಎನ್. ಚಕ್ರವರ್ತಿ ಅವರನ್ನು 2006-07ನೇ ಸಾಲಿನ ಸೇಡಿಯಾಪು ಕೃಷ್ಣಭಟ್ಟ ಸ್ಮಾರಕ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಉಡುಪಿಯ ರಾಷ್ಟ್ರಕವಿ ಗೋವಿಂದಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಹೆರಂಜೆ ಕೃಷ್ಣಭಟ್ಟ ಉಡುಪಿಯಲ್ಲಿ ಪ್ರಕಟಿಸಿದರು.
2006: ಅಸ್ವಸ್ಥರಾಗಿ ಬೆಂಗಳೂರಿನ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಜನಪದ ಕಲಾವಿದ ಡಾ. ಎಸ್.ಕೆ. ಕರೀಂಖಾನ್ (84) ಅವರಿಗೆ ಬೆಂಗಳೂರಿನ ಮೇಯರ್ ಮಮ್ತಾಜ್ ಬೇಗಂ ಅವರು ಆಸ್ಪತ್ರೆಯಲ್ಲೇ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿದರು.
2006: ಜರ್ಮನಿಯ ಮ್ಯೂನಿಕ್ಕಿನಲ್ಲಿ ಸಾಂಪ್ರದಾಯಿಕ ವಾದ್ಯ, ಜನಪದ ಹಾಡು ಮತ್ತು ನೃತ್ಯಗಳ ಮನಸೂರೆಗೊಳ್ಳುವ ಸಂಭ್ರಮದ ನಡುವೆ 18ನೇ ಫುಟ್ಬಾಲ್ ವಿಶ್ವಕಪ್ ಆರಂಭವಾಯಿತು. 32 ದೇಶಗಳ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡವು.
2006: ಐಜೆಟಿ ವಿಮಾನ ಅತಿ ಹೆಚ್ಚಿನ ಉಷ್ಣಾಂಶದಲ್ಲಿ ಸುಸೂತ್ರವಾಗಿ ಹಾರಾಟ ನಡೆಸುವ ಮೂಲಕ ವಿಮಾನಯಾನ ದಾಖಲೆ ನಿರ್ಮಾಣ ಮಾಡಿತು. ಎಚ್.ಎ.ಎಲ್. ತಯಾರಿಸಿರುವ ಎರಡು ಮಾದರಿಯ ಈ ವಿಮಾನಗಳು ಎಲ್ಲ ವಾತಾವರಣದಲ್ಲೂ ಪರೀಕ್ಷಾರ್ಥ ಹಾರಾಟ ನಡೆಸಿ ಮನ್ನಣೆ ಪಡೆದವು. ನಾಗಪುರದಲ್ಲಿ ಈ ವಿಮಾನಗಳನ್ನು ಮೂರು ಗಂಟೆ ಕಾಲ 13 ರೀತಿಯ ಪರೀಕ್ಷೆಗೆ ಒಳಪಡಿಸಲಾಯಿತು. 2003ರಲ್ಲಿ ಹಾರಾಟ ಆರಂಭಿಸಿದ ಐಜೆಟಿ 2008ರಲ್ಲಿ ಭಾರತೀಯ ವಾಯಪಡೆಗೆ ಸೇರ್ಪಡೆ ಆಗಲಿದೆ.
2001: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ನ್ಯಾಯಾಲಯವೊಂದು ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರಿಗೆ ಮೂರು ವರ್ಷದ ಸೆರೆವಾಸ ಶಿಕ್ಷೆ ವಿಧಿಸಿತು.
1982: ಹಠಾತ್ತನೆ ಬಂದ ಭಾರಿ ಮಳೆಯಿಂದಾಗಿ ಉಡುಪಿಯ ತಗ್ಗು ಪ್ರದೇಶಗಳಲ್ಲಿ ಜಲ ಪ್ರಳಯವಾಗಿ ನೂರಾರು ಮನೆಗಳು ಕುಸಿದು 15 ಜನ ಮೃತರಾದರು.
1959: ಅಣ್ವಸ್ತ್ರ ಹೊತ್ತ ಅಮೆರಿಕದ ಮೊತ್ತ ಮೊದಲ ಪೋಲಾರಿಸ್ ಜಲಾಂತರ್ಗಾಮಿಯು ಜಾರ್ಜ್ ವಾಷಿಂಗ್ಟನ್ ನೌಕಾಪಡೆಗೆ ಸೇರ್ಪಡೆಯಾಯಿತು.
1954: ಸಾಹಿತಿ ರೇಖಾ ಕಾಕಂಡಕಿ ಜನನ.
1954: ಶಾಂತಾ ಇಮ್ರಾಪುರ ಜನನ.
1950: ಸಾಹಿತಿ ಅರುಂಧತಿ ರಮೇಶ್ ಜನನ.
1950: ವೃತ್ತಿ ರಂಗಭೂಮಿಯಿಂದ ಟಿ.ವಿ. ಧಾರಾವಾಹಿಯವರೆಗೆ ಅಭಿನಯದಲ್ಲಿ ವಿಶಿಷ್ಟ ಸಾಧನೆ ಮಾಡಿದ ಬಿ. ಜಯಶ್ರೀ ಅವರು ಬಸವರಾಜ್ - ಜಿ.ವಿ. ಮಾಲತಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.
1949: ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತೆ ಕಿರಣ್ ಬೇಡಿ ಜನ್ಮದಿನ. ಭಾರತೀಯ ಪೊಲೀಸ್ ಸೇವೆಯನ್ನು ಸೇರಿದ ಮೊತ್ತ ಮೊದಲ ಮಹಿಳೆ ಈಕೆ.
1946: ಸಿಯಾಮಿನ ಚಕ್ರಿ ರಾಜವಂಶದ ದೊರೆ `8ನೇ ರಾಮ' ಎಂದೇ ಖ್ಯಾತರಾದ ಆನಂದ ಮಹಿದೋಲ್ (1925-46) ತಮ್ಮ ಹಾಸಿಗೆಯಲ್ಲಿ ಗುಂಡೇಟಿನಿಂದ ಮೃತರಾಗಿ ಬಿದ್ದಿದ್ದುದು ಪತ್ತೆಯಾಯಿತು. ಅವರ ನಿಗೂಢ ಮರಣಕ್ಕೆ ಕಾರಣ ಏನೆಂಬುದು ಪತ್ತೆಯಾಗಲೇ ಇಲ್ಲ. ಈ ಕೊಲೆಯ ವಿವಾದ ಥೈಲ್ಯಾಂಡಿನ ಸಾಂವಿಧಾನಿಕ ಸರ್ಕಾರವನ್ನು ದುರ್ಬಲಗೊಳಿಸಿ, ಸೇನಾ ಆಡಳಿತದ ಪುನರಾಗಮನಕ್ಕೆ ನೆರವಾಯಿತು.
1942: ಸಾಹಿತಿ ಕೆ.ಎನ್. ಭಗವಾನ್ ಜನನ.
1938: ಸಾಹಿತಿ ಗುರುಮೂರ್ತಿ ಪೆಂಡಕೂರು ಅವರು ವಿರೂಪಣ್ಣ- ರಾಮಕ್ಕ ದಂಪತಿಯ ಪುತ್ರನಾಗಿ ಬಳ್ಳಾರಿ ಜಿಲ್ಲೆಯ ತುಂಗಭದ್ರಾ ಜಲಾಶಯದ ಮುಳುಗಡೆಯಾದ ದೇವರ ಕೆರೆಯಲ್ಲಿ ಜನಿಸಿದರು.
1936: ಸಾಹಿತಿ ಎಸ್. ಕೆ. ಜೋಶಿ ಜನನ.
1934: ವಾಲ್ಟ್ ಡಿಸ್ನಿ ಅವರ `ದಿ ವೈಸ್ ಲಿಟ್ಲ್ ಹೆನ್' ನಲ್ಲಿ `ಡೊನಾಲ್ಡ್ ಡಕ್' ಜನ್ಮ ತಳೆಯಿತು.
1931: ನಂದಿನಿ ಸತ್ಪತಿ ಜನ್ಮದಿನ. ಇವರು ರಾಜಕಾರಣಿ ಹಾಗೂ ಒರಿಸ್ಸಾದ ಮೊತ್ತ ಮೊದಲ ಮಹಿಳಾ ಮುಖ್ಯಮಂತ್ರಿ.
1898: ಬ್ರಿಟನ್ ಚೀನಾದಿಂದ ಹಾಂಕಾಂಗನ್ನು 99 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆಯಿತು. 1997ರಲ್ಲಿ ಅದನ್ನು ಚೀನಾಕ್ಕೆ ಹಿಂದಿರುಗಿಸಲಾಯಿತು.
1812: ಜೊಹಾನ್ ಗೊಟ್ ಫ್ರೀಡ್ ಗ್ಯಾಲೆ (1812-1910) ಜನ್ಮದಿನ. ಜರ್ಮನ್ ಖಗೋಳ ತಜ್ಞನಾದ ಈತ ನೆಪ್ಚೂನ್ ಗ್ರಹವನ್ನು ಮೊತ್ತ ಮೊದಲಿಗೆ ಪತ್ತೆ ಹಚ್ಚಿದ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment