My Blog List

Monday, June 30, 2008

ಇಂದಿನ ಇತಿಹಾಸ History Today ಜೂನ್ 25

ಇಂದಿನ ಇತಿಹಾಸ

ಜೂನ್ 25

ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಭಾರತ ಅದನ್ನು ಸೋಲಿಸುವ ಮೂಲಕ ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ವಿಶ್ವ ಕಪ್ಪನ್ನು ತನ್ನ ಬಗಲಿಗೆ ಹಾಕಿಕೊಂಡಿತು.

2007: ಯಾವ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಸರ್ಕಾರಕ್ಕೆ ಮುಚ್ಚಳಿಕೆ ಬರೆದುಕೊಟ್ಟದ್ದೀರೋ ಅದೇ ಮಾಧ್ಯಮದಲ್ಲಿಯೇ ಒಂದನೇ ತರಗತಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಬೋಧನೆ ಮಾಡಬೇಕು' ಎಂದು ಕರ್ನಾಟಕ ಹೈಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶಿಸಿತು. ಇದರಿಂದಾಗಿ ಕೆಲವು ತಿಂಗಳುಗಳಿಂದ ಸರ್ಕಾರ ಹಾಗೂ ಶಿಕ್ಷಣ ಸಂಸ್ಥೆಗಳ ಮಧ್ಯೆ ಸತತವಾಗಿ ಬಿಸಿ ವಾತಾವರಣ ಸೃಷ್ಟಿಸಿದ್ದ ಭಾಷಾ ಮಾಧ್ಯಮ ವಿವಾದ ತಕ್ಕ ಮಟ್ಟಿಗೆ ತಿಳಿಯಾಯಿತು.

2007: ಉಪ ರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರು ಎನ್ ಡಿಎ ಬೆಂಬಲಿತ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

2007: ಬಿಹಾರದ ಭೋಜಪುರ ಜಿಲ್ಲೆಯ ರಾಮಕರಣಿ ಗ್ರಾಮದ ಶಿವದತ್ತ ಯಾದವ್ ಅವರು ತಮ್ಮ ಆರು ಮಂದಿ ಹೆಣ್ಮಕ್ಕಳನ್ನು ಲಕ್ಷ್ಮೀಪುರಂನ ಕುಟುಂಬ ಒಂದರ 6 ಮಂದಿ ಸಹೋದರರಿಗೆ ಮದುವೆ ಮಾಡಿಕೊಟ್ಟರು. ಒಂದೇ ಮಂಟಪದಲ್ಲಿ ಹಿಂದೂ ಸಂಪ್ರದಾಯದಂತೆ ಮಂತ್ರಘೋಷದ ಮಧ್ಯೆ ನಡೆದ ಈ ಸರಳ ಮದುವೆಗೆ ನೆರೆದಿದ್ದ ಜನ ಸಾಕ್ಷಿಯಾದರು.

2007: ಸೆರೆವಾಸದಲ್ಲಿರುವ ಮಾಜಿ ಸಚಿವ, ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಅಧ್ಯಕ್ಷ ಶಿಬು ಸೊರೇನ್ ಅವರನ್ನು ಗುರಿಯಾಗಿ ಇಟ್ಟುಕೊಂಡು ನಡೆದ ಬಾಂಬ್ ದಾಳಿಯಲ್ಲಿ ಸೊರೇನ್ ಅಪಾಯದಿಂದ ಪಾರಾದರು.

2007: ಇರಾಕಿನಲ್ಲಿ ನಡೆದ ಸರಣಿ ಮಾನವ ಬಾಂಬ್ ದಾಳಿಗಳಿಗೆ ಸಿಲುಕಿ 32ಕ್ಕೂ ಹೆಚ್ಚು ಮಂದಿ ಅಸು ನೀಗಿದರು.

2007: ಹಿರಿಯ ಬಿಜೆಪಿ ಮುಖಂಡ, ಗುಜರಾತ್ ಮಾಜಿ ಗೃಹ ಸಚಿವ ಹರೇನ್ ಪಾಂಡ್ಯ ಕೊಲೆ ಪ್ರಕರಣದಲ್ಲಿ ಒಂಬತ್ತು ಆರೋಪಿಗಳಿಗೆ ಪೋಟಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು.

1991: ಒಕ್ಕೂಟ ರಚನೆಗೆ ಸಂಬಂಧಿಸಿದಂತೆ ಯುಗೋಸ್ಲಾವಿಯಾದ ಆರು ಗಣರಾಜ್ಯಗಳ ಮಧ್ಯೆ ನಡೆದ ಹಲವು ತಿಂಗಳುಗಳ ಮಾತುಕತೆ ವಿಫಲಗೊಂಡ ಬಳಿಕ ಪಶ್ಚಿಮದ ಗಣರಾಜ್ಯಗಳಾದ ಸ್ಲೊವೇನಿಯಾ ಮತ್ತು ಕ್ರೊವೇಷಿಯಾ ಸ್ವಾತಂತ್ರ್ಯ ಘೋಷಣೆ ಮಾಡಿಕೊಂಡವು.

1983: ಲಾರ್ಡ್ಸ್ ಮೈದಾನದಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಭಾರತ ಅದನ್ನು ಸೋಲಿಸುವ ಮೂಲಕ ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ವಿಶ್ವ ಕಪ್ಪನ್ನು ತನ್ನ ಬಗಲಿಗೆ ಹಾಕಿಕೊಂಡಿತು. ಇದು ಕ್ರಿಕೆಟ್ ಜಗತ್ತಿನಲ್ಲಿ ಭಾರತದ ಅತ್ಯಂತ ಸುಂದರ ಘಳಿಗೆಯಾಯಿತು. `ಭಾರತ ಸಾಧಿಸಬಲ್ಲುದು ಎಂಬುದೇ ನನ್ನ ಘೋಷಣೆ' ಎಂದು ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಹೇಳಿದರು.

1957: ಕಾವ್ಯರಚನೆ, ಚಿತ್ರಕಲೆ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಲಾವಿದೆ ಪ್ರೇಮಾಪ್ರಭು ಹಂದಿಗೋಳ ಅವರು ವಿರೂಪಾಕ್ಷಯ್ಯ- ಶಾಂತಾದೇವಿ ದಂಪತಿಯ ಮಗನಾಗಿ ಗದಗ ಜಿಲ್ಲೆ ರೋಣ ತಾಲ್ಲೂಕಿನ ಹೊಳೆ ಆಲೂರಿನಲ್ಲಿ ಜನಿಸಿದರು.

1950: ದಕ್ಷಿಣ ಕೊರಿಯಾದ ಮೇಲೆ ಉತ್ತರ ಕೊರಿಯಾ ದಾಳಿ ಮಾಡಿತು. ಇದರೊಂದಿಗೆ ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳ ಮಧ್ಯೆ ವೈರತ್ವ ಆರಂಭವಾಯಿತು.

1948: ಹೆವಿ ವೇಯ್ಟ್ ಬಾಕ್ಸರ್ ಜೋ ಲೂಯಿ ತನ್ನ ಎದುರಾಳಿ ಜೋ ವಾಲ್ಕೋಟ್ ಅವರನ್ನು ಸೋಲಿಸುವ ಮೂಲಕ 25ನೇ ಸಲಕ್ಕೆ ತಮ್ಮ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ರಕ್ಷಿಸಿಕೊಂಡರು. ಜೋ ಲೂಯಿ ಅವರಿಗೆ ಸವಾಲು ಹಾಕಿ ಈ ರೀತಿ ಪರಾಜಯಗೊಂಡ 22ನೇ ವ್ಯಕ್ತಿಯಾದರು ಜೋ ವಾಲ್ಕೋಟ್.

1932: ಇಂಗ್ಲೆಂಡಿನ ಲಾರ್ಡ್ಸ್ಸ್ ಮೈದಾನದಲ್ಲಿ ಇಂಗ್ಲೆಂಡಿನ ವಿರುದ್ಧ ಆಡುವ ಮೂಲಕ ಭಾರತ ಮೊತ್ತ ಮೊದಲ ಬಾರಿಗೆ ವಿದೇಶವೊಂದರ ಜೊತೆಗೆ ಟೆಸ್ಟ್ ಕ್ರಿಕೆಟಿನಲ್ಲಿ ಪಾಲ್ಗೊಂಡಿತು. ಈ ಪಂದ್ಯದಲ್ಲಿ ಭಾರತ 158 ರನ್ನುಗಳ ಅಂತರದಲ್ಲಿ ಸೋತಿತು.

1931: ಭಾರತದ ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಜನನ.

No comments:

Advertisement