Monday, June 30, 2008

ಇಂದಿನ ಇತಿಹಾಸ History Today ಜೂನ್ 26

ಇಂದಿನ ಇತಿಹಾಸ

ಜೂನ್ 26

ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಸಂವಿಧಾನದ 352ನೇ ವಿಧಿಯನ್ವಯ ದೇಶಾದ್ಯಂತ `ತುರ್ತು ಪರಿಸ್ಥಿತಿ' ಘೋಷಿಸಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ಕೆಟ್ಟ ಘಳಿಗೆ ಎಂದು ಪರಿಗಣನೆಯಾಯಿತು.

2007: ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ಹಾಗೂ ನಿರ್ದೇಶಕ ಜೀವಾ (46) ಅವರು ಮಾಸ್ಕೋದಲ್ಲಿ ಹೃದಯಾಘಾತದಿಂದ ನಿಧನರಾದರು. ತಮಿಳು ಚಲನಚಿತ್ರ `ಧೂಮ್ ಧೂಮ್' ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿತು.

2007: ಗಾಯಗಳನ್ನು ಗುಣಪಡಿಸಬಲ್ಲಂತಹ ದೀರ್ಘಕಾಲ ಉಳಿಯಬಲ್ಲ `ಕೃತಕ ಚರ್ಮವನ್ನು' ತಾನು ಪ್ರಯೋಗಾಲಯದಲ್ಲಿ (ಲ್ಯಾಬೋರೇಟರಿ) ಸೃಷ್ಟಿಸಿರುವುದಾಗಿ ಬ್ರಿಟಿಷ್ ಜೈವಿಕ ತಂತ್ರಜ್ಞಾನ ಕಂಪೆನಿ ಇಂಟರ್ಸೆಟೆಕ್ಸ್ ಗ್ರೂಪಿನ ವಿಜ್ಞಾನಿಗಳು ಪ್ರಕಟಿಸಿದರು. ತಾವು ಮಾಡಿರುವ ಈ ಸಾಧನೆ ವೈದ್ಯಕೀಯ ಪ್ರಯೋಗದಲ್ಲಿ ಯಶಸ್ವಿಯಾಗಿದೆ ಎಂದು ಅವರು ಘೋಷಿಸಿದರು.
2007: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಬೆಂಗಳೂರಿನ ಪದ್ಮನಾಭ ನಗರದ ನಿವಾಸದಲ್ಲಿ ರೈತ ಸೋಮಶೇಖರ (45) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಇವರು ಹಾಸನ ಜಿಲ್ಲೆ ಹಿರೀಸಾವೆಯವರು.

2007: 1789 ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟಿನಲ್ಲಿ ಜುಲೈ 12ರಂದು ಹಿಂದೂ ಪ್ರಾರ್ಥನೆ ಮೂಲಕ ಕಲಾಪಕ್ಕೆ ಚಾಲನೆ ನೀಡಲಾಗುವುದು. ಹಿಂದೂ ಪುರೋಹಿತ ರಾಜನ್ ಅವರು ಪ್ರಾರ್ಥನೆ ಸಲ್ಲಿಸಿ ಇತಿಹಾಸ ಸೃಷ್ಟಿಸುವರು ಓಂಕಾರದೊಂದಿಗೆ ಅವರ ಪ್ರಾರ್ಥನೆ ಆರಂಭವಾಗುವುದು ಎಂದು ಈದಿನ ಪ್ರಕಟಿಸಲಾಯಿತು.

2007: ಮಣಿಪಾಲ ವಿಶ್ವವಿದ್ಯಾಲಯವು ಬೆಂಗಳೂರಿನಲ್ಲಿ ಅನಿಮೇಶನ್ ಪದವಿ ಶಿಕ್ಷಣವನ್ನು ಆರಂಭಿಸಿತು.

2006: ಕೌಟುಂಬಿಕ ಜಗಳದ ಹಿನ್ನೆಲೆಯಲ್ಲಿ ತನ್ನ ಪತ್ನಿ, ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ನಾಲ್ವರು ಸದಸ್ಯರನ್ನೂ ಕಿಚ್ಚಿಟ್ಟು ಕೊಂದ ಮುಂಬೈ ನಗರದ ವರ್ತಕನಿಗೆ ಕೆಳಗಿನ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ಎತ್ತಿಹಿಡಿದು ಮರಣ ದಂಡನೆಯನ್ನು ದೃಢ ಪಡಿಸಿತು. `ಇದು ಅಪರೂಪಗಳಲ್ಲೇ ಅಪರೂಪದ ಪ್ರಕರಣ' ಎಂದು ಹೈಕೋರ್ಟ್ ಬಣ್ಣಿಸಿತು. ತನ್ನ ಪತ್ನಿ ಕಮಲಜೀತ್, ಪುತ್ರ ಅಮನದೀಪ್, ಪುತ್ರಿಯರಾದ ನಿತಿ ಮತ್ತು ತಾನಿಯಾಳನ್ನು 2003ರ ಏಪ್ರಿಲ್ 10ರಂದು ಅಜಿತ್ ಸಿಂಗ್ ಗುಜ್ರಾಲ್ ಬೆಂಕಿ ಹಚ್ಚಿ ಕೊಂದಿದ್ದ.

2006: ಪ್ರಾರ್ಥನೆಯ ಮೂಲಕ 55 ವರ್ಷದ ವ್ಯಕ್ತಿಯ ಕ್ಯಾನ್ಸರ್ ಗುಣಪಡಿಸಿದ `ಪ್ರಾರ್ಥಿಸುವ ಮಾತೆ' ಎಂದೇ ಖ್ಯಾತಿ ಪಡೆದಿರುವ ಕೇರಳದ ತ್ರಿಶ್ಯೂರಿನ ಸಿಸ್ಟರ್ ಯುಫ್ರೇಸಿಯಾ ಅವರನ್ನು `ಪರಮಾನಂದ ನೀಡುವ' ವ್ಯಕ್ತಿಗಳ ಪಟ್ಟಿಗೆ ಸೇರಿಸುವ ಮೂಲಕ ಪೋಪ್ 16ನೇ ಬೆನೆಡಿಕ್ಟ್ ಆಕೆಯ `ಪವಾಡ'ಕ್ಕೆ ಮಾನ್ಯತೆಯ ಮುದ್ರೆ ಒತ್ತಿ ಪತ್ರ ಬರೆದರು. ಸಿಸ್ಟರ್ ಯುಫ್ರೇಸಿಯಾ ಅವರ `ಪ್ರಾರ್ಥನಾ ಪವಾಡ'ದ ಬಗ್ಗೆ ವೈದ್ಯಕೀಯ, ಸೈದ್ಧಾಂತಿಕ ಹಾಗೂ ಕಾರ್ಡಿನಲ್ ಗಳ ಸಮಾಲೋಚನಾ ವರದಿಗಳನ್ನು ಸಲ್ಲಿಸಲಾಗಿತ್ತು. ಸಮೀಪದ ಅಂಚೇರಿಯ ನಿವಾಸಿ ಕ್ಯಾನ್ಸರ್ ರೋಗಿ ಥರಕನ್ ಥಾಮಸ್ ಅವರ ಕಿರಿಹೊಟ್ಟೆಯ ತಟ್ಟೆಲುಬು ಅಥವಾ ಮೂತ್ರಪಿಂಡದ ಕುಳಿಯಲ್ಲಿ ಇದ್ದ ಕ್ಯಾನ್ಸರ್ ಗಡ್ಡೆ 1997ರ ಡಿಸೆಂಬರಿನಲ್ಲಿ ಸಿಸ್ಟರ್ ಯುಫ್ರೇಸಿಯಾ ಅವರ ಪ್ರಾರ್ಥನೆಯಿಂದ ಕ್ಯಾನ್ಸರ್ ವಾಸಿಯಾಯಿತು ಎಂದು ಜುಬಿಲಿ ವೈದ್ಯಕೀಯ ಆಸ್ಪತ್ರೆಯ ಮೂಳೆತಜ್ಞ ಡಾ. ಎಂ. ರಾಜೀವ ರಾವ್ ದೃಢಪಡಿಸಿದ್ದರು.

2006: ಈಕ್ವೆಡಾರ್ ವಿರುದ್ಧ ಫ್ರೀಕಿಕ್ ನಿಂದ ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯಕ ಡೇವಿಡ್ ಬೆಕಮ್ ಮೂರೂ ವಿಶ್ವಕಪ್ ನಲ್ಲಿ ಗೋಲು ಗಳಿಸಿದ ಇಂಗ್ಲೆಂಡಿನ ಏಕೈಕ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಫ್ರಾನ್ಸಿನಲ್ಲಿನಡೆದ 1998ರ ವಿಶ್ವಕಪ್, 2002ರ ವಿಶ್ವಕಪ್ ಮತ್ತು 2006ರ ವಿಶ್ವಕಪ್ನಲ್ಲಿ ಬೆಕಮ್ ಗೋಲು ಗಳಿಸಿದ್ದರು.

1975: ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರು ಸಂವಿಧಾನದ 352ನೇ ವಿಧಿಯನ್ವಯ ದೇಶಾದ್ಯಂತ `ತುರ್ತು ಪರಿಸ್ಥಿತಿ' ಘೋಷಿಸಿದರು. ಆಂತರಿಕ ತೊಂದರೆಗಳಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟಾಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ಕೆಟ್ಟ ಘಳಿಗೆ ಎಂದು ಪರಿಗಣನೆಯಾಯಿತು.

1960: ಕಲಾವಿದ ಸುಗ್ಗನಹಳ್ಳಿ ಷಡಕ್ಷರಿ ಜನನ.

1957: ಕಲಾವಿದ ಕೃಷ್ಣಮೂರ್ತಿ ಎಚ್.ಎಸ್. ಜನನ.

1957: ಕಲಾವಿದೆ ಸುಶೀಲಾ ಮೆಹತಾ ಜನನ.

1945: ಜನಪದ ಗೀತೆ, ಸುಗಮ ಸಂಗೀತ ಕ್ಷೇತ್ರಗಳ ವಿಶಿಷ್ಟ ಗಾಯಕಿ ಜಯಶ್ರೀ ಗುತ್ತಲ ಅವರು ತಿರುಮಲರಾವ್ ದೇಶಪಾಂಡೆ- ಲಕ್ಷ್ಮೀಬಾಯಿ ದಂಪತಿಯ ಮಗಳಾಗಿ ವಿಜಾಪುರ ಜಿಲ್ಲೆಯ ಬದಾಮಿ ತಾಲ್ಲೂಕಿನ ಹುಲ್ಲಿಕೇರಿ ಗ್ರಾಮದಲ್ಲಿ ಜನಿಸಿದರು.

1944: ಐವತ್ತು ರಾಷ್ಟ್ರಗಳ ಪ್ರತಿನಿಧಿಗಳು ವಿಶ್ವಸಂಸ್ಥೆ ಚಾರ್ಟರಿಗೆ ಸಹಿ ಹಾಕಿ ಸರ್ವಾನುಮತದಿಂದ ಅದನ್ನು ಅಂಗೀಕರಿಸಿದರು. 1945ರ ಅಕ್ಟೋಬರಿನಲ್ಲಿ ಅದು ಅನುಷ್ಠಾನಗೊಂಡಿತು.

1928: ಜಪಾನೀ ಸಂಶೋಧಕ ಯೊಶಿರೊ ನಕಾಮತ್ಸ್ ಜನ್ಮದಿನ. 3000 ಪೇಟೆಂಟ್ ಗಳನ್ನು ಪಡೆದುಕೊಂಡು ಅವರು ಜಾಗತಿಕ ದಾಖಲೆಯನ್ನು ಸ್ಥಾಪಿಸಿದ್ದಾರೆ. 1950ರಲ್ಲಿ ಟೋಕಿಯೋದ ಇಂಪೀರಿಯಲ್ ಯುನಿವರ್ಸಿಟಿಯಲ್ಲಿ ಫ್ಲಾಪಿ ಡಿಸ್ಕನ್ನು ಸಂಶೋಧಿಸಿದ ಕೀರ್ತಿ ಕೂಡಾ ಇವರದೇ.

1902: ಅಮೆರಿಕದ ಎಲೆಕ್ಟ್ರಿಕಲ್ ಎಂಜಿನಿಯರ್ ಮತ್ತು ಕೈಗಾರಿಕೋದ್ಯಮಿ ವಿಲಿಯಂ ಪಿ. ಲೀಯರ್ (1902-78) ಜನ್ಮದಿನ. ಇವರ ಲೀಯರ್ ಜೆಟ್ ಕಾರ್ಪೊರೇಷನ್ ಜಗತ್ತಿನಲ್ಲಿ ಬೃಹತ್ ಪ್ರಮಾಣದಲ್ಲಿ ಬಿಸಿನೆಸ್ ಜೆಟ್ ಏರ್ ಕ್ರಾಫ್ಟ್ ಗಳನ್ನು ಮೊತ್ತ ಮೊದಲ ಬಾರಿಗೆ ನಿರ್ಮಾಣ ಮಾಡಿತು. ಆಟೋಮೊಬೈಲ್ ರೇಡಿಯೋ, ಎಂಟು ಟ್ರ್ಯಾಕಿನ ಸ್ಟೀರಿಯೋ ಟೇಪ್ ಪ್ಲೇಯರುಗಳನ್ನು ಆಟೋಮೊಬೈಲುಗಳಿಗಾಗಿ ಅಭಿವೃದ್ಧಿ ಪಡಿಸಿದ್ದು ಕೂಡಾ ಇವರ ಈ ಸಂಸ್ಥೆಯೇ.

1541: ಇನ್ಕಾ ಸಾಮ್ರಾಜ್ಯವನ್ನು ಪರಾಭವಗೊಳಿಸಿದ ಹಾಗೂ ಲಿಮಾ ನಗರವನ್ನು ಸ್ಥಾಪಿಸಿದ ಸ್ಪೇನಿನ ದೊರೆ ಫ್ರಾನ್ಸಿಸ್ಕೋ ಪಿಝಾರೋನನ್ನು (1475-1541) ಕೊಲೆಗೈಯಲಾಯಿತು.

1539: ಶೇರ್ ಶಹಾ ಚೌಸಾ ಕದನದಲ್ಲಿ ಹುಮಾಯೂನನನ್ನು ಸೋಲಿಸಿದನು. ಆಫ್ಘನ್ನರಿಂದ ಸಹಸ್ರಾರು ಮಂದಿ ಹತರಾದರು. ಪರಾರಿಯಾಗಲು ಯತ್ನಿಸಿದವರನ್ನು ಗಂಗಾನದಿಯಲ್ಲಿ ಮುಳುಗಿಸಿ ಸಾಯಿಸಲಾಯಿತು. ಹುಮಾಯೂನ್ ತಪ್ಪಿಸಿಕೊಂಡು ಪಾರಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement