Tuesday, July 1, 2008

ಇಂದಿನ ಇತಿಹಾಸ History Today ಜೂನ್ 28

ಇಂದಿನ ಇತಿಹಾಸ

ಜೂನ್ 28

ಮೊಘಲರ ಕಾಲದ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರಿಸಿತು. ವಿಶ್ವದಾದ್ಯಂತ ಒಟ್ಟು 45 ಸ್ಮಾರಕಗಳನ್ನು ಈ ಪಟ್ಟಿಗೆ ಸೇರಿಸಲು ಗುರುತಿಸಲಾಗಿತ್ತು.

2007: ದೇಶದ ಆರ್ಥಿಕ ಬುನಾದಿಯನ್ನೇ ನಡುಗಿಸಿದ್ದ ನಕಲಿ ಛಾಪಾ ಕಾಗದ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂ ತೆಲಗಿಗೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ನ್ಯಾಯಾಲಯ 13 ವರ್ಷ ಕಠಿಣ ಸಜೆ ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿತು. ಇಷ್ಟೊಂದು ಮೊತ್ತದ ದಂಡ ವಿಧಿಸಿದ್ದು ರಾಷ್ಟ್ರದಲ್ಲೇ ಇದು ಮೊಲನೆಯ ಬಾರಿ ಎನ್ನಲಾಗಿದೆ. ನ್ಯಾಯಾಧೀಶರಾದ ಚಿತ್ರಾ ಬೇಡಿ ಅವರು ಈ ತೀರ್ಪು ನೀಡಿದರು.

2007: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹಾಗೂ ಅವರ ಸಂಪುಟದ ಸಹೋದ್ಯೋಗಿ ಸ್ವಾಮಿ ಪ್ರಸಾದ್ ಮೌರ್ಯ ಅವರು ಉತ್ತರ ಪ್ರದೇಶ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾದರು.

2007: ಮೊಘಲರ ಕಾಲದ ಐತಿಹಾಸಿಕ ಕೆಂಪು ಕೋಟೆಯನ್ನು ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರಿಸಿತು. ವಿಶ್ವದಾದ್ಯಂತ ಒಟ್ಟು 45 ಸ್ಮಾರಕಗಳನ್ನು ಈ ಪಟ್ಟಿಗೆ ಸೇರಿಸಲು ಗುರುತಿಸಲಾಗಿತ್ತು. ಕೆಂಪುಕೋಟೆಯ ಜೊತೆಗೆ ಜಪಾನಿನ ಇವಾಮಿ ಜಿನ್ ಜಾನ್ ಸಿಲ್ವರ್ ಮೈನ್, ತುರ್ಕಮೆನಿಸ್ಥಾನದ ಪಾರ್ಥಿಯಾನ ಪೋರ್ಟ್ರೆಸೆಸ್ ಆಫ್ ಆಫ್ ನಿಸಾ, ಹಾಗೂ ಆಸ್ಟ್ರೇಲಿಯಾದ ಸಿಡ್ನಿ ಒಪೆರಾ ಹೌಸ್ ಸಹಾ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಯಾದವು. ಐದನೆಯ ಮೊಘಲ್ ಚಕ್ರವರ್ತಿ ಷಹಜಹಾನ್ ರಾಜಧಾನಿಯನ್ನು ಆಗ್ರಾದಿಂದ ಷಹಜನಾಬಾದಿಗೆ ಸ್ಥಳಾಂತರಗೊಳಿಸಿದಾಗ ಕೆಂಪುಕೋಟೆಯನ್ನು ನಿರ್ಮಿಸಿದ. ಹೊಸ ರಾಜಧಾನಿಯ ಪೂರ್ವದ ಅಂಚಿನಲ್ಲಿ ಕಟ್ಟಿದ ಈ ಕೋಟೆಗೆ ಕೆಂಪು ಬಣ್ಣದ ಕಲ್ಲುಗಳನ್ನ್ನು ಬಳಸಿದ್ದರಿಂದ `ಕೆಂಪು ಕೋಟೆ' (ಲಾಲ್ ಕಿಲಾ) ಎಂಬ ಹೆಸರು ಬಂತು. ಯಮುನಾ ನದಿಯ ತಟದಲ್ಲಿರುವ ಈ ಕೆಂಪುಕೋಟೆ 2.5 ಕಿ.ಮೀ. ಉದ್ದವಿದ್ದು, 16ರಿಂದ 33 ಮೀಟರುವರೆಗೆ ಎತ್ತರವಿದೆ. 1638ರಲ್ಲಿ ಈ ಕೋಟೆಯ ನಿರ್ಮಾಣಕಾರ್ಯ ಆರಂಭವಾಗಿ 1648ರಲ್ಲಿ ಪೂರ್ಣಗೊಂಡಿತು.

2007: ಕನ್ನಡದ ಖ್ಯಾತ ಲೇಖಕ ಹಂಪ ನಾಗರಾಜಯ್ಯ ಮತ್ತು ತೆಲುಗಿನ ವೆಟೂರಿ ಆನಂದ ಮೂರ್ತಿ ಅವರು `ಭಾಷಾ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ವಿಶ್ವಸಂಸ್ಥೆಯ 192ನೇ ಸದಸ್ಯ ರಾಷ್ಟ್ರವಾಗಿ ಮಾಂಟೆನಿಗ್ರೊ ಗಣರಾಜ್ಯ ಹೊರಹೊಮ್ಮಿತು. 191 ಸದಸ್ಯ ಬಲದ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಮಾಂಟೆನಿಗ್ರೊ ಸದಸ್ಯತ್ವವನ್ನು ಒಪ್ಪಿಕೊಂಡಿತು.

1997: ಲಾಸ್ ವೆಗಾಸ್ ನಲ್ಲಿ ವಿಶ್ವ ಬಾಕ್ಸಿಂಗ್ ಸಂಘದ ಹೆವಿವೇಯ್ಟ್ ಪ್ರಶಸ್ತಿಗಾಗಿ ಹೋರಾಟದ ಮೂರನೇ ಸುತ್ತಿನ ಬಳಿಕ ಎದುರಾಳಿ ಇವಾಂಡರ್ ಹೋಲಿಫೀಲ್ಡ್ ಅವರ ಕಿವಿ ಕಚ್ಚ್ದಿದಕ್ಕಾಗಿ ಮೈಕ್ ಟೈಸನ್ ಅವರನ್ನು ಬಾಕ್ಸಿಂಗ್ ಕ್ರೀಡೆಯಿಂದ ಅನರ್ಹಗೊಳಿಸಲಾಯಿತು. ನೆವಾಡಾ ಸ್ಟೇಟ್ ಅಥ್ಲೆಟಿಕ್ ಕಮೀಷನ್ ನಂತರ ಟೈಸನ್ ಅವರ ಬಾಕ್ಸಿಂಗ್ ಲೈಸೆನ್ಸನ್ನು ನವೀಕರಿಸಿತು.

1982: ಕಾನ್ಪುರ ಮತ್ತು ಮೈನ್ ಪುರಿ ಜಿಲ್ಲೆಗಳಲ್ಲಿ ನಡೆದ 16 ಜನರ ಕಗ್ಗೊಲೆ ಪ್ರಕರಣದ ಪ್ರತಿಧ್ವನಿಯಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ವಿಶ್ವನಾಥ ಪ್ರತಾಪ್ ಸಿಂಗ್ ರಾಜೀನಾಮೆ ಸಲ್ಲಿಸಿದರು.

1972: ಭಾರತದ ಸಂಖ್ಯಾಶಾಸ್ತ್ರಜ್ಞ ಹಾಗೂ ಭೌತತಜ್ಞ ಪ್ರಶಾಂತ ಚಂದ್ರ ಮಹಾಲನೋಬಿಸ್ (1893-1972) ಅವರು ತಮ್ಮ 79ನೇ ಹುಟ್ಟುಹಬ್ಬಕ್ಕಿಂತ ಒಂದು ದಿನ ಮೊದಲು ನಿಧನರಾದರು. ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ ಸ್ಟಿಟ್ಯೂಟ್ ಹುಟ್ಟು ಹಾಕಿದ ಅವರು ಭಾರತದ ಕೈಗಾರಿಕಾ ಧೋರಣೆ ಮತ್ತು ಎರಡನೆಯ ಪಂಚವಾರ್ಷಿಕ ಯೋಜನೆ (1956-61) ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1950ರಲ್ಲಿ ನ್ಯಾಷನಲ್ ಸ್ಯಾಂಪಲ್ ಸರ್ವೆ ನಡೆಸಿದ ಅವರು ಭಾರತದಲ್ಲಿ ಸಂಖ್ಯಾಶಾಸ್ತ್ರ ಸಂಬಂಧಿ ಚಟುವಟಿಕೆಗಳನ್ನು ಸಮನ್ವಯಗೊಳಿಸಲು ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಸೇಷನ್ ಸ್ಥಾಪಿಸಿದರು.

1948: ಸಂಗೀತ, ಪತ್ರಿಕೋದ್ಯಮ, ಜಾಹೀರಾತು, ಸಾರ್ವಜನಿಕ ಸಂಪರ್ಕ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಬಹುಮುಖ ಪ್ರತಿಭೆ ಹೊಂದಿದ್ದ ಗಾಯತ್ರಿ ಚಂದ್ರಶೇಖರ ಅವರು ನೇತ್ರ ಶಸ್ತ್ರಚಿಕಿತ್ಸಕ ಎಸ್. ಕೃಷ್ಣಮೂರ್ತಿ- ರುಕ್ಮಿಣಿ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1944: ಗ್ರಾಮೀಣ ವೈದ್ಯರಾಗಿ, ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಖ್ಯಾತರಾಗಿರುವ ಡಾ. ನಾರಾಯಣ ಭಟ್ಟ ಮೊಗಸಾಲೆ (ಡಾ. ನಾ. ಮೊಗಸಾಲೆ) ಅವರು ವಿಠಲಭಟ್ಟ- ಸರಸ್ವತಿ ದಂಪತಿಯ ಮಗನಾಗಿ ಕಾಸರಗೋಡು ಜಿಲ್ಲೆ ಕೋಳ್ಯೂರು ಗ್ರಾಮದ ಮೊಗಸಾಲೆಯಲ್ಲಿ ಜನಿಸಿದರು. 1966ರಲ್ಲಿ ಕಾಂತಾವರದಲ್ಲಿ ರೈತ ಯುವಕ ಸಂಘ, 1976ರಲ್ಲಿ ಬೇಲಾಡಿಯಲ್ಲಿ ಕಾಂತಾವರ ಕನ್ನಡ ಸಂಘ, 1978ರಲ್ಲಿ ಮೂಡುಬಿದರೆಯಲ್ಲಿ ವರ್ಧಮಾನ ಪ್ರಶಸ್ತಿ ಪೀಠ ಸ್ಥಾಪಿಸಿದ ವೈದ್ಯ ನಾ. ಮೊಗಸಾಲೆ ಅವರು ಈ ಪ್ರಶಸ್ತಿ ಪೀಠದ ಮೂಲಕ ಕರ್ನಾಟಕದಾದ್ಯಂತ ಸಾಹಿತ್ಯ ವಲಯದಲ್ಲಿ ಸುಪರಿಚಿತ ವ್ಯಕ್ತಿ. ಸಾಹಿತ್ಯ ಸಂಘಟನೆಯೊಂದಿಗೆ 14ಕ್ಕೂ ಹೆಚ್ಚು ಸೃಜನಶೀಲ ಸಾಹಿತ್ಯ ಕೃತಿಗಳನ್ನು ರಚಿಸಿದ ಮೊಗಸಾಲೆ ಹಲವಾರು ಕವನ ಸಂಕಲನಗಳನ್ನೂ ಪ್ರಕಟಿಸಿದವರು. ಕಡೆಂಗೋಡ್ಲು ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಹಾವನೂರು ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದ ಮೊಗಸಾಲೆ ಅವರನ್ನು ಅಭಿಮಾನಿಗಳು `ಅಯಸ್ಕಾಂತಾವರ' ಅಭಿನಂದನಾ ಗ್ರಂಥ ಸಮರ್ಪಿಸಿ ಉಡುಪಿಯಲ್ಲಿ ಅಭಿನಂದಿಸಿದರು.

1928: ಸಮನ್ವಯ ಕವಿ, ಸೌಜನ್ಯದ ಕವಿ, ಭಾವಜೀವಿ ಎಂದೆಲ್ಲ ಖ್ಯಾತರಾದ ಚೆನ್ನವೀರ ಕಣವಿ ಅವರು ಸಕ್ರಪ್ಪ- ಪಾರ್ವತವ್ವ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಜನಿಸಿದರು.

1921: ರಾಜಾಮಣಿ ನಾಗರಾಜರಾವ್ ಜನನ.

1921: ಪಿ.ವಿ. ನರಸಿಂಹರಾವ್ ಜನ್ಮದಿನ. ಕಾಂಗ್ರೆಸ್ (ಐ) ಪಕ್ಷದ ಧುರೀಣರಾಗಿದ್ದ ಇವರು 1991ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ (ಐ) ಗೆದ್ದಾಗ ಭಾರತದ ಪ್ರಧಾನಮಂತ್ರಿಯಾದರು.

1919: ಫ್ರಾನ್ಸಿನಲ್ಲಿ `ವಾರ್ಸಿಲ್ಲಿಸ್ ಒಪ್ಪಂದ'ಕ್ಕೆ ಸಹಿ ಮಾಡಿ ಮೊದಲನೇ ಜಾಗತಿಕ ಯುದ್ಧವನ್ನು ಕೊನೆಗೊಳಿಸಲಾಯಿತು.

1914: ಸರ್ಬ್ ರಾಷ್ಟ್ರೀಯವಾದಿ ಗಾವ್ರಿಲೋ ಪ್ರಿನ್ಸಿಪ್ ಆಸ್ಟ್ರಿಯಾದ ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ ಮತ್ತು ಅವರ ಪತ್ನಿ ಸೋಫಿ ಅವರನ್ನು ಸರಯೇವೊದಲ್ಲಿ ಹತ್ಯೆ ಮಾಡಿದ. ಈ ಘಟನೆ ಮೊದಲ ಜಾಗತಿಕ ಯುದ್ಧಕ್ಕೆ ಕಾರಣವಾಯಿತು.

1461: ಇಂಗ್ಲೆಂಡಿನ ರಾಜನಾಗಿ 4ನೇ ಎಡ್ವರ್ಡನ ಪಟ್ಟಾಭಿಷೇಕ ನಡೆಯಿತು.

No comments:

Advertisement