Tuesday, September 23, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 23

ಇಂದಿನ ಇತಿಹಾಸ

ಸೆಪ್ಟೆಂಬರ್ 23

ಉದಾರವಾದಿ ಮುಖಂಡ ಯಸುವೊ ಫುಕುಡಾ (71) ಅವರು ಜಪಾನಿನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಹೀಗಾಗಿ ಇತ್ತೀಚೆಗೆ ರಾಜೀನಾಮೆ ನೀಡಿದ ಶಿಂಜೊ ಅಬೆ ಸ್ಥಾನದಲ್ಲಿ ಅವರು ಪ್ರಧಾನಿ ಹುದ್ದೆಗೆ ಏರಲು ಹಾದಿ ಸುಗಮಗೊಂಡಿತು.

2007: ಶ್ರೀರಾಮನನ್ನು ನಿಂದಿಸಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ತಲೆ ತೆಗೆಯಬೇಕು ಎಂದು ಬಿಜೆಪಿಯ ಮಾಜಿ ಸಂಸದರೊಬ್ಬರು ಹೊರಡಿಸಿದ್ದ `ಫತ್ವಾ'ದಿಂದ ಕುಪಿತಗೊಂಡ ಆಡಳಿತ ಡಿಎಂಕೆ ಪಕ್ಷದ 300ಕ್ಕೂ ಹೆಚ್ಚು ಕಾರ್ಯಕರ್ತರು ಚೆನ್ನೈಯಲ್ಲಿ ವೈದ್ಯರಾಮನ್ ಬೀದಿಯಲ್ಲಿನ ಬಿಜೆಪಿ, ವಿಎಚ್ಪಿ ಮತ್ತು ಹಿಂದೂ ಮುನ್ನಣಿ ಕಚೇರಿಗಳ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಪಕ್ಷದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ತಮಿಳಿಸೈ ಸೌಂದರ್ ರಾಜನ್ ಸೇರಿ 8 ಮಂದಿ ಗಾಯಗೊಂಡರು. ಕೆಲ ಪೊಲೀಸರಿಗೂ ಪೆಟ್ಟಾಯಿತು. ಕಾರೈಕುಡಿಯಲ್ಲಿ ಮಾಜಿ ಸಂಸದ, ಬಿಜೆಪಿಯ ಎಚ್.ರಾಜಾ ಅವರ ಮನೆ ಕೂಡ ದಾಳಿಗೆ ತುತ್ತಾಯಿತು. ಟಿವಿ ಕ್ಯಾಮರಾಗಳ ಸಮ್ಮುಖದಲ್ಲಿಯೇ ಇಡಿ ದಾಳಿ ನಡೆಯಿತು. ಆದರೆ ಪೊಲೀಸರು ಮಾತ್ರ ಅಕ್ಷರಶಃ ಮೂಕಪ್ರೇಕ್ಷರಾಗಿದ್ದರು. ಬಿಜೆಪಿ ಕಚೇರಿ ಮೇಲಿನ ದಾಳಿಯ ನೇತೃತ್ವವನ್ನು ದಕ್ಷಿಣ ಚೆನ್ನೈನ ಡಿಎಂಕೆ ಘಟಕದ ಕಾರ್ಯದರ್ಶಿ ಅನ್ಬಳಗನ್ ವಹಿಸಿದ್ದರು. ರಾಮ ನಿಂದನೆ ಮಾಡಿದ ಕರುಣಾನಿಧಿ ಅವರ ತಲೆ ತೆಗೆಯುವವರಿಗೆ ಅಷ್ಟೇ ತೂಕದ ಚಿನ್ನ ಕೊಡುವುದಾಗಿ ಬಿಜೆಪಿ ಮಾಜಿ ಸಂಸದ ಹಾಗೂ ವಿಎಚ್ಪಿ ನಾಯಕ ರಾಮ್ ವಿಲಾಸ್ ವೇದಾಂತಿ ಅಯೋಧ್ಯೆಯಲ್ಲಿ ನೀಡಿದ ಪ್ರಚೋದನಕಾರಿ ಫತ್ವಾ ಈ ಎಲ್ಲ ರಾದ್ಧಾಂತಕ್ಕೆ ಕಾರಣವಾಯಿತು. ಇದನ್ನು ಹಿಂತೆಗೆದುಕೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಿಎಂಕೆ ಧುರೀಣ ಹಾಗೂ ರಾಜ್ಯದ ವಿದ್ಯುತ್ ಖಾತೆ ಸಚಿವ ಅರ್ಕಾಟ್ ಎನ್.ವೀರಾಸ್ವಾಮಿ ಎಚ್ಚರಿಸಿದ ಬೆನ್ನಲ್ಲೇ ಈ ದಾಳಿ ನಡೆಯಿತು.

2007: ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಮತ್ತು ಮೂವರು ಕೇಂದ್ರ ಸಚಿವರ ವಿರುದ್ಧ ಭಾರತೀಯ ಜನಶಕ್ತಿ ಪಕ್ಷದ ನಾಯಕಿ ಉಮಾ ಭಾರತಿ ಅವರು ನವದೆಹಲಿಯ ಸಂಸತ್ ಭವನ ರಸ್ತೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ರಾಮಸೇತು ವಿಚಾರದಲ್ಲಿ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿರುವ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ಧ ವಿಎಚ್ ಪಿ ಕಾರ್ಯಕರ್ತರು ಮತ್ತು ಸಮಾನಮನಸ್ಕರು ದೂರು ದಾಖಲಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಕರೆ ನೀಡಿತು.

2007: ಭಾರತೀಯ ಸಂಗೀತ ಲೋಕಕ್ಕೆ ಮೊಟ್ಟ ಮೊದಲ ಸಲ ಲತಾ ಮಂಗೇಶ್ಕರ್ ಅವರ ಮಧುರ ಧ್ವನಿಯನ್ನು ಪರಿಚಯಿಸಿದ್ದ ಮರಾಠಿಯ ಹೆಸರಾಂತ ಸಂಗೀತ ನಿರ್ದೇಶಕ ದತ್ತಾ ದವಜೇಕರ್ (90)ಅವರು ಮುಂಬೈಯಲ್ಲಿ ನಿಧನರಾದರು.

2007: ಉದಾರವಾದಿ ಮುಖಂಡ ಯಸುವೊ ಫುಕುಡಾ (71) ಅವರು ಜಪಾನಿನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷರಾಗಿ ಭಾರಿ ಬಹುಮತದಿಂದ ಆಯ್ಕೆಯಾದರು. ಹೀಗಾಗಿ ಇತ್ತೀಚೆಗೆ ರಾಜೀನಾಮೆ ನೀಡಿದ ಶಿಂಜೊ ಅಬೆ ಸ್ಥಾನದಲ್ಲಿ ಅವರು ಪ್ರಧಾನಿ ಹುದ್ದೆಗೆ ಏರಲು ಹಾದಿ ಸುಗಮಗೊಂಡಿತು.

2007: ಬಂಗಾಳ ಕೊಲ್ಲಿಯಲ್ಲಿ ಎದ್ದ ಚಂಡಮಾರುತಕ್ಕೆ ಸಿಲುಕಿ ಬಾಂಗ್ಲಾದೇಶದ ಸುಮಾರು 1 ಸಾವಿರಕ್ಕೂ ಹೆಚ್ಚು ಮೀನುಗಾರರು ನಾಪತ್ತೆಯಾದರು. ಬರಿಸಾಲ್, ಬರ್ಗುನ, ಪತುಖೊಲಿ, ಬಗೇರ್ ಹತ್ ಹಾಗೂ ಕಾಕ್ಸ್ ಬಜಾರ್ ಕರಾವಳಿಯಲ್ಲಿ ಸುಮಾರು 91 ಮಂದಿಯನ್ನು ರಕ್ಷಿಸಲಾಯಿತು.

2007: ಭಾರತೀಯ ಗೋರಕ್ಷೆಯ ಆಂದೋಲನ ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮ. ಗೋವಿನ ಹಾಲುಂಡ ಎಲ್ಲರೂ ಜಾತಿಭೇದ, ಪಕ್ಷ ಭೇದವಿಲ್ಲದೆ ಈ ಸಂಗ್ರಾಮದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ  ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಎಚ್.ಬಿ.ಆರ್. ಬಡಾವಣೆಯ ಕಾಚರಕನಹಳ್ಳಿ ಕೋದಂಡರಾಮ ದೇವಸ್ಥಾನದ ಸಮೀಪ ನಡೆದ ಯಲಹಂಕ ವಲಯ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಕರೆ ನೀಡಿದರು. ಸ್ವಾತಂತ್ರ್ಯ ಲಭಿಸಿದ್ದರೂ ನಾವು ಇಂದಿಗೂ ಉಡುಗೆ, ತೊಡುಗೆ, ಶಿಕ್ಷಣ, ವ್ಯವಹಾರ, ಹಾಲಿನ ವಿಚಾರದಲ್ಲಿ ಕೂಡಾ ಬ್ರಿಟಿಷರ ದಾಸರಾಗಿ ಉಳಿದಿದ್ದೇವೆ. ಹಾಲು-ತುಪ್ಪದ ಹೊಳೆ ಹರಿಸಿ, `ಗೋರಾಷ್ಟ್ರ' ಎಂಬ ಹೆಸರಿಗೆ ಪಾತ್ರವಾಗಿದ್ದ ಈ ಭಾರತದಲ್ಲಿ ಗೋವಿಗೆ ಅಪಚಾರ, ಗೋವಧೆ ಮಾಡುತ್ತಿದ್ದೇವೆ ಎಂದು ಅವರು ವಿಷಾದಿಸಿದರು. ನಮ್ಮ ದೇಹದ ಬಿಂದು ಬಿಂದು ರಕ್ತದ ಹಿಂದೆ ಹಂಡೆ ಹಂಡೆ ಗೋವಿನ ಹಾಲು ಇದೆ. ಗೋಮೂತ್ರ, ಗೋಮಯದಿಂದ ಬೆಳೆದ ಅನ್ನ ಉಂಡು ನಮ್ಮ ದೇಹ ಬೆಳೆದಿದೆ. ಗೋವಿನಿಂದ ಬಂದ ಈ ದೇಹವನ್ನು ಗೋವಿಗಾಗಿ ತೆರಲೂ ಸಿದ್ಧವಿರಬೇಕು. ಮುಂದಿನ ಪೀಳಿಗೆಗಾಗಿ ಗೋರಕ್ಷೆಯ ಮಹಾ ಸಂಕಲ್ಪ ತೊಡಬೇಕು ಎಂದು ಅವರು ಹೇಳಿದರು. ಕೃಷ್ಣರಾಜಪುರ ಭಾರತಮಾತಾ ಆಶ್ರಮದ ಸಾಧು ರಂಗರಾಜನ್, ಮಾರತ್ ಹಳ್ಳಿ ವಿಭೂತಿಪುರ ಮಠದ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿ,  ಪಾರ್ವತಮ್ಮ ರಾಜಕುಮಾರ್ ಮಾತನಾಡಿ ಭಾರತೀಯ ಗೋತಳಿ ರಕ್ಷಣೆಯ ಕಾರ್ಯ ಎಲ್ಲೆಡೆಗೆ ಹರಡಲಿ ಎಂದು ಹಾರೈಸಿದರು. ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮ ಅವರು ಸಾಕ್ಷಾತ್ಕಾರ ಶಾಲೆಯ ಮಕ್ಕಳು ಗೋವಿನ ಹಾಡು ಹಾಡುತ್ತಿದ್ದಂತೆಯೇ ಗೋವಿನ ಸುಂದರ ಚಿತ್ರ ರಚಿಸಿದರು. 

2006: ಕೇಂದ್ರದ ಯುಪಿಎ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ತೆಲಂಗಾಣ ರಾಷ್ಟ್ರೀಯ ಸಮಿತಿಯು (ಟಿಆರ್ ಎಸ್) ಹಿಂತೆಗೆದುಕೊಂಡಿತು.

2001: ಗೀತ್ ಸೇಥಿ ಅವರು ನ್ಯೂಜಿಲೆಂಡಿನ ಕ್ರೈಸ್ಟ್ ಚರ್ಚಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅಶೋಕ ಶಾಂಡಿಲ್ಯ ಅವರನ್ನು 3484-1289 ಅಂತರದಲ್ಲಿ ಪರಾಭವಗೊಳಿಸಿ ವಿಶ್ವ ಪ್ರೊಫೆಷನಲ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. ಇದರೊಂದಿಗೆ ಈ ಜಾಗತಿಕ ಪ್ರಶಸ್ತಿಯನ್ನು ಏಳನೇ ಬಾರಿಗೆ ಗೆದ್ದ ಹೆಗ್ಗಳಿಕೆ ಅವರದಾಯಿತು.

2000: ರೋವರ್ ಸ್ಟೀವನ್ ರೆಡ್ ಗ್ರೇವ್ ಅವರು  ಸಿಡ್ನಿ ಒಲಿಂಪಿಕ್ಸಿನ ಕಾಕ್ಸ್ ಲೆಸ್ ಪೇರ್ಸಿನಲ್ಲಿಸ್ವರ್ಣಪದಕ ಗೆಲ್ಲುವುದರೊಂದಿಗೆ ಒಲಿಂಪಿಕ್ಸಿನಲ್ಲಿ ನಿರಂತರವಾಗಿ ಐದು ಬಾರಿ ಸ್ವರ್ಣ ಪದಕ ಗೆದ್ದ ಪ್ರಥಮ ಬ್ರಿಟಿಷ್ ಅಥ್ಲೆಟ್ ಎಂಬ ಕೀರ್ತಿಗೆ ಭಾಜನರಾದರು. ಎಂಡ್ಯೂರೆನ್ಸ್ ಕ್ರೀಡೆಯಲ್ಲಿ ಸತತವಾಗಿ ಐದು ಬಾರಿ ಪದಕ ಗೆದ್ದ ವಿಶ್ವದ ಮೊದಲ ಅಥ್ಲೆಟ್ ಎಂಬ ಹೆಗ್ಗಳಿಕೆ ಕೂಡಾ ಇವರದೇ.
1997: ವೇಲ್ಸಿನ ರಾಜಕುಮಾರಿ ಡಯಾನಾಳ ಅಂತ್ಯಸಂಸ್ಕಾರ ಕಾಲದಲ್ಲಿ ಎಲ್ಟನ್ ಜಾನ್ ಅವರು ಸ್ವತಃ ಬರೆದು ಹಾಡಿದ  `ಕ್ಯಾಂಡಲ್ ಇನ್ ದಿ ವಿಂಡ್ 1997' ಹಾಡಿನ ರೆಕಾರ್ಡ್  ನ್ಯೂಯಾರ್ಕ್   ನಗರದಲ್ಲಿ ಮಾರಾಟಕ್ಕೆ ಬಿಡುಗಡೆಯಾಯಿತು. 37 ದಿನಗಳ ನಂತರ ಈ ಹಾಡಿನ ಸಿಡಿ ಮಾರಾಟದಲ್ಲಿ ದಾಖಲೆ ಸ್ಥಾಪಿಸಿತು. ಅದರ ಸುಮಾರು 3.20 ಕೋಟಿ ಪ್ರತಿಗಳು ಮಾರಾಟವಾದವು.

1952: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಕೋಚ್ ಅಂಶುಮಾನ್ ಗಾಯಕವಾಡ್ ಜನ್ಮದಿನ.

1939: `ಮನೋವಿಶ್ಲೇಷಣೆ'ಯ ಸ್ಥಾಪಕ ಸಿಗ್ಮಂಡ್ ಫ್ರಾಯ್ಡ್ ಅವರು ಲಂಡನ್ನಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. `ಕೊಪರ್ನಿಕಸ್ ಆಫ್ ಮೈಂಡ್' ಎಂದೇ ಅವರು ಖ್ಯಾತಿ ಪಡೆದಿದ್ದರು.

1934: ಪ್ರಕಾಶಕಿ, ಲೇಖಕಿ, ಅಧ್ಯಾಪಕಿ ಬಿ.ಎಸ್. ರುಕ್ಕಮ್ಮ ಅವರು ಬಿ.ಟಿ. ಶ್ರೀನಿವಾಸ ಅಯ್ಯಂಗಾರ್- ಸೀತಮ್ಮ ದಂಪತಿಯ ಮಗಳಾಗಿ ಜನಿಸಿದರು.

1862: ಚಂದಮ ದೇಶಭಕ್ತ ಶ್ರೀನಿವಾಸ ಶಾಸ್ತ್ರಿ ಜನನ.

1848: ಜಾನ್ ಕರ್ಟಿಸ್ ಅವರು `ಚ್ಯೂಯಿಂಗ್ ಗಮ್'ನ್ನು ಮೊತ್ತ ಮೊದಲ ಬಾರಿಗೆ ಮಾರಾಟದ ಸಲುವಾಗಿ ಉತ್ಪಾದಿಸಿದರು. ಮೈನ್ ನ  ಬ್ಯಾಂಗೋರಿನ ತಮ್ಮ ಮನೆಯಲ್ಲಿ ಸ್ಟೌವಿನಲ್ಲಿ ಇದನ್ನು ಉತ್ಪಾದಿಸಿದ ಅವರು `ಸ್ಟೇಟ್ ಆಫ್ ಮೈನ್ ಪ್ಯೂರ್ ಸ್ಪ್ರೂಸ್ ಗಮ್' ಎಂಬ ಹೆಸರಿನಲ್ಲಿ ಮಾರಾಟ ಮಾಡಿದರು.

1846: ಜರ್ಮನ್ ಖಗೋಳ ತಜ್ಞ ಜೊಹಾನ್ ಗೊಟ್ ಫ್ರೈಡ್ ಗ್ಯಾಲ್ ಅವರು ನೆಪ್ಚೂನ್ ಗ್ರಹವನ್ನು ಕಂಡು ಹಿಡಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement