ಗ್ರಾಹಕರ ಸುಖ-ದುಃಖ

My Blog List

Saturday, September 27, 2008

ಇಂದಿನ ಇತಿಹಾಸ History Today ಸೆಪ್ಟೆಂಬರ್ 27

ಇಂದಿನ ಇತಿಹಾಸ

ಸೆಪ್ಟೆಂಬರ್ 27

ಭಾರತದ ಧಾರ್ಮಿಕ, ಸಾಮಾಜಿಕ, ಶಿಕ್ಷಣ ಸುಧಾರಕ ರಾಜಾ ರಾಮ್ ಮೋಹನ ರಾಯ್ ಅವರು ಗ್ಲೌಸ್ಟರ್ ಶೈರ್ ನ ಬ್ರಿಸ್ಟಲಿನಲ್ಲಿ ತಮ್ಮ 61ನೇ ವಯಸಿನಲ್ಲಿ ನಿಧನರಾದರು.

2007: 2007ರ ಏಪ್ರಿಲ್ 1ರಿಂದ ಎಲ್ಲ ಬಗೆಯ ಲಾಟರಿ ನಿಷೇಧ ಮಾಡಿ ಸರ್ಕಾರ ಕಳೆದ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟಿನ ವಿಭಾಗೀಯ ಪೀಠ ಎತ್ತಿಹಿಡಿಯಿತು. ಸರ್ಕಾರದ ಅಧಿಸೂಚನೆಯನ್ನು ಕಳೆದ ಮೇ 8ರಂದು ಎತ್ತಿಹಿಡಿದ ಏಕಸದಸ್ಯಪೀಠದ ತೀರ್ಪನ್ನು ಪ್ರಶ್ನಿಸಿ ಅನೇಕ ಲಾಟರಿ ಮಾಲೀಕರು, ಏಜೆಂಟರು ಸಲ್ಲಿಸಿದ್ದ ಅರ್ಜಿ, ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ನಾರಾಯಣ ಸ್ವಾಮಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಜಾ ಮಾಡಿತು. `ಇದು ಸರ್ಕಾರದ ನೀತಿಗೆ ಸಂಬಂಧಪಟ್ಟ ವಿಚಾರ. ಲಾಟರಿಗೆ ನಿಷೇಧ ಹೇರುವ ವಿಚಾರ ಬಜೆಟ್ಟಿನಲ್ಲಿ ಪ್ರಸ್ತಾಪ ಆಗಿದ್ದು ಎರಡೂ ಸದನಗಳು ಅದಕ್ಕೆ ಅನುಮತಿ ನೀಡಿವೆ. ಅಲ್ಲದೇ ಲಾಟರಿ ಕಾಯ್ದೆಯು ಸಂಸತ್ತಿನಲ್ಲಿಯೂ ಅಂಗೀಕಾರ ಪಡೆದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಪರಾಮರ್ಶೆ ಸಲ್ಲದು' ಎಂದು ಪೀಠ ಸ್ಪಷ್ಟಪಡಿಸಿತು. `ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಕೆಲ ಲಾಟರಿ ಮಾಲೀಕರು ಅಥವಾ ಏಜೆಂಟರ ಹಿತಾಸಕ್ತಿಗಿಂತ ಲಾಟರಿ ಆಟವಾಡಿ ನಾಶವಾಗುತ್ತಿರುವ ಅನೇಕ ಕುಟುಂಬಗಳನ್ನು ರಕ್ಷಿಸುವಂಥ ಸಾರ್ವಜನಿಕ ಹಿತಾಸಕ್ತಿಯನ್ನು ಸರ್ಕಾರ ಗಮನದಲ್ಲಿ ಇಟ್ಟುಕೊಂಡಿದೆ. ಈ ಕಾರಣದಿಂದ ಲಾಟರಿ ನಿಷೇಧ ಕಾನೂನು ಬಾಹಿರ ಎನ್ನಲಾಗದು' ಎಂದು ಕೋರ್ಟ್ ಹೇಳಿತು.

2007: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಕಂಪೆನಿಗೆ (ನೈಸ್) ನೀಡಲಾಗಿದ್ದ ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆ (ಬಿಎಂಐಸಿ) ಗುತ್ತಿಗೆಯನ್ನು ರದ್ದುಗೊಳಿಸಿ ಹೊಸ ಟೆಂಡರ್ ಕರೆಯುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. `ನ್ಯಾಯಾಲಯದ ಮುಂದಿರುವ ಅರ್ಜಿ ಇತ್ಯರ್ಥಗೊಳ್ಳುವವರೆಗೆ ಹೊಸ ಟೆಂಡರ್ ಕರೆಯಲು ರಾಜ್ಯಸರ್ಕಾರ ಸೆಪ್ಟೆಂಬರ್ 17 ರಂದು ಹೊರಡಿಸಿರುವ ಅಧಿಸೂಚನೆ ಮೇಲೆ ಕ್ರಮಕೈಗೊಳ್ಳಬಾರದು' ಎಂದು ನ್ಯಾಯಮೂರ್ತಿ ಬಿ.ಎನ್.ಅಗರ್ವಾಲ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಹೇಳಿತು. ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಕ್ರಮ ಕೈಗೊಳ್ಳುವಂತೆ ಕೋರಿ ಅಶೋಕ್ ಖೇಣಿ ಅವರ ನೈಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಆದೇಶ ನೀಡಿತು.

 2007: ಒರಿಸ್ಸಾ, ಉತ್ತರ ಪ್ರದೇಶ ಸರ್ಕಾರಗಳು `ರಿಲಯನ್ಸ್ ಹಣ್ಣು ಮತ್ತು ತರಕಾರಿ ಚಿಲ್ಲರೆ ಮಾರಾಟ ಮಳಿಗೆಗಳನ್ನು' (ರಿಲಯನ್ಸ್ ಫ್ರೆಶ್) ಮುಚ್ಚುವಂತೆ ಆದೇಶದ ನೀಡಿದ ಹಿನ್ನೆಲೆಯಲ್ಲಿ, ರಿಲಯನ್ಸ್ ಕಂಪೆನಿ ಈ ರಾಜ್ಯಗಳಲ್ಲಿ ಹೂಡಬೇಕಾಗಿದ್ದ ಅಂದಾಜು 13000 ಕೋಟಿ ರೂಪಾಯಿ ಬಂಡವಾಳದ ಯೋಜನೆಯನ್ನು ಸ್ಥಗಿತಗೊಳಿಸಿತು. ಡೆಹ್ರಾಡೂನಿನಲ್ಲೂ ಸಣ್ಣ ವ್ಯಾಪಾರಸ್ಥರ ಒಕ್ಕೂಟದವರು ರಿಲಯನ್ಸ್  ಫ್ರೆಶ್ ಮಳಿಗೆಗಳ ಮೇಲೆ ದಾಳಿ  ನಡೆಸಿದರು. ಡೂನ್ ಉದ್ಯೋಗ ವ್ಯಾಪಾರ ಮಂಡಲ್ ಮತ್ತು  ಲಘು ವ್ಯಾಪಾರ ಅಸೋಸಿಯೇಷನ್ ಸಂಸ್ಥೆಗಳು ಸೇರಿ ಮಳಿಗೆಗಳ  ಮೇಲೆ ದಾಳಿ ನಡೆಸಿದವು.

2007: ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅ.6 ರಂದು ನಡೆಯುವ ಅಧ್ಯಕ್ಷೀಯ ಚುನಾವಣೆಗೆ  ನಾಮಪತ್ರ ಸಲ್ಲಿಸಿದರು. ಪ್ರಧಾನಿ ಶೌಕತ್ ಅಜೀಜ್ ನೇತೃತ್ವದಲ್ಲಿ ಹಲವು ಸಚಿವರು ಹಾಗೂ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಡಳಿತರೂಢ ಪಾಕಿಸ್ಥಾನ ಮುಸ್ಲಿಂ ಲೀಗ್-ಕ್ಯೂ ಪಕ್ಷದ ಪ್ರಮುಖ ನಾಯಕರು ಮುಷರಫ್ ಪರವಾಗಿ ನಾಮಪತ್ರವನ್ನು ಮುಖ್ಯ ಚುನಾವಣಾ ಆಯುಕ್ತ ಫಾರೂಕ್ ಅವರಿಗೆ ಸಲ್ಲಿಸಿದರು.

2007: ವಿಶ್ವವಿದ್ಯಾಲಯದ 12 ಯುವತಿಯರನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ ಮೂವರು ದುಷ್ಕರ್ಮಿಗಳನ್ನು ಇರಾನಿನಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತು. ಸಹಸ್ರಾರು ಜನರ ಸಮ್ಮುಖದಲ್ಲಿ ಅವರನ್ನು ನೇಣುಬಿಗಿದು ಸಾಯಿಸಲಾಯಿತು.

2006: ಫ್ರೆಂಚ್ ವೈದ್ಯರು ತೂಕರಹಿತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೇಲೆ 10 ನಿಮಿಷಗಳ ಅವಧಿಯ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದರು. ಬೋರ್ಡಿಯಕ್ಸ್ ವಿಶ್ವವಿದ್ಯಾಲಯ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಘಟಕದ ಮುಖ್ಯಸ್ಥ ಡೊಮಿನಿಕ್ ಮಾರ್ಟಿನ್ ನೇತೃತ್ವದ ನಾಲ್ವರು ವೈದ್ಯರ ತಂಡವು ಪಾರಾಬೋಲಿಕ್ ಫ್ಲೈಟ್- 25 ವಿಮಾನದಲ್ಲಿ 22 ಸೆಕೆಂಡುಗಳ ತೂಕರಹಿತ ಸ್ಥಿತಿಯಲ್ಲಿ ರೋಗಿಯ ಕೈಯ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಈ ಶಸ್ತ್ರಚಿಕಿತ್ಸೆಗಾಗಿ ಏರ್ಬಸ್ ಎ 300 ವಿಮಾನವನ್ನು ಸಜ್ಜುಗೊಳಿಸಲಾಗಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐಎಸ್ಎಸ್) ಗಗನಯಾತ್ರಿಗಳಿಗಾಗಿ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿ ಪಡಿಸಲು ಈ ಪ್ರಯೋಗ ನೆರವಾಗುವುದು.

2006: ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ಸಂಚುಗಾರ ಟೈಗರ್ ಮೆಮನ್ ನ ಸಹಚರರಲ್ಲಿ ಒಬ್ಬನಾದ ಮೊಹಮ್ಮದ್ ಮುಸ್ತಫಾ ಮುಸಾ ತರಾನಿಯನ್ನು ಟಾಡಾ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿತು. ಈತನ ವಿರುದ್ಧದ ಎಲ್ಲ 12 ಆರೋಪಗಳೂ ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿತು.

2006: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಆಟಗಾರ ದಿಲೀಪ್ ವೆಂಗ್ ಸರ್ಕಾರ್ ಆಯ್ಕೆಯಾದರು.

2006: ಬೆಳಗಾವಿಗೆ ರಾಜ್ಯದ ಎರಡನೇ ರಾಜಧಾನಿಯ ಸ್ಥಾನಮಾನ ನೀಡಲಾಗುವುದು. ಜೊತೆಗೆ ಅಲ್ಲಿ ಸುವರ್ಣ ವಿಧಾನ ಸೌಧ ನಿರ್ಮಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯಲ್ಲಿ ನಡೆದ ಚಾರಿತ್ರಿಕ ವಿಧಾನ ಮಂಡಲ ಅಧಿವೇಶನ ಕಾಲದಲ್ಲಿ ವಿಧಾನಪರಿಷತ್ತಿನಲ್ಲಿ ಪ್ರಕಟಿಸಿದರು.

1998: ಸೋಷಿಯಲ್ ಡೆಮಾಕ್ರಾಟ್ ಸದಸ್ಯ ಗೆರ್ಹಾರ್ಡ್ ಶ್ರೋಡರ್ ಅವರು ಜರ್ಮನಿಯ ಚಾನ್ಸಲರ್ ಆಗಿ ಚುನಾಯಿತರಾದರು. ಇದರೊಂದಿಗೆ ಜರ್ಮನಿಯಲ್ಲಿ 16 ವರ್ಷಗಳ ಕನ್ಸರ್ವೇಟಿವ್ ಆಡಳಿತ ಕೊನೆಗೊಂಡಿತು.

1998: ಕೆನಡಾದ ಓಟಗಾರ ಬೆನ್ ಜಾನ್ಸನ್ ಅವರು ನಿಷೇಧಿತ ಸ್ಟೀರಾಯಿಡ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ರುಜುವಾತಾಗಿರುವುದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿತು. ಸೋಲ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಜಾನ್ಸನ್ ಪಡೆದುಕೊಂಡಿದ್ದ ಸ್ವರ್ಣ ಪದಕವನ್ನು ಕಿತ್ತುಕೊಂಡ ಸುದ್ದಿ ಜಗತ್ತಿನಾದ್ಯಂತ ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಯಾಯಿತು. ಜಾನ್ಸನ್ ತಾನು ಸ್ಟೀರಾಯಿಡ್ ಸೇವಿಸಿದ್ದು ಹೌದೆಂದೂ, ಸಾರ್ವಜನಿಕರ ಎದುರು ತಾನು ಸೇವಿಸಿಲ್ಲ ಎಂದು ಸುಳ್ಳು ಹೇಳ್ದಿದುದಾಗಿಯೂ 1989ರ ಜೂನ್ ತಿಂಗಳಲ್ಲಿ ಒಪ್ಪಿಕೊಂಡ.

1996: ತಾಲಿಬಾನ್ ಬಂಡುಕೋರರು ಆಫ್ಘಾನಿ ಅಧ್ಯಕ್ಷ ಬರ್ ಹಾನ್ದುದೀನ್ ರಬ್ಬಾನಿ ಅವರ ಸರ್ಕಾರವನ್ನು ಪದಚ್ಯುತಿಗೊಳಿಸಿ, ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡರು. ಮಾಜಿ ನಾಯಕ ಮಹಮ್ಮದ್ ನಜೀಬುಲ್ಲಾ ಅವರನ್ನು ಗಲ್ಲಿಗೇರಿಸಿ, ಆಫ್ಘಾನಿಸ್ಥಾನವನ್ನು `ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರ' ಎಂಬುದಾಗಿ ಘೋಷಿಸಿದರು.

1989: ಹಿನ್ನೆಲೆ ಮತ್ತು ಸಂಗೀತ ನಿರ್ದೇಶಕ ಹೇಮಂತ ಕುಮಾರ್ ಮುಖರ್ಜಿ ನಿಧನರಾದರು.

1968: ಪೋರ್ಚುಗಲ್ ಪ್ರಧಾನಮಂತ್ರಿ ಆಂಟೋನಿಯೋ ಸಾಲಝಾರ್ ಅವರು ತಮ್ಮ 36 ವರ್ಷ 84 ದಿನಗಳ ಸುದೀರ್ಘ ಆಳ್ವಿಕೆಯ ಬಳಿಕ ನಿವೃತ್ತರಾದರು.

1958: ಮಿಹಿರ್ ಸೆನ್ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ದಾಟಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಡೋವರಿನಿಂದ ಕ್ಯಾಲಯಿಸ್ ವರೆಗಿನ 34 ಕಿ.ಮೀ. ದೂರವನ್ನು 14 ಗಂಟೆ 45 ನಿಮಿಷಗಳಲ್ಲಿ ಕ್ರಮಿಸಿದರು.

1833: ಭಾರತದ ಧಾರ್ಮಿಕ, ಸಾಮಾಜಿಕ, ಶಿಕ್ಷಣ ಸುಧಾರಕ ರಾಜಾ ರಾಮ್ ಮೋಹನ ರಾಯ್ ಅವರು ಗ್ಲೌಸ್ಟರ್ ಶೈರ್ ನ ಬ್ರಿಸ್ಟಲಿನಲ್ಲಿ ತಮ್ಮ 61ನೇ ವಯಸಿನಲ್ಲಿ ನಿಧನರಾದರು.

1931: ಕೆಳದಿ ಸಂಸ್ಥಾನದ ಬಗ್ಗೆ ಸಂಶೋಧನೆ ನಡೆಸಿ ವಿಶ್ವ ಭೂಪಟದಲ್ಲಿ ಕೆಳದಿಯ ಹೆಸರು ಮೂಡಿಸಿದ ಗುಂಡಾ ಜೋಯಿಸ ಅವರು ನಂಜುಂಡಾ ಜೋಯಿಸರು- ಮೂಕಾಂಬಿಕೆ ದಂಪತಿಯ ಮಗನಾಗಿ ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಜನಿಸಿದರು. ಕೆಳದಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಪ್ರಕಟಿಸಿದ ಅವರು ಗ್ರಾಮಾಂತರ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಸಿ ಆಯುರ್ವೇದ, ಸಂಗೀತ, ಜ್ಯೋತಿಷ್ಯಕ್ಕೆ ಸಂಬಂಧಿಸಿದ 2000ಕ್ಕೂ ಹೆಚ್ಚು ಓಲೆಗರಿ, 120 ಚಾರಿತ್ರಿಕ ದಾಖಲೆಗಳು, 2-3 ಸಾವಿರ ವಿವಿಧ ಭಾಷಾ ಗ್ರಂಥಗಳು, ಕೃಷ್ಣದೇವರಾಯನ ಕಾಲದ ದಿನಚರಿಯ ಓಲೆಗಳು, ಸರ್ವಜ್ಞನ ಪೂರ್ವೋತ್ತರದ ತಾಡಪತ್ರಿಗಳು, ಮಹಾಭಾರತದ ಸೂಕ್ಷ್ಮ ವರ್ಣಚಿತ್ರಗಳು ಇತ್ಯಾದಿಗಳನ್ನು ಸಂಗ್ರಹಿಸಿ ಇಟ್ಟಿದ್ದಾರೆ.

1927: ಕೇಶವ ಬಲಿರಾಂ ಹೆಡ್ಗೇವಾರ್ ಅವರು ತಮ್ಮ ಕೆಲವು ಗೆಳೆಯರನ್ನು ಸೇರಿಸಿಕೊಂಡು ಮಹಾರಾಷ್ಟ್ರದ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್) ಸ್ಥಾಪಿಸಿದರು.

1907: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ಸಿಂಗ್ (27-9-1907ರಿಂದ 24-3-1931) ಜನ್ಮದಿನ. ಅವಿಭಜಿತ ಭಾರತದ ಲಾಯಲ್ ಪುರದ ಪಶ್ಚಿಮ ಪಂಜಾಬಿಗೆ ಸೇರಿದ ಬಾಂಗಾ (ಈಗ ಪಾಕಿಸ್ಥಾನದಲ್ಲಿದೆ) ಗ್ರಾಮದಲ್ಲಿ ಈದಿನ ಜನಿಸಿದ ಭಗತ್ ಸಿಂಗ್ ಗೆ ತಂದೆ ಮತ್ತು ಚಿಕ್ಕಪ್ಪನಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ. 1919ರಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ಥಳಕ್ಕೆ ಭೇಟಿ ನೀಡಿದ ಅವರು 12ನೇ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ದೀಕ್ಷೆ ಪಡೆದರು. ಸೈಮನ್ ಚಳವಳಿಯಲ್ಲಿ ಲಾಲಾ ಲಜಪತ್ ರಾಯ್ ಅವರ ಸಾವಿಗೆ ಕಾರಣನಾದ ಬ್ರಿಟಿಷ್ ಅಧಿಕಾರಿಯನ್ನು ಗುಂಡಿಟ್ಟು ಕೊಂದರು. 1929 ರಲ್ಲಿ ಸಂವಿಧಾನ ಸಭೆಗೆ ಬಾಂಬ್ ಹಾಕಿ ಬಂಧನಕ್ಕೆ ಒಳಗಾದರು. ಬ್ರಿಟಿಷ್ ವಿರೋಧಿ ಆರೋಪದಲ್ಲಿ ಅವರನ್ನು 1931ರ ಮಾರ್ಚ್ 24ರಂದು  ಗಲ್ಲಿಗೇರಿಸಲಾಯಿತು.

No comments:

Advertisement