My Blog List

Sunday, October 19, 2008

ಇಂದಿನ ಇತಿಹಾಸ History Today ಅಕ್ಟೋಬರ್ 19

ಇಂದಿನ ಇತಿಹಾಸ

ಅಕ್ಟೋಬರ್ 19

ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿ ಶ್ರೀವಿದ್ಯಾ (53) ಕೇರಳದ ತಿರುವನಂತಪುರದ ಖಾಸಗಿ ನರ್ಸಿಂಗ್ ಹೋಮಿನಲ್ಲಿ ನಿಧನರಾದರು. ಖ್ಯಾತ ಶಾಸ್ತ್ರೀಯ ಗಾಯಕಿ ಎಂ.ಎಲ್. ವಸಂತ ಕುಮಾರಿ ಅವರ ಪುತ್ರಿಯಾದ ಶ್ರೀವಿದ್ಯಾ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಶ್ರೀವಿದ್ಯಾ ಮಲಯಾಳಿ ಚಿತ್ರಗಳಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು.

2007: ಭಾರತದ ಈಜುಗೊಳದಲ್ಲಿ ಮೊತ್ತ ಮೊದಲ ವಿಶ್ವದಾಖಲೆ ಹೈದರಾಬಾದಿನಲ್ಲಿ ಮೂಡಿಬಂತು. ಇಪ್ಪತ್ತಮೂರು ವರ್ಷ ವಯಸ್ಸಿನ ಚೀನಾದ ಯಾಂಗ್ ಲೀ ಅವರಿಗೆ ಈದಿನ ಶುಭ ಶುಕ್ರವಾರವಾಯಿತು. ಮಹಿಳೆಯರ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಚೀನಾದ ಶಾಂಘೈ ನಗರದ ನಿವಾಸಿ ಲೀ ಮತ್ಸ್ಯದಂತೆ ಈಜಿ ಜಗತ್ತಿನಲ್ಲಿ ಹೊಸ ವಿಕ್ರಮ ಸ್ಥಾಪಿಸಿದರು.  
ಗಚ್ಚಿಬೌಳಿಯ ಜಿ.ಎಂ.ಸಿ. ಬಾಲಯೋಗಿ ಕ್ರೀಡಾಸಂಕೀರ್ಣದ ಅಂತಾರಾಷ್ಟ್ರೀಯ ದರ್ಜೆಯ ಈಜುಗೊಳದಲ್ಲಿ ನಡೆದ `4ನೇ ವಿಶ್ವ ಸೇನಾ ಕ್ರೀಡಾಕೂಟದ' ಮಹಿಳೆಯರ ಈಜು ಚಾಂಪಿಯನ್ ಶಿಪ್ ನ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಯಾಂಗ್ ಲೀ ಅವರು 28.09ಸೆ.ಗಳಲ್ಲಿ ಗುರಿ ಮುಟ್ಟಿ ವಿಶ್ವ ದಾಖಲೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು. ಈ ಹಾದಿಯಲ್ಲಿ ಇದೇ ವರ್ಷದ ಮಾರ್ಚ್ 28ರಂದು ಆಸ್ಟ್ರೇಲಿಯಾದಲ್ಲಿ ನಡೆದ ಫಿನಾ (ಅಂತಾರಾಷ್ಟ್ರೀಯ ಈಜು ಫೆಡರೇಷನ್) ವಿಶ್ವ ಈಜು ಚಾಂಪಿಯನ್ ಶಿಪ್ ನಲ್ಲಿ ಅಮೆರಿಕದ ಲೀಲಾ ವಜೀರಿ ಅವರು 28.16ಸೆ.ಗಳೊಂದಿಗೆ ಸ್ಥಾಪಿಸಿದ್ದ ವಿಶ್ವದಾಖಲೆಯನ್ನು ಯಾಂಗ್ ಲೀ ಮುರಿದರು.

 2007: ನಾಡಿನ ನಾಗರಿಕರ ದುಃಖದುಮ್ಮಾನ ಹಾಗೂ ಕುಂದು ಕೊರತೆಗಳ ನಿವಾರಣೆಗೆ ವೇದಿಕೆಯಂತಿದ್ದ `ಜನತಾದರ್ಶನ'ದಲ್ಲಿ ಅಹವಾಲು ಸಲ್ಲಿಸಲು ಬಂದ ಮಹಿಳೆಯೊಬ್ಬರು ಸಾವನ್ನಪ್ಪಿದರೆ, ಯುವಕನೊಬ್ಬ ವಿಷ ಸೇವಿಸಿ ಅಸ್ವಸ್ಥನಾದ ದುರ್ಘಟನೆಯೂ ಸಂಭವಿಸಿತು. ರಾಜ್ಯದ ಆಡಳಿತದ ಕೇಂದ್ರವಾದ ವಿಧಾನಸೌಧದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ನಡೆಸಿದ ನಾಲ್ಕನೇ ಜನತಾದರ್ಶನದಲ್ಲಿ ಈ ಘಟನೆ ನಡೆಯಿತು. ಮಂಡ್ಯ ಜಿಲ್ಲೆಯು ಗುತ್ತಲ ಕಾಲೋನಿ ನಿವಾಸಿ ಪುಟ್ಟಲಕ್ಷ್ಮಮ್ಮ (40) ಸಾವನ್ನಪ್ಪಿದ ಮಹಿಳೆ. ಇದೇ ಜಿಲ್ಲೆಯ ಸುರೇಶ್ (30) ಎಂಬಾತ ವಿಷ ಸೇವಿಸಿದ ಯುವಕ. 

2007: ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ ಎಂದು ಪುದುಚೇರಿ ಸರ್ಕಾರ ಆದೇಶಿಸಿತು. ನೆರೆ ರಾಜ್ಯ ತಮಿಳುನಾಡು ಶಾಲೆಗಳಲ್ಲಿ ಮೊಬೈಲ್ ನಿಷೇಧಿಸಿದ ಎರಡು ದಿನಗಳಲ್ಲಿ ಪುದುಚೇರಿ ಸಹ ಮೊಬೈಲ್ ನಿಷೇಧಿಸಿ ಆದೇಶ ಹೊರಡಿಸಿತು.

2007: ರಾಷ್ಟ್ರದಲ್ಲಿ 13 ನೂತನ ವಿಶೇಷ ಆರ್ಥಿಕ ವಲಯಗಳ (ಎಸ್ಇಜೆಡ್) ಸ್ಥಾಪನೆಗೆ ಕೇಂದ್ರ ಅನುಮತಿ ಮಂಡಳಿ (ಬಿಒಎ) ಈದಿನ ಅನುಮತಿ ನೀಡಿತು. ಇದರಲ್ಲಿ ಕರ್ನಾಟಕದ ಒಂದು ಪ್ರಸ್ತಾವವೂ ಸೇರಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಸ್ಇಜೆಡ್ ಸ್ಥಾಪಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ಸಿಗೂ(ಟಿಸಿಎಸ್) ಅವಕಾಶ ಸಿಕ್ಕಿತು. ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡುವ ಅತ್ಯುನ್ನತ ಸಂಸ್ಥೆಯಾದ ಬಿಒಎ ಮುಂದೆ ಒಟ್ಟು 19 ಪ್ರಸ್ತಾವಗಳಿದ್ದವು. ಅದರಲ್ಲಿ 10 ಪ್ರಸ್ತಾವಗಳಿಗೆ ಸಂಪೂರ್ಣವಾಗಿ ಮತ್ತು ಮೂರು ಪ್ರಸ್ತಾವಕ್ಕೆ ಭಾಗಶಃ ಒಪ್ಪಿಗೆ ಸಿಕ್ಕಿದೆ. ಬೆಂಗಳೂರಿನ 10.53 ಹೆಕ್ಟೇರ್ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಮತ್ತು ಐಟಿಇಎಸ್ ಗೆ ನೆರವಾಗುವ ಎಸ್ ಇಜೆಡ್ ನಿರ್ಮಿಸಲು ಗೋಪಾಲನ್ ಎಂಟರ್ ಪ್ರೈಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೂ ಅನುಮತಿ ದೊರೆಯಿತು. ಆದರೆ ಈ ಸಭೆಯಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ವಿಷಯ ಚರ್ಚೆಯಾಗಲಿಲ್ಲ ಎಂದು ಬಿಒಎ ಸ್ಪಷ್ಟಪಡಿಸಿತು.

2007: 1993ರ ಮುಂಬೈ ಸರಣಿ ಸ್ಫೋಟದ ತನಿಖೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯವು, ತನ್ನ ಮುಂದೆ ಹಾಜರಾಗುವಂತೆ ನಟ ಸಂಜಯ್ ದತ್ ಗೆ ಸಮನ್ಸ್ ಜಾರಿಗೊಳಿಸಿತು. `ಏಕೆ-56' ರೈಫಲನ್ನು ಅಕ್ರಮವಾಗಿ ಹೊಂದಿದ್ದ ಆರೋಪದ ಮೇಲೆ ಟಾಡಾ ಕೋರ್ಟ್ ಸಂಜಯ್ ಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇತರರಿಗೂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತು.

2006: ಮೊಬೈಲಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ `ಮೀಡಿಯಾ ಕರಿ' ಹೆಸರಿನ ವಾರಪತ್ರಿಕೆ ಆರಂಭಗೊಂಡಿತು. ಮುಂಬೈಯ `ಟೆಕ್ ಶಾಸ್ತ್ರ ಇಂಡಿಯಾ' ಸಂಸ್ಥೆಯ ಶೈಲಜಾ ಹಾಗೂ ನಿಷಿತ್ ಶಾ ಈ  ವಿನೂತನ `ಮೊಬೈಲ್ ವಾರಪತ್ರಿಕೆ'ಯ ಕತರ್ೃಗಳು. ಮನರಂಜನೆಯೇ ಪ್ರಮುಖವಾಗಿರುವ ಈ ಪತ್ರಿಕೆಯನ್ನು `455-ಇಂಡಿಯಾ'ಕ್ಕೆ ಒಂದು ಎಸ್ಸೆಮ್ಮೆಸ್ ಕಳಿಸಿ ಪಡೆದುಕೊಂಡು ಡೌನ್ ಲೋಡ್ ಮಾಡಬಹುದು. ಇಂಗ್ಲಿಷ್, ಹಿಂದಿ, ಅರಬ್ಬಿ ಭಾಷೆಗಳಲ್ಲಿ ಈ ಮೊಬೈಲ್ ವಾರಪತ್ರಿಕೆ ಲಭ್ಯ.

2006: ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿ ಶ್ರೀವಿದ್ಯಾ (53) ಕೇರಳದ ತಿರುವನಂತಪುರದ ಖಾಸಗಿ ನರ್ಸಿಂಗ್ ಹೋಮಿನಲ್ಲಿ ನಿಧನರಾದರು. ಖ್ಯಾತ ಶಾಸ್ತ್ರೀಯ ಗಾಯಕಿ ಎಂ.ಎಲ್. ವಸಂತ ಕುಮಾರಿ ಅವರ ಪುತ್ರಿಯಾದ ಶ್ರೀವಿದ್ಯಾ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಶಿವಾಜಿ ಗಣೇಶನ್ ನಟಿಸಿದ್ದ `ತಿರುವರುಲ್ ಸೆಲ್ವರ್' ಚಿತ್ರದಲ್ಲಿ ಮುಖ್ಯಪಾತ್ರ ವಹಿಸಿದ್ದರು. 1969 ರಲ್ಲಿ ಅವರ ಚೊಚ್ಚಲ ಚಿತ್ರ `ಚಟ್ಟಾಂಬಿಕಾವಲ' ತೆರೆ  ಕಂಡಿತು. ಆ ಬಳಿಕ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಶ್ರೀವಿದ್ಯಾ ಮಲಯಾಳಿ ಚಿತ್ರಗಳಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು.

2006: ಕುಟುಂಬ ಕಲಹದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ, ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರನ್ನು ಅವರ ಅಣ್ಣನ ಮಗ ಜಗದೀಶ ಕೋರೆ ಗುಂಡು ಹೊಡೆದು ಕೊಲ್ಲಲು ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ಆಂಕಲಿ ಗ್ರಾಮದಲ್ಲಿ ಘಟಿಸಿತು.

2006: ಬಡತನ ರೇಖೆಗಿಂತ ಕೆಳಗಿರುವ ಕುಟಂಬಗಳ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 2.19 ಲಕ್ಷ ಬಾಲಕರಿಗೂ ಉಚಿತವಾಗಿ ಸೈಕಲ್ ವಿತರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿತು.

2006: ರಾಷ್ಟ್ರಕವಿ ಪಟ್ಟಕ್ಕೆ ಡಾ. ಜಿ.ಎಸ್. ಶಿವರುದ್ರಪ್ಪ ಶಿಫಾರಸು ಮಾಡಲಾಯಿತು. ಸಾಹಿತಿ ಡಾ. ದೇ. ಜವರೇಗೌಡ ಅಧ್ಯಕ್ಷತೆಯ ಸಮಿತಿ ಈ ದಿನ ನಡೆದ ಸಭಯಲ್ಲಿ ಈ ಕುರಿತ ನಿರ್ಣಯ ಅಂಗೀಕರಿಸಿತು.

1997: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಲ್ಯಾಣಸಿಂಗ್ ನೇತೃತ್ವದ ಸರ್ಕಾರಕ್ಕೆ ಬಿಎಸ್ಪಿ ನೀಡ್ದಿದ ಬೆಂಬಲ ವಾಪಸ್. ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಈ ಕ್ರಮ ಎಂದು ಬಿಎಸ್ಪಿ ಪ್ರತಿಪಾದಿಸಿತು.

1989: ಬಾಂಬೆಯಿಂದ (ಈಗಿನ ಮುಂಬೈ) ಅಹಮದಾಬಾದಿಗೆ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ಬೋಯಿಂಗ್ 737 ವಿಮಾನ ಅಹಮದಾಬಾದಿನಲ್ಲಿ ಅಪಘಾತಕ್ಕೆ ಈಡಾಯಿತು. ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ ಅದರಲ್ಲಿದ್ದ 135 ಮಂದಿ ಸಾವನ್ನಪ್ಪಿದರು. ಇದೇ ದಿನ ಸಿಲ್ಚಾರ್ ಬಳಿ ಗುವಾಹತಿ-ಸಿಲ್ಚಾರ್ ಫಾಕರ್ ವಿಮಾನ ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ 34 ಮಂದಿ ಮೃತರಾದರು. ಭಾರತದ ದೇಶೀ ವಿಮಾನ ಹಾರಾಟದಲ್ಲಿ ಈದಿನ ಅತ್ಯಂತ ಕರಾಳ ದಿನವೆನಿಸಿತು.

1981: ಕೊಳ್ಳೇಗಾಲ ತಾಲ್ಲೂಕಿನ ಗೋಪೀನಾಥಂ ಕೆರೆ ಹಿಂದಿನ ರಾತ್ರಿ ಒಡೆದ ಪರಿಣಾಮವಾಗಿ ಕೊಚ್ಚಿ ಹೋದ ಜನರಲ್ಲಿ 110 ಶವಗಳನ್ನು ಪತ್ತೆ ಹಚ್ಚಲಾಯಿತು. ಕರ್ನಾಟಕ - ತಮಿಳುನಾಡು ಗಡಿಯಲ್ಲಿ ದಟ್ಟ ಅರಣ್ಯದ ನಡುವೆ ಇರುವ ಈ ಕೆರೆ ಧಾರಾಕಾರ ಮಳೆಯ ಪರಿಣಾಮವಾಗಿ ಒಡೆಯಿತು.

1974: ತಮಿಳು ರಂಗಭೂಮಿಯ ಖ್ಯಾತ ನಟ ಟಿ.ಎಸ್. ರಾಜ ಮಾಣಿಕ್ಯಮ್ ಪಿಳ್ಳೈ ನಿಧನ.

1970: ಭಾರತದ ಮೊತ್ತ ಮೊದಲ ಸ್ವದೇಶಿ ನಿರ್ಮಿತ `ಮಿಗ್-21' ವಿಮಾನವನ್ನು ವಾಯುಪಡೆಗೆ ಹಸ್ತಾಂತರಿಸಲಾಯಿತು.

1952: ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ಸ್ಥಾಪನೆಯ ಬೇಡಿಕೆ ಈಡೇರಿಕೆಗಾಗಿ ಶ್ರೀರಾಮುಲು ಪೊಟ್ಟಿ ತಮ್ಮ ಆಮರಣ ನಿರಶನ ಆರಂಭಿಸಿದರು. ಅವರ ನಿರಶನ 58 ದಿನಗಳ ಕಾಲ ನಡೆದು ಅವರ ಸಾವಿನೊಂದಿಗೆ ಪರ್ಯವಸಾನಗೊಂಡಿತು.

1933: 1936ರ ಕ್ರೀಡಾ ಕೂಟದಲ್ಲಿ ಬ್ಯಾಸ್ಕೆಟ್ ಬಾಲ್ ಸೇರ್ಪಡೆ ಮಾಡಲು ಬರ್ಲಿನ್ ಒಲಿಂಪಿಕ್ ಸಮಿತಿ ಮತದಾನ.

1929: ಹಾಕಿ ಆಟಗಾರ ಬಲಬೀರ್ ಸಿಂಗ್ ಜನನ.

1925: ಸಾಮಾಜಿಕ ಹಾಗೂ ಚಾರಿತ್ರಿಕ ಕಾದಂಬರಿಕಾರ ಎಂದೇ ಖ್ಯಾತರಾದ ಕೊರಟಿ ಶ್ರೀನಿವಾಸರಾವ್ (19-10-1925ರಿಂದ 25-4-1983) ಅವರು ಶ್ರೀಪಾದರಾವ್- ನಾಮಗಿರಿಯಮ್ಮ ದಂಪತಿಯ ಮಗನಾಗಿ ಹೊಸಕೋಟೆ ತಾಲ್ಲೂಕು ಕೊರಟಿ ಗ್ರಾಮದಲ್ಲಿ ಜನಿಸಿದರು.

1925: ಕೇಂದ್ರದ ಮಾಜಿ ಸಚಿವ ಬಿ. ಶಂಕರಾನಂದ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಣಗಲಿ ಗ್ರಾಮದಲ್ಲಿ ಜನಿಸಿದರು.

1910: ಭಾರತ ಸಂಜಾತ ಅಮೆರಿಕನ್ ಖಭೌತ ವಿಜ್ಞಾನಿ, ನೊಬೆಲ್ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯಂ ಚಂದ್ರಶೇಖರ್ (1910-1995) ಜನ್ಮದಿನ. ಚಂದ್ರಶೇಖರ್ ಅವರು ಭೌತವಿಜ್ಞಾನದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದ ಭಾರತದ ವಿಜ್ಞಾನಿ ಸಿ.ವಿ. ರಾಮನ್ ಅವರ ಅಳಿಯ. ನಕ್ಷತ್ರಗಳಿಗೆ ಸಂಬಂಧಿಸಿದಂತೆ ಇವರು ಮಂಡಿಸಿದ ಸಿದ್ಧಾಂತ `ಚಂದ್ರಶೇಖರ್  ಮಿತಿ' ಎಂದೇ ಖ್ಯಾತಿ ಪಡೆದಿದೆ.  

1907: ಮುಂಬೈಯ ಪ್ರಥಮ ಮಹಿಳಾ ಮೇಯರ ಸುಲೋಚನಾ ಮೋದಿ ಜನನ.

1889: ಭಾರತದಲ್ಲಿ ಮೊತ್ತ ಮೊದಲ ತೈಲಬಾವಿಯನ್ನು ಯಶಸ್ವಿಯಾಗಿ ಕೊರೆಯಲಾಯಿತು. ಅಸ್ಸಾಂ ರಾಜ್ಯದ ದಿಗ್ ಬೋಯಿಯಲ್ಲಿ ಕೊರೆಯಲಾದ ಈ ತೈಲಬಾವಿಯಲ್ಲಿ 200 ಮೀಟರ್ ಆಳದಲ್ಲಿ ತೈಲ ಪತ್ತೆಯಾಯಿತು.

1862: ಆಗಸ್ಟೆ ಲ್ಯುಮಿರೆ (1862-1954) ಜನ್ಮದಿನ. ಫ್ರೆಂಚ್ ಸಂಶೋಧಕನಾದ ಈತ ತನ್ನ ಸಹೋದರ ಲೂಯಿಯ ಸಹಕಾರದೊಂದಿಗೆ ಚಲನ ಚಿತ್ರ ಕ್ಷೇತ್ರಕ್ಕೆ `ಸಿನಿಮಾಟೋಗ್ರಾಫ್' ಹೆಸರಿನ ಕ್ಯಾಮರಾ ಮತ್ತು ಪ್ರೊಜೆಕ್ಟರನ್ನು ನೀಡಿ ಖ್ಯಾತಿ ಗಳಿಸಿದ.

1812: ನೆಪೋಲಿಯನ್ ಬೋನಪಾರ್ಟೆ ನೇತೃತ್ವದಲ್ಲಿ ಫ್ರೆಂಚ್ ಪಡೆಗಳು ಮಾಸ್ಕೊದಿಂದ ವಾಪಸಾತಿ ಆರಂಭಿಸಿದವು.

1781: ಲಾರ್ಡ್ ಕಾರ್ನವಾಲಿಸ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಯಾರ್ಕ್ ಟೌನಿನಲ್ಲಿ ಜನರಲ್ ವಾಷಿಂಗ್ಟನ್ ಗೆ ಶರಣಾದವು. ಇದರೊಂದಿಗೆ ಅಮೆರಿಕನ್ ಕ್ರಾಂತಿ ಅದರ ಕೊನೆಯ ಘಟ್ಟವನ್ನು ತಲುಪಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement