Saturday, October 18, 2008

ಇಂದಿನ ಇತಿಹಾಸ History Today ಅಕ್ಟೋಬರ್ 18

ಇಂದಿನ ಇತಿಹಾಸ

ಅಕ್ಟೋಬರ್ 18

ಮೆಲ್ಬೋರ್ನಿನಲ್ಲಿ ನಡೆದ ಐದನೇ ಆಸ್ಟ್ರೇಲಿಯಾ-ಭಾರತ ಚಲನಚಿತ್ರೋತ್ಸವದಲ್ಲಿ ಭಾರತದ `ಚಕ್ ದೇ ಇಂಡಿಯಾ' ಚಿತ್ರವು ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರು ಕರಾಚಿಯಲ್ಲಿ ಈದಿನ ಮಧ್ಯರಾತ್ರಿ ನಡೆಸುತ್ತಿದ್ದ ರ್ಯಾಲಿಯಲ್ಲಿ ಮಾನವ ಬಾಂಬ್ ಸ್ಫೋಟದಿಂದ 139 ಜನರು ಸಾವಿಗೀಡಾಗಿ, 500ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಬಂಧನ ಭಯದಿಂದ ಮುಕ್ತಿ ಹೊಂದಲು ಗಡೀಪಾರಾಗಿದ್ದ ಬೆನಜೀರ್ ಭುಟ್ಟೋ ಎಂಟು ವರ್ಷದ ಬಳಿಕ ಈದಿನ ಮಧ್ಯಾಹ್ನ 2.15ರ ಹೊತ್ತಿಗೆ ಕರಾಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. 1998ರ ಅವಧಿಯಲ್ಲಿ ಅಕ್ರಮ ಹಣ ಸಂಪಾದನೆಯ ಆರೋಪದ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸಬಹುದು ಎಂಬ ಭಯದಿಂದ ಮೂವರು ಮಕ್ಕಳೊಂದಿಗೆ ದೇಶ ತೊರೆದಿದ್ದ ಭುಟ್ಟೋ ನಂತರ  ಲಂಡನ್ ಹಾಗೂ ದುಬೈಯಲ್ಲಿ ನೆಲೆಸಿದ್ದರು. 1975ರ ಅವಧಿಯಲ್ಲಿ ಬೆನಜೀರ್ ತಂದೆ ಜುಲ್ಫಿಕರ್ ಅಲಿ ಭುಟ್ಟೋ ಅವರಿಗೆ ಗಲ್ಲು ವಿಧಿಸಿದ ಬಳಿಕ ಅಂದಿನ ಮಿಲಿಟರಿ ಆಡಳಿತ ಐದು ವರ್ಷಗಳ ಕಾಲ ಇವರಿಗೆ ಜೈಲು ಶಿಕ್ಷೆ ನೀಡಿತ್ತು. ನಂತರ ಇಂಗ್ಲೆಂಡಿಗೆ ಗಡೀಪಾರು ಮಾಡಿತು. 1984ರಲ್ಲಿ ಇಂಗ್ಲೆಂಡಿಗೆ ತೆರಳಿದ್ದ ಬೆನಜೀರ್ ಅಲ್ಲಿನ ಪ್ರಸಿದ್ಧ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿ 1986ರಲ್ಲಿ ಮರಳಿದರು. ಕೂಡಲೆ ರಾಜಕೀಯ ಪ್ರವೇಶಿಸಿದ ಅವರು ಅಧಿಕಾರದ ಏಳು ಬೀಳುಗಳ ನಡುವೆ ಎರಡು ಬಾರಿ ಪಾಕಿಸ್ಥಾನದ ಪ್ರಧಾನಿಯಾಗಿ ಅಧಿಕಾರ ನಡೆಸಿದ್ದರು.

2007: ಮೆಲ್ಬೋರ್ನಿನಲ್ಲಿ ನಡೆದ ಐದನೇ ಆಸ್ಟ್ರೇಲಿಯಾ-ಭಾರತ ಚಲನಚಿತ್ರೋತ್ಸವದಲ್ಲಿ ಭಾರತದ `ಚಕ್ ದೇ ಇಂಡಿಯಾ' ಚಿತ್ರವು ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 

2007:  ಟಿಬೆಟಿನ ಧಾರ್ಮಿಕ ಗುರು ದಲೈಲಾಮ ಅವರಿಗೆ ಅಮೆರಿಕದ ಅತ್ಯುಚ್ಛ ಗೌರವದೊಂದಿಗೆ ಬಂಗಾರದ ಪದಕವನ್ನು ನೀಡಿದ್ದಕ್ಕೆ ಚೀನಾವು ತೀವ್ರ ಅಸಮಾಧಾನ ವ್ಯಕ್ತ ಪಡಿಸಿತು. `ಅಮೆರಿಕಾದ ಈ ವರ್ತನೆ' ಚೀನಾದ ಆಂತರಿಕ ವ್ಯವಹಾರದೊಳಗೆ ಅನಗತ್ಯ ಹಸ್ತಕ್ಷೇಪ' ಎಂದೂ ಅದು ಟೀಕಿಸಿತು. ಬೀಜಿಂಗಿನಲ್ಲಿ ಇರುವ ಅಮೆರಿಕದ ರಾಯಭಾರಿಯನ್ನು ತನ್ನ ಕಚೇರಿಗೆ ಕರೆಸಿಕೊಂಡ ಚೀನಾ ಸರ್ಕಾರ ಅಮೆರಿಕದ ಈ ವರ್ತನೆಯ ವಿರುದ್ಧ ತನ್ನ  ಕೋಪವನ್ನು ವ್ಯಕ್ತಪಡಿಸಿತು. ಟಿಬೆಟನ್ನು 1959ರಲ್ಲಿ ತೊರೆದ ದಲೈಲಾಮ ಭಾರತದಲ್ಲಿಯೇ ವಾಸಿಸುತ್ತಿದ್ದು ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರಿಂದ ಆ ದೇಶದ ಈ ಉನ್ನತ ಪ್ರಶಸ್ತಿಯನ್ನು ಸ್ವೀಕರಿಸಿದರು.

2007: ಫ್ರಾನ್ಸ್ ಅಧ್ಯಕ್ಷ  ನಿಕೊಲಸ್ ಸರ್ಕೋಜಿ ಹಾಗೂ ಅವರ ಪತ್ನಿ ಸಿಸಿಲಿಯ ಪರಸ್ವರ ಒಪ್ಪಿಗೆಯ ಮೇರೆಗೆ  ತಮ್ಮ ಹನ್ನೊಂದು ವರ್ಷದ ವೈವಾಹಿಕ ಜೀವನಕ್ಕೆ ಮುಕ್ತಾಯ ಹಾಡಿದರು. ಸರ್ಕೋಜಿ ಹಾಗೂ ಸಿಸಿಲಿಯ ಅವರ ವಿವಾಹ ವಿಚ್ಛೇದನದ ಅರ್ಜಿಯ ವಿಚಾರಣೆಯ ಕಲಾಪಗಳ ವರದಿಗಳನ್ನು ಫ್ರಾನ್ಸ್ ಪತ್ರಿಕೆಗಳು ಮುಖ ಪುಟದಲ್ಲಿ ಪ್ರಕಟಿಸಿದ್ದವು. ಸರ್ಕೋಜಿ ಹಾಗೂ ಸಿಸಿಲಿಯ ಅವರಿಗೆ 10 ವರ್ಷದ ಮಗನಿದ್ದಾನೆ. ಸಿಸಿಲಿಯ ಅವರು 2005ರಲ್ಲಿ ನ್ಯೂಯಾರ್ಕಿನ ಜಾಹೀರಾತು ಕಂಪೆನಿಯೊಂದರ ಕಾರ್ಯ ನಿರ್ವಾಹಕನ ಜೊತೆಗೆ ಓಡಿ ಹೋಗಿದ್ದರು.

2007: ಭಾರತದಲ್ಲಿನ ರೈತರ ಆತ್ಮಹತ್ಯೆಗೆ ಸಾಲದ ಹೊರೆಯೊಂದೇ ಕಾರಣವಲ್ಲ. ಇದರ ಹೊರತಾಗಿ ಪ್ರಕೃತಿ ವಿಕೋಪ, ಕೀಟನಾಶಕಗಳು ಹಾಗೂ ಬೆಳೆ ವೈಫಲ್ಯವೂ ಸೇರಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ವೈ.ವಿ. ರೆಡ್ಡಿ ಪ್ರತಿಪಾದಿಸಿದರು. ಅತಿ ಹೆಚ್ಚು ಸಾಲ ದೊರಕುವ ರಾಜ್ಯಗಳಲ್ಲಿಯೇ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ಸಂಭವಿಸಿವೆ. ಅಲ್ಲದೇ ಈ ಪ್ರದೇಶಗಳಲ್ಲಿ ವಾಣಿಜ್ಯ ಕೃಷಿ ಕೈಗೊಳ್ಳಲಾಗುತ್ತಿದೆ. ಅಂದರೆ ಇದರ ಒಟ್ಟು ಸಾರಾಂಶ ರೈತರ ಆತ್ಮಹತ್ಯೆಗೆ ಸಾಲದ ಹೊರೆಯ ಹೊರತಾಗಿಯೂ ಇತರ ಕಾರಣಗಳಿವೆ. ಪ್ರಕೃತಿ ವಿಕೋಪ, ಬೆಳೆ, ಕೀಟನಾಶಕ ವೈಫಲ್ಯ, ವಿದ್ಯುತ್ ಹಾಗೂ ನೀರಿನ ಅಸಮರ್ಪಕ ಪೂರೈಕೆ ಮುಂತಾದ ಕಾರಣಗಳು ಸಹ ರೈತರ ಆತ್ಮಹತ್ಯೆಗೆ ಕಾರಣವಾಗಿವೆ ಎಂದು ಅವರು ವಿವರಿಸಿದರು.

2007: ರಂಗಕರ್ಮಿಗಳ ಸಡಗರ, ಸಂಭ್ರಮದ ನಡುವೆ ಉಡುಪಿ ಜಿಲ್ಲೆ ಮೂಡಬಿದಿರೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ 2006ನೇ ಸಾಲಿನ `ರಂಗ ಸಮ್ಮಾನ' ಪ್ರಶಸ್ತಿಗಳನ್ನು ಈದಿನ  ರಾತ್ರಿ ಪ್ರದಾನ ಮಾಡಲಾಯಿತು. ಕರ್ನಾಟಕ ನಾಟಕ ಅಕಾಡೆಮಿ 2006 ರ ಪ್ರಶಸ್ತಿಯನ್ನು ಈ ಕೆಳಕಂಡವರಿಗೆ ನೀಡಿ ಗೌರವಿಸಲಾಯಿತು. ಅನಿತಾ ಕಾರ್ಯಪ್ಪ (ಕೊಡಗು), ಕೆ, ಆನಂದರಾಜು (ಬೆಂಗಳೂರು), ಎಸ್. ಎನ್. ದೇಶಪಾಂಡೆ (ಧಾರವಾಡ), ದೇವಿಂದ್ರ ರಡ್ಡಿ, ನಾರಾಯಣ ಭೀಮಸೇನರಾವ ಕುಲಕರ್ಣಿ (ಗುಲ್ಬರ್ಗ), ಮಹಾಂತೇಶ ಗಜೇಂದ್ರಗಡ (ಬಾಗಲಕೋಟೆ), ಮೈಕೋ ಚಂದ್ರು (ಬೆಂಗಳೂರು), ಕೆ. ರಂಗಸ್ವಾಮಿ (ಹಾಸನ), ಪಿ.ಎಸ್. ರಾವ್ (ದ.ಕನ್ನಡ), ಲಿಂಗಯ್ಯ ವೀರಭದ್ರಯ್ಯ ಕುಲಕರ್ಣಿ (ಬೆಳಗಾವಿ), ಕೆ.ಬಿ. ಶಂಕರ್ (ವಿಜಾಪುರ), ಡಿ.ಕೆ. ಶಿಂಧೆ (ಬೆಂಗಳೂರು), ಸೀತಾರಾಮ ಶೆಟ್ಟಿ ಕೂರಾಡಿ (ಉಡುಪಿ), ಶ್ರೀಮತಿ ಹರಿಪ್ರಸಾದ್ (ಮೈಸೂರು). ದೊಡ್ಡ ಅಂಕಾಚಾರ್ ಅನಾರೋಗ್ಯದ ಪ್ರಯುಕ್ತ ಗೈರು ಹಾಜರಾಗಿದ್ದರು. ಸಿಜಿಕೆ ಯುವರಂಗ 2006 ಪುರಸ್ಕಾರವನ್ನು ಹಾಸನದ ಮೋಹನ ಮಟ್ಟನವಿಲೆ, ರಾಜೇಶ ತಲಕಾಡು ಮೈಸೂರು, ರಾಮಕೃಷ್ಣ ಬೆಳ್ತೂರ್ ಬೆಂಗಳೂರು, ಸಂತೋಷ ಗಜಾನನ ಮಹಾಲೆ ಧಾರವಾಡ, ಎಸ್. ಎಸ್. ಸಿದ್ಧರಾಜು ದಾವಣಗೆರೆ, ಸುರೇಶ ಅಂಗಡಿ ಬಳ್ಳಾರಿ ಈ ಯುವ ರಂಗಕರ್ಮಿಗಳಿಗೆ ನೀಡಲಾಯಿತು. 2006 ರ ಗೌರವ ಪ್ರಶಸ್ತಿಯನ್ನು ಖ್ಯಾತ ಹನಿಗವನ ಸಾಹಿತಿ ಎಚ್. ದುಂಡಿರಾಜ್ ಅವರಿಗೆ ಹಾಗೂ ಕೆ. ಹಿರಣ್ಯಯ್ಯ ಪುರಸ್ಕಾರವನ್ನು ಪ್ರಭಾತ್ ಕಲಾವಿದರಿಗೆ (ಟಿ. ವೆಂಕಟೇಶ್) ನೀಡಲಾಯಿತು. 

2007: ಅಂತಾರಾಷ್ಟ್ರೀಯ ಮಟ್ಟದ ನಾಗರಿಕ ವಿಮಾನ ಸಂಚಾರ ಸೇವೆಯ ಪ್ರಮುಖ ಕಂಪೆನಿ ಏರ್ ಅರೇಬಿಯಾ, 2007ರ ಅಕ್ಟೋಬರ್ 28 ರಿಂದ ಬೆಂಗಳೂರಿನಿಂದ ಶಾರ್ಜಾಕ್ಕೆ ನಿತ್ಯವೂ ಪ್ರಯಾಣಿಕ ವಿಮಾನ ಸಂಚಾರ ಆರಂಭಿಸುವುದಾಗಿ ಬೆಂಗಳೂರಿನಲ್ಲಿ ಪ್ರಕಟಿಸಿತು.

2006: ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಅಂಗವಿಕಲರಿಗಾಗಿ ನಾಲ್ಕು ಆಸನಗಳಿರುವ ಮೊಬೈಲ್ ಕಾರು ಸೇವೆ ಆರಂಭಿಸಲಾಯಿತು. 4 ಲಕ್ಷ ರೂಪಾಯಿ ವೆಚ್ಚದ ಈ ಕಾರು ಸೇವೆಯನ್ನು ಬೆಂಗಳೂರಿನ ಮೈನಿ ಮೆಟೇರಿಯಲ್ಸ್ ಮೂವ್ ಮೆಂಟ್ ಲಿಮಿಟೆಡ್ ಸಂಸ್ಥೆ ಒದಗಿಸಿದೆ.

2006: ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಬರೆದ `ಬಿಲ್ಡಿಂಗ್ ಸೋಲ್ಸ್: ಡಯಲಾಗ್ ಆನ್ ದಿ ಪರ್ಪಸ್ ಆಫ್ ಲೈಫ್' ಪುಸ್ತಕದ ಚೀನೀ ಅನುವಾದವನ್ನು ಬೀಜಿಂಗಿನಲ್ಲಿ ಬಿಡುಗಡೆ ಮಾಡಲಾಯಿತು. ಕಲಾಂ ಅವರು ತಮ್ಮ ಜೀವನದ ವಿವಿಧ ಅನುಭವಗಳನ್ನು ವಿಜ್ಞಾನಿ ಅರುಣ್ ಕೆ. ತಿವಾರಿ ಅವರ ಜೊತೆಗೂಡಿ ಬರೆದ ಪುಸ್ತಕ ಇದು. ಆಳುವ ಕಮ್ಯೂನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಮಂತ್ರಿ ಲಿಯು ಹಾಂಗ್ ಕಾಯ್ ಪುಸ್ತಕ ಬಿಡುಗಡೆ ಮಾಡಿದರು.

1993: ಭಾರತೀಯ ಚಿತ್ರೋದ್ಯಮದ ಮೊದಲ ಬಾಲನಟಿ ಮಂದಾಕಿನಿ ಅಠವಳೆ ನಿಧನರಾದರು.

1985: ಕಲ್ಪಾಕಂನ ರಿಯಾಕ್ಟರ್ ಸಂಶೋಧನಾ ಕೇಂದ್ರದಲ್ಲಿ ಭಾರತದ ಮೊತ್ತ ಮೊದಲ `ಫಾಸ್ಟ್ ಬ್ರೀಡರ್ ನ್ಯೂಕ್ಲಿಯರ್ ರಿಯಾಕ್ಟರ್' ಕಾರ್ಯಾರಂಭ ಮಾಡಿತು. ಪ್ಲುಟೋನಿಯಂ ಮತ್ತು ಸಹಜ ಯುರೇನಿಯಂ ಕಾರ್ಬೈಡುಗಳ ಮಿಶ್ರಣದ ಇಂಧನ ಮೂಲಕ ಈ ಸಾಧನೆ ಮಾಡಲಾಯಿತು. ಇದರ ವಿನ್ಯಾಸ ಹಾಗೂ ನಿರ್ಮಾಣಕ್ಕೆ ಸಂಪೂರ್ಣ ದೇಶೀಯ ತಂತ್ರಜ್ಞಾನ ಬಳಸಿಕೊಳ್ಳಲಾಯಿತು. ಸಂಶೋಧನಾ ಕೇಂದ್ರಕ್ಕೆ ಈ ಸಂದರ್ಭದಲ್ಲಿ `ಇಂದಿರಾ ಗಾಂಧಿ ಅಣುಸಂಶೋಧನಾ ಕೇಂದ್ರ (ಐಜಿಸಿಎಆರ್) ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು.

1983: ಕ್ರಿಕೆಟ್ ಆಟಗಾರ ವಿಜಯ ಮಂಜ್ರೇಕರ್ ನಿಧನ.

1981: ಮದ್ರಾಸಿನಲ್ಲಿ (ಈಗಿನ ಚೆನ್ನೈ) ಏರ್ಪಡಿಸಲಾಗಿದ್ದ ಸಮಾರಂಭ ಒಂದರಲ್ಲಿ 1000 ಮಂದಿ ಹರಿಜನರು ಬೌದ್ಧ ಧರ್ಮಕ್ಕೆ ಸೇರಿದರು. ಖೋಬರ್ ಗಡೆ ಗುಂಪಿನ ಭಾರತೀಯ ರಿಪಬ್ಲಿಕನ್ ಪಕ್ಷ ಈ ಮತಾಂತರ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಮಹಾಬೋಧಿ ಸಂಘದವರು ಕಾರ್ಯಕ್ರಮ ನೆರವೇರಿಸಿದರು.

1968: ಭಾರತೀಯ ಕ್ರಿಕೆಟಿನ ಮಾಜಿ ಆಟಗಾರ ನರೇಂದ್ರ ಹಿರ್ವಾನಿ ಜನ್ಮದಿನ. ತಮ್ಮ ಚೊಚ್ಚಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 16 ವಿಕೆಟುಗಳನ್ನು ಗಳಿಸಿ ಖ್ಯಾತರಾಗಿದ್ದರು.

1956: ಮೈಸೂರಿನ ರಾಜಪ್ರಮುಖ ಮಹಾರಾಜ ಜಯಚಾಮರಾಜ ಒಡೆಯರ್ ಬಹದ್ದೂರ್ ಅವರನ್ನು ನೂತನ ಮೈಸೂರು ರಾಜ್ಯದ ಗವರ್ನರ್ (ರಾಜ್ಯಪಾಲ) ಆಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.

1956: ಝೆಕ್ ಸಂಜಾತೆ ಅಮೆರಿಕನ್ ಟೆನಿಸ್ ಅಟಗಾರ್ತಿ ಮಾರ್ಟಿನಾ ನವ್ರಾಟಿಲೋವಾ ಜನ್ಮದಿನ. 1970ರ ಕೊನೆ ಹಾಗೂ 80ರ ದಶಕಗಳಲ್ಲಿ ಈಕೆ ಮಹಿಳಾ ಟೆನಿಸ್ಸಿನಲ್ಲಿ ನಂಬರ್ ಒನ್ ಆಟಗಾರ್ತಿಯಾಗಿ ಹೆಸರು ಪಡೆದರು.

1947: ಸಾಹಿತಿ ಬರಗೂರು ರಾಮಚಂದ್ರಪ್ಪ ಜನನ.

1941: ಸೃಜನಶೀಲ, ಅನುವಾದಕ ಸಾಹಿತಿ, ಪ್ರವಾಸಪ್ರಿಯ ಚಂದ್ರ ವದನರಾವ್ ಅವರು ಎಚ್.ಟಿ. ರಂಗಣ್ಣ- ಎ.ಸಿ. ಶಾರದಮ್ಮ ದಂಪತಿಯ ಮಗನಾಗಿ ಹಾಸನದಲ್ಲಿ ಜನಿಸಿದರು.

1931: `ಮೆನ್ಲೊ ಪಾರ್ಕಿನ ಮಾಂತ್ರಿಕ' ಥಾಮಸ್ ಆಲ್ವಾ ಎಡಿಸನ್ ತಮ್ಮ 84ನೇ ವಯಸ್ಸಿನಲ್ಲಿ ಮೃತರಾದರು. ಬದುಕಿನ ಅವಧಿಯಲ್ಲಿ ಇವರ 1093 ಸಂಶೋಧನೆಗಳಿಗೆ ಪೇಟೆಂಟ್ ನೀಡಲಾಯಿತು. ಚಲನಚಿತ್ರ ಪ್ರೊಜೆಕ್ಟರ್, ಕಾರ್ಬನ್ ಟೆಲಿಫೋನ್ ಟ್ರಾನ್ಸ್ ಮಿಟರ್, ಫೊನೋಗ್ರಾಫ್ ಮತ್ತು ಎಲೆಕ್ಟ್ರಿಕ್ ವಿದ್ಯುತ್ ದೀಪ ಅವುಗಳಲ್ಲಿ ಪ್ರಮುಖವಾದವು. ಶಬ್ದ ಹಾಗೂ ದೃಷ್ಟಿಗೆ ಸಂಬಂಧಿಸಿದ ಇವರ ಸಂಶೋಧನೆಗಳು `ಮಾತನಾಡುವ ಚಿತ್ರಗಳ' ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದವು. ದೂರವಾಣಿ ಕ್ಷೇತ್ರಕ್ಕೆ `ಹಲೋ' ಶಬ್ದದ ಕೊಡುಗೆ ಕೂಡಾ ಇವರದ್ದೇ. ಅಲೆಗ್ಸಾಂಡರ್ ಗ್ರಹಾಂಬೆಲ್ ಸೂಚಿಸಿದ್ದ `ಅಹೋಯ್' ಶಬ್ದದ ಬದಲಿಗೆ `ಹಲೋ' ಶಬ್ದ ಬಳಸುವಂತೆ ಎಡಿಸನ್ ಟೆಲಿಗ್ರಾಫ್ ಕಂಪೆನಿಯ ಅಧ್ಯಕ್ಷರಿಗೆ ಸಲಹೆ ಮಾಡಿದ್ದರು. 

1928: ಮಾಜಿ ಕ್ರಿಕೆಟ್ ಆಟಗಾರ ರೋಷನ್ ಹರ್ಷದ್ಲಾಲ್ `ದೀಪಕ್' ಶೋಧನ್ ಜನ್ಮದಿನ. ತಮ್ಮ ಚೊಚ್ಚಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲೇ ಇವರು ಶತಕ ಬಾರಿಸಿದ್ದರು.

1922: ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಲಿಮಿಟೆಡ್ಡನ್ನು ಈ ದಿನ ಸ್ಥಾಪಿಸಲಾಯಿತು. ಇದಕ್ಕೆ ಸಂಬಂಧಪಟ್ಟಂತೆ ಲಂಡನ್ನಿನಲ್ಲಿ ನಡೆದ ಸಭೆಯಲ್ಲಿ ಸುಮಾರು 300 ಮಂದಿ ವೈರ್ ಲೆಸ್ ಉತ್ಪಾದಕರು ಮತ್ತು ಪಾಲುಬಂಡವಾಳದಾರರು (ಷೇರುದಾರರು) ಪಾಲ್ಗೊಂಡಿದ್ದರು. ಡಿಸೆಂಬರ್ 15ರಂದು ಅದನ್ನು ನೋಂದಣಿ ಮಾಡಲಾಯಿತು. 1923ರ ಜನವರಿ 18ರಂದು ಪೋಸ್ಟ್ ಮಾಸ್ಟರ್ ಜನರಲ್ ನಿಂದ ಪ್ರಸಾರ ಮಾಡಲು ಅದಕ್ಕೆ ಅನುಮತಿ ನೀಡಲಾಯಿತು. ಆದರೆ 1922ರ ನವೆಂಬರ್ 14ರಿಂದಲೇ ಅದು ಪ್ರತಿದಿನದ ಪ್ರಸಾರವನ್ನು ಆರಂಭಿಸಿತು. ಹಾಗಾಗಿ ಈ ದಿನವನ್ನೇ ಬಿಬಿಸಿಯ ಜನ್ಮದಿನ ಎಂಬುದಾಗಿ ಪರಿಗಣಿಸಲಾಯಿತು.

1828: ಜಾನ್ ಥಾಮಸ್ ವೈಟ್ ಹೆಡ್ ಮಿಶೆಲ್ (1828-95) ಜನ್ಮದಿನ. ಈತ 19ನೇ ಶತಮಾನದ ಇಂಗ್ಲಿಷ್ ಗ್ರಾಹಕ ಚಳವಳಿಯ ಪ್ರಮುಖ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement