Wednesday, December 31, 2008

ಮನವಿ ಮಾಡಿದರೂ ವರ್ಗವಾಗದ ಆರ್.ಡಿ. ಖಾತೆ..!

ಮನವಿ ಮಾಡಿದರೂ

ವರ್ಗವಾಗದ ಆರ್.ಡಿ. ಖಾತೆ..!



ನಿಯಮಗಳ ಪ್ರಕಾರ ಅರ್ಜಿದಾರರು ಶೇಕಡಾ 3.5 ಬಡ್ಡಿಗೆ ಅರ್ಹರು ಎಂಬುದು ನಿಜ. ಆದರೆ ಪ್ರತಿವಾದಿ ಅಂಚೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ವರ್ತನೆಯ ಪರಿಣಾಮವಾಗಿ ಅರ್ಜಿದಾರರು ಕಂಬ, ಕಂಬ ಸುತ್ತುವಂತಾಯಿತು ಎಂಬುದನ್ನೂ ಮರೆಯುವಂತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು. 

ನೆತ್ರಕೆರೆ ಉದಯಶಂಕರ

ಅಂಚೆ ಇಲಾಖೆ ದೇಶವ್ಯಾಪಿ. ಈ ಇಲಾಖೆಯ ಉಳಿತಾಯ ಖಾತೆಯೊಂದನ್ನು ನೀವು ತೆರೆಯುತ್ತೀರಿ ಎಂದಿಟ್ಟುಕೊಳ್ಳಿ. ಸ್ವಲ್ಪ ಸಮಯದ ಬಳಿಕ ನಿಮಗೆ ಬೇರೆ ಊರಿಗೆ ವರ್ಗಾವಣೆಯಾಗುತ್ತದೆ. ನೀವು ವರ್ಗಾವಣೆಗೊಂಡ ಊರಿನ ಅಂಚೆ ಕಚೇರಿಗೆ ನಿಮ್ಮ ಖಾತೆಯನ್ನು ವರ್ಗಾಯಿಸುವಂತೆ ಮನವಿ ಮಾಡುತ್ತೀರಿ. ದಿನಗಳು ಕಳೆದರೂ ಖಾತೆ ಅಲ್ಲಿಗೆ ವರ್ಗಾವಣೆಯಾಗದೆ ಅದರ ಬಗ್ಗೆ ಮಾಹಿತಿಗಾಗಿ ನೀವು ಅಂಚೆ ಇಲಾಖೆಯ ಕಂಬ, ಕಂಬ ಸುತ್ತಬೇಕಾಗಿ ಬರುತ್ತದೆ. ಕೊನೆಗೂ ನಿಮ್ಮ ಖಾತೆ ಎಲ್ಲಿಗೆ ಹೋಯಿತೆಂಬುದೇ ಗೊತ್ತಾಗುವುದಿಲ್ಲ!

ಈಗ ನೀವೇನು ಮಾಡಬೇಕು? ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆಯೇ?

ಖಂಡಿತವಾಗಿ. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿಕೊಟ್ಟಿದೆ.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಬಾಣಸವಾಡಿ ಬಾಲಾಜಿ ಲೇಔಟಿನ ನಿವಾಸಿ ಎಸ್. ಶಂಕರ್. ಪ್ರತಿವಾದಿ: ಅಂಚೆ ಇಲಾಖೆ, ಅಂಚೆ ಕಚೇರಿಗಳ ಹಿರಿಯ ಸೂಪರಿಂಟೆಂಡೆಂಟ್, ಅಂಚೆ ಇಲಾಖೆ ಬೆಂಗಳೂರು ಪೂರ್ವ, ಬೆಂಗಳೂರು.

ಅರ್ಜಿದಾರ ಶಂಕರ್ ಅವರು ಹೊಸೂರಿನಲ್ಲಿ ಇದ್ದಾಗ ಅಂಚೆ ಕಚೇರಿಯಲ್ಲಿ ಎರಡು ಆರ್.ಡಿ ಖಾತೆಗಳನ್ನು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ತೆರೆದರು. ಸ್ವಲ್ಪ ಸಮಯದ ಬಳಿಕ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು. ಹೀಗಾಗಿ ಅವರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಆರ್.ಡಿ. ಖಾತೆಗಳನ್ನು ಬೆಂಗಳೂರಿನ ಕಲ್ಯಾಣನಗರ ಅಂಚೆ ಕಚೇರಿಗೆ ವರ್ಗಾಯಿಸುವಂತೆ ಹೊಸೂರಿನ ಅಂಚೆ ಕಚೇರಿಗೆ ಮನವಿ ಸಲ್ಲಿಸಿದರು.

ಸ್ವಲ್ಪ ದಿನಗಳ ಬಳಿಕ ಕಲ್ಯಾಣ ನಗರದ ಅಂಚೆ ಕಚೇರಿಯನ್ನು ಸಂಪರ್ಕಿಸಿದ ಶಂಕರ್, ತಮ್ಮ ಮಕ್ಕಳ ಹೆಸರಿನ ಎರಡು ಆರ್.ಡಿ. ಖಾತೆಗಳು ವರ್ಗಾವಣೆಗೊಂಡಿವೆಯೇ ಎಂಬುದಾಗಿ ವಿಚಾರಿಸಿದರು. ಈ ಆರ್.ಡಿ ಖಾತೆಗಳು ಮಾರುತಿ ಸೇವಾ ನಗರ ಅಂಚೆ ಕಚೇರಿಗೆ ವರ್ಗಾವಣೆಗೊಂಡಿರಬಹುದು, ಆದ್ದರಿಂದ ಮಾರುತಿ ಸೇವಾ ನಗರ ಅಂಚೆ ಕಚೇರಿಯನ್ನು ಸಂಪರ್ಕಿಸಿ ವಿಚಾರಿಸಿಕೊಳ್ಳಿ ಎಂಬುದಾಗಿ ಕಲ್ಯಾಣ ನಗರ ಅಂಚೆ ಕಚೇರಿಯಲ್ಲಿ ಶಂಕರ್ ಅವರಿಗೆ ಸಲಹೆ ನೀಡಲಾಯಿತು.

ಅರ್ಜಿದಾರರು ಮಾರುತಿ ಸೇವಾ ನಗರ ಅಂಚೆ ಕಚೇರಿಗೆ ಧಾವಿಸಿದಾಗ ಅಲ್ಲಿಗೆ ಅಂತಹ ಯಾವುದೇ ಖಾತೆಗಳು ಬಂದಿಲ್ಲ ಎಂಬ ಉತ್ತರ ಲಭಿಸಿತು.

ಕಡೆಗೂ ತಮ್ಮ ಮಕ್ಕಳ ಹೆಸರಿನ ಆರ್.ಡಿ. ಖಾತೆಗಳು ಯಾವ ಅಂಚೆ ಕಚೇರಿಗೆ ವರ್ಗಾವಣೆಗೊಂಡಿವೆ ಎಂಬುದನ್ನು ಪತ್ತೆ ಹಚ್ಚಲೂ ಶಂಕರ್ ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಖಾತೆಗಳಿಗೆ ಪ್ರತಿ ತಿಂಗಳೂ ಕಟ್ಟ ಬೇಕಾಗಿದ್ದ ಮಾಸಿಕ ಠೇವಣಿ ಪಾವತಿ ಮಾಡಲೂ ಅವರಿಗೆ ಸಾಧ್ಯವಾಗಲಿಲ್ಲ.

ಶಂಕರ್ ಅವರು ಬೇರೆ ದಾರಿಕಾಣದೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಆದರೆ ಜಿಲ್ಲಾ ಗ್ರಾಹಕ ನ್ಯಾಯಾಲಯವು ಪ್ರತಿವಾದಿ ಅಂಚೆ ಇಲಾಖೆಯಿಂದ ಸೇವಾ ಲೋಪ ಆದುದನ್ನು ಗಮನಿಸದೆಯೇ ಅರ್ಜಿದಾರರ ದೂರನ್ನು ವಜಾ ಮಾಡಿತು.

ಅರ್ಜಿದಾರ ಶಂಕರ್ ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪಿನ ವಿರುದ್ಧ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಟಿ. ಹರಿಯಪ್ಪ ಗೌಡ ಮತ್ತು ರಮಾ ಅನಂತ್ ಅವರನ್ನು ಒಳಗೊಂಡ ರಾಜ್ಯ ಗ್ರಾಹಕ ನ್ಯಾಯಾಲಯವು ಅರ್ಜಿದಾರ ಶಂಕರ್ ಪರ ವಕೀಲರಾದ ಮೆ. ಕಸ್ತೂರಿ ಅಸೋಸಿಯೇಟ್ಸ್ ಹಾಗೂ ಪ್ರತಿವಾದಿಗಳ ಪರ ವಕೀಲರಾದ ಕೊತ್ವಾಲ್ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಈ ಪ್ರಕರಣದಲ್ಲಿ ಅರ್ಜಿದಾರರು ಎರಡು ಆರ್.ಡಿ. ಖಾತೆಗಳಲ್ಲಿ ತಲಾ 8000 ರೂಪಾಯಿಗಳನ್ನು ತೊಡಗಿಸಿದ್ದರು ಎಂಬುದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಈ ವಿಚಾರವನ್ನು ಆಯೋಗದ ಮುಂದೆ ಹಾಜರಾದ ಸಾರ್ವಜನಿಕ ಸಂಪರ್ಕ ಇನ್ ಸ್ಪೆಕ್ಟರ್ ಒಪ್ಪಿಕೊಂಡಿದ್ದುದನ್ನು ನ್ಯಾಯಾಲಯ ತನ್ನ ಗಮನಕ್ಕೆ ತೆಗೆದುಕೊಂಡಿತು.

ತಾನು ಆರ್.ಡಿ. ಖಾತೆಗಳಲ್ಲಿ ತೊಡಗಿಸಿದ ಹಣವನ್ನು ಪ್ರತಿವಾದಿಯು ಬಡ್ಡಿ ಸಹಿತವಾಗಿ ಹಿಂತಿರುಗಿಸಿದರೆ ಅರ್ಜಿದಾರರು ತೃಪ್ತರಾಗುತ್ತಾರೆ ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದನ್ನೂ ಪೀಠವು ಗಮನಿಸಿತು.

ಆರ್.ಡಿ. ಖಾತೆಗಳ ಗತಿ ಏನಾಯಿತೆಂದು ಅರಿಯಲು ಅರ್ಜಿದಾರರನ್ನು ಕಂಬದಿಂದ ಕಂಬಕ್ಕೆ ಸುತ್ತುವಂತೆ ಮಾಡಿರುವುದರಿಂದ ಬಡ್ಡಿ ಸಹಿತವಾಗಿ ಠೇವಣಿ ಹಣ ಹಿಂದಿರುಗಿಸುವಂತೆ ನಿರ್ದೇಶನ ನೀಡುವುದು ನ್ಯಾಯೋಚಿತ ಎಂಬ ಅಭಿಪ್ರಾಯವನ್ನು ಗ್ರಾಹಕ ನ್ಯಾಯಾಲಯ ತಳೆಯಿತು.

ನ್ಯಾಯಾಲಯಕ್ಕೆ ಹಾಜರಾದ ಅಂಚೆ ಇಲಾಖೆಯ ಅಧಿಕಾರಿ 27-9-2008ರಂದು ಅಥವಾ ಬಳಿಕ ಆರ್.ಡಿ. ಖಾತೆಗಳಲ್ಲಿ ಠೇವಣಿ ಇಡಲಾದ ಹಣವನ್ನು ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದನ್ನೂ ನ್ಯಾಯಾಲಯ ಗಮನದಲ್ಲಿ ಇರಿಸಿಕೊಂಡಿತು.

ನಿಯಮಗಳ ಪ್ರಕಾರ ಅರ್ಜಿದಾರರು ಶೇಕಡಾ 3.5ರಷ್ಟು ಬಡ್ಡಿ ಪಡೆಯಲು ಅರ್ಹರಾಗಿದ್ದಾರೆ ಎಂಬುದು ನಿಜ. ಆದರೆ ಈ ಪ್ರಕರಣದಲ್ಲಿ ಪ್ರತಿವಾದಿ ಅಂಚೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ವರ್ತನೆಯ ಪರಿಣಾಮವಾಗಿ ಅರ್ಜಿದಾರರು ಕಂಬದಿಂದ ಕಂಬಕ್ಕೆ ಸುತ್ತುವಂತಾಯಿತು ಎಂಬುದನ್ನೂ ಮರೆಯುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.

ಈ ಹಿನ್ನೆಲೆಯಲ್ಲಿ ಅರ್ಜಿದಾರರು ವಾರ್ಷಿಕ ಶೇಕಡಾ 6ರಷ್ಟು ಬಡ್ಡಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ಪೀಠವು ಮೇಲ್ಮನವಿಯನ್ನು ಅಂಗೀಕರಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿತು. ಎರಡೂ ಆರ್.ಡಿ. ಖಾತೆಗಳಿಗೆ ಸಂಬಂಧಿಸಿದಂತೆ ತಲಾ 8000 ರೂಪಾಯಿಗಳನ್ನು ಹಣ ಪಾವತಿ ಆಗುವವರೆಗೂ ಶೇಕಡಾ 6ರಷ್ಟು ಬಡ್ಡಿ ಸಹಿತವಾಗಿ ಹಿಂದಿರುಗಿಸಬೇಕು ಎಂದೂ ಪೀಠವು ಆದೇಶ ನೀಡಿತು.

No comments:

Advertisement