ಇಂದಿನ ಇತಿಹಾಸ
ಡಿಸೆಂಬರ್ 31
ಕೋಫಿ ಅನ್ನಾನ್ ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನದಿಂದ ಈದಿನ ಮಧ್ಯರಾತ್ರಿ ನಿರ್ಗಮಿಸಿದರು. ಅನ್ನಾನ್ ಉತ್ತರಾಧಿಕಾರಿಯಾಗಿ ದಕ್ಷಿಣ ಕೊರಿಯಾದ ಬಾನ್ ಕಿ ಮೂನ್ ಆಯ್ಕೆಯಾಗಿದ್ದಾರೆ.
2007: ಗೋವಾ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದ 12 ವಿಶೇಷ ಆರ್ಥಿಕ ವಲಯಗಳನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ ನಂತರ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿತು ಎಂದು ಮುಖ್ಯಮಂತ್ರಿ ದಿಗಂಬರ ಕಾಮತ್ ಪಣಜಿಯಲ್ಲಿ ತಿಳಿಸಿದರು. ಕೇಂದ್ರದ ಮುಂದೆ 8 ವಿಶೇಷ ಆರ್ಥಿಕ ವಲಯಗಳ ಪ್ರಸ್ತಾವ ಇದ್ದು ಅದನ್ನು ಕೈಬಿಡಲು ಮನವಿ ಮಾಡಿಕೊಳ್ಳಲಾಗುವುದು. ಈಗಾಗಲೇ ಅನುಮತಿ ದೊರಕಿರುವ 4 ವಲಯಗಳನ್ನು ಜಾರಿಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಕಾಮತ್ ಹೇಳಿದರು.
2007: ಚಿಕ್ಕಮಗಳೂರು ನಗರದ ಪತ್ರಿಕಾ ಛಾಯಾಗ್ರಾಹಕ ಎ.ಎನ್.ಪ್ರಸನ್ನ ಅವರು ತೆಗೆದ ಉರುಳಿಗೆ ಸಿಕ್ಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಚಿರತೆಯ ಚಿತ್ರವು ಸ್ಯಾಂಕ್ಚುಯರಿ ಏಷ್ಯಾ ನಿಯತಕಾಲಿಕದ 2007ನೇ ಸಾಲಿನ ಹವ್ಯಾಸಿ ಛಾಯಾಚಿತ್ರಗ್ರಾಹಕ ಪ್ರಶಸ್ತಿಗೆ ಆಯ್ಕೆಯಾಯಿತು. ಏಷ್ಯಾ ಖಂಡದ ಹಲವು ದೇಶಗಳಿಂದ ಸ್ಪರ್ಧೆಗೆ ಬಂದಿದ್ದ
ನೂರಾರು ಛಾಯಾಚಿತ್ರಗಳಲ್ಲಿ 14 ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಸನ್ನ ಅವರ ಚಿತ್ರ `ದ ನೈನ್ತ್ ಲೈಫ್' ಶೀರ್ಷಿಕೆಯಡಿ ಡಿಸೆಂಬರ್ ತಿಂಗಳ ನಿಯತಕಾಲಿಕದಲ್ಲಿ ಪ್ರಕಟಗೊಂಡಿತು. ಚಿಕ್ಕಮಗಳೂರು ಸಮೀಪದ ಬ್ಯಾಗದಹಳ್ಳಿಯ ಕಾಫಿ ತೋಟವೊಂದರಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಕ್ಕಿ ನರಳಾಡುತ್ತಿದ್ದ ಚಿರತೆ ಪ್ರಸನ್ನ ಅವರ ಕ್ಯಾಮೆರಾದಲ್ಲಿ ಬಂಧಿಯಾಗಿತ್ತು. ಅಂತಿಮವಾಗಿ ಉರುಳಿಗೆ ಜಯವಾಗಿ ಚಿರತೆ ಮೃತಪಟ್ಟಿತ್ತು. ಅರಣ್ಯ ವ್ಯಾಪಕ ಒತ್ತುವರಿಗೊಳಗಾಗಿ ಕಾಫಿ ತೋಟಗಳಾಗಿ ಬದಲಾಗುತ್ತಿರುವ ಪಶ್ಚಿಮಘಟ್ಟದಲ್ಲಿ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಈ ಚಿತ್ರ ಬಿಂಬಿಸಿತ್ತು.
2007: ಗ್ರಾಮಾಂತರ ಪ್ರದೇಶದ ದೇವಸ್ಥಾನಗಳಲ್ಲಿ ಮಹಿಳೆಯರನ್ನು ಕೊಲೆ ಮಾಡಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಸರಣಿ ಹಂತಕಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದರು. ಆರೋಪಿ ಮಹಿಳೆ ಕನಕಪುರ ಮುಖ್ಯ ರಸ್ತೆಯ ಕಗ್ಗಲಿಪುರ ಹೋಬಳಿಯ ಬಾದೆಕಟ್ಟೆ ಗ್ರಾಮದ ನಿವಾಸಿ ಹನುಮಂತಪ್ಪನ ಪತ್ನಿ ಮಲ್ಲಿಕಾ (43). ಈಕೆ ಸೈನೈಡ್ ಬಳಸಿ ಆರು ಮಹಿಳೆಯರನ್ನು ಕೊಲೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು.
2007: ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಕಟ್ಟಡ ಧ್ವಂಸ ಪ್ರಕರಣದ ತನಿಖೆಗಾಗಿ ನೇಮಕಗೊಂಡ ಲಿಬರಾನ್ ಆಯೋಗದ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಯಿತು. ಇದರೊಂದಿಗೆ ಅಸ್ತಿತ್ವಕ್ಕೆ ಬಂದ 15 ವರ್ಷಗಳಲ್ಲಿ ಆಯೋಗದ ಅವಧಿಯನ್ನು 43 ನೇ ಬಾರಿ ವಿಸ್ತರಿಸಿದಂತಾಯಿತು. ನ್ಯಾಯಮೂರ್ತಿ ಎಂ.ಎಸ್.ಲಿಬರಾನ್ ನೇತೃತ್ವದ ತಂಡಕ್ಕೆ 2008ರ ಫೆಬ್ರುವರಿ 29 ರ ತನಕ ಗಡುವು ವಿಸ್ತರಿಸಲಾಯಿತು. 1992 ರ ಡಿಸೆಂಬರ್ 16 ರಂದು ಈ ಆಯೋಗದ ರಚನೆಯಾಗಿತ್ತು.
2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ನಡೆದ ಸಂದರ್ಭದ ವಿಡಿಯೋ ದೃಶ್ಯವನ್ನು ಬ್ರಿಟಿಷ್ ಚಾನೆಲ್ 4 ಪ್ರಸಾರ ಮಾಡಿತು. ಇದು ಬೆನಜೀರ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಗುಂಡೇಟು ತಗುಲಿದ ಬೆನಜೀರ್ ಭುಟ್ಟೊ ತಮಗೆ ನೀಡಿದ್ದ ಗುಂಡುನಿರೋಧಕ ಕಾರಿನಿಂದ ಕೆಳಗೆ ಬಿದ್ದದ್ದನ್ನು ಈ ವೀಡಿಯೋ ದೃಶ್ಯ ತೋರಿಸಿತು. ಈ ವಿಡಿಯೋ ದೃಶ್ಯದಲ್ಲಿ ಬಿಳಿ ಅಂಗಿ, ಕಪ್ಪು ಜಾಕೆಟ್ ಹಾಗೂ ಕನ್ನಡಕಧಾರಿ ವ್ಯಕ್ತಿ ಬೆನಜೀರ್ ಇದ್ದ ಕಾರಿನ ಎಡಭಾಗಕ್ಕೆ ಗುಂಡು ಹಾರಿಸಿದ ಹಾಗೂ ಆ ನಂತರ ಆತ್ಮಹತ್ಯಾ ದಾಳಿಕೋರನೋರ್ವ ತನ್ನನ್ನು ಸ್ಫೋಟಿಸಿಕೊಂಡ ದೃಶ್ಯಗಳಿವೆ. ಬೆನಜೀರ್ ಅವರಿಗೆ ಪಾಕ್ ಸರ್ಕಾರ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಇದು ಸಾಕಷ್ಟು ಪುಷ್ಟಿ ನೀಡಿತು.
2007: ಇಸ್ಲಾಮಾಬಾದಿನ ಹವ್ಯಾಸಿ ವಿಡಿಯೋಗ್ರಾಫರನೊಬ್ಬ ತೆಗೆದ ಬೆನಜೀರ್ ಭುಟ್ಟೋ ಅವರ ಕೊನೆಯ ಕೆಲವು ಕ್ಷಣಗಳ ಇನ್ನೆರಡು ಹೊಸ ವಿಡಿಯೊ ಚಿತ್ರಗಳನ್ನು ಪಾಕಿಸ್ಥಾನದ ಸುದ್ದಿ ಚಾನೆಲ್ಲುಗಳು ಪ್ರಸಾರ ಮಾಡಿವು. ಈ ವಿಡಿಯೋ ಚಿತ್ರವು ತಂಪು ಕನ್ನಡಕ (ಸನ್ ಗ್ಲಾಸ್) ಧರಿಸಿದ್ದ ಕೊಲೆಗಾರ ಪಿಪಿಪಿ ನಾಯಕಿ ಬೆನಜೀರ್ ಭುಟ್ಟೋ ಅವರತ್ತ ಗುಂಡು ಹಾರಿಸುತ್ತಿರುವುದನ್ನು ಮತ್ತು ಪರಿಣಾಮವಾಗಿ ಭುಟ್ಟೋ ಅವರು ಹಿಂಜರಿದದ್ದನ್ನು ಸ್ಪಷ್ಟವಾಗಿ ತೋರಿಸಿತು. ಇವುಗಳಲ್ಲಿ ಒಂದನ್ನು ಹವ್ಯಾಸಿ ಫೊಟೋಗ್ರಾಫರ್ ಒಬ್ಬ ತೆಗೆದಿದ್ದು, ಇದರಲ್ಲಿ ಭುಟ್ಟೋ ಅವರತ್ತ ಯುವಕನೊಬ್ಬ ಹಿಂಭಾಗದಿಂದ ಪಿಸ್ತೂಲು ಗುರಿ ಹಿಡಿದದ್ದನ್ನು ಸ್ಪಷ್ಟವಾಗಿ ತೋರಿಸಿದೆ. ಈ ವೇಳೆಯಲ್ಲಿ ಭುಟ್ಟೋ ಅವರು ತಮ್ಮ ಗುಂಡುನಿರೋಧಕ ವಾಹನದಿಂದಲೇ ಬೆಂಬಲಿಗರತ್ತ ಕೈ ಬೀಸುತ್ತಿದ್ದರು ಎಂದು ಡಾನ್ ನ್ಯೂಸ್ ಚಾನೆಲ್ ಹೇಳಿತು. ಇನ್ನೊಂದು ವಿಡಿಯೋದಲ್ಲೂ ಇದೇ ಯುವಕ, ಮುಖಕ್ಕೆ ಬಿಳಿಬಟ್ಟೆ ಹಾಕಿಕೊಂಡಿದ್ದ ಇನ್ನೊಬ್ಬ ವ್ಯಕ್ತಿಯ ಪಕ್ಕದಲ್ಲಿ ನಿಂತಿದ್ದುದು ಕಾಣಿಸುತ್ತಿತ್ತು. ಗುಂಡು ಹಾರಿಸಿದ ಯುವಕನ ಪಕ್ಕದಲ್ಲಿದ್ದ ಈ ಇನ್ನೊಬ್ಬ ವ್ಯಕ್ತಿ ಶಂಕಿತ ಆತ್ಮಹತ್ಯಾ ಬಾಂಬರ್ ಇರಬಹುದು ಎಂದು ಡಾನ್ ನ್ಯೂಸ್ ವಿವರಿಸಿತು.
2007: ಕೀನ್ಯಾದ ಹಾಲಿ ಅಧ್ಯಕ್ಷ ಮವಾಯಿ ಕಿಬಾಕಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕೀನ್ಯಾದಲ್ಲಿ ಹಿಂಸಾಚಾರ ಭುಗಿಲೆದ್ದು 125ಕ್ಕೂ ಹೆಚ್ಚು ಮಂದಿ ಮೃತರಾದರು.
2006: ಡಿಸೆಂಬರ್ 30ರಂದು ನೇಣುಗಂಬ ಏರಿದ ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಭಾರತೀಯ ಕಾಲಮಾನ ಮುಂಜಾನೆ 4.00 ಗಂಟೆಗೆ ಇರಾಕಿನ ಉತ್ತರ ಭಾಗದಲ್ಲಿ ಇರುವ ಸದ್ದಾಮ್ ಹುಟ್ಟೂರು ಟಿಕ್ರಿತ್ ಸಮೀಪದ ಅವ್ಜಾಹ್ ಗ್ರಾಮದಲ್ಲಿ ನೆರವೇರಿಸಲಾಯಿತು. ಸದ್ದಾಮ್ ತಮ್ಮ ಆಳ್ವಿಕೆ ಕಾಲದಲ್ಲಿ ಸ್ವ-ಗ್ರಾಮದಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲೇ ಅವರ ಸಮಾಧಿ ಮಾಡಲಾಯಿತು. ಬಾಗ್ದಾದಿನಿಂದ 180 ಕಿ.ಮೀ ದೂರದಲ್ಲಿ ಇರುವ ಅವ್ಜಾಹ್ ಗ್ರಾಮದಲ್ಲಿ ಸದ್ದಾಮ್ ನಿರ್ಮಿಸಿದ್ದ ಕಟ್ಟಡವನ್ನು ಈ ಮೊದಲು ಸಾಮಾನ್ಯವಾಗಿ ಶ್ರದ್ಧಾಂಜಲಿ ಸಭೆ ನಡೆಸಲು ಬಳಸಲಾಗುತ್ತಿತ್ತು. ಸಲಾಹೆದ್ದೀನ್ ಪ್ರಾಂತ್ಯದ ರಾಜ್ಯಪಾಲ ಹಮೇದ್-ಅಲ್-ಶಕ್ತಿ ಮತ್ತು ಸದ್ದಾಮ್ ಅವರ ಅಲ್ಬು ನಾಸೀರ್ ಬುಡಕಟ್ಟು ಜನಾಂಗದ ಮುಖ್ಯಸ್ಥ ಅಲಿ -ಅಲ್- ನಿದಾ ಮತ್ತು ಕುಟುಂಬ ವರ್ಗದವರ್ಗದವರು ಅಂತ್ಯಕ್ರಿಯೆಯಲ್ಲಿಪಾಲ್ಗೊಂಡಿದ್ದರು. ಆದರೆ, ರಕ್ಷಣಾ ಪಡೆಯು ಟಕ್ರಿತ್ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದುದರಿಂದ ಸದ್ದಾಮ್ ಅಭಿಮಾನಿಗಳು ಯಾರೂ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ. ಅಮೆರಿಕ ಸೇನಾಪಡೆಯಿಂದ 2003ರಲ್ಲಿ ಹತ್ಯೆಗೀಡಾಗಿದ್ದ ಸದ್ದಾಮ್ ಪುತ್ರರಾದ ಉದಯ ಮತ್ತು ಖುಸಾಯ ಅವರನ್ನೂ ಇದೇ ಗ್ರಾಮದಲ್ಲಿ ಸಮಾಧಿ ಮಾಡಲಾಗಿತ್ತು.
2006: ಕೋಫಿ ಅನ್ನಾನ್ ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನದಿಂದ ಈದಿನ ಮಧ್ಯರಾತ್ರಿ ನಿರ್ಗಮಿಸಿದರು. ಅನ್ನಾನ್ ಉತ್ತರಾಧಿಕಾರಿಯಾಗಿ ದಕ್ಷಿಣ ಕೊರಿಯಾದ ಬಾನ್ ಕಿ ಮೂನ್ ಆಯ್ಕೆಯಾಗಿದ್ದಾರೆ.
2006: ಜಾವಾದ ಕರಾವಳಿ ಸಮೀಪ ಸಮುದ್ರದಲ್ಲಿ ಡಿಸೆಂಬರ್ 29ರ ನಡುರಾತ್ರಿ ಹವಾಮಾನ ವೈಪರೀತ್ಯದಿಂದ ಮುಳುಗಿದ `ಸೇನಾಪತಿ' ನೌಕೆಯಲ್ಲಿದ್ದ 600 ಜನರ ಪೈಕಿ 200 ಮಂದಿಯನ್ನು ರಕ್ಷಿಸಲಾಗಿದ್ದು, 66 ಮಂದಿಯ ಶವ ಪತ್ತೆಯಾಯತು. 400 ಮಂದಿಗಾಗಿ ಇನ್ನೂ ಶೋಧ ಮುಂದುವರೆದಿದೆ ಎಂದು ಅಂತಾರ ಸುದ್ದಿ ಸಂಸ್ಥೆ ವರದಿ ಮಾಡಿತು.
2006: ಲಿಮ್ಕಾ ದಾಖಲೆ ಸಲುವಾಗಿ ಸುನೀಲ್ (22) ಮತ್ತು ವಂದನಾ ಶರ್ಮಾ (22) ಜೋಡಿ ರಾಜಸ್ಥಾನದ ಜೈಪುರದ ಕ್ರೀಡಾಂಗಣದಲ್ಲಿ ಬಿಸಿಗಾಳಿಯ ಬಲೂನಿನೊಳಗೆ ಕುಳಿತು ಆಕಾಶಕ್ಕೆ ಏರಿ ಅಲ್ಲೇ ಹಾರ ಬದಲಾಯಿಸಿ ಮದುವೆ ಮಾಡಿಕೊಂಡರು. ಮದುವೆಗೆ ಆಕಾಶದ ಮೋಡಗಳಷ್ಟೇ ಸಾಕ್ಷಿಯಾಗಲಿಲ್ಲ. ವಧು, ವರನ ಸಂಬಂಧಿಗಳು ಅಲ್ಲಿ ಸೇರಿ ಶುಭ ಕೋರಿದರು. ಹೊಸ ದಂಪತಿ ಬಲೂನಿನಲ್ಲಿ ಕುಳಿತುಕೊಂಡು ಮೇಲಕ್ಕೆ ಹಾರುತ್ತಿದ್ದಂತೆ ಕೆಳಗಿನ ಜನರೆಲ್ಲ ಕರತಾಡನ ಮಾಡಿ ಹರಸಿದರು. ಆಕಾಶದಲ್ಲಿ ತೇಲುತ್ತಿದ್ದ ಬಲೂನ್ ಮದುವೆ ಮಂಟಪವಾಗಿದ್ದುದನ್ನು ಹೊರತು ಪಡಿಸಿ, ಉಳಿದದ್ದೆಲ್ಲ ಹಿಂದು ಸಂಪ್ರದಾಯದಂತೆಯೇ ಸಾಂಗವಾಗಿ ನಡೆಯಿತು. ಭೂಮಿಯ ಮೇಲಿಂದ ಬರುತ್ತಿದ್ದ ಶಹನಾಯಿ ನಾದ, ಜನರ ಹಷರ್ೋದ್ಘಾರಗಳ ಮಧ್ಯೆ ವರ ಸುನೀಲ್ ಮತ್ತು ವಧು ವಂದನಾ ಪರಸ್ಪರ ಹಾರ ಬದಲಾಯಿಸಿಕೊಂಡರು. ಬಳಿಕ ಸುನೀಲ್ ಬಲೂನಿನಲ್ಲಿ ಹೊಮ್ಮುತ್ತಿದ್ದ ಬಿಸಿಗಾಳಿ ಸಾಕ್ಷಿಯಾಗಿ ತಾಳಿಕಟ್ಟಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ. ಸುನೀಲ್ ಬಂಡವಾಳ ಹೂಡಿಕೆದಾರ ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ ನೌಕರ. ಎಂಟರ್ ಟೇನ್ಮೆಂಟ್ 7 ಕಂಪನಿಯ ಅನುಪ ಶ್ರೀವಾಸ್ತವ ಈ ವಿನೂತನ ಮದುವೆ ಸಂಘಟಿಸಿದ್ದರು.
2006: ಸಮಕಾಲೀನ ನೃತ್ಯಕ್ಕೆ ವಿನೂತನ ತಿರುವು ತಂದುಕೊಟ್ಟ ಖ್ಯಾತ ನೃತ್ಯ ಕಲಾವಿದೆ ಚಂದ್ರಲೇಖಾ ಅವರು ಚೆನ್ನೈಯಲ್ಲಿ ನಿಧನರಾದರು. 78 ವರ್ಷ ವಯಸ್ಸಿನ ಚಂದ್ರಲೇಖಾ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಭರತನಾಟ್ಯ ಸೇರಿದಂತೆ ವಿವಿಧ ನೃತ್ಯ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಚಂದ್ರಲೇಖಾ ಅವರು 1950ರ ದಶಕದಲ್ಲೇ ಜನರ ಮನಸ್ಸು ಗೆದ್ದಿದ್ದರು. ಚಂದ್ರಲೇಖಾ ಅವರು ಖ್ಯಾತ ಗುರು ಕಂಚೀಪುರ ಎಲ್ಲಪ್ಪಾ ಪಿಳ್ಳೈ ಅವರ ಬಳಿ 50ರ ದಶಕದಲ್ಲಿ ಸಾಂಪ್ರದಾಯಿಕ ನೃತ್ಯಾಭ್ಯಾಸ ಪಡೆದು ತಮ್ಮ ಸಾಧನೆ ಆರಂಭಿಸಿದ್ದರು. ಕಾಳಿದಾಸ ಸಮ್ಮಾನ್, ಸಂಗೀತ ನೃತ್ಯ ನಾಟಕ ಅಕಾಡೆಮಿ ಫೆಲೋಶಿಪ್ ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಬಂದಿವೆ. 60ರ ದಶಕದ ಬಳಿಕ ಲೇಖಕಿಯಾಗಿ ಮತ್ತು ಮಹಿಳಾ ಹಕ್ಕು ರಕ್ಷಣೆ ಕಾರ್ಯಕರ್ತರಾದ ಚಂದ್ರಲೇಖಾ 1985ರ ನಂತರ ನೃತ್ಯ ನಿರ್ದೇಶನವನ್ನೂ ಮಾಡುತ್ತಿದ್ದರು.
2006: ರಾಜಸ್ಥಾನದ ಭಿಲ್ವಾರದ 72 ವರ್ಷದ ಮಹಿಳೆಯೊಬ್ಬರ 7 ಮಂದಿ ಪುತ್ರಿಯರು ತಮ್ಮ ತಾಯಿಯ ಪಾರ್ಥಿವ ಶರೀರವನ್ನು ತಾವೇ ಹೊತ್ತದ್ದಲ್ಲದೆ, ಚಿತೆಗೆ, ಚಿತೆಗೆ ಅಗ್ನಿಸ್ಪರ್ಶವನ್ನೂ ಮಾಡುವ ಮೂಲಕ ರಾಜಸ್ಥಾನಿ ಸಮಾಜಕ್ಕೆ ಹೊಸ ಮಾದರಿ ಹಾಕಿಕೊಟ್ಟರು. ತಮ್ಮ ತಾಯಿ ಕಾಂಚನ ದೇವಿ ತಮ್ಮನ್ನು ಪುತ್ರರಂತೆಯೇ ಪರಿಗಣಿಸಿದ್ದರು. ತಾವು ಏಳೂ ಮಂದಿ ಕೂಡಾ ಪುತ್ರಿಯರೇ ಆಗಿದ್ದರೂ ಪುತ್ರ ಬೇಕೆಂದು ಆಕೆ ಬಯಸಲಿಲ್ಲ. ಬದಲಾಗಿ ಏಳೂ ಮಂದಿ ಪುತ್ರಿಯರನ್ನು ಹುಡುಗರಿಗೆ ಸರಿಸಮಾನವಾಗಿ ಬೆಳೆಯುವಂತೆ ಪ್ರೋತ್ಸಾಹಿಸಿದರು ಎಂಬುದು ಪುತ್ರಿಯರಲ್ಲಿ ಒಬ್ಬರಾದ ಲತಾ ಮಾದ್ರೇಚಾ ಅಭಿಮತ. ಕಾಂಚನದೇವಿಯ ಪುತ್ರಿಯರು ತಮ್ಮ ತಾಯಿಯ ಪಾರ್ಥಿವ ಶರೀರವನ್ನು ದುಃಖಾಶ್ರುಗಳೊಂದಿಗೆ ಸ್ವತಃ ತಾವೇ ಹೊತ್ತುಕೊಂಡು ರುದ್ರಭೂಮಿಗೆ ತಂದು ಅಗ್ನಿಸ್ಪರ್ಶ ಮಾಡಿದರು. ಪುತ್ರಿಯರನ್ನು ಹೊರೆ ಎಂದೂ ಪುತ್ರರನ್ನು ವರ ಎಂದೂ ಪರಿಗಣಿಸುವ ಸಮಾಜದಲ್ಲಿ, ಈ ಪುತ್ರಿಯರು ಸಂಪ್ರದಾಯದ ಹಾದಿ ತ್ಯಜಿಸಿ ಹೊಸ ಹಾದಿ ಹಿಡಿದಾಗ ಅವರ ಗಂಡಂದಿರು, ಬಂಧುಗಳು ಮತ್ತು ನೆರೆಹೊರೆಯ ಮಂದಿ ಕೂಡಾ ಹೃತ್ಪೂರ್ವಕವಾಗಿ ಬೆಂಬಲಿಸಿದರು. ರಾಜಸ್ಥಾನದಲ್ಲಿ ಹಿಂದಿನ ದಿನಗಳಲ್ಲಿ ಮಹಿಳೆಯರನ್ನೂ ರುದ್ರಭೂಮಿಗೆ ತೆರಳದಂತೆ ತಡೆಯಲಾಗುತ್ತಿತ್ತು, ಆದರೆ ಈ ಘಟನೆಯೊಂದಿಗೆ ಕಾಂಚನ ದೇವಿಯ 35ರ ಹರೆಯ ದಾಟಿದ ಪುತ್ರಿಯರು ರುದ್ರಭೂಮಿಗೆ ತೆರಳಿ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸುವಲ್ಲೂ ಸಫಲರಾದರು.
2006: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಆರ್.ವಿ. ಬಿಡಪ್ಪ (86) ಅವರು ಈದಿನ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಬೀದರಿನಲ್ಲಿ ರಾಷ್ಟ್ರೀಯ ಶಿಕ್ಷಣ ಸೊಸೈಟಿಯನ್ನು ಸ್ಥಾಪಿಸಿರುವ ಬಿಡಪ್ಪ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ಪ್ರಾಂತದ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿಜಾಮ ಆಡಳಿತದ ವಿರುದ್ಧ ಚಳವಳಿ ನಡೆಸಿದ ಮುಖಂಡರಲ್ಲಿ ಇವರೂ ಒಬ್ಬರು. ಕಾರ್ಮಿಕ ಮುಖಂಡರೂ ಆಗಿದ್ದ ಅವರು, ಗುಲ್ಬರ್ಗದ ಎಂ. ಎಸ್. ಕೆ. ಮಿಲ್ಸ್ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2006: ಗಿನ್ನೆಸ್ ದಾಖಲೆ ಸ್ಥಾಪನೆ ಸಲುವಾಗಿ ಕರಾಟೆ ಬಾಲೆ ಐದು ವರ್ಷ 11 ತಿಂಗಳು ಪ್ರಾಯದ ಯುಕೆಜಿ ವಿದ್ಯಾರ್ಥಿನಿ ದಿಯಾ ಅರಸ್ ಮೈಸೂರಿನ ಮಾನಸಗಂಗೋತ್ರಿ ರಂಗಮಂದಿರದಲ್ಲಿ ತನ್ನ ಮೃದುವಾದ ಹಣೆಯಿಂದ ಒಂದು ನಿಮಿಷದಲ್ಲಿ 31 ಮಂಗಳೂರು ಹಂಚುಗಳನ್ನು ಪುಡಿ ಪುಡಿ ಮಾಡಿದಳು. ಈ ಮೂಲಕ 40 ಸೆಕೆಂಡುಗಳಲ್ಲಿ 25 ಹಂಚುಗಳನ್ನು ಪುಡಿ ಪುಡಿ ಮಾಡಿದ್ದ ತನ್ನ ಹಿಂದಿನ ದಾಖಲೆಯನ್ನು ಅಳಿಸಿಹಾಕಿದಳು. ಗಿನ್ನೆಸ್ ದಾಖಲೆ ಸ್ಥಾಪನೆ ಸಲುವಾಗಿ 30 ಹಂಚುಗಳನ್ನು ಪುಡಿಗುಟ್ಟಲು ಯೋಚಿಸಿದ್ದ ದಿಯಾ ಒಂದು ಹಂಚು ಹೆಚ್ಚು ಪುಡಿ ಮಾಡಿ ಗಿನ್ನೆಸ್ ದಾಖಲೆಯತ್ತ ದೃಢ ಹೆಜ್ಜೆ ಇಟ್ಟಳು.
2005: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಲ್ ಕೃಷ್ಣ ಅಡ್ವಾಣಿ ಅವರು ರಾಜೀನಾಮೆ ನೀಡಿದರು. ನೂತನ ಅಧ್ಯಕ್ಷರಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜನಾಥ್ ಸಿಂಗ್ ನೇಮಕಗೊಂಡರು. ತಮ್ಮ ರಾಜೀನಾಮೆ ಮತ್ತು ಹೊಸ ಅಧ್ಯಕ್ಷರ ನೇಮಕ ಸುದ್ದಿಯನ್ನು ಸುದ್ದಿಯನ್ನು ಅಡ್ವಾಣಿ ಸ್ವತಃ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಉತ್ತರ ಪ್ರದೇಶದ ಚಾಂದೌಲಿ ಜಿಲ್ಲೆಯ ಭಾಬೌರಾ ಗ್ರಾಮದಲ್ಲಿ 1951ರ ಜುಲೈ 10ರಂದು ಜನಿಸಿದ ರಾಜನಾಥ್ ಸಿಂಗ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ರೈತ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಕಟವರ್ತಿ. ವಿದ್ಯಾರ್ಥಿ ದೆಸೆಯಿಂದಲೂ ಆರೆಸ್ಸೆಸ್ ಕಾರ್ಯಕರ್ತ. ಆರೆಸ್ಸೆಸ್, ಅಭಾವಿಪಗಳಲ್ಲಿ ದುಡಿದು 1974ರಲ್ಲಿ ಜನಸಂಘದ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. 1975ರಲ್ಲಿ ಜೆಪಿ ಚಳವಳಿಯಲ್ಲಿ ಧುಮುಕಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಕ್ಕೆ ಇಳಿದು ಎರಡು ವರ್ಷ ಸೆರೆವಾಸ ಅನುಭಸಿದರು. 1977 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆ ಪ್ರವೇಶಿಸಿದರು.
2005: ಭವಿಷ್ಯದ ಅನಿಶ್ಚಿತತೆಯೊಂದಿಗೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ (ಕೆಐಒಸಿಎಲ್) ಈದಿನ ಮಧ್ಯರಾತ್ರಿ ತನ್ನ ಚಟುವಟಿಕೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತು. 2005ರ ಡಿಸೆಂಬರ್ 31ಕ್ಕೆ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು 2002ರ ಅಕ್ಟೋಬರ್ 30ರಂದು ತೀರ್ಪಿಗೆ ಪ್ರತಿಯಾಗಿ ಕಂಪೆನಿಯ ಕಾರ್ಮಿಕ ಸಂಘಟನೆಗಳು ಸಲ್ಲಿಸುತ್ತಾ ಬಂದಿದ್ದ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸುತ್ತಲೇ ಬಂದಿತ್ತು.
1993: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ರಚಿಸಿದರು.
1991: ಸೋವಿಯತ್ ಒಕ್ಕೂಟ (ಯು ಎಸ್ ಎಸ್ ಆರ್) ಕಾನೂನುಬದ್ಧವಾಗಿ ಅಸ್ತಿತ್ವ ಕಳೆದುಕೊಂಡಿತು. 1991ರ ಡಿಸೆಂಬರ್ 21ರಂದೇ ರಷ್ಯ ಮತ್ತು ಇತರ ಹತ್ತು ಹಿಂದಿನ ಸೋವಿಯತ್ ಗಣರಾಜ್ಯಗಳು ತಮಗೆ ತಾವೇ ಸ್ವಾತಂತ್ರ್ಯ ಘೋಷಿಸಿಕೊಂಡು, ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತ್ (ಸಿಐಎಸ್) ಸ್ಥಾಪಿಸಿಕೊಂಡಿದ್ದವು. ಹಾಗೂ ಮಿನ್ಸ್ಕ್ನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡ್ದಿದವು.
1950: ಸಾಹಿತಿ ಡಿ.ಎನ್. ಶ್ರೀನಾಥ್ ಜನನ.
1946: ಸಾಹಿತಿ ಹೊರೆಯಾಲ ದೊರೆಸ್ವಾಮಿ ಜನನ.
1943: ಖ್ಯಾತ ಬ್ರಿಟಿಷ್ ಚಿತ್ರನಟ ಬೆನ್ ಕಿಂಗ್ ಸ್ಲೆ ಹುಟ್ಟಿದ ದಿನ. ರಿಚರ್ಡ್ ಅಟೆನ್ ಬರೊ ಅವರ ಚಲನಚಿತ್ರ `ಗಾಂಧಿ'ಯಲ್ಲಿ ಬೆನ್ ಕಿಂಗ್ ಸ್ಲೆ ಮಹಾತ್ಮಾ ಗಾಂಧೀಜಿ ಪಾತ್ರ ವಹಿಸಿದ್ದರು.
1934: ಸಾಹಿತಿ ಉಷಾದೇವಿ ಜನನ.
1929: ಈ ದಿನ ನಡುರಾತ್ರಿ `ಪೂರ್ಣ ಸ್ವರಾಜ್' ಪ್ರತಿಜ್ಞೆ ಸ್ವೀಕರಿಸುವ ಸಲುವಾಗಿ ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಲಾಹೋರಿಗೆ ತೆರಳಿದರು. 1930ರ ಜನವರಿ 26ರಂದು ಮೊದಲ ಬಾರಿಗೆ `ಸ್ವರಾಜ್ ದಿನ' ಆಚರಿಸಲಾಯಿತು.
1923: ಹೊಸ ವರ್ಷದ ಮುನ್ನಾದಿನ ರೇಡಿಯೋದಲ್ಲಿ ಮೊತ್ತ ಮೊದಲ ಬಾರಿಗೆ `ಬಿಗ್ ಬೆನ್' ಕೇಳಿಸಿತು. 1924ರ ಫೆಬ್ರುವರಿ 17ರಿಂದ ಬಿ.ಬಿ.ಸಿ.ಯಲ್ಲಿ ಗ್ರೀನ್ ವಿಚ್ `ಪಿಪ್ಸ್' ಜೊತೆಗೆ ಬಿಗ್ ಬೆನ್ ಗಂಟೆ ನಿಯಮಿತವಾಗಿ ಕೇಳಿಸತೊಡಗಿತು.
1903: ಪ್ರತಿಭೆ, ಅನುಭವ, ಕ್ರಿಯಾಶೀಲತೆಯಿಂದ ಹಲವಾರು ಮಂತ್ರಿಗಳಿಗೆ ಲೇಖನ, ಭಾಷಣ, ಭಿನ್ನವತ್ತಳೆಗಳನ್ನು ಬರೆದುಕೊಡುತ್ತ್ದಿದ ಕೆ.ಎಸ್. ಧರಣೇಂದ್ರಯ್ಯ (31-12-1903ರಿಂದ 13-8-1971) ಅವರು ಸಣ್ಣ ಅಂಬಣ್ಣ ಅವರ ಮಗನಾಗಿ ತುಮಕೂರು ಜಿಲ್ಲೆ ಉರುಡುಗೆರೆ ಹೋಬಳಿಯ ತಾಳೇನಹಳ್ಳಿಯಲ್ಲಿ ಜನಿಸಿದರು.
1896: ಸಾಹಿತಿ ಎಂ.ವಿ. ಗೋಪಾಲಸ್ವಾಮಿ ಜನನ.
1864: ಜಾಜ ಮಿಫ್ಲಿನ್ ಡಲ್ಲಾಸ್ (1792-1864) ಅವರು ಫಿಲಡೆಲ್ಫಿಯಾದಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. 1845-1849 ಅವಧಿಯಲ್ಲಿ ಅಮೆರಿಕಾದ ಉಪಾಧ್ಯಕ್ಷರಾಗಿದ್ದ ಅವರ ಗೌರವಾರ್ಥ ಟೆಕ್ಸಾಸ್ ಮತ್ತು ಓರೆಗಾನಿನ ನಗರಗಳಿಗೆ `ಡಲ್ಲಾಸ್ ನಗರ' ಎಂಬ ಹೆಸರಿಡಲಾಯಿತು.
1861: ಅಸ್ಸಾಮಿನ ಚಿರಾಪುಂಜಿಯಲ್ಲಿ ವಿಶ್ವದಾಖಲೆಯ 22,990 ಮಿ.ಮೀ. ಮಳೆ ಸುರಿಯಿತು.
1857: ಕೆನಡಾದ ರಾಜಧಾನಿಯಾಗಿ ಒಟ್ಟಾವವನ್ನು ಆಯ್ಕೆ ಮಾಡಲಾಯಿತು.
1600: ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ 15 ವರ್ಷಗಳ ಅವಧಿಗೆ ಪೂರ್ವ ಸಮುದ್ರದಲ್ಲಿ ವ್ಯಾಪಾರ ನಡೆಸುವ ಏಕಸ್ವಾಮ್ಯವನ್ನು ರಾಣಿ ಒಂದನೇ ಎಲಿಜಬೆತ್ ಮಂಜೂರು ಮಾಡಿದರು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment