Wednesday, February 25, 2009

ಇಂದಿನ ಇತಿಹಾಸ History Today ಫೆಬ್ರುವರಿ 20

ಇಂದಿನ ಇತಿಹಾಸ

ಫೆಬ್ರುವರಿ 20


ರಂಗ ಚಳವಳಿಯ ನೇತಾರ ಕೆ.ವಿ. ಸುಬ್ಬಣ್ಣ (20-2-1932ರಿಂದ 16-7-2005) ಅವರು ಕೆ.ವಿ. ರಾಮಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮುಂಡಿಗೇಸರದಲ್ಲಿ ಜನಿಸಿದರು.

2008: ಬಹು ನಿರೀಕ್ಷೆ ಹುಟ್ಟಿಸಿದ ಭಾರತ ಪ್ರೀಮಿಯರ್ ಲೀಗ್(ಐಪಿಎಲ್)ನ ತಂಡಗಳಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಮುಂಬೈಯಲ್ಲಿ ನಡೆದು ಮಹೇಂದ್ರ ಸಿಂಗ್ ದೋನಿ ಅತಿ ಹೆಚ್ಚು ಹಣಕ್ಕೆ ಮಾರಾಟವಾದರು. ಚೆನ್ನೈನ ಸೂಪರ್ ಕಿಂಗ್ಸ್ ತಂಡ ಭಾರತ ಏಕದಿನ ತಂಡದ ನಾಯಕನನ್ನು ಆರು ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿತು. ಇದರೊಂದಿಗೆ ದೋನಿ ವಿಶ್ವದ ಬಹು ಬೆಲೆಯುಳ್ಳ ಕ್ರಿಕೆಟಿಗ ಎನಿಸಿದರು. ವಿಶ್ವದ ಕ್ರಿಕೆಟ್ ಇತಿಹಾಸದಲ್ಲೇ ಈ ರೀತಿ ಕ್ರಿಕೆಟಿಗರ ಹರಾಜು ನಡೆದದ್ದು ಇದೇ ಮೊತ್ತ ಮೊದಲು. ಈ ಹರಾಜಿನ ಮೂಲಕ ಭಾರತ ಕ್ರಿಕೆಟಿನಲ್ಲಿ ಹಣದ ಹೊಳೆ ಹರಿಯಿತು. ಇಂಗ್ಲೆಂಡಿನ ರಿಚರ್ಡ್ ಮೆಡ್ಲೆ ಅವರು ಖಾಸಗಿ ಹೋಟೆಲಿನಲ್ಲಿ ಬಿಡ್ ಪ್ರತಿಕ್ರಿಯೆ ನಡೆಸಿಕೊಟ್ಟರು. ಆರು ಸುತ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 77 ಆಟಗಾರರನ್ನು ಎಂಟು ತಂಡಗಳು ಖರೀದಿಸಿದವು. ಹರಾಜಿನ ಒಟ್ಟು ಮೊತ್ತ 160 ಕೋಟಿ ರೂ. ಹರಾಜಿನಲ್ಲಿ ಬೆಂಗಳೂರು, ಮುಂಬೈ, ಜೈಪುರ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಮೊಹಾಲಿ ಹಾಗೂ ಚೆನ್ನೈ ತಂಡಗಳು ಪಾಲ್ಗೊಂಡಿದ್ದವು.

 2008: ಚಿನ್ನದ ಬೆಲೆಯು ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಗಗನಕ್ಕೆ ಚಿಮ್ಮಿ, ತಲಾ 10 ಗ್ರಾಂಗಳಿಗೆ ರೂ 12 ಸಾವಿರದ ಗಡಿ ದಾಟಿ ಹೊಸ ದಾಖಲೆ ಬರೆಯಿತು. ಕುಸಿದ ಷೇರುಪೇಟೆ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ ಹಿನ್ನೆಲೆಯಲ್ಲಿ ಚಿನ್ನವು ಹಣ ಹೂಡಿಕೆದಾರರಿಗೆ `ಬದಲಿ ಸ್ವರ್ಗ'ವಾಗಿ ಪರಿಣಮಿಸಿತು.

2008: ಸುಮಾತ್ರಾ ದ್ವೀಪದ ಬಳಿ ಸಮುದ್ರದ ಆಳದಲ್ಲಿ ತೀವ್ರ ಸ್ವರೂಪದ ಭೂಕಂಪ ಸಂಭವಿಸಿತು. ಕನಿಷ್ಠ ಮೂವರು ಮೃತರಾಗಿ, ಇತರ 25 ಮಂದಿ ಗಾಯಗೊಂಡರು. ಅನೇಕ ಕಟ್ಟಡಗಳು ನೆಲಸಮವಾದವು. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆಯು 7.6ರಷ್ಟಿತ್ತೆಂದು ಅಮೆರಿಕ ಹವಾಮಾನ ಇಲಾಖೆ ತಿಳಿಸಿತು. ಸುನಾಮಿ ಭೀತಿ ಇತ್ತಾದರೂ ಅದು ಸಂಭವಿಸಲಿಲ್ಲ.

2008: ಸಂಗೀತ ಕೇಳುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಹಲವು ಸಂಶೋಧನೆಗಳು ಹೇಳುತ್ತಾ ಬಂದಿವೆ. ಇನ್ನೊಂದು ಹೊಸ ಸಂಶೋಧನೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು `ಲಕ್ವಾ(ಪಾರ್ಶ್ವವಾಯು) ರೋಗಿಗಳು ಚೇತರಿಸಿಕೊಳ್ಳಲು ಸಂಗೀತವು ಹೆಚ್ಚು ಸಹಕಾರಿ' ಎಂದು ಹೇಳಿತು. ಲಕ್ವಾ ಹೊಡೆದ ಮೊದಲ ಕೆಲವು ದಿನಗಳಲ್ಲಿ ಪ್ರತಿದಿನ ಸಂಗೀತ ಆಲಿಸಿದರೆ ಬೇಗ ಚೇತರಿಸಿಕೊಳ್ಳಬಹುದು. ಇದು ಖರ್ಚಿಲ್ಲದ ಮಾರ್ಗ ಕೂಡ.  ಸಂಗೀತವು ರೋಗಿಗಳ ಸಂವೇದನಾ ಶಕ್ತಿಗೆ ಚುರುಕು ನೀಡಿ ಭಾವನೆಗಳನ್ನು ಉದ್ದೀಪಿಸುತ್ತದೆ ಎಂದು ಲಂಡನ್ನಿನ ಸಂಶೋಧಕರು ವಿವರಿಸಿದರು. ಪಾರ್ಶ್ವವಾಯು ಪೀಡಿತರಾಗಿದ್ದ 60 ರೋಗಿಗಳ ಮೇಲೆ ನಡೆಸಿದ ಪ್ರಯೋಗದಿಂದ ಇದು ಖಚಿತವಾಯಿತು ಎಂದೂ ಅವರು ಹೇಳಿದರು.

2008: ಚೆನ್ನೈಯ ಖ್ಯಾತ ಸುವಾರ್ತಾ ಬೋಧಕ (ಎವಂಜೆಲಿಸ್ಟ್) ಹಾಗೂ `ಜೀಜಸ್ ಕಾಲ್ಸ್' ಮಿನಿಸ್ಟ್ರಿ ಸಂಸ್ಥೆಯ  ಸಂಸ್ಥಾಪಕ ಬ್ರದರ್ ಡಿ. ಜಿ. ಎಸ್. ದಿನಕರನ್ (73) ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. 

2008: ಕ್ರಾಂತಿಕಾರಿ ದಲಿತ ಕವಿ ಎಂದೇ ಹೆಸರಾಗಿದ್ದ  ಅರುಣ್ ಕಾಳೆ(55) ನಾಸಿಕ್ನಲ್ಲಿ ಹೃದಯಾಘಾತದಿಂದ ನಿಧನರಾದರು. ಕಾಳೆ ಅವರಿಗೆ 2007ರಲ್ಲಿ ಮಹಾರಾಷ್ಟ್ರ ಫೌಂಡೇಷನ್ ಬತ್ಕಾರಿ ಥೊಂಬ್ರೆ ಪುರಸ್ಕಾರ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪುರಸ್ಕಾರದ ಜೊತೆಗೆ ಹತ್ತು  ಹಲವು ಪ್ರಶಸ್ತಿಗಳು ಕಾಳೆಯವರಿಗೆ ಲಭಿಸಿದ್ದವು. ಕವಿ ಅರುಣ್ ಅವರ `ರಾಕ್ ಗಾರ್ಡನ್' ಮತ್ತು 'ಸಾಯಿರಾಂಚೆ ಶಹರ್' ಎಂಬ ಎರಡು ಕವನ ಸಂಕಲನಗಳು ಬಹಳ ಪ್ರಸಿದ್ಧಿಪಡೆದಿವೆ. 'ಸಾಯಿರಾಂಚೆ ಶಹರ್' ಕವನ ಸಂಕಲನ ಹಿಂದಿ, ಮಲಯಾಳ ಮತ್ತು ಬೆಂಗಾಲಿ ಭಾಷೆಗಳಿಗೆ ತರ್ಜುಮೆಯಾಗಿದೆ.

2008: ವಿಶ್ವದ ಮೊದಲ ಬ್ರಾಡ್ ಗೇಜ್ ಕೋಚ್ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆ ಹೊಂದಿರುವ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಆಧೀನದಲ್ಲಿರುವ ಭೂಪಾಲಿನ ಶಾನ್-ಎ-ಭೂಪಾಲ್ ರೈಲಿಗೆ ಮತ್ತೊಂದು ಗರಿ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕೊಡುವ ಅತ್ಯಂತ ಅನ್ವೇಷಣಾತ್ಮಕ, ಅಪೂರ್ವ ಪ್ರವಾಸೋದ್ಯಮ ಯೋಜನಾ ಪ್ರಶಸ್ತಿ ಅದಕ್ಕೆ ಲಭಿಸಿತು.

2008: ಬೆಂಗಳೂರು ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡ `ಪ್ರೀ-ಕಾಸ್ಟ್' ಅಂಡರ್ಪಾಸ್ ಈದಿನ ಸಂಜೆ 4 ಗಂಟೆಗೆ ಉದ್ಘಾಟನೆಯಾಯಿತು. ಆದರೆ ನಿಗದಿಯಂತೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಇದನ್ನು ಉದ್ಘಾಟಿಸಲಿಲ್ಲ. ಬದಲಿಗೆ ಪಾಲಿಕೆಯ ಆಡಳಿತಾಧಿಕಾರಿ ದಿಲೀಪ್ ರಾವ್ ಉದ್ಘಾಟಿಸಿ, ಸಾರ್ವಜನಿಕರ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

2008: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇರಳದ ಖ್ಯಾತ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದ ಬರಹಗಾರ ಸುನಿಲ್ ಗಂಗೋಪಾಧ್ಯಾಯ ಅವರು ಗೆಲುವು ಸಾಧಿಸಿದರು.

2007: ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಚಿತ್ರಬ್ರತ ಮಜುಂದಾರ್ (72) ಕೋಲ್ಕತ್ತದಲ್ಲಿ ನಿಧನರಾದರು.

2007: ವಿಧಾನಪರಿಷತ್ತಿನ ಸಭಾಪತಿ ಚುನಾವಣೆಗೆ ಪಟ್ಟು ಹಿಡಿದು ಆರು ದಿನಗಳಿಂದ ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರು ಈದಿನ ವಿಧಾನಸಭಾಧ್ಯಕ್ಷರ ಪೀಠದತ್ತ ನುಗ್ಗಿ ಮೈಕುಗಳನ್ನು ಕಿತ್ತುಹಾಕಿ ದಾಖಲೆಪತ್ರಗಳನ್ನು ತೂರಾಡಿ ಸಭಾಧ್ಯಕ್ಷರನ್ನು ಪೀಠದಿಂದ ಎಳೆದುಹಾಕಲೂ ಯತ್ನಿಸಿದ ಘಟನೆ ನಡೆಯಿತು. ಗದ್ದಲದ ಮಧ್ಯೆ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

2007: ಕೇರಳದ ಎರ್ನಾಕುಲಂ ಜಿಲ್ಲೆಯ ಕೋಥಮಂಗಲಂ ಬಳಿ ಪೆರಿಯಾರ್ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮವಾಗಿ 20 ಶಾಲಾ ಮಕ್ಕಳು, ಮೂವರು ಶಿಕ್ಷಕರು ನೀರು ಪಾಲಾದರು. ಕೊಚ್ಚಿ ಸಮೀಪದ ಡಾ. ಸಲೀಂ ಅಲಿ ಪಕ್ಷಿಧಾಮಕ್ಕೆ ಪ್ರವಾಸ ತೆರಳಿದ್ದಾಗ ಈ ದುರಂತ ಸಂಭವಿಸಿತು.

2007: ಸಮ್ ಜೌತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಲ್ಲಿ ಮೂವರನ್ನು ಅಮಾನತುಗೊಳಿಸಲಾಯಿತು. ಹರಿಯಾಣ ಪೊಲೀಸರು ಇಬ್ಬರು ಶಂಕಿತರ ಮುಖಚಹರೆಯ ಚಿತ್ರಗಳನ್ನು ಬಿಡುಗಡೆ ಮಾಡಿದರು.

2007: ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ತೆರಳಿ ಕಣ್ಮರೆಯಾಗಿದ್ದ ಮೂವರು ಸಾಹಿಸಿಗರ ಪೈಕಿ ಪತ್ತೆಯಾಗದೇ ಉಳಿದಿದ್ದ ಮೂರನೇ ವ್ಯಕ್ತಿಯ ಕಳೇಬರ ಕೂಡಾ ಪತ್ತೆಯಾಯಿತು. ಇಬ್ಬರು ಚಾರಣಿಗರ ಕಳೇಬರ ದಿನದ ಹಿಂದೆಯಷ್ಟೇ ಪತ್ತೆಯಾಗಿತ್ತು.

2007: ತರಹಳ್ಳಿ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿದ ಸರ್ಕಾರಿ ಅಧಿಕಾರಿಗಳು ಮತ್ತು ಒತ್ತುವರಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯುವಂತೆ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅವರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದರು.


2006: ಧಾರವಾಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರೂ ಸೇರಿದಂತೆ ವಿವಿಧ ಭಾಷೆಗಳ ಒಟ್ಟು 20 ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಅನುವಾದ ಪ್ರಶಸ್ತಿಗೆ ಪಾತ್ರರಾದರು. ಹಿರೇಮಠ ಅವರ ಹೇಮಂತ ಋತುವಿನ ಸ್ವರಗಳು ಪ್ರಶಸ್ತಿಗೆ ಪಾತ್ರವಾಗಿರುವ ಕೃತಿ. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಖ್ವಾರತ್-ಉಲ್-ಹೈದರ್ ಅವರ ಪಥ್ ಝಡ್ ಕೀ ಆವಾಜ್ ಕೃತಿಯ ಅನುವಾದ.

2003: ಅಮೆರಿಕದ ರೋಡೆ ದ್ವೀಪದ ಸ್ಟೇಷನ್ ನೈಟ್ ಕ್ಲಬ್ಬಿನಲ್ಲಿ ಸಂಭವಿಸಿದ ಅಗ್ನಿ ದುರಂತದ್ಲಲಿ 100 ಜನ ಮೃತರಾಗಿ 200ಕ್ಕೂ ಹೆಚ್ಚು ಜನ ಸುಟ್ಟಗಾಯಗಳಿಗೆ ಒಳಗಾದರು.

2002: ಈಜಿಪ್ಟಿನ ರೆಖಾ ಅಲ್- ಗಾರ್ಬಿಯಾದ ರೈಲುಗಾಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 370 ಜನ ಮೃತರಾಗಿ 65ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡರು.

1986: ರಷ್ಯಾದ ಬಾಹ್ಯಾಕಾಶ ನಿಲ್ದಾಣ `ಮೀರ್' ಕಕ್ಷೆಗೆ ಉಡಾವಣೆಗೊಂಡಿತು.

1966: ಅಮೆರಿಕದ ಅಡ್ಮಿರಲ್ ಹಾಗೂ ಎರಡನೇ ಜಾಗತಿಕ ಸಮರ ಕಾಲದಲ್ಲಿ ಫೆಸಿಫಿಕ್ ಪಡೆಯ ಕಮಾಂಡರ್ ಆಗಿದ್ದ ಚೆಸ್ಟರ್ ನಿಮಿಟ್ಜ್ ಸಾನ್ ಫ್ರಾನ್ಸಿಸ್ಕೊದಲ್ಲಿ ತನ್ನ 81ನೇ ಹುಟ್ಟು ಹಬ್ಬಕ್ಕೆ ನಾಲ್ಕು ದಿನ ಮೊದಲು ಮೃತರಾದರು.

1962: ಫ್ರೆಂಡ್ ಶಿಪ್-7 ಬಾಹ್ಯಾಕಾಶ ನೌಕೆಯ ಮೇಲೇರಿ 5 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಭೂಮಿಗೆ 3 ಪ್ರದಕ್ಷಿಣೆ ಹಾಕಿದ ಜಾನ್ ಗ್ಲೆನ್ ಈ ರೀತಿ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರನಾದ. 

1947: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ `ಜವಾಬ್ದಾರಿಯುತ ಭಾರತೀಯರ ಕೈಗಳಿಗೆ' ಅಧಿಕಾರ ಹಸ್ತಾಂತರಿಸುವುದಾಗಿ ಪ್ರಕಟಿಸಿದರು. 

1932: ರಂಗ ಚಳವಳಿಯ ನೇತಾರ ಕೆ.ವಿ. ಸುಬ್ಬಣ್ಣ (20-2-1932ರಿಂದ 16-7-2005) ಅವರು ಕೆ.ವಿ. ರಾಮಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮುಂಡಿಗೇಸರದಲ್ಲಿ ಜನಿಸಿದರು. ಕಾಲೇಜು ದಿನಗಳಿಂದಲೇ `ಮಿತ್ರ ಮೇಳ' ನಾಟಕ ಬಳಗದ ಸಕ್ರಿಯ ಸದಸ್ಯರಾಗಿದ್ದ ಅವರು ಹೆಗ್ಗೋಡಿನಲ್ಲಿ ಬೆಳೆಸಿದ `ನೀಲಕಂಠೇಶ್ವರ ನಾಟ್ಯ ಸೇವಾ ಸಂಘ' (ನೀನಾಸಂ) ಏಷ್ಯಾದಲ್ಲೇ ವಿನೂತನ ಮಾದರಿಯ ನಾಟಕ ಸೇವಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಈ ಹೆಗ್ಗೋಡು ನಾಟಕ ಕಲಾವಿದರ ಪಾಲಿಗೆ ಇಂದು ಕಾಶಿ. ಇದನ್ನು ಹುಟ್ಟು ಹಾಕಿದ್ದು ಸುಬ್ಬಣ್ಣ ಅವರ ತಂದೆ ರಾಮಪ್ಪ. ತೆಂಗಿನಗರಿಯ ರಂಗಮಂಟಪ ಮೂಲಕ ಸುಬ್ಬಣ್ಣ ಇದಕ್ಕೆ ಹೊಸ ಆಯಾಮ ನೀಡಿದರು. ಅವರು ನಿರ್ಮಿಸಿದ 750 ಆಸನಗಳ ಅಂತಾರಾಷ್ಟ್ರೀಯ ಖ್ಯಾತಿಯ ಗ್ರಾಮೀಣ `ಶಿವರಾಮ ಕಾರಂತ' ರಂಗಮಂದಿರ, ಚಲನಚಿತ್ರ ರಸಗ್ರಹಣ ಶಿಬಿರಗಳು, ನೀನಾಸಂ ನಾಟಕಗಳು, ನೀನಾಸಂ ತಿರುಗಾಟ ಇವೆಲ್ಲ ರಂಗಚಳವಳಿಗೆ ಹೊಸ ಹೊಳಪು ನೀಡಿದ್ದವು. ಅಕ್ಷರ ಪ್ರಕಾಶನದ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸಿದ ಸುಬ್ಬಣ್ಣ ಅವರಿಂದ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಏಷ್ಯಾದ ನೊಬೆಲ್ ಎಂದೇ ಖ್ಯಾತವಾಗಿರುವ ಮ್ಯಾಗ್ಸೆಸೆ ಪ್ರಶಸ್ತಿ ಇತ್ಯಾದಿ ಅಸಂಖ್ಯಾತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.

1904: ಅಲೆಕ್ಸಿ ಕೊಸಿಗಿನ್ (1904-1980) ಹುಟ್ಟಿದ ದಿನ. ಇವರು ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದರು.

1893: ವಲಿಲಿಯಮ್ `ಬಿಗ್ ಬಿಲ್' ಟೈಡನ್ (1893-1953) ಹುಟ್ಟಿದ ದಿನ. ಅಮೆರಿಕದ ಟೆನಿಸ್ ಆಟಗಾರನಾದ ಈತ ಏಳು ಅಮೆರಿಕನ್ ಚಾಂಪಿಯನ್ ಶಿಪ್ಗಳು ಹಾಗೂ ಮೂರು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದುಕೊಂಡ ವ್ಯಕ್ತಿ.

1869: ಸಿಸಿರ್ ಕುಮಾರ್ ಘೋಷ್ ಅವರು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಭಾಷಾ ವೃತ್ತಪತ್ರಿಕೆಯಾಗಿ `ಅಮೃತಬಜಾರ್ ಪತ್ರಿಕಾ' ಆರಂಭಿಸಿದರು.

1844: ಜೊಶುವಾ ಸ್ಲೊಕಮ್ (1844-1909) ಹುಟ್ಟಿದ ದಿನ. ಕೆನಡಾದ ನೌಕಾಯಾನಿ ಹಾಗು ಸಾಹಸಿಯಾದ ಈತ ಏಕಾಂಗಿಯಾಗಿ ಜಗತ್ತಿನ ಸುತ್ತ ನಾವೆಯಲ್ಲಿ ಪಯಣಿಸಿದ ಮೊದಲ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement