My Blog List

Saturday, March 7, 2009

ಇಂದಿನ ಇತಿಹಾಸ History Today ಮಾರ್ಚ್ 07

ಇಂದಿನ ಇತಿಹಾಸ

ಮಾರ್ಚ್ 07

ಚಿತ್ರನಟಿ ಜಯಪ್ರದಾ ದಿವಾಳಿಯಾಗಿದ್ದಾರೆ ಎಂಬುದಾಗಿ ಹೊರಡಿಸಿದ್ದ 2006ರ ತನ್ನ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತು. 20 06ರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 500 ದಿನಗಳಷ್ಟು ವಿಳಂಬವಾದುದನ್ನು ಮನ್ನಿಸುವಂತೆ ಕೋರಿ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು.

2008: ಮೊದಲ ಬಾರಿಗೆ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕರನ್ನು ಹೊತ್ತ ಪ್ರಯೋಗಾರ್ಥ ವಿಮಾನ ಹಾರಾಟ ಯಶಸ್ವಿಯಾಗಿ ನಡೆಯಿತು. ಕಿಂಗ್ ಫಿಷರ್ ಏರ್ ಲೈನ್ಸ್, ಭಾರತೀಯ ವಾಯುಪಡೆಗಳ ವಿಮಾನ ಮತ್ತು ಏರ್ ಡೆಕ್ಕನ್ ವಿಮಾನಗಳು ಈದಿನ ಬೆಳಗ್ಗೆ ಇಲ್ಲಿ ಇಳಿಯುವ ಮತ್ತು ಹಾರುವ ಮೂಲಕ ಮಾರ್ಚ್ 30ರಿಂದ ಪ್ರಾರಂಭವಾಗುವ ವಿಮಾನ ನಿಲ್ದಾಣದ ಕಾರ್ಯಾರಂಭವನ್ನು ಸುಗಮಗೊಳಿಸಿದವು. ಮುಂಬೈಯಿಂದ ಅತಿಥಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಹೊತ್ತ ಕಿಂಗ್ ಫಿಷರ್ ವಿಮಾನವು ಬೆಳಿಗ್ಗೆ 10 ಗಂಟೆಗೆ ನೂತನ ವಿಮಾನ ನಿಲ್ದಾಣದಲ್ಲಿ ಇಳಿಯುವ ಮೂಲಕ ಈ ನಿಲ್ದಾಣದಲ್ಲಿ ಇಳಿದ ಮೊದಲ ವಿಮಾನವೆಂಬ ಕೀರ್ತಿಗೆ ಭಾಜನವಾಯಿತು. ನಂತರ 15 ನಿಮಿಷಗಳ ಅಂತರದಲ್ಲಿ ಬಿಜಿನೆಸ್ ಕ್ಲಾಸಿನ ಎಲ್ ಆಂಡ್ ಟಿ ಸಂಸ್ಥೆಯ ಪುಟ್ಟ ವಿಮಾನ ಬಂದಿಳಿಯಿತು. ಆಮೇಲೆ ಒಂದರ ಹಿಂದೆ ಒಂದರಂತೆ ಭಾರತೀಯ ವಾಯು ಪಡೆಯ ಮೂರು ವಿಮಾನಗಳು ಬಂದಿಳಿದವು. 

2008: ಪ್ರಾಚೀನ ಸೂರ್ಯ ಸಿದ್ಧಾಂತದ ಪ್ರಕಾರ ಜ್ಯೋತಿಷ್ಯ ಶಾಸ್ತ್ರದ ನೆರವಿನೊಂದಿಗೆ ಆಕರ್ಷಕ ಚತುರ್ಭಾಷಾ ಗಡಿಯಾರ ತಾವು ಸಿದ್ಧಪಡಿಸಿರುವುದಾಗಿ ಗುಲ್ಬರ್ಗದ ಸುರಪುರದ ವೆಂಕಟೇಶ ಎ. ಸುಗಂಧಿ ಪ್ರಕಟಿಸಿದರು. ಕೇವಲ ಮೂರನೇ ತರಗತಿ ವ್ಯಾಸಂಗ ಮಾಡಿ, ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ವೆಂಕಟೇಶ್ ಅವಿರತ ಅಭ್ಯಾಸದಿಂದ ಈ ಗಡಿಯಾರ ನಿರ್ಮಿಸಿದರು. `ಪ್ರಾಚೀನ ಶಿವಲಿಖಿತ (ಮುಹೂರ್ತ) ಚಕ್ರದ ಪ್ರಕಾರ ಆಧುನಿಕ ಸಮಯ ತಿಳಿಯುವಂತೆ ಸರಳವಾಗಿ ಈ ಗಡಿಯಾರ ನಿರ್ಮಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಶುಭ ಮುಹೂರ್ತಗಳನ್ನು ತತ್ ಕ್ಷಣ ನೋಡಿ ಗ್ರಹಿಸಬಹುದು. ಗ್ರಹದ ಪ್ರಭಾವಗಳನ್ನು ಗಣನೆಗೆ ತೆಗೆದುಕೊಂಡು ಸಮಯ ಹೊಂದಾಣಿಕೆ ಮಾಡಲಾಗಿದೆ' ಎಂದು ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. `ಉದ್ವೇಗ, ಅಮೃತ, ಚಂಚಲ, ರೋಗ, ಶುಭ, ಲಾಭ, ಚಕ್ರ ಶುಭಾಶುಭ ಮುಹೂರ್ತಗಳ ಪರಿಚಯ ಸರಳವಾಗಿ ಎಲ್ಲರಿಗೂ ತಿಳಿಯುವಂತೆ ಮಾಡಲಾಗಿದೆ. ಹಿಂದಿ, ಕನ್ನಡ, ತಮಿಳು ಹಾಗೂ ಉರ್ದು ಭಾಷೆಯಲ್ಲಿ, ಪಂಚಾಂಗವನ್ನು ಅವಲೋಕಿಸಿ ಸಿದ್ಧಪಡಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.  

2008: ಬಾಗಲಕೋಟೆ ತಾಲ್ಲೂಕಿನ ಹಳೆ ಮುಗಳೊಳ್ಳಿ ಗ್ರಾಮದ ಬಳಿ ಸೇತುವೆ ಕುಸಿದ ಪರಿಣಾಮ ಚಕ್ಕಡಿಯೊಂದು ನೀರಿಗೆ ಬಿದ್ದು, ಹಸುಗೂಸು ಸೇರಿದಂತೆ ಆರು ಜನರು ಜಲಸಮಾಧಿಯಾದ ಘಟನೆ ಸಂಭವಿಸಿತು. ಅಮಾವಾಸ್ಯೆ ನಿಮಿತ್ತ ದೇವರ ದರ್ಶನಕ್ಕೆ ಹೋಗುವ ವೇಳೆ ಈ ದುರ್ಘಟನೆ ನಡೆಯಿತು. ಮೃತರೆಲ್ಲರೂ ಸಂಗೊಂದಿ ಗ್ರಾಮಕ್ಕೆ ಸೇರಿದವರು. ಬಾಗಲಕೋಟೆಯಿಂದ ನಾಲ್ಕು ಕಿ.ಮೀ. ದೂರದ ರಾಮಾರೂಢ ಮಠದ ಸಮೀಪ ಘಟಪ್ರಭಾ ನದಿಯ ಹಿನ್ನೀರಿನ ಮೇಲಿರುವ ಶಿಥಿಲಗೊಂಡ ಸೇತುವೆ ಕುಸಿದದ್ದು ಈ ದುರಂತಕ್ಕೆ ಕಾರಣವಾಯಿತು.

2008: ತ್ರಿಪುರಾ ಮತ್ತು ಮೇಘಾಲಯದಲ್ಲಿ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿತು. ತ್ರಿಪುರಾದಲ್ಲಿ ಎಡರಂಗ ನಾಲ್ಕನೇಯ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದರೆ, ಮೇಘಾಲಯದಲ್ಲಿ ಕಾಂಗ್ರೆಸ್ ಅತಿ ದೊಡ್ಡ  ಪಕ್ಷವಾಗಿ ಹೊರಹೊಮ್ಮಿತು.

2008: ಚಿತ್ರನಟಿ ಜಯಪ್ರದಾ ದಿವಾಳಿಯಾಗಿದ್ದಾರೆ ಎಂಬುದಾಗಿ ಹೊರಡಿಸಿದ್ದ 2006ರ ತನ್ನ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತು. 20 06ರ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು 500 ದಿನಗಳಷ್ಟು ವಿಳಂಬವಾದುದನ್ನು ಮನ್ನಿಸುವಂತೆ ಕೋರಿ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಜಯಪ್ರದಾ ಅವರ ವಕೀಲರು ತಮ್ಮ ಕಕ್ಷಿದಾರರು ಎಲ್ಲ ಬಾಕಿಗಳನ್ನು ತುಂಬಿ ಹಣಕಾಸು ವಿವಾದಗಳನ್ನು ಬಗೆಹರಿಸಿಕೊಳ್ಳಲು  ಸಿದ್ಧರಾಗಿದ್ದಾರೆ ಎಂದು ತಿಳಿಸಿದರು. ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ವಿ. ರಾಮಸುಬ್ರಹ್ಮಣ್ಯಂ ದಿವಾಳಿ ಆದೇಶ ರದ್ದುಗೊಳಿಸಿದರು. 19.20 ಲಕ್ಷ ಮೌಲ್ಯದ ಎರಡು ಡಿಮ್ಯಾಂಡ್ ಡ್ರಾಫ್ಟುಗಳನ್ನು ಜಯಪ್ರದಾ ವಕೀಲರು ಹಸ್ತಾಂತರಿಸಿದರು. ಆಸ್ತಿ ತೆರಿಗೆಗೆ ಸಂಬಂಧಿಸಿ ಜಯಪ್ರದಾ ಚೆನ್ನೈ ಪಾಲಿಕೆಗೆ 6.5 ಲಕ್ಷ ರೂಪಾಯಿ ಪಾವತಿಸಬೇಕಾಗಿತ್ತು. ವುಡ್ ಲ್ಯಾಂಡ್ಸ್  ಥಿಯೇಟರಿನ ಮಾಲೀಕರಿಗೂ ಆಕೆ ಭಾರಿ ಮೊತ್ತದ ಹಣ ಪಾವತಿಸಬೇಕಾಗಿತ್ತು. ವಾಣಿಜ್ಯ ತೆರಿಗೆ ಇಲಾಖೆಯ ವಕೀಲರು ಜಯಪ್ರದಾ ಮತ್ತು ಅವರ ಸಹೋದರರು 1 ಲಕ್ಷ 91 ಸಾವಿರ ರೂಪಾಯಿ ಪಾವತಿಸಬೇಕಾಗಿದೆ ಎಂದು ಹೇಳಿಕೆ ನೀಡಿದ್ದರು.

2008: ಪಾಕಿಸ್ಥಾನದ ಜೈಲಿನಲ್ಲಿ 35 ವರ್ಷ ಸೆರೆಯಲ್ಲಿದ್ದು ಈಚೆಗಷ್ಟೇ ಬಿಡುಗಡೆಯಾದ ಕಾಶ್ಮೀರ ಸಿಂಗ್ ತಾನು ಭಾರತದ ಗೂಢಚಾರನಾಗಿದ್ದುದು ನಿಜ ಎಂದು ಒಪ್ಪಿಕೊಂಡರು. ಇದೇ ಸಂದರ್ಭದಲ್ಲಿ ಅವರು ತಾವು 35 ವರ್ಷ ಸೆರೆಮನೆಯಲ್ಲಿದ್ದಾಗ ಕೇಂದ್ರದಲ್ಲಿದ್ದ ಯಾವ ಸರ್ಕಾರವೂ ತನ್ನ ಕುಟುಂಬಕ್ಕೆ ಸಹಾಯ ನೀಡಲಿಲ್ಲ ಎಂದು ವ್ಯಥೆಪಟ್ಟರು. ತನ್ನ ಪತ್ನಿ ಪರಮ್ ಜಿತ್ ಕೌರ್ ಜತೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

2008: ಕರ್ನಾಟಕ ವಿಶ್ವವಿದ್ಯಾಲಯದ ಡಾ. ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಸ್ಥಾಪಿತವಾದ ಪ್ರೊ. ಸ.ಸ.ಮಾಳವಾಡ ಅವರ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯನ್ನು 2006ನೇ ಸಾಲಿನಲ್ಲಿ ಬೆಂಗಳೂರಿನ ಆಕಾಶವಾಣಿ ಕೇಂದ್ರದ ಸಹ ನಿರ್ದೇಶಕ ಡಾ. ಬಸವರಾಜ ಸಾದರ ಅವರ ಕೃತಿ `ತಮಂಧಕ್ಕೆ ಬೆಳಗು' ಪಡೆದುಕೊಂಡಿದೆ ಎಂದು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಎಚ್.ಎಂ.ಮಹೇಶ್ವರಯ್ಯ ತಿಳಿಸಿದರು.

2008: ಎಂಟು ಮಂದಿ ನಕ್ಸಲ್ ಬೆಂಬಲಿಗರನ್ನು ಉಡುಪಿ ಜಿಲ್ಲೆಯ ನಾಡ್ಪಾಲು ಗ್ರಾಮದ ಮೇಗದ್ದೆಯಲ್ಲಿ ನಸುಕಿನ ವೇಳೆ ದಾಳಿ ನಡೆಸಿ ಬಂಧಿಸಲಾಯಿತು. ಬಂಧಿತರು ಹೆಬ್ರಿ ಠಾಣೆಯನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು. ಇವರ ಬಂಧನದೊಂದಿಗೆ ದೊಡ್ಡ ಅನಾಹುತ ತಪ್ಪಿದಂತಾಯಿತು. ಬಂಧಿತರನ್ನು ಇದೇ ಗ್ರಾಮದ ಸುಧಾಕರ ಶೆಟ್ಟಿ, ದಯಾನಂದ ಗೌಡ, ಕೆಂಪೇಗೌಡ, ಕೃಷ್ಣಪ್ಪ ಗೌಡ, ಕರಿಯ ಗೌಡ, ಆನಂದ ಗೌಡ, ಸತೀಶ್ ಶೆಟ್ಟಿ ಮತ್ತು ಸುರೇಶ್ ಗೌಡ ಎಂದು ಗುರುತಿಸಲಾಯಿತು.

2008: ಕೊಡಗಿನ ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಅರಣ್ಯ, ಉತ್ತರ ಕೊಡಗಿನ ಕುಶಾಲನಗರ ಅರಣ್ಯ ವಲಯದ ಆನೆಕಾಡು ಮೀಸಲು ಅರಣ್ಯ ಪ್ರದೇಶ ಹಾಗೂ ನಿಡ್ತ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ ಬಾಣಾವರದ ಬಳಿಯ ಎರಪರೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆಯಷ್ಟು ಅರಣ್ಯ ಸುಟ್ಟು ಭಸ್ಮವಾಯಿತು.

2008: ಶಿಯಾ ಸಮುದಾಯದವರು ಹೆಚ್ಚಾಗಿದ್ದ ಬಾಗ್ದಾದ್ ನಗರದ ಮಧ್ಯ ಭಾಗದ ಕರ್ರಾಡ್ ಪ್ರದೇಶದಲ್ಲಿ ಸಂಭವಿಸಿದ ಎರಡು ಶಕ್ತಿಶಾಲಿ ಬಾಂಬ್ ಸ್ಫೋಟಗಳಲ್ಲಿ 68 ಜನ ಸತ್ತು, 120ಕ್ಕೂ ಅಧಿಕ ಮಂದಿ ಗಾಯಗೊಂಡರು. 

2008: ಪಾಕಿಸ್ಥಾನದಲ್ಲಿ ಫೆಬ್ರುವರಿ 18ರಂದು ನಡೆದ ಸಾರ್ವತ್ರಿಕ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿತು. ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನೇತೃತ್ವದ ಸರ್ಕಾರ ರಚನೆಗೊಳ್ಳುವುದು ನಿಶ್ಚಿತವಾದರೂ, ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಉಚ್ಛಾಟನೆಯಂತಹ ಮಹತ್ವದ ನಿರ್ಧಾರ ಕೈಗೊಳ್ಳಲು ಅಗತ್ಯವಾದ ಮೂರನೇ ಎರಡು ಬಹುಮತ ಗಳಿಸಲು ಪಕ್ಷ ಇನ್ನೂ 5 ಸ್ಥಾನಗಳ ಕೊರತೆ ಅನುಭವಿಸಿತು.

2008: ನಿಯಮದ ಪ್ರಕಾರ ಆದೇಶ ಹೊರಡಿಸಿಲ್ಲ ಎಂದು ಅಧೀನ ನ್ಯಾಯಾಧೀಶರೊಬ್ಬರ ವಿರುದ್ಧ ಹೈಕೋರ್ಟಿಗೆ ದೂರು ದಾಖಲಿಸಿರುವ ಅಪರೂಪದ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆಯಿತು. ಅಧೀನ ನ್ಯಾಯಾಧೀಶರೊಬ್ಬರ ವಿರುದ್ಧ ಹೈಕೋರ್ಟಿನಲ್ಲಿ ಹೀಗೆ ದೂರು ದಾಖಲಿಸಿರುವುದು ಇದೇ ಪ್ರಥಮ ಎನ್ನಲಾಗಿದೆ.  ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಚಿಕ್ಕ ಕಾರಣಕ್ಕೆ ಆರೋಪಿಯನ್ನು ಖುಲಾಸೆ ಮಾಡಿದ ನಗರದ 20ನೇ ಎಸಿಎಂಎಂ ಕೋರ್ಟಿನ ನ್ಯಾಯಾಧೀಶ ಚಿನ್ನಪ್ಪನವರ್ ವಿರುದ್ಧ ವಕೀಲ ಎಂ.ಜಿ.ಕುಮಾರ್ ಈ ದೂರು ದಾಖಲಿಸಿದರು.

2007: ಇಂಡೋನೇಷಿಯಾದ ಪ್ರಯಾಣಿಕರ ವಿಮಾನವೊಂದು ಯೋಗ್ಯಕರ್ತ (ಹಿಂದಿನ ಜಕಾರ್ತ) ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಅಗ್ನಿಗೆ ಆಹುತಿಯಾಗಿ 23 ಜನ ಮೃತರಾದರು. ಆದರೆ ಅದೃಷ್ಟವಶಾತ್ ವಿಮಾನದಲ್ಲಿದ್ದ 140 ಮಂದಿಯ ಪೈಕಿ 100ಕ್ಕೂ ಹೆಚ್ಚು ಮಂದಿ ಪಾರಾದರು.

2007: ಎಂಟು ವರ್ಷದ ಪುಟ್ಟ ಬಾಲಕ ಬಿಸ್ಮೆ ಭುವನೇಶ್ವರದಲ್ಲಿ ಹೈಸ್ಕೂಲ್ ಸರ್ಟಿಫಿಕೇಟ್ (ಎಚ್ ಎಸ್ ಸಿ) ಪರೀಕ್ಷೆಗೆ ಹಾಜರಾದ. ಒರಿಸ್ಸಾ ಹೈಕೋರ್ಟ್ ಆತನ ಪರವಾಗಿ ತೀರ್ಪು ನೀಡಿದ ಬಳಿಕ ಬಿ ಎಸ್ ಇ (ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) ಈ ಬಾಲಕನಿಗೆ 10 ದಿನಗಳ ಸುದೀರ್ಘ ಅವಧಿಯ ಈ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ನೀಡಿತ್ತು. ಉತ್ತರ ಬಾಲಸೋರ್ ಜಿಲ್ಲೆಯ ನಿವಾಸಿಯಾದ ಬಿಸ್ಮೆಯ ಪಾಲಕರು, ಮತ್ತು ಶಿಕ್ಷಕರು ಬಾಲಕನಿಗೆ ಪರೀಕ್ಷೆಗೆ ಕೂರಲು ಅವಕಾಶ ನೀಡುವಂತೆ ಬಿ ಎಸ್ ಇಗೆ ಮನವಿ ಮಾಡಿದ್ದರು.

 2007: ಹನ್ನೆರಡು ವರ್ಷಗಳ ಹಿಂದೆ ಪಣಜಿಯ ಅನಾಥಾಲಯವೊಂದರ ಮಕ್ಕಳನ್ನು  ಲೈಂಗಿಕವಾಗಿ ಶೋಷಿಸಿದ್ದ ಆಸ್ಟ್ರೇಲಿಯಾದ ಶಿಶುಕಾಮಿ ವೆರ್ನರ್ ವೂಲ್ಫ್ ಇಂಗೊ ಎಂಬ ಆರೋಪಿಗೆ  ಮಾರ್ಗೋವಾ ನ್ಯಾಯಾಲಯ  10 ವರ್ಷಗಳ ಕಠಿಣ ಸಜೆಯನ್ನು ವಿಧಿಸಿತು. ಇಬ್ಬರು ಸ್ಥಳೀಯ ಮಕ್ಕಳನ್ನು ಅಪಹರಿಸಿ ಅವರಿಗೆ ಲೈಂಗಿಕ ಹಿಂಸೆ ನೀಡಿದ್ದಕ್ಕಾಗಿ ನ್ಯಾಯಾಲಯವು ಈ ಶಿಕ್ಷೆ  ವಿಧಿಸಿತು. ಈತನಿಗಾಗಿ  ಸಿಬಿಐ 10 ವರ್ಷಗಳ ಹಿಂದಿನಿಂದ ಹುಡುಕಾಟ ಆರಂಭಿಸಿತ್ತು. ಇಂಗೊನನ್ನು 2005ರಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಇಂಡೊ-ಜರ್ಮನ್ ಫ್ರೆಡ್ಡಿ ಪೀಟ್ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಶಿಶುಕಾಮಿ ಜಾಲದಲ್ಲಿ ಷಾಮೀಲಾದ ಅಪರಾಧಕ್ಕಾಗಿ ಭಾರತಕ್ಕೆ  ಹಸ್ತಾಂತರಗೊಂಡು ಶಿಕ್ಷೆಗೆ ಈಡಾದ ಮೂರನೆಯ ವಿದೇಶಿ ವ್ಯಕ್ತಿ ಇಂಗೊ. ಮಾರ್ಗೋವಾ ಅನಾಥಾಲಯವನ್ನು ರಕ್ಷೆಯಾಗಿ ಬಳಸಿಕೊಂಡು, ಶಿಶುಕಾಮಿಗಳಿಗೆ ನಿಯಮಿತವಾಗಿ  ಲೈಂಗಿಕ ಶೋಷಣೆಗೆ ಮಕ್ಕಳನ್ನು  ಒದಗಿಸುವ ಜಾಲವನ್ನು  ಪೀಟ್ ಹೆಣೆದಿದ್ದ. ಶಿಶುಕಾಮಿಗಳು ಈ ಮಕ್ಕಳನ್ನು  ಸ್ಥಳೀಯ ಹೋಟೆಲುಗಳಿಗೆ ಒಯ್ದು ಅವರನ್ನು  ಶೋಷಣೆಗೆ  ಒಳಪಡಿಸಿದ್ದಲ್ಲದೆ ಅವರ ಛಾಯಾಚಿತ್ರಗಳನ್ನೂ ತೆಗೆದುಕೊಳ್ಳುತ್ತಿದ್ದರು. ಶೋಷಣೆಗೆ ಒಳಗಾದ ಇಬ್ಬರು ಮಕ್ಕಳು ನ್ಯಾಯಾಲಯದಲ್ಲಿ ರಹಸ್ಯವಾಗಿ ಸಾಕ್ಷಿ ನುಡಿದಿದ್ದರು. ಆದರೆ ಅವರಲ್ಲಿ ಒಬ್ಬ ಬಾಲಕ ನಂತರ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿದ್ದ. 1991ರಲ್ಲಿ ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಶೀಲಾ ಬಾರ್ಸೆ ಈ ಜಾಲವನ್ನು  ಬಯಲಿಗೆಳೆದಾಗ ಪೀಟ್ ನನ್ನು ಬಂಧಿಸಲಾಗಿತ್ತು. 1996ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ  ವಿಧಿಸಲಾಗಿತ್ತು. ಎರಡು ವರ್ಷಗಳ ಹಿಂದೆ ಆತ ಅಗುವಾಡ ಸೆರೆಮನೆಯಲ್ಲಿ ಅಸು ನೀಗಿದ್ದ. ಶಿಕ್ಷೆಗೆ ಒಳಗಾಗಿದ್ದ ಇನ್ನೊಬ್ಬ ವಿದೇಶಿ ಇ.ಸಿ. ಮೆಕ್ ಬ್ರೈಡ್ನನ್ನು 7 ವರ್ಷಗಳ ಸೆರೆವಾಸ ಮುಗಿಸಿದ ಬಳಿಕ ನ್ಯೂಜಿಲೆಂಡಿಗೆ ಕಳುಹಿಸಲಾಗಿತ್ತು. ಫ್ರೆಡ್ಡಿ ಪೀಟ್ನ ಇನ್ನೂ ಇಬ್ಬರು ವಿದೇಶಿ ಸಹಚರರಾದ ನೀಲ್ಸ್  ಜಾನ್ಸನ್ ಮತ್ತು ಡೊಮಿನಿಕ್ ಸಬೀರೆಗಾಗಿ ಸಿಬಿಐ ಇನ್ನೂ ಹುಡುಕಾಟ ನಡೆಸುತ್ತಿದೆ. ಫ್ರೆಂಚ್ ರಾಷ್ಟ್ರೀಯನಾದ ಸಬೀರೆಯನ್ನು 1998ರಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಆದರೆ ಆತ ಸೆರೆಮನೆಯಿಂದ ಜಿಗಿದು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ.

2007: ಪ್ರಸ್ತುತ ವರ್ಷ ತನ್ನ `ಅಮೃತ ಮಹೋತ್ಸವ' (ಪ್ಲಾಟಿನಂ ಜ್ಯುಬಿಲಿ) ಆಚರಿಸುತ್ತಿರುವ ಭಾರತೀಯ ವಾಯುಪಡೆಯು, ಚಂಡೀಗಢದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಮುಖ್ಯಸ್ಥ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ತಾನು ಭೂ ಮೇಲ್ಮೈಯಲ್ಲಿ ಹಾಗೂ ಬಾನಿನಲ್ಲಿ ಕಾರ್ಯಾಚರಣೆಗೆ ಬಳಸುವ ಎಲ್ಲ 27 ಮಾದರಿಯ ವಿಮಾನಗಳನ್ನು ಪ್ರದರ್ಶಿಸಿತು. ಸಶಸ್ತ್ರ ಪಡೆಗಳ ಸಮಗ್ರ ಪರಿಶೀಲನೆ ಸಂದರ್ಭದಲ್ಲಿ ವಾಯುಪಡೆ ಈ ಪ್ರದರ್ಶನ ನಡೆಸಲಾಯಿತು. ಭಾರತೀಯ ವಾಯುಪಡೆಯ ಇತಿಹಾಸದಲ್ಲೇ ಇದು ನಾಲ್ಕನೆಯ ಸಮಗ್ರ ಪರಿಶೀಲನೆ. 1954ರ ಏಪ್ರಿಲ್ 1ರಂದು ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು  ಭಾರತೀಯ ವಾಯುಪಡೆ ಪೆರೇಡಿನ `ಮೊತ್ತ ಮೊದಲ ಪರಿಶೀಲನೆ' ನಡೆಸಿದ್ದರು. ಆಗ ವಾಯುಪಡೆ ವಿಮಾನಗಳ ಸ್ಥಬ್ಧ ಪ್ರದರ್ಶನ ಏರ್ಪಡಿಸಲಾಗಿತ್ತು. ಭಾರತೀಯ ವಾಯುಪಡೆಯ ಮೊದಲ ಮುಖ್ಯಸ್ಥ  ಏರ್ ಮಾರ್ಷಲ್ ಸುಬ್ರತೊ ಮುಖರ್ಜಿ ಅವರು ಇದೇ ದಿನ ಅಧಿಕಾರ ವಹಿಸಿಕೊಂಡದ್ದೂ ಕಾಕತಾಳೀಯವಾಗಿತ್ತು. ಎರಡನೇ ವಾಯುಪಡೆ ಪೆರೇಡ್  ಪರಿಶೀಲನೆ 1972ರ ಏಪ್ರಿಲ್ 1ರಂದು ವಿ.ವಿ. ಗಿರಿ ಅವರು ರಾಷ್ಟ್ರಪತಿಯಾಗಿದ್ದಾಗ ನಡೆದಿತ್ತು. ಆಗ ಮೊದಲ ಬಾರಿಗೆ ವಾಯುಪಡೆ ವಿಮಾನಗಳ ವಾಯುಪ್ರದರ್ಶನ ನಡೆಸಲಾಗಿತ್ತು ಈ ಪರಿಶೀಲನೆ ಪಾಲಂನ ವಾಯುಪಡೆ ನಿಲ್ದಾಣದಲ್ಲಿ ನಡೆದಿತ್ತು. ಮೂರನೇ ವಾಯುಪಡೆ ಪೆರೇಡ್  ಪರಿಶೀಲನೆ `31 ವರ್ಷಗಳ ಹಿಂದೆ'  1976ರ ಜನವರಿ 19ರಂದು ಚಂಡಿಗಢದಲ್ಲಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರಿಂದ ನಡೆದಿತ್ತು. ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಮ್ಮುಖದಲ್ಲಿ ನಡೆದ ನಾಲ್ಕನೇ ಪರಿಶೀಲನೆಯಲ್ಲಿ ಚೀತಾ, ಚೇತಕ್, ಚೀತಲ್, ಎಂಐ-8, ಎಂಐ-17, ಎಂಐ-26, ಎಂಐ-35, ಧ್ರುವ (ಆಧುನಿಕ ಹಗುರ ಹೆಲಿಕಾಪ್ಟರ್) ಹೆಲಿಕಾಪ್ಟರುಗಳು, ಮಿಗ್-21, ಮಿಗ್ -23, ಮಿಗ್-27, ಮಿಗ್-29, ಸುಖೋಯ್ ಎಸ್ ಯು-30, ಎಂಕೆಐ, ಮಿರಾಜ್-2000, ಜಾಗ್ವಾರ್, ಕ್ಯಾನ್ ಬೆರ್ರಾ ಯುದ್ಧ ವಿಮಾನಗಳು, ಎಚ್ ಎಸ್ - 748, ಎಎನ್-32, 11-76 ಸಾರಿಗೆ ವಿಮಾನಗಳು, ಬೋಯಿಂಗ್-737 ಮತ್ತು ಎಂಬ್ರಾಯೆರ್ ವಿಐಪಿ  ವಿಮಾನಗಳು, 11-78 ಮರು ಇಂಧನ ವಾಹನ ಹಾಗೂ  ಎಚ್ ಪಿ ಟಿ -32, ಎಚ್ ಜೆ ಟಿ-16 (ಕಿರಣ್) ಮತ್ತು  ಇಸ್ಕಾರ ಟಿಎಸ್-11 ತರಬೇತಿ  ವಿಮಾನಗಳ ಪ್ರದರ್ಶನ ನಡೆಯಿತು.

2007: ಕೇಂದ್ರ ತನಿಖಾ ದಳದ ವಂಚನೆ ಮತ್ತು ದುರುಪಯೋಗ ತಡೆ ವಿಭಾಗದ ಪೊಲೀಸರು ಬೆಂಗಳೂರಿನಲ್ಲಿ ಕೇರಳದ ತ್ರಿಶ್ಯೂರು ಮೂಲದ ಎಂ.ಜಿ. ಸುಕುಮಾರ ಎಂಬ ವ್ಯಕ್ತಿಯನ್ನು ಬಂಧಿಸಿ ಆತನಿಂದ ಐದು ಕೋಟಿ ರೂಪಾಯಿ ಮೌಲ್ಯದ ಪುರಾತನ ಕಾಲದ ಕುರಾನ್ ಗ್ರಂಥ ಹಾಗೂ ಅಮೂಲ್ಯ ಕಲಾಕೃತಿಯನ್ನು ವಶಪಡಿಸಿಕೊಂಡಿತು. 400 ವರ್ಷಗಳಷ್ಟು ಹಳೆಯದಾದ ಈ ಕುರಾನ್ ಗ್ರಂಥವನ್ನು ಮೊಘಲ್ ಚಕ್ರವರ್ತಿ ಔರಂಗಜೇಬ ಬರೆದದ್ದು ಎಂದು ನಂಬಲಾಗಿದೆ. ಜೊತೆಗೆ ಲಭಿಸಿದ ಇನ್ನೊಂದು ಕಲಾಕೃತಿ ಬಂಗಾರ ಮಿಶ್ರಿತ ಬಣ್ಣದದಾಗಿದ್ದು 140 ಕಿ.ಗ್ರಾಂ. ತೂಕ ಹೊಂದಿದೆ.

2007: ಫೆಬ್ರುವರಿಯಲ್ಲಿ ಲೋಕಸಭೆಗೆ ಪುನರಾಯ್ಕೆಗೊಂಡ ನವಜೋತ್ ಸಿಂಗ್ ಸಿಧು ಅವರು ಈದಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರಿಂದ ಪ್ರಮಾಣವಚನ ಸ್ವೀಕರಿಸಿದರು. ಬೀದಿ ಬದಿಯಲ್ಲಿ ನಡೆದ ಜಗಳದಲ್ಲಿ 18 ವರ್ಷದ ಯುವಕನ ಸಾವಿಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟಿನಿಂದ ಶಿಕ್ಷೆಗೆ ಒಳಗಾಗಿದ್ದ ಸಿಧು ಕಳೆದ ಡಿಸೆಂಬರಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

2007: ಕೇರಳ ಪ್ರವಾಸೋದ್ಯಮದಲ್ಲಿ ಹೊಸತನದ ಅಲೆಯೊಂದಿಗೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ದುಬಾರಿ ಸಮುದ್ರಯಾನದ `ಕ್ವೀನ್ ಮೇರಿ-2' ಹಡಗು ಕೊಚ್ಚಿಗೆ ಬಂದಿಳಿಯಿತು. ಅಲೆಯ ಮೇಲೆ ಅಂತರಿಕ್ಷ ತೋರಿಸುವ ತಾರಾ ವೀಕ್ಷಣಾಲಯ, ಜಗತ್ತಿನ ಸಮುದ್ರದ ಮೇಲಿನ ಅತಿದೊಡ್ಡ ಗ್ರಂಥಾಲಯ (4000 ಗ್ರಂಥಗಳು, 8000 ಪುಸ್ತಕಗಳು, 200 ಸಿಡಿರಾಂಗಳು ಈ ಗ್ರಂಥಾಲಯದಲ್ಲಿ ಇವೆ) ಮತ್ತು ಬಾಲ್ ರೂಂ ಈ ಹಡಗಿನ ವಿಶೇಷಗಳು. 

2006: ವಾರಣಾಸಿಯ ದಂಡು ರೈಲು ನಿಲ್ದಾಣ ಮತ್ತು ಸಂಕಟ ಮೋಚನ ದೇವಸ್ಥಾನದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟ ಸಂಭವಿಸಿದ್ದರಿಂದ ಕನಿಷ್ಠ 20 ಜನ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಕಾಶಿ ವಿಶ್ವನಾಥ ದೇವಸ್ಥಾನದಿಂದ ಸ್ವಲ್ಪವೇ ದೂರದಲ್ಲಿರುವ ಸಂಕಟಮೋಚನ ದೇವಸ್ಥಾನದ ಒಳಗೆ ಸಂಜೆ ಪೂಜೆ ನಡೆಯುತ್ತಿದ್ದಾಗ ಮೊದಲ ಸ್ಫೋಟದಲ್ಲಿ 6 ಜನ, ಕೆಲವೇ ನಿಮಿಷಗಳಲ್ಲಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಮತ್ತು ನಿರೀಕ್ಷಣಾ ಕೊಠಡಿಯಲ್ಲಿ ಸಂಭವಿಸಿದ ಇನ್ನೊಂದು ಬಾಂಬ್ ಸ್ಫೋಟದಲ್ಲಿ 14 ಜನ ಮೃತರಾದರು.

2006: ಟೊರಂಟೋದ ಬಾಟಾ ಶೂ ವಸ್ತು ಸಂಗ್ರಹಾಲಯದಿಂದ ಜನವರಿ 22ರಂದು ಕಳುವಾಗಿದ್ದ 1.60 ಲಕ್ಷ ಡಾಲರ್ ಬೆಲೆಯ ಹೈದರಾಬಾದ್ ನಿಜಾಮ ಧರಿಸುತ್ತಿದ್ದ ವಜ್ರಖಚಿತ ಪಾದರಕ್ಷೆಯನ್ನು ಮತ್ತೆ ವಶಪಡಿಸಿಕೊಳ್ಳಲಾಯಿತು. 1790ರಲ್ಲಿ ನಿಜಾಮ ಧರಿಸುತ್ತಿದ್ದ ಈ ಪಾದರಕ್ಷೆಯ ಜೊತೆಗೆ ಕಳುವಾಗಿದ್ದ 11,000 ಡಾಲರ್ ಬೆಲೆಯ ಅಪರೂಪದ ಹರಳುಗಳನ್ನು ಒಳಗೊಂಡ ಚಿನ್ನದ ಉಂಗುರ, 45,000 ಡಾಲರ್ ಮೌಲ್ಯದ ಕಾಲ್ಚೈನು ಕೂಡಾ ಟೊರೊಂಟೋ ಇಗರ್ಜಿ (ಚರ್ಚ್) ಬಳಿ  ಪ್ಲಾಸ್ಟಿಕ್ ಚೀಲ ಒಂದರಲ್ಲಿ ಲಭಿಸಿದವು.

2006: ತೀವ್ರ ವಿವಾದಕ್ಕೆ ಒಳಗಾಗಿದ್ದ ಬೆಂಗಳೂರು ಮೆಟ್ರೋ ಕಾಮಗಾರಿಯ ಯೋಜನೆ ಆರಂಭಿಸಲು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಆದೇಶ ನೀಡಿದರು.

2006: ಅಮೆರಿಕದ ಖ್ಯಾತ ಚಿತ್ರ ನಿರ್ದೇಶಕ ಗೋರ್ಡಾನ್ ಪಾರ್ಕ್ಸ್ ನಿಧನರಾದರು.

1987: ಅಹಮದಾಬಾದಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 10,000ನೇ ರನ್ ಬಾರಿಸಿ, ಈ ದಾಖಲೆ ಮಾಡಿದ ಮೊತ್ತ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1960: ಇವಾನ್ ಲೆಂಡ್ಲ್ ಹುಟ್ಟಿದರು. ಝೆಕ್ ಸಂಜಾತ ಅಮೆರಿಕ್ ಟೆನಿಸ್ ಆಟಗಾರರಾದ ಇವರು 1985ರಿಂದ 1987ರವರೆಗಿನ ಅವಧಿಯಲ್ಲಿ ವಿಂಬಲ್ಡನ್ ಹೊರತಾಗಿ ಎಲ್ಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡು ಜಗತ್ತಿನ ಅಪ್ರತಿಮ ಟೆನಿಸ್ ಆಟಗಾರ ಎನಿಸಿಕೊಂಡಿದ್ದರು.

1953: ಡಿ ಎನ್ ಎ ಅತಿಸಣ್ಣ ಕಣದ `ಜೋಡಿ ಪಾವಟಿಗೆ' (ಎ ಡಬಲ್ ಹೆಲಿಕ್ಸ್) ಮಾದರಿಯನ್ನು  ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ವಾಟ್ಸನ್ ಅವರು ಕೇಂಬ್ರಿಜ್ನ ಕ್ಯಾವೆಂಡಿಶ್ ಲ್ಯಾಬೋರೇಟರಿಯಲ್ಲಿ ಅನಾವರಣಗೊಳಿಸಿದರು. 1953ರ ಏಪ್ರಿಲ್ 25ರಂದು `ನೇಚರ್' ಪತ್ರಿಕೆಯಲ್ಲಿ ತಮ್ಮ ಮಾದರಿಯನ್ನು ವಿವರಿಸುವ ಪ್ರಬಂಧವನ್ನು (ಮಾಲೆಕ್ಯುಲೀರ್ ಸ್ಟ್ರಕ್ಚರ್ ಆಫ್ ನ್ಯೂಕ್ಲಿಯಿಕ್ ಆ್ಯಸಿಡ್ಸ್) ಪ್ರಕಟಿಸಿದರು. 1962ರಲ್ಲಿ ವೈದ್ಯಕೀಯ ಕ್ಷೇತ್ರಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಮಾರಿಸ್ ವಿಕಿನ್ಸ್ ಜೊತೆಗೆ ಅವರು ಹಂಚಿಕೊಂಡರು.

1952: ಭಾರತೀಯ ಆಧ್ಯಾತ್ಮಿಕ ಗುರು `ಕ್ರಿಯಾ ಯೋಗ'ದ ಪ್ರತಿಪಾದಕ ಪರಮಹಂಸ ಯೋಗಾನಂದ (1893-1952) ಅವರು `ಮಹಾ ಸಮಾಧಿ' ಹೊಂದಿದರು.

1911: ಸಚ್ಚಿದಾನಂದ ಎಚ್. ವಾತ್ಸಾಯನ (1911-87) ಹುಟ್ಟಿದರು. ಖ್ಯಾತ ಹಿಂದಿ ಕವಿಯಾದ ಇವರು 1979ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದರು. 

1905: ಚಿತ್ರ ಕಲಾವಿದ, ರಾಜ್ಯ ಪ್ರಶಸ್ತಿ ವಿಜೇತ ಶಂಕರರಾವ್ ಅಳಂದಕರ (7-3-1905ರಿಂದ 31-5-1971) ಅವರು ಸರಾಫ ವೃತ್ತಿಯವರಾದ ನಾರಾಯಣ ನಾಯಕ್ - ಚಂದೂಬಾಯಿ ದಂಪತಿಯ ಮಗನಾಗಿ ಗುಲ್ಬರ್ಗದಲ್ಲಿ(ಕಲ್ಬುರ್ಗಿ) ಜನಿಸಿದರು.

1876: ಅಲೆಗ್ಸಾಂಡರ್ ಗ್ರಹಾಂಬೆಲ್ಗೆ ಟೆಲಿಫೋನ್ ಸಂಶೋಧನೆಗಾಗಿ ಪೇಟೆಂಟ್ ನೀಡಲಾಯಿತು. ಎಲಿಶಾ ಗ್ರೇ ಜೊತೆಗೆ ಕಾನೂನು ಸಮರದ ಬಳಿಕ ಗ್ರಹಾಂಬೆಲ್ ಅವರಿಗೆ ಈ ಪೇಟೆಂಟ್ ಲಭಿಸಿತು. ಬೆಲ್ ಅವರಿಗೆ ಪೇಟೆಂಟ್ ನೀಡಿದ್ದರ ವಿರುದ್ಧ ಇದೇ ದಿನ ಎಲಿಶಾ ಗ್ರೇ ಕೇವಿಯಟ್ ಸಲ್ಲಿಸಿದರೂ ಅಮೆರಿಕಾದ ಸುಪ್ರೀಂಕೋರ್ಟಿನಲ್ಲಿ ದೀರ್ಘ ಕಾನೂನು ಸಮರದ ಬಳಿಕ ಪೇಟೆಂಟ್ ಹಕ್ಕುಗಳನ್ನು ಕಳೆದುಕೊಂಡ.

1835: ಶೈಕ್ಷಣಿಕ ಅನುದಾನಗಳನ್ನು ಇನ್ನು ಮುಂದೆ ಪಾಶ್ಚಾತ್ಯ ತಿಳಿವಳಿಕೆ ವೃದ್ಧಿಗಾಗಿ ಬಳಸಲಾಗುವುದು ಎಂದು ಘೋಷಿಸುವ ಮೂಲಕ ಗವರ್ನರ್ ಜನರಲ್ ವಿಲಿಯಂ ಬೆಂಟಿಂಕ್ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆಯ ಹಣೆಬರಹವನ್ನೇ ಬದಲಾಯಿಸಿದ. ಗವರ್ನರ್ ಜನರಲ್ನ ಎಕ್ಸಿಕ್ಯೂಟಿವ್ ಕೌನ್ಸಿಲಿನ ಕಾನೂನು ಸದಸ್ಯ ಥಾಮಸ್ ಬೇಬಿಂಗ್ಟನ್ ಮೆಕಾಲೆ ಸಲ್ಲಿಸಿದ ಶಿಕ್ಷಣ ಸಂಬಂಧಿತ ವರದಿಯನ್ನು ಆಧರಿಸಿ ಬೆಂಟಿಂಕ್ ಈ ಕ್ರಮ ಕೈಗೊಂಡ. ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಇದರಿಂದಾಗಿ ಎದ್ದಿದ್ದ ವಿವಾದ ಕೊನೆಗೆ ಇಂಗ್ಲಿಷ್ ಶಿಕ್ಷಣ ಪ್ರತಿಪಾದಕರ ಕೈ ಮೇಲಾಗುವುದರೊಂದಿಗೆ ಅಂತ್ಯಗೊಂಡಿತು. ಬ್ರಿಟಿಷ್ ಸರ್ಕಾರವು `ಇಂಗ್ಲಿಷ್ ಶಿಕ್ಷಣ' ಪದ್ಧತಿಯನ್ನು ಅಂಗೀಕರಿಸಿತು.

1765: ಜೋಸೆಫ್ ನೀಸ್ (Joseph Niepce) (1765-1833) ಹುಟ್ಟಿದ ದಿನ. ಫ್ರೆಂಚ್ ಸಂಶೋಧಕನಾದ ಈತ ದೀರ್ಘಕಾಲ ಬಾಳುವಂತಹ ಮೊತ್ತ ಮೊದಲ ಫೋಟೋಗ್ರಾಫ್ ಸೃಷ್ಟಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement