ಗ್ರಾಹಕರ ಸುಖ-ದುಃಖ

My Blog List

Sunday, May 24, 2009

ಇಂದಿನ ಇತಿಹಾಸ History Today ಮೇ 24

ಇಂದಿನ ಇತಿಹಾಸ 

ಮೇ 24

 ಕರ್ನಾಟಕದ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ 15ಕ್ಕೂ ಹೆಚ್ಚು ಮಂದಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿಗೆ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೋಟಿಸ್ ಜಾರಿ ಮಾಡಿದರು. ಪರವಾನಗಿ ಇಲ್ಲದೇ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಪರಿಸರಕ್ಕೆ ಹಾನಿ ಮಾಡಿರುವುದು ಮತ್ತಿತರ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ನೋಟಿಸಿನಲ್ಲಿ ಸೂಚಿಸಲಾಯಿತು.

2008: ಪರಿಶಿಷ್ಟ ಪಂಗಡ (ಎಸ್ ಟಿ) ಸ್ಥಾನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಗುಜ್ಜರ್ ಸಮುದಾಯದವರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ರಾಜಸ್ಥಾನದ ಡೌಸಾ ಜಿಲ್ಲೆಯ ಸಿಕಂದರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ಜನರು ಮೃತರಾದರು. ಮಧ್ಯಾಹ್ನದ ವೇಳೆಗೆ ಹಿಂಸಾರೂಪಕ್ಕಿಳಿದ ಪ್ರತಿಭಟನಾಕಾರರು ಸಿಕಂದರ ಪೊಲೀಸ್ ಠಾಣೆಯನ್ನು  ಸುಟ್ಟುಹಾಕಲು ಪ್ರಯತ್ನಿಸಿದಾಗ ಪೊಲೀಸರು ಗೋಲಿಬಾರ್ ಮಾಡಿದರು. ಹಿಂದಿನ ದಿನ ಭರತ್ ಪುರದಲ್ಲೂ ಇದೇ ರೀತಿ ಪ್ರತಿಭಟನೆ ನಡೆಸುತ್ತಿದ್ದ ಗುಜ್ಜರ್ ಸಮುದಾಯದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಕನಿಷ್ಠ 15 ಜನರು ಮೃತರಾಗಿದ್ದರು. ಇದರೊಂದಿಗೆ ಗುಜ್ಜರ್ ಚಳವಳಿ ಗೋಲಿಬಾರಿಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿತು.

2008: ಕರ್ನಾಟಕದ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ 15ಕ್ಕೂ ಹೆಚ್ಚು ಮಂದಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿಗೆ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೋಟಿಸ್ ಜಾರಿ ಮಾಡಿದರು. ಪರವಾನಗಿ ಇಲ್ಲದೇ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಪರಿಸರಕ್ಕೆ ಹಾನಿ ಮಾಡಿರುವುದು ಮತ್ತಿತರ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ನೋಟಿಸಿನಲ್ಲಿ ಸೂಚಿಸಲಾಯಿತು.

2008: ಲೋಕಪಾಲ ಮಸೂದೆ ವ್ಯಾಪ್ತಿಯಡಿ ಪ್ರಧಾನಿ ಹುದ್ದೆಯನ್ನು ತರುವಂತೆ, ಪ್ರಧಾನಿ ಮನ ಮೋಹನ ಸಿಂಗ್ ಅವರೇ ಸೂಚಿಸಿದ್ದರೂ, ಕೇಂದ್ರ ಸಚಿವ ಸಂಪುಟ ಅದನ್ನು ತಿರಸ್ಕರಿಸಿತು.  

2008: ಬಣ್ಣ ಅದರಲ್ಲೂ ಗ್ಲೈಕೋಲ್ ಇಥರ್ಸ್ ನಂತಹ ರಾಸಾಯನಿಕಗಳನ್ನು ಒಳಗೊಂಡ ಬಣ್ಣದ ಕೆಲಸಗಳನ್ನು ಮಾಡುವ ಕಾರ್ಮಿಕರ ವೀರ್ಯದಲ್ಲಿ ದೋಷ ಕಂಡುಬರುತ್ತದೆ ಎಂದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿತು. ಗ್ಲೈಕೋಲ್ ಇಥರ್ಸ್ ನಂತಹ ರಾಸಾಯನಿಕ ಬಳಸಿ ಬಣ್ಣ ತಯಾರಿಸುವುದು ಈಗ ಕಡಿಮೆಯಾಗಿದೆ. ಆದರೂ ಕೆಲವು ಸಂದರ್ಭದಲ್ಲಿ ಅವುಗಳ ಬಳಕೆ ಆಗುತ್ತಿರುವುದರಿಂದ ಪುರುಷ ಕಾರ್ಮಿಕರಿಗೆ ಅಪಾಯ ಉಂಟಾಗುತ್ತದೆ ಎಂದು ಲಂಡನ್ನಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದರು.

2008: ಬೆಂಗಳೂರಿನ ವಿಜಯನಗರದ ಸಮಾಜ ಸಂಪರ್ಕ ವೇದಿಕೆಯ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ `ರಾಷ್ಟ್ರಕವಿ ಕುವೆಂಪು ಶತಮಾನೋತ್ಸವ ಪ್ರಶಸ್ತಿ'ಗೆ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಅವರನ್ನು ಆಯ್ಕೆ ಮಾಡಲಾಯಿತು. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ ತಾರಿಣಿ ಅವರು ಈವರೆಗೆ ಮಾಡಿರುವ ಸಾಧನೆಯನ್ನು ಗಮನಿಸಿ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. 

2008: ಶಿರಸಿಯ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾಂಗಣದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಆವರಣದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಹಲಸು ಮೇಳ ಸಮಾರೋಪಗೊಂಡಿತು. `ಹಲಸಿನ ಹಣ್ಣು ಕೂಡ ಒಂದು ಹಾರ್ಟ್ ಟಾನಿಕ್. ದೇಹದ ಪುಷ್ಟಿಗೆ, ಪುರುಷತ್ವದ ವೃದ್ಧಿಗೆ, ಬಂಜೆತನ ನಿವಾರಣೆಗೆ ಹಲಸು ಉಪಯುಕ್ತವಾಗಿದೆ ಎಂಬ ಸಂಗತಿಯನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಹಲಸನ್ನು ಸರಿಯಾದ ರೀತಿಯಲ್ಲಿ ಬಳಸಿದಲ್ಲಿ ಅದು ಆರೋಗ್ಯದಾಯಕ ಫಲವಾಗುವುದು' ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಡಾ. ಸತ್ಯನಾರಾಯಣ ಭಟ್ಟ ಹೇಳಿದರು. ದ್ರಾಕ್ಷಿ, ಕವಳಿ, ನೆಲ್ಲಿ, ದಾಳಿಂಬೆ, ಮುರುಗಲು ಹೇಗೆ ಆಯುರ್ವೇದದಲ್ಲಿ ಹಾರ್ಟ್ ಟಾನಿಕ್ ಸ್ಥಾನವನ್ನು ಪಡೆದುಕೊಂಡಿವೆಯೋ ಹಾಗೆಯೇ ಹಲಸು ಕೂಡ ಆರೋಗ್ಯ ವೃದ್ಧಿಯಲ್ಲಿ ಜಾಗ ಪಡೆದುಕೊಂಡಿದೆ. ಆದರೆ ಅಗ್ನಿಮಾಂದ್ಯ, ಪಿತ್ತ, ಗುಲ್ಮಾ, ಜೀರ್ಣ ಶಕ್ತಿ ಕಡಿಮೆ ಇರುವವರು ಹಲಸಿನ ಹಣ್ಣನ್ನು ಉಪಯೋಗಿಸಬಾರದು. ಹಲಸು ದೇಹಕ್ಕೆ ಕ್ಯಾನ್ಸರ್ ರೋಗ ನಿರೋಧಕ ಶಕ್ತಿಯನ್ನು ನೀಡಬಲ್ಲುದು. ಕಲಶಕ್ಕೆ ಹಲಸಿನ ಎಲೆ ಇಟ್ಟು ಅದರಲ್ಲಿರುವ ನೀರನ್ನು ತೀರ್ಥವಾಗಿ ಸ್ವೀಕರಿಸುವುದು ಕೂಡ ಆರೋಗ್ಯದ ದೃಷ್ಟಿಯನ್ನು ಹೊತ್ತಿದೆ. ಹಲಸಿನ ಎಲೆಯಿಂದ ಬರುವ ಹಾಲು ನೀರಿನೊಂದಿಗೆ ಬೆರೆತು ಅದು ಆರೋಗ್ಯಕ್ಕೆ ದಾರಿಯಾಗಲಿದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಅವರು ವಿವರಿಸಿದರು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡಿರುವ 2215 ಖಾಸಗಿ ಪ್ರಾಥಮಿಕ ಶಾಲೆಗಳು ಇನ್ನು ಮುಂದೆ ಕನ್ನಡ ಮಾಧ್ಯಮದಲ್ಲೇ ಬೋಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಆಜ್ಞಾಪಿಸಿತು. ನ್ಯಾಯಮೂರ್ತಿ ಎ.ಸಿ. ಕಬ್ಬಿಣ ಅವರು ಈ ಆದೇಶ ನೀಡಿದರು.

2007: ಒಂದು ನಿಮಿಷದಲ್ಲಿ ಮೇಕಪ್, ಹೇರ್ ಸ್ಟೈಲ್ ಇತ್ಯಾದಿ ಮಾಡಿ ಈಗಾಗಲೇ ಲಿಮ್ಕಾ ದಾಖಲೆ ಮಾಡಿರುವ `ಒನ್ ಮಿನಿಟ್ ಉಮಾ' ಎಂದೇ ಖ್ಯಾತಿ ಪಡೆದಿರುವ ಸೌಂದರ್ಯ ತಜ್ಞೆ ಉಮಾ ಜಯಕುಮಾರ್ ಅವರು ಈದಿನ ಬೆಂಗಳೂರು ಮಹಾಲಕ್ಷ್ಮಿಪುರಂ  ಕ್ಲಬ್ಬಿನಲ್ಲಿ ಮಂಜುಗಡ್ಡೆಯ ಮೇಲೆ ನಿಂತು ಒಂದು ನಿಮಿಷದಲ್ಲಿ ಕೇಶ ವಿನ್ಯಾಸ, ಮೇಕಪ್, ಮದುಮಗಳ ಸಿಂಗಾರ ಇತ್ಯಾದಿ ಹತ್ತಕ್ಕೂ ಹೆಚ್ಚು ಕಾರ್ಯಗಳನ್ನು ಮಾಡಿ ತಮ್ಮ ದಾಖಲೆಯನ್ನು ತಾವೇ ಮುರಿದರು.

2007: ಈ ಹಿಂದೆ ಒಂದು ಕೈಯಲ್ಲಿ 21 ಮೊಟ್ಟೆಗಳನ್ನು ಹಿಡಿದು ದಾಖಲೆ ಮಾಡಿದ್ದ ಮೈಸೂರಿನ ಎಂ.ಎಲ್. ಶಿವಕುಮಾರ್ (44) ಅವರು ತಮ್ಮ ಬಲಗೈಯಲ್ಲಿ 120 ಸೆಕೆಂಡುಗಳಲ್ಲಿ 23 ಕೋಳಿ ಮೊಟ್ಟೆಗಳನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಹಿಂದಿನ ದಾಖಲೆ ಮುರಿದರು.

2007: ಜಾಗತಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಭಾರತ ನಿರ್ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಗುರುತಿಸಿ ಇಲ್ಲಿಯ ನ್ಯೂ ಮೆಕ್ಸಿಕೊ ಟೆಕ್ ವಿಶ್ವ ವಿದ್ಯಾಲಯವು ಭಾರತದ ತಜ್ಞರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಚಿಂತಕರ ಚಾವಡಿಯೊಂದನ್ನು ಆರಂಭಿಸಿತು.

2007: ಶ್ರೀಲಂಕೆಯಲ್ಲಿ ಎಲ್ ಟಿ ಟಿ ಇ ಬಂಡುಕೋರರು ಉತ್ತರ ಜಾಫ್ನಾ ದ್ವೀಪದ ಬಳಿಕ ಸಣ್ಣ ದ್ವೀಪವೊಂದರ ಆಯಕಟ್ಟಿನ ನೌಕಾ ನೆಲೆ ಮೇಲೆ ದಾಳಿ ನಡೆಸಿದ್ದಲ್ಲದೆ  ಕೊಲಂಬೋ ಸಮೀಪ ಸೇನಾ ಬಸ್ಸನ್ನು ಸ್ಫೋಟಿಸಿದ ಪರಿಣಾಮವಾಗಿ 35 ಮಂದಿ ಹತರಾದರು. 

2006: ಭಾರತೀಯ ಗಡಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿ ಎಸ್.ಸಿ. ನೇಗಿ (56) ಅವರು ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

2006: ರಾಜ್ಯಸಭೆಯ ಮಾಜಿ ಸದಸ್ಯೆ ಜಯಾ ಬಚ್ಚನ್ ಅವರು ಉತ್ತರ ಪ್ರದೇಶ ಚಲನಚಿತ್ರ ಮಂಡಳಿಯ  (ಯು ಪಿ ಎಫ್ ಡಿ ಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಸಭಾ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಮಾರ್ಗ ಸುಗಮಗೊಳಿಸಿಕೊಂಡರು.

1968: ಕಲಾವಿದೆ ಶುಭ ಧನಂಜಯ ಜನನ.

1946: ಕಲಾವಿದೆ ಮರಿಗೆಮ್ಮ ಎಂ. ಜನನ.

1941: ಜರ್ಮನ್ ಸಮರನೌಕೆ ಬಿಸ್ಮಾರ್ಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗ್ರೀನ್ ಲ್ಯಾಂಡ್ ಕರಾವಳಿ ಸಮೀಪ ಬ್ರಿಟಿಷರ ಎಚ್ ಎಂಎಸ್ `ಹುಡ್' ನೌಕೆಯನ್ನು ಮುಳುಗಿಸಿತು. ನೌಕೆಯಲ್ಲಿದ್ದ 1421 ಮಂದಿಯ ಪೈಕಿ ಕೇವಲ 3 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.

1927: ಹಿರಿಯ ಮೃದಂಗ ವಿದ್ವಾಂಸರಲ್ಲೊಬ್ಬರಾದ ಎಂ.ಎಸ್. ರಾಮಯ್ಯ ಅವರು ತಬಲ ವಿದ್ವಾಂಸ ಸುಬ್ಬಣ್ಣ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.

1922: ಕಲಾವಿದ ರಾಮನರಸಯ್ಯ ಜನನ.

1905: ಕಲಾವಿದ ಹರ್ತಿಕೋಟೆ ಸುಬ್ಬಣ್ಣ ಜನನ.

1875: ಸರ್ ಸೈಯದ್ ಅಹಮದ್ ಖಾನ್ ಮತ್ತು ಅವರ ಮಗ ಸೈಯದ್ ಮಹಮೂದ್ ಆಲಿಘಡದಲ್ಲಿ ಮಹಮ್ಮಡನ್ ಆಂಗ್ಲೋ - ಓರಿಯಂಟಲ್ ಸ್ಕೂಲ್  ಸ್ಥಾಪಿಸಿದರು. 1920ರಲ್ಲಿ ಅದು ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವಾಯಿತು.

1844: ಸ್ಯಾಮ್ಯುಯೆಲ್ ಮೋರ್ಸ್, ಬಾಲ್ಟಿಮೋರಿನಿಂದ ವಾಷಿಂಗ್ಟನ್ನಿಗೆ ಟೆಲಿಗ್ರಾಫ್ ಸಂದೇಶವನ್ನು ಕಳುಹಿಸುವ ಮೂಲಕ ಅಮೆರಿಕದ ಮೊತ್ತ ಮೊದಲ ಟೆಲಿಗ್ರಾಫ್ ಲೈನ್ ಉದ್ಘಾಟಿಸಿದ. 

1819: ರಾಣಿ ವಿಕ್ಟೋರಿಯಾ ಜನ್ಮದಿನ. ವಿಕ್ಟೋರಿಯಾ (1819-1901) ಇಂಗ್ಲೆಂಡಿನ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬ ಖ್ಯಾತಿ ಪಡೆದ ವ್ಯಕ್ತಿ.

1686: ಡೇನಿಯಲ್ ಗ್ಯಾಬ್ರಿಯಲ್ ಫ್ಯಾರನ್ ಹೀಟ್ (1686-1736) ಜನ್ಮದಿನ. ಜರ್ಮನಿಯ ವೈದ್ಯನಾದ ಈತ  ಆಲ್ಕೋಹಾಲ್ ಥರ್ಮಾಮೀಟರ್, ಮರ್ಕ್ಯುರಿ ಥರ್ಮಾಮೀಟರ್ ಮುಂತಾದ ಉಷ್ಣಮಾಪಕಗಳನ್ನು ಸಂಶೋಧಿಸಿದ. ಈತ ಸಂಶೋಧಿಸಿದ ಉಷ್ಣಮಾಪಕಕ್ಕೆ ಈತನ ಹೆಸರನ್ನೇ ಇಟ್ಟು ಗೌರವಿಸಲಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement