Monday, June 22, 2009

ಇಂದಿನ ಇತಿಹಾಸ History Today ಜೂನ್ 20

ಇಂದಿನ ಇತಿಹಾಸ

ಜೂನ್ 20

ಕ್ರಿ.ಪೂ.1800ರಿಂದ 1500 ವರೆಗಿನ ಋಗ್ವೇದದ 30 ಹಸ್ತಪ್ರತಿಗಳು ಸೇರಿದಂತೆ ಒಟ್ಟು 38 ಪುರಾತನ ವಿಷಯಗಳನ್ನು ಯುನೆಸ್ಕೊ ತನ್ನ ಪರಂಪರೆ ಪಟ್ಟಿಯಲ್ಲಿ ಹೊಸದಾಗಿ ಸೇರಿಸಿತು. ಭವಿಷ್ಯದ ಪೀಳಿಗೆಗೆ ಪುರಾತನ ಸಂಸ್ಕೃತಿಯನ್ನು ಪರಿಚಯಿಸುವ ಕಾರಣಕ್ಕಾಗಿ ಇವನ್ನು ಸಂರಕ್ಷಿಸಲಾಗುತ್ತಿದೆ ಎಂದು ಯುನೆಸ್ಕೊ ಪ್ರಕಟನೆ ತಿಳಿಸಿತು . ವಿಶ್ವದ ಪಾರಂಪರಿಕ ಹಾಗೂ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಈ ಯೋಜನೆಯನ್ನು ವಿಶ್ವಸಂಸ್ಥೆಯು 1992ರಿಂದ ಆರಂಭಿಸಿತು.

2008: ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿಷೇಧಿತ ಉಲ್ಫಾ ಉಗ್ರಗಾಮಿ ಸಂಘಟನೆಗೆ (ಪಿಆರ್ಇಪಿಎಕೆ) ಸೇರಿದ ನಾಲ್ವರು ಉಗ್ರಗಾಮಿಗಳನ್ನು ಬಂಧಿಸಿದರು. ಮಣಿಪುರದ ತಲ್ಲಬೆ, ಜಾನಿ, ಜಿತನ್ಸಿಂಗ್ ಮತ್ತು ಮೇಘಚಂದರ್ ಬಂಧಿತರು. ಉಗ್ರರು ಕಗ್ಗದಾಸನಪುರದ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಪಿಆರ್ಇಪಿಎಕೆ ಸಂಘಟನೆಯನ್ನು 1970ರಲ್ಲಿಯೇ ಸರ್ಕಾರ ನಿಷೇಧಿಸಿತ್ತು.

2007: ಕ್ರಿ.ಪೂ.1800ರಿಂದ 1500 ವರೆಗಿನ ಋಗ್ವೇದದ 30 ಹಸ್ತಪ್ರತಿಗಳು ಸೇರಿದಂತೆ ಒಟ್ಟು 38 ಪುರಾತನ ವಿಷಯಗಳನ್ನು ಯುನೆಸ್ಕೊ ತನ್ನ ಪರಂಪರೆ ಪಟ್ಟಿಯಲ್ಲಿ ಹೊಸದಾಗಿ ಸೇರಿಸಿತು. ಭವಿಷ್ಯದ ಪೀಳಿಗೆಗೆ ಪುರಾತನ ಸಂಸ್ಕೃತಿಯನ್ನು ಪರಿಚಯಿಸುವ ಕಾರಣಕ್ಕಾಗಿ ಇವನ್ನು ಸಂರಕ್ಷಿಸಲಾಗುತ್ತಿದೆ ಎಂದು ಯುನೆಸ್ಕೊ ಪ್ರಕಟನೆ ತಿಳಿಸಿತು .ವಿಶ್ವದ ಮೊದಲ ಉದ್ದನೆಯ ಸಾಕ್ಷ್ಯಚಿತ್ರ ಸೇರಿದಂತೆ ಸ್ವೀಡಿಷ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಕುಟುಂಬ ಒಡೆತನದ ಪತ್ರಾಗಾರ ಹಾಗೂ ದಕ್ಷಿಣ ಆಫ್ರಿಕಾದ ವರ್ಣನೀತಿ ವಿರೋಧಿ ನಾಯಕ ನೆಲ್ಸನ್ ಮಂಡೇಲಾ ಅವರ ಸಾಧನೆಯನ್ನು ಕೂಡಾ ಯುನೆಸ್ಕೊ ಪರಂಪರೆ ಪಟ್ಟಿಯಲ್ಲಿ ಸೇರಿಸಿತು. ವಿಶ್ವಸಂಸ್ಥೆಯ ವೈಜ್ಞಾನಿಕ ಶಿಕ್ಷಣ ಮತ್ತು ಸಂಸ್ಕೃತಿ ವಿಭಾಗ ತಯಾರಿಸಿರುವ `ಮೆಮೋರಿ ಆಫ್ ದಿ ವರ್ಲ್ಡ್ ರಿಜಿಸ್ಟರ್' ಎನ್ನುವ ಯೋಜನೆಯಲ್ಲಿ ಈ ಪಾರಂಪರಿಕ ಪಟ್ಟಿ ಇದೆ. ಯುನೆಸ್ಕೊ ನಿರ್ದೇಶಕ ಕೂಚಿರೊ ಮತ್ ಸೂರಾ ಅವರು ಈ ಪಾರಂಪರಿಕ ಪಟ್ಟಿ ಕುರಿತು ಮಾಹಿತಿ ನೀಡಿದರು. ವಿಶ್ವದ ಪಾರಂಪರಿಕ ಹಾಗೂ ಪುರಾತನ ವಸ್ತುಗಳನ್ನು ಸಂರಕ್ಷಿಸುವ ಈ ಯೋಜನೆಯನ್ನು ವಿಶ್ವಸಂಸ್ಥೆಯು 1992ರಿಂದ ಆರಂಭಿಸಿತು. ಈ ಬಾರಿ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ `ದಿ ಸ್ಟೋರಿ ಆಫ್ ಕೆಲ್ಲಿ ಗ್ಯಾಂಗ್' ಎಂಬ ವಿಶ್ವದ ಮೊದಲ ಸಾಕ್ಷ್ಯ ಚಿತ್ರ (1906), 1840ರಿಂದ 1900ರವರೆಗೆ ಇದ್ದ ನೊಬೆಲ್ ಕುಟುಂಬದ ಪುರಾತನ ಪತ್ರಾಗಾರ ಹಾಗೂ ಸ್ವೀಡಿಷ್ ಚಲನಚಿತ್ರ ನಿರ್ದೇಶಕ ಇನ್ಗ್ ಮರ್ ಬರ್ಗ್ ಮನ್ ಮತ್ತು 1914ರಿಂದ 1923ರವರೆಗಿನ ರೆಡ್ ಕ್ರಾಸ್ ಸಂಸ್ಥೆಯ ದಾಖಲೆಗಳನ್ನು ಸಂರಕ್ಷಿಸಿಡುವ ಕಾರ್ಯವನ್ನು ಹಮ್ಮಿಕೊಂಡಿತ್ತು. ದಕ್ಷಿಣ ಕೊರಿಯಾದ ಕಾಯಾ ಪರ್ವತದಲ್ಲಿ ಸಂರಕ್ಷಿಸಿರುವ 1237ರಿಂದ 1248ವರೆಗಿನ 81,258 ಮರದ ಕೆತ್ತನೆಗಳ ಸಂಗ್ರಹ ಕೂಡಾ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದು ಬುದ್ಧನ ಕುರಿತಾದ ಸಂಪೂರ್ಣ ಪಠ್ಯವನ್ನು ಹೊಂದಿದೆ ಎಂಬ ನಂಬಿಕೆ ಇದೆ. ಕೆನಡಾವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ 1670ರ ಹಡ್ಸನ್ನಿನ ಬೇ ಕಂಪನಿ, ಮಧ್ಯ ವಿಶ್ವದ ಅಪರೂಪದ ಭೂಪಟ ಕೂಡಾ ಯುನೆಸ್ಕೊ ಪರಂಪರೆಯ ಹೊಸ ಪಟ್ಟಿಯಲ್ಲಿ ಸ್ಥಾನ ಪಡೆದವು.

2007: ಆಂಧ್ರ ಪ್ರದೇಶದ ಸರ್ಕಾರ ಮುಸ್ಲಿಮರಿಗೆ ಜಾತಿ ಆಧಾರದ ಮೇಲೆ ಶಿಕ್ಷಣ ಹಾಗೂ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡಲು ಉದ್ದೇಶಿಸಿರುವುದನ್ನು ವಿರೋಧಿಸಿ ಮುಸ್ಲಿಂ ಸಂಯುಕ್ತ ಕ್ರಿಯಾ ಸಮಿತಿ ಹಾಗೂ ಕೆಲ ಮುಸ್ಲಿಂ ಧಾರ್ಮಿಕ ಸಂಘಟನೆಗಳು `ಫತ್ವಾ' ಹೊರಡಿಸಿದವು. ತಮ್ಮ ಜನಾಂಗವನ್ನು ಮೇಲುಸ್ತರಕ್ಕೆ ತರಲು ಜಾತಿ ಆಧಾರದ ಮೇಲೆ ಮೀಸಲು ಕಲ್ಪಿಸುವುದರಿಂದ ಸಾದ್ಯ ಎನ್ನುವುದು ಹುಚ್ಚು ಸಾಹಸ. ಈ ರೀತಿ ಮೀಸಲಾತಿ ಪಡೆಯುವುದು ಇಸ್ಲಾಂ ಧರ್ಮಕ್ಕೆ ವಿರೋಧವಾದುದು ಎಂದು ಆಲ್ ಇಂಡಿಯಾ ಮಜ್ಲೀಸ್ - ಎ- ಇತ್ತೆಹಾದುಲ್ ಮುಸ್ಲಿಮೀನ್ ವಕ್ತಾರ ಹಾಗೂ ಸಂಸದ ಅಸಾದ್ದುದೀನ್ ಒವಾಸಿ ಸ್ಪಷ್ಟಪಡಿಸಿದರು.

2007: ರಾಜ್ಯಸಭೆಯ ಮಾಜಿ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ ಅವರಿಗೆ 2007ನೇ ಸಾಲಿನ `ವೀರಾಂಗನ ಸಮ್ಮಾನ್' ಪ್ರಶಸ್ತಿ ಲಭಿಸಿತು. ನಜ್ಮಾ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಯಿತು. ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಮಧ್ಯಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಲಕ್ಷ್ಮೀಬಾಯಿ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಜ್ಮಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮ ಚಂದ್ರಶೇಖರ್ ಆಜಾದ್ ಸ್ಮರಣಾರ್ಥ ನೀಡಲಾಗುವ ಪ್ರಶಸ್ತಿಯನ್ನು ಛತ್ತೀಸಗಢದ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಕೇಂದ್ರಕ್ಕೆ ಪ್ರದಾನ ಮಾಡಲಾಯಿತು. ಬುಡಕಟ್ಟು ಜನರ ಶಿಕ್ಷಣ, ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ಉನ್ನತೀಕರಣಕ್ಕೆ ಸಲ್ಲಿಸಿದ ಸೇವೆಗಾಗಿ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮಕ್ಕೆ ಈ ಪ್ರಶಸ್ತಿ ದೊರಕಿತು. ಈ ಪ್ರಶಸ್ತಿಯು ಒಂದೂವರೆ ಲಕ್ಷ ರೂ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

2007: ಪತ್ನಿ ಮತ್ತು ತನ್ನ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ ಮಧ್ಯ ಪ್ರದೇಶದ ವಿಜೇಂದ್ರ ಸಿಂಗ್ ಗೆ ದಿವಾಸ್ ಸೆಷನ್ಸ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿತು. ಈತ 2005ರ ಫೆಬ್ರುವರಿ 27ರಂದು ಹರಿತವಾದ ಆಯುಧ ಬಳಸಿ ಪತ್ನಿ ಹಾಗೂ ಮೂವರು ಮಕ್ಕಳನ್ನು ಹತ್ಯೆ ಮಾಡಿದ್ದ.

2007: 1975ರ ಹಿಟ್ ಚಿತ್ರ `ಜೈ ಸಂತೋಷಿ ಮಾ'ದಲ್ಲಿ ಸಂತೋಷಿ ಮಾ ಪಾತ್ರ ವಹಿಸಿದ್ದ ಅನಿತಾ ಗುಹಾ (70) ಅವರು ಹೃದಯಾಘಾತದಿಂದ ಮುಂಬೈಯಲ್ಲಿ ನಿಧನರಾದರು. ಪಶ್ಚಿಮ ಬಂಗಾಳದಿಂದ ಅವಕಾಶ ಅರಸಿ ಮುಂಬೈಗೆ ಬಂದ ಅನಿತಾ ಪೂರ್ಣಿಮಾ, ಪ್ಯಾರ್ ಕೀ ರಾಹೇ, ಗೇಟ್ ವೇ ಆಫ್ ಇಂಡಿಯಾ, ಸಂಜೋಗ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು. ಸಂಪೂರ್ಣ ರಾಮಾಯಣ ಚಿತ್ರದಲ್ಲಿ ಅನಿತಾ ಅವರು ಸೀತೆಯ ಪಾತ್ರ ನಿರ್ವಹಿಸಿದ್ದರು.

2007: ಬ್ರಿಟನ್ ಸಂಸತ್ತಿನ ಅತಿ ಹಿರಿಯ ಸದಸ್ಯ ಭಾರತೀಯ ಮೂಲದ ಪಿಯಾರ ಸಿಂಗ್ ಖಾಬ್ರಾ (82) ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು. ಪಂಜಾಬಿನ ಕಹರ್ಪುರದಲ್ಲಿ ಜನಿಸಿದ್ದ ಖಾಬ್ರಾ 1959ರಲ್ಲಿ ಬ್ರಿಟನ್ನಿಗೆ ವಲಸೆ ಹೋಗಿದ್ದರು. ಅಲ್ಲಿ ಶಿಕ್ಷಕನಾಗಿ ಜೀವನ ಆರಂಬಿಸಿದ್ದ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, 1992ರಲ್ಲಿ ಲೇಬರ್ ಪಕ್ಷದಿಂದ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದರು.

2007: ಮೂರು ತಿಂಗಳ ಹಿಂದೆ 10ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ತಮ್ಮ ಪುತ್ರ ಧಿಲೀಪನ್ ರಾಜ್ ಚೆನ್ನೈಗೆ ಸಮೀಪದ ಮನಪ್ಪರೈಯ ಖಾಸಗಿ `ಮತಿ ಸರ್ಜಿಕಲ್ ಹಾಗೂ ಮೆಟರ್ನಿಟಿ ಆಸ್ಪತೆ'ಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ವಿಶ್ವದಾಖಲೆ ಸ್ಥಾಪಿಸಿದ್ದನ್ನು ಬಹಿರಂಗ ಪಡಿಸಿದ ಆತನ ತಂದೆ ಡಾ. ಮುರುಗೇಶನ್ ಇದನ್ನು ಸಾಬೀತು ಪಡಿಸುವ ಸಿಡಿ ಪ್ರದರ್ಶಿಸಿ ಸಹೋದ್ಯೋಗಿಗಳನ್ನು ಅಚ್ಚರಿಯಲ್ಲಿ ಕೆಡವಿದರು. ತಂದೆ ಮುರುಗೇಶನ್ ಹಾಗೂ ತಾಯಿ ಗಾಂಧಿಮತಿ ಮೇಲ್ವಿಚಾರಣೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿತ್ತು.

2006: ಭಾರತ - ಪಾಕ್ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಪೂಂಚ್ ಮತ್ತು ಪಾಕಿಸ್ತಾನದ ರಾವಲ್ ಕೋಟ್ ನಡುವೆ ಮತ್ತೊಂದು ಬಸ್ ಸೇವೆಯನ್ನು ಈದಿನ ಆರಂಭಿಸಲಾಯಿತು.

1996: `ವಿಶ್ವದಲ್ಲಿ ಪರಮಾಣು ಅಸ್ತ್ರ ಪರೀಕ್ಷೆ ನಿಷೇಧ' ಕುರಿತ ಜಿನೀವಾ ಸಮ್ಮೇಳನದಲ್ಲಿ ಸಿಟಿಬಿಟಿಗೆ ಸಹಿ ಹಾಕದೇ ಇರಲು ಭಾರತವು ತೀರ್ಮಾನಿಸಿತು.

1987: ಪ್ರಸಿದ್ಧ ಪಕ್ಷಿ ಶಾಸ್ತ್ರಜ್ಞ ಸಲೀಂ ಅಲಿ ನಿಧನರಾದರು.

1976: ಭಾರತೀಯ ಕ್ರಿಕೆಟಿಗ ದೇಬಸಿಸ್ ಮೊಹಂತಿ ಜನನ.

1960: ಫ್ಲಾಯ್ಡ್ ಪ್ಯಾಟರ್ಸನ್ ಅವರು ಇಂಗ್ಮಾರ್ ಜಾನ್ಸನ್ ಅವರನ್ನು ಸೋಲಿಸುವ ಮೂಲಕ ಜಾಗತಿಕ ಹೆವಿವೇಯ್ಟ್ ಬಾಕ್ಸಿಂಗ್ ಪ್ರಶಸ್ತಿಯನ್ನು ಮತ್ತೆ ಪಡೆದುಕೊಂಡ ಜಗತ್ತಿನ ಮೊತ್ತ ಮೊದಲ ಬಾಕ್ಸರ್ ಎನಿಸಿಕೊಂಡರು.

1954: ಸಾಹಿತಿ ಬಸವರಾಜ ಸಬರದ ಅವರು ಬಸಪ್ಪ ಸಬರದ- ಬಸಮ್ಮ ದಂಪತಿಯ ಮಗನಾಗಿ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಈ ದಿನ ಜನಿಸಿದರು.

1952: ಇಂಗ್ಲಿಷ್ ಸಾಹಿತ್ಯದಲ್ಲೇ ಬೃಹತ್ ಕಾದಂಬರಿ `ಎ ಸ್ಯುಟೇಬಲ್ ಬಾಯ್' ಎಂಬ ಕೃತಿ ನೀಡಿದ ಭಾರತೀಯ ಕಾದಂಬರಿಕಾರ ವಿಕ್ರಮ್ ಸೇಠ್ ಅವರು ಈದಿನ ಕೋಲ್ಕತ್ತಾದಲ್ಲಿ (ಅಂದಿನ ಕಲ್ಕತ್ತಾ) ಜನಿಸಿದರು.

1952: ಶಾಸ್ತ್ರೀಯ, ಸುಗಮ ಸಂಗೀತ ಎರಡರಲ್ಲೂ ಪ್ರಾವೀಣ್ಯ ಗಳಿಸಿದ್ದ ಪ್ರತಿಭಾನ್ವಿತ ಗಾಯಕ ಮತ್ತೂರು ಲಕ್ಷ್ಮೀ ಕೇಶವ ಅವರು ಕೆ. ಸೂರ್ಯ ನಾರಾಯಣ ಅವಧಾನಿ- ಸುಂದರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಜನಿಸಿದರು.

1926: ಕಲಾವಿದ ಮಲ್ಪೆ ರಾಮದಾಸ ಸಾಮಗ ಜನನ.

1897: ಮುಂಬೈಯಲ್ಲಿ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ ಕೇಂದ್ರ ಕಚೇರಿಗೆ `ವಿಕ್ಟೋರಿಯಾ ಟರ್ಮಿನಸ್' ಎಂದು ಹೆಸರಿಡಲಾಯಿತು. ಇಂಗ್ಲೆಂಡಿನ ರಾಣಿ ವಿಕ್ಟೋರಿಯಾ ಅವರ ರಾಜ್ಯಭಾರದ ಸ್ವರ್ಣಮಹೋತ್ಸವದ ನೆನಪಿಗಾಗಿ ಈ ಕ್ರಮ ಕೈಗೊಳ್ಳಲಾಯಿತು. 99 ವರ್ಷಗಳ ಬಳಿಕ 1996ರಲ್ಲಿ ಈ ಟರ್ಮಿನಸ್ ಗೆ `ಛತ್ರಪತಿ ಶಿವಾಜಿ ಟರ್ಮಿನಸ್' ಎಂದು ಮರುನಾಮಕರಣ ಮಾಡಲಾಯಿತು.

1789: ಫ್ರೆಂಚ್ ಕ್ರಾಂತಿಯ ಮಹತ್ವದ ಘಟನೆಯಾಗಿ ನ್ಯಾಷನಲ್ ಅಸೆಂಬ್ಲಿ ತನ್ನ ಎಂದಿನ ಸಮಾವೇಶ ತಾಣಕ್ಕೆ ಬದಲಾಗಿ ಪ್ಯಾರಿಸಿನ ಟೆನಿಸ್ ಕೋರ್ಟ್ ಒಂದರಲ್ಲಿ ಸಮಾವೇಶಗೊಂಡಿತು. ಫ್ರಾನ್ಸಿಗೆ ಸಂವಿಧಾನ ನೀಡುವವರೆಗೆ ಅಲ್ಲಿಂದ ಕದಲುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಈ ಸಮಾವೇಶ ಮಾಡಿತು. ಈ ಪ್ರತಿಜ್ಞೆ `ಟೆನಿಸ್ ಕೋರ್ಟ್ ಪ್ರತಿಜ್ಞೆ' ಎಂದೇ ಖ್ಯಾತಿ ಪಡೆದಿದೆ.

1756: ಬಂಗಾಳದ ನವಾಬ ಸಿರಾಜ್- ಉದ್- ದೌಲನ ಆಜ್ಞೆಯಂತೆ ಸೆರೆಹಿಡಿಯಲಾದ 146 ಮಂದಿ ಬ್ರಿಟಿಷ್ ಕಾವಲುಪಡೆ ಸೈನಿಕರನ್ನು 18 ಅಡಿ ಉದ್ದ 15 ಅಡಿ ಅಗಲದ ಸುರಂಗದಲ್ಲಿ ಕೂಡಿ ಹಾಕಲಾಯಿತು. ಅವರಲ್ಲಿ 23 ಮಂದಿ ಮಾತ್ರ ಬದುಕಿ ಉಳಿದರು. ಈ ಘಟನೆ `ಬ್ಲ್ಯಾಕ್ ಹೋಲ್ ಆಫ್ ಕಲ್ಕತ್ತ ಅಟ್ರೋಸಿಟಿ' ಎಂದೇ ಖ್ಯಾತವಾಗಿದೆ. ನಂತರ ನಡೆದ ಸಂಶೋಧನೆಗಳಲ್ಲಿ ಈ ಸುರಂಗಕ್ಕೆ ತಳ್ಳಲಾದವರ ಸಂಖ್ಯೆ 64 ಮಾತ್ರ ಹಾಗೂ ಅವರಲ್ಲಿ ಬದುಕಿ ಉಳಿದವರ ಸಂಖ್ಯೆ 21 ಎಂದು ತಿಳಿದುಬಂತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement