My Blog List

Sunday, October 18, 2009

ಭೂಮಿಗೆ ಮರುಚೈತನ್ಯ: 'ಜೀವಾಮೃತ' ಬಳಕೆಗೆ ಆಗ್ರಹ

ನೆರೆ ಪೀಡಿತ ಪ್ರದೇಶಗಳಲ್ಲಿ ಬಳಕೆಗೆ ಆಗ್ರಹ

ಭೂಮಿ ಮರುಚೈತನ್ಯಕ್ಕೆ 'ಜೀವಾಮೃತ'

appeal-to-achrya-large


ಬೆಂಗಳೂರು: ಗೋವಂಶ ಸಂರಕ್ಷಣೆಗಾಗಿ ಗೋ ಹತ್ಯೆ ನಿಷೇಧದ ಜೊತೆಗೇ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೊಲ, ತೋಟಗಳಿಗೆ ಗೋವುಗಳ ಸೆಗಣಿ ಹಾಗೂ ಗೋ ಮೂತ್ರ ಬಳಸಿ ತಯಾರಿಸಲಾದ 'ಜೀವಾಮೃತ' ಸಿಂಪಡಿಸುವ ಮೂಲಕ ನೆರೆಯಿಂದಾಗಿ ಹಾಳು ಬಿದ್ದಿರುವ ಕೃಷಿಭೂಮಿಗೆ ಮರು ಚೈತನ್ಯ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ನಾಗರಿಕರ ನಿಯೋಗವೊಂದು ಅಕ್ಟೋಬರ್ 16ರಂದು (ಶುಕ್ರವಾರ) ಸರ್ಕಾರವನ್ನು ಒತ್ತಾಯಿಸಿತು.

ಸರ್ವಜ್ಞ ನಗರ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳ ಸುಮಾರು 30 ಸಹಸ್ರ ಜನರ ಸಹಿಗಳನ್ನು ಒಳಗೊಂಡ ಮನವಿ ಪತ್ರವೊಂದನ್ನು ಸಾರ್ವಜನಿಕ ನಿಯೋಗವು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರ ಮೂಲಕವಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ಮಾರಪ್ಪ ಅಲಸೂರು, ತಿಮ್ಮೇ ಗೌಡ, ಗೋವಿಂದರಾವ್, ಡಾ. ರಾಜಾರಾಮ್ ಪ್ರಸಾದ್, ಕಮಲಾ, ಮುನಿರಾಜು, ವರ್ಧಮಾನ ಜೈನ್, ಮುನಿರಾಜ್ ಕಾರ್ಣಿಕ್ ಮತ್ತಿತರ ಪ್ರಮುಖರು ನಿಯೋಗದಲ್ಲಿದ್ದರು.

ರಾಜ್ಯದೆಲ್ಲೆಡೆಯಿಂದ ಗೋಮೂತ್ರ, ಸೆಗಣಿಯನ್ನು ದಾನಿಗಳಿಂದ ಸಂಗ್ರಹಿಸಿ ಇಲ್ಲವೇ ಖರೀದಿಸಿ ನೆರೆ ಪೀಡಿತ ಪ್ರದೇಶಗಳಲ್ಲೇ ಅದನ್ನು 'ಜೀವಾಮೃತ'ವಾಗಿ ಪರಿವರ್ತಿಸಿ ಭೂಮಿಗೆ ನಿಯಮಿತವಾಗಿ ಸಿಂಪಡಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು.

ಗೋ ಆಧಾರಿತ ಕೃಷಿಗೆ ಒತ್ತು ನೀಡಿ ಭೂಮಿಗೆ ಜೀವಾಮೃತ ಉಣಿಸುವುದರಿಂದ, ನೀರು ನಿಂತು ಸವುಳಾಗಿರುವ ಭೂಮಿಯನ್ನು ಮತ್ತೆ ಫಲವತ್ತಾಗಿಸಿ ಮುಂದಿನ ವ್ಯವಸಾಯದ ವೇಳೆಗೆ ಭೂಮಿಯಲ್ಲಿ ಉತ್ತಮ ಬೆಳೆ ಪಡೆಯಲು ರೈತರಿಗೆ ನೆರವಾಗಬಹುದು. ರಸಗೊಬ್ಬರ ಸುರಿದು ಭೂಮಿ ಇನ್ನಷ್ಟು ಬಂಜರಾಗದಂತೆ ತಡೆಯಬಹುದು, ರೋಜಗಾರ್ ಯೋಜನೆಯ ಅಡಿಯಲ್ಲಿ ಈ ಕಾರ್ಯ ಕೈಗತ್ತಿಕೊಳ್ಳುವ ಮೂಲಕ ಸಂತ್ರಸ್ಥರಲ್ಲಿ ಒಂದಷ್ಟು ಜನರಿಗೆ ನೌಕರಿ ಒದಗಿಸಿ ಜೀವನೋಪಾಯ ಕಲ್ಪಿಸಬಹುದು ಎಂದು ಮನವಿ ಪತ್ರ ಹೇಳಿತು.

ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದರಿಂದ ರೈತರ ಕೃಷಿ ವೆಚ್ಚ ಇಳಿಯುವುದರ ಜೊತೆಗೆ ಗೋವುಗಳ ಸೆಗಣಿ, ಗೋಮೂತ್ರಕ್ಕೆ ಬೆಲೆ ಬಂದು ಗೋವುಗಳು ಕಸಾಯಿಖಾನೆಯತ್ತ ಸಾಗುವುದು ತಪ್ಪುತ್ತದೆ. ಭೂ ಚೈತನ್ಯ ವರ್ಧನೆ, ಕೃಷಿಗೆ ಬಲ ಬರುವುದರೊಂದಿಗೆ ಗೋ ವಂಶ ಸಂರಕ್ಷಣೆಗೂ ಒತ್ತು ಸಿಗುತ್ತದೆ ಎಂದೂ ಮನವಿ ಪತ್ರ ಪ್ರತಿಪಾದಿಸಿತು.

ಮನವಿ ಸ್ವೀಕರಿಸಿದ ಗೃಹ ಸಚಿವರು, ಗೋ ಸಂರಕ್ಷಣೆ ನಿಟ್ಟಿನಲ್ಲಿ ಕರಡು ಮಸೂದೆಯನ್ನು ತಯಾರಿಸಲಾಗಿದ್ದು ಶೀಘ್ರದಲ್ಲೇ ಅದರ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Click the Image Link above to see Reports in Prajavani and Vijaya Karnataka

No comments:

Advertisement