My Blog List

Monday, October 19, 2009

ಇಂದಿನ ಇತಿಹಾಸ History Today ಅಕ್ಟೋಬರ್ 19

ಇಂದಿನ ಇತಿಹಾಸ

ಅಕ್ಟೋಬರ್ 19


ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ಸ್ಥಾಪನೆಯ ಬೇಡಿಕೆ ಈಡೇರಿಕೆಗಾಗಿ ಶ್ರೀರಾಮುಲು ಪೊಟ್ಟಿ ತಮ್ಮ ಆಮರಣ ನಿರಶನ ಆರಂಭಿಸಿದರು. ಅವರ ನಿರಶನ 58 ದಿನಗಳ ಕಾಲ ನಡೆದು ಅವರ ಸಾವಿನೊಂದಿಗೆ ಪರ್ಯವಸಾನಗೊಂಡಿತು.

2014: ನವದೆಹಲಿ: ಮಹಾರಾಷ್ಟ್ರದಲ್ಲಿ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ದಕ್ಷಿಣ ಕರಾಡ್ ಕ್ಷೇತ್ರದಲ್ಲಿ ವಿಜಯಗಳಿಸಿದರು. ಘೊಟ್ಕೊಪಾರ್ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ಪ್ರಕಾಶ ಮೆಹ್ತಾ ಆರನೇ ಬಾರಿಗೆ 40,141 ಮತಗಳ ಭಾರಿ ಅಂತರದಲ್ಲಿ ಜಯಗಳಿಸಿದರು.


2014: ನವದೆಹಲಿ: ಹರ್ಯಾಣ ವಿಧಾನಸಭೆಯಲ್ಲಿ ಪ್ರಚಂಡ ಬಹುಮತ ಸಾಧಿಸಿ ಸ್ವಂತಬಲದಲ್ಲಿ ಇದೇ ಪ್ರಥಮ ಬಾರಿಗೆ ಸರ್ಕಾರ ರಚನೆಗೆ ಸಜ್ಜಾದ ಬಿಜೆಪಿ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತ್ರ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿ, ಸರ್ಕಾರ ರಚನೆಗೆ ಶಿವಸೇನೆ ಇಲ್ಲವೇ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್​ಸಿಪಿ) ಕೈ ಹಿಡಿಯಬೇಕಾದ ಪರಿಸ್ಥಿತಿ ಬಂದಿತು. ಚುನಾವಣಾ ಫಲಿತಾಂಶಗಳ ಹಿನ್ನೆಲೆಯಲ್ಲಿ ಮುಂದಿನ ಆಯ್ಕೆಗಳ ಬಗ್ಗೆ ರ್ಚಚಿಸಲು ಬಿಜೆಪಿ ಸಂಸದೀಯ ಮಂಡಳಿಯ ಸಭೆ ಸಂಜೆ ಸಭೆ ಸೇರಿತು. ಎನ್​ಪಿಸಿ ಅಚ್ಚರಿಯ ನಿಲುವು ತೆಗೆದುಕೊಂಡು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿತು. ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಧೀರ್ಘಕಾಲದಿಂದ ಮಿತ್ರಪಕ್ಷವಾಗಿದ್ದ ಶಿವಸೇನೆಯ ಜೊತೆ ಮೈತ್ರಿ ಮುಂದುವರೆಸುವ ಆಶಯ ವ್ಯಕ್ತ ಪಡಿಸಿದರೆ, ಪಕ್ಷಾಧ್ಯಕ್ಷ ಅಮಿತ್ ಷಾ ಅವರು ಬಿಜೆಪಿಯ ಎಂದೂ ಶಿವಸೇನೆ ಜೊತೆಗಿನ ಬಾಂಧವ್ಯ ಇಲ್ಲವೇ ಮೈತ್ರಿ ಮುರಿಯಲು ಯತ್ನಿಸಿದ್ದೇ ಇಲ್ಲ. ಕೆಲವೇ ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಶ್ನೆ ಬಗೆಹರಿಯಲಿದೆ ಎಂದು ಹೇಳಿದರು. 90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಗಳಿಸಿತು. ಲೋಕದಳವು (ಐಎನ್​ಎಲ್​ಡಿ) 20 ಸ್ಥಾನ ಗಳಿಸಿತು. ಅಧಿಕಾರಾರೂಢ ಕಾಂಗ್ರೆಸ್ ಕೇವಲ 15 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು. ಎಚ್​ಎಲ್​ಪಿ ಖಾತೆ ತೆರೆಯುವಲ್ಲಿ ವಿಫಲಗೊಂಡರೆ, ಇತರರು 7 ಕ್ಷೇತ್ರಗಳನ್ನು ಗೆದ್ದುಕೊಂಡರು. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 123 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 43, ಶಿವಸೇನೆ 59, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ -ಎನ್ ಸಿಪಿ 42 ಸ್ಥಾನಗಳನ್ನು ಗೆದ್ದುಕೊಂಡಿತು.

2014:  ನವದೆಹಲಿಐತಿಹಾಸಿಕ ಫಲಿತಾಂಶ.! ಬಿಜೆಪಿಗೆ ಇದು ಅಮಿತ ಸಂತಸ ಮತ್ತು ಅಪಾರ ಹೆಮ್ಮೆಯ 
ವಿಷಯಕಾರ್ಯಕರ್ತರಿಗೆ ಅವರ ಅವಿರತ ಪ್ರಯತ್ನಗಳಿಗಾಗಿ ನಮಿಸುತ್ತೇನೆಇದೀಗ ತಾನೇ ಟ್ವಿಟ್ವರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು  ಸಂದೇಶವನ್ನು ಟ್ವೀಟ್ ಮಾಡಿದರು.
2014: ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗೆಸ್ ಪಕ್ಷದ ದಯನೀಯ ಸೋಲಿನ ಹಿನೆಲೆಯಲ್ಲಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಅವರು ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಸಲ್ಲಿಸಿದರು. 90 ಸದಸ್ಯಬಲದ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ರಾಜ್ಯ ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಗಳಿಸಿದರೆ, ಆಡಳಿತಾರೂಢ ಕಾಂಗ್ರೆಸ್ ದಯನೀಯ ಸೋಲು ಅನುಭವಿಸಿ ಧೂಳೀಪಟಗೊಂಡಿತು.


2014: ನವದೆಹಲಿ: ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಸಾಧಿಸಿದ ಯಶಸ್ಸಿಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯನ್ನು ಅಭಿನಂದಿಸಿದರು. ಪಕ್ಷದ ಪರಾಭವವನ್ನು ಒಪ್ಪಿಕೊಂಡ ಅವರು ಜನತೆ ಬದಲಾವಣೆಗಾಗಿ ಮತ ನೀಡಿದ್ದಾರೆ ಎಂದು ಹೇಳಿದರು. 'ಕಾಂಗ್ರೆಸ್ ಪಕ್ಷವು ಈ ಎರಡೂ ರಾಜ್ಯಗಳಲ್ಲಿ ರಚನಾತ್ಮಕ ಹಾಗೂ ಸದಾ ಜಾಗೃತಿಯ ಪಾತ್ರ ವಹಿಸುವುದು' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು. ಉಭಯ ರಾಜ್ಯಗಳಲ್ಲಿ ಕಾಂಗ್ರೆಸ್ ಪರಾಭವ ಖಚಿತವಾಗುತ್ತಿದ್ದಂತೆಯೇ ಹಲವಡೆಗಳಲ್ಲಿ ಪಕ್ಷದ ಕಾರ್ಯಕರ್ತರು ನಾಯಕತ್ವದ ಮುಂಚೂಣಿಗೆ ಬರುವಂತೆ ಪ್ರಿಯಾಂಕಾ ವಾದ್ರಾ ಅವರನ್ನು ಆಗ್ರಹಿಸಿದರು.

2014: ಚಂಡೀಗಢ: ಕೇಂದ್ರ ಸಚಿವ ಸುಷ್ಮಾ ಸ್ವರಾಜ್ ಅವರ ಕಿರಿಯ ಸಹೋದರಿ, ಬಿಜೆಪಿ ಅಭ್ಯರ್ಥಿ ವಂದನಾ ಶರ್ಮಾ ಅವರು ಹರ್ಯಾಣದ ಸಫಿಡೊನ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಸ್ಬೀರ್ ದೇಸ್ವಾಲ್ ಅವರಿಂದ ಪರಾಜಿತರಾದರು. ಜಸ್ಬೀರ್ ಅವರು ವಂದನಾ ಶರ್ಮಾ ಅವರನ್ನು 1,422 ಮತಗಳ ಅಂತರದಲ್ಲಿ ಪರಾಭವಗೊಳಿಸಿದರು. ಇದಕ್ಕೆ ಮೊದಲು ಬಂದ ವರದಿ ವಂದನಾ ಶರ್ಮಾ ಅವರು ಕೇವಲ 135 ಮತಗಳ ಅಂತರದಲ್ಲಿ ವಿಜಯ ಗಳಿಸಿದ್ದಾರೆ ಎಂದು ಹೇಳಿತ್ತು.
2014: ನವದೆಹಲಿ: ಹರ್ಯಾಣದ ಸೋನೆಪತ್ ಜಿಲ್ಲೆಯ ರಾಯ್ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ 62ರ ಹರೆಯದ ಜಯ ತೀರ್ಥ ಅವರು ಕೇವಲ 3 ಮತಗಳ ಅಂತರದಲ್ಲಿ ವಿಜಯ ಗಳಿಸಿದರು. ಜಯತೀರ್ಥ ಅವರು 36,703 ಮತಗಳನ್ನು ಗಳಿಸಿದರೆ, ಅವರ ಸಮೀಪ ಸ್ಪರ್ಧಿ 68ರ ಹರೆಯದ ಇಂಡಿಯನ್ ನ್ಯಾಷನಲ್ ಲೋಕದಳ ಅಭ್ಯರ್ಥಿ ಇಂದರ್​ಜೀತ್ ದಹಿಯಾ 36,700 ಮತ ಗಳಿಸಿದರು. 34,523 ಮತ ಗಳಿಸಿದ ಬಿಜೆಪಿಯ ಕೃಷ್ಣ ಗಹ್ಲಾವತ್ ಮೂರನೇ ಸ್ಥಾನಕ್ಕೆ ಇಳಿದರು.

2014: ನವದೆಹಲಿ: 'ನಾವು ಶಿವಸೇನೆಯೊಂದಿಗಿನ ಬಾಂಧವ್ಯ ಅಥವಾ ಮೈತ್ರಿ ಮುರಿಯಲು ಎಂದೂ
ಪ್ರಯತ್ನಿಸಿಲ್ಲ. ಇನ್ನು ಕೆಲವೇ ಗಂಟೆ ಕಾಯಿರಿ. ಎಲ್ಲವೂ ಸ್ಪಷ್ಟವಾಗುತ್ತದೆ' ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸಂಜೆ ಹೇಳಿದರು. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡುವ ಸಂಬಂಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು 'ಮೋದಿ ಅಲೆ ಮುಂದುವರೆದಿದೆ. ವಿರೋಧಿಗಳಿಗೆ ಅದು ಸುನಾಮಿಯಂತೆ ಅಪ್ಪಳಿಸಲಿದೆ' ಎಂದು ನುಡಿದರು. 'ನಮ್ಮ ಯೋಗ್ಯತೆಯನ್ನು ನಾವು ಹರ್ಯಾಣ ಮತ್ತು ಮಹಾರಾಷ್ಟ್ರದ ಜನತೆಗೆ ಸಾಬೀತು ಮಾಡಿ ತೋರಿಸುತ್ತೇವೆ. ಇದು ಸಾರ್ವಜನಿಕರ ಮತ್ತು ಭಾಗಶಃ ಕಾರ್ಯಕರ್ತರ ವಿಜಯ' ಎಂದು ಅವರು ಹೇಳಿದರು. 'ಹರ್ಯಾಣ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಸರ್ಕಾರ ನೀಡಬೇಕಾದ್ದು ನಮ್ಮ ಹೊಣೆಗಾರಿಕೆ. ಈ ಜನಾದೇಶವು ಜನರು ನರೇಂದ್ರ ಮೋದಿ ಅವರಲ್ಲಿ ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ' ಎಂದು ಅವರು ನುಡಿದರು. ಈ ಮಧ್ಯೆ ಹರ್ಯಾಣದ ಸಚಿವ ಕಿರಣ್ ಚೌಧರಿ ಅವರು ತೊಶಮ್​ಕ್ಷೇತ್ರವನ್ನು ಉಳಿಸಿಕೊಂಡರು..

2014: ನವದೆಹಲಿ: ಮಹಾರಾಷ್ಟ್ರದಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯು (ಎನ್​ಸಿಪಿ) ಬಿಜೆಪಿಯನ್ನು ಹೊರಗಿನಿಂದ ಬೆಂಬಲಿಸಲು ನಿರ್ಧರಿಸಿದೆ ಎಂದು ಎನ್​ಸಿಪಿ ಧುರೀಣ ಪ್ರಫುಲ್ ಪಟೇಲ್ ಸಂಜೆ ಪ್ರಕಟಿಸಿದರು. ಮಹಾರಾಷ್ಟ್ರದ ಪಿಡಬ್ಲ್ಯೂಪಿಯ ಅಜ್ಜ 88ರ ಹರೆಯದ ಗಣಪತರಾವ್ ದೇಶಮುಖ್ ಅವರು ಸಂಗೋಲ ಕ್ಷೇತ್ರವನ್ನು 25,000ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಗೆ 11ನೇ ಅವಧಿಗೆ ಆಯ್ಕೆಯಾದ ಏಕೈಕ ಶಾಸಕ ಎಂಬ ಹೆಗ್ಗಳಿಕೆ ಅವರದಾಯಿತು. ಹರ್ಯಾಣ ಲೋಕಹಿತ ಪಕ್ಷದ ಅಧ್ಯಕ್ಷ ಗೋಪಾಲ್ ಗೋಯೆಲ್ ಕಾಂಡ ಅವರು ಸಿರ್ಸಾ ಕ್ಷೇತ್ರವನ್ನು ಕಳೆದುಕೊಂಡರು. ಭಾರತೀಯ ರಾಷ್ಟ್ರೀಯ ಲೋಕದಳದ ಮಾಕನ್ ಲಾಲ್ ಸಿಂಗ್ಲಾ ಅವರು ಕಾಂಡ ಅವರನ್ನು ಪರಾಭವಗೊಳಿಸಿದರು.

2014: ನವದೆಹಲಿ: ಶಿವಸೇನೆ ಜೊತೆಗಿನ ದೀರ್ಘಕಾಲದ ಮೈತ್ರಿ ಕಡಿದುಹೋಗಬಾರದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಶಿವಸೇನೆ ಜೊತೆಗೆ ಮರುಮೈತ್ರಿಯಾದರೆ ಉತ್ತಮ ಎಂದು ಹೇಳಿದರು. ಶಿವಸೇನೆ ಮತ್ತು ಬಿಜೆಪಿ ಒಟ್ಟಾಗಿ ಸರ್ಕಾರ ರಚಿಸಿದರೆ ಉತ್ತಮ ಎಂದು ಅಡ್ವಾಣಿ ನುಡಿದರು.

2014: ಭುವನೇಶ್ವರ: ಒಡಿಶಾದ ಕಂಧಮಲ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜು ಜನತಾದಳ (ಬಿಜೆಡಿ) ಅಭ್ಯರ್ಥಿ ಪ್ರತ್ಯೂಷಾ ರಾಜೇಶ್ವರಿ ಅವರು ಅಂದಾಜು ಮೂರು ಲಕ್ಷ ಮತಗಳ ಅಂತರದಲ್ಲಿ ಜಯಗಳಿಸಿದರು. ರಾಜೇಶ್ವರಿ ಅವರು 4,77,529 ಮತಗಳನ್ನು ಪಡೆದರೆ ಅವರ ಸಮೀಪ ಸ್ಪರ್ಧಿ ಭಾರತೀಯ ಜನತಾ ಪಕ್ಷದ ರುದ್ರ ಮಾಧವ ರೇ 1,78,661 ಮತಗಳನ್ನು ಗಳಿಸಿದರು ಎಂದು ರಾಜ್ಯ ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಜ್ಯೋತಿ ಪ್ರಕಾಶ ದಾಸ್ ತಿಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಅಭಿಮನ್ಯು ಬೆಹೆರಾ ಅವರು ಕೇವಲ 90,536 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದರು. ಬಿಜೆಡಿಯ ಸಂಸತ್ ಸದಸ್ಯ ಹೇಮೇಂದ್ರ ಚಂದ್ರ ಸಿಂಗ್ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಅಕ್ಟೋಬರ್ 15ರಂದು ಉಪಚುನಾವಣೆ ನಡೆದಿತ್ತು. ಪ್ರಸ್ತುತ ವಿಜಯಿಯಾಗಿರುವ ರಾಜೇಶ್ವರಿ ಅವರು ಹೇಮೇಂದ್ರ ಚಂದ್ರ ಸಿಂಗ್ ಅವರ ಪತ್ನಿ.

2014: ನವದೆಹಲಿ: ಹರ್ಯಾಣದಲ್ಲಿ ಕಾಂಗ್ರೆಸ್ ಪರಾಭವವನ್ನು ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಒಪ್ಪಿಕೊಂಡರು. ಇದೇ ವೇಳೆಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಸಂಬಂಧ ಬಿಜೆಪಿ ಪ್ರಸ್ತಾವವನ್ನು ತಾನು ಪರಿಗಣಿಸುವುದಾಗಿ ಶಿವ ಸೇನೆ ಹೇಳಿತು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿರುವುದರಿಂದ ಮತ್ತೆ ಮೈತ್ರಿಕೂಟದ ಸರ್ಕಾರ ಅನಿವಾರ್ಯವಾಯಿತು. ಮೂಲಗಳ ಪ್ರಕಾರ ಶಿವಸೇನೆಯು ಉಪ ಮುಖ್ಯಮಂತ್ರಿ ಸ್ಥಾನವನ್ನು ಬಯಸಿದೆ ಎಂದು ಹೇಳಲಾಯಿತು. ಮಹಾರಾಷ್ಟ್ರದ ಬೈಕುಲ್ಲಾ ಕ್ಷೇತ್ರದಲ್ಲಿ ಎಂಐಎಂ ವಕೀಲ ವಾರಿಸ್ ಪಠಾಣ್ 500 ಮತಗಳ ಅಂತರದಲ್ಲಿ ವಿಜಯಗಳಿಸಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಎನ್​ಸಿಪಿಯ ಅಜಿತ್ ಪವಾರ್ ವಿಜಯಗಳಿಸಿದರೆ, ಬೊರಿವಿಲಿಯಲ್ಲಿ ಬಿಜೆಪಿಯ ವಿನೋದ ತಾವಡೆ ಗೆಲುವು ಸಾಧಿಸಿದರು.
ಹರ್ಯಾಣದ ಹಿಸಾರ್ ಕ್ಷೇತ್ರದಲ್ಲಿ ಸಾವಿತ್ರಿ ಜಿಂದಾಲ್ ಪರಾಭವಗೊಂಡರು.

2014: ನವದೆಹಲಿ: ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಪಟ್ಟಣವಾದ ರೋಹ್ತಕ್ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಾಧಿಸಿತು. ಹರ್ಯಾಣದ ಐಎನ್​ಎಲ್​ಡಿ (ಲೋಕದಳ) ಅಧ್ಯಕ್ಷ ಅಶೋಕ್ ಅರೋರಾ ಅವರು ಥಾನೇಶ್ವರ ಕ್ಷೇತ್ರದಲ್ಲಿ 24,000 ಮತಗಳ ಅಂತರದಿಂದ ಪರಾಜಿತರಾದರು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಬನ್​ರಾವ್ ಘೂಲಪ್ ಅವರು ದೇವಲಾಲಿ ಕ್ಷೇತ್ರದಲ್ಲಿ ಜಯಗಳಿಸಿದರು. ಅವರು ಬಿಜೆಪಿಯ ಸದಾಫುಲೆ ರಾಮದಾಸ್ ಅವರನ್ನು ಪರಾಭವಗೊಳಿಸಿದರು. ಮಹಾರಾಷ್ಟ್ರ ರಾಜ್ಯ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಅವರು ನಾಗಪುರ ನಾಗಪುರ ನೈಋತ್ಯ ಕ್ಷೇತ್ರದಲ್ಲಿ 30,500 ಮತಗಳ ಅಂತರದಲ್ಲಿ ಜಯಗಳಿಸಿದರು.
ಹರ್ಯಾಣ: ಬಿಜೆಪಿ ಸ್ಪಷ್ಟ ಬಹುಮತದತ್ತ, ಮಹಾರಾಷ್ಟದಲ್ಲಿ ಏಕೈಕ ದೊಡ್ಡ ಪಕ್ಷ

2014: ನವದೆಹಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಯ ತಾರಾಸಿಂಗ್ ಅವರು ಮುಳುಂದ ಕ್ಷೇತ್ರದಲ್ಲಿ ಜಯಗಳಿಸಿದರೆ, ಎನ್​ಸಿಪಿಯ ಜ್ಯೋತಿ ಕಲಾನಿ ಉಲ್ಲಾಸನಗರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಎನ್​ಸಿಪಿಯ ಛಗನ್ ಭುಜಬಲ್ ಯೆಒಲಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು.
2014: ನವದೆಹಲಿ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ಸಿನ ನಾರಾಯಣ ರಾಣೆ ಅವರು 10,000 ಮತಗಳ ಅಂತರದಿಂದ ಪರಾಜಿತರಾದರು. ಆದರೆ ಅವರ ಪುತ್ರ ನಿತೀಶ್ ರಾಣೆ ಜಯಗಳಿಸಿದ್ದಾರೆ. ಸಕಾರಾತ್ಮಕ ಜನಾದೇಶ ಜನತೆ ಉತ್ತಮ ಆಡಳಿತಕ್ಕಾಗಿ ಮತ ನೀಡಿದ್ದಾರೆ. ಅವರು ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ. ಇದು ಸಕಾರಾತ್ಮಕ ಜನಾದೇಶ ಎಂದು ಬಿಜೆಪಿ ಧುರೀಣ ಪ್ರಕಾಶ ಜಾವಡೇಕರ್ ಪ್ರತಿಕ್ರಿಯಿಸಿದರು.

2014: ನವದೆಹಲಿ: ರೋಹ್ತಕ್ ಜಿಲ್ಲೆಯ ಗರ್ಹಿ-ಕಿಲೊಯಿ-ಸಂಪ್ಲಾ ಕ್ಷೇತ್ರದ್ಲಲಿ ಹರ್ಯಾಣ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಗೆಲುವು ಸಾಧಿಸಿದರು.

2008: ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ಸಕ್ರಿಯವಾಗಿ ಪಾಲ್ಗೊಳ್ಳುತ್ತವೋ ಎಂಬ ಅನುಮಾನದಲ್ಲಿಯೇ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದಲ್ಲಿ ಏಳು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ನಿರ್ಧರಿಸಿತು. ಆಯೋಗದಲ್ಲಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡು ನವೆಂಬರ್ 17ರಿಂದ ಡಿಸೆಂಬರ್ 24ರ ಅವದಿಯಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಅವರು, ಹಿಮಾಚ್ಛಾದಿತ ಪ್ರದೇಶಗಳಾದ ಲೆಹ್ ಮತ್ತು ಕಾರ್ಗಿಲ್ನಲ್ಲಿ ಮೊದಲ ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು.

2008: ಸ್ಥಳೀಯ ಅಭ್ಯರ್ಥಿಗಳ ಹಾಜರಾತಿ ಕಡಿಮೆ ಇದ್ದುದನ್ನು ಪ್ರತಿಭಟಿಸಿ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಕಾರ್ಯಕರ್ತರು ಮುಂಬೈ ಉಪನಗರದ ರೈಲ್ವೆ ಪರೀಕ್ಷಾ ಮಂಡಳಿಯ 13 ಕೇಂದ್ರಗಳ ಮೇಲೆ ದಾಳಿ ಮಾಡಿ ಉತ್ತರ ಭಾರತದ ಅಭ್ಯರ್ಥಿಗಳನ್ನು ಸ್ಥಳದಿಂದ ಓಡಿಸಿದರು. ದೊಂಬಿವಿಲಿ ಮತ್ತು ಕಲ್ಯಾಣದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅಡ್ಡಿಪಡಿಸಿದ ಹಾಗೂ ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ಮಾಡಿದ ಆಪಾದನೆಗಾಗಿ ಎಂಎನ್ಎಸ್ನ 10 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

2008: ನಿರ್ಮಾಣ ಹಂತದಲ್ಲಿದ್ದ ಮೆಟ್ರೊ ರೈಲು ಫ್ಲೈ ಓವರ್ನ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಇಬ್ಬರು ಮೃತರಾಗಿ 16 ಮಂದಿ ಗಾಯಗೊಂಡ ಘಟನೆ ನವದೆಹಲಿಯಲ್ಲಿ ನಡೆಯಿತು. ಪೂರ್ವ ದೆಹಲಿ ಭಾಗದ ಲಕ್ಷ್ಮಿನಗರದ ವಿಕಾಸ್ ಮಾರ್ಗದಲ್ಲಿ ಫ್ಲೈ ಓವರ್ ನಿರ್ಮಾಣಕ್ಕಾಗಿ 400 ಟನ್ ತೂಕದ ಕಾಂಕ್ರಿಟ್ ತುಂಡುಗಳನ್ನು ಯಂತ್ರವೊಂದರ ಸಹಾಯದಿಂದ ಸ್ತಂಭದ (ಪಿಲ್ಲರ್) ಮೇಲೆ ಇರಿಸುತ್ತಿದ್ದಾಗ ಕುಸಿತ ಸಂಭವಿಸಿತು ಎಂದು ಮೆಟ್ರೊ ಅಧಿಕಾರಿಗಳು ಹೇಳಿದರು.

2008: ಸರ್ಕಾರದಿಂದ ಕೆಲವು ವಿಶೇಷ ಸೌಲಭ್ಯ ಪಡೆಯುತ್ತಿರುವ ಹಿರಿಯ ನಾಗರಿಕರ ನೆರವಿಗೆ ಕರ್ನಾಟಕ ಹೈಕೋರ್ಟ್ ಕೂಡಾ ಧಾವಿಸಿತು. ಹಿರಿಯ ನಾಗರಿಕರು ಸ್ವತಃ ಅಥವಾ ಅವರ ವಿರುದ್ಧ ಹೈಕೋರ್ಟ್ನಲ್ಲಿ ಹೂಡಲಾದ ಪ್ರಕರಣಗಳನ್ನು ಅದ್ಯತೆ ಮೇರೆಗೆ ಶೀಘ್ರದಲ್ಲಿ ಇತ್ಯರ್ಥಗೊಳಿಸಲು ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳು ನಿರ್ಧರಿಸಿದರು. ಈ ಕುರಿತು ಸುತ್ತೋಲೆ ಹೊರಡಿಸಿದ ಹೈಕೋರ್ಟ್, ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದಲ್ಲಿ, ಆ ಬಗ್ಗೆ ಪ್ರಕರಣ ದಾಖಲಾಗುವ ವಿಭಾಗದ ಸಹಾಯಕ ರಿಜಿಸ್ಟ್ರಾರ್ ಅವರಿಗೆ ತಿಳಿಸುವಂತೆ ಸೂಚಿಸಿತು. ಈ ಮೂಲಕ ನ್ಯಾಯಾಲಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇಂತಹ ಒಂದು ಯೋಜನೆಯನ್ನು ರೂಪಿಸಲಾಯಿತು.

2008: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಸಮಾಜವಾದಿ ನಾಯಕಿ ಪೊನ್ನಮ್ಮಾಳ್(87) ಈದಿನ ಮಧ್ಯಾಹ್ನ 12.15ಕ್ಕೆ ಶಿವಮೊಗ್ಗದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಜೀವನದ್ದುದಕ್ಕೂ ಒಂದಿಲ್ಲೊಂದು ಹೋರಾಟ ಮಾಡುತ್ತ ಬಂದ ಅವರು, ಲೋಹಿಯಾ, ಮಧು ದಂಡವತೆ, ಮೃಣಾಲ್ ಗೋರೆ, ರೂಮಾ ಮಿತ್ರ, ಶಾಂತವೇರಿ ಗೋಪಾಲಗೌಡ ಮೊದಲಾದವರೊಂದಿಗೆ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಭಾರತ ಬಿಟ್ಟು ತೊಲಗಿ, ಭೂದಾನ ಚಳವಳಿ, ಕಾಗೋಡು ಚಳವಳಿ ಸೇರಿದಂತೆ ಮೊದಲಾದ ಪ್ರಮುಖ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆರೆವಾಸ ಅನುಭವಿಸಿದ್ದರು. ಅಲ್ಲದೇ, ಸ್ತ್ರೀಪರ ಕಾಳಜಿ ಹೊಂದಿದ್ದ ಅವರು, ಮಹಿಳಾ ಸಮಾಜವನ್ನು ಕಟ್ಟಿ ಬೆಳೆಸಿದರು. ಆ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕಾಗಿ ದನಿ ಎತ್ತಿದರು. ಮಹಿಳಾ ಜಾಗೃತಿ, ಕೋಮು ಸೌಹಾರ್ದ ವೇದಿಕೆ, ಗ್ರಾಹಕರ ಹಿತರಕ್ಷಣಾ ವೇದಿಕೆಗಳ ಸದಸ್ಯರಾಗಿ ಹೋರಾಟಗಳಲ್ಲಿ ಭಾಗವಹಿಸಿದ್ದರು. ಸ್ವಾಭಿಮಾನಿಯಾದ ಪೊನ್ನಮ್ಮಾಳ್, ಯಾವತ್ತೂ ಸರ್ಕಾರದಿಂದ ನೀಡುವ ಸ್ವಾತಂತ್ರ್ಯ ಹೋರಾಟಗಾರರ ವೇತನ ಪಡೆದುಕೊಳ್ಳಲಿಲ್ಲ.

2008: ಶ್ರೀಲಂಕಾದಲ್ಲಿ ಸೇನೆಯು ತಮಿಳರ ಮೇಲೆ ನಡೆಸುತ್ತಿರುವ ದಾಳಿಯನ್ನು ಕೊನೆಗಾಣಿಸಬೇಕೆಂದು ಒತ್ತಾಯಿಸಿ ಡಿಎಂಕೆಯ 14 ಲೋಕಸಭಾ ಸದಸ್ಯರು ಎರಡು ದಿನಗಳ ಹಿಂದೆ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ ದಯಾನಿಧಿ ಮಾರನ್ ಅವರೂ ಈದಿನ ರಾಜೀನಾಮೆ ಪತ್ರ ಸಲ್ಲಿಸಿದರು. ತಮ್ಮ ಮಾವನವರೂ ಆದ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರೊಂದಿಗೆ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿದ ನಂತರ ಅವರು ರಾಜೀನಾಮೆ ಪತ್ರ ನೀಡಿದರು.

2007: ಭಾರತದ ಈಜುಗೊಳದಲ್ಲಿ ಮೊತ್ತ ಮೊದಲ ವಿಶ್ವದಾಖಲೆ ಹೈದರಾಬಾದಿನಲ್ಲಿ ಮೂಡಿಬಂತು. ಇಪ್ಪತ್ತಮೂರು ವರ್ಷ ವಯಸ್ಸಿನ ಚೀನಾದ ಯಾಂಗ್ ಲೀ ಅವರಿಗೆ ಈದಿನ ಶುಭ ಶುಕ್ರವಾರವಾಯಿತು. ಮಹಿಳೆಯರ 50 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಚೀನಾದ ಶಾಂಘೈ ನಗರದ ನಿವಾಸಿ ಲೀ ಮತ್ಸ್ಯದಂತೆ ಈಜಿ ಜಗತ್ತಿನಲ್ಲಿ ಹೊಸ ವಿಕ್ರಮ ಸ್ಥಾಪಿಸಿದರು. ಗಚ್ಚಿಬೌಳಿಯ ಜಿ.ಎಂ.ಸಿ. ಬಾಲಯೋಗಿ ಕ್ರೀಡಾಸಂಕೀರ್ಣದ ಅಂತಾರಾಷ್ಟ್ರೀಯ ದರ್ಜೆಯ ಈಜುಗೊಳದಲ್ಲಿ ನಡೆದ `4ನೇ ವಿಶ್ವ ಸೇನಾ ಕ್ರೀಡಾಕೂಟದ' ಮಹಿಳೆಯರ ಈಜು ಚಾಂಪಿಯನ್ ಶಿಪ್ ನ 50 ಮೀಟರ್ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಯಾಂಗ್ ಲೀ ಅವರು 28.09ಸೆ.ಗಳಲ್ಲಿ ಗುರಿ ಮುಟ್ಟಿ ವಿಶ್ವ ದಾಖಲೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾದರು. ಈ ಹಾದಿಯಲ್ಲಿ ಇದೇ ವರ್ಷದ ಮಾರ್ಚ್ 28ರಂದು ಆಸ್ಟ್ರೇಲಿಯಾದಲ್ಲಿ ನಡೆದ ಫಿನಾ (ಅಂತಾರಾಷ್ಟ್ರೀಯ ಈಜು ಫೆಡರೇಷನ್) ವಿಶ್ವ ಈಜು ಚಾಂಪಿಯನ್ ಶಿಪ್ ನಲ್ಲಿ ಅಮೆರಿಕದ ಲೀಲಾ ವಜೀರಿ ಅವರು 28.16ಸೆ.ಗಳೊಂದಿಗೆ ಸ್ಥಾಪಿಸಿದ್ದ ವಿಶ್ವದಾಖಲೆಯನ್ನು ಯಾಂಗ್ ಲೀ ಮುರಿದರು.

2007: ನಾಡಿನ ನಾಗರಿಕರ ದುಃಖದುಮ್ಮಾನ ಹಾಗೂ ಕುಂದು ಕೊರತೆಗಳ ನಿವಾರಣೆಗೆ ವೇದಿಕೆಯಂತಿದ್ದ `ಜನತಾದರ್ಶನ'ದಲ್ಲಿ ಅಹವಾಲು ಸಲ್ಲಿಸಲು ಬಂದ ಮಹಿಳೆಯೊಬ್ಬರು ಸಾವನ್ನಪ್ಪಿದರೆ, ಯುವಕನೊಬ್ಬ ವಿಷ ಸೇವಿಸಿ ಅಸ್ವಸ್ಥನಾದ ದುರ್ಘಟನೆಯೂ ಸಂಭವಿಸಿತು. ರಾಜ್ಯದ ಆಡಳಿತದ ಕೇಂದ್ರವಾದ ವಿಧಾನಸೌಧದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ನಡೆಸಿದ ನಾಲ್ಕನೇ ಜನತಾದರ್ಶನದಲ್ಲಿ ಈ ಘಟನೆ ನಡೆಯಿತು. ಮಂಡ್ಯ ಜಿಲ್ಲೆಯು ಗುತ್ತಲ ಕಾಲೋನಿ ನಿವಾಸಿ ಪುಟ್ಟಲಕ್ಷ್ಮಮ್ಮ (40) ಸಾವನ್ನಪ್ಪಿದ ಮಹಿಳೆ. ಇದೇ ಜಿಲ್ಲೆಯ ಸುರೇಶ್ (30) ಎಂಬಾತ ವಿಷ ಸೇವಿಸಿದ ಯುವಕ.

2007: ಶಾಲೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೊಬೈಲ್ ಬಳಸುವಂತಿಲ್ಲ ಎಂದು ಪುದುಚೇರಿ ಸರ್ಕಾರ ಆದೇಶಿಸಿತು. ನೆರೆ ರಾಜ್ಯ ತಮಿಳುನಾಡು ಶಾಲೆಗಳಲ್ಲಿ ಮೊಬೈಲ್ ನಿಷೇಧಿಸಿದ ಎರಡು ದಿನಗಳಲ್ಲಿ ಪುದುಚೇರಿ ಸಹ ಮೊಬೈಲ್ ನಿಷೇಧಿಸಿ ಆದೇಶ ಹೊರಡಿಸಿತು.

2007: ರಾಷ್ಟ್ರದಲ್ಲಿ 13 ನೂತನ ವಿಶೇಷ ಆರ್ಥಿಕ ವಲಯಗಳ (ಎಸ್ಇಜೆಡ್) ಸ್ಥಾಪನೆಗೆ ಕೇಂದ್ರ ಅನುಮತಿ ಮಂಡಳಿ (ಬಿಒಎ) ಈದಿನ ಅನುಮತಿ ನೀಡಿತು. ಇದರಲ್ಲಿ ಕರ್ನಾಟಕದ ಒಂದು ಪ್ರಸ್ತಾವವೂ ಸೇರಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಸ್ಇಜೆಡ್ ಸ್ಥಾಪಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ಸಿಗೂ(ಟಿಸಿಎಸ್) ಅವಕಾಶ ಸಿಕ್ಕಿತು. ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡುವ ಅತ್ಯುನ್ನತ ಸಂಸ್ಥೆಯಾದ ಬಿಒಎ ಮುಂದೆ ಒಟ್ಟು 19 ಪ್ರಸ್ತಾವಗಳಿದ್ದವು. ಅದರಲ್ಲಿ 10 ಪ್ರಸ್ತಾವಗಳಿಗೆ ಸಂಪೂರ್ಣವಾಗಿ ಮತ್ತು ಮೂರು ಪ್ರಸ್ತಾವಕ್ಕೆ ಭಾಗಶಃ ಒಪ್ಪಿಗೆ ಸಿಕ್ಕಿದೆ. ಬೆಂಗಳೂರಿನ 10.53 ಹೆಕ್ಟೇರ್ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮ ಮತ್ತು ಐಟಿಇಎಸ್ ಗೆ ನೆರವಾಗುವ ಎಸ್ ಇಜೆಡ್ ನಿರ್ಮಿಸಲು ಗೋಪಾಲನ್ ಎಂಟರ್ ಪ್ರೈಸಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೂ ಅನುಮತಿ ದೊರೆಯಿತು. ಆದರೆ ಈ ಸಭೆಯಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ವಿಷಯ ಚರ್ಚೆಯಾಗಲಿಲ್ಲ ಎಂದು ಬಿಒಎ ಸ್ಪಷ್ಟಪಡಿಸಿತು.

2007: 1993ರ ಮುಂಬೈ ಸರಣಿ ಸ್ಫೋಟದ ತನಿಖೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯವು, ತನ್ನ ಮುಂದೆ ಹಾಜರಾಗುವಂತೆ ನಟ ಸಂಜಯ್ ದತ್ ಗೆ ಸಮನ್ಸ್ ಜಾರಿಗೊಳಿಸಿತು. `ಏಕೆ-56' ರೈಫಲನ್ನು ಅಕ್ರಮವಾಗಿ ಹೊಂದಿದ್ದ ಆರೋಪದ ಮೇಲೆ ಟಾಡಾ ಕೋರ್ಟ್ ಸಂಜಯ್ ಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇತರರಿಗೂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತು.

2006: ಮೊಬೈಲಿನಲ್ಲಿ ಇದೇ ಮೊತ್ತ ಮೊದಲ ಬಾರಿಗೆ `ಮೀಡಿಯಾ ಕರಿ' ಹೆಸರಿನ ವಾರಪತ್ರಿಕೆ ಆರಂಭಗೊಂಡಿತು. ಮುಂಬೈಯ `ಟೆಕ್ ಶಾಸ್ತ್ರ ಇಂಡಿಯಾ' ಸಂಸ್ಥೆಯ ಶೈಲಜಾ ಹಾಗೂ ನಿಷಿತ್ ಶಾ ಈ ವಿನೂತನ `ಮೊಬೈಲ್ ವಾರಪತ್ರಿಕೆ'ಯ ಕತರ್ೃಗಳು. ಮನರಂಜನೆಯೇ ಪ್ರಮುಖವಾಗಿರುವ ಈ ಪತ್ರಿಕೆಯನ್ನು `455-ಇಂಡಿಯಾ'ಕ್ಕೆ ಒಂದು ಎಸ್ಸೆಮ್ಮೆಸ್ ಕಳಿಸಿ ಪಡೆದುಕೊಂಡು ಡೌನ್ ಲೋಡ್ ಮಾಡಬಹುದು. ಇಂಗ್ಲಿಷ್, ಹಿಂದಿ, ಅರಬ್ಬಿ ಭಾಷೆಗಳಲ್ಲಿ ಈ ಮೊಬೈಲ್ ವಾರಪತ್ರಿಕೆ ಲಭ್ಯ.

2006: ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿ ಶ್ರೀವಿದ್ಯಾ (53) ಕೇರಳದ ತಿರುವನಂತಪುರದ ಖಾಸಗಿ ನರ್ಸಿಂಗ್ ಹೋಮಿನಲ್ಲಿ ನಿಧನರಾದರು. ಖ್ಯಾತ ಶಾಸ್ತ್ರೀಯ ಗಾಯಕಿ ಎಂ.ಎಲ್. ವಸಂತ ಕುಮಾರಿ ಅವರ ಪುತ್ರಿಯಾದ ಶ್ರೀವಿದ್ಯಾ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಶಿವಾಜಿ ಗಣೇಶನ್ ನಟಿಸಿದ್ದ `ತಿರುವರುಲ್ ಸೆಲ್ವರ್' ಚಿತ್ರದಲ್ಲಿ ಮುಖ್ಯಪಾತ್ರ ವಹಿಸಿದ್ದರು. 1969 ರಲ್ಲಿ ಅವರ ಚೊಚ್ಚಲ ಚಿತ್ರ `ಚಟ್ಟಾಂಬಿಕಾವಲ' ತೆರೆ ಕಂಡಿತು. ಆ ಬಳಿಕ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಶ್ರೀವಿದ್ಯಾ ಮಲಯಾಳಿ ಚಿತ್ರಗಳಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು.

2006: ಕುಟುಂಬ ಕಲಹದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಸದಸ್ಯ, ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರನ್ನು ಅವರ ಅಣ್ಣನ ಮಗ ಜಗದೀಶ ಕೋರೆ ಗುಂಡು ಹೊಡೆದು ಕೊಲ್ಲಲು ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸಮೀಪದ ಆಂಕಲಿ ಗ್ರಾಮದಲ್ಲಿ ಘಟಿಸಿತು.

2006: ಬಡತನ ರೇಖೆಗಿಂತ ಕೆಳಗಿರುವ ಕುಟಂಬಗಳ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 2.19 ಲಕ್ಷ ಬಾಲಕರಿಗೂ ಉಚಿತವಾಗಿ ಸೈಕಲ್ ವಿತರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸರ್ಕಾರ ಪ್ರಕಟಿಸಿತು.

2006: ರಾಷ್ಟ್ರಕವಿ ಪಟ್ಟಕ್ಕೆ ಡಾ. ಜಿ.ಎಸ್. ಶಿವರುದ್ರಪ್ಪ ಶಿಫಾರಸು ಮಾಡಲಾಯಿತು. ಸಾಹಿತಿ ಡಾ. ದೇ. ಜವರೇಗೌಡ ಅಧ್ಯಕ್ಷತೆಯ ಸಮಿತಿ ಈ ದಿನ ನಡೆದ ಸಭಯಲ್ಲಿ ಈ ಕುರಿತ ನಿರ್ಣಯ ಅಂಗೀಕರಿಸಿತು.

1997: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಕಲ್ಯಾಣಸಿಂಗ್ ನೇತೃತ್ವದ ಸರ್ಕಾರಕ್ಕೆ ಬಿಎಸ್ಪಿ ನೀಡ್ದಿದ ಬೆಂಬಲ ವಾಪಸ್. ಸರ್ಕಾರದ ದಲಿತ ವಿರೋಧಿ ನೀತಿ ಖಂಡಿಸಿ ಈ ಕ್ರಮ ಎಂದು ಬಿಎಸ್ಪಿ ಪ್ರತಿಪಾದಿಸಿತು.

1989: ಬಾಂಬೆಯಿಂದ (ಈಗಿನ ಮುಂಬೈ) ಅಹಮದಾಬಾದಿಗೆ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ಬೋಯಿಂಗ್ 737 ವಿಮಾನ ಅಹಮದಾಬಾದಿನಲ್ಲಿ ಅಪಘಾತಕ್ಕೆ ಈಡಾಯಿತು. ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿ ಅದರಲ್ಲಿದ್ದ 135 ಮಂದಿ ಸಾವನ್ನಪ್ಪಿದರು. ಇದೇ ದಿನ ಸಿಲ್ಚಾರ್ ಬಳಿ ಗುವಾಹತಿ-ಸಿಲ್ಚಾರ್ ಫಾಕರ್ ವಿಮಾನ ಅಪಘಾತಕ್ಕೆ ಈಡಾಗಿ ಅದರಲ್ಲಿದ್ದ ಎಲ್ಲ 34 ಮಂದಿ ಮೃತರಾದರು. ಭಾರತದ ದೇಶೀ ವಿಮಾನ ಹಾರಾಟದಲ್ಲಿ ಈದಿನ ಅತ್ಯಂತ ಕರಾಳ ದಿನವೆನಿಸಿತು.

1981: ಕೊಳ್ಳೇಗಾಲ ತಾಲ್ಲೂಕಿನ ಗೋಪೀನಾಥಂ ಕೆರೆ ಹಿಂದಿನ ರಾತ್ರಿ ಒಡೆದ ಪರಿಣಾಮವಾಗಿ ಕೊಚ್ಚಿ ಹೋದ ಜನರಲ್ಲಿ 110 ಶವಗಳನ್ನು ಪತ್ತೆ ಹಚ್ಚಲಾಯಿತು. ಕರ್ನಾಟಕ - ತಮಿಳುನಾಡು ಗಡಿಯಲ್ಲಿ ದಟ್ಟ ಅರಣ್ಯದ ನಡುವೆ ಇರುವ ಈ ಕೆರೆ ಧಾರಾಕಾರ ಮಳೆಯ ಪರಿಣಾಮವಾಗಿ ಒಡೆಯಿತು.

1974: ತಮಿಳು ರಂಗಭೂಮಿಯ ಖ್ಯಾತ ನಟ ಟಿ.ಎಸ್. ರಾಜ ಮಾಣಿಕ್ಯಮ್ ಪಿಳ್ಳೈ ನಿಧನ.

1970: ಭಾರತದ ಮೊತ್ತ ಮೊದಲ ಸ್ವದೇಶಿ ನಿರ್ಮಿತ `ಮಿಗ್-21' ವಿಮಾನವನ್ನು ವಾಯುಪಡೆಗೆ ಹಸ್ತಾಂತರಿಸಲಾಯಿತು.

1952: ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ಸ್ಥಾಪನೆಯ ಬೇಡಿಕೆ ಈಡೇರಿಕೆಗಾಗಿ ಶ್ರೀರಾಮುಲು ಪೊಟ್ಟಿ ತಮ್ಮ ಆಮರಣ ನಿರಶನ ಆರಂಭಿಸಿದರು. ಅವರ ನಿರಶನ 58 ದಿನಗಳ ಕಾಲ ನಡೆದು ಅವರ ಸಾವಿನೊಂದಿಗೆ ಪರ್ಯವಸಾನಗೊಂಡಿತು.

1933: 1936ರ ಕ್ರೀಡಾ ಕೂಟದಲ್ಲಿ ಬ್ಯಾಸ್ಕೆಟ್ ಬಾಲ್ ಸೇರ್ಪಡೆ ಮಾಡಲು ಬರ್ಲಿನ್ ಒಲಿಂಪಿಕ್ ಸಮಿತಿ ಮತದಾನ.

1929: ಹಾಕಿ ಆಟಗಾರ ಬಲಬೀರ್ ಸಿಂಗ್ ಜನನ.

1925: ಸಾಮಾಜಿಕ ಹಾಗೂ ಚಾರಿತ್ರಿಕ ಕಾದಂಬರಿಕಾರ ಎಂದೇ ಖ್ಯಾತರಾದ ಕೊರಟಿ ಶ್ರೀನಿವಾಸರಾವ್ (19-10-1925ರಿಂದ 25-4-1983) ಅವರು ಶ್ರೀಪಾದರಾವ್- ನಾಮಗಿರಿಯಮ್ಮ ದಂಪತಿಯ ಮಗನಾಗಿ ಹೊಸಕೋಟೆ ತಾಲ್ಲೂಕು ಕೊರಟಿ ಗ್ರಾಮದಲ್ಲಿ ಜನಿಸಿದರು.

1925: ಕೇಂದ್ರದ ಮಾಜಿ ಸಚಿವ ಬಿ. ಶಂಕರಾನಂದ ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಣಗಲಿ ಗ್ರಾಮದಲ್ಲಿ ಜನಿಸಿದರು.

1910: ಭಾರತ ಸಂಜಾತ ಅಮೆರಿಕನ್ ಖಭೌತ ವಿಜ್ಞಾನಿ, ನೊಬೆಲ್ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯಂ ಚಂದ್ರಶೇಖರ್ (1910-1995) ಜನ್ಮದಿನ. ಚಂದ್ರಶೇಖರ್ ಅವರು ಭೌತವಿಜ್ಞಾನದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಪಡೆದ ಭಾರತದ ವಿಜ್ಞಾನಿ ಸಿ.ವಿ. ರಾಮನ್ ಅವರ ಅಳಿಯ. ನಕ್ಷತ್ರಗಳಿಗೆ ಸಂಬಂಧಿಸಿದಂತೆ ಇವರು ಮಂಡಿಸಿದ ಸಿದ್ಧಾಂತ `ಚಂದ್ರಶೇಖರ್ ಮಿತಿ' ಎಂದೇ ಖ್ಯಾತಿ ಪಡೆದಿದೆ.

1907: ಮುಂಬೈಯ ಪ್ರಥಮ ಮಹಿಳಾ ಮೇಯರ ಸುಲೋಚನಾ ಮೋದಿ ಜನನ.

1889: ಭಾರತದಲ್ಲಿ ಮೊತ್ತ ಮೊದಲ ತೈಲಬಾವಿಯನ್ನು ಯಶಸ್ವಿಯಾಗಿ ಕೊರೆಯಲಾಯಿತು. ಅಸ್ಸಾಂ ರಾಜ್ಯದ ದಿಗ್ ಬೋಯಿಯಲ್ಲಿ ಕೊರೆಯಲಾದ ಈ ತೈಲಬಾವಿಯಲ್ಲಿ 200 ಮೀಟರ್ ಆಳದಲ್ಲಿ ತೈಲ ಪತ್ತೆಯಾಯಿತು.

1862: ಆಗಸ್ಟೆ ಲ್ಯುಮಿರೆ (1862-1954) ಜನ್ಮದಿನ. ಫ್ರೆಂಚ್ ಸಂಶೋಧಕನಾದ ಈತ ತನ್ನ ಸಹೋದರ ಲೂಯಿಯ ಸಹಕಾರದೊಂದಿಗೆ ಚಲನ ಚಿತ್ರ ಕ್ಷೇತ್ರಕ್ಕೆ `ಸಿನಿಮಾಟೋಗ್ರಾಫ್' ಹೆಸರಿನ ಕ್ಯಾಮರಾ ಮತ್ತು ಪ್ರೊಜೆಕ್ಟರನ್ನು ನೀಡಿ ಖ್ಯಾತಿ ಗಳಿಸಿದ.

1812: ನೆಪೋಲಿಯನ್ ಬೋನಪಾರ್ಟೆ ನೇತೃತ್ವದಲ್ಲಿ ಫ್ರೆಂಚ್ ಪಡೆಗಳು ಮಾಸ್ಕೊದಿಂದ ವಾಪಸಾತಿ ಆರಂಭಿಸಿದವು.

1781: ಲಾರ್ಡ್ ಕಾರ್ನವಾಲಿಸ್ ನೇತೃತ್ವದಲ್ಲಿ ಬ್ರಿಟಿಷ್ ಪಡೆಗಳು ಯಾರ್ಕ್ ಟೌನಿನಲ್ಲಿ ಜನರಲ್ ವಾಷಿಂಗ್ಟನ್ ಗೆ ಶರಣಾದವು. ಇದರೊಂದಿಗೆ ಅಮೆರಿಕನ್ ಕ್ರಾಂತಿ ಅದರ ಕೊನೆಯ ಘಟ್ಟವನ್ನು ತಲುಪಿತು.

No comments:

Advertisement