Thursday, March 18, 2010

ಇಂದಿನ ಇತಿಹಾಸ History Today ಮಾರ್ಚ್ 18

ಇಂದಿನ ಇತಿಹಾಸ

ಮಾರ್ಚ್ 18

ಬೆಂಗಳೂರಿನ ಕೃಷ್ಣರಾಜಪುರ ರೈಲ್ವೆ ನಿಲ್ದಾಣ ಬಳಿಯ ತೂಗುಸೇತುವೆ ಅತ್ಯುತ್ತಮ ರಾಷ್ಟ್ರೀಯ ಸೇತುವೆ ಪ್ರಶಸ್ತಿಗೆ ಪಾತ್ರವಾಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಎಂಜಿನಿಯರ್ಸ್‌ ಸಂಸ್ಥೆ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೈರುತ್ಯ ರೈಲ್ವೆ ಡಿಜಿಎಂ ಪ್ರೇಮನಾರಾಯಣ ಹಾಗೂ ಉಪಮುಖ್ಯ ಎಂಜಿನಿಯರ್ ವಿಜಯ ಕುಮಾರ್ ಸ್ವೀಕರಿಸಿದರು. ಈ ಇಬ್ಬರ ಉಸ್ತುವಾರಿಯಲ್ಲಿ ಕೃಷ್ಣರಾಜಪುರ ತೂಗುಸೇತುವೆ ನಿರ್ಮಾಣವಾಗಿತ್ತು.

2009: ಬೆಂಗಳೂರಿನ ಕೃಷ್ಣರಾಜಪುರ ರೈಲ್ವೆ ನಿಲ್ದಾಣ ಬಳಿಯ ತೂಗುಸೇತುವೆ ಅತ್ಯುತ್ತಮ ರಾಷ್ಟ್ರೀಯ ಸೇತುವೆ ಪ್ರಶಸ್ತಿಗೆ ಪಾತ್ರವಾಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ರಿಡ್ಜ್ ಎಂಜಿನಿಯರ್ಸ್‌ ಸಂಸ್ಥೆ ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೈರುತ್ಯ ರೈಲ್ವೆ ಡಿಜಿಎಂ ಪ್ರೇಮನಾರಾಯಣ ಹಾಗೂ ಉಪಮುಖ್ಯ ಎಂಜಿನಿಯರ್ ವಿಜಯ ಕುಮಾರ್ ಸ್ವೀಕರಿಸಿದರು. ಈ ಇಬ್ಬರ ಉಸ್ತುವಾರಿಯಲ್ಲಿ ಕೃಷ್ಣರಾಜಪುರ ತೂಗುಸೇತುವೆ ನಿರ್ಮಾಣವಾಗಿತ್ತು. ಬೆಂಗಳೂರು- ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾದ 230 ಮೀಟರ್ ಉದ್ದದ ಮೇಲ್ಸೇತುವೆಯಲ್ಲಿ ನಾಲ್ಕು ಪಥಗಳನ್ನು ನಿರ್ಮಿಸಲಾಗಿದೆ. ನೈರುತ್ಯ ರೈಲ್ವೆ ಈ ಸೇತುವೆಯನ್ನು ನಿರ್ಮಿಸಿತ್ತು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಕುಲದೀಪ ಚತುರ್ವೇದಿ ಮತ್ತು ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ವಿಜಯ ಕುಮಾರನ್ ಅವರು ಪ್ರಶಸ್ತಿ ಪಡೆದ ರೈಲ್ವೆ ಎಂಜಿನಿಯರುಗಳನ್ನು ಅಭಿನಂದಿಸಿದರು.

2009: ಮಹಾರಾಷ್ಟ್ರದ ಮುಖ್ಯಮಂತ್ರಿಯ ನಿಕಟ ಸಂಬಂಧಿಯೂ ಆದ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಲೋಕಾಯುಕ್ತ ಬಲೆಗೆ ಬಿದ್ದರು. ಅವರ ಬಳಿ ಈವರೆಗೆ 76 ಲಕ್ಷ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಯಿತು. 'ಆದರೆ ಬೇನಾಮಿ ಹೆಸರಿನಲ್ಲಿ ರೂ 250 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ. ಲಭ್ಯವಿರುವ ಮಾಹಿತಿ ಆಧರಿಸಿ ಎಲ್ಲ ಬೇನಾಮಿ ಆಸ್ತಿಯನ್ನೂ ಪತ್ತೆಹಚ್ಚಲಾಗುವುದು' ಎಂದು ಲೋಕಾಯುಕ್ತರು ಹೇಳಿದರು. ಇದೇ ಸಂದರ್ಭದಲ್ಲಿ ಬಿಬಿಎಂಪಿ ಸಹಾಯಕ ಆಯುಕ್ತ ಲಕ್ಷ್ಮಣ್, ಮಂಡ್ಯದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಚೆಲುವೇಗೌಡ, ಲಿಂಗಸುಗೂರಿನ ಕೃಷಿ ಅಧಿಕಾರಿ ಎಲ್.ಎಚ್. ಹನುಮಂತಪ್ಪ ಮತ್ತು ಭಾಲ್ಕಿ ತಾಲ್ಲೂಕು ಪಂಚಾಯತ್ ಕಿರಿಯ ಎಂಜಿನಿಯರ್ ವೀರಶೆಟ್ಟಿ ಅವರ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ನಡೆಯಿತು.

2009: ಕೆಲ ದಿನಗಳಿಂದ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದ ಮೇಘಾಲಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಯಿತು. ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. ಮೇಘಾಲಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾದ ಕುರಿತು ರಾಜ್ಯಪಾಲ ಆರ್.ಎಸ್.ಮೂಶಾಹರಿ ಅವರಿಂದ ಕೇಂದ್ರ ಸಂಪೂರ್ಣ ವರದಿಯನ್ನು ಪಡೆದು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿತು. ಆಡಳಿತಾರೂಢ ಮೇಘಾಲಯ ಪ್ರಗತಿಪರ ಪರ ಮೈತ್ರಿಕೂಟಕ್ಕೆ (ಎಂಪಿಎಂ) ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದ ಐವರು ಶಾಸಕರನ್ನು ಹಿಂದಿನ ರಾತ್ರಿ ಅಮಾನತುಗೊಳಿಸಿದ್ದ ಸ್ಪೀಕರ್ ಬಿ.ಎಂ. ಲನೊಂಗ್ ರಾಜ್ಯಪಾಲರ ನಿರ್ದೇಶನವನ್ನು ತಿರಸ್ಕರಿಸಿ ಎನ್‌ಸಿಪಿ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರು. ಇದರಿಂದ ಸರ್ಕಾರ ಭದ್ರವಾಗಿತ್ತು

2009: ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 13,050 ಅಡಿ ಎತ್ತರದಲ್ಲಿರುವ ವೈಭವಯುತ ರೋತಾಂಗ್ ಪಾಸ್ ಮಾರ್ಗ ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏಪ್ರಿಲ್ ತಿಂಗಳಿನ ಮೊದಲ ವಾರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಪ್ರಕಟಿಸಲಾಯಿತು. ಸಾಮಾನ್ಯವಾಗಿ ಈ ಮಾರ್ಗ ಮೇ ತಿಂಗಳಿನಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತವಾಗುತ್ತಿತ್ತು. 'ಕಳೆದ ಕೆಲ ವಾರಗಳಿಂದ ಈ ಪ್ರದೇಶದಲ್ಲಿ ಒಣಹವೆ ಮುಂದುವರಿದಿರುವುದರಿಂದ ಹಿಮವನ್ನು ತೆರವುಗೊಳಿಸುವ ಕಾರ್ಯವನ್ನು ಚುರುಕುಗೊಳಿಸಿದ್ದೇವೆ' ಎಂದು ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಮುಖ್ಯ ಎಂಜಿನಿಯರ್ ಹೇಳಿದರು.

2009: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಹ್ಯಾಮಿಲ್ಟನ್ನಿನಲ್ಲಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟಿನ ಮೊದಲ ದಿನದಾಟದಲ್ಲಿಯೇ ಆಸ್ಟ್ರೇಲಿಯಾದ ಮಾರ್ಕ್ ವಾ ಅವರ ಅತಿ ಹೆಚ್ಚು ಟೆಸ್ಟ್ ಕ್ಯಾಚುಗಳ ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಜಹೀರ್ ಖಾನ್ ಬೌಲಿಂಗ್‌ನಲ್ಲಿ ಕಿವೀಸ್ ಪಡೆಯ ಮಾರ್ಟಿನ್ ಗುಪ್ಟಿಲ್ ಅವರ ಬ್ಯಾಟ್ ಜೊತೆಗೆ ಸರಸವಾಡಿದ ಚೆಂಡನ್ನು ಮೂರನೇ ಸ್ಲಿಫ್‌ನಲ್ಲಿದ್ದ ರಾಹುಲ್ ಆಕರ್ಷಕವಾಗಿ ಹಿಡಿತಕ್ಕೆ ಪಡೆದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ಪಡೆದ ಕ್ಯಾಚುಗಳ ಸಂಖ್ಯೆ 181 ಆಯಿತು. ಕಾಂಗರೂಗಳ ನಾಡಿದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಕೂಡ ಇಷ್ಟು ಕ್ಯಾಚ್ ತೆಗೆದುಕೊಂಡು ವಿಶ್ವ ದಾಖಲೆ ನಿರ್ಮಿಸಿದ್ದರು. ಈಗ ದ್ರಾವಿಡ್ ಮತ್ತು ವಾ ಜಂಟಿಯಾಗಿ ಗರಿಷ್ಠ ಕ್ಯಾಚ್ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಂತಂತಾಯಿತು. 2002 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಮಾರ್ಕ್ ಅವರು ಕೇವಲ 128 ಟೆಸ್ಟ್‌ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಅದನ್ನು ಸರಿಗಟ್ಟಲು ರಾಹುಲ್‌ಗೆ 132 ಟೆಸ್ಟ್ ಬೇಕಾಯಿತು.

2009: ಬೆಂಗಳೂರು ಮೂಲದ ಮಾನವಸಂಪನ್ಮೂಲ ಕಾರ್ಯನಿರ್ವಹಣಾಧಿಕಾರಿ ಚೈತನ್ಯಾ ದತ್ಲಾ ಅವರು ಭಾರತೀಯ ನೌಕಾಪಡೆಗೆ ಸೇರಿದ ಯುದ್ಧ ನೌಕೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳಲು ಅವಕಾಶ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದತ್ಲಾ (28) ಅವರು ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್‌ನ 'ಮಿಷನ್ ನೇವಿ: ಲೆಹ್ರೋನ್ ಕೆ ಸರ್ತಾಜ್' ರಿಯಾಲಿಟಿ ಶೋದಲ್ಲಿ ವಿಜೇತರಾದರು. ಈ ಹಿನ್ನೆಲೆಯಲ್ಲಿ ಅವರಿಗೆ ಯುದ್ಧನೌಕೆಯಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವ ಅಪೂರ್ವ ಅವಕಾಶ ದೊರಕಿತು. ಈ ರಿಯಾಲಿಟಿ ಶೋದಲ್ಲಿ 50,000 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

2008: ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಸೂತ್ರ ಕನ್ನಡಿಗರ ಕೈಸೇರಿದ ಬೆನ್ನಿಗೇ ಮತ್ತೊಮ್ಮೆ ಗಡಿ ವಿವಾದವನ್ನು ಎತ್ತಿಕೊಂಡು ತಗಾದೆ ತೆಗೆದ ಮಹಾರಾಷ್ಟ್ರ, ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಒತ್ತಾಯಿಸಿತು. ಮಹಾರಾಷ್ಟ್ರ ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಮದಾಸ್ ಕದಂ ಅವರು ಗಡಿ ವಿವಾದ ಸಂಬಂಧ ಮಂಡಿಸಿದ ಗೊತ್ತುವಳಿಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಸದನ, ಈ ಬಿಕ್ಕಟನ್ನು ಬಗೆಹರಿಸಲು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರೇ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿತು.

2008: ದೇಶಾದ್ಯಂತ ಭಾರಿ ಕುತೂಹಲ ಕೆರಳಿಸಿದ್ದ ಇಂಡಿಯನ್ ಎಕ್ಸಪ್ರೆಸ್ ವರದಿಗಾರ್ತಿ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಐಜಿಪಿ ರವಿಕಾಂತ ಶರ್ಮಾ ಹಾಗೂ ಇತರೆ ಮೂವರು ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಮಾನಿಸಿತು. ಸಹಾಯಕ ಸೆಷನ್ಸ್ ನ್ಯಾಯಾಧೀಶ ರಾಜೇಂದ್ರ ಕುಮಾರ್ ಶಾಸ್ತ್ರಿ ಪ್ರಕರಣದ ಅಂತಿಮ ವಿಚಾರಣೆ ನಂತರ ಆರೋಪಿಗಳು ತಪ್ಪೆಸಗಿರುವುದು ರುಜುವಾತಾಗಿದೆ ಎಂಬ ತೀರ್ಮಾನಕ್ಕೆ ಬಂದರು. ಶ್ರೀ ಭಗವಾನ್ ಶರ್ಮಾ, ಪ್ರದೀಪ್ ಶರ್ಮಾ ಮತ್ತು ಸತ್ಯ ಪ್ರಕಾಶ್ ಇವರು ಶಿಕ್ಷೆಗೊಳಗಾಗಿರುವ ಇತರೆ ಆರೋಪಿಗಳು. ಇವರು ಶಿವಾನಿ ಭಟ್ನಾಗರ್ ಕೊಲೆ ಪ್ರಕರಣದ ಸಂಚನ್ನು ಕಾರ್ಯರೂಪಕ್ಕೆ ತಂದ ಗುರುತರ ಆರೋಪವನ್ನು ಎದುರಿಸುತ್ತಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರ್ತಿ ಶಿವಾನಿ ಭಟ್ನಾಗರ್ 1999ರ ಜ. 23ರಂದು ಪೂರ್ವ ದೆಹಲಿಯ ತಮ್ಮ ಅಪಾರ್ಟ್ ಮೆಂಟಿನಲ್ಲಿ ಕೊಲೆಯಾಗಿದ್ದರು. ಆಪಾದಿತ ಐಪಿಎಸ್ ದರ್ಜೆ ಅಧಿಕಾರಿ ಐಜಿಪಿ ರವಿಕಾಂತ ಶರ್ಮಾ ಹಾಗೂ ಶಿವಾನಿ ಇಬ್ಬರೂ ಉತ್ತಮ ಸ್ನೇಹ ಹೊಂದಿದ್ದರು. ಶರ್ಮಾ ಪ್ರಧಾನಿ ಕಾರ್ಯಾಲಯದಲ್ಲಿ ವಿಶೇಷ ಕರ್ತವ್ಯದ ಮೇಲೆ ನಿಯೋಜಿತರಾಗಿದ್ದ ಸಂದರ್ಭದಲ್ಲಿ ಶಿವಾನಿಗೆ ಸರ್ಕಾರದ ಕೆಲ ರಹಸ್ಯ ದಾಖಲೆಗಳನ್ನು ನೀಡಿದ್ದರು. ಶರ್ಮಾ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂಬ ಭಾವನೆಯಿಂದ ಶಿವಾನಿ ದಾಖಲೆಗಳನ್ನು ಬಹಿರಂಗಪಡಿಸುವ ಬೆದರಿಕೆ ಒಡ್ಡಿದಳು. ಈ ಕಾರಣದಿಂದ ಶರ್ಮಾ, ಶಿವಾನಿ ಕೊಲೆ ಸಂಚು ರೂಪಿಸಿದ್ದರು ಎಂದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ತಾವು ಶಿವಾನಿ ಜತೆ ಉತ್ತಮ ಸ್ನೇಹ ಹೊಂದಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದ ಶರ್ಮಾ ತಮ್ಮಿಬ್ಬರ ನಡುವೆ ಸಂಬಂಧವಿಲ್ಲ ಎಂದೂ ಹೇಳಿದ್ದರು

2008: ಕರ್ನಾಟಕ ನಾಟಕ ಅಕಾಡೆಮಿಯ 2007ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಮೈಸೂರಿನ ನಾಟಕಕಾರ ಪ್ರೊ. ಕೆ.ಎಸ್.ಭಗವಾನ್ ಅವರನ್ನು ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಗದಗದ ಕುಮಾರೇಶ್ವರ ಕೃಪಾ ಪೋಷಿತ ಪಂಚಾಕ್ಷರಿ ಗವಾಯಿಗಳವರ ನಾಟ್ಯ ಸಂಘವನ್ನು ಕೆ. ಹಿರಣ್ಣಯ್ಯ ಪ್ರಶಸ್ತಿಗೆ ಹಾಗೂ 15 ಕಲಾವಿದರನ್ನು ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಪ್ರಕಟಿಸಿದರು.

2008: `ಪರಿಷ್ಕೃತ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)- 2015'ರ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತು. ಈ ಯೋಜನೆಯ ರದ್ಧತಿ ಕೋರಿ ನಗರದ ಸಿಟಿಜನ್ಸ್ ಆಕ್ಷನ್ ಫೋರಂ, ಸದಾಶಿವನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಅನೇಕ ಮಂದಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ರವಿ ಮಳೀಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿತು. ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿ ಎಂ ಆರ್ ಡಿ ಎ) ರೂಪಿಸಿರುವ ನಿಯಮಕ್ಕೆ ವ್ಯತಿರಿಕ್ತವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಮನಸೋ ಇಚ್ಛೆ ಕಳೆದ ಜೂನ್ 25ರಂದು ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅರ್ಜಿದಾರರು ದೂರಿದರು. 1995ರಲ್ಲಿ ಬೆಂಗಳೂರು ನಗರದಲ್ಲಿ ಹಸಿರು ವಲಯವು ಶೇ 56ರಷ್ಟಿತ್ತು. ಆದರೆ ಈ ಯೋಜನೆಯಿಂದಾಗಿ ಹಸಿರು ವಲಯವು ಶೇ 35ಕ್ಕೆ ಇಳಿದಿದೆ. ಅಷ್ಟೇ ಅಲ್ಲದೇ ಗಗನಚುಂಬಿ ಕಟ್ಟಡಗಳಿಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ನಗರದಲ್ಲಿ ಜನಸಾಂದ್ರತೆ ಹೆಚ್ಚಾಗುವ ಸಂಭವವಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

2008: ಹಿಂದೂ ದೇವತೆಗಳನ್ನು ಅವಮಾನಕರ ಹಾಗೂ ಆಶ್ಲೀಲವಾಗಿ ಚಿತ್ರಿಸಿದ ಆಪಾದನೆಗೆಗೊಳಗಾದ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಅವರ ಚಿತ್ರಗಳನ್ನು ಮುಂಬರುವ ಹರಾಜಿನಿಂದ ಹಿಂತೆಗೆದುಕೊಳ್ಳುವಂತೆ ಇಡಲಾಗಿದ್ದ ಬೇಡಿಕೆಯನ್ನು ಅಂತಾರಾಷ್ಟ್ರೀಯ ಚಿತ್ರಕಲಾ ಹರಾಜು ಸಂಸ್ಥೆ ಕ್ರಿಸ್ಟೀ ತಿರಸ್ಕರಿಸಿತು.

2008: ಕ್ಷೇತ್ರ ಮರು ವಿಂಗಡಣೆ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿಯನ್ನು ಒಳಗೊಂಡ 2008ರ ಮಸೂದೆಗಳನ್ನು ಕೇಂದ್ರ ಕಾನೂನು ಸಚಿವ ಹಂಸಲಾಲ್ ಭಾರಧ್ವಾಜ್ ರಾಜ್ಯಸಭೆಯಲ್ಲಿ ಮಂಡಿಸಿದರು.

2008: ನೂತನ ಪ್ರಸಾರ ಭಾರತಿ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅಂಗೀಕಾರ ನೀಡಿತು. ಈ ಮಸೂದೆ ಸುಗ್ರೀವಾಜ್ಞೆಯಾಗುವ ಮೂಲಕ ಪ್ರಸಿದ್ಧ ಪತ್ರಕರ್ತ ಎಂ.ವಿ. ಕಾಮತ್ ಅಧ್ಯಕ್ಷರಾಗಿರುವ ಪ್ರಸಾರ ಭಾರತಿ ಬದಲಾಗುವುದು. ಮಸೂದೆಯು ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರು ವರ್ಷಗಳಿಗೆ ಮತ್ತು ವಯಸ್ಸನ್ನು 70 ವರ್ಷಕ್ಕೆ ಸೀಮಿತಗೊಳಿಸಿದ್ದು, ಆನಂತರ ಹಂಗಾಮಿ ಸದಸ್ಯರಾಗಿರುತ್ತಾರೆ. ಜೊತೆಗೆ ಕಾರ್ಯಕಾರಿ ಸದಸ್ಯರು ಐದು ವರ್ಷ ಕಾಲ ಪೂರ್ಣಾವಧಿಯ ಸದಸ್ಯರಾಗಿರಲು ಈ ಮಸೂದೆ ಅವಕಾಶ ನೀಡುವುದು.

2008: ಪಾಕಿಸ್ಥಾನ ಜೈಲಿನಲ್ಲಿದ್ದು ಏಪ್ರಿಲ್ 1ರಂದು ಗಲ್ಲು ಶಿಕ್ಷೆ ನಿಗದಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಗೆ ಮಾನವೀಯತೆಯ ಆಧಾರದಲ್ಲಿ `ಕ್ಷಮಾದಾನ' ನೀಡುವಂತೆ ಪಾಕ್ ಸರ್ಕಾರಕ್ಕೆ ಭಾರತ ಮನವಿ ಮಾಡಿತು. ಈ ಸಂಬಂಧ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಗೊಂಡು ಸರಬ್ಜಿತ್ ಪ್ರಾಣ ಉಳಿಸಲು ಸರ್ಕಾರ ತತ್ ಕ್ಷಣ ಮುಂದಾಗುವಂತೆ ಸದಸ್ಯರು ಆಗ್ರಹಿಸಿದಾಗ, ಸ್ವಯಂಪ್ರೇರಿತರಾಗಿ ಉತ್ತರ ನೀಡಿದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ, ಈವರೆಗೆ ಪಾಕಿಸ್ಥಾನದಿಂದ ಗಲ್ಲುಶಿಕ್ಷೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸರ್ಕಾರಕ್ಕೆ ಬಾರದಿದ್ದರೂ ಮಾಧ್ಯಮ ವರದಿಗಳನ್ನು ಅನುಸರಿಸಿ ಕ್ಷಮಾದಾನದ ಕೋರಿಕೆ ಸಲ್ಲಿಸಿರುವುದಾಗಿ ಹೇಳಿದರು.

2008: ಈಜಿಪ್ಟಿನಲ್ಲಿ ನಡೆದ ಕೈರೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧಾತ್ಮಕ ವಿಭಾಗಕ್ಕೆ ಭಾರತದಿಂದ ಆಯ್ಕೆಯಾಗಿದ್ದ `ಕೇರ್ ಆಫ್ ಫುಟ್ ಪಾತ್' ಮಕ್ಕಳ ಚಿತ್ರ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ ಎಂದು ನಿರ್ದೇಶಕ ಮಾಸ್ಟರ್ ಕಿಶನ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ಸಣ್ಣ ಕಥಾ ವಸ್ತು ಉಳ್ಳ ಮಕ್ಕಳ ಚಿತ್ರ ವಿಭಾಗದಲ್ಲಿ ಎರಡು ಅಂತಾರಾಷ್ಟ್ರೀಯ ವಿಶೇಷ ಪ್ರಶಸ್ತಿ ಹಾಗೂ ಈಜಿಪ್ಟ್ ಪತ್ರಕರ್ತರು ನೀಡಿದ `ಅಲೆಕ್ಸಾಂಡ್ರಿಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ' ಈ ಚಿತ್ರಕ್ಕೆ ಲಭಿಸಿದೆ.

2008: ಹವ್ಯಾಸಿ ರಂಗಭೂಮಿ ನಿರ್ದೇಶಕಿ ಗುಲ್ಬರ್ಗದ ಸುಜಾತಾ ಜಂಗಮ ಶೆಟ್ಟಿ, ಹವ್ಯಾಸಿ ರಂಗಭೂಮಿ (ನೇಪಥ್ಯ) ಬೆಂಗಳೂರು ಜಿಲ್ಲೆಯ ಕೆ.ಎಚ್.ಕುಮಾರ್, ಹವ್ಯಾಸಿ ರಂಗ ಭೂಮಿ (ನೇಪಥ್ಯ) ಹಾಸನದ ಉಮೇಶ್ ತೆಂಕನಹಳ್ಳಿ ಹಾಗೂ ಹವ್ಯಾಸಿ ರಂಗಭೂಮಿ ನಿರ್ದೇಶಕ ಹಾವೇರಿಯ ಶ್ರೀಪಾದ್ ಭಟ್ ಅವರನ್ನು ಸಿಜಿಕೆ ಯುವರಂಗ ಪುರಸ್ಕಾರಕ್ಕೆ ಆಯ್ಕೆ ಮಾಡಲಾಯಿತು.

2007: ಜಾಗತಿಕ ಕ್ರಿಕೆಟಿನ ಅತ್ಯಂತ ಪ್ರಭಾವಿ ಕೋಚ್ಗಳಲ್ಲಿ ಒಬ್ಬರೆಂದು ಖ್ಯಾತರಾಗಿದ್ದ ಪಾಕಿಸ್ಥಾನ ಕ್ರಿಕೆಟ್ ತಂಡದ ತರಬೇತುದಾರ ರಾಬರ್ಟ್ ಬಾಬ್ ಆಂಡ್ರ್ಯೂ ವೂಲ್ಮರ್ (58) (15-5-1948ರಿಂದ 18-3-2007) ಜಮೈಕಾದಲ್ಲಿ ನಿಗೂಢ ರೀತಿಯಲ್ಲಿ ಮೃತರಾದರು. ದುರ್ಬಲ ಐರ್ಲೆಂಡ್ ವಿರುದ್ಧ ಸೋಲುಂಡು ಪಾಕಿಸ್ಥಾನ ವಿಶ್ವಕಪ್ ಪಂದ್ಯಾವಳಿಯಿಂದ ಹೊರಬಿದ್ದುದರಿಂದ ಆಘಾತಕ್ಕೆ ಒಳಗಾದ ವೂಲ್ಮರ್ ಈದಿನ ಬೆಳಗ್ಗೆ ತಮ್ಮ ಕೊಠಡಿಯ ನೆಲದಲ್ಲಿ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದರು. ಆಸ್ಪತ್ರೆಗೆ ಸೇರಿಸಿದರೂ ಮಧ್ಯಾಹ್ನದ ವೇಳೆಗೆ ಅವರು ಮೃತರಾದರು. ಭಾರತದ ಕಾನ್ಪುರದಲ್ಲಿ ಜನಿಸಿದ ವೂಲ್ಮರ್ 19 ಟೆಸ್ಟ್ಗಳಲ್ಲಿ ಆಡಿ, 1059 ರನ್ ಗಳಿಸಿದ್ದರು. ಮೂರು ಶತಕಗಳ ಸಾಧನೆ ಮಾಡಿದ್ದ ಅವರ ಸರಾಸರಿ ರನ್ನುಗಳು 33.09. ವಾರ್ವಿಕ್ ಷೈರ್ (1991), ದಕ್ಷಿಣ ಆಫ್ರಿಕಕ್ಕೆ (1994-1999) ಕೋಚಿಂಗ್ ನೀಡಿದ್ದ ಅವರು 2004ರಲ್ಲಿ ಪಾಕ್ ತಂಡಕ್ಕೆ ಕೋಚಿಂಗ್ ನೀಡಲು ಆಯ್ಕೆಯಾಗಿದ್ದರು.

2007: ಸಂಗೀತ ಸಾಮ್ರಾಜ್ಞಿ ಡಾ. ಗಂಗೂಬಾಯಿ ಹಾನಗಲ್ ಅವರಿಗೆ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಹೊನ್ನಾವರ ತಾಲ್ಲೂಕಿನ ಗುಣವಂತೆಯಲ್ಲಿ ಪ್ರದಾನ ಮಾಡಲಾಯಿತು.

2007: ಮುಂಬೈಯ ಅಕಾಡೆಮಿ ಆಫ್ ಮ್ಯೂಸಿಕ್ ಇಮೇಜಸ್ ಸಂಘಟಿಸಿದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ `ನಾಯಿ ನೆರಳು' ಚಿತ್ರವು ಶ್ರೇಷ್ಠ ಚಿತ್ರ ಮತ್ತು ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. `ನಾಯಿ ನೆರಳು' ಚಿತ್ರಕ್ಕೆ ಇದು ನಾಲ್ಕನೇ ಅಂತಾರಾಷ್ಟ್ರೀಯ ಪ್ರಶಸ್ತಿ. ಈ ಹಿಂದೆಯೇ ಕರಾಚಿ, ಓಷಿಯಾನ್ ಚಿತ್ರೋತ್ಸವಗಳಲ್ಲೂ ಪ್ರಶಸ್ತಿ ಗಳಿಸಿದ ಅದು 2006ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ ಎರಡು ಪುರಸ್ಕಾರಗಳಿಗೆ ಪಾತ್ರವಾಗಿತ್ತು. ಡಾ. ಎಸ್. ಎಲ್. ಭೈರಪ್ಪ ಅವರ ಕಾದಂಬರಿ ಆಧರಿಸಿದ ಈ ಚಿತ್ರವನ್ನು ಬಸಂತಕುಮಾರ್ ಪಾಟೀಲ್ ನಿರ್ಮಿಸಿದ್ದಾರೆ.

2007: ಎನ್ ಸಿ ಪಿ ಖಜಾಂಚಿ ರಾಮಾವತಾರ್ ಜೋಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಛತ್ತೀಸ್ ಗಢ ರಾಜ್ಯದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರನ್ನು ಪೊಲೀಸರು ಬಂಧಿಸಿದರು. 2003ರ ಜೂನ್ ತಿಂಗಳಲ್ಲಿ ರಾಮಾವತಾರ್ ಜೋಗಿ ಅವರನ್ನು ಛತ್ತೀಸ್ ಗಢದ ರಾಜಾನಂದಗಾಂವಿನಲ್ಲಿ ಮರುಚುನಾವಣೆ ಪ್ರಚಾರ ಸಂದರ್ಭದಲ್ಲಿ ಗುಂಡಿಟ್ಟು ಕೊಲೆಗೈಯಲಾಗಿತ್ತು.

2007: ಸಿರಿಗೆರೆ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ (ತರಳಬಾಳು ಸ್ವಾಮೀಜಿ) ಅವರ ಪೂರ್ವಾಶ್ರಮದ ತಾಯಿ ಗಂಗಮ್ಮ (82) ಅನಾರೋಗ್ಯದಿಂದ ಶಿವಮೊಗ್ಗದಲ್ಲಿ ನಿಧನರಾದರು.

2006: ಅಂತಾರಾಷ್ಟ್ರೀಯ ಲೇಸರ್ ಪ್ರದರ್ಶನ ಸಂಸ್ಥೆಯು ಕಲಾವಿದರ ಅಮೋಫ ಸಾಧನೆಗೆ ನೀಡುವ ಅಂತಾರಾಷ್ಟ್ರೀಯ ಪ್ರಶಸ್ತಿಯು ಖ್ಯಾತ ಜಾದೂಗಾರ ಪಿ.ಸಿ. ಸರ್ಕಾರ್ ಅವರ ಪುತ್ರ ಮಾಣಿಕ್ ಸರ್ಕಾರ್ ಅವರಿಗೆ ವಾಷಿಂಗ್ಟನ್ನಿನಲ್ಲಿ ನಡೆದ ಲೇಸರ್ ಪ್ರದರ್ಶನದಲ್ಲಿ ಬುದ್ಧನ ಚರಿತ್ರೆ ಕುರಿತು ಅದ್ಭುತ ಲೇಸರ್ ಪ್ರದರ್ಶನ ನೀಡಿದ್ದಕ್ಕಾಗಿ ಲಭಿಸಿತು. ಮಾಣಿಕ್ ಸರ್ಕಾರ್ ಅವರ ಕಂಪೆನಿ ಲೇಸರ್ ಲೈಟ್ ಮ್ಯಾಜಿಕ್ಕಿಗೆ ಈ ಪ್ರಶಸ್ತಿ ಲಭಿಸಿತು. ಕಲಾವಿದರು ಹಾಗೂ ತಾಂತ್ರಿಕ ಕೌಶಲ್ಯಕ್ಕಾಗಿ ನೀಡಲಾಗುವ ಈ ಪ್ರಶಸ್ತಿ ಹಾಲಿವುಡ್ಡಿನ ಆಸ್ಕರ್ ಪ್ರಶಸ್ತಿಗೆ ಸಮಾನವಾದುದು.

2006: ದೆಹಲಿಯ ರೂಪಸಿ ನೇಹಾ ಕಪೂರ್ ಪಾಂಡ್ಸ್ ಫೆಮಿನಾ ಭಾರತ ಸುಂದರಿಯಾಗಿ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಆಯ್ಕೆಯಾದರು.

2006: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು 2007ರ ವಿಶ್ವಕಪ್ ವರೆಗೆ ರಾಹುಲ್ ದ್ರಾವಿಡ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ನೇಮಿಸಿತು. ಚಿತ್ರದುರ್ಗದ ಸುಧೀರ್ ಕುಮಾರ ಈ ದಿನ ಮೆಲ್ಬೋರ್ನ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ವೇಟ್ ಲಿಫ್ಟಿಂಗಿನಲ್ಲಿ ಕಂಚಿನ ಪದಕ ಗೆದ್ದರೆ, ಶೂಟಿಂಗಿನಲ್ಲಿ ಸಮರೇಶ್ ಜಂಗ್ ಮತ್ತು ವೇಟ್ ಲಿಫ್ಟಿಂಗ್ ಮಹಿಳೆಯರ 58 ಕೆ.ಜಿ. ವಿಭಾಗದಲ್ಲಿ ರೇಣು ಬಾಲಾ ಚಾನು ಸ್ವರ್ಣಪದಕಗಳನ್ನು ಬಗಲಿಗೆ ಹಾಕಿಕೊಂಡರು.

1965: ಮೊತ್ತ ಮೊದಲ ಬಾಹ್ಯಾಕಾಶ ನಡಿಗೆ ನಡೆಯಿತು. ಸೋವಿಯತ್ ಗಗನಯಾನಿ ಅಲೆಸ್ಕಿ ಲಿಯೊನೊವ್ ಕ್ರೀಮಿಯಾದಿಂದ 177 ಕಿ.ಮೀ. ಎತ್ತರದಲ್ಲಿ ಭೂಪ್ರದಕ್ಷಿಣೆ ಕಾಲದಲ್ಲಿ ತಾವಿದ್ದ ಬಾಹ್ಯಾಕಾಶ ನೌಕೆಯ ವೊಸ್ಖೋಡ್ 2 ಕೋಶದಿಂದ ಹೊರಕ್ಕೆ ಬಂದು ಬಾಹ್ಯಾಕಾಶ ನೌಕೆಯ ಹೊರಭಾಗದಲ್ಲಿ 10 ನಿಮಿಷಗಳ ಕಾಲ ನಡೆದಾಡಿದರು. (1967ರಲ್ಲಿ ಲಿಯೋನಿದ್ ಬ್ರೆಜ್ನೇವ್ ಎಂದು ತಪ್ಪಾಗಿ ಭಾವಿಸಿದ ಹಂತಕರು ಗುಂಡು ಹೊಡೆದು ಇವರನ್ನು ಕೊಲ್ಲಲು ಯತ್ನಿಸಿದರು. ಇವರ ಕಾರಿನತ್ತ ಹಂತಕ ಮೂರು ಸುತ್ತು ಗುಂಡು ಹಾರಿಸಿದ.).

1944: ನೇತಾಜಿ ಸುಭಾಶ್ ಚಂದ್ರ ಬೋಸ್ ನೇತೃತ್ವದಲ್ಲಿ ಅಜಾದ್ ಹಿಂದ್ ಫೌಜ್ (ಭಾರತ ರಾಷ್ಟ್ರೀಯ ಸೇನೆ) ಭಾರತದ ವಿಮೋಚನೆಗಾಗಿ ಬರ್ಮಾ (ಈಗಿನ ಮ್ಯಾನ್ಮಾರ್) ಗಡಿ ದಾಟಿ ಭಾರತದತ್ತ ಚಲಿಸಿತು.

1938: ಚಿತ್ರನಟ ಶಶಿಕಪೂರ್ ಹುಟ್ಟಿದರು.

1936: ವಿಲ್ಲೆಮ್ ಡಿ ಕ್ಲರ್ಕ್ ಹುಟ್ಟಿದ ದಿನ. ರಾಜಕಾರಣಿ ಹಾಗೂ 1989-94ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ಇವರು ತಮ್ಮ ರಾಷ್ಟ್ರದಲ್ಲಿ ವರ್ಣಭೇದ ನೀತಿಯನ್ನು ಕೊನೆಗೊಳಿಸಿ ಬಹುಸಂಖ್ಯಾತರಿಗೆ ಸಂಧಾನದ ಮೂಲಕ ಆಡಳಿತ ವರ್ಗಾಯಿಸುವ ಪ್ರಕ್ರಿಯೆ ಆರಂಭಿಸಿದರು. ಈ ಸಾಧನೆಗಾಗಿ ಅವರಿಗೆ 1993ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತು. 1994ರಲ್ಲಿ ಕರಿಯರ ನಾಯಕ ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದರು.

1928: ಫಿಡೆಲ್ ರಾಮೋಸ್ ಹುಟ್ಟಿದ ದಿನ. ಫಿಲಿಪ್ಪೀನ್ಸಿನ ಸೇನಾ ನಾಯಕ ಹಾಗೂ ರಾಜಕಾರಣಿಯಾಗಿದ್ದ ಇವರು ಮುಂದೆ ಫಿಲಿಪ್ಪೀನ್ಸಿನ ಅಧ್ಯಕ್ಷರಾಗಿದ್ದರು.

1894: ರಫಿ ಅಹಮದ್ ಕಿದ್ವಾಯಿ (1894-1954) ಹುಟ್ಟಿದರು. ಇವರು ಸ್ವಾತಂತ್ರ್ಯ ಹೋರಾಟ ಕಾಲದ ರಾಷ್ಟ್ರೀಯವಾದಿ ನಾಯಕರಾಗಿದ್ದರು.

1837: ಸ್ಟೀಫನ್ ಗ್ರೋವರ್ ಕ್ಲೀವ್ ಲ್ಯಾಂಡ್ (1837-1908) ಹುಟ್ಟಿದ ದಿನ. ಅಮೆರಿಕದ ವಕೀಲನಾದ ಈತ ಅಮೆರಿಕಾದ 22 ಮತ್ತು 24ನೇ ಅಧ್ಯಕ್ಷನಾದ.

No comments:

Advertisement