Sunday, March 28, 2010

ಇಂದಿನ ಇತಿಹಾಸ History Today ಮಾರ್ಚ್ 28

ಇಂದಿನ ಇತಿಹಾಸ

ಮಾರ್ಚ್ 28
ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಸ್ಲಂಡಾಗ್ ಮಿಲಿಯನೇರ್ ಚಿತ್ರದ 'ಜೈ ಹೋ' ಗೀತೆಯ ವಿರುದ್ಧ ಬಿಜೆಪಿ 'ಭಯ್‌ ಹೋ' ಎಂಬ ಅದೇ ಮಾದರಿಯ ಸ್ವರವಿರುವ ಅಣಕು ಗೀತೆಯೊಂದನ್ನು ಛೂ ಬಿಟ್ಟಿತು.

2009: ಪ್ರಚೋದನಕಾರಿ ಭಾಷಣದ ಆರೋಪಕ್ಕೆ ಗುರಿಯಾದ ಬಿಜೆಪಿಯ ಲೋಕಸಭಾ ಚುನಾವಣಾ ಅಭ್ಯರ್ಥಿ ವರುಣ್ ಗಾಂಧಿ ಉತ್ತರಪ್ರದೇಶದ ಪಿಲಿಭಿಟ್ ನ್ಯಾಯಾಲಯಕ್ಕೆ ಶರಣಾದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು. ಮುಸ್ಲಿಮ್ ವಿರೋಧಿ ಭಾಷಣದ ಹಿನ್ನೆಲೆಯಲ್ಲಿ ತೀವ್ರ ವಿವಾದಕ್ಕೆ ಗುರಿಯಾದ ವರುಣ್ ತಾವು ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ ಕೆಲವೇ ಕ್ಷಣದಲ್ಲಿ ನ್ಯಾಯಾಧೀಶರು ಈ ಆದೇಶ ನೀಡಿದರು. ಇದಕ್ಕೆ ಮುನ್ನ ತಮ್ಮ ಪರ ಘೋಷಣೆ ಕೂಗುತ್ತಾ ಬಿಜೆಪಿಯ ಧ್ವಜ ಹಿಡಿದಿದ್ದ ಬೃಹತ್ ಸಂಖ್ಯೆಯ ಬೆಂಬಲಿಗರೊಂದಿಗೆ ನವದೆಹಲಿಯಿಂದ ಬಂದ ಅವರು ನ್ಯಾಯಾಲಯದ ಆವರಣ ಪ್ರವೇಶಿಸಿದ್ದರು.

2009: ಭೂಮಿಯನ್ನು ತಾಪಮಾನ ಹೆಚ್ಚಳದಿಂದ ರಕ್ಷಿಸುವ ಉದ್ದೇಶದಿಂದ ಸಿಡ್ನಿಯಲ್ಲಿ ಈದಿನ ರಾತ್ರಿ ಒಂದು ಗಂಟೆ ವಿದ್ಯುದ್ದೀಪಗಳನ್ನು (ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 8.30 ರಿಂದ 9.30) ಆರಿಸಿ ಜಗತ್ತಿನ ಇತರೆಡೆಗಳಿಗಿಂತ ಮೊದಲಾಗಿ ಜಾಗತಿಕ 'ಅರ್ತ್ ಅವರ್' ಆಚರಿಸಲಾಯಿತು. ಹೀಗಾಗಿ ಸದಾ ವಿದ್ಯುದ್ದೀಪಗಳಿಂದ ಝಗಮಗಿಸುವ ಸಿಡ್ನಿಯ ಒಪೆರಾ ಹೌಸ್ ಹಾಗೂ ಹಾರ್ಬರ್ ಬ್ರಿಜ್‌ನಲ್ಲಿ ರಾತ್ರಿ ಒಂದು ತಾಸು ಗಾಢಾಂಧಕಾರ ಕವಿದಿತ್ತು. ಪೆಸಿಫಿಕ್ ದ್ವೀಪಸಮೂಹಗಳಲ್ಲಿಯೇ ಅತ್ಯಂತ ದೊಡ್ಡದಾದ ಚಥಂ ದ್ವೀಪದಲ್ಲಿಯೂ 'ಡಿಸೇಲ್ ಜನರೇಟರ್' ಸ್ಥಗಿತಗೊಳಿಸುವ ಮೂಲಕ 'ಅರ್ತ್ ಅವರ್' ಆಚರಿಸಲಾಯಿತು. ವ್ಯಾಟಿಕನ್, ನಯಾಗರಾ ಜಲಪಾತ, ಐಫೆಲ್ ಗೋಪುರ, ಲಾಸ್ ವೇಗಾಸ್, ಕೆಸಿನೊ ಜಲಸಂಧಿ, ಬೀಜಿಂಗಿನ ಒಲಿಂಪಿಕ್ ಸ್ಟೇಡಿಯಂ - ಇವೇ ಮುಂತಾದ ವಿಶ್ವದ ಸುಮಾರು 371 ಪ್ರಸಿದ್ಧ ಸ್ಥಳಗಳಲ್ಲಿ ಒಂದು ತಾಸು ವಿದ್ಯುತ್‌ದೀಪ ಆರಿಸಿ 'ಅರ್ತ್ ಅವರ್' ಆಚರಿಸಲಾಯಿತು.

2009: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಸ್ಲಂಡಾಗ್ ಮಿಲಿಯನೇರ್ ಚಿತ್ರದ 'ಜೈ ಹೋ' ಗೀತೆಯ ವಿರುದ್ಧ ಬಿಜೆಪಿ 'ಭಯ್‌ ಹೋ' ಎಂಬ ಅದೇ ಮಾದರಿಯ ಸ್ವರವಿರುವ ಅಣಕು ಗೀತೆಯೊಂದನ್ನು ಛೂ ಬಿಟ್ಟಿತು. 'ನಮ್ಮ ಹೊಸ ಗೀತೆ ದೇಶದ ನಿಜವಾದ ಸ್ಥಿತಿಯನ್ನು ಬಿಂಬಿಸುವುದು. ಅದು ಭಯ್ ಹೋ (ಹೆದರಿಕೆ ಇದೆ), ಭೂಕ್ ಹೋ (ಹಸಿವಿದೆ), ಅಂತಕ್ ಹೋ (ಭಯೋತ್ಪಾದಕರಿದ್ದಾರೆ), ಮಹಂಗಾಯೀ ಹೋ (ಹಣದುಬ್ಬರ ಇದೆ) ಆದಾಗ್ಯೂ ಜೈ ಹೋ' ಎಂದು ಹಾಡುತ್ತಾ ಕಾಂಗ್ರೆಸ್ ಪಕ್ಷವನ್ನು ಚುಚ್ಚಲಿದೆ' ಎಂದು ಬಿಜೆಪಿಯ ವಕ್ತಾರ ಸಿದ್ಧಾರ್ಥನಾಥ್ ಸಿಂಗ್ ಹೇಳಿದರು.

2009: ಗುಜರಾತಿನ ಗೋಧ್ರಾ ಗಲಭೆಯ ಸಂಚು ನಡೆಸಿದ ಆರೋಪಕ್ಕಾಗಿ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಸಚಿವೆ ಮಾಯಾ ಕೊದ್ನಾನಿ ಮತ್ತು ವಿಶ್ವಹಿಂದೂಪರಿಷತ್ ಮುಖಂಡ ಜೈದೀಪ್ ಪಟೇಲ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಏಪ್ರಿಲ್ 1ರ ವರೆಗೆ ಪೊಲೀಸ್ ವಶಕ್ಕೆ ಪಡೆಯಲಾಯಿತು. ಬಂಧನ ತಪ್ಪಿಸಲು ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಯಾಗೆ ಅದನ್ನು ನಿರಾಕರಿಸಲಾಗಿತ್ತು. ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ನ್ಯಾಯಾಲಯಕ್ಕೆ ಶರಣಾಗಿದ್ದರು. ಆಕೆಯನ್ನು ನಂತರ ಪ್ರಕರಣದ ವಿಶೇಷ ತನಿಖಾ ತಂಡದ ಮುಂದೆಯೂ ಹಾಜರು ಪಡಿಸಲಾಯಿತು.

2009: ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹಾಗೂ ರೈಲ್ವೆ ರಾಜ್ಯ ಸಚಿವ ಆರ್.ವೇಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಆಡಳಿತಾರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಿಂದ ತಮ್ಮ ಪಕ್ಷವಾದ ಪಿಎಂಕೆ ಹೊರಬರುವ ಇಂಗಿತ ವ್ಯಕ್ತಪಡಿಸಿದ ಎರಡು ದಿನಗಳ ನಂತರ ಅವರು ಈ ಕ್ರಮಕ್ಕೆ ಮುಂದಾದರು.

2009: ಮದರ್ ತೆರೆಸಾ ನಂತರ ಆ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿದ್ದ 'ಸುಪೀರಿಯರ್ ಜನರಲ್' ಸಿಸ್ಟರ್ ನಿರ್ಮಲ ಅವರು ಅನಾರೋಗ್ಯದ ಕಾರಣದಿಂದ ತನ್ನ ಹನ್ನೆರಡು ವರ್ಷಗಳ ಸೇವೆಗೆ ವಿದಾಯ ಹೇಳಿದರು. ತನ್ನ ನಂತರದ ಸ್ಥಾನದಲ್ಲಿದ್ದ ಸಿಸ್ಟರ್ ಪ್ರೇಮಾ ಅವರಿಗೆ ಕೋಲ್ಕತದಲ್ಲಿ 'ಸುಪರೀಯರ್ ಜನರಲ್' ಪದವಿಯನ್ನು ಹಸ್ತಾಂತರಿಸಿದರು. ಸಿಸ್ಟರ್ ಪ್ರೇಮಾ ಅವರು ಕ್ರೈಸ್ತ ಸನ್ಯಾಸಿನಿಯರಲ್ಲೇ ಅತಿ ಹಿರಿಯರು. ದುರ್ಬಲ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮನಸ್ಸು ಅವರದು. ಈ ಸೇವೆಯನ್ನು ಪರಿಗಣಿಸಿದ ದಿ ಮಿಷನರೀಸ್ ಆಫ್ ಚಾರಿಟಿ ಅವರನ್ನು 'ಮೂರನೇ ಸುಪೀರಿಯರ್ ಜನರಲ್' ಎಂದು ಅಧಿಕೃತವಾಗಿ ಘೋಷಿಸಿತು. ಮಿಷನರೀಸ್ ಆಫ್ ಚಾರಿಟಿ ಆರು ವರ್ಷಗಳಿಗೊಮ್ಮೆ'ಸುಪೀರಿಯರ್ ಜನರಲ್' ಅವರನ್ನು ಆಯ್ಕೆ ಮಾಡುತ್ತದೆ. ಇದೇ ಜವಾಬ್ದಾರಿ ಹೊತ್ತಿದ್ದ ಸಿಸ್ಟರ್ ನಿರ್ಮಲ ಅವರು ಎರಡು ಅವಧಿಯಲ್ಲಿ (1996 ಮತ್ತು 2002) ಸೇವೆ ಸಲ್ಲಿಸಿದ್ದರು. ಮಾರ್ಚ್ 13ರಂದು ಅವರನ್ನು ಇದೇ ಪದವಿಗೆ ಅವಿರೋಧವಾಗಿ ಮತ್ತೆ ಆಯ್ಕೆ ಮಾಡಲಾಗಿತ್ತು.

2009: ಶ್ರೀಲಂಕಾದ ಹಿಂಸಾಪೀಡಿತ ಉತ್ತರ ಭಾಗದಲ್ಲಿ ಎಲ್‌ಟಿಟಿಇ ಆಕ್ರಮಣವನ್ನು ಹಿಮ್ಮೆಟ್ಟಿಸಿದ ಲಂಕಾ ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ 31ಉಗ್ರರು, 6 ಸೈನಿಕರು ಮೃತರಾಗಿ, 30 ಕ್ಕೂ ಅಧಿಕ ಮಂದಿ ಗಾಯಗೊಂಡರು. ಇರನಪಲೈ ಉತ್ತರ, ಪುತುಕುಡಿಯಿರುಪ್ಪು ಪೂರ್ವದಲ್ಲಿ ಎಲ್‌ಟಿಟಿ ಇಯು ಮುಂಚೂಣಿ ಸೇನಾ ನೆಲೆಯನ್ನು ಉಲ್ಲಂಘಿಸಲು ಯತ್ನಿಸಿದಾಗ ಅದನ್ನು ಹಿಮ್ಮೆಟ್ಟಿಸಲಾಯಿತು.

2009: 'ಉತ್ತರ ಅಮೆರಿಕ ವಿಶ್ವ ಕನ್ನಡ ಸಂಸ್ಥೆ' (ನಾರ್ತ್ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಶನ್-ನಾವಿಕ) ಹೆಸರಿನ ಕನ್ನಡಪರ ಸಂಸ್ಥೆ ಅಮೆರಿಕದ ಫಾರ್ಲಿಡಾ ನಗರದಲ್ಲಿ ಸ್ಥಾಪನೆಯಾಯಿತು. ಉತ್ತರ ಅಮೆರಿಕ ಹಾಗೂ ವಿಶ್ವದ ನಾನಾ ಭಾಗಗಳಲ್ಲಿ ನೆಲೆಸಿದ ಹೊರನಾಡ ಕನ್ನಡಿಗರೆಲ್ಲಾ ಒಂದುಗೂಡಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಮೂಲಕ 'ಅಕ್ಕ' ಸಂಸ್ಥೆಯಂತೆ ಮತ್ತೊಂದು ಕನ್ನಡ ಸಂಸ್ಥೆ ಮೈದಳೆದಿದ್ದು, ಜಾಗತಿಕ ಮಟ್ಟದಲ್ಲಿ ಕನ್ನಡ ಸಂಸ್ಕೃತಿಯನ್ನು ಇನ್ನಷ್ಟು ಪ್ರಚಾರ ಮಾಡಲು ಸಜ್ಜಾಯಿತು.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಹಣಾಹಣಿಯಲ್ಲಿ ಅತಿ ವೇಗದ ತ್ರಿಶತಕ ದಾಖಲಿಸಿದ ಭಾರತ ತಂಡದ ವೀರೇಂದ್ರ ಸೆಹ್ವಾಗ್ ವಿಶ್ವ ಕ್ರಿಕೆಟ್ನ್ಲಲಿ ಅತ್ಯಂತ ಗೌರವದಿಂದ ಹೆಸರಿಸಲಾಗುವ `ಡಾನ್' ಬ್ರಾಡ್ಮನ್ ಸಾಧನೆಯನ್ನು ಸರಿಗಟ್ಟಿ ನಿಂತರು. ಅತಿ ಹೆಚ್ಚು ತ್ರಿಶತಕ ಗಳಿಸಿದ ಸಾಧಕರ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರನಿಗೆ ಸ್ಥಾನ ಸಿಕ್ಕಿತು. ಅತಿ ಕಡಿಮೆ ಪಂದ್ಯಗಳಲ್ಲಿ ಎರಡು ಬಾರಿ ಇಷ್ಟೊಂದು ದೊಡ್ಡ ಮೊತ್ತದ ಸಾಧನೆ ಮಾಡಿದ ಬಲಗೈ ಬ್ಯಾಟ್ಸ್ಮನ್, ಇಂತಹದೇ ಶ್ರೇಯಕ್ಕೆ ಪಾತ್ರರಾದ ವೆಸ್ಟ್ ಇಂಡೀಸಿನ ಬ್ರಯನ್ ಲಾರಾಗಿಂತ ಸೆಹ್ವಾಗ್ ಮೇಲೆ ನಿಂತರು. ಆದರೆ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಬ್ರಾಡ್ಮನ್ ಗಿಂತ ಸ್ವಲ್ಪ ಕೆಳಗುಳಿದರು.

2008: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯಿರುವ ಪ್ರಧಾನಿ ಕಚೇರಿಯ ಹೊರಭಾಗದಲ್ಲಿ ಸಂಭವಿಸಿದ ಗುಂಡು ಹಾರಾಟದಲ್ಲಿ ದೆಹಲಿ ಪೊಲೀಸ್ ಕಮಾಂಡೋ ಒಬ್ಬರು ಗಾಯಗೊಂಡರು. ಪೊಲೀಸ್ ಕಮಾಂಡೋ ಸಂಜಯ್ ಅವರಿಗೆ ಘಟನೆಯಲ್ಲಿ ಗುಂಡು ತಗುಲಿ ಪೃಷ್ಠದ ಬಳಿ ಗಾಯವಾಯಿತು.

2008: ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನವೇ ತೃತೀಯ ರಂಗ ರಚನೆಯ ಸಾಧ್ಯತೆಗಳನ್ನು ತಳ್ಳಿ ಹಾಕಿದ ಸಿಪಿಐ, ತಾನು ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ರಾಜಕೀಯ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿತು.

2008: ಲೋಹ ಮತ್ತು ಆಹಾರ ವಸ್ತುಗಳ ದರ ಏರಿಕೆಯು ಹಣದುಬ್ಬರ ದರವನ್ನು ಶೇಕಡಾ 6.68ಕ್ಕೆ ಏರಿಸಿ ಕಳೆದ ಒಂದು ವರ್ಷದಲ್ಲೇ ಅತಿ ಹೆಚ್ಚಿನ ದರ ಏರಿಕೆಯ ದಾಖಲೆಯನ್ನು ನಿರ್ಮಿಸಿತು. ಪರಿಣಾಮವಾಗಿ ಸದ್ಯೋಭವಿಷ್ಯದಲ್ಲಿ ಬಡ್ಡಿದರಗಳು ಇಳಿಯುವ ಆಶೆ ನುಚ್ಚು ನೂರಾಯಿತು. ಇತ್ತೀಚಿನ ತಿಂಗಳುಗಳಲ್ಲಿ ಶೇಕಡಾ 4ರ ಸನಿಹದಲ್ಲಿದ್ದ ಹಣದುಬ್ಬರ ಮೇಲ್ಮುಖವಾಗಿ ಸಾಗುತ್ತಾ ಮಾರ್ಚ್ 15ರಂದು ಕೊನೆಗೊಂಡ ವಾರಾಂತ್ಯ ವೇಳೆಗೆ ಶೇಕಡಾ 0.76ರಷ್ಟು ಹೆಚ್ಚಿತ್ತು.

2008: ಐವತ್ತು ಕೋಟಿ ರೂಪಾಯಿ ಆದಾಯ ತೆರಿಗೆ ವಂಚಿಸಿದ ಪ್ರಕರಣವೊಂದರಲ್ಲಿ ಭೂಗತ ದೊರೆ ದಾವೂದ್ ಇಬ್ರಾಹಿಂ ಆಪ್ತ ಎನ್ನಲಾದ ರೊಮೇಶ್ ಶರ್ಮಾ ತಪ್ಪಿತಸ್ಥ ಎಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತು. 12 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಆದಾಯ ತೆರಿಗೆ ಕಾಯ್ದೆ ಅಡಿ ಆತನನ್ನು ತಪ್ಪಿತಸ್ಥ ಎಂದು ಘೋಷಿಸಿ ದೆಹಲಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕನ್ವಲ್ ಜಿತ್ ಅರೋರಾ ಆದೇಶ ನೀಡಿದರು.

2007: ಫಿಲಿಪ್ಪೀನ್ಸ್ ರಾಜಧಾನಿ ಮನಿಲಾದಲ್ಲಿ 32 ಪುಟ್ಟ ಪುಟ್ಟ ಕೊಳೆಗೇರಿ ಮಕ್ಕಳನ್ನು ಅಪಹರಿಸಿ, ಬಸ್ಸಿನಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಶಿಶುವಿಹಾರ ಕೇಂದ್ರದ ಮಾಲೀಕ ಡ್ಯೂಕಾಟ್ 10 ಗಂಟೆಗಳ ಕಾಲ ಆತಂಕ ಸೃಷ್ಟಿಸಿದ. ಅಪಹೃತ 32 ಮಕ್ಕಳು ಸೇರಿದಂತೆ ಶಿಶುವಿಹಾರದ 145 ಮಕ್ಕಳಿಗೆ ಉಚಿತ ವಸತಿ ವ್ಯವಸ್ಥೆ ಹಾಗೂ ಶಿಕ್ಷಣ ಒದಗಿಸಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಅಗಬೇಕು ಎಂಬುದು ಆತನ ಬೇಡಿಕೆಗಳಾಗಿದ್ದವು. ಚಿತ್ರನಟ, ಸಂಸದ ಸೆನ್ ರೋಮನ್ `ಬಾಂಗ್' ರೆವಿಲ್ಲಾ ಜ್ಯೂನಿಯರ್ ಅವರು ಅಪಹರಣಕಾರನ ಜೊತೆಗೆ ಮಾತುಕತೆ ನಡೆಸಿ ಸಂಜೆ ವೇಳೆಗೆ ಮಕ್ಕಳನ್ನು ಬಂಧಮುಕ್ತಗೊಳಿಸಿದರು. ಅಪಹರಣ ಮುಗಿಯುತ್ತಿದ್ದಂತೆಯೇ ಗೊಂಬೆ, ಆಟಿಕೆ, ತಿಂಡಿ ಪೊಟ್ಟಣಗಳೊಂದಿಗೆ ಅಪಹೃತ ಮಕ್ಕಳು ಮತ್ತು ಅಪಹರಣಕಾರ ಅಪಹೃತ ಬಸ್ಸಿನಿಂದ ಹೊರಕ್ಕೆ ಬಂದರು. ಅಪಹರಣಕಾರ ಪ್ರತಿ ಮಗುವಿಗೂ ಮುತ್ತಿಟ್ಟು, ತನ್ನ ಬಳಿ ಇದ್ದ ಗ್ರೆನೇಡನ್ನು ಪ್ರಾಂತೀಯ ಗವರ್ನರರಿಗೆ ಒಪ್ಪಿಸಿ ಶರಣಾಗತನಾದ. ಹಿಂದೆ ವೇತನ ವಿವಾದಕ್ಕೆ ಸಂಬಂಧಿಸಿದಂತೆ ಈತ ಇಬ್ಬರು ಕ್ಯಾಥೋಲಿಕ್ ಪಾದ್ರಿಗಳನ್ನು ಅಪಹರಿಸಿದ್ದ.

2007: ಪತಿಯೊಡನೆ ವಾಸಿಸಲು ನಿರಾಕರಣೆ ಮತ್ತು ಮಗು ಬೇಡ ಎಂದು ಏಕಪಕ್ಷೀಯ ನಿರ್ಧಾರ ಕೈಗೊಳ್ಳುವ ಪತ್ನಿಯ ವರ್ತನೆ ಮಾನಸಿಕ ಹಿಂಸೆ ಎನಿಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಪತಿ ವಿಚ್ಛೇದನ ಕೇಳಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. 22 ವರ್ಷದ ಹಿಂದೆ ಮದುವೆಯಾಗಿ ಕಳೆದ 16 ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸಿಸಿದ ಪಶ್ಚಿಮ ಬಂಗಾಳದ ಐಎಎಸ್ ದಂಪತಿ ಸಮೀರ್ ಘೋಷ್ ಮತ್ತು ಜಯಾ ಘೋಷ್ ಅವರ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ಇದೇ ಆಧಾರದಲ್ಲಿ ಇತ್ಯರ್ಥ ಪಡಿಸಿ, ವಿಚ್ಛೇದನ ಮಂಜೂರು ಮಾಡಿತು.

2007: ಜಾಗತಿಕ ತಾಪಮಾನದ ಪರಿಣಾಮವಾಗಿ ಹಿಮಾಲಯದ ನೀರ್ಗಲ್ಲುಗಳು ಶೀಘ್ರವಾಗಿ ಕರಗುತ್ತಿವೆ ಎಂದು ಫ್ರೆಂಚ್ ಸಂಶೋಧಕರು ಉಪಗ್ರಹ ಚಿತ್ರಗಳನ್ನು ಅಧರಿಸಿ ಬಹಿರಂಗ ಪಡಿಸಿದರು. ಹಿಮಾಲಯದ ನೀರ್ಗಲ್ಲುಗಳು ಕ್ರಮೇಣ ಕರಗುತ್ತಿರುವ ಚಿತ್ರಗಳನ್ನು ಬಿಡುಗಡೆ ಮಾಡಿದ ಅವರು ವಾರ್ಷಿಕ 8ರಿಂದ 10 ಮೀಟರಿನಷ್ಟು ನೀರ್ಗಲ್ಲುಗಳು ಕರಗುತ್ತಿವೆ ಎಂದು ಅವರು ಪ್ರಕಟಿಸಿದರು.

2006: ದೇಶದಲ್ಲೇ ಅಪರೂಪದ್ದಾದ ಜೀವಂತ ಮನುಷ್ಯನ ಇಡೀ ದೇಹದ ಅಚ್ಚು ತೆಗೆಯುವ ಶಿಲ್ಪಕಲಾ ಪ್ರಯೋಗ ಚಿಕ್ಕಮಗಳೂರಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಯಶಸ್ವಿಯಾಯಿತು. `ಸ್ಲೀಪಿಂಗ್ ಗರ್ಲ್' ಕಲಾಕೃತಿಗೆ ವಿದ್ಯಾಲಯದ ವಿದ್ಯಾರ್ಥಿನಿ ಜ್ಯೋತಿ ಮತ್ತು `ಥಿಂಕಿಂಗ್ ಮ್ಯಾನ್' ಕಲಾಕೃತಿಗೆ ಸಂಚಾರಿ ಪೊಲೀಸ್ ಪೇದೆ ಕಿರಣ್ ಸ್ವಯಂಸ್ಫೂರ್ತಿಯಿಂದ ರೂಪದರ್ಶಿಗಳಾದರು. ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಮತ್ತು ಇತರ ಉಪನ್ಯಾಸಕರ ನೇತೃತ್ವದಲ್ಲಿ 40 ವಿದ್ಯಾರ್ಥಿಗಳ ತಂಡ ದಶಮಾನೋತ್ಸವದ ಅಂಗವಾಗಿ ಬೆಳಗ್ಗೆಯಿಂದ ರಾತ್ರಿಯವರೆಗೆ ಶ್ರಮಿಸಿ ಈ ಕಲಾಕೃತಿಗಳನ್ನು ನಿರ್ಮಿಸಿತು. ಜೀವಂತ ಮನುಷ್ಯನನ್ನೇ ಸಂಪೂರ್ಣವಾಗಿ `ಪ್ಲಾಸ್ಟರ್ ಆಫ್ ಪ್ಯಾರಿಸ್' ನಿಂದ ಮುಚ್ಚಿ ಪಡಿಯಚ್ಚು ತೆಗೆದು ಫೈಬರಿಗೆ ಅಳವಡಿಸುವ ಈ ಕಲೆ ಅತ್ಯಂತ ವಿರಳ. ದೇಹದ ಒಂದಂಗುಲವನ್ನೂ ಬಿಡದೆ ಸಂಪೂರ್ಣವಾಗಿ ಮುಚ್ಚಿ ಮೂಗಿಗೆ ಉಸಿರಾಡಲು ಮಾತ್ರ ಪೈಪ್ ಅಳವಡಿಸಿ ಸುಮಾರು 20 ನಿಮಿಷ ಒಂದೇ ಭಂಗಿಯಲ್ಲಿ ಕೂರಿಸಿ ಈ ಪಡಿಯಚ್ಚು ತೆಗೆಯಲಾಯಿತು.

2006: ಗೋಧ್ರಾ ಹತ್ಯಾಕಾಂಡದ ಬಳಿಕ 2002ರ ಏಪ್ರಿಲಿನಲ್ಲಿ ಗುಜರಾತಿನ ಅಹಮದಾಬಾದಿನ ಧನಿಲಿಮ್ಡಾ ಪ್ರದೇಶದಲ್ಲಿ ನಡೆದ ಕೋಮು ಗಲಭೆ ಪ್ರಕರಣದ ಪ್ರಮುಖ ಆರೋಪಿ ಮುಷ್ತಾಕ್ ಕನಿಯೊ ಮತ್ತು ಇತರ 8 ಆರೋಪಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಯಿತು.

2006: ಆಧುನಿಕ ಹರಿಯಾಣದ ಶಿಲ್ಪಿ ಎಂದೇ ಪರಿಗಣಿಸಲಾಗಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಬನ್ಸಿಲಾಲ್ (79) ನವದೆಹಲಿಯಲ್ಲಿ ನಿಧನರಾದರು. ನಾಲ್ಕು ಬಾರಿ ಹರಿಯಾಣದ ಮುಖ್ಯಮಂತ್ರಿ ಆಗಿದ್ದ ಬನ್ಸಿಲಾಲ್ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿ ಇಂದಿರಾಗಾಂಧಿ ಪುತ್ರ ಸಂಜಯಗಾಂಧಿ ನಿಕಟವರ್ತಿಯಾಗಿ ಸಾಕಷ್ಟು ವಾದಕ್ಕೂ ಗುರಿಯಾಗಿದ್ದರು. ನಂತರ ಕಾಂಗ್ರೆಸ್ಸಿನಿಂದ ಹೊರನಡೆದು ಹರಿಯಾಣ ವಿಕಾಸ ಪಕ್ಷ ಸ್ಥಾಪಿಸಿದ್ದರು. 2004ರಲ್ಲಿ ಕಾಂಗ್ರೆಸ್ಸಿಗೆ ಮರಳಿದ್ದರು.

2006: ಟೆಂಪಲ್ ಆಫ್ ಕಾನ್ಷಿಯಸ್ನೆಸ್ಸಿನ ಮುಖ್ಯಸ್ಥ ಆಧ್ಯಾತ್ಮಿಕ ಗುರು ವೇದಾಂತಿ ಮಹರ್ಷಿ (96) ಅಳಿಯಾರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಇಸ್ರೇಲ್ ಚುನಾವಣೆ ಬಿಗಿ ಭದ್ರತೆಯ ನಡುವೆ ನಡೆಯಿತು. ಐವತ್ತು ಲಕ್ಷ ಮಂದಿ ಮತ ಚಲಾಯಿಸಿದರು. ಆದರೆ 1999 ಹಾಗೂ 2003ರ ಚುನಾವಣೆಗೆ ಹೋಲಿಸಿದರೆ ಮತ ಚಲಾವಣೆ ಪ್ರಮಾಣ ಕುಸಿಯಿತು.

1979: ಅಮೆರಿಕದ ಅತಿಭೀಕರ ಪರಮಾಣು ವಿದ್ಯುತ್ ಸ್ಥಾವರ ದುರಂತ ಸಂಭವಿಸಿದ ದಿನ. ಪೆನ್ಸಿಲ್ವೇನಿಯಾದ ಥ್ರೀ ಮೈಲ್ ಐಲ್ಯಾಂಡಿನ ಯುನಿಟ್ ಟು ರಿಯಾಕ್ಟರಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಸಿದ ಪರಿಣಾಮವಾಗಿ ಈ ದುರಂತ ಘಟಿಸಿತು.

1959: ಕಲಾವಿದ ಸಿಂಧೆ ಡಿ.ಕೆ. ಜನನ.

1958: ಕಲಾವಿದ ವಾಗೀಶ ಭಟ್ ಜನನ.

1955: ಆಕ್ಲೆಂಡಿನ ಈಡನ್ ಪಾರ್ಕಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನ್ಯೂಜಿಲ್ಯಾಂಡ್ 26 ರನ್ನುಗಳಿಗೆ ಆಲ್ ಔಟ್ ಆಗಿ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿತು.

1951: ಕಲಾವಿದ ಶರಣಪ್ಪ ಜಿ. ಶೆಟಗಾರ ಜನನ.

1940: ಕಲಾವಿದ ಶಕುಂತಲಾ ನರಸಿಂಹನ್ ಜನನ.

1939: ಜನರಲ್ ಫ್ರಾಂಕೋಗೆ ಮ್ಯಾಡ್ರಿಡ್ ಶರಣಾಗತಿಯೊಂದಿಗೆ ಸ್ಪಾನಿಶ್ ಅಂತರ್ಯುದ್ಧ ಕೊನೆಗೊಂಡಿತು. ಈ ಗೆಲುವಿನ ಹಿನ್ನೆಲಯಲ್ಲಿ ಫ್ರಾಂಕೋ ಅವರನ್ನು `ಕಾಡಿಲೋ' ಅಂದರೆ ರಾಷ್ಟ್ರದ ನಾಯಕ ಎಂದು ಗೌರವಿಸಲಾಯಿತು.

1930: ಟರ್ಕಿಯಲ್ಲಿನ ಅಂಗೋರಾ ಮತ್ತು ಕಾನ್ ಸ್ಟಾಂಟಿನೋಪಲ್ ನಗರಗಳ ಹೆಸರುಗಳನ್ನು ಕ್ರಮವಾಗಿ ಅಂಕಾರ ಮತ್ತು ಇಸ್ತಾಂಬುಲ್ ಎಂಬುದಾಗಿ ಬದಲಾಯಿಸಲಾಯಿತು.

1926: ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಪಾಲಿ ಉಮ್ರಿಗಾರ್ ಜನ್ಮದಿನ. ಇವರು ಟೆಸ್ಟ್ ಕ್ರಿಕೆಟಿನಲ್ಲಿ ದ್ವಿಶತಕ ಭಾರಿಸಿದ ಮೊಟ್ಟ ಮೊದಲ ಭಾರತೀಯ ಕ್ರಿಕೆಟಿಗ.

1916: ಸಂಗೀತ, ಚಿತ್ರಕಲೆ, ರಂಗಭೂಮಿ ಇತ್ಯಾದಿ ಹಲವಾರು ಪ್ರಕಾರಗಳಲ್ಲಿ ಪರಿಣತಿ ಪಡೆದಿದ್ದ ಕಾಳಪ್ಪ ಪತ್ತಾರ ಅವರು ಬಡವಿಶ್ವಕರ್ಮ ಕುಟುಂಬದ ಸದಸ್ಯರಾಗಿ ರಾಯಚೂರು ಜಿಲ್ಲೆಯ ತಳಕಲ್ಲಿನಲ್ಲಿ ಜನಿಸಿದರು.

1862: ಅರಿಸ್ಟೈಡ್ ಬ್ರಿಯಾಂಡ್ (1862-1932) ಹುಟ್ಟಿದ ದಿನ. ಹನ್ನೊಂದು ಬಾರಿ ಫ್ರಾನ್ಸಿನ ಪ್ರಧಾನಿಯಾದ ಇವರು `ಲೀಗ್ ಆಫ್ ನೇಷನ್ಸ್' ಸ್ಥಾಪನೆ ಮತ್ತು ವಿಶ್ವಶಾಂತಿಗಾಗಿ ತೀವ್ರವಾಗಿ ಶ್ರಮಿಸಿದರು. ಈ ಯತ್ನಗಳು ಇವರಿಗೆ 1926ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಂದು ಕೊಟ್ಟವು. 1926ರ ನೊಬೆಲ್ ಶಾಂತಿ ಪ್ರಶಸ್ತಿ ಇವರ ಜೊತೆಗೆ ಜರ್ಮನಿಯ ಗುಸ್ತಾವ್ ಸ್ಟ್ರೆಸ್ ಮ್ಯಾನ್ ಅವರಿಗೂ ಲಭಿಸಿತು.

1851: ಬರ್ನಾರ್ಡಿನೊ ಲೂಯಿ ಮಚಾಡೊ (1851-1944) ಹುಟ್ಟಿದ ದಿನ. ಬ್ರೆಜಿಲ್ ಸಂಜಾತ ರಾಜಕೀಯ ನಾಯಕನಾದ ಇವರು ಎರಡು ಅವಧಿಗೆ ಪೋರ್ಚುಗಲ್ ಅಧ್ಯಕ್ಷರಾಗಿದ್ದರು.

No comments:

Advertisement