My Blog List

Friday, April 16, 2010

ಇಂದಿನ ಇತಿಹಾಸ History Today ಏಪ್ರಿಲ್ 16


ಇಂದಿನ ಇತಿಹಾಸ

ಏಪ್ರಿಲ್ 16
ಮುಂಬೈ ದಾಳಿಯ ಬಂಧಿತ ಆರೋಪಿ ಅಜ್ಮಲ್ ಕಸಾಬ್ ಪರ ವಾದಿಸಲು ಹಿರಿಯ ಕ್ರಿಮಿನಲ್ ವಕೀಲ ಅಬ್ಬಾಸ್ ಕಾಜ್ಮಿ ಅವರನ್ನು ವಿಶೇಷ ನ್ಯಾಯಾಲಯ ನೇಮಿಸಿತು. ಕಸಾಬ್ ಪರ ಈ ಮೊದಲು ನೇಮಕವಾಗಿದ್ದ ಅಂಜಲಿ ವಾಗ್ಮೋರೆ ಅವರನ್ನು 'ವೃತ್ತಿ ವೈರುಧ್ಯ'ದ ಕಾರಣಕ್ಕಾಗಿ ವಿಶೇಷ ನ್ಯಾಯಾಲಯ ಅನರ್ಹಗೊಳಿಸಿತ್ತು.

2009: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ ಬಿಹಾರ, ಜಾರ್ಖಂಡ್, ಒರಿಸ್ಸಾ ಹಾಗೂ ಛತ್ತೀಸ್‌ಗಡ ರಾಜ್ಯಗಳ ಕೆಲವು ಮತಗಟ್ಟೆ ಕೇಂದ್ರಗಳ ಮೇಲೆ ಮಾವೋವಾದಿಗಳು ದಾಳಿ ನಡೆಸಿ 19 ಮಂದಿಯನ್ನು ಕೊಂದು ಹಾಕಿದರು. 17 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲ ಹಂತದ ಮತದಾನ ನಡೆಯಿತು. ಮಾವೋಗಳು 'ಚುನಾವಣೆ ಬಹಿಷ್ಕರಿಸುವಂತೆ' ಒತ್ತಡ ಹೇರುವ ಮೂಲಕ ಹಿಂಸಾಚಾರಕ್ಕೆ ಯತ್ನಿಸಿದರು.

2009: ಸುಪ್ರೀಂಕೋರ್ಟ್ ನೀಡಿದ ಎರಡು ವಾರದ ಪೆರೋಲ್ ಮೇಲೆ 'ತತ್‌ಕ್ಷಣದ ಬಿಡುಗಡೆ' ಆದೇಶದ ಅನುಸಾರ ಬಿಜೆಪಿಯ ಯುವ ನಾಯಕ ವರುಣ್ ಗಾಂಧಿ, ಎಟಾ ಜೈಲಿನಿಂದ ಹೊರಗೆ ಬಂದರು. ಉತ್ತರ ಪ್ರದೇಶ ಸರ್ಕಾರದ ವಕೀಲರು ವರುಣ್ ಬಿಡುಗಡೆ ಮಾಡಬಾರದು ಎಂದು ಕಠಿಣ ವಾದ ಮಂಡಿಸಿದ್ದರೂ, ನ್ಯಾಯಮೂರ್ತಿಗಳಾದ ಕೆ.ಜಿ.ಬಾಲಕೃಷ್ಣನ್, ಪಿ.ಸದಾಶಿವಂ ಹಾಗೂ ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ಪೀಠ ಈ ನಿರ್ದೇಶನ ನೀಡಿತು.

2009: ಮುಂಬೈ ದಾಳಿಯ ಬಂಧಿತ ಆರೋಪಿ ಅಜ್ಮಲ್ ಕಸಾಬ್ ಪರ ವಾದಿಸಲು ಹಿರಿಯ ಕ್ರಿಮಿನಲ್ ವಕೀಲ ಅಬ್ಬಾಸ್ ಕಾಜ್ಮಿ ಅವರನ್ನು ವಿಶೇಷ ನ್ಯಾಯಾಲಯ ನೇಮಿಸಿತು. ಕಸಾಬ್ ಪರ ಈ ಮೊದಲು ನೇಮಕವಾಗಿದ್ದ ಅಂಜಲಿ ವಾಗ್ಮೋರೆ ಅವರನ್ನು 'ವೃತ್ತಿ ವೈರುಧ್ಯ'ದ ಕಾರಣಕ್ಕಾಗಿ ವಿಶೇಷ ನ್ಯಾಯಾಲಯ ಅನರ್ಹಗೊಳಿಸಿತ್ತು. ಈದಿನ ಬೆಳಗ್ಗೆ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ಕಸಾಬ್ ತನ್ನ ಪರ ವಾದ ಮಂಡಿಸಲು ಪಾಕಿಸ್ಥಾನಿ ವಕೀಲರನ್ನು ನೇಮಿಸಬೇಕು ಎಂದು ಮನವಿ ಸಲ್ಲಿಸಿದ್ದ. ವಿಶೇಷ ನ್ಯಾಯಾಧೀಶ ಎಂ.ಎಲ್.ತಹಿಲ್ಯಾ ಆ ಅರ್ಜಿಯನ್ನು ತಿರಸ್ಕರಿಸಿದ್ದರು. ಹಿಂದಿನ ವಾರ ನೇಮಕಗೊಂಡ ಇನ್ನೋರ್ವ ವಕೀಲ ಕೆ.ಪಿ.ಪವಾರ್ ಅವರು ನೂತನ ವಿಶೇಷ ವಕೀಲ ಕಾಜ್ಮಿ ಅವರ ಸಹಾಯಕರಾಗಿ ಮುಂದುವರಿಯುವರು.

2009: ಹಗರಣದ ಸುಳಿಯಲ್ಲಿ ಸಿಲುಕಿದ್ದ ಸತ್ಯಂ ಕಂಪ್ಯೂಟರ್‌ನ್ನ್ನು ಸ್ವಾಧೀನ ಪಡಿಸಿಕೊಳ್ಳಲು ತಲಾ ಷೇರಿಗೆ ರೂ 58 ನೀಡುವ ಟೆಕ್ ಮಹೀಂದ್ರಾದ ಖರೀದಿ ಪ್ರಸ್ತಾವಕ್ಕೆ ಕಂಪೆನಿ ಕಾನೂನು ಮಂಡಳಿ (ಸಿಎಲ್‌ಬಿ) ಅಂಗೀಕಾರ ನೀಡಿತು.

2009: ಆತ್ಮಾಹುತಿ ದಳದ ಉಗ್ರನೊಬ್ಬ ಸ್ಫೋಟಕಗಳು ತುಂಬಿದ್ದ ಲಾರಿಯನ್ನು ಭದ್ರತಾ ಪಡೆಯ ತನಿಖಾ ಕೇಂದ್ರಕ್ಕೆ ಡಿಕ್ಕಿ ಹೊಡೆಸಿ 10 ಮಂದಿ ಪೊಲೀಸರು ಸೇರಿದಂತೆ 16 ಜನರನ್ನು ಬಲಿ ತಗೆದುಕೊಂಡ ಘಟನೆ ವಾಯವ್ಯ ಪಾಕಿಸ್ಥಾನದ ಗಡಿ ಪ್ರದೇಶ ಚಾರ್ಸ್ದಾದ ಜಿಲ್ಲೆಯಲ್ಲಿನ ಹರಿಚಂದ್ ಗ್ರಾಮದ ತನಿಖಾ ಕೇಂದ್ರದಲ್ಲಿ ನಡೆಯಿತು.

2009: ಬೆಳಗಿನ ತಿಂಡಿ ತಿನ್ನುವುದಕ್ಕೂ, ಅದಾದ ನಂತರ ಮುಖಕ್ಷೌರ (ಶೇವ್) ಮಾಡಿದರೆ ಮುಖದಲ್ಲಿ ರಕ್ತ ಒಸರುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ!? ಹೌದು ಸಂಬಂಧ ಇದೆ ಎಂದು ಜರ್ಮನಿಯ ಸೌಂದರ್ಯ ಪ್ರಸಾಧನ ಮಾರುಕಟ್ಟೆ ವೃದ್ಧಿ ಮತ್ತು ಆರೋಗ್ಯ ಜಾಗೃತಿಯಲ್ಲಿ ತೊಡಗಿರುವ ಸಂಘಟನೆಗಳು ಸೇರಿ ನಡೆಸುತ್ತಿರುವ ಅಂತರ್‌ಜಾಲ ತಾಣವೊಂದರಲ್ಲಿ ಸಲಹೆ ನೀಡಲಾಯಿತು. ಆ ಸಂಬಂಧದ ಕೊಂಡಿ ಹೀಗಿದೆ- ತಿಂಡಿ ತಿನ್ನುತ್ತಿದ್ದಂತೆಯೇ ಹೊಟ್ಟೆಯಲ್ಲಿ ಪಚನ ಕ್ರಿಯೆ ಶುರುವಾಗುತ್ತದೆ. ಆದ್ದರಿಂದ ಹೃದಯ ಬಡಿತ ಹೆಚ್ಚಾಗಿ ನರನಾಡಿಗಳಲ್ಲಿ ರಕ್ತ ಸಂಚಾರ ಏರುತ್ತದೆ. ಸಹಜವಾಗಿಯೇ ಮುಖ ಮತ್ತು ಕತ್ತಿನ ಭಾಗದ ಚರ್ಮದಡಿ ಇರುವ ನರ- ನಾಡಿಗಳು ಹಿಗ್ಗುತ್ತವೆ. ಹೀಗಾಗಿ ಅವು ಹರಿತ ಬ್ಲೇಡ್‌ಗೆ ಸುಲಭವಾಗಿ ಸಿಲುಕಿ ರಕ್ತ ಒಸರುವ ಸಾಧ್ಯತೆ ಇರುತ್ತದೆ ಎಂದು ಲೇಖನದಲ್ಲಿ ವಿವರಿಸಲಾಯಿತು. ಇದರ ಜೊತೆಗೆ, ಶೇವ್ ಮಾಡುವ ಮುನ್ನ ಮುಖದ ಮೇಲಿನ ಕೂದಲನ್ನು ಚೆನ್ನಾಗಿ ನೀರಿನಲ್ಲಿ ಒದ್ದೆ ಮಾಡಿಕೊಳ್ಳಬೇಕೆಂದೂ ಸಲಹೆ ನೀಡಲಾಯಿತು. ಮುಖದ ಕೂದಲು ಒಂದಷ್ಟು ನೀರಿನಲ್ಲಿ ಒದ್ದೆಯಾದರೆ ಸ್ಪಂಜಿನಂತೆ ಹಿಗ್ಗುತ್ತದಾದ್ದರಿಂದ ಶೇವ್ ಮಾಡುವುದು ಸಲೀಸಾಗುತ್ತದೆ. ತುಂಬಾ ಹೊತ್ತು ನೆನೆಸಿದರೆ ಕ್ಷೌರ ಕಷ್ಟವಾಗುತ್ತದೆ ಎಂದು ಜಾಲ ತಾಣ ವಿವರಿಸಿತು.

2008: ಪರೀಕ್ಷಾ ಕೇಂದ್ರಕ್ಕೆ 60 ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಗುಜರಾತ್ ರಾಜ್ಯ ಸಾರಿಗೆ ಸಂಸ್ಥೆ ಬಸ್ಸೊಂದು ಗುಜರಾತಿನ ಬೊಡೆಲಿ ನಗರ ಸಮೀಪ ನರ್ಮದಾ ಕಾಲುವೆಗೆ ಉರುಳಿದ ಪರಿಣಾಮ 42 ವಿದ್ಯಾರ್ಥಿಗಳು ಸೇರಿ ಒಟ್ಟು 45 ಮಂದಿ ಮೃತರಾದರು. ಪರೀಕ್ಷೆ ಬರೆಯುವ ಸಲುವಾಗಿ ಬಾಘ್ ಪುರದಿಂದ ಬೊಡೆಲಿಗೆ 60 ಮಂದಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ಸೇತುವೆಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿತು. 50 ಅಡಿ ಮೇಲಿನಿಂದ ಬಸ್ ಕಾಲುವೆಗೆ ಉರುಳಿದ ನಂತರವೂ ನಾಲ್ಕು ಮಂದಿ ಬದುಕುಳಿದಿದ್ದು ಅವರು ಈಜಿಕೊಂಡು ದಡ ಸೇರಿದರು.

2008: ಸುಪ್ರೀಂಕೋರ್ಟ್ ಆದೇಶದನ್ವಯ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಶೇ 27ರಷ್ಟು ಮೀಸಲಾತಿ ನಿಯಮವನ್ನು ಜಾರಿಗೊಳಿಸಲು ಐಐಟಿಗಳು ನಿರ್ಧರಿಸಿದವು. ದೇಶದ ಏಳು ಐಐಟಿಗಳು ತಮ್ಮ ಸಂಸ್ಥೆಯಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಶೇ 13ರಷ್ಟು ಮೀಸಲಾತಿ ಹೆಚ್ಚಿಸಲು ನಿಶ್ಚಯಿಸಿದವು. ಇದನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ನವದೆಹಲಿಯಲ್ಲಿ ನಡೆದ ಐಐಟಿ ಸಂಸ್ಥೆಗಳ ನಿರ್ದೇಶಕರ ಮಂಡಳಿ ನಿರ್ಧರಿಸಿತು.

2008: ಕಳೆದ ತಿಂಗಳು ನಡೆದ ಕಾರ್ಯಾಚರಣೆಯೊಂದರಲ್ಲಿ ತಮ್ಮ ಸಹಚರರ ಹತ್ಯೆಗೈದುದನ್ನುಪ್ರತಿಭಟಿಸಿ ಜಾರ್ಖಂಡಿನಲ್ಲಿ ನಕ್ಸಲೀಯರ ಕರೆ ಮೇರೆಗೆ ನಡೆದ 24 ಗಂಟೆಗಳ ಬಂದ್ ಕಾಲದಲ್ಲಿ ಗಿರಿಧಿ ಜಿಲ್ಲೆಯಲ್ಲಿ ರೈಲ್ವೆ ಮಾರ್ಗವನ್ನು ಸ್ಫೋಟಿಸಲಾಯಿತು. ಇದರಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.

2008: ಹೆಸರಾಂತ ಕವಿ ಖಲೀಲ್ ಗಿಬ್ರಾನ್ ಅವರ ಜೀವನಚರಿತ್ರೆಯನ್ನು ಬರೆದ ಅವರದೇ ಹೆಸರಿನ ವ್ಯಕ್ತಿಯೊಬ್ಬರು ಬೋಸ್ಟನ್ನಿನಲ್ಲಿ ಮೃತರಾದರು. ಮೃತರು ಕವಿ ಗಿಬ್ರಾನ್ ಅವರ ಸಂಬಂಧಿಯೂ ಹೌದು. ಖ್ಯಾತ ಶಿಲ್ಪಿ ಹಾಗೂ ಚಿತ್ರಕಲಾವಿದರಾಗಿದ್ದ ಅವರಿಗೆ 85 ವರ್ಷ ವಯಸ್ಸಾಗಿತ್ತು. ಚಿತ್ರಕಲಾವಿದರಾಗಿ ತಮ್ಮ ವೃತ್ತಿ ಬದುಕು ಆರಂಭಿಸಿದರೂ ಅವರು 50ರ ದಶಕದಲ್ಲಿ ಪ್ರಖ್ಯಾತ ಶಿಲ್ಪಕಲಾಕಾರರಾಗಿ ಗುರುತಿಸಿಕೊಂಡರು. ಶಿಲ್ಪಕಲೆಯಲ್ಲಿನ ಸಾಧನೆಗಾಗಿ ಅವರಿಗೆ ಪ್ರಶಸ್ತಿ, ಪದಕ ಹಾಗೂ ಫೆಲೊಶಿಫ್ಗಳು ದೊರಕಿದ್ದವು.

2008: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ಮರಣಾರ್ಥ ಪ್ರತಿಮೆ ನಿರ್ಮಿಸಲು ಸಮನ್ವಯ ಪರಿವಾರ್ ಎಂಬ ಸಂಘಟನೆ ಸಲ್ಲಿಸಿದ ಅರ್ಜಿಗೆ ಲಂಡನ್ನಿನ ಲೀಸೆಸ್ಟರ್ ನಗರಸಭೆ ಅನುಮೋದನೆ ನೀಡಿತು. ಈ ಗಾಂಧಿ ಪ್ರತಿಮೆಗೆ 20 ಸಾವಿರ ಪೌಂಡ್ ಖರ್ಚಾಗಲಿದ್ದು ಇದನ್ನು ಲೀಸೆಸ್ಟರಿನ ಬೆಲ್ ಗ್ರೇವ್ ಪ್ರದೇಶದ ಆರ್ಚರ್ಡಸನ್ ಅವೆನ್ಯೂ ಬಳಿ ಸ್ಥಾಪಿಸಲಾಗುವುದು. ಏಳು ಅಡಿ ಎತ್ತರದ ಈ ಪ್ರತಿಮೆಯನ್ನು 5 ಅಡಿ ಎತ್ತರದ ಪೀಠದ ಮೇಲೆ ನಿಲ್ಲಿಸಲು ಉದ್ದೇಶಿಸಲಾಯಿತು.

2008: ಇಂಡೋನೇಷ್ಯಾದ ಫೊಲ್ಲಾರಸ್ ದ್ವೀಪದಲ್ಲಿ ಜ್ವಾಲಾಮುಖಿಯೊಂದು ಹೊಗೆಯುಗುಳಲು ಆರಂಭಿಸಿದ್ದರಿಂದ ಭಯಗೊಂಡ ನೂರಾರು ಗ್ರಾಮಸ್ಥರು ಮನೆ ತೊರೆದು ದಿಕ್ಕಪಾಲಾಗಿ ಓಡಿದರು.

2008: ಕಾಂಗೋದ ಗೋಮಾದಲ್ಲಿ ಪ್ರಯಾಣಿಕರಿದ್ದ ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿ ಜನನಿಬಿಡ ಮಾರುಕಟ್ಟೆಗೆ ನುಗ್ಗಿದ್ದರಿಂದ 37 ಮಂದಿ ಮೃತರಾಗಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2008: ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರು ತಮ್ಮ www.pankajadvani.com ಗೆ ವಿದ್ಯುಕ್ತ ಚಾಲನೆ ನೀಡಿದರು. ಭವಿಷ್ಯದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಈ ವೆಬ್ ಸೈಟನ್ನು ರೂಪಿಸಲಾಯಿತು. ಸ್ಪೋರ್ಟ್ಸ್ ಇಂಟರ್ಯಾಕ್ಟಿವ್ ಸಂಸ್ಥೆಯ ಮೊದಲ ಹೆಜ್ಜೆಯಾದ ಈ ವೆಬ್ ಸೈಟಿನಲ್ಲಿ ವಿಶ್ವ ಚಾಂಪಿಯನ್ನನ ಸಂಪೂರ್ಣ ಮಾಹಿತಿ ಇದೆ.

2008: ಒಲಿಂಪಿಕ್ ಜ್ಯೋತಿ ಆಗಮಿಸುವ ಮುನ್ನ ಸುಮಾರು ನೂರು ಜನಕ್ಕೂ ಹೆಚ್ಚು ಟಿಬೆಟಿಯನ್ನರು ನವದೆಹಲಿಯಲ್ಲಿನ ಚೀನಾ ರಾಯಬಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

2008: ಅಪರಾಧಿಗಳನ್ನು ಗಡೀಪಾರು ಮಾಡುವುದು, ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿ ಸಹಕಾರ ಸಹಿತ ಒಟ್ಟು ನಾಲ್ಕು ಒಪ್ಪಂದಗಳಿಗೆ ಭಾರತ ಮತ್ತು ಬ್ರೆಜಿಲ್ ಈದಿನ ಬ್ರಸಿಲಿಯಾದಲ್ಲಿ ಸಹಿ ಹಾಕಿದವು. ಬ್ರೆಜಿಲ್ಗೆ ತೆರಳಿದ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಭೇಟಿಯ ಕೊನೆಯ ಹಂತವಾಗಿ ನಡೆದ ಈ ಕಾರ್ಯಕ್ರಮದ ವೇಳೆ ಬ್ರಿಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೂ ಇದ್ದರು. ಅಸಾಂಪ್ರದಾಯಿಕ ಇಂಧನ ಖಾತೆ ರಾಜ್ಯ ಸಚಿವ ವಿಲಾಸರಾವ್ ಮುಟ್ಟೆಮ್ವರ್ ಮತ್ತು ಬ್ರೆಜಿಲಿನ ವಿದೇಶಾಂಗ ಸಚಿವ ಸೆಲ್ಸೊ ಅಮೊರಿನ್ ಒಪ್ಪಂದಕ್ಕೆ ಸಹಿ ಹಾಕಿದರು.

2007: ಖ್ಯಾತ ಹಿನ್ನೆಲೆ ಗಾಯಕರಾದ ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ 2007ನೇ ಸಾಲಿನ ಬಸವಶ್ರೀ ಪ್ರಶಸ್ತಿ ನೀಡಲು ಬಸವ ವೇದಿಕೆ ನಿರ್ಧರಿಸಿತು.

2007: ನಾಲ್ಕು ದಶಕಗಳ ಹಿಂದೆ ವಿಯೆಟ್ನಾಮ್ ಸಮರ ಕಾಲದಲ್ಲಿ ಅಮೆರಿಕ ಪಡೆಗಳ ಗುಂಡೇಟಿಗೆ ತುತ್ತಾಗಿದ್ದ ವಿಯೆಟ್ನಾಮೀ ಯೋಧ ಡಿನ್ಹ್ ಹಂಗ್ ಅವರ ಎದೆಯಲ್ಲಿ ಉಳಿದಿದ್ದ ಗುಂಡನ್ನು ಸುಮಾರು 40 ವರ್ಷಗಳ ಬಳಿಕ ವಿಯೆಟ್ನಾಮಿನ ಹನೋಯಿಯಲ್ಲಿನ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದರು.

2007: ಅಮೆರಿಕದ ವರ್ಜೀನಿಯಾ ತಾಂತ್ರಿಕ (ಟೆಕ್) ವಿಶ್ವವಿದ್ಯಾಲಯ ಕ್ಯಾಂಪಸ್ಸಿನಲ್ಲಿ ಕೊರಿಯಾದ ವಿದ್ಯಾರ್ಥಿ ಚೊ ಸೆಯುಂಗ್ ಹೊ ಎಂಬಾತ ಎರಡು ಗಂಟೆಗಳ ಅಂತರದಲ್ಲಿ ಎರಡು ಬಾರಿ ದಾಳಿ ನಡೆಸಿ ಯದ್ವಾತದ್ವ ಗುಂಡು ಹಾರಿಸಿದ ಪರಿಣಾಮವಾಗಿ ಭಾರತೀಯ ಮೂಲದ ಪ್ರಾಧ್ಯಾಪಕ ಪ್ರೊ. ಜಿ.ವಿ. ಲೋಕನಾಥನ್ (51) ಸಹಿತ ಇಬ್ಬರು ಭಾರತೀಯರು ಸೇರಿದಂತೆ 33 ಅಮಾಯಕರು ಮೃತರಾಗಿ ಇತರ 22 ಮಂದಿ ಗಾಯಗೊಂಡರು. ಅಮೆರಿಕದ ಇತಿಹಾಸದಲ್ಲೇ ವಿವಿ ಕ್ಯಾಂಪಸ್ಸಿನಲ್ಲಿ ನಡೆದ ಭೀಕರ ಹತ್ಯಾಕಾಂಡ ಇದು. 1872ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯದಲ್ಲಿ 100 ದೇಶಗಳ 26,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಅವರಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯೇ 500ರಷು.

2007: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ಅನುಷ್ಠಾನದ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ ಕೇಂದ್ರ ಸರ್ಕಾರವು ಈ ವಿಷಯದ ವಿಚಾರಣೆಗಾಗಿ ಪಂಚ ಸದಸ್ಯ ಸಂವಿಧಾನ ಪೀಠ ರಚಿಸುವಂತೆ ಮನವಿ ಮಾಡಿತು. ಕೇಂದ್ರ ಸರ್ಕಾರ ರಚಿಸಿದ ಕಾಯ್ದೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ವಿಧಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ 15 ದಿನಗಳ ಬಳಿಕ `ಸ್ಪಷ್ಟೀಕರಣ ಅರ್ಜಿ' ಸಲ್ಲಿಸಿದ ಸರ್ಕಾರವು ಮೀಸಲಾತಿಯ ಲಾಭದಿಂದ `ಕೆನೆ ಪದರ' (ಹಿಂದುಳಿದವರಲ್ಲಿ ಆರ್ಥಿಕವಾಗಿ ಮುಂದುವರೆದವರು) ವರ್ಗವನ್ನು ಹೊರತುಪಡಿಸಬೇಕು ಎಂಬ ನ್ಯಾಯಾಲಯದ ಸೂಚನೆಯನ್ನೂ ವಿರೋಧಿಸಿತು. ಮಂಡಲ ಪ್ರಕರಣ ಎಂದೇ ಖ್ಯಾತಿ ಪಡೆದ ಇಂದ್ರಾ- ಸಾಹ್ನಿ ಪ್ರಕರಣದಲ್ಲಿ ಒಂಬತ್ತು ಸದಸ್ಯರ ಸಂವಿಧಾನ ಪೀಠವು ನೀಡಿರುವ ತೀರ್ಪಿನಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಎತ್ತಿ ಹಿಡಿಯಲಾಗಿದ್ದು ಈ ತೀರ್ಮಾನ ಅರ್ಜಿದಾರರು, ಸರ್ಕಾರ, ಈ ನ್ಯಾಯಾಲಯದ ದ್ವಿ ಸದಸ್ಯ ಪೀಠ ಸೇರಿದಂತೆೆ ಎಲ್ಲರಿಗೂ ಅನ್ವಯಿಸುತ್ತದೆ ಎಂದೂ ಸರ್ಕಾರವು ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿತು.

2006: ಚೀನಾದ ಹಾಂಗ್ ಹುವಾ ಅಂತರರಾಷ್ಟ್ರೀಯ ಗಾಲ್ಫ್ ಕ್ಲಬ್ಬಿನಲ್ಲಿ ನಡೆದ ಅಂತಿಮ ಹಂತದ ವೋಲ್ವೊ ಚೀನಾ ಓಪನ್ ಗಾಲ್ಫ್ ಟೂರ್ನಿಯಲ್ಲಿ ಭಾರತದ ಜೀವ್ ಮಿಲ್ಕಾಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕೊನೆಯ ಹಂತದ ಸ್ಪರ್ಧೆಯಲ್ಲಿ 71 ಸ್ಕೋರ್ ಗಳಿಸಿದ ಮಿಲ್ಕಾಸಿಂಗ್ ಒಟ್ಟು 278 ಸ್ಕೋರ್ ಗಳಿಕೆಯೊಂದಿಗೆ ಏಳುವರ್ಷಗಳ ಬಳಿಕ ಪ್ರಶಸ್ತಿ ಗೆದ್ದುಕೊಂಡರು. ಐರೋಪ್ಯ ಪ್ರವಾಸದಲ್ಲಿ ಜೀವ್ ಗೆದ್ದ ಚೊಚ್ಚಲ ಪ್ರಶಸ್ತಿ ಇದು. ಚಂಡೀಗಢದ ಈ ಗಾಲ್ಫರ್ 1999ರಲ್ಲಿ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದ್ದರು.

2006: ಲಾಹೋರ್ ಬಳಿಯ ನಾಂಖನಾ ಸಾಹಿಬ್ ನ ಹರಚರಣ್ ಸಿಂಗ್ ಪಾಕಿಸ್ಥಾನ ಸೇನೆಯಲ್ಲಿ ಕಮೀಷನ್ಡ್ ದರ್ಜೆಗೆ ಮೊತ್ತ ಮೊದಲ ಬಾರಿಗೆ ನೇಮಕಗೊಂಡ ಸಿಖ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕಳೆದ ವರ್ಷ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧರಿ ವಿದೇಶ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ಭಗವಾನದಾಸ್ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವುದರೊಂದಿಗೆ ಹಿಂದು ಒಬ್ಬರು ಪಾಕಿಸ್ಥಾನದಲ್ಲಿ ಇತಿಹಾಸ ನಿರ್ಮಿಸಿದಂತಾಗಿತ್ತು.

2006: ದುಜೈಲ್ ಪಟ್ಟಣದಲ್ಲಿ 1982ರಲ್ಲಿ ಸದ್ದಾಂ ಹುಸೇನ್ ಅವರ ಹತ್ಯೆ ಯತ್ನ ನಡೆದ ಬಳಿಕ ನಡೆದ 148 ಶಿಯಾ ಮುಸ್ಲಿಮರ ಹತ್ಯೆ ಹಾಗೂ ಸೆರೆಮನೆಯಲ್ಲಿ ಅನೇಕರಿಗೆ ನೀಡಲಾದ ಚಿತ್ರಹಿಂಸೆಗೆ ಸಂಬಂಧಿಸಿದ ದಾಖಲೆಗಳಲ್ಲಿನ ಸಹಿ ಪದಚ್ಯುತ ಇರಾಕಿ ನಾಯಕ ಸದ್ದಾಂ ಹುಸೇನ್ ಅವರದ್ದೇ ಎಂದು ತಜ್ಞರು ದೃಢಪಡಿಸಿದರು. ಕೈಬರಹ ತಜ್ಞರ ವರದಿಯ ಪ್ರಕಾರ ಶಿಯಾ ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಜಾಗೃತಾ ಏಜೆಂಟರಿಗೆ ಬಹುಮಾನಗಳನ್ನು ಮಂಜೂರು ಮಾಡಿದ ದಾಖಲಗಳಲ್ಲಿ ಇರುವ ಸಹಿ ಸದ್ದಾಂ ಹುಸೇನ್ ಅವರದೇ ಎಂದು ಖಚಿತಗೊಂಡಿದೆ ಎಂದು ಬಾಗ್ದಾದಿನಲ್ಲಿ ಪುನರಾರಂಭವಾದ ಸದ್ದಾಂ ಹುಸೇನ್ ಹಾಗೂ 7 ಸಹಚರರ ವಿಚಾರಣೆ ಕಾಲದಲ್ಲಿ ಪ್ರಾಸಿಕ್ಯೂಟರುಗಳು ಈ ವಿಚಾರವನ್ನು ತಿಳಿಸಿದರು.

1975: ಭಾರತದ ವಿದ್ವಾಂಸ ಹಾಗೂ ಮುತ್ಸದ್ದಿ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ 86ನೇ ವಯಸ್ಸಿನಲ್ಲಿ ಮದ್ರಾಸಿನಲ್ಲಿ ನಿಧನರಾದರು. 1962-1967ರ ಅವಧಿಯಲ್ಲಿ ಅವರು ಭಾರತದ ರಾಷ್ಟ್ರಪತಿಯಾಗಿದ್ದರು.

1912: ಅಮೆರಿಕಾದ ವಿಮಾನಯಾನಿ ಹ್ಯಾರಿಯೆಟ್ ಕ್ವಿಂಬೆ ಅವರು 50 ಹಾರ್ಸ್ ಪವರ್ ಮಾನೋಪ್ಲೇನ್ ಮೂಲಕ ಇಂಗ್ಲಿಷ್ ಕಡಲ್ಗಾಲುವೆ ದಾಟಿದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 59 ನಿಮಿಷಗಳ ಹಾರಾಟದ ಬಳಿಕ ಕ್ವಿಂಬೆ ಅವರು ಫ್ರಾನ್ಸಿನ ಹಾರ್ಡೆಲೊಟ್ ಸಮೀಪ ಇಳಿದರು.

1889: ಚಾರ್ಲ್ಸ್ ಸ್ಪೆನ್ಸರ್ ಚಾಪ್ಲಿನ್ (1889-1977) ಹುಟ್ಟಿದ ದಿನ. ಬ್ರಿಟಿಷ್ ಸಂಜಾತ ಅಮೆರಿಕನ್ ಚಿತ್ರನಟ, ನಿರ್ದೇಶಕರಾದ ಇವರು ಮೂಕಿ ಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು.

1881: ಇರ್ವಿನ್ (1881-1959) ಹುಟ್ಟಿದ ದಿನ. ಇವರು 1925-1931ರ ಅವಧಿಯಲ್ಲಿ ಭಾರತದ ವೈಸ್ ರಾಯ್ ಆಗಿದ್ದರು.

1867: ವಿಲ್ಬರ್ ರೈಟ್ (1867-1912) ಹುಟ್ಟಿದ ದಿನ. ಅಮೆರಿಕಾದ ಸಂಶೋಧಕ ಹಾಗೂ ಮುಂಚೂಣಿಯ ವಿಮಾನಯಾನಿಯಾದ ಈತ ತನ್ನ ಸಹೋದರ ಓರ್ವಿಲ್ ಜೊತೆಗೆ ಮೊತ್ತ ಮೊದಲ ವಿಮಾನ ಹಾರಾಟ ನಡೆಸಿದ.

1853: ಬಾಂಬೆಯ (ಈಗಿನ ಮುಂಬೈ) ಬೋರೀ ಬಂದರಿನಿಂದ ಟಣ್ಣ (ಈಗಿನ ಥಾಣೆ)ವರೆಗೆ 400 ಜನರನ್ನು ಹೊತ್ತ 14 ಬೋಗಿಗಳು ಸಂಚರಿಸುವುದರೊಂದಿಗೆ ಭಾರತಕ್ಕೆ ರೈಲ್ವೆಯ ಆಗಮನವಾಯಿತು. ಬಾಂಬೆ-ಟಣ್ಣ ಮಧ್ಯೆ ದಿ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ (ಜಿಐಪಿ) ರೈಲ್ವೆಯು 34 ಕಿ.ಮೀ. ಉದ್ದದ ಹಳಿಯನ್ನು ನಿರ್ಮಿಸಿತ್ತು. ಈ ದಿನವನ್ನು ರಜಾದಿನವಾಗಿ ಆಚರಿಸಲಾಯಿತು. ರೈಲುಸಂಚಾರದ ಹೊಸ `ಘಟನೆ'ಯನ್ನು ನೋಡಲು ಸಹಸ್ರಾರು ಮಂದಿ ರೈಲ್ವೆ ಹಳಿಗಳ ಉದ್ದಕ್ಕ್ಕೂ ಸಾಲುಗಟ್ಟಿ ನಿಂತಿದ್ದರು. 21 ಸುತ್ತಿನ ಗನ್ ಸೆಲ್ಯೂಟ್ ಹಾಗೂ ಗವರ್ನರ್ ಬ್ಯಾಂಡ್ ಸೆಟ್ ಸಂಗೀತದ ಮಧ್ಯೆ ಮಧ್ಯಾಹ್ನ 3.35 ಗಂಟೆಗೆ ರೈಲು ಚಲಿಸಿತು. 34 ಕಿ.ಮೀ. ದೂರದ ಪಯಣಕ್ಕೆ 57 ನಿಮಿಷ ಬೇಕಾಯಿತು. ಮರುದಿನ ಜಿಐಪಿ ನಿರ್ದೇಶಕ ಸರ್ ಜೆಮ್ ಸೆಟ್ ಜಿ ಜೀಜೆಭಾಯ್ ಇಡೀ ರೈಲುಗಾಡಿಯನ್ನು ರಿಸರ್ವ್ ಮಾಡಿಸಿ ತಮ್ಮ ಕುಟುಂಬದೊಂದಿಗೆ ಮುಂಬೈಯಿಂದ ಥಾಣೆಗೆ ಪಯಣಿಸಿ ಅದರಲ್ಲೇ ವಾಪಸಾದರು.

1838: ಅರ್ನೆಸ್ಟ್ ಸಾಲ್ವೆ (1838-1922) ಹುಟ್ಟಿದ ದಿನ. ಬೆಲ್ಜಿಯಂನ ಕೈಗಾರಿಕಾ ರಾಸಾಯನಿಕ ತಜ್ಞನಾದ ಈತ ವಾಣಿಜ್ಯ ಪ್ರಮಾಣದಲ್ಲಿ ಸೋಡಾ ಪುಡಿ ಉತ್ಪಾದಿಸಲು ಬಳಸಲಾಗುವ ಅಮೋನಿಯಾ ಸೋಡಾ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸಿದ.

No comments:

Advertisement