My Blog List

Saturday, April 17, 2010

ಇಂದಿನ ಇತಿಹಾಸ History Today ಏಪ್ರಿಲ್ 17

ಇಂದಿನ ಇತಿಹಾಸ

ಏಪ್ರಿಲ್ 17

ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಎಂದು ಸಾಬೀತಾದ ನಿವೃತ್ತ ಎಸಿಪಿ ಟಿ.ಜಿ. ಸಂಗ್ರಾಮ್ ಸಿಂಗ್ ಅವರಿಗೆ ಮೂರು ವರ್ಷಗಳ ಸಜೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಆದೇಶಿಸಿತು. ಆದರೆ ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿ, ಬೆಂಗಳೂರು 35ನೇ ಹೆಚ್ಚುವರಿ ವಿಶೇಷ ನಗರ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ಪಾಟೀಲ್ ಆದೇಶಿಸಿದರು.

ವಿಶ್ವ ಕುಸುಮ ದಿನ. ವಿಶ್ವ ಕುಸುಮ (ಹಿಮೋಫಿಲಿಯಾ) ರೋಗ ದಿನಾಚರಣೆಯನ್ನು ಪ್ರತಿ ವರ್ಷ ಏಪ್ರಿಲ್ 17ರಂದು ಹಮ್ಮಿಕೊಳ್ಳಲಾಗುತ್ತದೆ. ವಿಶ್ವ ಹಿಮೋಫಿಲಿಯಾ ಸಂಘಟನೆಯ ಸಂಸ್ಥಾಪಕ ಫ್ರ್ಯಾಂಕ್ ಶ್ಯಾನ್ ಬೆಲ್ನ ಸ್ಮರಣೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. 1989ರಿಂದ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜನರಲ್ಲಿ ಕುಸುಮ ರೋಗದ ಕುರಿತು ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ರೋಗಕ್ಕೆ ಸಂಬಂಧಿಸಿದಂತೆ ಜನರಲ್ಲಿ ಇರುವ ತಪ್ಪು ಕಲ್ಪನೆ ಕೊನೆಗಾಣಿಸುವುದು ಸಂಘಟನೆಯ ಇನ್ನೊಂದು ಪ್ರಮುಖ ಉದ್ದೇಶ.

2009: ಮಹತ್ವದ ಬೆಳವಣಿಗೆಯೊಂದರಲ್ಲಿ ಬಂಧಿತ ಪಾಕಿಸ್ಥಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಾಬ್, ಮುಂಬೈ ದಾಳಿಯಲ್ಲಿ ಭಾಗಿಯಾಗಿರುವುದಾಗಿ ನ್ಯಾಯಾಲಯಕ್ಕೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯನ್ನು ಹಿಂತೆಗೆದುಕೊಂಡ. ಮೊದಲ ದಿನದ ವಿಚಾರಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸರ್ಕಾರಿ ನಿಯೋಜಿತ ಕಸಾಬ್ ಪರ ವಕೀಲ ಎಸ್.ಜಿ. ಅಬ್ಬಾಸ್ ಕಜ್ಮಿ, 'ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ ಸುಮಾರು 40 ಪುಟಗಳ ತಪ್ಪೊಪ್ಪಿಗೆ ಹೇಳಿಕೆ ಮತ್ತು ಅದರಲ್ಲಿರುವ ಸಹಿಯನ್ನು ತನ್ನ ಕಕ್ಷಿದಾರನ ಮೇಲೆ ಒತ್ತಡ ಹಾಕಿ ಪಡೆಯಲಾಗಿದೆ' ಎಂದು ದೂರಿದರು. 'ನಾನು ಸ್ವಯಂ-ಇಚ್ಛೆಯಿಂದ ತಪ್ಪೊಪ್ಪಿಗೆ ಹೇಳಿಕೆ ನೀಡಿಲ್ಲ. ಪೊಲೀಸರು ಒತ್ತಡದಿಂದ ಹೇಳಿಕೆ ಪಡೆದಿದ್ದಾರೆ. ನನಗೆ ಅಭಿಪ್ರಾಯ ಹೇಳಲು ಸ್ವಲ್ಪವೂ ಅವಕಾಶ ನೀಡಿಲ್ಲ' ಎಂದು ಕಸಾಬ್ ತಿಳಿಸಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ಓದಿದ ನಂತರ ಕಜ್ಮಿ ಆರೋಪಿಸಿದರು.

2009: ಪಾಕಿಸ್ಥಾನಿ ಸೇನೆಯ ಮೇಜರ್ ಜನರಲ್ ದರ್ಜೆ ಅಧಿಕಾರಿಯೊಬ್ಬರ ಮೇಲ್ವಿಚಾರಣೆಯಲ್ಲಿ ತಾನು ಮತ್ತು ತನ್ನ ಒಂಬತ್ತು ಸಹದ್ಯೋಗಿಗಳು ತರಬೇತಿ ಪಡೆದಿರುವುದಾಗಿ ಕಳೆದ ನವೆಂಬರ 26ರ ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ ಏಕೈಕ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಅಲಿಯಾಸ್ ಕಸಾಬ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ಪಬ್ಲಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕಂ ತಿಳಿಸಿದರು. 'ಲಷ್ಕರ್-ಎ-ತೊಯ್ಬಾ ಸಂಘಟಿಸಿದ್ದ ಶೂಟಿಂಗ್ ತರಬೇತಿಯಲ್ಲಿ ಮೊದಲಿಗನಾಗಿ ಹೊರಹೊಮ್ಮಿದ ತನ್ನನ್ನು ಆ ಮೇಜರ್ ಜನರಲ್ ಬೆನ್ನುತಟ್ಟಿ ಪ್ರಶಂಸಿಸಿದ್ದರು ಮತ್ತು ಉಳಿದ ಸಹದ್ಯೋಗಿಗಳಿಗೆ ಪ್ರಯತ್ನ ಸಾಲದೆಂದು ತಿಳಿಸಿದ್ದರು ಎಂದೂ ಕಸಾಬ್ ಹೇಳಿರುವುದಾಗಿ ಅವರು ತಿಳಿಸಿದರು. ಭಾರತದ ಮಹಾನಗರಗಳ ಮೇಲೆ ಇಂತಹದ್ದೇ ದಾಳಿಗಳನ್ನು ಮಾಡಿ, ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಯೋಜನೆ ಉಗ್ರರದ್ದು ಎಂಬುದು ಸ್ಪಷ್ಟವಾಗಿದೆ ಎಂದು ಅವರು ವಿವರಿಸಿದರು.

2009: ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಎಂದು ಸಾಬೀತಾದ ನಿವೃತ್ತ ಎಸಿಪಿ ಟಿ.ಜಿ. ಸಂಗ್ರಾಮ್ ಸಿಂಗ್ ಅವರಿಗೆ ಮೂರು ವರ್ಷಗಳ ಸಜೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಆದೇಶಿಸಿತು. ಆದರೆ ಈ ಆದೇಶ ಪ್ರಶ್ನಿಸಿ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ಕೋರಿದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿ, ಬೆಂಗಳೂರು 35ನೇ ಹೆಚ್ಚುವರಿ ವಿಶೇಷ ನಗರ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ಪಾಟೀಲ್ ಆದೇಶಿಸಿದರು. ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಕರೀಂ ಲಾಲಾ ತೆಲಗಿ ಹಾಗೂ ಇತರರಿಗೆ ಏಳು ವರ್ಷಗಳ ಕಠಿಣ ಸಜೆ ವಿಧಿಸಲಾಯಿತು. ಸಂಗ್ರಾಮ್ ಸಿಂಗ್‌ಗೆ 1.75ಲಕ್ಷ ಹಾಗೂ ತೆಲಗಿಗೆ 50 ಸಾವಿರ ರೂಪಾಯಿ ದಂಡವನ್ನೂ ಇದೆ ವೇಳೆ ವಿಧಿಸಲಾಯಿತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಅಪರಾಧಿಗಳಿಗೆ ಓದಿ ಹೇಳಿದರು. ಏಳು ವರ್ಷ ಕಠಿಣ ಸಜೆಗೆ ಒಳಗಾದ ಇತರ ಅಪರಾಧಿಗಳು: ಸೈಯದ್ ಜುಮೇದಾರ್, ಬದ್ರುದ್ದೀನ್, ಆನಂದ, ಇಲಿಯಾಜ್ ಅಹಮ್ಮದ್, ಸೋಹೆಲ್ ಖಾನ್, ಇಬ್ರಾಹಿಂ ಹುಡ್ಲಿ, ಸೈಯದ್ ಮೊಹಿದ್ದೀನ್ ಹಾಗೂ ವಜೀರ್ ಅಹಮ್ಮದ್ ಖಾನ್.

2009: ಜಗತ್ತಿನ ಮೂರು ಕಡೆಗಳಲ್ಲಿ ಸಂಭವಿಸಿದ ಭೂಕಂಪನವು ಆಫ್ಘಾನಿಸ್ಥಾನದಲ್ಲಿ 22 ಜನರನ್ನು ಬಲಿ ತೆಗೆದುಕೊಂಡಿತು. ಇಂಡೊನೇಷ್ಯಾ ಹಾಗೂ ಚಿಲಿಯಯಲ್ಲಿ ಯಾವುದೇ ಪ್ರಾಣ ಹಾನಿಯಾಗಲಿಲ್ಲ. ಆಫ್ಘಾನಿಸ್ಥಾನದ ಪೂರ್ವ ಪ್ರಾಂತ್ಯದಲ್ಲಿ ಹಿಂದಿನ ದಿನ ಮಧ್ಯರಾತ್ರಿ ಎರಡು ಬಾರಿ ಭೂಕಂಪನವಾಗಿ, ನೂರಾರು ಮನೆಗಳು ಉರುಳಿ 22 ಮಂದಿ ಮೃತರಾದರು.

2009: ನಗು ಮನಸ್ಸಿನ ಒತ್ತಡ ನಿವಾರಿಸುವ ದಿವ್ಯೌಷಧ ಎಂಬುದನ್ನು ವಿಜ್ಞಾನಿಗಳು ಮತ್ತು ಜನಸಾಮಾನ್ಯರು ಒಪ್ಪಿಕೊಂಡಿರುವುದು ಹಳೆಯ ಸಂಗತಿಯಾದರೂ ಆ ಬಗ್ಗೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇವೆ. ಇತ್ತೀಚಿನ ಸಂಶೋಧನೆಯೊಂದು, ಪ್ರತಿದಿನ 30 ನಿಮಿಷ ಮನಬಿಚ್ಚಿ ನಕ್ಕರೂ ಸಾಕು ಹೃದಯ ಕಾಯಿಲೆ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಿತು. ಇದೀಗ ನಗುವಿನ ಮಹತ್ವ ಗೊತ್ತಾಗಿರುವುದು ಲಂಡನ್ನಿನ ಲೋಮ ಲಿಂಡಾ ವಿ.ವಿ. ಸಂಶೋಧಕರ ತಂಡಕ್ಕೆ. ದಿನದಲ್ಲಿ ಅರ್ಧ ತಾಸು ಹಾಸ್ಯ ಪ್ರಸಂಗಗಳನ್ನು ವೀಕ್ಷಿಸಿದ್ದೇ ಆದರೆ ಒತ್ತಡ ಸಂಬಂಧಿ ರಸದೂತ (ಹಾರ್ಮೋನ್)ಗಳ ಉತ್ಪತ್ತಿ ಜರ್ರನೆ ಇಳಿಯುವ ಜೊತೆಗೆ ಹೃದಯ ರೋಗಕ್ಕೆ ಕಾರಣವಾಗುವ ಸಂಯುಕ್ತ ರಾಸಾಯನಿಕಗಳ ಉತ್ಪತ್ತಿಯೂ ತಗ್ಗುತ್ತದೆ ಎಂದು ಅಧ್ಯಯನ ಹೇಳಿತು. ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ, ಹೆಚ್ಚುವರಿ ಕೊಲೆಸ್ಟರಾಲ್‌ಗೆ ಔಷಧ ಸೇವಿಸುತ್ತಿದ್ದ ತಲಾ 20 ಗಂಡಸರು ಮತ್ತು ಹೆಂಗಸರನ್ನು ಪ್ರಯೋಗಕ್ಕೆ ಅಳವಡಿಸಲಾಯಿತು. ಇದರಲ್ಲಿ ಅರ್ಧದಷ್ಟು ಮಂದಿಗೆ ಔಷಧಿ ಮಾತ್ರ ನೀಡಿದರೆ ಉಳಿದರ್ಧ ಮಂದಿಗೆ ಔಷಧಿ ನೀಡುವ ಜತೆಗೆ ನಿತ್ಯ ಅರ್ಧ ಗಂಟೆ ತಮಾಷೆ ದೃಶ್ಯಗಳನ್ನು ತೋರಿಸಲಾಯಿತು. ಹಾಸ್ಯ ಪ್ರಸಂಗಗಳನ್ನು ಸವಿದವರು ಹೆಚ್ಚು ತೊಂದರೆ ಮುಕ್ತರಾದುದು ಖಚಿತವಾಯಿತು ಎಂದು ಸಂಶೋಧಕರು ವಿವರಿಸಿದರು.

2008: ಬೀಜಿಂಗ್ ಒಲಿಂಪಿಕ್ ಜ್ಯೋತಿಯ ರಿಲೇಯು ನವದೆಹಲಿಯಲ್ಲಿ ಯಾವುದೇ ತೊಡಕಿಲ್ಲದೆ ಸರಾಗವಾಗಿ ನಡೆದರೂ ಟಿಬೆಟಿಯನ್ನರ ಪ್ರತಿಭಟನೆ ಬೆದರಿಕೆಯ ಹಿನ್ನೆಲೆಯಲ್ಲಿ ಭದ್ರ ಕೋಟೆಯ ನಡುವೆ ತನ್ನ ಆಕರ್ಷಣೆ ಕಳೆದುಕೊಂಡು ಸೊರಗಿತು. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಆರಂಭವಾದ ಓಟ ರಾಜಪಥದ ಮೂಲಕ ಸಾಗಿ ಕೊನೆಗೆ ಇಂಡಿಯಾ ಗೇಟ್ ಬಳಿ ಮುಕ್ತಾಯವಾಯಿತು. 2.3 ಕಿ.ಮಿ. ದೂರದ ಓಟ ಸಾಗಿದ ದಾರಿಯನ್ನು ಸುಮಾರು 17 ಸಾವಿರ ಮಂದಿ ಭದ್ರತಾ ಸಿಬ್ಬಂದಿ ಕಾವಲು ಕಾದರು.

2008: ಬೆಂಗಳೂರು ನಗರದ ವೊಕಾರ್ಡ್ ಆಸ್ಪತ್ರೆಯಲ್ಲಿ ಗೋವಾ ಮೂಲದ ದಂಪತಿಯ ಕೇವಲ 900 ಗ್ರಾಂ ತೂಕದ ನವಜಾತ ಶಿಶುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು ಎಂದು ವೈದ್ಯ ಡಾ. ಎನ್. ಎಸ್. ದೇವಾನಂದ ಪ್ರಕಟಿಸಿದರು. ನವಮಾಸ ತುಂಬುವ ಮುನ್ನವೇ ಅಂದರೆ ಕೇವಲ 27 ವಾರಕ್ಕೆ ಜನ್ಮತಾಳಿದ ಶಿಶುವಿನ ಹೃದಯದಲ್ಲಿ' ಫಂಗಸ್' ಸೋಂಕಿನಿಂದ ಒಂದು ಸೆಂ.ಮೀ ಗಾತ್ರದ ಗಡ್ಡೆ ಬೆಳೆದು ಉಸಿರಾಟಕ್ಕೆ ತೊಂದರೆಯಾಗಿತ್ತು. ಜನವರಿ ತಿಂಗಳಲ್ಲೇ ಶಸ್ತ್ರಚಿಕಿತ್ಸೆ ನಡೆಸಿ, ಗಡ್ಡೆ ತೆಗೆಯಲಾಗಿದ್ದು, ಮಗು ಆರೋಗ್ಯದಿಂದಿದೆ ಎಂದು ಅವರು ಈದಿನ ಹೇಳಿದರು.

2008: ರಷ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (56) ಅವರು ಒಲಿಂಪಿಕ್ ಜಿಮ್ನಾಸ್ಟ್. ಬಳುಕುವ ಬಳ್ಳಿ ಅಲೀನಾ ಕಬೀವಾ (24) ಎಂಬಾಕೆಯನ್ನು ಜೂನ್ ತಿಂಗಳಲ್ಲಿ ವಿವಾಹವಾಗಲಿದ್ದಾರೆ ಎಂದು ರಷ್ಯಾದ ದೈನಿಕ `ಮಾಸ್ಕೊವ್ಕಿ ಕೊರೆಸ್ಪಾಂಡೆಂಟ್' ಉಲ್ಲೇಖಿಸಿ `ದಿ ಡೈಲಿ ಟೆಲಿಗ್ರಾಫ್' ವರದಿ ಮಾಡಿತು. ತಮ್ಮ ಪುತ್ರಿಯ ಪ್ರಾಯದ ಜಿಮ್ನಾಸ್ಟ್ ಗೆ ಮಾಸ್ಕೋದ ರೆಸ್ಟೋರೆಂಟ್ ಒಂದರಲ್ಲಿ ಚುಂಬಿಸುವ ಮೂಲಕ ಪುಟಿನ್ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದನ್ನು ವೆಬ್ ಸೈಟ್ ಒಂದು ದಾಖಲಿಸಿದ್ದನ್ನೂ ಪತ್ರಿಕೆ ಉಲ್ಲೇಖಿಸಿತು. ಅಲೀನಾ ಕಬೀವಾ ರಷ್ಯ ಸಂಸತ್ತಿನ ಸದಸ್ಯೆ. ಕಳೆದ ಸಿಡ್ನಿ ಮತ್ತು ಅಥೆನ್ಸ್ ಒಲಿಂಪಿಕ್ಸ್ ಗಳಲ್ಲಿ ಆಕೆ ದೇಶವನ್ನು ಪ್ರತಿನಿಧಿಸಿದ್ದರು. 1983ರಲ್ಲಿ ತಾಷ್ಕೆಂಟಿನಲ್ಲಿ ಜನಿಸಿದ ಆಕೆ ಚಲನಚಿತ್ರವೊಂದರಲ್ಲೂ ಕಾಣಿಸಿಕೊಂಡಿದ್ದರು. ಹಾಗೂ ಮಾಡೆಲ್ ಆಗುವ ನಿಟ್ಟಿನಲ್ಲಿ ಕ್ಯಾಮರಾಕ್ಕೂ ಪೋಸು ನೀಡಿದ್ದರು.

2008: ಪಾಕಿಸ್ಥಾನದ ವಾಯವ್ಯ ಭಾಗದಲ್ಲಿನ ಖೈಬರ್ ಕಣಿವೆ ಪ್ರದೇಶದಲ್ಲಿನ ಮೂಲಭೂತವಾದಿಗಳು ಹಾಗೂ ಬುಡಕಟ್ಟು ಜನರ ನಡುವೆ ಹಿಂದಿನ ದಿನ ರಾತ್ರಿ ನಡೆದ ಘರ್ಷಣೆಯಲ್ಲಿ 20 ಮಂದಿ ಸಾವನ್ನಪ್ಪಿದರು. ಧರ್ಮಗುರು ಮಂಗಲ್ ಬಾಗ್ ಆಫ್ರಿದಿ ನಾಯಕತ್ವದ ಲಷ್ಕರ್-ಎ-ಇಸ್ಲಾಂ ಪಡೆ ಹಾಗೂ ಕೂಕಿ ಖೇಲ್ ಬುಡಕಟ್ಟು ಜನರ ನಡುವೆ ಈ ಘರ್ಷಣೆ ಸಂಭವಿಸಿತು. ಆಫ್ರಿದಿಯವರು ಬುಡಕಟ್ಟು ಜನರ ಮುಂದೆ 30 ಬೇಡಿಕೆಗಳನ್ನು ಇಟ್ಟಿದ್ದರು. ಅದು ಅನೈತಿಕ ಹಾಗೂ ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಚಟುವಟಿಕಗಳೆಂದು ತೀರ್ಮಾನಿಸಿ ಕೂಕಿ ಖೇಲ್ ಬುಡಕಟ್ಟು ಸಮುದಾಯದವರು ಅದನ್ನು ತಿರಸ್ಕರಿಸಿದರು. ಈ ಕಾರಣದಿಂದ ಈ ಇಬ್ಬರ ನಡುವೆ ಘರ್ಷಣೆ ಸಂಭವಿಸಿತು.

2008: ಗಾಜಾಪಟ್ಟಿಯಲ್ಲಿ ಹಮಾಸ್ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 20 ಪ್ಯಾಲೆಸ್ತೀನಿಯರು ಹಾಗೂ ಮೂವರು ಇಸ್ರೇಲಿ ಸೈನಿಕರು ಹತರಾದರು. ಘಟನೆಯನ್ನು ವರದಿ ಮಾಡಲು ಹೋದ ರಾಯಿಟರ್ ಸುದ್ದಿ ಸಂಸ್ಥೆಯ ಟಿವಿ ಛಾಯಾಗ್ರಹಕ ಫಡಲ್ ಶಾನ್ ಕೊಲೆಯಾದರು.

2007: ಖ್ಯಾತ ಕಾದಂಬರಿಕಾರ ತರಾಸು. ಅವರ ಪತ್ನಿ ಅಂಬುಜಾ ತರಾಸು (80) ಅವರು ಮೈಸೂರಿನ ಯಾದವಗಿರಿಯಲ್ಲಿನ ಗಿರಿಕನ್ನಿಕಾದಲ್ಲಿ ನಿಧನರಾದರು.

2007: ಭಾರತ ಸಂಜಾತೆ ಉಷಾ ಲೀ ಮೆಕ್ ಫಾರ್ಲಿಂಗ್ ಅವರನ್ನು ಒಳಗೊಂಡಿರುವ `ಲಾಸ್ ಏಂಜೆಲೀಸ್ ಟೈಮ್' ತಂಡಕ್ಕೆ ಪುಲಿಟ್ಜರ್ ಪ್ರಶಸ್ತಿ ಲಭಿಸಿತು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಪೃಥ್ವಿಯಿಂದ 210 ಮೈಲಿ ದೂರದ ಬಾಹ್ಯಾಕಾಶದ ಅಟ್ಟಣಿಗೆಯಲ್ಲಿ ಟ್ರೆಡ್ ಮಿಲ್ (ನಡಿಗೆ ಯಂತ್ರ) ಮೇಲೆ ಓಡಿ ಬೋಸ್ಟನ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾಗುವುದರೊಂದಿಗೆ ಮತ್ತೊಂದು ವಿಶಿಷ್ಟ ಸಾಧನೆ ಮಾಡಿದರು. ಬಾಹ್ಯಾಕಾಶ ಅಟ್ಟಣಿಗೆಯು ಗಂಟೆಗೆ ಎಂಟು ಮೈಲಿ ವೇಗದಲ್ಲಿ ದಿನಕ್ಕೆ ಎರಡು ಬಾರಿ ಭೂಪ್ರದಕ್ಷಿಣೆ ಮಾಡುವಾಗ ಸುನೀತಾ ಅವರು ಟ್ರಡ್ ಮಿಲ್ ನಲ್ಲಿ 4 ಗಂಟೆ 24 ನಿಮಿಷಗಳಲ್ಲಿ ಮ್ಯಾರಥಾನ್ ಗುರಿ ತಲುಪಿದರು. ಬೋಸ್ಟನ್ನಿನಲ್ಲಿ 24,000 ಸ್ಪರ್ಧಿಗಳು ಕೊರೆಯುವ ಚಳಿ ಹಾಗೂ ಇಬ್ಬನಿಯ ಪ್ರತಿಕೂಲ ವಾತಾವರಣದಲ್ಲಿ ಓಡುವ ಮೂಲಕ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡರು.

2007: ಅಮೆರಿಕದ ಷೇರು ಕಂಪೆನಿಗಳನ್ನು ಬಯಲಿಗೆಳೆದ್ದಿದಕ್ಕಾಗಿ 2006ರಲ್ಲಿ ಸಾರ್ವಜನಿಕ ಸೇವಾ ಪ್ರಶಸ್ತಿಯೂ ಸೇರಿದಂತೆ ವಾಲ್ ಸ್ಟ್ರೀಟ್ ನಿಯತಕಾಲಿಕೆಯು ಎರಡು ಪುಲಿಟ್ಜರ್ ಪ್ರಶಸ್ತಿಗಳನ್ನು ಪಡೆಯಿತು.

2007: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈದಿನದಿಂದ ಜಾರಿಯಾಗುವಂತೆ ಬಿಹಾರ ಸರ್ಕಾರದ ಎಲ್ಲ ಸಿಬ್ಬಂದಿಗೆ 15 ದಿನಗಳ `ಪಿತೃತ್ವ ರಜೆ'ಗೆ ಅವಕಾಶ ಕಲ್ಪಿಸಿದರು. ಆದರೆ ಈ ಸವಲತ್ತು ಪಡೆಯಲು ಒಂದು ಕಠಿಣ ಷರತ್ತು ವಿಧಿಸಲಾಯಿತು. ಯಾರು ಕಡ್ಡಾಯವಾಗಿ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೋ ಅವರಿಗಷ್ಟೇ ಈ ಸವಲತ್ತು ಲಭಿಸುತ್ತದೆ ಎಂಬುದೇ ಈ ಷರತ್ತು. ಅರ್ಹತಾ ಸಮಿತಿಯು ಕಳುಹಿಸಿದ ಪ್ರಸ್ತಾವದ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಈ ನಿಟ್ಟಿನಲ್ಲಿ ಸರ್ಕಾರಿ ಆದೇಶವನ್ನು ಹೊರಡಿಸಲಾಯಿತು. ಮಹಿಳಾ ನೌಕರರ `ಮಾತೃತ್ವ ರಜೆ'ಯನ್ನು 90 ದಿನಗಳಿಂದ 135 ದಿನಗಳಿಗೆ ಏರಿಸಬೇಕು ಎಂಬುದಾಗಿ ಅರ್ಹತಾ ಸಮಿತಿಯು ಮಾಡಿದ ಸಲಹೆಗೂ ಸರ್ಕಾರ ಒಪ್ಪಿಗೆ ನೀಡಿತು. ಇದಕ್ಕೆ ಮುನ್ನ ಜನವರಿ 1ರಂದು ನಿತೀಶ್ ಕುಮಾರ್ ಸರ್ಕಾರವು ದೈನಂದಿನ ಕೆಲಸದ ಸಮಯವನ್ನು ಹೆಚ್ಚು ಮಾಡಿ ಐದು ದಿನಗಳ ಕೆಲಸದ ವಾರ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು.

2007: ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಆನ್ ಲೈನ್ ಲಾಟರಿ, ಪೇಪರ್ ಲಾಟರಿ ಸೇರಿದಂತೆ ಎಲ್ಲ ಬಗೆಯ ಲಾಟರಿ ನಿಷೇಧಿಸಿ ಕರ್ನಾಟಕ ಸರ್ಕಾರವು ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತು.

2006: ಇಪ್ಪತ್ತೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನವದೆಹಲಿಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅತ್ಯಂತ ಗರಿಷ್ಠ ಮಟ್ಟಕ್ಕೆ ಅಂದರೆ ಪ್ರತಿ 10 ಗ್ರಾಮಿಗೆ 9000 ರೂಪಾಯಿಗಳಿಗೆ, ಬೆಳ್ಳಿಯ ಬೆಲೆ ಪ್ರತಿ ಕಿ.ಗ್ರಾಂ.ಗೆ 20,000 ರೂಪಾಯಿಗಳಗೆ ಮುಟ್ಟಿತು.

2006: ದೇಶದ ಕ್ಷೀರ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ಅವರನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಲಾಯಿತು.

2006: ನರ್ಮದಾ ಸರೋವರ ಅಣೆಕಟ್ಟೆಯ ನಿರ್ಮಾಣ ಕಾಮಗಾರಿ ಮತ್ತು ಅಣೆಕಟ್ಟೆ ನಿರ್ಮಾಣದಿಂದ ಮನೆಮಠ ಕಳೆದುಕೊಳ್ಳುವವರಿಗೆ ಪರಿಣಾಮಕಾರಿ ಪುನರ್ ವಸತಿ ಈ ಎರಡೂ ಕಾರ್ಯ ಜೊತೆ ಜೊತೆಯಾಗಿಯೇ ಸಾಗಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶಿಸಿತು. ತೀರ್ಪಿನ ಬೆನ್ನಲ್ಲೇ ಸರ್ದಾರ್ ಸರೋವರ ಯೋಜನೆಯಲ್ಲಿ ಸಂತ್ರಸ್ತರಾಗುವ ಮಂದಿಗೆ ಸೂಕ್ತ ಪರಿಹಾರ ನೀಡುವುದರ ಜೊತೆಗೆ ಮರುವಸತಿ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತು.

2006: ನರ್ಮದಾ ಅಣೆಕಟ್ಟೆಯಿಂದ ನಿರಾಶ್ರಿತರಾದವರಿಗೆ ಪರಿಣಾಮಕಾರಿ ಪುನರ್ ವಸತಿ ಕಲ್ಪಿಸದೇ ಇದ್ದರೆ ಮೇ 1ರಿಂದ ಅಣೆಕಟ್ಟೆ ಕಾಮಗಾರಿ ನಿಲ್ಲಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ್ದನ್ನು ಅನುಸರಿಸಿ ನರ್ಮದಾ ಬಚಾವೊ ಆಂದೋಲನದ ನಾಯಕಿ ಮೇಧಾ ಪಾಟ್ಕರ್ ತಮ್ಮ 20 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

2006: ರಾಯ್ ಬರೇಲಿ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದರು.

2006: ದೇಶದ ಮೊದಲ ಬೃಹತ್ ಜೈವಿಕ ತಂತ್ರಜ್ಞಾನ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಯೋಕಾನ್ ಫಾರ್ಮಾಸ್ಯೂಟಿಕಲ್ಸ್ ಕೇಂದ್ರಕ್ಕೆ ಬೆಂಗಳೂರು ಹೊರವಲಯದ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಚಾಲನೆ ನೀಡಿದರು.

2006: ಅಲಿಪ್ತ ಸದಸ್ಯ ರಾಷ್ಟ್ರಗಳ ಸುದ್ದಿ ಸಂಸ್ಥೆಗಳನ್ನು ಒಂದುಗೂಡಿಸಿ `ಅಲಿಪ್ತ ಸುದ್ದಿ ಸಂಸ್ಥೆ'ಯನ್ನು (ಎನ್ ಎನ್ ಎನ್) ಕ್ವಾಲಾಲಂಪುರದಲ್ಲಿ ಅಧಿಕೃತವಾಗಿ ಆರಂಭಿಸಲಾಯಿತು. ಜಗತ್ತಿಗೆ ಪರಿಣಾಮಕಾರಿಯಾಗಿ ತಮ್ಮ `ಕಥೆ' ಹೇಳಲು 114 ರಾಷ್ಟ್ರಗಳಿಗೆ ಅನುಕೂಲವಾಗುವಂತೆ ಈ ಮಾಧ್ಯಮವನ್ನು ಆರಂಭಿಸಲಾಯಿತು. ಮಲೇಷ್ಯಾದ `ಮೆದುಳಿನ ಕೂಸು' ಆಗಿರುವ ಈ ಸುದ್ದಿ ಸಂಸ್ಥೆಗೆ ಬೆರ್ನಾಮಾ ಎನ್ ಎನ್ ಎನ್ ಮುಖ್ಯಸ್ಥ ಮಲೇಷ್ಯನ್ ನ್ಯೂಸ್ ಏಜೆನ್ಸಿಯ ಬೆರ್ನಾಮ ಜಮೀಲ್ ಸೈಯದ್ ಜಾಫರ್ ಅವರೇ ಹಣಕಾಸು ಒದಗಿಸುವರು. ಇಂಟರ್ನೆಟ್ ಆಧಾರಿತ ಸಂಸ್ಥೆಯಾಗಿ ಇದು ಜೂನ್ ನಿಂದ ಕಾರ್ಯ ನಿರ್ವಹಿಸುವುದು ಎಂದು ಪ್ರಕಟಿಸಲಾಯಿತು.

1961: ಭಾರತದ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಹುಟ್ಟಿದ ದಿನ. ಬಿಲಿಯರ್ಡ್ಸ್ ನಲ್ಲಿ ಇವರು ಒಟ್ಟು 7 ವಿಶ್ವ ಪ್ರಶಸ್ತಿಗಳನ್ನು ಪಡೆದುದಲ್ಲದೆ 1985ರಲ್ಲಿ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಹೆಸರು ಪಡೆದರು.

1916: ಸಿರಿಮಾವೋ ಬಂಡಾರನಾಯಕೆ ಜನ್ಮದಿನ. ಈಕೆ ಇಂದಿನ ಶ್ರೀಲಂಕೆಯ (ಆಗಿನ ಸಿಲೋನ್) 1960ರ ಮಹಾಚುನಾವಣೆಯಲ್ಲಿ ತನ್ನ ಪಕ್ಷದ ಭಾರೀ ವಿಜಯಕ್ಕೆ ಕಾರಣರಾಗಿ ಪ್ರಧಾನಿ ಸ್ಥಾನಕ್ಕೆ ಏರಿದರು. ಈಕೆಗೆ ಜಗತ್ತಿನಲ್ಲೇ ಮೊತ್ತ ಮೊದಲ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಬಂತು.

1894: ನಿಕಿಟ ಖ್ರುಶ್ಚೇವ್ (1894-1971) ಜನ್ಮದಿನ. ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದ ಇವರು ರಾಷ್ಟ್ರದ ಮೇಲಿದ್ದ ಸ್ಟಾಲಿನ್ ಪ್ರಭಾವವನ್ನು ನಿವಾರಿಸುವ ನೀತಿಗಳನ್ನು ಅನುಷ್ಠಾನಕ್ಕೆ ತಂದರು.

1799: ಬ್ರಿಟಿಷರು ಮತ್ತು ಟಿಪ್ಪು ಸುಲ್ತಾನ್ ಮಧ್ಯೆ ನಡೆದ 4ನೇ ಮೈಸೂರು ಯುದ್ಧದ ಸಂದರ್ಭದಲ್ಲಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಲಾಯಿತು. ಮೇ 4ರಂದು ಟಿಪ್ಪು ಸುಲ್ತಾನ್ ಸಾವಿನೊಂದಿಗೆ ಈ ಮುತ್ತಿಗೆ ಕೊನೆಗೊಂಡಿತು.

No comments:

Advertisement