Thursday, April 1, 2010

ಇಂದಿನ ಇತಿಹಾಸ History Today ಫೆಬ್ರುವರಿ 26

ಇಂದಿನ ಇತಿಹಾಸ

ಫೆಬ್ರುವರಿ 26

ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದ ಪುಟಗಳಲ್ಲಿ ಹಲವು ಕಪ್ಪುಚುಕ್ಕೆಗಳನ್ನು ದಾಖಲಿಸಿದ ಹದಿನಾಲ್ಕನೇ ಲೋಕಸಭೆಯ ಕೊನೆಯ ಅಧಿವೇಶನ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರ ಭಾವಪೂರ್ಣ ವಿದಾಯ ಭಾಷಣದೊಂದಿಗೆ ಈದಿನ ಕೊನೆಗೊಂಡಿತು

2009: ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದ ಪುಟಗಳಲ್ಲಿ ಹಲವು ಕಪ್ಪುಚುಕ್ಕೆಗಳನ್ನು ದಾಖಲಿಸಿದ ಹದಿನಾಲ್ಕನೇ ಲೋಕಸಭೆಯ ಕೊನೆಯ ಅಧಿವೇಶನ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರ ಭಾವಪೂರ್ಣ ವಿದಾಯ ಭಾಷಣದೊಂದಿಗೆ ಈದಿನ ಕೊನೆಗೊಂಡಿತು. ಲಂಚ ಪಡೆದುದಕ್ಕಾಗಿ ಹನ್ನೊಂದು ಸದಸ್ಯರ ವಜಾ, ಸಂಸತ್ ಸದಸ್ಯರ ಸ್ಥಳೀಯ ಅಭಿವೃದ್ಧಿ ನಿಧಿಯ ದುರುಪಯೋಗಕ್ಕಾಗಿ ನಾಲ್ವರ ಅಮಾನತು, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಕೇಳಿ ಬಂದ ಲಂಚದ ಆರೋಪ, ಸದನದಲ್ಲಿಯೇ ಹಾರಾಡಿದ ನೋಟಿನ ಕಂತೆಗಳು, ಮತ್ತು ಪಕ್ಷಾಂತರದ ಹಾವಳಿಯಿಂದಾಗಿ ಹದಿನಾಲ್ಕನೇ ಲೋಕಸಭೆ ಸದಾ ವಿವಾದದಲ್ಲಿಯೇ ಮುಳುಗಿದ್ದನ್ನು 80 ವರ್ಷದ ಸೋಮನಾಥ ಚಟರ್ಜಿ ತನ್ನ ದೀರ್ಘ ಭಾಷಣದಲ್ಲಿ ನೋವಿನಿಂದಲೇ ಮೆಲುಕುಹಾಕಿದರು.

2009: ಸೇನೆಯ ವಿರುದ್ಧ ತಿರುಗಿಬಿದ್ದ ಗಡಿ ಭದ್ರತಾ ಪಡೆಗೆ ಸೇರಿದ 'ಬಾಂಗ್ಲಾದೇಶ ರೈಫಲ್ಸ್'ನ (ಬಿಡಿಆರ್) ಯೋಧರ ಬಂಡಾಯ ಈದಿನವೂ ಮುಂದುವರೆಯಿತು. ರಾಜಧಾನಿಯ ಹೊರವಲಯದ ಪಿಲ್ಖಾನ ಎಂಬಲ್ಲಿನ ಮುಖ್ಯ ಕೇಂದ್ರದಲ್ಲಿ ಹಿಂದಿನ ದಿನ ಆರಂಭವಾಗಿದ್ದ ದಂಗೆ ದೇಶದ ಇತರ ಭಾಗಗಳಿಗೂ ವ್ಯಾಪಿಸಿತು. ಪ್ರಧಾನಿ ಶೇಕ್ ಹಸೀನಾ ಅವರ ಕ್ಷಮಾದಾನದ ಭರವಸೆಯ ಬಳಿಕ ಮಧ್ಯರಾತ್ರಿಯ ನಂತರ ಕೆಲ ಯೋಧರು ಶಸ್ತ್ರಾಸ್ತ್ರ ತ್ಯಜಿಸಲು ಆರಂಭಿಸಿದರು. ಆದರೆ ನಂತರವೂ ಮುಖ್ಯ ಕೇಂದ್ರದಿಂದ ಗುಂಡಿನ ಸದ್ದು ಕೇಳಿಬಂದಿತು.

2009: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ 'ಸೋನಿಯಾ ಗಾಂಧಿ' ಯುಪಿಎ ಸರ್ಕಾರದ ದಾರಿದೀವಿಗೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪ್ರಮುಖ ರೂವಾರಿ.. ಹೀಗೆಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿತು. ಇದನ್ನು ತನ್ನ ತೀರ್ಪಿನಲ್ಲೂ ಅದು ಉಲ್ಲೇಖಿಸಿತು. ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ನೀಡುತ್ತಿರುವ ಎಲ್ಲ ಜಾಹೀರಾತುಗಳಲ್ಲೂ ಇವರ ಭಾವಚಿತ್ರ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿದ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ಎಸ್.ಆರ್. ಬನ್ನೂರುಮಠ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ತೀರ್ಪಿತ್ತಿತು. ಸೋನಿಯಾ ರಾಷ್ಟ್ರೀಯ ನಾಯಕಿ ಅಲ್ಲದಿದ್ದರೂ, ಅವರ ಭಾವಚಿತ್ರಗಳನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವುದಾಗಿ ದೂರಿ ಬೆಳ್ಳಿ ರವಿವರ್ಮಕುಮಾರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

2009: ದುಡ್ಡಿನ ಮಳೆ ಸುರಿದರೆ ಹೇಗಿದ್ದೀತು? ಇಂತಹ ಒಂದು ವಿಚಿತ್ರ ವಿದ್ಯಮಾನ ಕೋಲ್ಕತಾ ಜನನಿಬಿಡ ಪ್ರದೇಶದಲ್ಲಿ ಈದಿನ ಸಂಜೆ ನಡೆಯಿತು. ನಗರದ ಜವಾಹರಲಾಲ್ ನೆಹರು ರಸ್ತೆಯ ಎವರೆಸ್ಟ್ ಕಟ್ಟಡದಿಂದ ಏಕಾಏಕಿ 500, 100, ಹಾಗೂ 50 ರೂಪಾಯಿಗಳ ನೋಟು ಕೆಳಗೆ ಬೀಳುತ್ತಿದ್ದುದನ್ನು ನೋಡಿ ರಸ್ತೆಯ ಮೇಲೆ ಓಡಾಡುತ್ತಿದ್ದ ಜನ ಮೂಕವಿಸ್ಮಿತರಾದರು. ತಕ್ಷಣ ಪೊಲೀಸರು ಕಾರ್ಯ ಪ್ರವೃತ್ತರಾಗಿ ಸುಮಾರು 3.2 ಲಕ್ಷ ರೂಪಾಯಿ ಸಂಗ್ರಹಿಸಿದರು. ಕಟ್ಟಡದ 14ನೇ ಮಹಡಿಯಲ್ಲಿದ್ದ ಎಂಜಿನಿಯರಿಂಗ್ ಕಂಪೆನಿಯೊಂದರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾಗ ಅಲ್ಲಿನ ಸಿಬ್ಬಂದಿ ಹತಾಶರಾಗಿ ದುಡ್ಡಿನ ಕಂತೆಗಳನ್ನು ಕೆಳಕ್ಕೆ ಎಸೆದಿದ್ದರು. ಕೆಳಗೆ ಬಿದ್ದ ದುಡ್ಡಲ್ಲಿ ಒಂದು ನೋಟು ಸಹ ಅನ್ಯರ ಕೈ ಸೇರಿಲ್ಲ, ಎಲ್ಲವನ್ನೂ ಸಂಗ್ರಹಿಸಿದ್ದಾಗಿ ಪೊಲೀಸರು ಹೇಳಿದರೆ, ಈ ಬಗ್ಗೆ ತೆರಿಗೆ ಅಧಿಕಾರಿಗಳು ಮೌನ ವಹಿಸಿದರು.

2009: ನೇಪಾಳದ ಪ್ರಸಿದ್ಧ ಐತಿಹಾಸಿಕ ವಸ್ತುಸಂಗ್ರಹಾಲಯ 'ನಾರಾಯಣ ಹಿತಿ'ಯನ್ನು ಪ್ರಧಾನಿ ಪ್ರಚಂಡ ಅವರು ಈದಿನ ರಾಷ್ಟ್ರಕ್ಕೆ ಸಮರ್ಪಿಸಿದರು. ಶತಮಾನದಷ್ಟು ಹಳೆಯದಾದ ನೇಪಾಳದ ನಾರಾಯಣ ಹಿತಿ ಅರಮನೆಯನ್ನು ಸರ್ಕಾರ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಿದೆ. 2008ರಲ್ಲಿ ನೇಪಾಳದಲ್ಲಿ ಅರಸೊತ್ತಿಗೆ ಆಳ್ವಿಕೆ ಕೊನೆಗೊಂಡ ನಂತರದಿಂದಲೇ ವಸ್ತುಸಂಗ್ರಾಹಲಯ ನಿರ್ಮಾಣ ಕಾರ್ಯ ಆರಂಭವಾಗಿತ್ತು.

2009: ಹಾನಗಲ್ ಕನ್ನಡ ಯುವಜನ ಕ್ರಿಯಾ ಸಮಿತಿ 'ನಾಡೋಜ ಚನ್ನವೀರ ಕಣವಿ' ಅವರ ಹೆಸರಿನಲ್ಲಿ ನೀಡುವ ರಾಜ್ಯ ಮಟ್ಟದ 'ಕಣವಿ ಕಾವ್ಯ ಪುರಸ್ಕಾರ'ಕ್ಕೆ ಯುವ ಕವಿಗಳಾದ ಟಿ.ಎಲ್ಲಪ್ಪ ಮತ್ತು ಚಿದಾನಂದ ಸಾಲಿ ಅವರನ್ನು ಆಯ್ಕೆ ಮಾಡಿತು.

2009: ಕನ್ನಡ ಸಾಹಿತ್ಯ ಪರಿಷತ್ತಿನ 2008-09ನೇ ಸಾಲಿನ ಚಾವುಂಡರಾಯ ಪ್ರಶಸ್ತಿಗೆ ಡಾ. ಹೋ.ಶ್ರೀ.ಮದನ ಕೇಸರಿ ಆಯ್ಕೆಯಾದರು. ಜೈನ ಸಾಹಿತ್ಯಕ್ಕೆ ನೀಡುವ ಈ ಪ್ರಶಸ್ತಿ ಮೊತ್ತ 20 ಸಾವಿರ ರೂಪಾಯಿ. ಜೈನಧರ್ಮ ಹಾಗೂ ಇತರೆ ವಿಷಯಗಳ ಕುರಿತು ಮದನ ಕೇಸರಿಯವರು ಒಟ್ಟು 61 ಪುಸ್ತಕಗಳನ್ನು ರಚಿಸಿದ್ದಾರೆ. ಬಿ.ಸರೋಜಾದೇವಿ ದತ್ತಿ ಪ್ರಶಸ್ತಿಗೆ ಹಿರಿಯ ಲೇಖಕಿ ಆರ್ಯಾಂಭ ಪಟ್ಟಾಭಿ ಅವರನ್ನು ಆಯ್ಕೆಮಾಡಲಾಯಿತು. ಲೇಖಕಿಯರಿಗೆ ನೀಡುವ ಈ ಪ್ರಶಸ್ತಿಯ ಮೊತ್ತ 10 ಸಾವಿರ ರೂಪಾಯಿ.

2009: ಲಖನೌ ಮಹಾನಗರದ ಐಷ್‌ಬಾಗ್ ರಾಮಲೀಲಾ ಮೈದಾನದಲ್ಲಿ ಈದಿನ ಸಂಜೆ ಅಂತರಿಕ್ಷದಲ್ಲಿ ಜೋಡಿಯೊಂದು ಕೈಹಿಡಿಯುವ ಮೂಲಕ ಸುದ್ದಿ ಮಾಡಿತು. ಅಂತೆಯೇ ಉತ್ತರ ಪ್ರದೇಶದಲ್ಲಿ ಅಂತರಿಕ್ಷದಲ್ಲಿ ಮದುವೆಯಾದ ಮೊದಲ ದಂಪತಿ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಪೈಲಟ್ ನೆರವಿನಿಂದ ಬಿಸಿ ಗಾಳಿ ತುಂಬಿದ ಬಲೂನಿನಲ್ಲಿ ಮದುಮಗ ಮತ್ತು ಮದುವಣಗಿತ್ತಿ ನೆಲದಿಂದ ನೂರು ಮೀಟರ್ ಮೇಲಕ್ಕೆ ಹಾರಿದರು. ಅಂತರಿಕ್ಷದಲ್ಲೇ ಬಲೂನನ್ನೇ ಮದುವೆ ಮಂಟಪ ಮಾಡಿಕೊಂಡು ಪುರೋಹಿತರೊಬ್ಬರ ನೆರವಿನಲ್ಲಿ ತಾಳಿಕಟ್ಟಿದರು. ವರ ದೇವ್ ಪ್ರಶಾಂತ್ ತ್ರಿವೇದಿ ಲಖನೌ ನಗರದ ಖಾಸಗಿ ಬ್ಯಾಂಕೊಂದರಲ್ಲಿ ಉದ್ಯೋಗಿ. ವಧು ಅರ್ಚನಾ ಇಟಾಹ್ ನಗರದ ಹುಡುಗಿ. ಇವರ ಮದುವೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಮೈದಾನದಲ್ಲಿ ನೂರಾರು ಜನರು ನೆರೆದಿದ್ದರು. 20 ನಿಮಿಷಗಳ ಕಾಲ ಅಂತರಿಕ್ಷದಲ್ಲಿ ನಡೆದ ಈ ಸಮಾರಂಭಕ್ಕೆ ತಗುಲಿದ ವೆಚ್ಚ 80 ಸಾವಿರ ರೂಪಾಯಿ. ಈ ಸಮಾರಂಭ ಆಯೋಜನೆಗೆ ವಾಯು ಸಂಚಾರ ನಿಯಂತ್ರಣ ಅಧಿಕಾರಿಗಳ ವಿಶೇಷ ಪರವಾನಗಿ ಪಡೆಯಲಾಗಿತ್ತು.

2008: ರೈಲ್ವೆ ಸಚಿವ ಲಾಲು ಪ್ರಸಾದ್ ಲೋಕಸಭೆಯಲ್ಲಿ ಸರಕು ಸಾಗಣೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದ, ರೈಲ್ವೆ ಸಿಬ್ಬಂದಿಯ ಕಲ್ಯಾಣದ ಕ್ರಮಗಳನ್ನು ಒಳಗೊಂಡ 2008-09ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದರು. ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರದ ಐದನೇ ಮತ್ತು ಕೊನೆಯ ಪೂರ್ಣ ಪ್ರಮಾಣದ ರೈಲ್ವೆ ಬಜೆಟಿನ `ಲಾಲು ಬಂಡಿ'ಯೂ ಒಟ್ಟಾರೆ ಜನಪ್ರಿಯತೆಯ ಹಾದಿಯಲ್ಲೇ ಸಾಗಿತು. ಎಲ್ಲ ಬಗೆಯ ಪ್ರಯಾಣ ದರಗಳಲ್ಲಿ ಶೇ 5ರಷ್ಟು ಕಡಿತ, ಸರಕು ಸಾಗಣೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದ, ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಸೌಲಭ್ಯ ಒದಗಿಸಲು ಹೊಸ ಕ್ರಮಗಳನ್ನು ಪ್ರಕಟಿಸಲಾಯಿತು. ಹವಾ ನಿಯಂತ್ರಿತ (ಎಸಿ) ಮೊದಲ ದರ್ಜೆ ದರಗಳಲ್ಲಿ ಶೇ 7ರಷ್ಟು ಮತ್ತು ಎಸಿ-2 ಟಯರ್ ದರಗಳಲ್ಲಿ ಶೇ 4ರಷ್ಟು ಇಳಿಕೆ ಪ್ರಕಟಿಸಲಾಯಿತು.

2008: ಕರ್ನಾಟಕದಲ್ಲಿ ವಾಣಿಜ್ಯ ಉದ್ದೇಶದ ವಾಹನಗಳಿಗೆ ವೇಗ ನಿಯಂತ್ರಕ ಆಳವಡಿಕೆ ಕಡ್ಡಾಯಗೊಳಿಸುವ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತೆ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಪೀಠವು ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ನಡೆಸುವ ವಾಹನಗಳ ಮಾಲೀಕರ ಸಂಘವು ಹೈಕೋರ್ಟ್ ಆಜ್ಞೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.

2008: ವಾಣಿಜ್ಯ ಉದ್ದೇಶದ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟವು ಮುಷ್ಕರವನ್ನು ಹಿಂತೆಗೆದುಕೊಂಡಿತು.

2008: ಮೊಬೈಲ್ ಫೋನಿನ ಅತಿಯಾದ ಬಳಕೆಯಿಂದ ಮಿದುಳಿಗೆ ತೊಂದರೆಯಾಗುವುದು ಈಗಾಗಲೇ ಪತ್ತೆಯಾಗಿದೆ. ಮೊಬೈಲಿನಿಂದ ಹೊರಹೊಮ್ಮುವ ವಿಕಿರಣದಿಂದ ಚರ್ಮಕ್ಕೆ ಹಾನಿಯಾಗುತ್ತದೆ ಎಂಬುದು ಹೊಸ ವಿಷಯ ಸಂಶೋಧನೆಯಿಂದ ಬೆಳಕಿಗೆ ಬಂತು. ಮೊಬೈಲ್ ವಿಕಿರಣದಿಂದ ಕೆಲವು ಜೈವಿಕ ಪರಿಣಾಮಗಳು ಉಂಟಾಗುತ್ತವೆ. ಮಾನವನ ಚರ್ಮದ ಮೇಲೆ ಈ ವಿಕಿರಣಗಳು ಸಣ್ಣ ಪ್ರಮಾಣದ ಪರಿಣಾಮವನ್ನು ಬೀರುತ್ತವೆ ಎಂದು ಸಂಶೋಧಕರ ತಂಡದ ಮುಖ್ಯಸ್ಥ ಡೆರಿಸುಜ್ ಲೆಸಜಿಸಂಕಿ ಅವರು ತಿಳಿಸಿದರು. ಚರ್ಮದ ಸಜೀವ ಕೋಶಗಳು ಮೊಬೈಲ್ ವಿಕಿರಣಕ್ಕೆ ಸ್ಪಂದಿಸುವುದರಿಂದ ಜೀವಸತ್ವದಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ಫಿನ್ಲೆಂಡಿನ ಸಂಶೋಧಕರ ತಂಡವು ನಡೆಸಿದ ಅಧ್ಯಯನದಿಂದ ಪತ್ತೆಯಾಯಿತು. ಸತತವಾಗಿ ಮೊಬೈಲ್ ಬಳಸುವ 580 ಜನರ ಚರ್ಮವನ್ನು ಪರೀಕ್ಷೆಗೆ ಒಳಪಡಿಸಿದ ಸಂಶೋಧಕರ ತಂಡವು ಚರ್ಮದಲ್ಲಿ ಎಂಟು ಬಗೆಯ ಜೀವಸತ್ವಗಳಿಗೆ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿರುವುದನ್ನು ಪತ್ತೆ ಹಚ್ಚಿತು.

2008: ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ವತಿಯಿಂದ ನವದೆಹಲಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು 34 ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರಖ್ಯಾತ ವಿದ್ವಾಂಸ ಡಾ. ಎಸ್. ಕೆ.ಸಕ್ಸೇನಾ ಅವರಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಅಕಾಡೆಮಿಯ ಫೆಲೋಶಿಪ್ ನೀಡಲಾಯಿತು. ಜತೆಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ಹಿರಿಯ ರಂಗಕರ್ಮಿ ಎನ್ ಸಿ ಠಾಕೂರ್, ಚಲನಚಿತ್ರ ಸಂಗೀತ ನಿರ್ದೇಶಕ ಖಯ್ಯೂಂ, ಕಥಕ್ ನೃತ್ಯಪಟು ಗೀತಾಂಜಲಿ ಲಾಲ್ ಅವರಿಗೆ ಕೂಡಾ ತಲಾ 50ಸಾವಿರ ನಗದು ಬಹುಮಾನದೊಂದಿಗೆ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2007: ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಮಾರ್ಟಿನ್ ಸ್ಕೋರ್ಸೇಸೆ ಅವರ ಬೋಸ್ಟನ್ ಪೊಲೀಸರ ಭ್ರಷ್ಟಾಚಾರದ ಕಥೆಯನ್ನು ಹೇಳುವ ಕ್ರೈಮ್ ಥ್ರ್ಲಿಲರ್ `ದಿ ಡಿಪಾರ್ಟೆಡ್' ಚಿತ್ರವು ಅತ್ಯುತ್ತಮ ಚಲನಚಿತ್ರಕ್ಕೆ ನೀಡಲಾಗುವ ಪ್ರಸ್ತುತ ಸಾಲಿನ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಶ್ವದ ಈ ಅತ್ಯುನ್ನತ ಪ್ರಶಸ್ತಿಗಾಗಿ `ದಿ ಡಿಪಾರ್ಟೆಡ್' ಜೊತೆಗೆ ಸಾಂಸ್ಕೃತಿಕ ಚಿತ್ರ `ಬಾಬೆಲ್', ಹಾಸ್ಯಚಿತ್ರ `ಲಿಟಲ್ ಮಿಸ್ ಸನ್ ಶೈನ್', ದ್ವಿತೀಯ ಜಾಗತಿಕ ಸಮರದ ಕಥೆ `ಲೆಟರ್ಸ್ ಫ್ರಮ್ ಐವೊ ಜಿಮ' ಮತ್ತು ಬ್ರಿಟಿಷ್ ರಾಜಮನೆತನಕ್ಕೆ ಸಂಬಂಧಿಸಿದ `ದಿ ಕ್ವೀನ್' ಚಿತ್ರಗಳು ಪೈಪೋಟಿಗೆ ಇಳಿದಿದ್ದವು. `ದಿ ಕ್ವೀನ್' ಚಿತ್ರದಲ್ಲಿನ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್ ಪಾತ್ರಕ್ಕಾಗಿ ಹೆಲೆನ್ ಮಿರ್ರೆನ್ `ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಪಡೆದರೆ, `ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್' ಚಿತ್ರದಲ್ಲಿನ ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್ ಪಾತ್ರಕ್ಕಾಗಿ ಫಾರೆಸ್ಟ್ ವಿಟಕರ್ `ಅತ್ಯುತ್ತಮ ನಟ' ಪ್ರಶಸ್ತಿಯನ್ನು ಬಾಚಿಕೊಂಡರು. ಅತ್ಯುತ್ತಮ ಚಿತ್ರ ನಿರ್ಮಾಪಕರೆಂದು ಖ್ಯಾತಿ ಪಡೆದಿರುವ ಮಾರ್ಟಿನ್ ಸ್ಕೋರ್ಸೇಸೆ ಅಮೆರಿಕದ ಚಿತ್ರ ನಿರ್ಮಾಪಕರ ಪೈಕಿ ಆಸ್ಕರ್ ಪ್ರಶಸ್ತಿ ಪಡೆಯದೇ ಇರುವ ಏಕೈಕ ಜೀವಂತ ನಿರ್ಮಾಪಕರು. `ಡ್ರೀಮ್ ಗರ್ಲ್ಸ್' ಚಿತ್ರದ ಪ್ರಮುಖ ಗಾಯಕಿ ಪಾತ್ರ ನಿರ್ವಹಿಸಿದ ನಟಿ ಜೆನ್ನಿಫರ್ ಹಡ್ಸನ್ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದುಕೊಂಡರು. `ಲಿಟಲ್ ಮಿಸ್ ಸನ್ ಶೈನ್' ಚಿತ್ರದಲ್ಲಿ ನಿರ್ವಹಿಸಿದ `ಅಜ್ಜ'ನ ಪಾತ್ರಕ್ಕಾಗಿ ಖ್ಯಾತ ನಟ ಅಲನ್ ಅರ್ಕಿನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದುಕೊಂಡರು. ಜರ್ಮನಿಯ `ದಿ ಲೈವ್ಸ್ ಆಫ್ ಅದರ್ಸ್' ಚಿತ್ರವು ವಿದೇಶಿ ಭಾಷಾ ಚಿತ್ರಗಳಿಗೆ ನೀಡಲಾಗುವ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಚಿತ್ರವು ಭಾರತೀಯ ಸಂಜಾತೆ ದೀಪಾ ಮೆಹ್ತಾ ಅವರ `ವಾಟರ್' ಮತ್ತು ಇತರ ಮೂರು ಚಿತ್ರಗಳನ್ನು ಸ್ಪರ್ಧೆಯಲ್ಲಿ ಹಿಂದೆ ಹಾಕಿತು. ಆಸ್ಟ್ರೇಲಿಯಾ- ಅಮೆರಿಕದಲ್ಲಿ ಅತ್ಯಂತ ಜನಪ್ರಿಯವಾದ `ಹ್ಯಾಪಿ ಫೀಟ್' ಚಿತ್ರವು ಅತ್ಯುತ್ತಮ ಅನಿಮೇಷನ್ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂಟಾರ್ಕ್ಟಿಕಾದ ಪೆಂಗ್ವಿನ್ ನೃತ್ಯಕ್ಕೆ ಸಂಬಂಧಿಸಿದ ಕಥೆಯುಳ್ಳ ಈ ಚಿತ್ರವು ತನ್ನ ಪ್ರತಿಸ್ಪರ್ಧಿಗಳಾದ `ಕಾರ್ಸ್' ಮತ್ತು ಮಾನ್ ಸ್ಟರ್ ಹೌಸ್' ಚಿತ್ರಗಳನ್ನು ಹಿಂದಕ್ಕೆ ಹಾಕಿತು. `ಹ್ಯಾಪಿ ಫೀಟ್' ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದ್ದು ಬಾಕ್ಸ್ ಆಫೀಸಿನಲ್ಲಿ 36.30 ಕೋಟಿ ಡಾಲರುಗಳಷ್ಟು ಆದಾಯ ಗಳಿಸಿದೆ. ಟೈಮ್ ವಾರ್ನರ್ ಇಂಕ್ ಅವರ ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಮತ್ತು ಆಸ್ಟ್ರೇಲಿಯಾದ ವಿಲೇಜ್ ರೋಡ್ ಶೋ ಲಿಮಿಟೆಡ್ ಅವರು ಜಂಟಿಯಾಗಿ ನಿರ್ಮಿಸಿದ ಚಿತ್ರ ಇದು. ಚಿತ್ರದ ನಿರ್ಮಾಪಕ ಜಾರ್ಜ್ ಮಿಲ್ಲರ್ ಈ ಹಿಂದೆ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ಆದರೆ ಪ್ರಶಸ್ತಿಯನ್ನು ಗೆದ್ದಿರಲಿಲ್ಲ.

2007: ಹೊನ್ನಾವರದ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಗೆ ಸಂಗೀತ ಸಾಮ್ರಾಜ್ಞಿ, ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್ ಆಯ್ಕೆಯಾದರು.

2006: ವಂಶವಾಹಿ ರೋಗಗಳಿಗೆ ಕಾರಣವಾಗುವ ಹೊಸ ವಂಶವಾಹಿಗಳ (ಜೀನ್ ಗಳ) ಪತ್ತೆಗೆ ನೂತನ ವಿಧಾನವನ್ನು ಬೆಂಗಳೂರಿನ ವಿಜ್ಞಾನಿಗಳು ಕಂಡು ಹಿಡಿದರು. ಬೆಂಗಳೂರು ವಿಜ್ಞಾನಿಗಳು ಹೊಸ ವಂಶವಾಹಿಗಳನ್ನು ಪತ್ತೆ ಹಚ್ಚಿದ ಬಗ್ಗೆ ನೇಚರ್ ಜೆನೆಟಿಕ್ಸ್ ವರದಿ ಪ್ರಕಟಿಸಿತು.

2006: ಹಿರಿಯ ಸಂಗೀತ ವಿದ್ವಾಂಸ ಚಿಂತಾಲಪಲ್ಲಿ ಚಂದ್ರಶೇಖರ್ (62) ಹೃದಯಾಘಾತದಿಂದ ನಿಧನರಾದರು. ಚಿಂತಾಲಪಲ್ಲಿ ಕುಟುಂಬದಲ್ಲಿ 1944ರಲ್ಲಿ ಜನಿಸಿದ ಚಂದ್ರಶೇಖರ್ ಕರ್ನಾಟಕ ಮತ್ತು ಹಿಂದೂಸ್ಥಾನಿ ಗಾಯಕರಾಗಿ ಜನಪ್ರಿಯರಾಗಿದ್ದರು.

2006: ಉತ್ತರ ಕರ್ನಾಟಕ ಲೇಖಕಿಯರ ಸಂಘವು ನೀಡುವ ಸುಧಾಮೂರ್ತಿ ದತ್ತಿನಿಧಿ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲೆ ಕತ್ರಗಾಲಿನ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರಿಗೆ ಲಭಿಸಿತು.

2006: ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎನ್. ಭಟ್ ಶಿಫಾರಸಿನ ಮೇರೆಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಎನ್. ಸಿಂಗ್ ಅವರನ್ನು ಭಾಗಲ್ಪುರದಲ್ಲಿ 1989ರಲ್ಲಿ ನಡೆದ ಗಲಭೆಗಳ ತನಿಖಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.

1993: ನ್ಯೂಯಾರ್ಕಿನ ವಿಶ್ವ ವ್ಯಾಪಾರ ಕೇಂದ್ರದ ಗ್ಯಾರೇಜಿನಲ್ಲಿ ಬಾಂಬ್ ಸ್ಫೋಟಗೊಂಡಿತು. 6 ಜನ ಸತ್ತು 1000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1974: ಗಾಯಕ ಮಹೇಶ್ ನಾ. ಕುಲಕರ್ಣಿ ಅವರು ನಾರಾಯಣ ಕೆ. ಕುಲಕರ್ಣಿ- ಲಕ್ಷ್ಮೀ ಎನ್. ಕುಲಕರ್ಣಿ ದಂಪತಿಯ ಪುತ್ರನಾಗಿ ಬೆಳಗಾವಿಯಲ್ಲಿ ಜನಿಸಿದರು. ವಿಷ್ಣು ದಿಗಂಬರ ಫಲುಸ್ಕರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ.

1887: ಸರ್ ಬೆನೆಗಲ್ ನರಸಿಂಗ ರಾವ್ (1887-1953) ಮಂಗಳೂರಿನಲ್ಲಿ ಜನಿಸಿದರು. ತಮ್ಮ ಕಾಲದ ಶ್ರೇಷ್ಠ ನ್ಯಾಯವಾದಿಯಾದ ಅವರು 1947ರಲ್ಲಿ ಬರ್ಮಾ (ಈಗಿನ ಮ್ಯಾನ್ಮಾರ್) ಹಾಗೂ 1950ರಲ್ಲಿ ಭಾರತದ ಸಂವಿಧಾನಗಳ ಕರಡು ತಯಾರಿಸಲು ನೆರವಾದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 1950-1952ರಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಅವರು 1952ರ ಫೆಬ್ರುವರಿಯಿಂದ 1953ರಲ್ಲಿ ತಮ್ಮ ಸಾವಿನವರೆಗೂ ಹೇಗ್ ನ ಇಂಟರ್ ನ್ಯಾಷನಲ್ ಜಸ್ಟೀಸ್ನ ಖಾಯಂ ಕೋರ್ಟಿನ ನ್ಯಾಯಾಧೀಶರಾಗಿದ್ದರು. ಕೋರ್ಟಿಗೆ ಆಯ್ಕೆಯಾಗುವ ಮೊದಲು ಅವರನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಅಭ್ಯರ್ಥಿ ಎಂಬುದಾಗಿ ಪರಿಗಣಿಸಲಾಗಿತ್ತು.

1857: ಎಮಿಲ್ ಕೊಯೆ (Emil Coue) ಹುಟ್ಟಿದ ದಿನ. ಫ್ರೆಂಚ್ ಫಾರ್ಮಾಸಿಸ್ಟ್ ಆಗಿದ್ದ ಈತ `ಪುನರುಚ್ಚಾರ' ಮೂಲಕ ಚಿಕಿತ್ಸೆ ನೀಡುವ ಮಾನಸಿಕ ಚಿಕಿತ್ಸೆಯನ್ನು ಪ್ರಚುರ ಪಡಿಸಿದ. `ಪ್ರತಿದಿನ, ಪ್ರತಿಯೊಂದು ಮಾರ್ಗದಲ್ಲೂ ನಾನು ಸುಧಾರಿಸುತ್ತಿದ್ದೇನೆ, ಇನ್ನಷ್ಟು ಸುಧಾರಿಸುತ್ತಿದ್ದೇನೆ' ಎಂದು ಮನಸ್ಸಿಗೆ ಸೂಚನೆ ಕೊಡುವ ಈ ಚಿಕಿತ್ಸಾ ವಿಧಾನ `ಕೊಯೆಯಿಸಂ' ಎಂದೇ ಖ್ಯಾತವಾಗಿದೆ.

1826: ಬ್ರಿಟಿಷರು ಯಾಂದಬೂ ಒಪ್ಪಂದದ ಮೂಲಕ ಅಸ್ಸಾಂನ್ನು ಚಹಾ ಎಸ್ಟೇಟ್ ಆಗಿ ಪರಿವರ್ತಿಸಿಕೊಳ್ಳುವ ಸಲುವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.

1802: ವಿಕ್ಟರ್ ಹ್ಯೂಗೊ ಹುಟ್ಟಿದ ದಿನ. ಕವಿ, ಕಾದಂಬರಿಕಾರ, ನಾಟಕಕಾರನಾದ ಈತ ಫ್ರೆಂಚ್ ರೊಮ್ಯಾಂಟಿಕ್ ಸಾಹಿತಿಗಳ ಪೈಕಿ ಅತ್ಯಂತ ಖ್ಯಾತಿ ಪಡೆದ ವ್ಯಕ್ತಿ.

No comments:

Advertisement