My Blog List

Tuesday, May 4, 2010

ಮುಂಬೈ ದಾಳಿ: ಕಸಾಬ್ ತಪ್ಪಿತಸ್ಥ

ಮುಂಬೈ ದಾಳಿ: ಕಸಾಬ್ ತಪ್ಪಿತಸ್ಥ

ಮುಂಬೈ ಮೇಲಿನ ಅತಿ ಭೀಕರ ಭಯೋತ್ಪಾದಕ ದಾಳಿ ನಡೆದ 18 ತಿಂಗಳುಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮೇ 2010ರ ಸೋಮವಾರ ತೀರ್ಪು ನೀಡಿದ ವಿಶೇಷ ನ್ಯಾಯಾಧೀಶ ಎಂ.ಎಲ್. ತಹಿಲಿಯಾನಿ ಅವರು ಪಾಕಿಸ್ಥಾನಿ ನಿವಾಸಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಾಬ್ 86 ಆಪಾದನೆಗಳ ಪೈಕಿ 83ರಲ್ಲಿ ತಪ್ಪಿತಸ್ಥ ಎಂದು ಘೋಷಿಸಿದರು.

ಇತರ ಇಬ್ಬರು ಭಾರತೀಯ ಆರೋಪಿಗಳಾದ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರನ್ನು ಸಾಕ್ಷ್ಯಧಾರಗಳ ಕೊರತೆಯ ಕಾರಣ ನ್ಯಾಯಾಧೀಶರು ದೋಷಮುಕ್ತಿ ಗೊಳಿಸಿ ಬಿಡುಗಡೆ ಮಾಡಿದರು.

2008ರ ಮುಂಬೈ ದಾಳಿ ಸಂದರ್ಭದಲ್ಲಿ ಜೀವಂತ ಸೆರೆ ಸಿಕ್ಕ ಏಕೈಕ ಭಯೋತ್ಪಾದಕ ಕಸಾಬ್ ಮೇಲಿನ ಭಾರತದ ಮೇಲೆ ಯುದ್ಧ ಸಾರಿದ ಆರೋಪ ಹಾಗೂ ಕೊಲೆ ಆರೋಪಗಳು ಸೇರಿದಂತೆ 83 ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಹೇಳಿತು.

ಮುಂಬೈ ದಾಳಿ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ನಗರದಲ್ಲಿ ಹಾಗೂ ನ್ಯಾಯಾಲಯದ ಸುತ್ತ ಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ದೇಶವನ್ನೇ ನಡುಗಿಸಿ, 160 ಮಂದಿಯ ಸಾವಿಗೆ ಕಾರಣವಾದ 26/11 ಮುಂಬೈ ದಾಳಿ ಪ್ರಕರಣದಲ್ಲಿ ಮೊಹಮ್ಮದ್ ಅಜ್ಮಲ್ ಅಮೀರ್ ಕಸಾಬ್ ತಪ್ಪಿತಸ್ಥ ಎಂಬುದಾಗಿ ವಿಶೇಷ ನ್ಯಾಯಾಲಯ ಘೋಷಿಸಿರುವ ಹಿನ್ನೆಲೆಯಲ್ಲಿ ಆತನಿಗೆ ಮರಣದಂಡನೆ ಆಗುವ ಸಂಭವವಿದೆ.
ಕಸಾಬ್ ಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು 4 ಮೇ 2010ರಂದು ಪ್ರಾಸೆಕ್ಯೂಷನ್ ಅಹವಾಲುಗಳನ್ನು ಆಲಿಸುವರು. ಬಳಿಕ ಶಿಕ್ಷೆ ಯಾವುದೆಂದು ಘೋಷಿಸುವರು.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಭಾರತದ ಫಾಹೀಮ್ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಅವರ ಮೇಲೆ ಭಯೋತ್ಪಾದನೆ ಗುರಿಯ ನಕ್ಷೆಗಳನ್ನು ತಯಾರಿಸುವಲ್ಲಿ ಲಷ್ಕರ್-ಇ- ತೋಯಿಬಾ ಸಂಘಟನೆಗೆ ನೆರವು ನೀಡಿದರೆಂಬ ಆರೋಪಗಳಿದ್ದವು. ಸಾಕ್ಷ್ಯಾಭಾವದ ಕಾರಣ ಇವು ಸಾಬೀತಾಗಿಲ್ಲ ಎಂದು ಹೇಳಿದ ನ್ಯಾಯಾಧೀಶರು ಇಬ್ಬರನ್ನೂ ದೋಷಮುಕ್ತಿ ಗೊಳಿಸಿದರು. ಇವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಸೆಕ್ಯೂಷನ್ ಹಾಜರು ಪಡಿಸಿದ ಸಾಕ್ಷ್ಯಾಧಾರಗಳು ನಂಬಲರ್ಹವಲ್ಲ ಎಂದು ನ್ಯಾಯಾಲಯ ಹೇಳಿತು.

ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೋಯಿಬಾದ ಸ್ಥಾಪಕ ಹಫೀಜ್ ಸಯೀದ್, ಕಾರ್ಯಾಚರಣೆ ಮುಖ್ಯಸ್ಥ ಝಾಕಿ-ಉರ್- ರೆಹಮಾನ್ ಲಖ್ವಿ ಮತ್ತು ಅಬು ಹಮ್ಜಾ ಸೇರಿದಂತೆ 20 ಮಂದಿ ಆರೋಪಿಗಳು 26/11 ದಾಳಿ ಪ್ರಕರಣದಲ್ಲಿ ಷಾಮೀಲಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ತನ್ನ ಸಹಚರ ಅಬು ಇಸ್ಮಾಯಿಲ್ ಜೊತೆಗೆ ಛತ್ರಪತಿ ಶಿವಾಜಿ ಟರ್ಮಿನಸ್, ಕೇಮಾ ಆಸ್ಪತ್ರೆ ಮತ್ತು ಮೆಟ್ರೋ ಜಂಕ್ಷನ್ ಒಳಗೆ ಹಾಗೂ ಹೊರಗೆ ಹಲವರನ್ನು ಕೊಂದು ಹಾಕಿದ್ದ 22 ವರ್ಷದ ಕಸಾಬನನ್ನು ಗಿರ್ಗಾಂವ್ ಚೌಪಾಟಿ ಪೊಲೀಸ್ ಬ್ಯಾರಿಕೇಡ್ ಬಳಿ ಬಂಧಿಸಲಾಗಿತ್ತು.

ತೀರ್ಪು ನೀಡಿದ ನ್ಯಾಯಾಧೀಶ ತಹಿಲಿಯಾನಿ ಅವರು ಕಸಾಬ್ ನನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾರತದ ವಿರುದ್ಧ ಸಮರ ಸಾರಿದ ನಿನ್ನ ವಿರುದ್ಧದ ಆಪಾದನೆ ಸತ್ಯ ಎಂದು ಸಾಬೀತಾಗಿದೆ ಎಂದು ಹೇಳಿದರು.

ಸಿಎಸ್ಟಿ ಮತ್ತು ಕಾಮಾ ಆಸ್ಪತ್ರೆಯಲ್ಲಿ ಮುಗ್ಧರ ಹತ್ಯೆ ಗೈದುದಕ್ಕೆ ವೈಯಕ್ತಿಕವಾಗಿ ಹೊಣೆಗಾರನಾಗಿರುವುದರ ಜೊತೆಗೆ ಸಹಚರರಿಂದ ದಾಳಿ ನಡೆದ ಇತರ ಸ್ಥಳಗಳಲ್ಲಿ ಸಾಮೂಹಿಕ ಕೊಲೆಗೆ ನೆರವು, ಬೆಂಬಲ ನೀಡಿದ ಆರೋಪವೂ ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದರು.

ಎಲ್ಲ 10 ಭಯೋತ್ಪಾದಕರ ಜೊತೆಗೆ ಖೋಟಾ ಗುರುತು ಪತ್ರಗಳಿದ್ದವು. ಕಸಾಬ್ ಕೂಡಾ ದಾಖಲೆಯನ್ನು ಫೋರ್ಜರಿ ಮಾಡಿದ್ದು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತಾಗಿದೆ ಎಂದೂ ನ್ಯಾಯಾಧೀಶರು ನುಡಿದರು.

ಕಸಾಬ್- ಘಟನಾವಳಿ
2008:
ನ. 26: ಅಜ್ಮಲ್ ಕಸಾಬ್ ಹಾಗೂ ಇತರ 9 ಆರೋಪಿಗಳಿಂದ ಮುಂಬೈ ನಗರದ ಹಲವೆಡೆ ಕಮಾಂಡೊ ಮಾದರಿ ದಾಳಿ.
ನ.26: ನಸುಕಿನ 1.30 ಗಂಟೆ ಸುಮಾರಿಗೆ ದಕ್ಷಿಣ ಮುಂಬೈಯ ಗಿರ್‌ಗಾಂವ್‌ನ ಚೌಪಾಟಿ ಪ್ರದೇಶದಲ್ಲಿ ಕಸಾಬ್ ಬಂಧನ, ನಾಯರ್ ಆಸ್ಪತ್ರೆಗೆ ದಾಖಲು.

2009
ಜ.13: ಮಹಾರಾಷ್ಟ್ರ ಸರ್ಕಾರದಿಂದ ಮುಂಬೈ ದಾಳಿ ಪ್ರಕರಣದ ಆರೋಪಿಗಳ ವಿಚಾರಣೆಗಾಗಿ ನ್ಯಾಯಾಧೀಶ ಎಂ ಎಲ್ ತಹಲಿಯಾನಿ ನೇಮಕ.
ಫೆ.05: ಹಡಗು ಕುಬೇರದಲ್ಲಿ ಪತ್ತೆಯಾದ ಸಾಮಗ್ರಿಗಳಲ್ಲಿದ್ದ ರಕ್ತದೊಂದಿಗೆ ಸರಿಹೊಂದಿದ ಅಜ್ಮಲ್ ಕಸಾಬ್‌ನ ರಕ್ತ,
ಡಿಎನ್‌ಎ.
ಫೆ.20,21: ಮ್ಯಾಜಿಸ್ಟ್ರೇಟ್ ಆರ್.ವಿ. ಸಾವಂತ್ -ವಾಗ್ಲೆ ಮುಂದೆ ಕಸಾಬ್ ತಪ್ಪೊಪ್ಪಿಗೆ.
ಫೆ. 22: ಕಸಾಬ್ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ, ಉಜ್ವಲ್ ನಿಕಂ ನೇಮಕ.
ಫೆ. 25: ತನಿಖಾ ತಂಡದಿಂದ ಎಸ್ಪಲನೇಡ್ ಮೆಟ್ರೊಪಾಲಿಟನ್ ನ್ಯಾಯಾಲಯದಲ್ಲಿ ಕಸಾಬ್ ಹಾಗೂ ಇತರ ಇಬ್ಬರ
ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ.
ಏ. 01: ಕಸಾಬ್ ಪರ ವಕೀಲರಾಗಿ ಅಂಜಲಿ ವಾಗ್ಮೋರೆ ನೇಮಕ.
ಏ.15: ಅಂಜಲಿ ವಾಗ್ಮೋರೆ ಅವರ ತೆರವು.
ಏ.16: ಕಸಾಬ್ ಪರ ಹೊಸ ವಕೀಲರಾಗಿ ಎಸ್.ಜಿ. ಅಬ್ಬಾಸ್ ಕಜ್ಮಿ ನೇಮಕ.
ಏ. 20: ಕಸಾಬ್ ವಿರುದ್ಧ 312 ಪ್ರಕರಣಗಳನ್ನು ದಾಖಲಿಸಿದ ಪ್ರಾಸೆಕ್ಯೂಷನ್ .
ಮೇ.06: ಕಸಾಬ್ ವಿರುದ್ಧ 86 ಪ್ರಕರಣಗಳಲ್ಲಿ ಸಾಕ್ಷ್ಯಾಧಾರ ಸಲ್ಲಿಕೆ. ಆತನ ನಿರಾಕರಣೆ.
ಮೇ.08: ಕಸಾಬ್‌ನನ್ನು ಗುರುತಿಸಿದ ಪ್ರಥಮ ಪ್ರತ್ಯಕ್ಷದರ್ಶಿ ಸಾಕ್ಷಿ.
ಜೂ.23: ಕುಖ್ಯಾತ ಹಫೀಜ್ ಸಯೀದ್, ಜಕಿ ಉರ್ ರೆಹಮಾನ್ ಲಖ್ವಿ ಸಹಿತ 22 ಮಂದಿ ದುಷ್ಕರ್ಮಿಗಳ ವಿರುದ್ಧ
ಜಾಮೀನು ರಹಿತ ವಾರೆಂಟ್.
ಜು. 20: ನ್ಯಾಯಾಧೀಶ ತಹಲಿಯಾನಿ ಮುಂದೆ ಕಸಾಬ್ ಆರೋಪ ಒಪ್ಪಿಗೆ.
ನ. 30: ಕಸಾಬ್ ಪರ ವಕೀಲರಾಗಿದ್ದ ಅಬ್ಬಾಸ್ ಕಜ್ಮಿ ತೆರವು.
ಡಿ. 16: ವಾದ ಪೂರ್ಣಗೊಳಿಸಿದ ಪ್ರಾಸಿಕ್ಯೂಷನ್.

2010:
ಫೆ. 22: ನ್ಯಾಯಾಲಯ ತಲುಪಿದ ಡೇವಿಡ್ ಕೋಲ್ಮನ್ ಹೆಡ್ಲಿ ಪ್ರಕರಣ .
ಮಾ.31: ಕಸಾಬ್ ಪ್ರಕರಣದ ವಾದ- ಪ್ರತಿವಾದ ಅಂತ್ಯ.
ಏ. 06: ಗೃಹ ಸಚಿವ ಆರ್.ಆರ್. ಪಾಟೀಲ್ ಹೇಳಿಕೆ- ಹದಿನೈದು ತಿಂಗಳ ಕಾಲ ಶವಾಗಾರದಲ್ಲಿ ಇರಿಸಿದ್ದ 9 ಉಗ್ರರ
ಶವಗಳ ರಹಸ್ಯ ಅಂತ್ಯಕ್ರಿಯೆ.
ಮೇ.03: ವಿಶೇಷ ನ್ಯಾಯಾಧೀಶ ಎಂ. ಎಲ್ ತಹಲಿಯಾನಿ ಅವರಿಂದ ತೀರ್ಪು ಪ್ರಕಟ. ಕಸಾಬ್ ದೋಷಿ ಎಂಬುದಾಗಿ ಸಾಬೀತು. ಇತರ ಇಬ್ಬರು ಆರೋಪಿಗಳಾದ ಫಾಹೀಮ್ ಅನ್ಸಾರಿ, ಸಬಾಹುದ್ದೀನ್ ಅಹ್ಮದ್ ಖುಲಾಸೆ.

No comments:

Advertisement