ಗ್ರಾಹಕರ ಸುಖ-ದುಃಖ

My Blog List

Saturday, May 29, 2010

ಇಂದಿನ ಇತಿಹಾಸ History Today ಮೇ 29

ಇಂದಿನ ಇತಿಹಾಸ

ಮೇ 29

ಅಮೆರಿಕದ ವಾಷಿಂಗ್ಟನ್ನಿನಲ್ಲಿ ನಡೆದ ಸ್ಮರಣ ಶಕ್ತಿಗೆ ಸವಾಲೆಸೆಯುವ ರಾಷ್ಟ್ರೀಯ 'ಸ್ಪೆಲ್ಲಿಂಗ್ ಬೀ' (ಕಾಗುಣಿತ) ಸ್ಪರ್ಧೆಯಲ್ಲಿ ಕ್ಯಾನ್ಸಾಸ್‌ನ ಒಲಥೆ ನಿವಾಸಿ ಭಾರತೀಯ ಮೂಲದ 13 ವರ್ಷದ ಕಾವ್ಯಾ ಶಿವಶಂಕರ್ ಪಾರಿತೋಷಕ ಪಡೆದುಕೊಂಡರು. ಕಳೆದ ಮೂರು ವರ್ಷಗಳಲ್ಲೂ ಕಾವ್ಯ ಈ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದರು.

2009: ಅಮೆರಿಕದ ವಾಷಿಂಗ್ಟನ್ನಿನಲ್ಲಿ ನಡೆದ ಸ್ಮರಣ ಶಕ್ತಿಗೆ ಸವಾಲೆಸೆಯುವ ರಾಷ್ಟ್ರೀಯ 'ಸ್ಪೆಲ್ಲಿಂಗ್ ಬೀ' (ಕಾಗುಣಿತ) ಸ್ಪರ್ಧೆಯಲ್ಲಿ ಕ್ಯಾನ್ಸಾಸ್‌ನ ಒಲಥೆ ನಿವಾಸಿ ಭಾರತೀಯ ಮೂಲದ 13 ವರ್ಷದ ಕಾವ್ಯಾ ಶಿವಶಂಕರ್ ಪಾರಿತೋಷಕ ಪಡೆದುಕೊಂಡರು. ಕಳೆದ ಮೂರು ವರ್ಷಗಳಲ್ಲೂ ಕಾವ್ಯ ಈ ಸ್ಪರ್ಧೆಯ ಅಂತಿಮ ಹಂತ ತಲುಪಿದ್ದರು. 2006ರಲ್ಲಿ 10ನೆಯವರಾಗಿ, 2007ರಲ್ಲಿ 8ನೆಯವರಾಗಿ ಹಾಗೂ 2008ರಲ್ಲಿ 4ನೆಯವರಾಗಿ ಆಯ್ಕೆಯಾಗಿದ್ದರು.

2009: ಸರಾಸರಿ ಭಾರತೀಯರ ಮಾಸಿಕ ಆದಾಯ ರಾಷ್ಟ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೂ 3000 ದಾಟಿದೆ ಎಂದು ಕೇಂದ್ರೀಯ ಅಂಕಿಅಂಶಗಳ ಸಂಸ್ಥೆ (ಸಿಎಸ್‌ಓ) ಈದಿನ ಬಿಡುಗಡೆ ಮಾಡಿದ ರಾಷ್ಟ್ರೀಯ ವರಮಾನದ ಮುಂಗಡ ಅಂದಾಜು ವರದಿ ಹೇಳಿತು. ಆರ್ಥಿಕ ಸುಧಾರಣೆಗಳು ಹಾಗೂ 2005-06ರಿಂದ ಮೂರು ವರ್ಷಗಳವರೆಗೆ ಶೇ.9ಕ್ಕಿಂತ ಹೆಚ್ಚಿನ ಮಟ್ಟದ ವೃದ್ಧಿ ದರ ಇದಕ್ಕೆ ಕಾರಣ. ನಾಗರಿಕರ ಸರಾಸರಿ ಆದಾಯದ ಅಳತೆಗೋಲಾಗಿರುವ ತಲಾ ಆದಾಯ (ಪರ್ ಕ್ಯಾಪಿಟಾ) ಶೇ.12.2ರಷ್ಟು ಹೆಚ್ಚಾಗಿ 2008-09ರಲ್ಲಿ ವಾರ್ಷಿಕ ರೂ 37,490ಕ್ಕೆ ಏರಿದೆ ಎಂದು ವರದಿ ಹೇಳಿತು.

2009: ಭಾರತದ ಅಗ್ರಗಣ್ಯ ಬಯೊಟೆಕ್ನಾಲಜಿ ಕಂಪೆನಿ ಬಯೋಕಾನ್, ಬೆಂಗಳೂರಿನಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ನೂತನ ಬೇಸಲ್ ಇನ್ಸುಲಿನ್ 'ಬೇಸಲಾಗ್' ಬಿಡುಗಡೆ ಮಾಡಿತು. ಟೈಪ್ 1 ಮತ್ತು ಟೈಪ್ 2 ಮಧುಮೇಹಗಳೆರಡಕ್ಕೂ ಈ ಇನ್ಸುಲಿನ್ ಗಾಜಿರ್ಲ್ನ್ (ಮಾನವ ಇನ್ಸುಲಿನ್) ಸೂಕ್ತವೆನಿಸಿದ್ದು ದಿನವಿಡೀ ಒಂದೇ ರೀತಿಯಾಗಿ ಕಾರ್ಯ ನಿರ್ವಹಿಸುವ ಕಾರಣ ಆರೋಗ್ಯ ಸಮಸ್ಯೆಗಳಿರುವುದಿಲ್ಲ ಎಂದು ಇನ್ಸುಲಿನ್ ಬಿಡುಗಡೆ ಮಾಡಿ ಮಾತನಾಡಿದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹೇಳಿದರು. ಮಧುಮೇಹ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಧುಮೇಹಿಗಳ ಜೀವನದಲ್ಲೊಂದು ಮುಖ್ಯ ತಿರುವು ನೀಡಲಿರುವ ಈ ಔಷಧಿಯಿಂದ ತೂಕ ಗಳಿಕೆಯೂ ಕಡಿಮೆ ಎಂದು ಅವರು ಬಣ್ಣಿಸಿದರು.

2009: ಕಿರಿಯ ಮಗನನ್ನು ತನ್ನ 'ರಾಜಕೀಯ ಉತ್ತರಾಧಿಕಾರಿ'ಯನ್ನಾಗಿಸುವ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಬಹುಕಾಲದ ಕನಸು ನನಸಾಯಿತು. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಂ.ಕೆ. ಸ್ಟಾಲಿನ್ ಅವರನ್ನು ಈದಿನ ಉಪಮುಖ್ಯಮಂತ್ರಿ ಎಂದು ಘೋಷಿಸಲಾಯಿತು. ಕರುಣಾನಿಧಿ ಅವರ ಪುತ್ರರಾದ ಅಳಗಿರಿ ಮತ್ತು ಸ್ಟಾಲಿನ್‌ರಲ್ಲಿ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಜನರ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿತು. ಕಾಕತಾಳೀಯ ಎಂಬಂತೆ ಹಿರಿಯ ಪುತ್ರ ಕೇಂದ್ರದ ಸಚಿವನಾದ ಮರುದಿನವೇ ಕಿರಿಯ ಮಗನನ್ನು ಉಪ ಮುಖ್ಯಮಂತ್ರಿ ಎಂದು ಘೋಷಿಸಲಾಯಿತು.

2009: ಮುಂಬೈ ಮೇಲಿನ ದಾಳಿ ಸಂದರ್ಭ ಹತ್ಯೆಯಾದ ಉಗ್ರ ಅಬು ಇಸ್ಮಾಯಿಲ್ ಜೇಬಿನಿಂದ ಪೊಲೀಸರು ವಶಪಡಿಸಿಕೊಂಡ ನಕಾಶೆಯನ್ನು (ದಾಳಿಗೆ ಗುರಿಯಿಟ್ಟ ಸ್ಥಳಗಳ ವಿವರ) ಸಾಕ್ಷಿಯೊಬ್ಬರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು. ಎಲ್‌ಇಟಿ ಉಗ್ರಗಾಮಿ ಸಂಘಟನೆಯ ಸಂಚುಕೋರರಿಗೆ ನಕಾಶೆ ಹಸ್ತಾಂತರಿಸಿದ ಆರೋಪ ಹೊತ್ತ ಸಬಾವುದ್ದೀನ್ ಅಹ್ಮದ್ ಮತ್ತು ದಾಳಿ ನಡೆಸುವಾಗ ಬದುಕುಳಿದ ಏಕೈಕ ಬಂಧಿತ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಾಬ್ ಜೊತೆ ವಿಚಾರಣೆ ಎದುರಿಸಿದ ಫಾಹೀಮ್ ಅನ್ಸಾರಿ ಈ ನಕಾಶೆ ಸಿದ್ಧಪಡಿಸಿದ್ದಾಗಿ ಪ್ರಾಸಿಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತು.

2009: ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಟಾಟಾ ಕಂಪನಿಯ ಚುನಾವಣಾ ವಿಭಾಗವು ದೇಣಿಗೆ ನೀಡಿದ ರೂ.27.65 ಲಕ್ಷ ಮೊತ್ತದ ಚೆಕ್ ಅನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ವಾಪಸ್ ಕಳುಹಿಸಿದರು. ನಾವು ವಿನಯಪೂರ್ವಕವಾಗಿ ಚೆಕ್ ಅನ್ನು ವಾಪಸ್ ನೀಡಿದ್ದೇವೆ. ಕಾರಣ ಏನು ಎಂದು ವಿವರಿಸುವ ಪತ್ರವನ್ನೂ ವಿನಯಪೂರ್ವಕವಾಗಿ ರವಾನಿಸಿದ್ದೇವೆ. ಎಂದು ಮಮತಾ ಬ್ಯಾನರ್ಜಿ ಹೇಳಿದರು. 'ನಾವು ಕಾರ್ಪೊರೇಟ್ ಕಂಪನಿಗಳಲ್ಲಿ ಯಾವುದೇ ಋಣ ಇರಿಸಿಕೊಳ್ಳುವುದಿಲ್ಲ, ನಾವು ಏನಿದ್ದರೂ ಸಾಮಾನ್ಯ ಜನರು, ರೈತರು, ದುಡಿಯುವ ವರ್ಗದವರ ಋಣದಲ್ಲಿದ್ದೇವೆ' ಎಂದು ಪಕ್ಷದ ಸಚಿವ ಶಿಶಿರ್ ಅಧಿಕಾರಿ ತಿಳಿಸಿದರು.

2009: ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಹೊರ ತರಲಾದ 'ಕರ್ನಾಟಕದ ಕಾನೂನುಗಳು' ಕುರಿತ ಸಿ.ಡಿ.ಯನ್ನು ಕಾನೂನು ಸಚಿವ ಎಸ್.ಸುರೇಶ ಕುಮಾರ್‌ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಇಲಾಖೆ ಹೊರ ತಂದಿರುವ ಸಿ.ಡಿ.ಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ 1956ರ ನವೆಂಬರ್ ಒಂದರಿಂದ ರಚಿತವಾದ ಎಲ್ಲ ಕಾನೂನುಗಳ ಬಗ್ಗೆ ಸಮಗ್ರವಾದ ಮಾಹಿತಿ ಲಭ್ಯವಿದೆ.

2009: ಭಾರತದ ಅತ್ಯಂತ ಜನಪ್ರಿಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕೊನೆಗೂ ತಮ್ಮ ಸೂಕ್ತ 'ಜೊತೆಗಾರ'ನನ್ನು ಕಂಡುಕೊಂಡರು. ಆದರೆ ಇದು ಮಿಶ್ರ ಡಬಲ್ಸ್ ಪಂದ್ಯದ ಜೊತೆಗಾರ ಅಲ್ಲ. ಬದಲಾಗಿ ಬಾಳಸಂಗಾತಿ. ತಮ್ಮ ಬಾಲ್ಯ ಕಾಲದ ಗೆಳೆಯ ಮೊಹಮ್ಮದ್ ಸೊಹ್ರಾಬ್ ಮಿರ್ಜಾ ಜೊತೆ ಸಾನಿಯಾ ನಿಶ್ಚಿತಾರ್ಥ ನಡೆದಿದೆ ಎಂದು ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ ಖಚಿತ ಪಡಿಸಿದರು.

2009: ಹಾಲಿವುಡ್ ಸೂಪರ್‌ಸ್ಟಾರ್ ಏಂಜಲೀನಾ ಜೋಲಿ ವಿಶ್ವದ ಅತಿ ಸುಂದರ ಮಹಿಳೆಯರಲ್ಲಿ ಒಬ್ಬರು ಎಂಬ ಖ್ಯಾತಿ ಗಳಿಸಿಕೊಂಡರು. ಆದರೆ, ಅಚ್ಚ ಕನ್ನಡತಿ ಸುಂದರಿ ದೀಪಿಕಾ ಪಡುಕೋಣೆ ಸೌಂದರ್ಯದಲ್ಲಿ ಏಂಜಲಿನಾ ಜೋಲಿ ಅವರನ್ನು ಹಿಂದಿಕ್ಕಿದರು. ಹಾಲಿವುಡ್‌ನ ಖ್ಯಾತ ನಿರ್ದೇಶಕ ರಾಬ್ ಕೊಹೆನ್, ದೀಪಿಕಾ ಕಣ್ಣು ಕುಕ್ಕುವ ಸೌಂದರ್ಯ ಹೊಂದಿದ್ದು ಏಂಜಲಿನಾಗಿಂತ ಸುಂದರಿ ಎಂದು ಹೇಳಿರುವುದಾಗಿ ಲಂಡನ್ ಪತ್ರಿಕೆಯೊಂದು ವರದಿ ಮಾಡಿತು.

2008: ಹಾಸನ ಜಿಲ್ಲೆ ಅರಕಲಗೂಡಿನ ಅಗ್ರಹಾರ ಕೆರೆ ಏರಿಯಿಂದ ಕೆರೆಗೆ ಲಾರಿ ಮಗುಚಿಬಿದ್ದ ಕಾರಣ ಮಹಿಳೆಯರು, ಮಕ್ಕಳು ಸೇರಿದಂತೆ 25 ಜನ ಮೃತರಾಗಿ ಇತರ 46ಕ್ಕೂ ಹೆಚ್ಚು ಜನ ಗಾಯಗೊಂಡರು. ಮದುವೆ ಸಮಾರಂಭದ ಬೀಗರ ಊಟಕ್ಕೆ ಪಯಣಿಸುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಕಂದಕಕ್ಕೆ ಮಗುಚಿತು.

2008: ರಾಜ್ಯಪಾಲರ ಶಿಫಾರಸಿನ ಆಧಾರದಲ್ಲಿ ಹಿಂದಿನ ದಿನ ಕೇಂದ್ರ ಸಚಿವ ಸಂಪುಟ ರಾಜ್ಯದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂದಕ್ಕೆ ಪಡೆಯುವ ನಿಧರ್ಾರ ಕೈಗೊಂಡಿತ್ತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಂಪುಟ ನಿರ್ಧಾರಕ್ಕೆ ಈದಿನ ಅಂಕಿತ ಹಾಕಿದರು.

2008: ಕಠ್ಮಂಡುವಿನಲ್ಲಿ ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಅರಮನೆಯ ಮೇಲೆ ಹಾರಾಡುತ್ತಿದ್ದ ರಾಜಮನೆತನದ ಬಾವುಟವನ್ನು ಕೆಳಗಿಳಿಸಿ, ರಾಷ್ಟ್ರೀಯ ಬಾವುಟವನ್ನು ಏರಿಸಲಾಯಿತು. ಇದರೊಂದಿಗೆ ನೇಪಾಳದಲ್ಲಿ ಎರಡೂವರೆ ಶತಮಾನಗಳ ಅರಸೊತ್ತಿಗೆ ಆಳ್ವಿಕೆ ಅಧಿಕೃತವಾಗಿ ಕೊನೆಗೊಂಡಂತಾಯಿತು. ಮಾಜಿ ದೊರೆ ಜ್ಞಾನೇಂದ್ರ ಅವರಿಗೆ ಅರಮನೆ ಬಿಡುವಂತೆ ರಾಜಕೀಯ ಪಕ್ಷಗಳು 15 ದಿನ ಗಡುವು ನೀಡಿದವು. ಅಷ್ಟರೊಳಗೆ ಅರಮನೆ ಬಿಡದಿದ್ದಲ್ಲಿ ಬಲವಂತವಾಗಿ ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಗೃಹ ಸಚಿವ ಕೃಷ್ಣಪ್ರಸಾದ್ ಸಿತೌಲ ಎಚ್ಚರಿಕೆ ನೀಡಿದರು. ನೇಪಾಳದ ಅರಸೊತ್ತಿಗೆ ರದ್ದುಪಡಿಸಿ ಹೊಸ ಸರ್ಕಾರವನ್ನು ಸ್ಥಾಪಿಸಲು 560 ಮಂದಿ ಪರವಾಗಿ ಹಾಗೂ ನಾಲ್ಕು ಮಂದಿ ವಿರೋಧವಾಗಿ ಮತ ಚಲಾಯಿಸಿದ್ದರು.

2008: ಬೆಂಗಳೂರಿನ ನಾಗರಬಾವಿ ರಸ್ತೆಯ ವಿಸ್ತರಣಾ ಕಾರ್ಯದಿಂದ ಧರೆಗುರುಳಬೇಕಿದ್ದ ಸುಮಾರು 40 ಮರಗಳಿಗೆ ಮರು ಜೀವ ಬಂದಿತು. ವಸಂತಕಾಲದಲ್ಲಿ ಹೂವುಗಳು ಚಿಗುರಿ ಆಕರ್ಷಕವಾಗಿ ಕಂಗೊಳಿಸುತ್ತಿರುವ ಸುಮಾರು 40 `ತಬಿಬುಯಾ ರೋಸಿಯಾ' ಮರಗಳ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದರೂ ಜೀವ ಕಳೆದುಕೊಳ್ಳಲಿಲ್ಲ. ಹೀಗಾಗಿ ಈ ಮರಗಳನ್ನು ಬುಡಸಮೇತ ಕಿತ್ತು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿನ ಕಾನೂನು ಕಾಲೇಜಿನ ಸುತ್ತಮುತ್ತ ನೆಡುವ ಮೂಲಕ ಮರು ಜೀವ ನೀಡಲಾಯಿತು.

2008: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರಿನ ಟಿ. ಎಲ್. ದೇವರಾಜ್ ಅವರಿಗೆ 2007ರ `ರಾಂ ನಾರಾಯಣ ವೈದ್ಯ ಪ್ರಶಸ್ತಿ' ಪ್ರದಾನ ಮಾಡಿದರು. ಆಯುರ್ವೇದ ಶಿಕ್ಷಣ ಮತ್ತು ಚಿಕಿತ್ಸೆಗೆ ನೀಡಿದ ಗಮನಾರ್ಹ ಕೊಡುಗೆಗಾಗಿ ದೇವರಾಜ್ 2007ರ `ರಾಂ ನಾರಾಯಣ ವೈದ್ಯ ಪ್ರಶಸ್ತಿ' ಪಡೆದುಕೊಂಡರು. ಆಯುರ್ವೇದ ರಂಗದಲ್ಲಿನ ಸಾಧನೆಗಾಗಿ ನೀಡಲಾಗುವ ದೇಶದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಇದು. ಪ್ರಶಸ್ತಿಯು ರೂ 1.5 ಲಕ್ಷ ನಗದು ಒಳಗೊಂಡಿದೆ.

2007: ಹೊಟ್ಟೆಯ ಭಾಗದಲ್ಲಿ ಅಂಟಿಕೊಂಡಿದ್ದ 10 ತಿಂಗಳ ಗಂಡು ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವ ಶಸ್ತ್ರಕ್ರಿಯೆಯನ್ನು ರಾಯಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ ನೆರವೇರಿಸಿದರು. ದೇಶದಲ್ಲಿ ನಡೆದ ಸಯಾಮಿ ಅವಳಿ ಮಕ್ಕಳನ್ನು ಬೇರ್ಪಡಿಸುವ ನಾಲ್ಕನೇ ಶಸ್ತ್ರ ಚಿಕಿತ್ಸೆ ಇದು. ಅವಳಿ ಮಕ್ಕಳಾದ ರಾಮ ಮತ್ತು ಲಕ್ಷ್ಮಣನನ್ನು ಐದು ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಯಶಸ್ವಿಯಾಗಿ ಬೇರ್ಪಡಿಸಲಾಯಿತು.

2007: ಪರಿಶಿಷ್ಟ ವರ್ಗದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಗುರ್ಜರ ಸಮುದಾಯದವರು ರಾಜಸ್ಥಾನದ ದೌಸಾ ಹಾಗೂ ಬಂಡಿ ಜಿಲ್ಲೆಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಪೊಲೀಸರು ಗೋಲಿಬಾರ್ ಮಾಡಿದ ಪರಿಣಾಮವಾಗಿ 14 ಜನ ಗುಂಡಿಗೆ ಬಲಿಯಾದರು.

2007: ಸೌರ ಮಂಡಲ ಮತ್ತು ಭೂಮಿಯ ಅಸ್ತಿತ್ವವು ಊಹೆಗೂ ನಿಲುಕದ ಬ್ರಹ್ಮಾಂಡದಲ್ಲಿ ಅಪರೂಪದ ಸಂಗತಿಯೇನೂ ಅಲ್ಲ, ಅನಂತ ಆಕಾಶದಲ್ಲಿ ವಾಸಕ್ಕೆ ಯೋಗ್ಯವಾದ ಇಂತಹ ಕೋಟ್ಯಂತರ ಗ್ರಹಗಳು ಇರುವ ಸಾಧ್ಯತೆಗಳು ಹೆಚ್ಚು ಇವೆಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟರು. ಹೊನೊಲುಲುವಿನಲ್ಲಿ ನಡೆದ ಅಮೆರಿಕದ ಖಗೋಳ ವಿಜ್ಞಾನಿಗಳ ಸಮಾವೇಶದಲ್ಲಿ ಸಂಶೋಧಕರು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಖಗೋಳ ವಿಜ್ಞಾನಿಗಳು ಕಳೆದ ವರ್ಷ ಒಟ್ಟು 28 ಹೊಸ ಗ್ರಹಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸೌರವ್ಯೂಹದ ಆಚೆಗೆ ಈವರೆಗೆ 236 ಗ್ರಹಗಳನ್ನು ಗುರುತಿಸಲಾಗಿದೆ ಎಂಬುದು ಅವರ ಅಭಿಪ್ರಾಯ.

2007: ಮೆಕ್ಸಿಕೊದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಜಪಾನಿನ ನೃತ್ಯ ಕಲಾವಿದೆ ರಿಯೋ ಮೋರಿ 2007ನೇ ಸಾಲಿನ ಭುವನಸುಂದರಿಯಾಗಿ ಆಯ್ಕೆಯಾದರು. `ಭಾರತ ಸುಂದರಿ' ಪೂಜಾ ಗುಪ್ತ ಕೊನೆಯ ಐವರು ಸ್ಪರ್ಧಿಗಳಲ್ಲಿ ಸೇರ್ಪಡೆ ಆಗುವ ಅವಕಾಶದಿಂದಲೂ ವಂಚಿತರಾದರು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕಿಂತ ಸ್ವಲ್ಪ ಮುಂಚೆ ತಲೆ ತಪ್ಪಿಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್ ಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಆರ್ ಡಿ ಎಕ್ಸ್ ಸಾಗಣೆಯಲ್ಲಿ ನೆರವಾದ ಅಪರಾಧಕ್ಕಾಗಿ ಕಸ್ಟಮ್ಸ್ ಇಲಾಖೆಯ ನಾಲ್ಕು ಮಂದಿ ಮಾಜಿ ಅಧಿಕಾರಿಗಳಿಗೆ ನಿಯೋಜಿತ ಟಾಡಾ ನ್ಯಾಯಾಲಯವು 7ರಿಂದ 9 ವರ್ಷಗಳವರೆಗಿನ ಕಠಿಣ ಸೆರೆವಾಸದ ಶಿಕ್ಷೆ ವಿಧಿಸಿತು.

2007: ಬಡಗುತಿಟ್ಟು ಯಕ್ಷಗಾನದ ಖ್ಯಾತ ಮದ್ದಳೆ ವಾದಕ, ಮಾಂತ್ರಿಕ ದುರ್ಗಪ್ಪ ಗುಡಿಗಾರ (65) ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಭಟ್ಕಳದ ಚೌತನಿಯವರಾದ ದುರ್ಗಪ್ಪ ಗುಡಿಗಾರ ತಮ್ಮ ಕಲಾ ಸೇವೆಗಾಗಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕರ್ನಾಟಕ ಶ್ರೀ, ಮುದೂರು ದೇವರು ಹೆಗ್ಗಡೆ ಪ್ರತಿಷ್ಠಾನ, ಮಸ್ಕತ್ ರಂಗಭೂಮಿ ಪ್ರಶಸ್ತಿ, ಜನಪದ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿ, ಸನ್ಮಾನಕ್ಕೆ ಪಾತ್ರರಾಗಿದ್ದರು.

2006: ಕಾವೇರಿ ನ್ಯಾಯಮಂಡಳಿಯ ನ್ಯಾಯದರ್ಶಿಗಳ ವರದಿಯನ್ನು ತಿರಸ್ಕರಿಸಿ 408 ಟಿಎಂಸಿ ನೀರಿಗೆ ಬೇಡಿಕೆ ಸಲ್ಲಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಕರ್ನಾಟಕಕ್ಕೆ 251 ಟಿಂಎಸಿ ನೀರು ನಿಗದಿ ಪಡಿಸಿ ನ್ಯಾಯದರ್ಶಿಗಳು ತಯಾರಿಸಿದ ವರದಿ ನ್ಯಾಯೋಚಿತವಲ್ಲ, ಅದನ್ನು ಒಪ್ಪಲಾಗದು ಎಂದು ಸಭೆ ಸ್ಪಷ್ಟ ಪಡಿಸಿತು.

2006: ಸೇನಾ ತರಬೇತಿಯನ್ನು ಸಾಂಸ್ಥೀಕರಣಗೊಳಿಸುವ ಪ್ರಪ್ರಥಮ ಚಾರಿತ್ರಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸೋಮವಾರ ಬೀಜಿಂಗಿನಲ್ಲಿ ಸಹಿ ಹಾಕಿದವು. ಈ ಒಪ್ಪಂದವು ಜಂಟಿ ಸೇನಾ ಕವಾಯತು ಹಾಗೂ ವಿಚಾರ ವಿನಿಮಯಗಳಿಗೆ ಅವಕಾಶ ಕಲ್ಪಿಸಲಿದೆ. ಚೀನಾಕ್ಕೆ ಭೇಟಿ ನೀಡಿದ ಭಾರತದ ರಕ್ಷಣಾ ಸಚಿವ ಪ್ರಣವ್ ಮುಖರ್ಜಿ ಮತ್ತು ಚೀನಿ ರಕ್ಷಣಾ ಸಚಿವ ಜನರಲ್ ಕಾವೊ ಗಾಂಗ್ ಚುವಾನ್ ಅವರು ಇಲ್ಲಿ ಕೇಂದ್ರೀಯ ಸೇನಾ ಕಮೀಷನ್ ಮುಖ್ಯ ಕಚೇರಿಯಲ್ಲಿ 2 ಗಂಟೆಗಳ ಕಾಲ ನಡೆದ ಮಾತುಕತೆ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಿದರು.

2006: ದಕ್ಷಿಣ ಬಾಂಗ್ಲಾದೇಶದಲ್ಲಿ ಕಳೆದ ವರ್ಷ ಬಾಂಬ್ ದಾಳಿ ನಡೆಸಿ ಇಬ್ಬರು ನ್ಯಾಯಾಧೀಶರನ್ನು ಕೊಲೆಗೈದ ಪ್ರಕರಣದಲ್ಲಿ ವಹಿಸಿದ ಪಾತ್ರಕ್ಕಾಗಿ ನಿಷೇಧಿತ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಜುಮತುಲ್ ಮುಜಾಹಿದೀನ್ ಬಾಂಗ್ಲಾದೇಶ್ ಸಂಘಟನೆಯ ಉನ್ನತ ನಾಯಕರಾದ ಷೇಕ್ ಅಬ್ದುರ್ ರಹಮಾನ್ ಮತ್ತು ಸಿದ್ದುಕಿಲ್ ಇಸ್ಲಾಂ ಸೇರಿದಂತೆ ಏಳು ಮಂದಿ ಇಸ್ಲಾಮಿಕ್ ಉಗ್ರಗಾಮಿಗಳಿಗೆ ಜéಲಕಥಿ ಪಟ್ಟಣದ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿತು. ದಕ್ಷಿಣ ಜéಲಕಥಿ ಪಟ್ಟಣದಲ್ಲಿ ನ್ಯಾಯಾಧೀಶ ರೇಝಾ ತಾರಿಖ್ ಅಹಮದ್ ಅವರು ತೀರ್ಪನ್ನು ಓದಿ ಹೇಳಿದರು. ಈ ಪಟ್ಟಣದಲ್ಲೇ ನವೆಂಬರ್ 14ರಂದು ಇಬ್ಬರು ನ್ಯಾಯಾಧೀಶರನ್ನು ಕೊಲೆಗೈಯಲಾಗಿತ್ತು.

1973: ಕಲಾವಿದೆ ರೂಪ ಸಿ. ಜನನ.

1972: ಖ್ಯಾತ ಚಿತ್ರನಟ ಹಾಗೂ ರಂಗನಟ ಪೃಥ್ವಿರಾಜ್ ಕಪೂರ್ ತಮ್ಮ 65ನೇ ವಯಸ್ಸಿನಲ್ಲಿ ಅಸುನೀಗಿದರು. ಇವರು ಚಿತ್ರನಟರಾದ ರಾಜ್ ಕಪೂರ್, ಶಮ್ಮಿ ಕಪೂರ್ ಮತ್ತು ಶಶಿ ಕಪೂರ್ ಅವರ ತಂದೆ. ರಾಜ್ಯಸಭೆಗೆ ಸದಸ್ಯರಾಗಿ ನಾಮಕರಣಗೊಂಡ ಚಿತ್ರರಂಗದ ಪ್ರಪ್ರಥಮ ವ್ಯಕ್ತಿ ಇವರು. 1972 ರಲ್ಲಿ ಇವರಿಗೆ ಮರಣೋತ್ತರವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.

1968: ಕಲಾವಿದ ದೊಡ್ಡಮನಿ ಎಂ.ಜಿ. ಜನನ.

1953: ನ್ಯೂಜಿಲ್ಯಾಂಡಿನ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ತೇನ್ ಸಿಂಗ್ ನೋರ್ಗೆ ಪ್ರಪ್ರಥಮ ಬಾರಿಗೆ ಜಗತ್ತಿನ ಅತ್ಯುನ್ನತ ಶಿಖರ ಎವರೆಸ್ಟನ್ನು ಏರಿದರು.

1917: ಜಾನ್ ಎಫ್. ಕೆನಡಿ ಜನ್ಮದಿನ(1917-63). ಇವರು 1961-63ರ ಅವಧಿಯಲ್ಲಿ ಅಮೆರಿಕದ 35ನೇ ಅಧ್ಯಕ್ಷರಾಗಿದ್ದರು. ಡಲ್ಲಾಸ್ನಲ್ಲಿ ಮೋಟಾರಿನಲ್ಲಿ ಹೋಗುತ್ತಿದ್ದಾಗ ಇವರನ್ನು ಗುಂಡಿಟ್ಟು ಕೊಲೆಗೈಯಲಾಯಿತು.

1906: ಮೈಸೂರು ಶೈಲಿಯ ಭರತನಾಟ್ಯದ ಪ್ರವರ್ತಕರಲ್ಲಿ ಒಬ್ಬರು ಎಂದೇ ಖ್ಯಾತರಾದ ಡಾ. ಕೆ. ವೆಂಕಟಲಕ್ಷ್ಮಮ್ಮ (19-5-1906ರಿಂದ 3-7-2002) ಅವರು ಕಡೂರಿನ ತಂಗಲಿ ತಾಂಡ್ಯದಲ್ಲಿ ಜನಿಸಿದರು.

1877: ಸಾಹಿತಿ ನವರತ್ನ ರಾಮರಾವ್ (29-5-1877ರಿಂದ 27-11-1960) ಅವರು ನವರತ್ನ ಬಾಲಕೃಷ್ಣರಾಯರ ಪುತ್ರನಾಗಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಈ ದಿನ ಜನಿಸಿದರು. ಇವರ ದಕ್ಷ ಸೇವೆ, ಕನ್ನಡಕ್ಕೆ ನೀಡಿದ ಕೊಡುಗೆಗಾಗಿ ಮೈಸೂರಿನ ಮಹಾರಾಜರು `ರಾಜಸೇವಾಸಕ್ತ' ಬಿರುದು ನೀಡಿದ್ದರು.

1660: ಚಾರ್ಲ್ಸ್ ಸ್ಟುವರ್ಟ್ ತನ್ನ 30ನೇ ಹುಟ್ಟು ಹಬ್ಬದಂದು ಎರಡನೆಯ ಚಾರ್ಲ್ಸ್ ದೊರೆಯಾಗುವ ಸಲುವಾಗಿ ಲಂಡನ್ನಿಗೆ ಮರುಪ್ರವೇಶ ಮಾಡಿದ. 1651ರಲ್ಲಿ ವೋರ್ಸ್ಟರ್ ಯುದ್ಧದ ಬಳಿಕ ಇಂಗ್ಲೆಂಡಿನಿಂದ ಪರಾರಿಯಾಗಿದ್ದ. ಹಾಗೆ ಪರಾರಿಯಾಗುವಾಗ ಬೊಸ್ಕೊಬೆಲ್ನಲ್ಲಿ ಓಕ್ ಗಿಡವೊಂದನ್ನು ಅಡಗಿಸಿ ಇಟ್ಟಿದ್ದನಂತೆ. ಆತ ಮತ್ತೆ ದೊರೆಯಾದ ಸಂಭ್ರಮಕ್ಕಾಗಿ ಆತನಿಗೆ ನಿಷ್ಠರಾಗಿದ್ದ ಪ್ರಜೆಗಳು ಓಕ್ ಎಲೆಗಳನ್ನು ಧರಿಸಿ ಈ ದಿನವನ್ನು `ಓಕ್ ಆಪಲ್ ಡೇ' ಆಗಿ ಆಚರಿಸಿದರು.

No comments:

Advertisement