My Blog List

Friday, October 1, 2010

ಗೋಕರ್ಣದಲ್ಲಿ ‘ಕೋಟಿ ರುದ್ರ', ಬೆಂಗಳೂರಿಗರೂ ಸಿದ್ಧ

ಗೋಕರ್ಣದಲ್ಲಿ ‘ಕೋಟಿ ರುದ್ರ',

ಬೆಂಗಳೂರಿಗರೂ ಸಿದ್ಧ



ರುದ್ರ ಅಂದರೆ ಯಾರು? 'ದಂ ಸಂಸಾರ ದುಃಖಮ್ ದ್ರಾವ ಯತ್ ಇತಿ ರುದ್ರಃ' ಅಂದರೆ 'ಯಾರು ಜಗತ್ತಿನ ದುಃಖಗಳೆಲ್ಲವನ್ನೂ ನಿವಾರಿಸುತ್ತಾನೋ ಆತ ರುದ್ರ' ಎಂದು ಅರ್ಥ. ಮೂರುಕಣ್ಣುಗಳ ಜಟಾಧಾರಿ ಕೈಲಾಸವಾಸಿ ಶಿವನೇ ಈ ರುದ್ರ. ರುದ್ರನ ಬಗೆಗೆ ಇರುವ ಹಲವಾರು ವರ್ಣನೆಗಳಲ್ಲಿ ಇದು ಒಂದು. ಈತ ಲಯಕರ್ತ (ಅಂತ್ಯ ಉಂಟುಮಾಡುವವ) ಕೂಡಾ. 

ಪ್ರಣವ (ಓಂಕಾರ ರೂಪ), ಸತ್ಯ, ಕಲ್ಪದ ಆರಂಭದಲ್ಲಿ ಬ್ರಹ್ಮನಿಗೆ ವೇದ ಕೊಟ್ಟವ, ಶಬ್ದದ ಮೂಲ (ಕಾರಣಕರ್ತ), ಪ್ರಾಣ ಸ್ವರೂಪ, ಬೆಳಕು, ತೇಜಸ್ಸು ಇತ್ಯಾದಿಗಳೆಲ್ಲವೂ ರುದ್ರನ ಸ್ವರೂಪಗಳೇ. ಶಕ್ತಿಯನ್ನು ಸೆಳೆದುಕೊಳ್ಳುವಂತಹ ಸಾಮರ್ಥ್ಯ ಉಳ್ಳವನೂ ರುದ್ರನೇ.

ರುದ್ರನ ಕುರಿತ ಮೊದಲ ಪ್ರಾರ್ಥನೆ ಕಂಡು ಬರುವುದು ಋಗ್ವೇದದಲ್ಲಿ. ಅದನ್ನು ರಚಿಸಿದ್ದು ಕಣ್ವ ಮಹರ್ಷಿಗಳೆಂದು ಪ್ರತೀತಿ. ಪಂಚಾಕ್ಷರಿ ಮಂತ್ರದ ಮೂಲಕವೂ ರುದ್ರನನ್ನು ಆರಾಧಿಸಬಹುದು.

ರುದ್ರನ ಪ್ರಾರ್ಥನೆಗಳಲ್ಲಿ ಅತ್ಯಂತ ಶ್ರೇಷ್ಠ ಪ್ರಾರ್ಥನೆ ಎಂಬ ಹೆಗ್ಗಳಿಕೆ ಶ್ರೀರುದ್ರಮ್ ಎಂಬ ಪ್ರಾರ್ಥನಾ ರೂಪದ ಮಂತ್ರಕ್ಕಿದೆ.

ತೈತ್ತರೀಯ ಸಂಹಿತೆಯ ನಾಲ್ಕು ಮತ್ತು ಏಳನೇ ಅಧ್ಯಾಯಗಳಲ್ಲಿ ಬರುವ ಈ ಪ್ರಾರ್ಥನಾ ಮಂತ್ರ ಕೃಷ್ಣ ಯಜುರ್ವೇದದಲ್ಲಿ ಇದೆ. 'ನಮಃ' ಎಂಬುದಾಗಿ ಕೊನೆಗೊಳ್ಳುವ 'ನಮಕಮ್' ಮತ್ತು 'ಚ ಮೇ' ಎಂಬುದಾಗಿ ಕೊನೆಗೊಳ್ಳುವ 'ಚಮಕಮ್' ಎಂಬ ಎರಡು ಭಾಗಗಳಲ್ಲಿ ಮಾಡುವ 'ರುದ್ರ ಪಠಣ' ಕೇಳಲು ಅತ್ಯಂತ ಸುಶ್ರಾವ್ಯವಾದ ಪ್ರಾರ್ಥನೆ.

'ನಮಕಮ್' ಭಯಭೀತರನ್ನಾಗಿ ಮಾಡುವ ರೌದ್ರರೂಪವನ್ನು ಮರೆತು ಶಾಂತ ಸ್ವರೂಪನಾಗಿ ನಮಗೆ ಒಳ್ಳೆಯದನ್ನು ಮಾಡು ಎಂಬುದಾಗಿ ಪ್ರಾರ್ಥಿಸುವ ಭಾಗವಾಗಿದ್ದರೆ, 'ಚಮಕಮ್' ರುದ್ರನ ಪ್ರಾರ್ಥನೆಯಿಂದ ಆಗುವ ಒಳಿತುಗಳನ್ನು ಪಟ್ಟಿ ಮಾಡುವುದರ ಜೊತೆಗೆ ಸ್ವಯಂ ನಿಯಂತ್ರಿಸಿಕೊಂಡು ಸಿಟ್ಟನ್ನು ಕ್ಷಣಕಾಲ ಮರೆತು ನಮ್ಮನ್ನು ಆಶೀರ್ವದಿಸು ಎಂದು ಬೇಡುತ್ತದೆ.

ಶಿವಪುತ್ರನಾದ ಗಣಪತಿಯಿಂದಲೇ ಪ್ರತಿಷ್ಠಾಪಿತವಾದ ಗೋಕರ್ಣದಲ್ಲಿನ 'ಆತ್ಮಲಿಂಗ'ನಿಗೆ 24-7-2009ರ ಅಕ್ಷಯ ತೃತೀಯಾ ದಿನದಿಂದ 'ರುದ್ರ ಪಾರಾಯಣ' ನಡೆಯುತ್ತಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ  'ರುದ್ರ ಪಾರಾಯಣ' ನಡೆಯುತ್ತಿರುವುದು ಜಗತ್ತಿನಲ್ಲಿ ಇದೇ ಪ್ರಥಮ. ಭಯೋತ್ಪಾದನೆ, ಪ್ರಾಕೃತಿಕ ವಿಕೋಪಗಳಂತಹ ಕಷ್ಟಗಳನ್ನು ಪರಿಹರಿಸಿ ಜಗತ್ ಕಲ್ಯಾಣ ಆಗಬೇಕೆಂಬ ಆಶಯದೊಂದಿಗೆ ಇಲ್ಲಿ 'ಕೋಟಿ ರುದ್ರ' ಸಮರ್ಪಣೆಯ ಮಹಾಸಂಕಲ್ಪವನ್ನು ತೊಟ್ಟಿದ್ದಾರೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ. ಕಳೆದ ಒಂದೂವರೆ ವರ್ಷದಲ್ಲಿ  ಇಲ್ಲಿ 14 ಲಕ್ಷ ರುದ್ರಾರ್ಪಣೆ ಆಗಿದೆ ಎನ್ನುತ್ತಾರೆ ಕೋಟಿ ರುದ್ರ ಮಹಾಸಮಿತಿಯ ಡಾ. ಸೀತಾರಾಮ ಪ್ರಸಾದ.

ಇದೀಗ ಬೆಂಗಳೂರಿನಲ್ಲಿ ಸುಮಾರು 10,000ದಷ್ಟು ಸಂಖ್ಯೆಯಲ್ಲಿ ಇರುವ ರುದ್ರಾಧ್ಯಾಯಿಗಳು, ಅರ್ಚಕರು, ಪುರೋಹಿತರು ದೊಡ್ಡ ಪ್ರಮಾಣದಲ್ಲಿ ಗೋಕರ್ಣಕ್ಕೆ ತೆರಳಿ 'ಕೋಟಿ ರುದ್ರ' ಸಮರ್ಪಣೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ.

ರುದ್ರಾಧ್ಯಾಯಿಗಳಿಗೆ ಮಾಹಿತಿ ಸಭೆ


ಗೋಕರ್ಣಕ್ಕೆ ತೆರಳುವ ಈ ರುದ್ರಾಧ್ಯಾಯಿಗಳಿಗೆ 'ಕೋಟಿ ರುದ್ರ' ಕಾರ್ಯಕ್ರಮ ಹಾಗೂ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವಿವರಿಸಲು ಲಿಂಗರಾಜಪುರ ಸಮೀಪದ ಕಾಚರಕನಹಳ್ಳಿ ಎಚ್.ಬಿ.ಆರ್ ಬಡಾವಣೆಯ ಕೋದಂಡರಾಮ ದೇವಸ್ಥಾನದಲ್ಲಿ ಕೋಟಿ ರುದ್ರ ಮಹಾಸಮಿತಿ 2-10-2010 ಶನಿವಾರ ಮಧ್ಯಾಹ್ನ 2.30ಕ್ಕೆ ಸಭೆ ಕರೆದಿದೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ, ಕೋಟಿ ರುದ್ರ ಮಹಾಸಮಿತಿಯ ಅಧ್ಯಕ್ಷ ಭೀಮೇಶ್ವರ ಜೋಷಿ ಪಾಲ್ಗೊಳ್ಳುವರು. ಮಾಹಿತಿಗೆ: 98450 02455.

-ನೆತ್ರಕೆರೆ ಉದಯಶಂಕರ

No comments:

Advertisement