Sunday, November 10, 2019

ನ.೧೩ರ ಬುಧವಾರ ಸುಪ್ರೀಂನಿಂದ ಅನರ್ಹ ಶಾಸಕರ ತೀರ್ಪು

.೧೩ರ ಬುಧವಾರ ಸುಪ್ರೀಂನಿಂದ ಅನರ್ಹ ಶಾಸಕರ ತೀರ್ಪು
ನವದೆಹಲಿ: ಭಾರೀ ಕುತೂಹಲ ಮೂಡಿಸಿರುವ ಅನರ್ಹ ಶಾಸಕರ ಅರ್ಜಿ ಕುರಿತ ತೀರ್ಪನ್ನು ಸುಪ್ರೀಂಕೋರ್ಟ್  2019 ನವೆಂಬರ್ ೧೩ರ ಬುಧವಾರ ಪ್ರಕಟಿಸಲಿದೆ.

ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠವು ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿದೆ. ಶುಕ್ರವಾರವೇ ತೀರ್ಪು ಪ್ರಕಟವಾಗಬೇಕಿತ್ತು. ಆದರೆ, ಶುಕ್ರವಾರ ಅದು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠದ ಕಲಾಪ ಪಟ್ಟಿಗೆ ಸೇರಿರಲಿಲ್ಲ. ಇದೀಗ ನವೆಂಬರ್ ೧೩ರ ಬುಧವಾರ ತೀರ್ಪುಗಳ ಕಲಾಪ ಪಟ್ಟಿಗೆ ಪ್ರಕರಣವನ್ನು ಸೇರಿಸಲಾಗಿದೆ. ಬೆಳಗ್ಗೆ ೧೦.೩೦ಕ್ಕೆ ತೀರ್ಪು ಪ್ರಕಟವಾಗಲಿದೆ.

ತಮ್ಮ ರಾಜೀನಾಮೆಯನ್ನು ತಿರಸ್ಕರಿಸಿ ಸದನದ ಉಳಿದ ಅವಧಿಗೆ ಅನರ್ಹಗೊಳಿಸಿ ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶಕುಮಾರ್ ಅವರು ನೀಡಿದ್ದ ಆದೇಶವನ್ನು ಅನರ್ಹ ಶಾಸಕರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು.

೧೫ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಳಿಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಕೋರ್ಟ್ ತೀರ್ಪು ಪ್ರಕಟಿಸುವವರೆಗೂ ಅನರ್ಹರ ಸ್ಥಿತಿ ಅತಂತ್ರವಾಗಿಯೇ ಉಳಿಯಲಿದೆ. ಒಂದು ವೇಳೆ ನ್ಯಾಯಾಲಯವು ಹಿಂದಿನ ವಿಧಾನಸಭಾಧ್ಯಕ್ಷರ ಆದೇಶವನ್ನು ರದ್ದುಗೊಳಿಸಿದರೆ ಶಾಸಕರು ಅನರ್ಹತೆಯಿಂದ ಪಾರಾಗಿ, ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇಲ್ಲವಾದಲ್ಲಿ, ಅವರ ರಾಜಕೀಯ ಬದುಕು ಬಹುತೇಕ ಕೊನೆ ಕಾಣಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಅನರ್ಹ ಶಾಸಕರ ಮುಂದಿನ ರಾಜಕೀಯ ನಡೆಯನ್ನು ನಿರ್ಧರಿಸಲಿರುವ ತೀರ್ಪು ರಾಜಕೀಯವಾಗಿಯೂ ಅತ್ಯಂತ ಮಹತ್ವದ ತೀರ್ಪು ಎನಿಸಿಕೊಳ್ಳಲಿದೆ.

No comments:

Advertisement