Sunday, November 10, 2019

ನವೆಂಬರ್ ೯ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ

ನವೆಂಬರ್ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ
ಶಾಂತಿ ಕಾಪಾಡಿದ ಜನತೆಗೆ ಪ್ರಧಾನಿ ಮೋದಿ ಧನ್ಯವಾದ
ನವದೆಹಲಿ: ಶತಮಾನದ ಮಹಾತೀರ್ಪು ಎಂಬುದಾಗಿ ಪರಿಗಣಿಸಲಾಗಿರುವ ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ಕುರಿತು ವಿವಾದಕ್ಕೆ ತೆರೆ ಎಳೆದ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ 2019 ನವೆಂಬರ್ 9ರ ಶನಿವಾರ ಸಂಜೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರುನವೆಂಬರ್ ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನಎಂದು ಬಣ್ಣಿಸಿದರು.

ದೇಶದ
ಪ್ರಜಾಪ್ರಭುತ್ವ ಎಷ್ಟು ಪ್ರಬಲವಾಗಿದೆ ಎಂಬುದು ಇದೀಗ ಸಾಬೀತಾಗಿದೆ. ಎಲ್ಲ ಧರ್ಮ, ಜಾತಿ, ಪಂಥಗಳ ಜನರು ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ. ದೇಶದಲ್ಲಿ ಶಾಂತಿ, ಸೌಹಾರ್ದವನ್ನು ಕಾಪಾಡಿರುವ ಜನತೆಗೆ ನನ್ನ ಧನ್ಯವಾದಗಳು ಎಂದು ಪ್ರಧಾನಿ ನುಡಿದರು.

ಅಯೋಧ್ಯಾ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೂ ಪ್ರಧಾನಿ ಅಭಿನಂದನೆ ಸಲ್ಲಿಸಿದರು.

ಭಾರತದ ಇತಿಹಾಸದಲ್ಲಿ ಸುವರ್ಣಯುಗ ಆರಂಭವಾಗಿದೆ. ದೇಶದ ೧೨೫ ಕೋಟಿ ಜನರೂ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಸುದೀರ್ಘ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ಸರ್ವಾನುಮತದ ತೀರ್ಪನ್ನು ನೀಡಿದೆ. ಸೂಕ್ಷ್ಮ ವಿಚಾರವನ್ನು ಕಾನೂನಿಗೆ ಅನುಗುಣವಾಗಿ ಇತ್ಯರ್ಥ ಪಡಿಸಿದೆ ಎಂದು ಮೋದಿ ಹೇಳಿದರು.

ಶಾಂತಿ ಮತ್ತು ಏಕತೆ ಸುಪ್ರೀಂಕೋರ್ಟ್ ತೀರ್ಪಿನ ಸಂದೇಶವಾಗಿದೆ. ಇದನ್ನು ಭಾರತೀಯರು ಅರ್ಥ ಮಾಡಿಕೊಳ್ಳಬೇಕು. ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮುಂದಿನ ಪೀಳಿಗೆಯವರ ಮೇಲೆ ಪ್ರಭಾವ ಬೀರಲಿದೆ. ಭಾರತದ ಅಭಿವೃದ್ಧಿಗೆ ಎಲ್ಲ ಸಮುದಾಯಗಳ ಸಾಮರಸ್ಯ, ಒಗ್ಗಟ್ಟು ಬಹಳ ಮುಖ್ಯ. ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೆ ೧೨೫ ಕೋಟಿ ಜನರು ಸಾಕ್ಷಿಯಾಗಿದ್ದೇವೆ ಎಂದು ಪ್ರಧಾನಿ ನುಡಿದರು.

ನವೆಂಬರ್ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ದಿನ. ಜರ್ಮನಿಯನ್ನು ವಿಭಜಿಸಿದ್ದ ಬರ್ಲಿನ್ ಗೋಡೆಯನ್ನು ಬೀಳಿಸಿದ್ದು ನವೆಂಬರ್ ೯ರಂದು ಎಂದು ನೆನಪು ಮಾಡಿದ ಪ್ರಧಾನಿ, ಕರ್ತಾರಪುರ ಕಾರಿಡಾರ್ ಯೋಜನೆಯ ಲೋಕಾರ್ಪಣೆಯೂ ಇದೇ ದಿನ ಆಯಿತು. ಇದೇ ದಿನ ಅಯೋಧ್ಯೆಯ ತೀರ್ಪು ಕೂಡಾ ಪ್ರಕಟವಾಗಿದೆ ಎಂದು ಹೇಳಿದರು.

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅಯೋಧ್ಯಾ ಪ್ರಕರಣ ಕೊನೆಗೂ ಅಂತ್ಯ ಕಂಡಿದೆ. ಅಯೋಧ್ಯೆ ತೀರ್ಪಿನ ಬಗ್ಗೆ ಇಡೀ ದೇಶ ಕಾತರದಿಂದಿತ್ತು. ಇಡೀ ದೇಶ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಬೇಕೆಂದು ಬಯಸಿತ್ತು. ಅದು ಹಾಗೆಯೇ ನಡೆದು ತೀರ್ಪು ಪ್ರಕಟವಾಗಿದೆ. ಇದನ್ನು ಎಲ್ಲರೂ ಸ್ವೀಕರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.

ದೇಶದ ಪ್ರತಿಯೊಂದು ಸಮುದಾಯ, ವರ್ಗ, ಧರ್ಮದವರು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಇದು ಭಾರತದ ಪ್ರಾಚೀನ ಸಂಸ್ಕೃತಿ ಮತ್ತು ಸಾಮರಸ್ಯದ ಸಂಪ್ರದಾಯದ ಪ್ರತೀಕವಾಗಿದೆ. ವಿಭಿನ್ನ ಪಥದಲ್ಲಿ ಸಾಗುತ್ತಿದ್ದವರು ಇಂದು ಒಂದಾಗಿದ್ದೇವೆ ಎಂದು ಮೋದಿ ಹೇಳಿದರು.

ಅಯೋಧ್ಯೆ ತೀರ್ಪು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಭವಿಷ್ಯದ ಭಾರತಕ್ಕಾಗಿ ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕಾಗಿದೆ. ದೇಶ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಇದು ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಸುವರ್ಣ ಅಧ್ಯಾಯ. ದಶಕಗಳಿಂದ ಬಾಕಿ ಇರುವ ಪ್ರಕರಣವನ್ನೂ ಪ್ರತಿದಿನ ವಿಚಾರಣೆ ನಡೆಸಿ ಕೊನೆಗೊಳಿಸಬಹುದು ಎಂಬುದನ್ನು ಸುಪ್ರೀಂ ಕೋರ್ಟ್ ತೋರಿಸಿಕೊಟ್ಟಿದೆ. ಅದಕ್ಕಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ನಾವು ಧನ್ಯವಾದ ಹೇಳಬೇಕು. ಅಯೋಧ್ಯೆ ತೀರ್ಪಿನ ಸಂದೇಶವೆಂದರೆ ಶಾಂತಿ ಮತ್ತು ಏಕತೆ ಎಂದು ಮೋದಿ ಹೇಳಿದರು.

ಅಯೋಧ್ಯಾ ಭೂ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿಗೆ ಕ್ಷಣಗಣನೆ ಶುರುವಾದ ಬೆನ್ನಲ್ಲೇ, ದೇಶಾದ್ಯಂತ ಕುತೂಹಲದ ವಾತಾವರಣ ನಿರ್ಮಾಣವಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪು ಏನಿರಬಹುದು ಎಂಬ ಪ್ರಶ್ನೆಗಳಿದ್ದವು. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿದೆ.

No comments:

Advertisement