Wednesday, November 6, 2019

ದೆಹಲಿ ಪೊಲೀಸರಿಂದ ಅಭೂತಪೂರ್ವ ಪ್ರತಿಭಟನೆ

ದೆಹಲಿ ಪೊಲೀಸರಿಂದ  ಅಭೂತಪೂರ್ವ ಪ್ರತಿಭಟನೆ
ದೆಹಲಿ ಕೋರ್ಟ್ ಆದೇಶಕ್ಕೆ ಸ್ಪಷ್ಟನೆ ಕೋರಿದ ಕೇಂದ್ರ, ರಾತ್ರಿ ಪ್ರತಿಭಟನೆ ವಾಪಸ್
ನವದೆಹಲಿ: ವಕೀಲರು ಪೊಲೀಸರನ್ನು ಥಳಿಸಿದ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಪೊಲೀಸ್ ಸಿಬ್ಬಂದಿ ೨೦೧೯ ನವೆಂಬರ್ ೦೫ರ ಮಂಗಳವಾರ ಪೊಲೀಸ್ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿದ್ದಲ್ಲದೆ, ವಾಹನ ನಿಬಿಡ ರಸ್ತೆಯಲ್ಲಿ ೧೧ ಗಂಟೆಗಳ ಕಾಲ ಅಭೂತಪೂರ್ವವಾದ  ಭಾರೀ ಪ್ರತಿಭಟನೆಯನ್ನು ನಡೆಸಿದ್ದು, ಬೇಡಿಕೆ ಈಡೇರಿಕೆ ಬಗ್ಗೆ ಹಿರಿಯ ಅಧಿಕಾರಿಗಳ ಭರವಸೆಯ ಬಳಿಕ ರಾತ್ರಿ  ಪ್ರತಿಭಟನೆ ಹಿಂತೆಗೆದುಕೊಂಡರು.

ಮಧ್ಯೆ ಕೇಂದ್ರ ಗೃಹ ಸಚಿವಾಲಯವು ಬಿಕ್ಕಟ್ಟು ಶಮನಗೊಳಿಸುವ ಸಲುವಾಗಿ ವಕೀಲರನ್ನು ಬಂಧಿಸದಂತೆ ಪೊಲೀಸರಿಗೆ ಆಜ್ಞಾಪಿಸಿದ ಆದೇಶದ ಬಗ್ಗೆ ಸ್ಪಷ್ಟನೆ ನೀಡುವಂತೆ ದೆಹಲಿ ಹೈಕೋರ್ಟಿಗೆ ಮನವಿ ಮಾಡಿತು. ದೆಹಲಿ ಹೈಕೋರ್ಟ್ ಪ್ರಕರಣದ ಮರುವಿಮರ್ಶೆಯನ್ನು ನವೆಂಬರ್ ೬ರ ಬುಧವಾರ ನಡೆಸಲಿದೆ.

ಕಳೆದ ವಾರ ವಕೀಲರಿಂದ ಹಲ್ಲೆಗೆ ಒಳಗಾದ ಪೊಲೀಸರಿಗೆ ನ್ಯಾಯ ಒದಗಿಸುವಂತೆ ಕೋರಿ ನೂರಾರು ಮಂದಿ ಪೊಲೀಸ್ ಸಿಬ್ಬಂದಿ ದೆಹಲಿಯ ವಾಹನ ನಿಬಿಡ ರಸ್ತೆಯೊಂದರಲ್ಲಿ ಮಲಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸರ್ಕಾರವು ಹೈಕೋರ್ಟಿಗೆ ಅದರ ಆದೇಶದ ಬಗ್ಗೆ ಸ್ಪಷ್ಟನೆ ಕೇಳಿ ಮನವಿ ಸಲ್ಲಿಸಿತು.

ಕೇಂದ್ರದ ನೋಟಿಸಿಗೆ ಸ್ಪಂದಿಸುವಂತೆ ಹೈಕೋರ್ಟ್ ಬಾರ್ ಅಸೋಸಿಯೇಶನ್ ಮತ್ತು ಬಾರ್ ಕೌನ್ಸಿಲ್ಗೆ ಸೂಚನೆ ನೀಡಿದ್ದು, ತನ್ನ ಸದಸ್ಯರನ್ನು ಸಂಯಮವಹಿಸುವಂತೆ ನಿಯಂತ್ರಿಸಲೂ ನಿರ್ದೇಶನ ನೀಡಿತು. 
ಶನಿವಾರ ಪೊಲೀಸರು ಮತ್ತು ವಕೀಲರು ಪಾರ್ಕಿಂಗ್ ವಿವಾದವನ್ನು ಅನುಸರಿಸಿ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ಹಿಂಸಾತ್ಮಕ ಘರ್ಷಣೆಗೆ ಇಳಿದಿದ್ದರು.

ಘರ್ಷಣೆಯ ಹಿನ್ನೆಲೆಯಲ್ಲಿ ಇಬ್ಬರು ಹಿರಿಯ ಅಧಿಕಾರಿಗಳು ಮತ್ತು ಇಬ್ಬರು ಆಧೀನ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದ ದೆಹಲಿ ಹೈಕೋರ್ಟ್ ವಕೀಲರ ವಿರುದ್ಧ ದಮನಕಾರೀ ಕ್ರಮಗಳನ್ನು ಕೈಗೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ದಮನಕಾರಿ ಕ್ರಮಗಳು ನಂತರದ ಘಟನೆಗಳಲ್ಲಿ ಶಾಮೀಲಾದ ವಕೀಲರನ್ನೂ ಬಂಧಿಸದಂತೆ ಪೊಲೀಸರನ್ನು ತಡೆಯುತ್ತದೆಯೇ?’ ಎಂಬುದಾಗಿ ಸ್ಪಷ್ಟ ಪಡಿಸುವಂತೆ ಗೃಹ ಸಚಿವಾಲಯವು ಇದೀಗ ಹೈಕೋರ್ಟನ್ನು ಕೋರಿತು.

ಪೊಲೀಸರ ಜೊತೆಗಿನ ಘರ್ಷಣೆಯ ಬಳಿಕ ನವೆಂಬರ್ ೪ರ ಸೋಮವಾರ ಮುಷ್ಕರ ನಡೆಸಿದ ವಕೀಲರು ಪೊಲೀಸರನ್ನು ಥಳಿಸಿದ ಹಲವಾರು ಘಟನೆಗಳು ಘಟಿಸಿರುವುದಾಗಿ ಆಪಾದಿಸಲಾಗಿದ್ದು, ಸಮವಸ್ತ್ರ ಧರಿಸಿದ್ದ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರನ್ನು ಪದೇ ಪದೇ ಥಳಿಸಿದ ವಿಡಿಯೋ ವೈರಲ್ ಆಗಿತ್ತು.  ಸಾಕೇತ ನ್ಯಾಯಾಲಯದ ಹೊರಗೆ ವಕೀಲರಿಂದ ದಾಳಿ ನಡೆದಾಗ ಪೊಲೀಸ್ ಸಿಬ್ಬಂದಿ ತನ್ನ ಮೋಟಾರ್ ಬೈಕ್ ಏರಿ ತಪ್ಪಿಸಿಕೊಂಡ ದೃಶ್ಯವೂ ವಿಡಿಯೋದಲ್ಲಿ ದಾಖಲಾಗಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವಿಡಿಯೋ ಪ್ರಸಾರಗೊಂಡಾಗ, ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಪೊಲೀಸ್ ಸಿಬ್ಬಂದಿಯ ಆಕ್ರೋಶ ಭುಗಿಲೆದ್ದಿತು. ’ಪೊಲೀಸರು ಮನುಷ್ಯರಲ್ಲವೇ? ಅಥವಾ ಕುಟುಂಬ ಹೊಂದಿಲ್ಲವೇ?’ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಕೇಳಿಬಂದವು. ಆದರೆ ವಕೀಲರ ವಿರುದ್ಧ ಕ್ರಮ ಕೈಗೊಂಡದ್ದು ವಿಡಿಯೋದಲ್ಲಿ ಕಂಡು ಬಂದಿರಲಿಲ್ಲ.

ರಾಜಧಾನಿಯ ಹೃದಯ ಭಾಗದಲ್ಲಿನ ಪೊಲೀಸ್ ಕೇಂದ್ರ ಕಚೇರಿಯ ಹೊರಭಾಗದಲ್ಲಿ ಮಂಗಳವಾರ ಬೆಳಗೆ ಕೆಲವು ಡಜನ್ ಸಂಖ್ಯೆಯ ಪೊಲೀಸರು ಆರಂಭಿಸಿದ ಪ್ರತಿಭಟನೆ ಬಳಿಕ ವ್ಯಾಪಕ ಸ್ವರೂಪ ಪಡೆಯಿತು. ವಕೀಲರು-ಪೊಲೀಸ್ ಘರ್ಷಣೆಯಲ್ಲಿ ತಮ್ಮ ಜೊತೆಗೆ ನಿಲ್ಲುವಲ್ಲಿ ಪೊಲೀಸ್ ನಾಯಕತ್ವ ವಿಫಲವಾಗಿದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಪೊಲೀಸ್ ಕಮೀಷನರ್ ಅಮೂಲ್ಯ ಪಾಟ್ನಾಯಕ್ ಮಾಡಿದ ಮನವಿಯನ್ನು ಪ್ರತಿಭಟನಕಾರರು ನಿರ್ಲಕ್ಷಿಸಿದರು. ಇದು ಪರೀಕ್ಷೆಯ ಸಮಯ ಎಂದು ಪಾಟ್ನಾಯಕ್ ತಮ್ಮ ಐದು ನಿಮಿಷಗಳ ಭಾಷಣದಲ್ಲಿ ಸಿಬ್ಬಂದಿಗೆ ಹೇಳಿದರು. ಇತರ ಪೊಲೀಸ್ ಅಧಿಕಾರಿಗಳೂ ಇಂತಹುದೇ ಮನವಿಗಳನ್ನು ಮಾಡಿ ಪೊಲೀಸರ ಅಹವಾಲುಗಳನ್ನು ಪಟ್ಟಿ ಮಾಡಿ ಪರಿಗಣಿಸುವುದಾಗಿ ಹೇಳಿದರು.

ಸಂಜೆಯ ವೇಳೆಗೆ ಪೊಲೀಸ್ ಸಿಬ್ಬಂದಿಯ ಕುಟುಂಬ ಸದಸ್ಯರು ಇಂಡಿಯಾ ಗೇಟ್ಗೆ ಕ್ಯಾಂಡಲ್ ಮೆರವಣಿಗೆ ನಡೆಸಿದರು. ವೇಳೆಗೆ ಪೊಲೀಸರಿಗೆ ದೇಶದ ಇತರ ಭಾಗಗಳ ಪೊಲೀಸ್ ಸಂಘಟನೆಗಳ ಬೆಂಬಲವೂ ವ್ಯಕ್ತವಾಯಿತು.

ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ದೇವೇಂದ್ರ ಶ್ರೀವಾಸ್ತವ ಅವರು ಪೊಲೀಸ್ ಸಿಬ್ಬಂದಿಯ ಬೇಡಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಹಲ್ಲೆ ಪ್ರಕರಣಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿ ಪ್ರತಿಭಟನೆ ನಿಲ್ಲಿಸಿ ಮನೆಗೆ ಮರಳಿ ಎಂದು ಮನವಿ ಮಾಡಿದರು.

ಆದರೆ ಇದಕ್ಕೆ ಮಣಿಯದ ಸಿಬ್ಬಂದಿ ತಮಗೆ ಯೂನಿಯನ್ ಅಥವಾ ಅಸೋಸಿಯೇಶನ್ ರಚಿಸುವ ಹಕ್ಕು ಬೇಕು ಎಂದು ಒತ್ತಾಯಿಸಿ ರಾತ್ರಿ ಬಹುಹೊತ್ತಿನವರೆಗೂ ತಮ್ಮ ಪ್ರತಿಭಟನೆ ಮುಂದುವರೆಸಿದರು. ಪ್ರಸ್ತುತ ಪೊಲೀಸರಿಗೆ ಯೂನಿಯನ್ ಅಥವಾ ಅಸೋಸಿಯೇಶನ್ ರಚಿಸುವ ಹಕ್ಕಿಲ್ಲ.

ರಾತ್ರಿ ದೆಹಲಿ ಪೊಲೀರು ಪ್ರತಿಭಟನೆ ಹಿಂತೆಗೆದುಕೊಂಡರು ಎಂದು ವರದಿಗಳು ಹೇಳಿದವು.

No comments:

Advertisement