Tuesday, November 5, 2019

ಬಿಜೆಪಿ ಸಖ್ಯ ತೊರೆದರೆ ಶಿವಸೇನೆಗೆ ಪೂರ್ಣಾವಧಿ ಸಿಎಂ ಹುದ್ದೆ

ಬಿಕ್ಕಟ್ಟು ಅಂತಕ್ಕೆ ಶರದ್ ಪವಾರ್ ಅವರ ಎನ್ಸಿಪಿ ಸೂತ್ರ
ಬಿಜೆಪಿ ಸಖ್ಯ ತೊರೆದರೆ ಶಿವಸೇನೆಗೆ ಪೂರ್ಣಾವಧಿ ಸಿಎಂ ಹುದ್ದೆ  
ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಂದಿನಿಂದ ಅಧಿಕಾರಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ನಡೆಯುತ್ತಿರುವ ಘರ್ಷಣೆ ಇನ್ನೂ ಇತ್ಯರ್ಥ ಕಾಣದ ಹಿನ್ನೆಲೆಯಲ್ಲಿ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವುಕಾಯುವ ಆಟವನ್ನು ಆಯ್ಕೆ ಮಾಡಿಕೊಂಡಿತು.
ಶಿವಸೇನಾ ನಾಯಕ ಸಂಜಯ್ ರಾವತ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆಗಳನ್ನು ನಡೆಸಿದ ಬಳಿಕ ಪವಾರ್ ಅವರು ತಮ್ಮ ನಿರ್ಧಾರವನ್ನು ತಮ್ಮಲ್ಲೇ ರಹಸ್ಯವಾಗಿ ಇರಿಸಿಕೊಂಡರು.
ಆದಾಗ್ಯೂ, ೨೦೧೯ರ ವಿಧಾನಸಭಾ ಚುನಾವಣೆಯಲ್ಲಿ ೨೦೧೪ರ ಚುನಾವಣೆಗಿಂತ ೧೩ ಸ್ಥಾನಗಳನ್ನು ಹೆಚ್ಚು ಪಡೆದುಕೊಂಡು ತನ್ನ ಬಲವನ್ನು ೫೪ಕ್ಕೆ ಏರಿಸಿಕೊಂಡಿರುವ ಎನ್ಸಿಪಿಯು, ಮೋದಿ ಸಂಪುಟದಲ್ಲಿರುವ ಏಕೈಕ ಶಿವಸೇನಾ ಸಚಿವ ರಾಜೀನಾಮೆ ನೀಡಿದರೆ, ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ಸಿನಿಂದ ಬಾಹ್ಯ ಬೆಂಬಲ ಪಡೆಯಲು ಇಚ್ಛಿಸಿದೆ ಎಂದು ಎನ್ಸಿಪಿ ಮೂಲಗಳು ಹೇಳಿದವು.
ಬಿಜೆಪಿ ಜೊತೆಗಿನ ಮೈತ್ರಿಕೂಟದಿಂದ ಶಿವಸೇನೆಯು ಹೊರಕ್ಕೆ ಬಂದರೆ, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷಕ್ಕೆ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆಯಕೊಡುಗೆನೀಡಲು ಎನ್ಸಿಪಿ ಸಿದ್ಧವಿದೆ ಎಂದು ಮೂಲಗಳು ಹೇಳಿದವು.

ಇನ್ನೊಂದು ಸಂಭಾವ್ಯತೆಯೆಂದರೆ ಶಿವಸೇನೆ ಮತ್ತು ಎನ್ಸಿಪಿಯಿಂದ ತಲಾ ಒಬ್ಬರಂತೆ ಇಬ್ಬರು ಉಪ ಮುಖ್ಯಮಂತ್ರಿಗಳ ನೆರವಿನೊಂದಿಗೆ ಶಿವಸೇನೆಯು ಮುಖ್ಯಮಂತ್ರಿ ಸ್ಥಾನವನ್ನು ಪಡೆಯುವುದು.

ಎನ್ಸಿಪಿಯು ಮುಖ್ಯಮಂತ್ರಿ ಸ್ಥಾನವನ್ನು ಬಯಸುವುದಿಲ್ಲ. ನಮಗೆ ಪ್ರಮುಖ ಖಾತೆಗಳು ಲಭಿಸಿದರೆ ಸಾಕುಎಂದು ಎನ್ಸಿಪಿ ಮೂಲ ಹೇಳಿದೆ. ಆದರೆ ಸೇನೆಯಿಂದ ಇನ್ನೂ ಇಂತಹ ಯಾವ ಪ್ರಸ್ತಾಪಗಳೂ ಬಂದಿಲ್ಲ  ಎಂದೂ ಮೂಲ ಹೇಳಿತು.
ಅಯೋಧ್ಯೆಯ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಾಗಿರುತ್ತೇವೆ ಎಂಬ ಘೋಷಿತ ನಿಲುವು ನಮ್ಮದಾಗಿರುವುದರಿಂದ ರಾಮಮಂದಿರ ವಿಷಯವು ಪ್ರಸ್ತಾಪಿತ ಮೈತ್ರಿಕೂಟಕ್ಕೆ ಸಮಸ್ಯೆಯಾಗದುಎಂದೂ ಮೂಲಗಳು ಸ್ಪಷ್ಟ ಪಡಿಸಿದವು.
2019 ನವೆಂಬರ್ 5ರ ಮಂಗಳವಾರ, ಸೇನಾ ನಾಯಕ ಸಂಜಯ ರಾವತ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ತಮ್ಮ ಪಕ್ಷದವರೇ ಆಗಿರುತ್ತಾರೆ ಎಂದು ಪುನರುಚ್ಚರಿಸಿದರು. ಮಹಾರಾಷ್ಟ್ರದ ರಾಜಕೀಯ ಬದಲಾಗುತ್ತಿದೆ ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ತಮ್ಮ ಪಕ್ಷವು ಗೆಲ್ಲಲಿದೆ ಎಂದು ಅವರು ನುಡಿದರು.

ಶಿವಸೇನೆಯು ಎನ್ಸಿಪಿ ಕಡೆಗೆ ಗೆಳೆತನದ ಸಂಕೇತಗಳನ್ನು ನೀಡುತ್ತಿದೆ ಎಂಬ ವರದಿಗಳ ಮಧ್ಯೆಪವಾರ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುವುದಿಲ್ಲಎಂದೂ ರಾವತ್ ಹೇಳಿದರು.

ಅಕ್ಟೋಬರ್  ೨೪ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದಂದಿನಿಂದ ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಮತ್ತು ಶಿವಸೇನೆ ತೀವ್ರ ಕಚ್ಚಾಟ ನಡೆಸುತ್ತಿದ್ದು, ಪರಿಣಾಮವಾಗಿ ಸರ್ಕಾರದ ರಚನೆ ನೆನೆಗುದಿಗೆ ಬಿದ್ದಿದೆ. ೨೮೮ ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ -ಶಿವಸೇನಾ ಮೈತ್ರಿಕೂಟವು ಒಟ್ಟು ೧೬೧ ಸ್ಥಾನಗಳೊಂದಿಗೆ ಬಹುಮತವನ್ನು ಹೊಂದಿದ್ದರೂ, ಅಧಿಕಾರ ಹಂಚಿಕೆಯ ಕಚ್ಚಾಟದ ಪರಿಣಾಮವಾಗಿ ಸರ್ಕಾರ ರಚನೆ ಸಾಧ್ಯವಾಗಿಲ್ಲ.

ಲೋಕಸಭಾ ಚುನಾವಣೆಗೆ ಮುನ್ನ ಅಧಿಕಾರದ ಸಮಾನ ಹಂಚಿಕೆಯ ಸೂತ್ರಕ್ಕೆ ಬಿಜೆಪಿ ಒಪ್ಪಿತ್ತು, ಚುನಾವಣೆಯ ಬಳಿಕ ಅದು ತನ್ನ ವಚನವನ್ನು ಈಡೇರಿಸಬೇಕು ಎಂದು ಶಿವಸೇನೆ ಹೇಳುತ್ತಿದೆ.
ಮಹಾರಾಷ್ಟ್ರದಲ್ಲಿ ಪರ್ಯಾಯ  ಸರ್ಕಾರದ ರಚನೆಯ ಮಾರ್ಗಕ್ಕೆ ತೆರಳುವಂತೆ ಬಿಜೆಪಿಯು ತಮ್ಮ ಪಕ್ಷದ ಮೇಲೆ ಒತ್ತಡ ಹಾಕಬಾರದು ಎಂದೂ ರಾವತ್ ಹೇಳಿದರು.
ರಾಜಕೀಯದಲ್ಲಿ ಯಾರೂ ಸಂತರಲ್ಲಎಂಬ ಮಾತನ್ನೂ ಅವರು ಸೇರಿಸಿದ್ದಾರೆ.

No comments:

Advertisement