My Blog List

Friday, November 8, 2019

ದರ್ಬಾರ್ ಸಾಹಿಬ್‌ಗೆ ತೆರಳುವ ಸಿಖ್ ಯಾತ್ರಿಕರಿಗೆ ಪಾಸ್‌ಪೋರ್ಟ್ ಕಡ್ಡಾಯ

ದರ್ಬಾರ್ ಸಾಹಿಬ್‌ಗೆ ತೆರಳುವ ಸಿಖ್ ಯಾತ್ರಿಕರಿಗೆ ಪಾಸ್‌ಪೋರ್ಟ್ ಕಡ್ಡಾಯ
ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮುನ್ನ ಭಾರತದ ಸ್ಪಷ್ಟನೆ
ನವದೆಹಲಿ: ಕರ್ತಾರಪುರಕ್ಕೆ ಭಾರತದಿಂದ ತೆರಳುವ ಸಿಖ್ ಯಾತ್ರಿಕರು ಕಾನೂನುಬದ್ಧ ಗುರುತಿಗಾಗಿ ಪಾಸ್‌ಪೋರ್ಟ್‌ಗಳನ್ನು ತಮ್ಮ ಜೊತೆಗೆ ಒಯ್ಯಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಎರಡು ದಿನಗಳ ಮುಂಚಿತವಾಗಿಯೇ 2019 ನವೆಂಬರ್ 7ರ ಗುರುವಾರ ಸ್ಪಷ್ಟ ಪಡಿಸಿತು.
ನೂತನ ಕಾರಿಡಾರ್ ಬಳಸಿಕೊಂಡು ದರ್ಬಾರ್ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರಿಗೆ ಪಾಸ್‌ಪೋರ್ಟ್ ಅಗತ್ಯವಿದೆಯೇ ಎಂಬ ಬಗ್ಗೆ ಪಾಕಿಸ್ತಾನದಿಂದ ವಿರೋಧಾಭಾಸದ ವರದಿಗಳು ಬರುತ್ತಿವೆ. ಹೀಗಾಗಿ ಗೊಂದಲ ಮುಂದುವರೆದಿದೆ. ಆದ್ದರಿಂದ ನಾವು ಉಭಯ ರಾಷ್ಟ್ರಗಳು ಸಹಿ ಮಾಡಿರುವ ತಿಳುವಳಿಕೆ ಪತ್ರದಲ್ಲಿ (ಎಂಒಯು) ಒಪ್ಪಿಕೊಳ್ಳಲಾದ ಅಗತ್ಯಗಳನ್ನು ಪಾಲಿಸುತ್ತೇವೆ ಮತ್ತು ಗುರುತಿಗೆ ಸಾಕ್ಷಿಯಾಗಿ ಪಾಸ್ ಪೋರ್ಟ್ ಒಯ್ಯುತ್ತೇವೆ ಎಂದು ಎಂಇಎ ವಕ್ತಾರ ರವೀಶ ಕುಮಾರ್ ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
’ಭಾರತೀಯ ಯಾತ್ರಿಕರ ಭೇಟಿಗೆ ಸಂಬಂಧಿಸಿದಂತೆ ವಿಧಿವಿಧಾನಗಳನ್ನು ಅಂತಿಮಗೊಳಿಸುವ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿದ್ದವು. ನಾವು ಅದಕ್ಕೆ ಬದ್ಧರಾಗಿರುತ್ತೇವೆ’ ಎಂದು ಕುಮಾರ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಸಹಿ ಮಾಡಿರುವ ದ್ವಿಪಕ್ಷೀಯ ದಾಖಲೆ ಇರುವುದು ನಮಗೆ ಗೊತ್ತಿದೆ. ಅದು ಯಾತ್ರಿಕರು ಏನನ್ನು ಒಯ್ಯಬೇಕು ಎಂದು ನಿರ್ದಿಷ್ಟಗೊಳಿಸಿದೆ. ಹಾಲಿ ತಿಳುವಳಿಕೆ ಪತ್ರಕ್ಕೆ (ಎಂಒಯು) ಯಾವುದೇ ತಿದ್ದುಪಡಿಯನ್ನು ಏಕಪಕ್ಷೀಯವಾಗಿ ಮಾಡಲು ಆಗುವುದಿಲ್ಲ. ಹಾಗೆ ತಿದ್ದುಪಡಿ ಮಾಡಲು ಉಭಯ ರಾಷ್ಟ್ರಗಳ ಒಪ್ಪಿಗೆ ಬೇಕಾಗುತ್ತದೆ ಎಂದು ಅವರು ನುಡಿದರು.
ಪಾಕಿಸ್ತಾನದಿಂದ ವಿರುದ್ಧಾಭಿಪ್ರಾಯದ ವರದಿಗಳು ಬರುತ್ತಿವೆ. ಕೆಲವೊಮ್ಮೆ ಅವರು ಪಾಸ್‌ಪೋರ್ಟಿನ ಅಗತ್ಯವಿದೆ ಎನ್ನುತ್ತಾರೆ. ಇನ್ನು ಕೆಲವೊಮ್ಮೆ ಅದರ ಅಗತ್ಯವಿಲ್ಲ ಎನ್ನುತ್ತಾರೆ. ಪ್ರಸ್ತುತ ಅಗತ್ಯ ದಾಖಲೆಗಳನ್ನು ನಿರ್ದಿಷ್ಟ ಪಡಿಸಿ ಸಹಿ ಮಾಡಿರುವ ಒಪ್ಪಂದ ಒಂದು ಇದೆ’ ಎಂದು ಕುಮಾರ್ ಹೇಳಿದರು.
ಭದ್ರತೆ ಮತ್ತು ಶಿಷ್ಟಾಚಾರ ವ್ಯವಸ್ಥೆಗಳ ಬಗ್ಗೆ ಭಾರತವು ಪಾಕಿಸ್ತಾನದ ಗಮನಕ್ಕೆ ತಂದಿದೆ. ಉನ್ನತ ಸ್ಥಾನದ ಗಣ್ಯರು ಭೇಟಿ ನೀಡುವುದಕ್ಕೆ ಮುನ್ನ ತಂಡವೊಂದು ಭೇಟಿ ನೀಡಬೇಕಾದ ಸಹಜ ಅಗತ್ಯವಿದೆ. ಈ ಬಗ್ಗೆ ನಮಗೆ ಪಾಕಿಸ್ತಾನದಿಂದ ಈವರೆಗೂ ಯಾವ ಸೂಚನೆಯೂ ಬಂದಿಲ್ಲ ಎಂದು ರವೀಶ ಕುಮಾರ್ ನುಡಿದರು.
ಗಣ್ಯರಿಗೆ ಭದ್ರತೆ ಮತ್ತು ವೈದ್ಯಕೀಯ ವ್ಯವಸ್ಥೆ ಮಾಡುವಂತೆ ನಾವು ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾನೂನುಬದ್ಧ ಗುರುತಿನ ಸಾಕ್ಷಿಯೊಂದನ್ನು ಯಾತ್ರಿಕರು ಕೊಟ್ಟರೆ ಸಾಕು ಎಂಬುದಾಗಿ ಹೇಳಿರುವುದರ ಹೊರತಾಗಿಯೂ ಕಾರಿಡಾರ್ ಬಳಸುವ ಭಾರತೀಯ ಯಾತ್ರಿಕರು ಪಾಸ್ ಪೋರ್ಟ್ ಹೊಂದಿರಬೇಕು ಎಂದು ಪಾಕಿಸ್ತಾನಿ ಸೇನೆ ಹೇಳಿದ ಬೆನ್ನಲ್ಲೇ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಸ್ ಪೋರ್ಟಿಗೆ ಸಂಬಂಧಪಟ್ಟ ಸ್ಪಷ್ಟನೆಯನ್ನು ಪ್ರಕಟಿಸಿತು.
ಕರ್ತಾರಪುರದಲ್ಲಿನ ಗುರುದ್ವಾರಕ್ಕೆ ಭೇಟಿ ನೀಡುವ ಸಿಖ್ ಯಾತ್ರಿಕರು ಪಾಸ್ ಪೋರ್ಟ್ ಹೊಂದಿರಬೇಕಾದ ಅಗತ್ಯ ಇದೆಯೇ ಎಂಬುದಾಗಿ ಸ್ಪಷ್ಟಪಡಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದ ಬಳಿಕ ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರಲ್ ಅಸಿಫ್ ಗಫೂರ್ ಅವರು ಯಾತ್ರಿಕರು ಪಾಸ್‌ಪೋರ್ಟ್ ಹೊಂದಿರಬೇಕು ಎಂದು ಹೇಳಿದ್ದರು.
ಭಾರತದ ಸಿಖ್ ಯಾತ್ರಿಕರಿಗೆ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ವೀಸಾಮುಕ್ತ ಭೇಟಿಗೆ ಅವಕಾಶ ಕಲ್ಪಿಸಿರುವ ಕರ್ತಾರಪುರ ಕಾರಿಡಾರನ್ನು ನವೆಂಬರ್ ೯ರ ಶನಿವಾರ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ದೇವ್ ಅವರ ೫೫೦ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ.

No comments:

Advertisement