Tuesday, November 5, 2019

ಸುಪ್ರೀಂನಲ್ಲಿ ಬಿಎಸ್‌ವೈ ಆಡಿಯೋ ಸದ್ದು: ಸಿಜೆಐ ಜೊತೆ ಸಮಾಲೋಚನೆಗೆ ಅಸ್ತು

ಸುಪ್ರೀಂನಲ್ಲಿ ಬಿಎಸ್‌ವೈ ಆಡಿಯೋ ಸದ್ದು:
 ಸಿಜೆಐ ಜೊತೆ ಸಮಾಲೋಚನೆಗೆ ಅಸ್ತು
ನವದೆಹಲಿ: ಅನರ್ಹ ಶಾಸಕರ ಪರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿದ್ದಾರೆ ಎನ್ನಲಾಗಿರುವ ಹೊಸ ಆಡಿಯೋ ಟೇಪ್ ಪ್ರಕರಣ 2019 ನವೆಂಬರ್ 04ರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಪ್ರತಿಧ್ವನಿಸಿದ್ದು, ಶಾಸಕರ ಅನರ್ಹತೆ ಪ್ರಕರಣದಲ್ಲಿ ಇದನ್ನು ಸಾಕ್ಷಿಯಾಗಿ ಪರಿಗಣಿಸುವಂತೆ ಕರ್ನಾಟಕ ಕಾಂಗ್ರೆಸ್ ಪಕ್ಷವು ನ್ಯಾಯಪೀಠಕ್ಕೆ ಮನವಿ ಮಾಡಿತು.
ಕರ್ನಾಟಕ ಕಾಂಗ್ರೆಸ್ ನೀಡಿರುವ ಹೊಸ ಸಾಕ್ಷ್ಯವನ್ನು ಪರಿಗಣಿಸಲು ವಿಶೇಷ ಪೀಠ ರಚಿಸುವ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಜೊತೆ ಸಮಾಲೋಚಿಸುವುದಾಗಿ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಹೇಳಿತು.

2019 ನವೆಂಬರ್ 05ರ ಮಂಗಳವಾರ ವಿಷಯವನ್ನು ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಪೀಠ ಸಮ್ಮತಿಸಿತು.

ಜನತಾದಳ -ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾದ ೧೭ ಮಂದಿ ಕಾಂಗ್ರೆಸ್ ಮತ್ತು ಜನತಾ ದಳ (ಎಸ್) ಶಾಸಕರ ಬಂಡಾಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಪಾತ್ರವಿದೆ ಎಂಬುದಾಗಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ  ಎಂಬುದನ್ನು ಹೊಸ ಆಡಿಯೋ ಟೇಪ್ ಬಹಿರಂಗ ಪಡಿಸಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತು.

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠದ ಮುಂದೆ ಸೋಮವಾರ ವಿಷಯವನ್ನು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರ ಪರವಾಗಿ ಪ್ರಸ್ತಾಪಿಸಿದರು. ಕರ್ನಾಟಕದ ಅನರ್ಹ ಶಾಸಕರು ಸಲ್ಲಿಸಿರುವ ರಿಟ್ ಅರ್ಜಿಗಳನ್ನು ಇತ್ಯರ್ಥ ಪಡಿಸುವಲ್ಲಿ ಈ ವಿಷಯವು ಪರಿಣಾಮ ಬೀರಬಲ್ಲುದು ಎಂದು ಸಿಬಲ್ ಹೇಳಿದರು.

ಅದಕ್ಕೆ ಪೀಠವು ಆಗಿನ ವಿಧಾನಸಭಾಧ್ಯಕ್ಷರ ವಿರುದ್ಧ ಅನರ್ಹ ಶಾಸಕರು ಸಲ್ಲಿಸಿದ್ದ ಮನವಿ ಕುರಿತ ತೀರ್ಪನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಹೇಳಿತು.

‘ಸಾರ್ವಜನಿಕ ಬದುಕಿನಲ್ಲಿ ರಾಜಕಾರಣಿಗಳು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ ಎಂದೂ ಪೀಠ ಹೇಳಿತು. ಆದರೆ ಸಿಬಲ್ ಅವರು ಸಂಭಾಷಣೆ ದಾಖಲಾಗಿರುವ ಆಡಿಯೋ ಟೇಪನ್ನು ದಾಖಲೆಗೆ ಸೇರ್ಪಡೆ ಮಾಡಬೇಕು ಎಂಬುದಾಗಿ ಆಗ್ರಹಿಸಿದಾಗ, ನ್ಯಾಯಮೂರ್ತಿ ರಮಣ ಅವರು ಮಂಗಳವಾರ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ಕೃಷ್ಣ ಮುರಾರಿ ಅವರನ್ನೂ ಒಳಗೊಂಡ ವಿಶೇಷ ಪೀಠ ರಚಿಸುವಂತೆ ತಾವು ಸಿಜೆಐ ಅವರಿಗೆ ಮನವಿ ಮಾಡುವುದಾಗಿ ನುಡಿದರು.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಭೆಯೊಂದರಲ್ಲಿ ಯಡಿಯೂರಪ್ಪ ಅವರು ಅನರ್ಹ ಕಾಂಗ್ರೆಸ್-ಜೆಡಿ(ಎಸ್) ಶಾಸಕರಿಗೆ ೧೫ ವಿಧಾನಸಭಾ ಕ್ಷೇತ್ರಗಳಲ್ಲಿ ಡಿಸೆಂಬರ್ ೫ರ ವಿಧಾನಸಭಾ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲು ಪಕ್ಷದ ನಾಯಕರು ವಿರೋಧ ವ್ಯಕ್ತ ಪಡಿಸಿದ್ದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದು ಈ ಆಡಿಯೋ ಟೇಪಿನಲ್ಲಿ ದಾಖಲಾಗಿತ್ತು ಎನ್ನಲಾಗಿದೆ. ಆಡಿಯೋ 2019 ನವೆಂಬರ್ 01ರ ಶುಕ್ರವಾರ ಬಹಿರಂಗಗೊಂಡಿತ್ತು.

ಸಮ್ಮಿಶ್ರ ಸರ್ಕಾರದ ಪತನಕ್ಕೆ ಮುನ್ನ ಬಂಡಾಯ ಕಾಂಗ್ರೆಸ್, ಜೆಡಿ(ಎಸ್) ಶಾಸಕರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯಂತೆಯೇ ಮುಂಬೈಯಲ್ಲಿ  ಇರಿಸಲಾಗಿತ್ತು ಎಂದು ಯಡಿಯೂರಪ್ಪ ಹೇಳಿದ್ದು ಆಡಿಯೋದಲ್ಲಿ ದಾಖಲಾಗಿದೆ ಎನ್ನಲಾಗಿದೆ. ಕಾಂಗ್ರೆಸ್ ಆರೋಪಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ತಳ್ಳಿಹಾಕಿದ್ದಾರೆ.

ಶಾಸಕರು ಕಾಂಗ್ರೆಸ್- ಜೆಡಿ(ಎಸ್) ಮೈತ್ರಿ ಸರ್ಕಾರವನ್ನು ಉರುಳಿಸುವ ಯತ್ನವಾಗಿ ಜುಲೈ ತಿಂಗಳಲ್ಲಿ ವಿಧಾನಸಭೆಗೆ ರಾಜೀನಾಮೆ ನೀಡಿದ್ದು, ಆ ಮೂಲಕ ಬಹುಮತಕ್ಕೆ ೫ ಸ್ಥಾನಗಳ ಕೊರತೆಯಿದ್ದ ಬಿಜೆಪಿಗೆ ಯಡಿಯೂರಪ್ಪ ನೇತೃತ್ವದಲ್ಲಿ  ಸರ್ಕಾರ ರಚನೆಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದು ಆಪಾದಿಸಲಾಗಿದೆ. ಈ ಎಲ್ಲ ಶಾಸಕರನ್ನು ಆಗಿನ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಬಳಿಕ ಸದನದಿಂದ ಅನರ್ಹಗೊಳಿಸಿದ್ದರು.

ಬಿಜೆಪಿ ಸರ್ಕಾರವನ್ನು ಉಳಿಸಲು ಬೆಂಬಲ ನೀಡದೇ ಇರುವುದಕ್ಕಾಗಿ ಮತ್ತು ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಅನರ್ಹ ಶಾಸಕರು ಮಾಡಿದ ’ಬಲಿದಾನವನ್ನು ಮನ್ನಿಸದೇ ಇರುವುದಕ್ಕಾಗಿ ಯಡಿಯೂರಪ್ಪ ಅವರು ಸಭೆಯಲ್ಲಿ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿ ದಾಖಲಾಗಿದೆ ಎನ್ನಲಾಗಿತ್ತು.

ಹಿಂದಿನ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವು ಮಂಡಿಸಿದ್ದ ವಿಶ್ವಾಸಮತ ನಿರ್ಣಯವನ್ನು ಮತಕ್ಕೆ  ಹಾಕುವಾಗ ಗೈರು ಹಾಜರಾಗಿದ್ದ ತಮ್ನನ್ನು ಆಗಿನ ಸಭಾಧ್ಯಕ್ಷರು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕರ್ನಾಟಕದ ೧೭ ಮಂದಿ ಶಾಸಕರು ಸಲ್ಲಿಸಿದ್ದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂಕೋರ್ಟ್ ವಿಚಾರಣೆಯ ಬಳಿಕ ಅಕ್ಟೋಬರ್ ೨೫ರಂದು ಕಾಯ್ದಿರಿಸಿತ್ತು.

‘ಈದಿನ ಇಲ್ಲಿ ಮಾತನಾಡಿರುವ ರೀತಿ ನೋಡಿದರೆ ಸರ್ಕಾರವನ್ನು ಉಳಿಸುವ ಇಚ್ಛೆ ಇದ್ದಂತೆ ಕಾಣುವುದಿಲ್ಲ. ಈ ೧೭ ಮಂದಿ ಶಾಸಕರ  ಬೆಂಬಲ ಪಡೆಯುವ ನಿರ್ಣಯವನ್ನು ಯಡಿಯೂರಪ್ಪ ಒಬ್ಬರೇ ತೆಗೆದುಕೊಂಡದ್ದಲ್ಲ ಎಂಬುದು ನಿಮಗೆ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು (ಅಮಿತ್ ಶಾ) ಸ್ವತಃ ಈ ಕ್ರಮವನ್ನು ಬೆಂಬಲಿಸಿದ್ದರು ಮತ್ತು ಬಂಡುಕೋರರನ್ನು ಎರಡೂವರೆ ತಿಂಗಳ ಕಾಲ ಮುಂಬೈಯಲ್ಲಿ ಇರಿಸಲಾಗಿತ್ತು ಎಂದು ಯಡಿಯೂರಪ್ಪ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿತ್ತು ಎನ್ನಲಾಗಿದೆ.

‘ರಾಜೀನಾಮೆ ನೀಡಿ, ತಮ್ಮ ರಾಜೀನಾಮೆಗಳನ್ನು ಅಂಗೀಕರಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಹೋಗಿರುವ ಈ ಬಂಡಾಯಗಾರರು ಇಲ್ಲದೇ ಹೋಗಿದ್ದರೆ (ನಾವು) ಅಧಿಕಾರಕ್ಕೆ ಬರಲು ಆಗುತ್ತಿರಲಿಲ್ಲ, ನಾವು ಮೂರೂವರೆ ವರ್ಷಗಳ ಕಾಲ ವಿರೋಧ ಪಕ್ಷವಾಗಿಯೇ ಇರಬೇಕಿತ್ತು. ನನಗೆ ನೋವಾಗಿದೆ. ನಾನು ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ.. ಪಕ್ಷದ ಅಧ್ಯಕ್ಷರು ಇಲ್ಲಿರುವದು ಒಳ್ಳೆಯದಾಯಿತು. .. ಕೇಂದ್ರ ನಾಯಕತ್ವವೇ ನಿರ್ಧರಿಸಲಿ ಎಂದೂ ಯಡಿಯೂರಪ್ಪ ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿತ್ತು ಎಂದು ಹೇಳಲಾಗಿದೆ.

ಕಾಂಗ್ರೆಸ್ ಪಕ್ಷವು ಇದೀಗ ಈ ಪ್ರಕರಣವನ್ನು ಸುಪ್ರೀಂಕೋರ್ಟಿನ ಗಮನಕ್ಕೆ ತಂದಿರುವುದು ಬಿಜೆಪಿ ಸರ್ಕಾರ ಮತ್ತು ಅನರ್ಹ ಶಾಸಕರಿಗೆ ತೀವ್ರ ಗಂಡಾಂತರವನ್ನು ತಂದೊಡ್ಡಿದೆ ಎಂದು ಹೇಳಲಾಗುತ್ತಿದೆ.

ಸುಪ್ರೀಂಕೋರ್ಟ್ ಕಾಯ್ದಿರಿಸಿರುವ ತನ್ನ  ತೀರ್ಪಿನಲ್ಲಿ ಅನರ್ಹಗೊಳಿಸಿದ್ದರ ವಿರುದ್ಧ ತೀರ್ಪು ನೀಡಿದರೆ, ಶಾಸಕರಿಗೆ ೧೫ ಸ್ಥಾನಗಳಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಲಿದೆ.

ಈ ಮಧ್ಯೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ನವೆಂಬರ್ ೨ರ ಶನಿವಾರ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೂ ಪತ್ರ ಬರೆದು ’ಪ್ರಜಾಪ್ರಭುತ್ವದ ಕೊಲೆಯಾಗಿದೆ ಎಂದು ಆಪಾದಿಸಿದೆ. ಅನೈತಿಕ, ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂವಿಧಾನಬಾಹಿರ ಕೃತ್ಯಗಳನ್ನು ಪರಿಗಣಿಸಬೇಕು ಎಂದೂ ಪಕ್ಷವು ರಾಷ್ಟ್ರಪತಿಯವರಿಗೆ ಮನವಿ ಮಾಡಿದೆ.

ಪಕ್ಷಾಂತರಗಳನ್ನು ಯೋಜಿಸಿದ ಯಡಿಯೂರಪ್ಪ ಮತ್ತು ಅಮಿತ್ ಶಾ ಇಬ್ಬರಿಗೂ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರೆಯಲು ನೈತಿಕ ಮತ್ತು ಕಾನೂನುಬದ್ಧ ಹಕ್ಕಿಲ್ಲ ಎಂದು ಪತ್ರ ಹೇಳಿದೆ.

No comments:

Advertisement