My Blog List

Sunday, November 17, 2019

ಶಬರಿಮಲೈ: ಮಂಡಲ ಪೂಜೆಗಾಗಿ ತೆರೆದ ಅಯ್ಯಪ್ಪಸ್ವಾಮಿ ದೇಗುಲ

ಶಬರಿಮಲೈ: ಮಂಡಲ ಪೂಜೆಗಾಗಿ ತೆರೆದ
ಅಯ್ಯಪ್ಪಸ್ವಾಮಿ
ದೇಗುಲ
೧೦ ಮಹಿಳೆಯರಿಗೆ ಗೇಟ್ ಪಾಸ್, ಸಹಸ್ರಾರು ಭಕ್ತರ ಆಗಮನ
ಪತ್ತನಂತಿಟ್ಟ  (ಕೇರಳ): ಕೇರಳದ ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಸಹಸ್ರಾರು ಭಕ್ತರ ಚಾರಣದೊಂದಿಗೆ ೪೧ ದಿನಗಳ ವಾರ್ಷಿಕ ತೀರ್ಥಯಾತ್ರೆ 2019 ನವೆಂಬರ್ 16ರ ಶನಿವಾರ ಆರಂಭಗೊಂಡಿದ್ದು, ೧೦ ಮಂದಿ ಮಹಿಳೆಯರನ್ನು ವಾಪಸ್ ಕಳುಹಿಸಿದ ಬಳಿಕ ಸಂಜೆ  ಮಂಡಲ ಮಕರವಿಳಕ್ಕು ಪೂಜೆಗಾಗಿ ದೇವಾಲಯದ ಮಹಾದ್ವಾರವನ್ನು ತೆರೆಯಲಾಯಿತು.

ಬೆಟ್ಟದ ಮೇಲಿನ ದೇವಾಲಯದ ಸುತ್ತಮುತ್ತಣ ಪ್ರದೇಶದಲ್ಲಿ ರಾಜ್ಯ ಸರ್ಕಾರವು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಚಾರಣಕ್ಕೆ ಬಂದ ಹಿರಿಯ ಮಹಿಳೆಯರಿಗೆ ವಯಸ್ಸಿನ ದಾಖಲೆ ಒದಗಿಸುವಂತೆ ದೇವಾಲಯದಿಂದ ಕಿಮೀ ದೂರದಲ್ಲಿರುವ ಪಂಬಾ ತಳ ಶಿಬಿರದಲ್ಲೇ ಪೊಲೀಸ್ ಸೂಚನೆ ನೀಡಿದರು.

ಸುಪ್ರೀಂಕೋರ್ಟಿನ ಇತ್ತೀಚಿನ ತೀರ್ಪು ಹೊರಬಿದ್ದ ಎರಡು ದಿನಗಳ ಬಳಿಕ, ಕೆಲವು ಮಹಿಳಾ ಕಾರ್ಯಕರ್ತರು ಪೂಜೆ ಸಲ್ಲಿಸಲು ಬೆಟ್ಟದ ಮೇಲಿನ ದೇಗುಲವನ್ನು ಪ್ರವೇಶಿಸುವುದಾಗಿ ಬೆದರಿಕೆ ಹಾಕಿರುವುದರ ಮಧ್ಯೆಯೇ ಶಬರಿಮಲೈ ದೇವಾಲಯದ ಮುಖ್ಯ ಅರ್ಚಕ ಅಥವಾ ತಂತ್ರಿಗಳು ಶನಿವಾರ ಸಂಜೆ ಗಂಟೆಗೆ ಮೂರು ತಿಂಗಳ ತೀರ್ಥಯಾತ್ರಾ ಋತುವಿಗಾಗಿ ಅಯ್ಯಪ್ಪ ಸ್ವಾಮಿ ದೇಗುಲದ ಮಹಾದ್ವಾರವನ್ನು ತೆರೆದರು.

ಋತುಮತಿ ವಯೋಮಾನದ ಕನಿಷ್ಠ ೧೦ ಮಂದಿ ಮಹಿಳೆಯರನ್ನು ಪೊಲೀಸರು ವಾಪಸ್ ಕಳುಹಿಸಿದರು. ತಮ್ಮನ್ನು ದೇವಾಲಯದ ಮೆಟ್ಟಿಲು ಏರಲು ಬಿಡುವಂತೆ ಮಹಿಳೆಯರು ಆಗ್ರಹಿಸಿದಾಗ, ೧೦ರಿಂದ ೫೦ ವರ್ಷ ನಡುವಣ ವಯೋಮಾನದ ಮಹಿಳೆಯರನ್ನು ಬಿಡದಂತೆ ತಮಗೆ ಕಟ್ಟುನಿಟ್ಟಿನ ಆದೇಶವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.

ಮಹಿಳಾ ಭಕ್ತರಿಗೆ ತಾನು ರಕ್ಷಣೆಗೆ ಒದಗಿಸಲಾಗದು ಎಂದು ರಾಜ್ಯ ಸರ್ಕಾರವು ಈಗಾಗಲೇ ಪ್ರಕಟಿಸಿದೆ. ಆದರೆ ಹಲವಾರು ಮಹಿಳಾ ಕಾರ್ಯಕರ್ತರು ದೇವಾಲಯ ಪ್ರವೇಶಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉನ್ನತ ಹಿಂದೂ ಸಂಘಟನೆ ಶಬರಿಮಲೈ ಕರ್ಮ ಸಮಿತಿಯು ದೇವಾಯ ಪ್ರವೇಶಿಸುವ ಮಹಿಳೆಯರನ್ನು ತಾನು ತಡೆಯುವುದಾಗಿ ಹೇಳಿದೆ.

ಮೊದಲ ಒಂದು ಗಂಟೆಯ ಅವಧಿಯಲ್ಲಿ ೧೦,೦೦೦ಕ್ಕೂ ಹೆಚ್ಚು ಮಂದಿ ಭಕ್ತರು ಪೊಲೀಸ್ ಚೆಕ್ ಪೋಸ್ಟ್ ಮೂಲಕ ಹಾದು ಹೋಗಿದ್ದಾರೆ ಎಂದು ಪಂಬಾದಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ನುಡಿದರು.

ಭಾರೀ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದರೂ, ಬಾರಿ ಬೆಟ್ಟದ ದೇಗುಲದ ತಳ ಶಿಬಿರಗಳಾದ ಪಂಬಾ ಮತ್ತು ನಿಲಕ್ಕಲ್ನಲ್ಲಿ ಬ್ಯಾರಿಕೇಡ್ಗಳು ಕಂಡು ಬಂದಿಲ್ಲ.
ನಾವು ಎಲ್ಲ ವ್ಯವಸ್ಥೆಗಳನ್ನೂ ಮಾಡಿದ್ದೇವೆ. ಬಾರಿ ಯಾವುದೇ ನಿರ್ಬಂಧಕಾಜ್ಞೆಗಳು ಇಲ್ಲ. ಆದರೆ ತೊಂದರೆ ಸೃಷ್ಟಿಸುವವರ ವಿರುದ್ಧ ನಾವು ಬಿಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಪತ್ತನಂತಿಟ್ಟ ಜಿಲ್ಲಾಧಿಕಾರಿ ಎಂ. ನುಹು ಹೇಳಿದರು.

ಭೂಮಾತಾ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ಮತ್ತು ಚೆನ್ನೈ ಮೂಲದ ಮಾನಿತಿ ಸಂಗಂ ಸದಸ್ಯೆಯರು ದೇವಾಲಯದಲ್ಲಿ ಪೂಜೆ ನೆರವೇರಿಸುವ ತಮ್ಮ ಯೋಜನೆಯನ್ನು ಪ್ರಕಟಿಸಿದ್ದಾರೆ. ಇವರ ಹೊರತಾಗಿ ೪೫ ಮಂದಿ ಮಹಿಳಾ ಭಕ್ತರುದರ್ಶನಕ್ಕಾಗಿ ದೇವಾಲಯದ ವೆಬ್ ಸೈಟಿನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿದ್ದಾರೆ.

ಸಿಪಿಐ(ಎಂ) ರಾಜ್ಯ ಸಚಿವಾಲಯವು ಸರ್ಕಾರಕ್ಕೆ ವಿಷಯದಲ್ಲಿ ವಿಳಂಬನೀತಿ ಅನುಸರಿಸುವಂತೆ ಮತ್ತು ಭಕ್ತರ ಭಾವನೆಗಳಿಗೆ ಘಾಸಿ ಮಾಡದಂತೆ ಸೂಚಿಸಿದೆ. ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಇನ್ನಷ್ಟು ಸ್ಪಷ್ಟತೆಗಾಗಿ ಕಾಯುವುದು ಉತ್ತಮ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.

ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನಪೀಠವು ಕಳೆದ ವರ್ಷದ ತನ್ನ ಆದೇಶದ ವಿರುದ್ಧ ಸಲ್ಲಿಕೆಯಾಗಿರುವ ಸುಮಾರು ೬೦ಕ್ಕೂ ಹೆಚ್ಚು ಪುನರ್ ಪರಿಶೀಲನಾ ಅರ್ಜಿಗಳನ್ನು ವಿಸ್ತೃತವಾದ ಸಪ್ತ ಸದಸ್ಯ ಸಂವಿಧಾನ ಪೀಠಕ್ಕೆ ಒಪ್ಪಿಸಲು : ಬಹುಮತದ ತೀರ್ಪಿನಲ್ಲಿ ನಿರ್ಧರಿಸಿದ ಬಳಿಕ ಶಬರಿಮಲೈ ದೇವಾಲಯದ ವರ್ಷದ ತೀರ್ಥಯಾತ್ರೆ ಆರಂಭಗೊಂಡಿದೆ. ೨೦೧೮ರ ಸೆಪ್ಟೆಂಬರ್ ತಿಂಗಳಲ್ಲಿ ನೀಡಿದ್ದ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್ ಶತಮಾನಗಳ ನಿಷೇಧವನ್ನು ರದ್ದು ಪಡಿಸಿ, ಎಲ್ಲ ವಯಸ್ಸಿನ ಮಹಿಳೆಯರಿಗೂ ದೇವಾಲಯ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತ್ತು.

ವಿಸ್ತೃತ ಸಪ್ತ ಸದಸ್ಯ ಸಂವಿಧಾನ ಪೀಠವು ಶಬರಿಮಲೈ ಮತ್ತು ಮಸೀದಿಗಳಿಗೆ ಮಹಿಳೆಯರ ಪ್ರವೇಶ ಹಾಗೂ ದಾವೂದೀ ಬೋಹ್ರಾ ಸಮುದಾಯದ ಮಹಿಳಾ ಜನನಾಂಗ ಛೇದನ (ಎಫ್ಜಿಎಂ) ಪದ್ಧತಿ ಮತ್ತು ಪಾರ್ಸಿ ಸಮುದಾಯದ ಅಗ್ನಿ ದೇಗುಲಕ್ಕೆ (ಫೈರ್ ಟೆಂಪಲ್) ಸಮುದಾಯದ ಹೊರಗಿನಿಂದ ಮದುವೆಯಾಗಿ ಬರುವ ಮಹಿಳೆಯರಿಗೆ ಪ್ರವೇಶ ನಿರಾಕರಣೆಯ ವಿಷಯವನ್ನು ಪರಿಶೀಲಿಸಲಿದೆ.

೨೦೧೮ ಸೆಪ್ಟೆಂಬರ್ ತಿಂಗಳ ಸುಪ್ರೀಂಕೋರ್ಟ್ ತೀರ್ಪು ಕೇರಳದಲ್ಲಿ ವ್ಯಾಪಕ ಪ್ರಮಾಣದ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಯುವತಿಯರನ್ನು ಭಕ್ತರು ತಡೆದಿದ್ದರು. ಅವರಲ್ಲಿ ಹಲವರಿಗೆ ಬೆದರಿಕೆ ಹಾಕಲಾಗಿತ್ತು ಮತ್ತು ತೀರ್ಪಿನ ವಿರುದ್ಧದ ಪ್ರತಿಭಟನೆ ಕಾಲದಲ್ಲಿ ದೇವಾಲಯ ಪ್ರವೇಶಿಸಲೆತ್ನಿಸಿದ ಮಹಿಳೆಯರತ್ತ ಕಲ್ಲುಗಳನ್ನೂ ತೂರಲಾಗಿತ್ತು.

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಹಲವಾರು ಪ್ರಯತ್ನಗಳನ್ನು ನಡೆಸಿದ್ದರೂ, ಪೊಲೀಸ್ ರಕ್ಷಣೆಯಲ್ಲಿ ಇಬ್ಬರು ಮಹಿಳೆಯರು ಮಾತ್ರ ದೇವಾಲಯದ ಒಳ ಪ್ರಾಂಗಣವನ್ನು ಪ್ರವೇಶಿಸಿ ಪ್ರಾರ್ಥನೆ ಮಾಡಲು ಯಶಸ್ವಿಯಾಗಿದ್ದರು.

ದೇವಾಲಯದ ಅಧಿದೇವರಾದ ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿರುವುದರಿಂದ ದೇವಾಲಯದ ಒಳಕ್ಕೆ ಋತುಮತಿ ವಯೋಮಾನದ ಮಹಿಳೆಯರನ್ನು ಬಿಡುವಂತಿಲ್ಲ ಎಂದು ಸಂಪ್ರದಾಯವಾದಿಗಳು ಪ್ರತಿಪಾದಿಸುತ್ತಾರೆ.

ಕಾಂಗ್ರೆಸ್ ಮತ್ತು ಅದರ ಕಡು ವಿರೋಧಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಎರಡೂ ಭಕ್ತರ ಭಾವನೆಗಳನ್ನು ಉಲ್ಲೆಖಿಸಿ ಸಂಪ್ರದಾಯವಾದಿಗಳ ಪ್ರತಿಭಟನೆಗಳನ್ನು ಬೆಂಬಲಿಸಿದ್ದರು.

No comments:

Advertisement