ಗ್ರಾಹಕರ ಸುಖ-ದುಃಖ

My Blog List

Wednesday, November 27, 2019

ಪ್ರಜಾತಂತ್ರ ವ್ಯವಸ್ಥೆ ಮತ್ತು ಮಹಾರಾಷ್ಟ್ರ ಜನರಿಗೆ ಸಂದ ಜಯ

ಪ್ರಜಾತಂತ್ರ ವ್ಯವಸ್ಥೆ ಮತ್ತು ಮಹಾರಾಷ್ಟ್ರ ಜನರಿಗೆ ಸಂದ ಜಯ
ಬಿಜೆಪಿ ವಿರೋಧಿಗಳ ವರ್ಣನೆ, ತಪ್ಪು ಹೆಜ್ಜೆ; ಒಪ್ಪಿದ ಬಿಜೆಪಿ
ಮುಂಬೈ: ಮಹಾರಾಷ್ಟ್ರದಲ್ಲಿ ರೋಚಕ ರಾಜಕೀಯ ತಿರುವುಗಳ ಮಧ್ಯೆ ಸದನದಲ್ಲಿ ವಿಶ್ವಾಸಮತ ಯಾಚನೆಗೆ ಸುಪ್ರೀಂಕೋರ್ಟ್ ಆದೇಶದ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಜೀನಾಮೆ ನೀಡಿದ ಘಟನಾವಳಿಗಳು ಪ್ರಜಾತಂತ್ರ ವ್ಯವಸ್ಥೆ ಮತ್ತು ಮಹಾರಾಷ್ಟ್ರದ ಜನತೆಗೆ ಸಂದ ಜಯ ಎಂಬುದಾಗಿ ಬಿಜೆಪಿಯ ವಿರೋಧಿಗಳು ಬಣ್ಣಿಸಿದರು..

ಮಧ್ಯೆ, ಬಿಜೆಪಿ-ಎನ್ಸಿಪಿ ಸರ್ಕಾರ ರಚನೆಯ ಪ್ರಸ್ತಾಪ ಮೊದಲ ಅಜಿತ್ ಪವಾರ್ ಅವರಿಂದಲೇ ಬಂದಿದ್ದು, ಅದನ್ನು ನಂಬಿ ಮುಂದುವರೆದದ್ದು ತಪ್ಪಾಯಿತು ಎಂದು ಬಿಜೆಪಿ ಧುರೀಣರು ಪ್ರತಿಕ್ರಿಯಿಸಿದರು.
ಬಿಜೆಪಿ- ಎನ್ಸಿಪಿ ಮೈತ್ರಿಯ ಪ್ರಸ್ತಾಪವನ್ನು ಇಟ್ಟಿದ್ದ ಅಜಿತ್ ಪವಾರ್ ಕನಿಷ್ಠ ೩೪ ಮಂದಿ ಶಾಸಕರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗುವರು ಎಂಬ ನಿರೀಕ್ಷೆ ಇತ್ತು. ಉಳಿದಂತೆ ಪಕ್ಷೇತರರ ಬೆಂಬಲ ಪಡೆಯಲು ಬಿಜೆಪಿ ಯೋಜಿಸಿತ್ತು. ಆದರೆ ಅಜಿತ್ ಪವಾರ್ ತಮ್ಮ ಯತ್ನದಲ್ಲಿ ಸಫಲರಾಗಲಿಲ್ಲ ಎಂದು ಬಿಜೆಪಿಯ ಇಬ್ಬರು ಧುರೀಣರು ಹೇಳಿದರು.
ಮಹಾರಾಷ್ಟ್ರದ ಬೆಳವಣಿಗೆಯು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಮುಖಕ್ಕೆ ಮಂಗಳಾರತಿ ಮಾಡಿದೆ. ಅಸಂವಿಧಾನಿಕ ರೀತಿಯಲ್ಲಿ ಅಧಿಕಾರ ಹಿಡಿಯುವ ಅವರ ಹತಾಶ ಪ್ರಯತ್ನ ಮಣ್ಣುಪಾಲಾಗಿದೆ. ದೇಶದ ಪ್ರಧಾನಿ ಮತ್ತು ಬಿಜೆಪಿ ಇಷ್ಟು ನೀಚ ಮಟ್ಟಕ್ಕೆ ಇಳಿದಿದ್ದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದರು.

ಕರ್ನಾಟಕದ ಮಾಜಿ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು, ದೇಶಾದ್ಯಂತ ಬಿಜೆಪಿಯ ಪತನ ಮಹಾರಾಷ್ಟ್ರದಿಂದ   ಆರಂಭವಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಅನಿಶ್ಚಿತ ಪರಿಸ್ಥಿತಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರು ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ವರಿಷ್ಠ ರಣದೀಪ್ ಸಿಂಗ್ ಸುರ್ಜೆವಾಲ ಆಗ್ರಹಿಸಿದರು.

ಇದು ಸಂವಿಧಾನಿಕ ಪ್ರಜಾತಂತ್ರಕ್ಕೆ ಸಂದ ಜಯ. ಬಿಜೆಪಿಯವರು ಕುದುರ ವ್ಯಾಪಾರ ಮಾಡಿ ಸರ್ಕಾರ ಮಾಡಬಹುದು ಎಂದೆಣಿಸಿದ್ದರು. ಇದು ದೇವೇಂದ್ರ ಫಡ್ನವಿಸ್ ಅವರ ವೈಫಲ್ಯವಷ್ಟೇ ಅಲ್ಲ ದಿಲ್ಲಿಯಲ್ಲಿರುವ ಅವರ ಗುರುಗಳಿಗೆ ಕಪಾಳಮೋಕ್ಷವಾದಂತಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಹಾಗೂ ಕೇರಳ ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಹೇಳಿದರು.

ಇವತ್ತು ಸಂವಿಧಾನದ ದಿನ. ಸಂವಿಧಾನ ಪಾಲಿಸುವವರಿಗೆ ಗೆಲುವು ಸಿಕ್ಕಿದೆ. ಸಂವಿಧಾನಾತ್ಮಕ ವಿಶೇಷ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಉತ್ತರ ಪ್ರದೇಶ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಒತ್ತಾಯಿಸಿದರು.

ಇವರುಬೆಳಗಿನ ಪ್ರಮಾದ ಮಾಡಿ ವಿಶ್ವದ ಮುಂದೆ ದೇಶಕ್ಕೆ ಮುಜುಗರ ಉಂಟು ಮಾಡಿದರು ಎಂದು ಹೇಳುವ ಮೂಲಕ ಶನಿವಾರ ಬೆಳ್ಳಂಬೆಳಗ್ಗೆಯೇ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದ ರಾಜ್ಯಪಾಲರಿಗೂ ಅಖಿಲೇಶ್ ಪರೋಕ್ಷವಾಗಿ ಕುಟುಕಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೂ ಸಂವಿಧಾನದ ದಿನದಂದು ಸಂವಿಧಾನಕ್ಕೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆಯು ಮಹಾರಾಷ್ಟ್ರ ಜನತೆಗೆ ಸಿಕ್ಕ ಜಯವಾಗಿದೆ ಎಂದು ಎನ್ಸಿಪಿ ವಕ್ತಾರ ನವಾಬ್ ಮಲಿಕ್ ಅಭಿಪ್ರಾಯಪಟ್ಟರು. ಇದು ಪ್ರಜಾತಂತ್ರ ವ್ಯವಸ್ಥೆಯ ಒಂದು ಅದ್ಭುತ ಎಂದು ಪಶ್ಚಿಮ ಬಂಗಾಳದ ವಿಧಾನಸಭಾಧ್ಯಕ್ಷ ಬಿಮಾನ್ ಬ್ಯಾನರ್ಜಿ ಹೇಳಿದರು.

No comments:

Advertisement