My Blog List

Thursday, November 21, 2019

ಮಹಾರಾಷ್ಟ್ರದಲ್ಲಿ ಶೀಘ್ರ ಶಿವಸೇನೆ ಜೊತೆಗೆ ಸರ್ಕಾರ

ಮಹಾರಾಷ್ಟ್ರದಲ್ಲಿ ಶೀಘ್ರ ಶಿವಸೇನೆ ಜೊತೆಗೆ ಸರ್ಕಾರ
ಎನ್ಸಿಪಿ ಜೊತೆಗಿನ ಮಾತುಕತೆ ಧನಾತ್ಮಕ: ಕಾಂಗ್ರೆಸ್
ನವದೆಹಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಶರದ್ ಪವಾರ್ ಅವರ ದೆಹಲಿ ನಿವಾಸದಲ್ಲಿ 2019 ನವೆಂಬರ್ 20ರ ಬುಧವಾರ ಎನ್ಸಿಪಿ ಜೊತೆಗೆ ಪಕ್ಷವು ನಡೆದ ಮಾತುಕತೆಗಳು ಧನಾತ್ಮಕವಾಗಿದ್ದು, ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಸುಸ್ಥಿರ ಸರ್ಕಾರ ಒದಗಿಸುವ ಬಗ್ಗೆ ಪಕ್ಷವು ಆತ್ಮವಿಶ್ವಾಸ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಪೃಥ್ವೀರಾಜ್ ಚವಾಣ್ ಅವರು ಸಭೆಯ ಬಳಿಕ ಪ್ರಕಟಿಸಿದರು.
ಚವಾಣ್ ಅವರ ಹೇಳಿಕೆಗೆ ಕೆಲವೇ ನಿಮಿಷಗಳ ಮುನ್ನ ಶಿವಸೇನಾ ನಾಯಕ ಸಂಜಯ್ ರಾವತ್ ಅವರು ಮೈತ್ರಿಕೂಟವು ಶೀಘ್ರದಲ್ಲೇ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದರು.

ಎನ್ಸಿಪಿ ನಾಯಕ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸುಮಾರು ೫೦ ನಿಮಿಷಗಳ ಕಾಲ ಮಾತುಕತೆ ನಡೆಸಿದ ಕೆಲವೇ ಗಂಟೆಗಳ ಬಳಿಕ ಪವಾರ್ ಅವರ ದೆಹಲಿ ನಿವಾಸದಲ್ಲಿ ಶಿವಸೇನೆ ಜೊತೆಗೆ ಮೈತ್ರಿಕೂಟ ಸರ್ಕಾರ ರಚಿಸುವ ಬಗ್ಗೆ ಕಾಂಗ್ರೆಸ್ ಪಕ್ಷವು ಎನ್ಸಿಪಿ ಜೊತೆಗೆ ಮಾತುಕತೆ ನಡೆಸಿತ್ತು.

ಮಾತುಕತೆಯ ಬಳಿಕ ಕಾಂಗ್ರೆಸ್ ಮತ್ತು ಎನ್ಸಿಪಿ ಸರ್ಕಾರ ರಚನೆ ನಿಟ್ಟಿನಲ್ಲಿ ಶಿವಸೇನೆ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯ ಸಮೀಪಕ್ಕೆ ಬಂದಿದೆ ಎಂದು ವರದಿಗಳು ಹೇಳಿದವು.

ಮೈತ್ರಿಕೂಟದ ಸ್ವರೂಪ ಮಾತುಕತೆಯೊಂದಿಗೆ ರೂಪುಗೊಳ್ಳುತ್ತಿದ್ದು, ಕಾಂಗ್ರೆಸ್ ನಾಯಕರೊಬ್ಬರು ಶಿವಸೇನೆಯ ಸಂಜಯ್ ರಾವತ್ ಅವರ ಜೊತೆಗೂ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಅವರೂ ಸರ್ಕಾರ ರಚನೆ ಬಗ್ಗೆ ಧನಾತ್ಮಕ ನಿಲವು ತಳೆದಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಸೋನಿಯಾ ಗಾಂಧಿಯವರು ಪ್ರಾರಂಭದಿಂದಲೂ ಸೈದ್ಧಾಂತಿಕವಾಗಿ ಪಕ್ಷಕ್ಕೆ ವಿರುದ್ಧವಾಗಿರುವ ಮತ್ತು ಹಿಂದುತ್ವದ ಪರ ನಿಲುವು ಹೊಂದಿರುವ ಹಾಗೂ ದೀರ್ಘಕಾಲದಿಂದ ಬಿಜೆಪಿ ಜೊತೆಗಿದ್ದು, ಮಹಾರಾಷ್ಟ್ರ ಚುನಾವಣೆ ಬಳಿಕ ಅಧಿಕಾರ ಹಂಚಿಕೆ ವಿಚಾರದಲ್ಲಿ ಭಿನ್ನಮತ ತಾಳಿ ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಶಿವಸೇನೆ ಜೊತೆಗೆ ಕೈಜೋಡಿಸಲು ನಿರಾಸಕ್ತಿ ಹೊಂದಿದ್ದರು.

ಇದೀಗ ಲಭಿಸಿರುವ ವರದಿಗಳ ಪ್ರಕಾರ ಶಿವಸೇನೆಯು ಮುಖ್ಯಮಂತ್ರಿ ಹುದ್ದೆಯನ್ನು ಎನ್ಸಿಪಿ ಜೊತೆಗೆ ಹಂಚಿಕೊಳ್ಳಬೇಕು ಎಂದು ಹೇಳಲಾಗುತ್ತಿದ್ದು, ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರಿಗೆ ಮೊದಲ ಅವಧಿಯ ಮುಖ್ಯಮಂತ್ರಿ ಸ್ಥಾನ ಲಭಿಸುವುದು ಎನ್ನಲಾಗುತ್ತಿದೆ. ಎರಡು ಉಪಮುಖ್ಯಮಂತ್ರಿ ಸ್ಥಾನಗಳನ್ನು ಎನ್ ಸಿಪಿ ಮತ್ತು ಕಾಂಗ್ರೆಸ್ ಹೊಂದಲಿವೆ ಎನ್ನಲಾಗುತ್ತಿದೆ.

No comments:

Advertisement