My Blog List

Thursday, November 21, 2019

ಮಹೀಂದಾ ರಾಜಪಕ್ಸ ಶ್ರೀಲಂಕೆಯ ಮುಂದಿನ ಪ್ರಧಾನಿ; ಅಧ್ಯಕ್ಷ ಗೋಟಬಯ ಘೋಷಣೆ

ಮಹೀಂದಾ ರಾಜಪಕ್ಸ ಶ್ರೀಲಂಕೆಯ ಮುಂದಿನ ಪ್ರಧಾನಿ; ಅಧ್ಯಕ್ಷ ಗೋಟಬಯ ಘೋಷಣೆ
ಕೊಲಂಬೋ: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಗೋಟಬಯ ರಾಜಪಕ್ಸ ಅವರು ನಿರೀಕ್ಷೆಯಂತೆ ಶ್ರೀಲಂಕಾದ ಮಾಜಿ ಅಧ್ಯಕ್ಷ, ಹಿರಿಯ ಅಣ್ಣ ಮಹೀಂದಾ ರಾಜಪಕ್ಸ ಅವರನ್ನು ದೇಶದ  ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ವರದಿಗಳು ಹೇಳಿದವು.

ಇದಕ್ಕೆ ಮುನ್ನ ಚುನಾವಣಾ ಪರಾಭವವನ್ನು ಅನುಸರಿಸಿ 2019 ನವೆಂಬರ್ 20ರ ಬುಧವಾರ ಬೆಳಗ್ಗೆ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ರಾಜೀನಾಮೆಯನ್ನು ಪ್ರಕಟಿಸಿದ್ದರು.

ದಶಕಗಳ ಹಿಂದೆ ಶ್ರೀಲಂಕಾದ ಅಂತರ್ಯುದ್ಧ ಹಾಗೂ ತಮಿಳ್ ಟೈಗರ್ಸ್ ಬಂಡಾಯವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಂದು ಶ್ರೀಲಂಕಾದ ಅಧ್ಯಕ್ಷರಾಗಿದ್ದ ಮಹೀಂದಾ ರಾಜಪಕ್ಸ ಅವರು ತಮ್ಮ ಕಿರಿಯ ಸಹೋದರ ಗೋಟಬಯ ಅವರನ್ನು ಸೇನೆಯ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು.

ಬಳಿಕ ಶ್ರೀಲಂಕಾ ಸೇನೆಯು ಎಲ್ಟಿಟಿಇ ಮುಖ್ಯಸ್ಥ ಪ್ರಭಾಕರನ್ ಮತ್ತು ಆತನ ಉಗ್ರಗಾಮಿ ಸಂಘಟನೆಯನ್ನು ಹೊಡೆದುರುಳಿಸುವ ಮೂಲಕ ತಮಿಳು ಟೈಗರ್ಸ್ ಅಟ್ಟಹಾಸದ ಹುಟ್ಟಡಗಿಸಿತ್ತು.
ಮಹೀಂದಾ ರಾಜಪಕ್ಸ ಅವರು ಶೀಘ್ರವೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾನಿಲ್ ವಿಕ್ರಮಸಿಂಘೆ ಅವರು ಗುರುವಾರ ಬೆಳಗ್ಗೆ ಅಧಿಕಾರದಿಂದ ಅಧಿಕೃತವಾಗಿ ಕೆಳಗಿಳಿದ ನಂತರ ರಾಜಪಕ್ಸ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸರ್ಕಾರದ ವಕ್ತಾರ ವಿಜಯಾನಂದಾ ಹೆರಾಥ್ ತಿಳಿಸಿದರು.

ಕಳೆದ ವರ್ಷ ಅಕ್ಟೋಬರ್ ೨೬ರಂದು ಆಗಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ವಿವಾದಾತ್ಮಕ ಕ್ರಮವೊಂದರಲ್ಲಿ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಮಹಿಂದ ರಾಜಪಕ್ಸ ಅವರನು ಪ್ರಧಾನಿಯಾಗಿ ನೇಮಿಸಿದ್ದರು. ಸಿರಿಸೇನಾ ಅವರ ಕ್ರಮ ಶ್ರೀಲಂಕೆಯಲ್ಲಿ ಹಿಂದೆಂದೂ ಕಾಣದ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿ ಮಾಡಿತ್ತು. ಸುಪ್ರೀಂಕೋರ್ಟಿನ ಎರಡು ನಿರ್ಣಾಯಕ ತೀರ್ಪುಗಳ ಬಳಿಕ ರಾಜಪಕ್ಸ ಅವರು ಡಿಸೆಂಬರ್ ತಿಂಗಳಲ್ಲಿ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದರು.

ಸುಪ್ರೀಂಕೋರ್ಟ್ ಆಗ ಸಿರಿಸೇನಾ ಅವರು ಸಂಸತ್ ವಿಸರ್ಜನೆ ಮಾಡಿದ್ದನ್ನು ಅಕ್ರಮ ಎಂಬುದಾಗಿ ಸುಪ್ರೀಂಕೋರ್ಟ್ ಸರ್ವಾನುಮತದ ತೀರ್ಪು ನೀಡಿತ್ತು.

ಮಹಿಂದಾ ರಾಜಪಕ್ಸ ಅವರು ೨೦೦೫ರಲ್ಲಿ ಗೆದ್ದು ಅಧಿಕಾರಕ್ಕೆ ಏರಿದ್ದರು ಮತ್ತು ದಕ್ಷಿಣ ಏಷ್ಯಾದಲ್ಲೇ ಅತ್ಯಂತ ದೀರ್ಘಕಾಲ ಆಡಳಿತ ನಡೆಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ೧೯೭೦ರಲ್ಲಿ ಅವರು ರಾಷ್ಟ್ರದ ಅತ್ಯಂತ ಕಿರಿಯ ಸಂಸದ ಎಂಬ ಕೀರ್ತಿಗೂ ಪಾತ್ರರಾಗಿದ್ದರು. ಆಗ ಅವರ ವಯಸ್ಸು ಕೇವಲ ೨೪ ವರ್ಷ.

ರಾಜಪಕ್ಸ ಸಹೋದರರು ರಾಷ್ಟ್ರದ ಅಂತರ್ಯುದ್ಧದ ಸಮಯದಲ್ಲಿ ನಿರ್ಣಾಯಕ ಪಾತ್ರ ವಹಿಸಿ, ಮೂರು ದಶಕಗಳ ಅಂತರ್ಯುದ್ಧಕ್ಕೆ  ತೆರೆ ಎಳೆದಿದ್ದರು. ಜೊತೆಗೇ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್ಟಿಟಿಇ) ಅಟ್ಟಹಾಸವನ್ನು ಕೊನೆಗೊಳಿಸಿದ್ದರು.

ಆಡಳಿತಾರೂಢ ಪಕ್ಷದ ಅಭ್ಯರ್ಥಿ ವಿಕ್ರಮಸಿಂಘೆ ಅವರ ಸಹಾಯಕ ಸಾಯಿಜಿತ್ ಪ್ರೇಮದಾಸ ಅವರು ಗೊಟಬಯ ರಾಜಪಕ್ಸ ಅವರ ಎದುರು ಅಧ್ಯಕ್ಷೀಯ ಚುನಾವಣೆಯಲ್ಲಿ ಪರಾಭವಗೊಂಡ ಕೆಲವುದಿನಗಳ ಬಳಿಕ ವಿಕ್ರಮಸಿಂಘೆ ಅವರು ಬುಧವಾರ ಬೆಳಗ್ಗೆ ಪ್ರಧಾನಿ ಹುದ್ದೆಗೆ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದರು.

ಸಿಂಹಳ ಭಾಷೆಯಲ್ಲಿ ನೀಡಿದ ವಿಶೇಷ ಹೇಳಿಕೆಯಲ್ಲಿ ಪ್ರಧಾನಿಯವರು ತಾವು ಮಂಗಳವಾರ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರನ್ನು ಭೇಟಿ ಮಾಡಿ ಶ್ರೀಲಂಕೆಯ ಭವಿಷ್ಯದ ಸಂಸತ್ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿರುವುದಾಗಿಯೂ ಕೊಲಂಬೋ ಗಜೆಟ್ ಸುದ್ದಿ ಪತ್ರಿಕೆ ವರದಿ ಮಾಡಿತು.

ತಮ್ಮ ಸರ್ಕಾರವು ಈಗಲೂ ಸಂಸತ್ತಿನಲ್ಲಿ ಬಹುಮತ ಹೊಂದಿದ್ದರೂ ಅಧ್ಯಕ್ಷೀಯ ಚುನಾವಣೆಯಲ್ಲಿ ಜನತೆಯು ರಾಜಪಕ್ಸ ಅವರಿಗೆ ನೀಡಿರುವ ಜನಾದೇಶಕ್ಕೆ ಗೌರವ ಕೊಟ್ಟು ಅಧಿಕಾರದಿಂದ ಇಳಿಯಲು ನಿರ್ಧರಿಸಿರುವುದಾಗಿ ವಿಕ್ರಮಸಿಂಘೆ ತಿಳಿಸಿದರು.

ನೂತನ ಅಧ್ಯಕ್ಷರಿಗೆ ಹೊಸ ಸರ್ಕಾರ ರಚನೆಗೆ ಅನುಕೂಲವಾಗುವಂತೆ ಮಾಡಲು ನಾನು ಅಧಿಕಾರದಿಂದ ಕೆಳಗಿಳಿಯುವೆ. ನಾನು ಅಧಿಕೃತವಾಗಿ ನನ್ನ ನಿರ್ಧಾರವನ್ನು ಅವರಿಗೆ ನಾಳೆ ತಿಳಿಸುವೆ ಎಂದು ವಿಕ್ರಮಸಿಂಘೆ ಹೇಳಿದ್ದರು. ವಿಕ್ರಮಸಿಂಘೆ ಅವರು ೧೯೯೪ರಿಂದ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ನಾಯಕರಾಗಿದ್ದು ಶ್ರೀಲಂಕಾದ ಪ್ರಧಾನಿಯಾಗಿ ಒಟ್ಟು ಮೂರು ಅವಧಿಗಳಲ್ಲಿ ಸೇವೆ ಸಲ್ಲಿಸಿದ್ದರು.

No comments:

Advertisement