My Blog List

Friday, December 20, 2019

ಪೌರತ್ವ ಕಾಯ್ದೆ: ರಾಷ್ಟ್ರವ್ಯಾಪಿ ಪ್ರತಿಭಟನೆ, ಗುಂಡೇಟಿಗೆ 3 ಸಾವು

ಪೌರತ್ವ ಕಾಯ್ದೆ: ರಾಷ್ಟ್ರವ್ಯಾಪಿ ಪ್ರತಿಭಟನೆ, ಗುಂಡೇಟಿಗೆ 3 ಸಾವು
ಮಂಗಳೂರಿನಲ್ಲಿ ಗುಂಡೇಟಿಗೆ 2 ಬಲಿ,  ಕರ್ಫ್ಯೂ ಜಾರಿ
ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನ ಮೂರು ನೆರೆ ರಾಷ್ಟ್ರಗಳಲ್ಲಿ ೨೦೧೪ಕ್ಕೂ ಮುನ್ನ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ವಲಸೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯು ಪೌರತ್ವ ಒದಗಿಸುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ 2019 ಡಿಸೆಂಬರ್ 19ರ ಗುರುವಾರ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕಾಲದಲ್ಲಿ ಗುಂಡೇಟಿಗೆ 3 ಮಂದಿ ಬಲಿಯಾಗಿ ಹಲವರು ಗಾಯಗೊಂಡರು.

ರಾಷ್ಟ್ರವ್ಯಾಪಿ, ಪ್ರತಿಭಟನೆ, ಮೆರವಣಿಗೆ, ಸಭೆಗಳು ಉತ್ತರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ಹಲವೆಡೆ ಹಿಂಸೆಗೆ ತಿರುಗಿದವು. ಉತ್ತರಪ್ರದೇಶದಲ್ಲಿ ಒಂದು ಸಾವು ಸಂಭವಿಸಿ, ಜನ ಗಾಯಗೊಂಡರೆ, ಕರ್ನಾಟಕದ ಮಂಗಳೂರಿನಲ್ಲಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆದು 14 ಮಂದಿ  ಗಾಯಗೊಂಡ ರು. ಪೊಲೀಸ್ ಗೋಲಿಬಾರಿಗೆ ಇಬ್ಬರು ಬಲಿಯಾಗಿದ್ದು, ಹಿಂಸಾಚಾರದ ಬಳಿಕ ಕರ್ಫ್ಯೂ ಜಾರಿಗೊಳಿಸಲಾಯಿತು.

ಪ್ರತಿಭಟನೆಗಳ ಪರಿಣಾಮವಾಗಿ ದೆಹಲಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ೧೯ ವಿಮಾನಗಳ ಸಂಚಾರ ರದ್ದಾಯಿತು. ಗುರುಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮವಾಗಿ ೧೬ ವಿಮಾನಗಳ ಪಯಣ ವಿಳಂಬಗೊಂಡಿತು. ಜಂತರ್-ಮಂತರ್ ನಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಕೆಂಪುಕೋಟೆ ಬಳಿ ನಿಷೇಧಾಜ್ಞೆ ಉಲ್ಲಂಘಿಸಿದವರನ್ನು ಪೊಲೀಸರು ಬಂಧಿಸಿದರೂ, ಬಳಿಕ ಪ್ರತಿಭಟನಕಾರರ ಸಂಖ್ಯೆ ಹೆಚ್ಚುತ್ತಲೇ ಹೋಯಿತು.

ಮಧ್ಯೆ, ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದಲ್ಲಿ ಭಾನುವಾರ ಸಂಭವಿಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಲಾಠಿ ಪ್ರಯೋಗಿಸದಂತೆ ಕೇಂದ್ರ ಗೃಹ ಸಚಿವಾಲಯವು ದೆಹಲಿ ಪೊಲೀಸರಿಗೆ ಕಠಿಣ ಸಂದೇಶ ನೀಡಿತು. ವಿದ್ಯಾರ್ಥಿಗಳಿಗೂ ಬೀದಿಗೆ ಇಳಿಯುವ ಮುನ್ನ ಕಾನೂನನ್ನು ಓದಿಕೊಳ್ಳುವಂತೆ ಸೂಚಿಸಿತು.

ಗುವಾಹಟಿ ಹೈಕೋರ್ಟ್ ಗುರುವಾರ ಸಂಜೆ ಗಂಟೆಯ ಒಳಗಾಗಿ ಇಂಟರ್ ನೆಟ್ ಸಂಪರ್ಕ ಪುನಃಸ್ಥಾಪನೆ ಮಾಡುವಂತೆ ಅಸ್ಸಾಮ್ ಸರ್ಕಾರಕ್ಕೆ ಆಜ್ಞಾಪಿಸಿದ್ದು, ಶುಕ್ರವಾರದ ವೇಳೆಗೆ ಇಂಟರ್ ನೆಟ್ ಪುನಸ್ಥಾಪನೆ ಮಾಡಲಾಗುವುದು ಎಂದು ಅಸ್ಸಾಮ್ ಸರ್ಕಾರದ ಸಚಿವ ಹಿಮಂತ ಬಿಸ್ವ ಸರ್ಮಗುರುವಾರ ರಾತ್ರಿ ತಿಳಿಸಿದರು.

ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳ ವೇಳೆ ಒಬ್ಬ ವ್ಯಕ್ತಿ ಮೃತನಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಸಾವು ನೋವು ಕಲ್ಲೇಟಿನಿಂದ ಆಗಿದೆಯೇ ಅಥವಾ ಪೊಲೀಸರ ಗುಂಡೇಟಿನಿಂದಲೇ ಎಂಬುದು ಸ್ಪಷ್ಟವಾಗಿಲ್ಲ. ಲಕ್ನೋ ವಿಶ್ವ ವಿದ್ಯಾಲಯವು ಪರೀಕ್ಷೆಗಳನ್ನು ರದ್ದು ಪಡಿಸಿತು. ಉತ್ತರ ಪ್ರದೇಶದ ಸಂಭಲ್ನಲ್ಲಿ ರಸ್ತೆ ಸಾರಿಗೆ ಬಸ್ಸೊಂದಕ್ಕೆ ಬೆಂಕಿ ಹಚ್ಚಿದರೆ, ಲಕ್ನೋದಲ್ಲಿ ಪೊಲೀಸ್ ಪೋಸ್ಟ್ ಒಂದಕ್ಕೆ ಬೆಂಕಿ ಹಚ್ಚಲಾಯಿತು.

ಕರ್ನಾಟಕದ ಬೆಂಗಳೂರಿನಲ್ಲಿ ಉದ್ರಿಕ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರೆ, ಮಂಗಳೂರಿನಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದು ಒಬ್ಬರು ಗಾಯಗೊಂಡ ಬಳಿಕ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕರ್ಫ್ಯೂ ಮತ್ತು ನಗರದಾದ್ಯಂತ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ  ಜಾರಿ ಮಾಡಲಾಯಿತು. ಮಧ್ಯಪ್ರದೇಶದ ೪೪ ಜಿಲ್ಲೆಗಳಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಲಾಯಿತು.

ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿಶ್ವಸಂಸ್ಥೆ ನಿಗಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜನಮತಗಣನೆ ನಡೆಯಬೇಕು ಎಂದು ಆಗ್ರಹಿಸಿದರೆ, ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷದ ನಾಯಕ ಸೀತಾರಾಂ ಯೆಚೂರಿ ದೆಹಲಿ ಪರಿಸ್ಥಿತಿ ತುರ್ತುಸ್ಥಿತಿಗಿಂತಲೂ ಹೀನಾಯವಾಗಿದೆ ಎಂದು ದೂರಿದರು.

ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿ ಪರಿಶೀಲಿಸಲು ಉನ್ನತ ಮಟ್ಟದ ಸಭೆಯನ್ನು ಗೃಹ ಸಚಿವ ಅಮಿತ್ ಶಾ ನಡೆಸಿದರು. ಅದಕ್ಕೂ ಮುನ್ನ, ಗೃಹ ಸಚಿವಾಲಯದ ಉಪ ಸಚಿವ  ಜಿ. ಕಿಶನ್ ರೆಡ್ಡಿ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಕ್ಕಾಗಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ವಿದ್ಯಾರ್ಥಿಗಳಿಗೆ ರಸ್ತೆಗೆ ಇಳಿಯುವ ಮುನ್ನ ಮೊದಲ ಕಾಯ್ದೆಯನ್ನು ಓದಿಕೊಳ್ಳಿ ಎಂದು ಸೂಚಿಸಿದರು.

ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ನಿಭಾಯಿಸಿದ ಸಂದರ್ಭದ ಪೊಲೀಸರ ವರ್ತನೆ ತೀವ್ರ ಟೀಕೆಗೆ ಈಡಾದ ಹಿನ್ನೆಲೆಯಲ್ಲಿದೆಹಲಿ ಪೊಲೀಸರು ಈಗ ಯಾರನ್ನೂ ಹೊಡೆಯುವುದಿಲ್ಲ. (ಪೊಲೀಸರ ಪೈಕಿ) ಯಾರು ಕೂಡಾ ಚಳವಳಿ ಅಥವಾ ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಮೇಲೆ ಶಸ್ತ್ರ ಅಥವಾ ಲಾಠಿ ಎತ್ತುವುದಿಲ್ಲಎಂದು ಕಿಶನ್ ರೆಡ್ಡಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ರಾಷ್ಟ್ರವ್ಯಾಪಿ ಪ್ರತಿಭಟನೆ: ಎಡಪಕ್ಷಗಳು ಸೇರಿದಂತೆ ಹಲವಾರು ವಿರೋಧ ಪಕ್ಷಗಳು ನೀಡಿದ ಕರೆಯ ಮೇರೆಗೆ ಗುರುವಾರ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದ ವರದಿಗಳು ಬಂದಿವೆ.   
ದೆಹಲಿಯಲ್ಲಿ ಪೊಲೀಸರು ನೆರೆಯ ಜಿಲ್ಲೆಗಳಿಂದ ಜನರ ಪ್ರವೇಶಕ್ಕೆ ತಡೆ ಹಾಕುವುದರ ಜೊತೆಗೆ ರಾಷ್ಟ್ರದ ರಾಜಧಾನಿಯ ಹಲವು ಭಾಗಗಳಲ್ಲಿ ಮೊಬೈಲ್ ಸೇವೆಗಳನ್ನು ಸುಮಾರು ಐದು ಗಂಟೆಗಳ ಕಾಲ ಅಮಾನತುಗೊಳಿಸಿದರು ಮತ್ತು ೨೦ ಮೆಟ್ರೋ ನಿಲ್ದಾಣಗಳಲ್ಲಿ ಒಂದೊಂದು ಕಡೆ ಸಂಚಾರ ಬಂದ್ ಮಾಡಿಸಿದರು.

ಉತ್ತರ ಪ್ರದೇಶದಂತಹ ಕೆಲವು ರಾಜ್ಯಗಳಿಂದ ದೊಂಬಿ ಮತ್ತು ಹಿಂಸಾಚಾರದ ವರದಿಗಳು ಬಂದವು.

ದೇಶದ ವಿವಿಧ ಕಡೆಗಳಿಂದ ಬಂದಿರುವ ವರದಿಗಳ ಪ್ರಕಾರ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ.  ಲಕ್ನೋದಲ್ಲಿ - ಸಣ್ಣಪುಟ್ಟ ಘಟನೆಗಳು ನಡೆದಿವೆ ಎಂದು ಕಿಶನ್ ರೆಡ್ಡಿ ವರದಿಗಳನ್ನು ಉಲ್ಲೇಖಿಸಿ ಹೇಳಿದರು.

ಮುಂದಿನ - ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಪರಿಸ್ಥಿತಿ ಸಹಜಗೊಳ್ಳಲಿದೆ ಎಂಬುದು ನಮ್ಮ ನಿರೀಕ್ಷೆ ಎಂದು ಹೇಳಿದ ಅವರು, ಪೌರತ್ವ ಕಾಯ್ದೆಯಲ್ಲಿ ವಿರೋಧಿಸುವಂತಹ ಯಾವ ಅಂಶಗಳೂ ಇಲ್ಲ ಎಂದು ಒತ್ತಿ ಹೇಳಿದರು.

ಮೂರು ದೇಶಗಳ ದಾಖಲೆಗಳಿಲ್ಲದ ಹಿಂದುಗಳಿಗೆ ಪೌರತ್ವ ನೀಡುತ್ತಿರುವುದು, ಮುಸ್ಲಿಮ್ ವಲಸಿಗರನ್ನು ಹೊರಹಾಕಲು ರಾಷ್ಟೀಯ ಪೌರತ್ವ ನೋಂದಣಿ ಯೋಜನೆ ಜಾರಿಮಾಡುವುದಕ್ಕಾಗಿ ಮಾಡುತ್ತಿರುವ ಪೂರ್ವ ಕಸರತ್ತುಎಂಬ ವಿರೋಧ ಪಕ್ಷಗಳ ಟೀಕೆಯನ್ನು ಅಲ್ಲಗಳೆದ ರೆಡ್ಡಿಇದು ಸತ್ಯವಲ್ಲಎಂದು ನುಡಿದರು.

ಯಾರನ್ನೂ ಕೂಡಾ ಪತ್ತೆ ಶಿಬಿರಗಳಿಗೆ ಕಳುಹಿಸುವ ಅಥವಾ ಅವರನ್ನು ದೇಶದಿಂದ ಹೊರಕ್ಕೆ ಹಾಕುವಂತಹ ಯಾವುದೇ ಕಾರ್ಯಸೂಚಿ ನಮ್ಮ ಮುಂದಿಲ್ಲ. ರಾಜಕೀಯ ಪಕ್ಷಗಳು ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸಬಾರದುಎಂದು ಅವರು ನುಡಿದರು.

ವಿದ್ಯಾರ್ಥಿಗಳು ಏಕೆ ಪ್ರತಿಭಟಿಸುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ.. ಶಾಂತಿ ಕಾಪಾಡಿ, ನಾವು ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧರಿದ್ದೇವೆ.’ ಎಂದು ನುಡಿದ ಅವರುಪ್ರತಿಭಟಿಸಲು ಜನರು ಮುಕ್ತರಾಗಿದ್ದಾರೆ, ಆದರೆ ಹಿಂಸಾಚಾರ ನಿರತರಾಗುವುದನ್ನು ಸಹಿಸಲು ಸಾಧ್ಯವಿಲ್ಲಎಂದು ಎಚ್ಚರಿಸಿದರು.

ದೆಹಲಿಯಲ್ಲಿ ವದಂತಿ ಹರಡುವವರು, ಮತ್ತು ಹಿಂಸಾಚಾರ ನಡೆಸುವವರನ್ನು ತಪಾಸಿಸಲು ಕ್ರಮ ಕೈಗೊಳ್ಳಲಾಗಿದೆ. ಉದ್ದೇಶಿತ ಪ್ರತಿಭಟನೆಗಳನ್ನು ಹಿಂಸಾಚಾರಕ್ಕೆ ಬಳಸಲು ಕ್ರಿಮಿನಿಲ್ ಶಕ್ತಿಗಳು ಹೊಂಚು ಹಾಕುತ್ತಿರುವ ವರದಿಗಳು ನಮಗೆ ಬಂದಿವೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದರು.

ದೆಹಲಿಗೆ ಹೊರಗಿನ ಜಿಲ್ಲೆಗಳಿಂದ ಬರುವ ಎಲ್ಲ ಮಾರ್ಗಗಳಲ್ಲೂ ಪೊಲೀಸರು ತಪಾಸಣೆ ನಡೆಸಲು ಅಡ್ಡಗಟ್ಟೆ ಹಾಕಿದ ಪರಿಣಾಮವಾಗಿ ದೆಹಲಿಯ ಗಡಿಗಳಲ್ಲಿ ವಾಹನಗಳ ಉದ್ದುದ್ದದ ಸಾಲುಗಳು ಕಂಡು ಬಂದವು.

ಕೆಂಪುಕೋಟೆ ಮತ್ತು ಮಂಡಿ ಹೌಸ್ ಪ್ರದೇಶದಲ್ಲಿ ನಿಷೇಧಾಜ್ಞೆ  ವಿಧಿಸಿದ್ದರಿಂದ ಪ್ರತಿಭಟನಾ ಸಭೆ ನಡೆಸಲಾಗದ ಕಾರಣ ಭಾರೀ ಸಂಖ್ಯೆಯ ಪ್ರತಿಭಟನಕಾರರು ದೆಹಲಿಯ ಜಂತರ್ ಮಂತರ್ ನಲ್ಲಿ ಜಮಾಯಿಸಿದರು. ಎಡಪಕ್ಷಗಳ ನಾಯಕರಾದ ಡಿ. ರಾಜಾ, ಸೀತಾರಾಂ ಯೆಚೂರಿ, ನೀಲೋತ್ಪಲ್ ಬಸು, ಬೃಂದಾ ಕಾರಟ್, ಕಾಂಗ್ರೆಸ್ಸಿನ ಅಜಯ್ ಮಾಕನ್, ಸಂದೀಪ ದೀಕ್ಷಿತ್, ಸಾಮಾಜಿಕ ಕಾರ್ಯಕರ್ತರಾದ ಯೋಗೇಂದ್ರ ಯಾದವ್, ಉಮರ್ ಖಾಲಿದ್ ಮತ್ತಿತರರನ್ನು ಪ್ರತಿಭಟನೆ ನಡೆಸಲು ಯತ್ನಿಸಿದಾಗ  ಕೆಂಪುಕೋಟೆ ಮತ್ತು ಮಂಡಿ ಹೌಸ್ ಸಮೀಪ ಪೊಲೀಸರು ಬಂಧಿಸಿದರು.

ಜಂತರ್ ಮಂತರ್ ಸುತ್ತ ಮುತ್ತ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಜನರು ಅಲ್ಲಿಂದ ಬೇರೆ ಕಡೆಗೆ ತೆರಳದಂತೆ ತಡೆಯಲು ಅಡ್ಡಗಟ್ಟೆಗಳನ್ನು ಹಾಕಲಾಯಿತು. ಮತ್ತು ಯಾವುದೇ ಅಹಿತರಕರ ಘಟನೆ ತಡೆಯಲು ಜಲಫಿರಂಗಿಗಳನ್ನು ನಿಯೋಜಿಸಲಾಯಿತು. ಶಾಂತಿ ಕಾಪಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರಿಗೆ ಮನವಿ ಮಾಡಿದರು.

ಕನಿಷ್ಠ ೧೯ ದೆಹಲಿ ಮೆಟ್ರೋ ನಿಲ್ದಾಣಗಳ ಪ್ರವೇಶದ್ವಾರ ಮತ್ತು ಹೊರಹೋಗುವ ದ್ವಾರಗಳನ್ನು ಮುಚ್ಚಲಾಯಿತು. ಕೆಂಪುಕೋಟೆ ಪ್ರದೇಶದಲ್ಲಿ ೧೪೪ನೇ ಸೆಕ್ಷನ್ ಉಲ್ಲಂಘಿಸಿ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಬಂಧಿಸಿ ವ್ಯಾನುಗಳಿಗೆ ತುಂಬಿದರು. ಪ್ರತಿಭಟನೆಗಳ ಪರಿಣಾಮವಾಗಿ ರಾಜಧಾನಿಯ ಹಲವಡೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ದೆಹಲಿ-ಗುರುಗ್ರಾಮದ ಹೆದ್ದಾರಿಯಲ್ಲಿ ಸುಮಾರು ೧೦ಕಿಮೀಗೂ ಉದ್ದಕ್ಕೆ ವಾಹನಗಳ ಸಾಲು ಕಂಡು ಬಂದಿತು.

No comments:

Advertisement