My Blog List

Saturday, December 21, 2019

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿ ರಾವ್ ನಿಧನ

ಹಿರಿಯ ಸಾಹಿತಿ, ಚಿಂತಕ ಎಲ್.ಎಸ್. ಶೇಷಗಿರಿ ರಾವ್ ನಿಧನ
ಬೆಂಗಳೂರು:  ಹಿರಿಯ ಸಾಹಿತಿ ಎಲ್.ಎಸ್. ಶೇಷಗಿರಿರಾವ್ ಅವರು 2019 ಡಿಸೆಂಬರ್ 20ರ ಶುಕ್ರವಾರ ನಿಧನರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು.

ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಹೊಂದಿದ್ದ ವಾಮನರೂಪಿ ತ್ರಿವಿಕ್ರಮ ಸಾಹಿತಿ ಎಲ್.ಎಸ್.ಶೇಷಗಿರಿ ರಾವ್ ಎಲ್ಲೆಸೆಸ್ ಎಂದೇ ಖ್ಯಾತರಾಗಿದ್ದರು.

ತಂದೆ ಲಕ್ಷ್ಮೇಶ್ವರ ಸ್ವಾಮಿರಾವ್- ತಾಯಿ ಕಮಲಾಬಾಯಿ. ೧೯೨೫ರ ಫೆಬ್ರುವರಿ ೧೬ರಂದು ಜನಿಸಿದ ಎಲ್ಲೆಸೆಸ್ ಬೆಂಗಳೂರು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, ನಾಗಪುರ ವಿ.ವಿಯ ಇಂಗ್ಲಿಷ್ ಎಂ.ಎ. ಪದವೀಧರರಾಗಿದ್ದರು.

ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ, ಬೆಂಗಳೂರು ವಿವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ ಎಲ್ಲೆಸ್ಸೆಸ್ ೧೯೪೭-೫೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ನ್ಯಾಷನಲ್ ಬುಕ್ ಟ್ರಸ್ಟ್ ಸೇರಿದಂತೆ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದರು..

೨೦೦೭ರಲ್ಲಿ ಉಡುಪಿಯಲ್ಲಿ ನಡೆದ ೭೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ,  ರಾಜ್ಯೋತ್ಸವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ಬಿಎಂಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.

ಕೃತಿಗಳು: ಇಂಗ್ಲಿಷ್ ಸಾಹಿತ್ಯದ ಮೇರು ಕೃತಿಗಳನ್ನು ತಿಳಿಕನ್ನಡಕ್ಕೆ ಅನುವಾದಿಸಿದ್ದು ಶೇಷಗಿರಿರಾವ್ ಅವರ ಹೆಗ್ಗಳಿಕೆ. ಆಲಿವರ್ ಗೋಲ್ಡ್ಸ್ಮಿತ್, ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ, ಪಾಶ್ಚಾತ್ಯ ಸಾಹಿತ್ಯ ವಿಹಾರ, ಸಾಹಿತ್ಯ ವಿಶ್ಲೇಷಣೆ, ಇಂಗ್ಲಿಷ್ ಸಾಹಿತ್ಯ ಚರಿತ್ರೆ ಇತ್ಯಾದಿ ಕೃತಿಗಳು ಅವರ ಹೆಸರನ್ನು ಸಾಹಿತ್ಯ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆಲೆಗೊಳಿಸಿದವು.ಸಾಮಾನ್ಯ ಮನುಷ್ಯ (ಕಾದಂಬರಿ), ಇದು ಜೀವನ, ಜಗದ ಜಾತ್ರೆಯಲ್ಲಿ, ಮುಟ್ಟಿದ ಗುರಿ ಮತ್ತು ಇತರ ಕಥೆಗಳು, ಮುಯ್ಯಿ ಎಂಬ ಕಥಾಸಂಕಲನಗಳನ್ನು ರಚಿಸಿದ್ದರು.. ಹಂಪಿ ವಿಶ್ವವಿದ್ಯಾಲಯಕ್ಕೆ ಇಂಗ್ಲಿಷ್-ಕನ್ನಡ, ಕನ್ನಡ- ಕನ್ನಡ ನಿಘಂಟನ್ನು ರಚಿಸಿಕೊಟ್ಟಿದ್ದರು.

ಎಲ್.ಎಸ್.ಶೇಷಗಿರಿರಾವ್ ಅವರ ‘ಮುಯ್ಯಿ ಕಥೆ ಆಧರಿಸಿದ ಚಲನಚಿತ್ರ ೧೯೭೮ರಲ್ಲಿ ತೆರೆ ಕಂಡಿತ್ತು. ನಟ ಲೋಕೇಶ್ ನಾಯಕರಾಗಿ ಅಭಿನಯಿಸಿದ್ದರು.

No comments:

Advertisement