Saturday, December 28, 2019

ಜಾಮಾ ಮಸೀದಿಯಲ್ಲಿ ಪೌರತ್ವ ಕಾಯ್ದೆ ವಿರೋಧೀ ಪ್ರತಿಭಟನೆ

ಶುಕ್ರವಾರದ ಪ್ರಾರ್ಥನೆ ಬಳಿಕ ಜಾಮಾ ಮಸೀದಿಯಲ್ಲಿ ಪೌರತ್ವ ಕಾಯ್ದೆ ವಿರೋಧೀ ಪ್ರತಿಭಟನೆ
ನವದೆಹಲಿ: ದೆಹಲಿಯ ರಕ್ತ ಹೆಪ್ಪುಗಟ್ಟಿಸುವ ಚಳಿಯ ಮಧ್ಯೆಯೂ ಭಾರೀ ಸಂಖ್ಯೆಯಲ್ಲಿ ಜಾಮಾ ಮಸೀದಿಯಲ್ಲಿ  2019 ಡಿಸೆಂಬರ್ 27ರ ಶುಕ್ರವಾರ ಜಮಾಯಿಸಿದ ನೂರಾರು ಮಂದಿ ಪ್ರಾರ್ಥನೆಯ ಬಳಿಕ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಿದರು.

ಹಳೆ ನಗರದ ಮಸೀದಿಯ ಹೊರಭಾಗದಲ್ಲಿ ಜಮಾಯಿಸಿದ ಪ್ರತಿಭಟನಕಾರರು ನೂತನ ಪೌರತ್ವ (ತಿದ್ದುಪಡಿ) ಕಾನೂನು ಮತ್ತು  ಉದ್ದೇಶಿತ ರಾಷ್ಟ್ರೀಯ ಪೌರ ನೋಂದಣಿ (ಎನ್ಆರ್ಸಿ) ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಇಸ್ ದೇಶ್ ಕೊ ಎನ್ಆರ್ಸಿ,  ಎನ್ಪಿಆರ್ ನಹೀ ಚಾಹಿಯೇ. ಇಸ್ ದೇಶ್ ಕೊ ರೋಜ್ಗಾರ್ ಚಾಹಿಯೇ. ಇಸ್ ದೇಶ್ ಕೋ ಅಮಾನ್ ಔರ್ ಶಾಂತಿ ಚಾಹಿಯೇ ( ದೇಶಕ್ಕೆ ಎನ್ಆರ್ಸಿ, ಎನ್ಪಿಆರ್ ಬೇಕಾಗಿಲ್ಲ, ದೇಶಕ್ಕೆ  ನೌಕರಿಗಳು ಬೇಕು, ದೇಶಕ್ಕೆ ಶಾಂತಿ ಮತ್ತು ಸೌಹಾರ್ದತೆ ಬೇಕುಎಂದು ಪ್ರತಿಭಟನೆಕಾರನೊಬ್ಬರು ಹೇಳಿದರು.

ಸಂವಿಧಾನ ರಕ್ಷಿಸಿ, ಭಾರತವನ್ನು ವಿಭಜಿಸಬೇಡಿಎಂಬ ಘೋಷಣೆಗಳಿದ್ದ ಭಿತ್ತಿ ಫಲಕಗಳನ್ನು ಹಿಡಿದುಕೊಂಡಿದ್ದ ಪ್ರತಿಭಟನಕಾರರು ಶಾಂತಿಯುತರಾಗಿ ಇರುವಂತೆ ಜನತೆಗೆ ಮನವಿ ಮಾಡಿದರು.
ಕಾಂಗೆಸ್ ನಾಯಕಿ ಅಲ್ಕಾ ಲಂಬಾ ಹಾಗೂ ದೆಹಲಿಯ ಮಾಜಿ ಶಾಸಕ ಶೋಯಿಬ್ ಇಕ್ಬಾಲ್ ಅವರು ಪ್ರದರ್ಶನಕಾರರಲ್ಲಿ ಸೇರಿದ್ದರು.

ರಾಷ್ಟ್ರ ಮತ್ತು ಸಂವಿಧಾನಕ್ಕಾಗಿ ಪ್ರಜಾಪ್ರಭುತ್ವದ ದನಿ ಎತ್ತರಿಸುವುದು ಅತ್ಯಂತ ಅಗತ್ಯ. ಕೇಂದ್ರ ಸರ್ಕಾರವೊಂದು ಸರ್ವಾಧಿಕಾರಿಯಾಗುವಂತಿಲ್ಲ ಮತ್ತು ಜನರ ಮೇಲೆ ಕಾರ್ಯಸೂಚಿಗಳನ್ನು ಹೇರುವಂತಿಲ್ಲಎಂದು ಲಂಬಾ ನುಡಿದರು.

ದೆಹಲಿಯ ಇತರ ಸ್ಥಳಗಳಲ್ಲೂ ಪ್ರತಿಭಟನೆಗಳು ನಡೆದವು. ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರ ಬಿಡುಗಡೆಗೆ ಒತ್ತಾಯಿಸಿ ಪ್ರಧಾನಿಯವರ ನಿವಾಸಕ್ಕೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದ ಬಳಿಕ, ದೆಹಲಿ ಮೆಟ್ರೋ ರೈಲು ನಿಗಮವು (ಡಿಎಂಆರ್ಸಿ) ಪ್ರಧಾನಿ ನಿವಾಸಕ್ಕೆ ಸಮೀಪದ ಲೋಕಕಲ್ಯಾಣ ಮಾರ್ಗ್ (ಎಲ್ಕೆಎಂ) ಮೆಟ್ರೋ ನಿಲ್ದಾಣದ ದ್ವಾರಗಳನ್ನು ಮುಚ್ಚಿತು.

ಲೋಕಕಲ್ಯಾಣ ಮಾರ್ಗದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ. ರೈಲುಗಳು ನಿಲ್ದಾಣದಲ್ಲಿ ನಿಲ್ಲುವುದಿಲ್ಲಎಂದು ಡಿಎಂಆರ್ಸಿ ಟ್ವೀಟ್ ಮಾಡಿತು.

ಚಂದ್ರಶೇಖರ ಆಜಾದ್ ಅವರನ್ನು ಕಳೆದ ಶುಕ್ರವಾರ ಹಳೆ ದೆಹಲಿಯ ದರಿಯಾಗಂಜ್ನಲ್ಲಿ ಹಿಂಸಾಚಾರಕ್ಕೆ ಇಳಿಯುವಂತೆ ಪ್ರತಿಭಟನಕಾರರನ್ನು ಪ್ರಚೋದಿಸಿ ಭಾಷಣ ಮಾಡಿದ ಆಪಾದನೆಯಲ್ಲಿ ಬಂಧಿಸಲಾಗಿತ್ತು.

ಭಾರೀ ಬಂದೋಬಸ್ತ್ ಮತ್ತು ಡ್ರೋಣ್ ಕಣ್ಗಾವಲಿನಲ್ಲಿ ಭೀಮ್ ಆರ್ಮಿ ಸದಸ್ಯರು ಸೇರಿದಂತೆ ಪ್ರತಿಭಟನಕಾರರು ರಾಷ್ಟ್ರೀಯ ರಾಜಧಾನಿಯ ಜೋರ್ ಬಾಗ್ ದರ್ಗಾ ಶಾ--ಮರ್ದನ್ನಿಂದ ಮೆರವಣಿಗೆ ಹೊರಟರು. ಲೋಕಕಲ್ಯಾಣ ಮಾರ್ಗದಲ್ಲಿನ ಪ್ರಧಾನಿ ನಿವಾಸಕ್ಕೆ ತಲುಪುವ ಮುನ್ನ ದಾರಿಯಲ್ಲೇ ಅಡ್ಡಗಟ್ಟೆಗಳನ್ನು ಇರಿಸಿ ಅವರನ್ನು ತಡೆಯಲಾಯಿತು.

ಕೆಲವು
ಪ್ರತಿಭಟನಕಾರರನ್ನು ಉತ್ತರಪ್ರದೇಶ ಭವನದ ಹೊರಗೆ ಬಂಧಿಸಲಾಯಿತು.

No comments:

Advertisement