Thursday, December 12, 2019

ಉಗ್ರ ಕೃತ್ಯಕ್ಕೆ ಹಣಕಾಸು ನೆರವು: ಸಯೀದ್ ವಿರುದ್ಧ ಪಾಕ್ ಕೋರ್ಟ್ ದೋಷಾರೋಪ

ಉಗ್ರ ಕೃತ್ಯಕ್ಕೆ ಹಣಕಾಸು ನೆರವು:  ಸಯೀದ್ ವಿರುದ್ಧ
ಪಾಕ್ ಕೋರ್ಟ್ ದೋಷಾರೋಪ
ಇಸ್ಲಾಮಾಬಾದ್: ಮುಂಬೈ ಮೇಲಿನ ೨೦೦೮ರ ಮಾರಕ ದಾಳಿಯ ಸೂತ್ರಧಾರಿ, ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಭಯೋತ್ಪಾದಕ ಹಫೀಜ್ ಸಯೀದ್ ಉಗ್ರ ಕೃತ್ಯಕ್ಕೆ ಹಣಕಾಸು ನೆರವು ನೀಡಿದ್ದಾನೆ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ 2019 ಡಿಸೆಂಬರ್ 11ರ ಬುಧವಾರ ದೋಷಾರೋಪ ಹೊರಿಸಿತು.

ಪಾಕಿಸ್ತಾನಿ ನ್ಯಾಯಾಲಯದ ಕ್ರಮವು ಪಾಕಿಸ್ತಾನಕ್ಕೆ ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಈಡಾಗುವ ಪರಿಸ್ಥಿತಿಯನ್ನು ತಂದೊಡ್ಡಿತು.

ಪಂಜಾಬಿನ ಭಯೋತ್ಪಾದನಾ ಇಲಾಖಾ (ಸಿಟಿಡಿ) ಪೊಲೀಸರು ಜುಲೈ ೧೭ರಂದು ಹಫೀಜ್ ಹಾಗೂ ಆತನ ನಿಕಟವರ್ತಿಗಳ ವಿರುದ್ಧ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ ೨೩ ಎಫ್ ಐಆರ್ ಗಳನ್ನು ದಾಖಲಿಸಿದ್ದರು. ಪಂಜಾಬ್ ಪ್ರಾಂತ್ಯ ಸೇರಿದಂತೆ ವಿವಿಧ ನಗರದಲ್ಲಿ ಉಗ್ರ ಕೃತ್ಯಕ್ಕೆ ಹಣಕಾಸು ನೀಡಿರುವುದಾಗಿ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ ಐಆರ್) ಪೊಲೀಸರು ತಿಳಿಸಿದ್ದರು.

ನಂತರ ಪಂಜಾಬ್ ಪೊಲೀಸರು ಜಮಾತ್-ಉದ್-ದವಾದ ಮಾಜಿ ಮುಖ್ಯಸ್ಥ, ಭಯೋತ್ಪಾದಕ ಹಫೀಜ್ ಸಯೀದನನ್ನು  ಬಂಧಿಸಿದ್ದರು.

ಭಯೋತ್ಪಾದನೆಗೆ ನೆರವು ನೀಡಲು ಸಯೀದ್ ಲಾಹೋರ್, ಗುಜ್ರಾನ್ ವಾಲಾ ಮತ್ತು ಮುಲ್ತಾನ್ ನಗರಗಳಲ್ಲಿ ಅಲ್ ಅನ್ಫಾಲ್ ಟ್ರಸ್ಟ್, ದಾವಾತುಲ್ ಇರ್ಷಾದ್ ಟ್ರಸ್ಟ್ ಹಾಗೂ ಮೌಆಝ್ ಬಿನ್ ಜಬಾಲ್ ಟ್ರಸ್ಟ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿರುವುದಾಗಿ ವರದಿ ವಿವರಿಸಿತು.

ಭಯೋತ್ಪಾದಕ ಹಫೀಜ್ ಸಯೀದ್ ವಿಚಾರದಲ್ಲಿ ಮೃದು ಧೋರಣೆ ತಳೆದಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಂತರ ಲಷ್ಕರ್-- ತೊಯ್ಬಾದ ವಿರುದ್ಧ ತನಿಖೆ ಆರಂಭಿಸಿತ್ತು.

ಪಾಕಿಸ್ತಾನ ನ್ಯಾಯಾಲಯದ ಕ್ರಮದ ಪರಿಣಾಮವಾಗಿ ಸಯೀದ್ ಬಗ್ಗೆ ತಟಸ್ಥವಾಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಮ್ಮೆ ಮುಖಭಂಗವಾದಂತಾಯಿತು.
ಹಫೀಜ್ ವಿರುದ್ಧ ನ್ಯಾಯಾಲಯವು ದೋಷಾರೋಪ ಹೊರಿಸಿದ್ದನ್ನು ಸರ್ಕಾರಿ ಪ್ರಾಸೆಕ್ಯೂಟರ್ ಅವರು ದೃಢ ಪಡಿಸಿರುವುದಾಗಿ ವರದಿಗಳು ಹೇಳಿವೆ.

ನ್ಯಾಯಾಲಯವು ದೋಷಾರೋಪ ಹೊರಿಸಿದ ಸಂದರ್ಭದಲ್ಲಿ ಹಫೀಜ್ ಸಯೀದ್ ನ್ಯಾಯಾಲಯದಲ್ಲಿ ಇದ್ದುದಾಗಿ ಅಬ್ದುರ್ ರೌಫ್ ಹೇಳಿದ್ದನ್ನು ಸುದ್ದಿ ಸಂಸ್ಥೆ ಉಲೇಖಿಸಿತು.

ಲಷ್ಕರ್ --ತೊಯ್ಬಾ (ಎಲ್ಇಟಿ) ಅಥವಾಪವಿತ್ರ ಸೇನೆ ಸ್ಥಾಪಕ ಸಯೀದ್ ೧೬೦ ಅಮಾಯಕರನ್ನು ಬಲಿತೆಗೆದುಕೊಂಡ ನಾಲ್ಕು ದಿನಗಳ ಮುಂಬೈ ದಾಳಿಯ ಮಹಾಪಾತಕಿ ಎಂಬುದಾಗಿ ಭಾರತ ಮತ್ತು ಅಮೆರಿಕ ದೂಷಿಸಿವೆ. ಮುಂಬೈ ದಾಳಿಯಲ್ಲಿ ಮೃತರಾದವರಲ್ಲಿ ಅಮೆರಿಕ ಪ್ರಜೆಗಳು ಸೇರಿದಂತೆ ಹಲವಾರು ಮಂದಿ ವಿದೇಶೀಯರೂ ಸೇರಿದ್ದರು.

ಮುಂದಿನ ವರ್ಷ ಆದಿಯಲ್ಲಿ ನಡೆಯಲಿರುವ ಜಾಗತಿಕ ಹಣಕಾಸು ನಿಗಾ ಸಂಸ್ಥೆಯ ಸಭೆಗಿಂತ ಮುಂಚಿತವಾಗಿ ಪಾಕಿಸ್ತಾನದ ನ್ಯಾಯಾಲಯವು ಸಯೀದ್ ವಿರುದ್ಧ ದೋಪಾರೋಪ ಹೊರಿಸಿರುವುದು ಪಾಕಿಸ್ತಾನಕ್ಕೆ ಜಾಗತಿಕ ವೇದಿಕೆಯಲ್ಲಿ ತೀವ್ರ ಇರುಸು ಮುರಿಸಿನ ಸನ್ನಿವೇಶವನ್ನು ಸೃಷ್ಟಿಸಲಿದೆ.

ಭಯೋತ್ಪಾದನೆಗೆ ಹಣಕಾಸು ನೆರವು ನೀಡುವಿಕೆಯನ್ನು ದಮನಿಸಲು ವಿಫಲವಾಗಿರುವುದಕ್ಕಾಗಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆ ಎಂಬುದನ್ನು ಜಾಗತಿಕ ಸಂಸ್ಥೆಯು ಜನವರಿ ಆದಿಯಲ್ಲಿ ನಿರ್ಧರಿಸಲಿದೆ.

No comments:

Advertisement