Thursday, December 5, 2019

ಸುಡಾನ್ ಕಾರ್ಖಾನೆಯಲ್ಲಿ ಸ್ಫೋಟ: ೧೮ ಭಾರತೀಯರ ಸಾವು

ಸುಡಾನ್ ಕಾರ್ಖಾನೆಯಲ್ಲಿ ಸ್ಫೋಟ: ೧೮ ಭಾರತೀಯರ ಸಾವು
ಒಟ್ಟು ೨೩ ಮಂದಿ ಅಗ್ನಿಗೆ ಬಲಿ, ೧೩೦ ಮಂದಿಗೆ ಗಾಯ
ಖಾರ್ಟೂಮ್: ಸುಡಾನಿನ ಸೆರಾಮಿಕ್ ಕಾರ್ಖಾನೆ ಒಂದರಲ್ಲಿ ಸಂಭವಿಸಿದ ಭಯಾನಕ ಅಡುಗೆ ಅನಿಲ (ಎಲ್ಪಿಜಿ) ಟ್ಯಾಂಕರ್ ಸ್ಫೋಟದೊಂದಿಗೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಕನಿಷ್ಠ ೧೮ ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿ 2019 ಡಿಸೆಂಬರ್ 04ರ ಬುಧವಾರ ತಿಳಿಸಿತು.

2019 ಡಿಸೆಂಬರ್ 03ರ ಮಂಗಳವಾರ ಸಂಭವಿಸಿದ ದುರಂತದಲ್ಲಿ ಒಟ್ಟು ೨೩ ಮಂದಿ ಸಾವನ್ನಪ್ಪಿದ್ದು, ೧೩೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸುಡಾನ್ ಸರ್ಕಾರ ತಿಳಿಸಿದೆ.

ಖಾರ್ಟೂಮ್ ಬಹ್ರಿ ಪ್ರದೇಶದಲ್ಲಿನ ಸೀಲಾ ಸೆರಾಮಿಕ್ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ ಬಳಿಕ ೧೬ ಮಂದಿ ಭಾರತೀಯರು ಕಣ್ಮರೆಯಾಗಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿ ಹೇಳಿತು.

ಇತ್ತೀಚಿನವರೆಗಿನ ವರದಿಗಳ ಪ್ರಕಾರ ಕನಿಷ್ಠ ೧೮ ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ, ಆದರೆ ವರದಿ ಇನ್ನೂ ದೃಢಪಟ್ಟಿಲ್ಲಎಂದು ಕಚೇರಿಯ ಪ್ರಕಟಣೆ ತಿಳಿಸಿತು.

ನಾಪತ್ತೆಯಾಗಿರುವ ಕೆಲವರು ಮೃತರ ಪಟ್ಟಿಯಲ್ಲಿ ಇರಬಹುದು. ಸಂಪೂರ್ಣ ಸುಟ್ಟು ಕರಲಾಗಿರುವುದರಿಂದ ಮೃತರ ಗುರುತು ಪತ್ತೆ ಸಾಧ್ಯವಾಗಿಲ್ಲಎಂದು ಪ್ರಕಟಣೆ ಹೇಳಿತು.
ಆಸ್ಪತ್ರೆಗೆ ದಾಖಲಾದವರು, ಕಣ್ಮರೆಯಾದವರು ಮತ್ತು ದುರಂತದಲ್ಲಿ ಬದುಕಿ ಉಳಿದವರ ವಿಸ್ತೃತ ಪಟ್ಟಿಯನ್ನು ರಾಯಭಾರ ಕಚೇರಿಯು ಬುಧವಾರ ಬಿಡುಗಡೆ ಮಾಡಿತು.

ಮಾಹಿತಿಗಳ ಪ್ರಕಾರ ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.

ದುರಂತದಲ್ಲಿ ಅಪಾಯದಿಂದ ಪಾರಾಗಿರುವ ೩೪ ಮಂದಿ ಭಾರತೀಯರನ್ನು ಸಲೂಮಿ ಸೆರಾಮಿಕ್ಸ್ ಕಾರ್ಖಾನೆಯ ವಸತಿಯಲ್ಲಿ ಇರಿಸಲಾಗಿದೆ.

ದುರಂತದಲ್ಲಿ ಒಟ್ಟು ೨೩ ಮಂದಿ ಸಾವನ್ನಪ್ಪಿದ್ದು, ೧೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸುಡಾನ್ ಸರ್ಕಾರ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ವರದಿಯೊಂದು ತಿಳಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ದುರಂತ ಸ್ಥಳದಲ್ಲಿ ಸುರಕ್ಷಾ ಸಾಧನಗಳು ಇರಲಿಲ್ಲ ಎಂದು ಹೇಳಲಾಗಿದೆ.

ಸುಲಭವಾಗಿ ಹೊತ್ತಿಕೊಂಡು ಉರಿಯಬಲ್ಲಂತಹ ವಸುಗಳನ್ನು ಅಲ್ಲಿ ಅಸ್ತವ್ಯಸ್ತವಾಗಿ ದಾಸ್ತಾನು ಇಡಲಾಗಿತ್ತು. ಇದು ಬೆಂಕಿ ಇನ್ನಷ್ಟು ವ್ಯಾಪಿಸಿಕೊಳ್ಳಲು ಕಾರಣವಾಯಿತು ಎಂದು ಸರ್ಕಾರ ತಿಳಿಸಿದೆ.
ದುರಂತದ ಬಗ್ಗೆ ತನಿಖೆ ಆರಂಭಿಸಿಲಾಗಿದೆ ಎಂದೂ ಸರ್ಕಾರ ತಿಳಿಸಿತು.
ದುರಂತಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಕೂಡಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸುಡಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

No comments:

Advertisement