My Blog List

Sunday, December 29, 2019

ಬಂಧಿತ ಕಾರ್ಯಕರ್ತರ ಮನೆಗೆ ಭೇಟಿ: ಪ್ರಿಯಾಂಕಾ ಗಾಂಧಿಗೆ ತಡೆ

ಬಂಧಿತ ಕಾರ್ಯಕರ್ತರ ಮನೆಗೆ ಭೇಟಿ: ಪ್ರಿಯಾಂಕಾ ಗಾಂಧಿಗೆ ತಡೆ
ಪೊಲೀಸರಿಂದ ಒರಟು ವರ್ತನೆ: ಕಾಂಗ್ರೆಸ್ ನಾಯಕಿ ಆರೋಪ
ನವದೆಹಲಿ: ಉತ್ತರಪ್ರದೇಶದ ಲಕ್ನೋದಲ್ಲಿ ಇಬ್ಬರು ಬಂಧಿತ ಕಾರ್ಯಕರ್ತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಡೆದ ಪೊಲೀಸರು ಅವರೊಂದಿಗೆ ಒರಟಾಗಿ ವರ್ತಿಸಿದರೆಂದು ಆಪಾದಿಸಲಾದ ನಾಟಕಿಯ ಘಟನೆ 2019 ಡಿಸೆಂಬರ್ 28ರ ಶನಿವಾರ ಘಟಿಸಿತು.

ಪ್ರಿಯಾಂಕಾ
ಅವರು ನಗರದಲ್ಲಿ ನಡೆದ ಪೌರತ್ವ  ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ವೇಳೆಯಲ್ಲಿ ಬಂಧಿತರಾಗಿದ್ದ ಇಬ್ಬರು ಕಾರ್ಯಕರ್ತರ ಮನೆಗೆ ಭೇಟಿ ನೀಡುವ ಸಲುವಾಗಿ ಹೊರಟಿದ್ದರು.

ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪ್ರಿಯಾಂಕಾ ಗಾಂಧಿ ಅವರು ಪ್ರತಿಭಟನೆಗಳ ವೇಳೆಯಲ್ಲಿ ಬಂಧಿತರಾದ ಸದಾಫ್ ಜಫರ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎಸ್ಆರ್ ದಾರಾಪುರಿ ಅವರ ಕುಟುಂಬಗಳನ್ನು ಭೇಟಿ ಮಾಡಬಯಸಿದ್ದರು.

ತಾವು ಪಯಣಿಸುತ್ತಿದ್ದ ವಾಹನವನ್ನು ದಿಢೀರನೆ ಅಡ್ಡಗಟ್ಟಲಾಯಿತು ಮತ್ತು ವಾಹನ ಮುಂದಕ್ಕೆ ಹೋಗದಂತೆ ಪೊಲೀಸರು ತಡೆದರು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಪೊಲೀಸರ ಮಾತುಗಳನ್ನು  ನಿರ್ಲಕ್ಷಿಸಿ ಪಕ್ಷ ಕಾರ್ಯಕರ್ತರೊಬ್ಬರ ಸ್ಕೂಟರ್ ಏರಿ ನಾನು ಪಯಣ ಮುಂದುವರೆಸಿದೆ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಸ್ಕೂಟರನ್ನೂ ತಡೆಯಲಾಯಿತು. ನಾನು ಇಳಿದು ನಡೆದುಕೊಂಡು ಹೊರಟೆ. ಆದರೆ ಪ್ರಯೋಜನವಾಗಲಿಲ್ಲ. ಪೊಲೀಸರು ಮತ್ತೆ ಅಡ್ಡಗಟ್ಟಿದರು. ಅಡ್ಡಗಟ್ಟಿದ ಮಹಿಳಾಪೇದೆ ನನ್ನೊಂದಿಗೆ ಒರಟಾಗಿ ನಡೆದುಕೊಂಡರು ಎಂದು ಪ್ರಿಯಾಂಕಾ ದೂರಿದರು.

ಆಕೆ (ಮಹಿಳಾ ಪೇದೆ) ನನ್ನನ್ನು ತಡೆದರು, ನನ್ನನ್ನು ಹಿಡಿದು ಹಿಂದಕ್ಕೆ ತಳ್ಳಿದರು. ಆಕೆ ನನ್ನ ಕತ್ತನ್ನೂ ಹಿಡಿದರುಎಂದು ಪ್ರಿಯಾಂಕಾ ವರದಿಗಾರರಿಗೆ ತಿಳಿಸಿದರು.

ಪ್ರಿಯಾಂಕಾ ಅವರು ಬಳಿಕ ಎಸ್ಆರ್ ದಾರಾಪುರಿ ಅವರ ಮನೆಗೆ ತೆರಳಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು.

ಪ್ರಿಯಾಂಕಾ
ಗಾಂಧಿ ಅವರ ಕಾರ್ಯಕರ್ತರ ಮನೆ ಭೇಟಿ ಕಾರ್ಯಕ್ರಮ ಪೂರ್ವ ನಿರ್ಧರಿತವಾದುದಾಗಿರಲಿಲ್ಲ. ಘಟನೆ ಘಟಿಸಿತು ಎನ್ನಲಾದ ನಗರದ ಲೋಹಿಯಾ ಪಾರ್ಕ್ ಪ್ರದೇಶದ ಸುತ್ತ ಮುತ್ತ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು.

ಇದಕ್ಕೆ
ಮುನ್ನ, ಪ್ರಿಯಾಂಕಾ ಅವರು ಪಕ್ಷದ ೧೩೫ನೇ ಸ್ಥಾಪನಾ ದಿನಾಚರಣೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರು ಮತ್ತು ನಗರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಸಂವಿಧಾನದ ಪೀಠಿಕೆಯ ಪ್ರಮಾಣವಚನ ಬೋಧಿಸಿದ್ದರು.

ಏನಿದ್ದರೂ ಉತ್ತರಪ್ರದೇಶ ಪೊಲೀಸರು ಪ್ರಿಯಾಂಕಾ ಆರೋಪವನ್ನು ತಳ್ಳಿ ಹಾಕಿದರು.

No comments:

Advertisement