My Blog List

Wednesday, January 15, 2020

ನಿರ್ಭಯಾ ಹಂತಕರಿಗೆ ಜನವರಿ 22ರಂದು ಗಲ್ಲು ಅಸಂಭವ

ನಿರ್ಭಯಾ ಹಂತಕರಿಗೆ ಜನವರಿ 22ರಂದು ಗಲ್ಲು ಅಸಂಭವ
ನವದೆಹಲಿ:  2012 ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ  ಶಿಕ್ಷಿತ ಅಪರಾಧಿಗಳನ್ನು ಜನವರಿ 22ರಂದು ಗಲ್ಲಿಗೇರಿಸಲು ಸಾಧ್ಯವಾಗುವುದಿಲ್ಲ ಎಂದು ದೆಹಲಿ ಸರ್ಕಾರವು ದೆಹಲಿ ಹೈಕೋರ್ಟಿಗೆ  2020 ಜನವರಿ 15 ಬುಧವಾರ ತಿಳಿಸಿತು.

ಡೆತ್ ವಾರಂಟ್  ಕಾರ್ಯಗತಗೊಳಿಸುವುದಕ್ಕೆ ಮುನ್ನ  ಅಪರಾಧಿಗಳ ಕ್ಷಮಾದಾನ ಕೋರಿಕೆ ಅರ್ಜಿಯ  ಇತ್ಯರ್ಥಕ್ಕಾಗಿ ಕಾಯಬೇಕಾದ  ಸೆರೆಮನೆಯ ನಿಯಮಾವಳಿಗಳಿಗೆ ಸರ್ಕಾರವು ಬದ್ಧವಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

"ಜನವರಿ ೨೧ ರಂದು, ನಾವು ಹೊಸ ಡೆತ್ ವಾರಂಟ್ ಜಾರಿ ಕೋರಿ ಕೆಳ ನ್ಯಾಯಾಲಯಕ್ಕೆ ಹೋಗುತ್ತೇವೆ. ಕಾನೂನಿನ ಪ್ರಕಾರ, ಕ್ಷಮಾದಾನ ಅರ್ಜಿಯನ್ನು ವಜಾಗೊಳಿಸಿದ ನಂತರ, ಅಪರಾಧಿಗಳಿಗೆ ೧೪ ದಿನಗಳನ್ನು ನೀಡಲಾಗುತ್ತದೆ, ”ಎಂದು ಸರ್ಕಾರ ಹೇಳಿತು.

ದೆಹಲಿ ಸರ್ಕಾರದ ಗೃಹ ಇಲಾಖೆಯು ಕ್ಷಮಾದಾನ ಕೋರಿಕೆ ಅರ್ಜಿಯನ್ನು  ಈದಿನ ತಿರಸ್ಕರಿಸಿ ಅದನ್ನು ಲೆಫ್ಟಿನೆಂಟ್ ಗವರ್ನರ್ ಕಚೇರಿಗೆ ರವಾನಿಸಿತು. ಕಡತವನ್ನು ನಂತರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುವುದು,  ಅಲ್ಲಿಂದ  ಅದನ್ನು ರಾಷ್ಟ್ರಪತಿಯವರಿಗೆ  ಕಳುಹಿಸಲಾಗುತ್ತದೆ.

೨೦೧೨ ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ  ಗುರಿಯಾಗಿರುವ  ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್  2020 ಜನವರಿ 14ರ ಮಂಗಳವಾರ ರಾಷ್ಟ್ರಪತಿ  ರಾಮನಾಥ್ ಕೋವಿಂದ್ ಅವರಿಗೆ ಕ್ಷಮಾದಾನ ಕೋರಿಕೆ  ಅರ್ಜಿಯನ್ನು ಸಲ್ಲಿಸಿದ್ದ.

ವಿಚಾರಣಾ ನ್ಯಾಯಾಲಯ ಹೊರಡಿಸಿದ ಡೆತ್ ವಾರಂಟನ್ನು ತಳ್ಳಿಹಾಕುವಂತೆ ಕೋರಿ ಮುಖೇಶ್ ಸಿಂಗ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ.
‘ಮುಖೇಶ್ ಸಲ್ಲಿಸಿದ ಕ್ಷಮಾದಾನ  ಕೋರಕೆ ಅರ್ಜಿ ನಮ್ಮ ಬಳಿ ಇದೆ. ನಾವು ಅದರ ಬಗ್ಗೆ ನಿರ್ಧರಿಸುತ್ತೇವೆ ಮತ್ತು ಕಡತವನ್ನು  ಲೆಫ್ಟಿನೆಂಟ್ ಗವರ್ನರ್ ಗೆ  ಕಳುಹಿಸುತ್ತೇವೆ. ಆದರೆ ಆ ಹೊತ್ತಿಗೆ ಅಪರಾಧಿಗಳ ಎಲ್ಲಾ ಕ್ಷಮಾದಾನ ಕೋರಿಕೆ  ಮನವಿಗಳನ್ನು ವಜಾಗೊಳಿಸಿದರೆ ಮಾತ್ರ ನಾವು ಹೊಸದಾಗಿ ಡೆತ್ ವಾರಂಟ್ ಕೇಳಲು ಹೋಗುತ್ತೇವೆ ”ಎಂದು ರಾಜ್ಯ ಸರ್ಕಾರ ಹೇಳಿತು.

 ವಿನಯ್ ಶರ್ಮಾ (೨೬), ಮುಖೇಶ್ ಕುಮಾರ್ (೩೨), ಅಕ್ಷಯ್ ಕುಮಾರ್ ಸಿಂಗ್ (೩೧) ಮತ್ತು ಪವನ್ ಗುಪ್ತಾ (೨೫) – ಈ  ನಾಲ್ವರು ಅಪರಾಧಿಗಳಿಗೆ  ಜನವರಿ ೨೨ ರಂದು ತಿಹಾರ್ ಜೈಲಿನಲ್ಲಿ ಬೆಳಿಗ್ಗೆ ೭ ಗಂಟೆಗೆ ಗಲ್ಲು ವಿಧಿಸುವಂತೆ ದೆಹಲಿ ನ್ಯಾಯಾಲಯವು ಜನವರಿ ೭ ರಂದು ಡೆತ್ ವಾರಂಟ್ ಜಾರಿ ಮಾಡಿತ್ತು.

ವಧಕಾರನಾದ ಮೀರತ್‌ನ ಪವನ್ ಜಲ್ಲಾಡ್ ಜನವರಿ ೨೦ ರಂದು ತಿಹಾರ್ ಜೈಲಿಗೆ ತಲುಪುವ ನಿರೀಕ್ಷೆಯಿತ್ತು.

೨೦೧೨ ರ ಡಿಸೆಂಬರ್‌ನಲ್ಲಿ ಆರು ಜನರಿಂದ ಅತ್ಯಾಚಾರ ಮತ್ತು ಕ್ರೂರ  ಹಲ್ಲೆಗೊಳಗಾಗಿ ಸಾವನ್ನಪ್ಪಿದ ೨೩ ವರ್ಷದ ಫಿಸಿಯೋಥೆರೆಪಿ  ವಿದ್ಯಾರ್ಥಿನಿಯ ತಾಯಿ ಆಶಾ ದೇವಿ ಮಂಗಳವಾರ, ಅಪರಾಧಿಗಳ  ಕ್ಯುರೇಟಿವ್  ಅರ್ಜಿಗಳನ್ನು ಖಚಿತವಾಗಿ ತಿರಸ್ಕರಿಸಲಾಗುವುದು  ಮತ್ತು ಅವರನ್ನು ಜನವರಿ ೨೨ರಂದು  ಗಲ್ಲಿಗೇರಿಸಲಾಗುವುದು ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದ್ದರು.

"ಕ್ಯುರೇಟಿವ್ ಅರ್ಜಿಯನ್ನು  ತಿರಸ್ಕರಿಸಲೇ ಬೇಕು.  ಅವರು ಸುಪ್ರೀಂ ಕೋರ್ಟ್‌ಗೆ  ಹೋಗಿರುವುದು ಇದು ಮೂರನೇ ಬಾರಿ.  ಅವರು ಯಾವುದೇ ಮನವಿ ಸಲ್ಲಿಸಿದರೂ ನಾವು ಅವರನ್ನು ಎದುರಿಸಲು ಸಿದ್ಧರಿದ್ದೇವೆ ಮತ್ತು ನಾವು ಹೋರಾಡುತ್ತೇವೆ. ಅವರನ್ನು ಜನವರಿ ೨೨ ರಂದು ಗಲ್ಲಿಗೇರಿಸಲಾಗುವುದು ಎಂದು ನಾವು ಭಾವಿಸುತ್ತೇವೆ  ಮತ್ತು ಅದು ಆಗಲೇಬೇಕೆಂದು ನಾವು ಬಯಸುತ್ತೇವೆ" ಎಂದು ನಿರ್ಭಯಾ ಅವರ ತಾಯಿ ಹೇಳಿದ್ದರು.

No comments:

Advertisement