My Blog List

Thursday, January 2, 2020

ಸೇನಾ ಪಡೆಗಳು ರಾಜಕೀಯದಿಂದ ದೂರ: ಸಿಡಿಎಸ್ ಜನರಲ್ ರಾವತ್ ಪ್ರಥಮ ಸಂದೇಶ

ಸೇನಾ ಪಡೆಗಳು ರಾಜಕೀಯದಿಂದ ದೂರಸಿಡಿಎಸ್ ಜನರಲ್ ರಾವತ್ ಪ್ರಥಮ ಸಂದೇಶ
ನವದೆಹಲಿ: ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ಸಿಡಿಎಸ್) 2020 ಜನವರಿ 01ರ ಬುಧವಾರ ಅಧಿಕಾರ ವಹಿಸಿಕೊಂಡಿರುವ ಜನರಲ್ ಬಿಪಿನ್ ರಾವತ್ ಅವರು ತಮ್ಮ ಮೊದಲ ಸಂದೇಶದಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲನೆ ಮಾಡುವ ಸೇನಾ ಪಡೆಗಳು ರಾಜಕೀಯದಿಂದ ದೂರ ಇರುತ್ತವೆ ಎಂದು ಹೇಳಿದರು.

ಅಧಿಕಾರ
ಸ್ವೀಕರಿಸಿದ ಬಳಿಕ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ರಾವತ್ ಅವರು ಸ್ಮಾರಕಕ್ಕೆ ಹೂಗುಚ್ಛ ಇಡುವ ಮೂಲಕ ಗೌರವ ಸಲ್ಲಿಸಿ ಬಳಿಕ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ನೀಡಿದರು.

ಮೂರೂ ರಕ್ಷಣಾ ಪಡೆಗಳು ಸಂಘಟಿತ ರೀತಿಯಲ್ಲಿ ಒಂದೇ ತಂಡದಂತೆ ಕಾರ್ಯವೆಸಗಬೇಕು. ರಾಜಕೀಯದಿಂದ ದೂರವಿದ್ದು, ಸರ್ಕಾರ ನೀಡಿದ ನಿರ್ದೇಶನದಂತೆ ಕೆಲಸ ಮಾಡೋಣ ಎಂದು ಅವರು ಹೇಳಿದರು.

++ ಎಂಬ ರೀತಿಯಲ್ಲಿ ತಂಡದ ಗುರಿ ಮೂರು ಅಲ್ಲ, ಅದು ಐದು ಅಥವಾ ಏಳು ಆಗಿರಬಹುದು. ಸಂಘಟಿತ ರೀತಿಯಲ್ಲಿ ನಮ್ಮ ಪ್ರಯತ್ನ ಮತ್ತಷ್ಟು ಹೆಚ್ಚು ಇರಬೇಕು. ಏಕೀಕರಣದ ಮೂಲಕ ನಾವು ಮತ್ತಷ್ಟು ಸಾಧಿಸಬೇಕು ಎಂದು ರಾವತ್ ನುಡಿದರು.

ಸಂಪನ್ಮೂಲಗಳ ಸರಿಯಾದ ಬಳಕೆ ಮತ್ತು ಜಂಟಿ ತರಬೇತಿ ನೀಡುವುದರ ಬಗ್ಗೆ ಸಿಡಿಎಸ್ ಹೆಚ್ಚಿನ ಗಮನ ಹರಿಸುವುದು ಎಂದು  ಅವರು ಹೇಳಿದರು.

ಭೂಸೇನೆ, ವಾಯುಸೇನೆ, ಹಾಗೂ ನೌಕಾಸೇನೆಗಳಿಗೆ ಒಟ್ಟಾಗಿ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದಾರೆ ಬಿಪಿನ್ ರಾವತ್.

ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ, ರಾವತ್ ಅವರಿಗೆ ಗೌರವಾದರಗಳಿಂದ ಸ್ವಾಗತ ಕೋರಲಾಯಿತು. ಭೂಸೇನಾ ಮುಖ್ಯಸ್ಥ ಹುದ್ದೆಯಿಂದ ಮಂಗಳವಾರ ನಿವೃತ್ತಿಯಾದ ರಾವತ್, ಭಾರತದ ಮೊದಲ ಸಿಡಿಎಸ್ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ.

೬೨
ವರ್ಷದ ಜನರಲ್ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿ ಮಂಗಳವಾರ ನಿವೃತ್ತಿ ಹೊಂದಿದ್ದರು. ಇದಕ್ಕೂ ಮುನ್ನವೇ ರಾವತ್ ಅವರನ್ನು ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಸರ್ಕಾರ ನೇಮಕ ಮಾಡಿತ್ತು. ಹುದ್ದೆಯನ್ನು ಕೆಲದಿನಗಳ ಹಿಂದಷ್ಟೇ ಸೃಷ್ಟಿಸಲಾಗಿತ್ತು.

ಭಾರತದ
ರಕ್ಷಣಾ ಪಡೆಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳ ಮಧ್ಯೆ ಸಹಕಾರ, ಸಮನ್ವಯ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ಸಿಡಿಎಸ್ ಅವರಿಗೆ ಇರುತ್ತದೆ. ತುರ್ತು ಸಂದರ್ಭಗಳಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲು ಹುದ್ದೆ ಸಹಾಯಕವಾಗುವ ನಿರೀಕ್ಷೆ ಇದೆ.

ಸರ್ಕಾರವು
ಮೂರೂ ಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚನೆ ನಡೆಸಬೇಕಾದ ಅಗತ್ಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ಸಿಡಿಎಸ್ ಅವರೇ ಏಕಗವಾಕ್ಷಿಯಾಗಿ ರಕ್ಷಣಾ ಸಚಿವರಿಗೆ ಸಲಹೆ ನೀಡಲಿದ್ದಾರೆ.

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಮಾತನಾಡಿ ಬೆಂಕಿ ಹಚ್ಚಲು ಪ್ರೇರೇಪಿಸುವವರು ನಾಯಕರಲ್ಲ ಎಂಬುದಾಗಿ ನೀಡಿದ್ದ ರಾವತ್ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳು ಎದುರಾಗಿದ್ದವು.

No comments:

Advertisement