My Blog List

Tuesday, January 28, 2020

ನಿರ್ಭಯಾ ಪ್ರಕರಣ: ಸುಪ್ರೀಂನಿಂದ ಮುಖೇಶ್ ಅರ್ಜಿ ವಿಚಾರಣೆ

ನಿರ್ಭಯಾ ಪ್ರಕರಣ: ಸುಪ್ರೀಂನಿಂದ ಮುಖೇಶ್ ಅರ್ಜಿ ವಿಚಾರಣೆ
ನವದೆಹಲಿ: ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಮುಖೇಶ್ ಸಿಂಗ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು 2020 ಜನವರಿ 28ರ ಮಂಗಳವಾರ ಮಧ್ಯಾಹ್ನ ೧೨.೩೦ಕ್ಕೆ ನಡೆಸಲಿದೆ.

ತಾನು ಸಲ್ಲಿಸಿದ್ದ ಕ್ಷಮಾದಾನ ಕೋರಿಕೆ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಮುಖೇಶ್ ಸಿಂಗ್ ಈ ಅರ್ಜಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದಾನೆ.

ಮುಖೇಶ್ ಸಿಂಗ್ ಪರ ವಕೀಲರು ಕಳೆದ ವಾರ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ ಶರತ್ ಎ. ಬೋಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಪ್ರಸ್ತಾಪಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರು ಅರ್ಜಿಯನ್ನು ಕಲಾಪ ಪಟ್ಟಿಗೆ ಸೇರಿಸಲು ನ್ಯಾಯಾಲಯದ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸುವಂತೆ ಸೂಚಿಸಿದ್ದರು. ಪ್ರಕರಣವನ್ನು ನ್ಯಾಯಾಲಯವು  ಮೊದಲ ಆದ್ಯತೆಯ ಮೇರೆಗೆ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದ್ದರು.

"ಯಾರನ್ನಾದರೂ ಗಲ್ಲಿಗೇರಿಸಲಾಗುತ್ತಿದ್ದರೆ ಇದಕ್ಕಿಂತ ಹೆಚ್ಚಿನ ತುರ್ತು ಏನೂ ಇರಲು ಸಾಧ್ಯವಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹೇಳಿದ್ದರು.

No comments:

Advertisement