ಭಾರತಕ್ಕೂ
ಬಂದಿದೆಯೇ ಕೊರೋನಾ ವೈರಸ್?
ಮುಂಬೈ:
ಚೀನಾವನ್ನು ಗಡಗಡ ನಡುಗಿಸುತ್ತಿರುವ ನೂತನ ಮಾರಕ ರೋಗ ಕೊರೋನಾವೈರಸ್ ಭಾರತಕ್ಕೂ ಕಾಲಿಟ್ಟಿದೆಯೇ ಎಂಬ ಶಂಕೆ ಮೂಡಿದ್ದು, ಚೀನಾದಿಂದ ವಾಪಸಾಗಿರುವ ಇಬ್ಬರ ಮೇಲೆ ಮುಂಬೈಯಲ್ಲಿ ತೀವ್ರ ನಿಗಾ ಇಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ 2020 ಜನವರಿ 24ರ ಶುಕ್ರವಾರ ತಿಳಿಸಿತು.
ಅತ್ಯಂತ
ತ್ವರಿತವಾಗಿ ಹರಡುತ್ತಿರುವ ಕೊರೋನಾ ವೈರಸ್ ಚೀನಾದಲ್ಲಿ ೨೬ ಮಂದಿಯನ್ನು ಬಲಿತೆಗೆದುಕೊಂಡಿದ್ದು,
ದೇಶಾದ್ಯಂತ ಕನಿಷ್ಠ ೮೩೦ ಮಂದಿಗೆ ಸೋಂಕು ತಗುಲಿದೆ. ದೇಶದ ಇತರೆಡೆಗಳಲ್ಲಿ ೧೭೭ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಚೀನಾ ಸರ್ಕಾರ ಹೇಳಿದೆ.
ಮುಂಬೈಯ
ಚಿಂಚ್ಪೊಕಾಲಿಯಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಏಕಾಂಗಿವಾಸದ (ಐಸೋಲೇಷನ್) ವಾರ್ಡ್ನ್ನು ತೆರೆಯಲಾಗಿದೆ ಎಂದು ಬೃಹನ್ಮುಂಬಯಿ ಮುನಿಸಿಪಲ್ ಕಾಪೋರೇಷನ್‌ನ (ಬಿಎಂಸಿ) ಕಾರ್ಯನಿರ್ವಾಹಕ ಆರೋಗ್ಯಾಧಿಕಾರಿ ಡಾ. ಪದ್ಮಜಾ ಕೇಸ್ಕರ್ ಹೇಳಿದರು.
ಲಘು
ಕೆಮ್ಮು ಮತ್ತು ಶೀತಸಂಬಂಧಿ ಲಕ್ಷಣಗಳ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ನಿಗಾ ಇರಿಸಲಾಗಿದೆ ಎಂದು ಡಾ.ಕೇಸ್ಕರ್ ಹೇಳಿದರು.
ಚೀನಾದಿಂದ
ವಾಪಸಾಗುವ ಪ್ರಯಾಣಿಕರನ್ನು ಕೊರೋನಾ ವೈರಸ್ ಲಕ್ಷಣಗಳೇನಾದರೂ ಕಾಣಿಸಿದಲ್ಲಿ ’ಏಕಾಂಗಿವಾಸ’ದ ವಾರ್ಡ್‌ಗೆ
ಕಳುಹಿಸುವಂತೆ ಮುಂಬೈ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ವೈದ್ಯರಿಗೆ ಸೂಚಿಸಲಾಗಿದೆ ಎಂದು ಅವರು ನುಡಿದರು.
‘ಚೀನಾದಿಂದ
ವಾಪಸಾದ ಯಾರಲ್ಲಾದರೂ ಕೊರೋನಾ ವೈರಸ್ ಲಕ್ಷಣಗಳು ಕಂಡು ಬಂದರೆ ತತ್ ಕ್ಷಣ ತಮಗೆ ತಿಳಿಸುವಂತೆ ನಗರದ ಎಲ್ಲ ಖಾಸಗಿ ವೈದ್ಯರಿಗೂ ಸೂಚಿಸಲಾಗಿದೆ’ ಎಂದು
ಅವರು ಹೇಳಿದರು.
ತಪಾಸಣೆ:
ಕೊರೋನಾ ವೈರಸ್ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಭಾರತದ ೭ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣಗಳಲ್ಲಿ ಚೀನಾದಿಂದ ಆಗಮಿಸುವ ಪ್ರವಾಸಿಗರ ಆರೋಗ್ಯ ತಪಾಸಣೆಯನ್ನು ಭಾರತದ ಆರೋಗ್ಯ ಸಚಿವಾಲಯವು ಆರಂಭಿಸಿದೆ.
ಜೊತೆಗೆ
ಚೀನಾಕ್ಕೆ ತೆರಳುವ ಭಾರತೀಯ ಪ್ರವಾಸಿಗರಿಗೆ ಸಲಹಾರೂಪದ ಎಚ್ಚರಿಕೆಗಳನ್ನೂ ನೀಡುತ್ತಿದೆ.
ಬೆಂಗಳೂರು,
ದೆಹಲಿ, ಮುಂಬೈ, ಕೋಲ್ಕತ, ಚೆನ್ನೈ, ಹೈದರಾಬಾದ್ ಹಾಗೂ ಕೋಚಿ ಅಂತಾರಾಷ್ಟ್ರೀಯವಿಮಾನ ನಿಲ್ದಾಣಗಳಲ್ಲಿ ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಸಚಿವಾಲಯವು ವಿಮಾನ ನಿಲ್ದಾಣಗಳ ಆರೋಗ್ಯ ಸಚಿವಾಲಯಗಳಿಗೆ ಸೂಚಿಸಿದೆ.
ಅದರಂತೆ
ಜನವರಿ ೧೭ರಂದು ಭಾರತವು ಪ್ರಯಾಣಿಕರ ತಪಾಸಣೆ ಆರಂಭಿಸಿದ್ದು ಜನವರಿ
೨೨ರವರೆಗೆ ೬೦ ವಿಮಾನಗಳಲ್ಲಿ ಆಗಮಿಸಿದ
೧೨,೮೨೮ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಈವರೆಗೆ ಯಾವುದೇ ಕೊರೋನಾವೈರಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
ಇದೇ
ವೇಳೆಯಲ್ಲಿ ಚೀನಾದ
ವುಹಾನ್ ನಗರದಿಂದ ಭಾರತದಲ್ಲಿನ ತಮ್ಮ ಮನೆಗಳಿಗೆ ವಾಪಸಾಗಿರುವ ಕನಿಷ್ಠ ೨೫ ಮಂದಿಯನ್ನು ಕೊರೋನಾ
ವೈರಸ್ ಲಕ್ಷಣಗಳನ್ನು ಗಮನಿಸುವ ಸಲುವಾಗಿ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ನುಡಿದರು.
ಚೀನಾದಿಂದ
ಆಗಮಿಸುವ ಪ್ರಯಾಣಿಕರು ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಗಂಟಲು ಕಟ್ಟುವಿಕೆ, ನೆಗಡಿ ಇತ್ಯಾದಿ ಸಮಸ್ಯೆ ಎದುರಿಸಲು ಆರಂಭಿಸಿದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದೂ ಸಲಹೆ ಮಾಡಲಾಗಿದೆ.
ಕೊರೋನಾ
ವೈರಸ್ ಮೊದಲಿಗೆ ಕಾಣಿಸಿಕೊಂಡಿರುವ ಚೀನಾದ ವುಹಾನ್ ನಗರದ ಸುತ್ತಮುತ್ತ ಸುಮಾರು ೭೦೦ ಮಂದಿ ಭಾರತೀಯ ವಿದ್ಯಾರ್ಥಿಗಳು ವೈದ್ಯಕೀಯ ಮತ್ತಿತರ ಕೋರ್ಸುಗಳನ್ನು ಮಾಡುತ್ತಿದ್ದಾರೆ. ಅವರ ಪೈಕಿ ಬಹುತೇಕ ಮಂದಿ ರಜೆಯ ಕಾರಣ ತಾಯ್ನಾಡಿಗೆ ಮರಳಿದ್ದಾರೆ, ಆದರೆ ಕೆಲವರು ಇನ್ನೂ ಅಲ್ಲಿಯೇ ಉಳಿದುಕೊಂಡಿದ್ದಾರೆ.
ಬೀಜಿಂಗ್ನಲ್ಲಿ ಗಣರಾಜ್ಯೋತ್ಸವ ರದ್ದು
ಕೊರೋನಾ
ವೈರಸ್ ಹಿನ್ನೆಲೆಯಲ್ಲಿ ಚೀನಾದ ಬೀಜಿಂಗ್ನಲ್ಲಿ ಪ್ರತಿವರ್ಷ ನಡೆಸಲಾಗುತ್ತಿದ್ದ ಗಣರಾಜ್ಯೋತ್ಸವ ಸಂಭ್ರಮಾಚರಣೆಯನ್ನು ಭಾರತೀಯ ರಾಯಭಾರಿ ಕಚೇರಿ ರದ್ದು ಮಾಡಿದೆ.
ಈ
ಬಗ್ಗೆ ಟ್ವೀಟ್ ಮಾಡಿರುವ ರಾಯಭಾರಿ ಕಚೇರಿ, ಚೀನಾವು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭಗಳನ್ನು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಜನವರಿ ೨೬ರ ಗಣರಾಜ್ಯೋತ್ಸವ ಸಮಾರಂಭವನ್ನೂ ರದ್ದು ಪಡಿಸಲಾಗಿದೆ ಎಂದು ತಿಳಿಸಿದೆ.
ಪ್ರತಿವರ್ಷದಂತೆ
ಈ ವರ್ಷವೂ ನಡೆಸಲು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಚೀನಾದ ಅಧಿಕಾರಿಗಳು, ರಾಯಭಾರಿ ಅಧಿಕಾರಿಗಳು, ಮುಖ್ಯ ಅತಿಥಿಯಾಗಿ ವಿದೇಶಾಂಗ ಉಪಸಚಿವ ಹಾಗೂ ಭಾರತದ ಚೀನೀ ರಾಯಭಾರಿ ಲುವೋ ಝಾವೌಹುಯಿ ಅವರು ಪಾಲ್ಗೊಳ್ಳಬೇಕಿತ್ತು.
ಏನಿದು
ಕೊರೋನಾವೈರಸ್?
ಕೊರೋನಾವೈರಸ್
ಎಂಬುದು ವೈರಸ್ಗಳ ಕುಟುಂಬಕ್ಕೆ ಸೇರಿದ
ಒಂದು ವೈರಸ್ ಆಗಿದ್ದು, ಸೌರಮಂಡಲ ಮಾದರಿಯ ಆಕಾರದ ಪರಿಣಾಮವಾಗಿ ಈ ಹೆಸರನ್ನು ಪಡೆದಿದೆ.
ವೈರಸ್ಗಳು ಸಾಮಾನ್ಯ ಶೀತದಿಂದ ತೊಡಗಿ, ತೀವ್ರವಾದ ಉಸಿರಾಟದ ಸಮಸ್ಯೆವರೆಗಿನ ಅಸ್ವಸ್ಥತೆಗೆ ಕಾರಣವಾಗುತ್ತದೆ, ಆದರೆ ಚೀನಾದಲ್ಲಿ ಹಲವರ ಸಾವಿಗೆ ಕಾರಣವಾಗಿರುವ ಈ ವೈರಸ್ ಹೊಸ
ಮಾದರಿಯ ವೈರಸ್ ಆಗಿದೆ.
ಕೊರೋನಾವೈರಸ್
ರೋಗದ ಸಾಮಾನ್ಯ ಲಕ್ಷಣಗಳಲಿ ಜ್ವರ, ಕೆಮ್ಮು, ಉಸಿರಾಟದ ತೊಂದರೆ ಸೇರಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಒ) ಹೇಳಿದೆ.
ನೂತನ
ಕೊರೋನಾ ವೈರಸ್ ಚೀನಾ ಪಾಲಿಗೆ ತುರ್ತುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ, ಆದರೆ ಇದು ಅಂತಾರಾಷ್ಟ್ರೀಯ ಕಳವಳ ಹುಟ್ಟಿಸುವ ರೋಗ ಎಂಬುದಾಗಿ ಇನ್ನೂ ಘೋಷಿಸಿಲ್ಲ.
ಕೇಂದ್ರ
ಚೀನಾದ ವುಹಾನ್ ನಗರದ ಸಮುದ್ರ ಆಹಾರ, ಮೀನು, ಮಾಂಸ ಮತ್ತು ಹಾವು ಇತ್ಯಾದಿ ಜೀವಂತ ಆಹಾರ ಪ್ರಾಣಿಗಳ ಮಾರುಕಟ್ಟೆ ಈ ರೋಗದ ಮೂಲ
ಸ್ಥಳ ಎಂಬುದಾಗಿ ಗುರುತಿಸಲಾಗಿದೆ.
ಚೀನಾದ
ಹೊರತಾಗಿ ಥಾಯ್ಲೆಂಡ್, ವಿಯೆಟ್ನಾಮ್, ಸಿಂಗಾಪುರ, ಜಪಾನ್, ದಕ್ಷಿಣ ಕೊರಿಯಾ, ತೈವಾನ್ ಮತ್ತು ಅಮೆರಿಕದಲ್ಲಿ ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.
No comments:
Post a Comment