Wednesday, January 8, 2020

ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕಿ ಐಶೆ ಘೋಷ್ ವಿರುದ್ಧ ಎಫ್‌ಐಆರ್

 ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕಿ ಐಶೆ ಘೋಷ್ ವಿರುದ್ಧ ಎಫ್‌ಐಆರ್
ಸೆಮೆಸ್ಟರ್ ನೋಂದಣಿ ಪ್ರಕ್ರಿಯೆಗೆ ಅಡ್ಡಿ, ಸರ್ವರ್ ಧ್ವಂಸ ಆರೋಪ, ಹಲ್ಲೆಯ ಹೊಣೆ ಹೊತ್ತ ಹಿಂದು ರಕ್ಷಾ ದಳ
ನವದೆಹಲಿ: ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಆವರಣದಲ್ಲಿ ಸಂಭವಿಸಿದ ಹಿಂಸಾಚಾರದ ವೇಳೆಯಲ್ಲಿ ಸಶಸ್ತ್ರ ಮುಸುಕುಧಾರಿಗಳಿಂದ ಹಲ್ಲೆಗೀಡಾಗಿ ತಲೆಗೆ ಗಾಯಗಳಾಗಿದ್ದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ ಹಲವರ ವಿರುದ್ಧ ಪೊಲೀಸರು ವಿಧ್ವಂಸಕ ಕೃತ್ಯಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ. ಈ ಮಧ್ಯೆ ಪಿಂಕಿ ಚೌಧರಿ ನೇತೃತ್ವದ ಹಿಂದೂ ರಕ್ಷಾ ದಳ ಎಂಬ ಸಂಘಟನೆಯೊಂದು  2020 ಜನವರಿ 07ರ ಮಂಗಳವಾರ ಜೆಎನ್‌ಯು ಹಲ್ಲೆಯ ಹೊಣೆ ಹೊತ್ತುಕೊಂಡಿತು.

ಜನವರಿ ೫ರಂದು ನಡೆದ ಹಿಂಸಾಚಾರದ ಘಟನೆಗೆ ಮುನ್ನ 2020 ಜನವರಿ ೩ ಮತ್ತು ೪ರಂದು ಸೆಮೆಸ್ಟರ್  ರಿಜಿಸ್ಟ್ರೇಷನ್ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡಿ, ಕಂಪ್ಯೂಟರ್ ಸರ್ವರ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್‌ಯು ಆಡಳಿತವು ಪೊಲೀಸರಿಗೆ ನೀಡಿದ್ದ ಮೂರು ದೂರುಗಳ ಪೈಕಿ ಒಂದರಲ್ಲಿ ಘೋಷ್ ಅವರ ಹೆಸರಿದ್ದುದು ಮೊದಲ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ದಾಖಲಾಗಿದೆ.

ಈ ಮಧ್ಯೆ, ಮುಂಬೈಯಲ್ಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕವರ್ಗಕ್ಕೆ ಬೆಂಬಲ ವ್ಯಕ್ತ ಪಡಿಸಿ, ಮುಂಬೈಯ ಗೇಟ್ ವೇ ಆಫ್ ಇಂಡಿಯಾ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಿದರು. ಬಳಿಕ ಅವರು ಪ್ರತಿಭಟನೆಯ ತಾಣವನ್ನು ಆಜಾದ್ ಮೈದಾನಕ್ಕೆ ಸ್ಥಳಾಂತರಿಸಿದರು.  ಕಾನೂನು ಸುವ್ಯವಸ್ಥೆ ಸಮಸ್ಯೆ ಹಿನ್ನೆಲೆಯಲ್ಲಿ ಪ್ರತಿಭಟನೆಗೆ  ಅನುಮತಿ ನೀಡದ ಕಾರಣ ಅವರ ಪ್ರದರ್ಶನವನ್ನು ಸ್ಥಳಾಂತರಿಸಲಾಯಿತು ಎಂದು ಮುಂಬೈ ಪೊಲೀಸರು ಹೇಳಿದರು.

ಅಹ್ಮದಾಬಾದಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಚೇರಿಯ ಸಮೀಪ ಎನ್‌ಎಸ್‌ಯುಐ ಪ್ರತಿಭಟನೆ ನಡೆಸಿದಾಗ ಉಭಯು ಸಂಘಟನೆಗಳ ಕಾರ್‍ಯಕರ್ತರ ಮಧ್ಯೆ ಘರ್ಷಣೆ ಸಂಭವಿಸಿತು. ಘರ್ಷಣೆ ನಿರತರನ್ನು ಚದುರಿಸಲು ಪೊಲೀಸರು ಬೆತ್ತ ಪ್ರಹಾರ ನಡೆಸಿದರು. ಘಟನೆಯಲ್ಲಿ ೧೦ ಮಂದಿ ಗಾಯಗೊಂಡರು.

2020 ಜನವರಿ 5ರ ಭಾನುವಾರ ಸಂಜೆ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯ (ಜೆಎನ್‌ಯು) ಆವರಣದಲ್ಲಿ ಹಿಂಸಾಚಾರ ತಾರಕಕ್ಕೆ ಏರಿದ್ದಾಗ, ವಸಂತ ಕುಂಜ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಮತ್ತು ಇತರ ನಾಯಕರು ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆಯಲ್ಲಿ ತಲ್ಲೀನರಾಗಿದ್ದರು.

ದೆಹಲಿ ಪೊಲೀಸರು ಸಲ್ಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ರಾತ್ರಿ ೮.೫೩ ಗಂಟೆ ಎಂಬುದಾಗಿ ದಾಖಲಾಗಿದ್ದು, ಇದೇ ವೇಳೆಗೆ ವಿಶ್ವ ವಿದ್ಯಾಲಯ ಆವರಣದಲ್ಲಿ ಹಿಂಸಾಚಾರ ತಾರಕಕ್ಕೆ ಏರಿತ್ತು ಮತ್ತು ಪೊಲೀಸರು ನಿಷ್ಕ್ರಿಯರಾಗಿದ್ದರು ಎಂದು ವಿದ್ಯಾರ್ಥಿ ಸಂಘದ ನಾಯಕರು ದೂರಿದ್ದಾರೆ. ಇದೇ ವೇಳೆಗೆ ಮುಸುಕು ಧರಿಸಿದ್ದ  ಸಶಸ್ತ್ರ ವ್ಯಕ್ತಿಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಥಳಿಸುತ್ತಾ ಜೆಎನ್ ಯು ಆಸ್ತಿಪಾಸ್ತಿಯನ್ನು ಧ್ವಂಸಗೊಳಿಸುತ್ತಾ ಸಾಗಿದ್ದರು ಎಂದು ಆಪಾದಿಸಲಾಗಿದೆ.

ತಲೆಗೆ ಏಟು ಬಿದ್ದ ಐಶೆ ಘೋಷ್ ಮತ್ತು ಇತರ ವಿದ್ಯಾರ್ಥಿಗಳು ಜನವರಿ ೪ರ ಶನಿವಾರ ಸರ್ವರ್‌ಗಳನ್ನು ಹಾನಿ ಪಡಿಸಿ, ಭದ್ರತಾ ಸಿಬ್ಬಂದಿ ಮೇಲೆ ಕೈಮಾಡಿದ್ದರು ಎಂಬುದಾಗಿ ಆಪಾದಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆಡಳಿತ ಸಲ್ಲಿಸಿದ ದೂರನ್ನು ಅನುಸರಿಸಿ ಪೊಲೀಸರು ಈ ಎಫ್‌ಐಆರ್ ದಾಖಲಿಸಿದ್ದಾರೆ.

ಜೆಎನ್‌ಯು ಆವರಣವು ವಸಂತ ಕುಂಜ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದು ಅಧಿಕಾರಿಗಳು ಆವರಣದಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಸುಸ್ಥಿತಿಗೆ ತರುವ ಕಾರ್‍ಯದಲ್ಲಿ ನಿರತರಾಗಿದ್ದಾರೆ.
ಜೆಎನ್‌ಯು ಭದ್ರತಾ ಸಿಬ್ಬಂದಿ ನೀಡಿದ ದೂರನ್ನು ಆಧರಿಸಿ ಈ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನ ಪ್ರಕಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಕಮ್ಯೂನಿಕೇಷನ್ ಮತ್ತು ಇನ್ ಫಾರ್‍ಮೇಷನ್ ಸರ್ವೀಸ್ (ಸಿಐಎಸ್) ಕಟ್ಟಡಕ್ಕೆ ಬೀಗ ಜಡಿದ ಕಾರಣ ಜನವರಿ ೩ ಮತ್ತು  ಜನವರಿ ೪ರಂದು ಸೆಮೆಸ್ಟರ್ ಪ್ರವೇಶ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು ಎಂದು ಹೇಳಲಾಗಿದೆ.

ತಮ್ಮಲ್ಲಿ ಕೆಲವರು ಸಿಐಎಸ್ ಸಿಬ್ಬಂದಿ ಜೊತೆಗೆ ಕಟ್ಟಡವನ್ನು ಪ್ರವೇಶಿಸಲು ಯತ್ನಿಸಿದಾಗ ಐಶೆ ಘೋಷ್ ಮತ್ತು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಸಾಕೇತ್ ಮೂನ್ ಸೇರಿದಂತೆ ವಿದ್ಯಾರ್ಥಿಗಳು ತಮ್ಮ ಮೇಲೆ ಕೈಮಾಡಿ, ಬೆದರಿಕೆ ಹಾಕಿದರು ಎಂದು ಭದ್ರತಾ ಸಿಬ್ಬಂದಿ ಪೊಲೀಸರಿಗೆ ಸಲ್ಲಿಸಿದ ದೂರು ತಿಳಿಸಿದೆ.

ಐಶೆ ಘೋಷ್ ಮತ್ತು ಸಾಕೇತ್ ಮೂನ್ ಅವರು ಇತರರ ಜೊತೆ ಸೇರಿ ಗಾಜಿನ ಬಾಗಿಲು ಮತ್ತು ಫೈಬರ್ ಆಪ್ಟಿಕ್ ಕೇಬಲ್‌ಗಳನ್ನು ಧ್ವಂಸಗೊಳಿಸಿದರು ಎಂದೂ ದೂರಿನಲ್ಲಿ ಆಪಾದಿಸಲಾಗಿದೆ.

ಹಿಂಸಾಕೃತ್ಯದ ಘಟನೆ ಸಂಭವಿಸಿ ೪೦ ಗಂಟೆಗಳು ಕಳೆದಿದ್ದರೂ ಪೊಲೀಸರು ವಿಶ್ವವಿದ್ಯಾಲಯದ ಆವರಣ ಪ್ರವೇಶಿಸಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಗುಂಪಿನ ಯಾವ ವ್ಯಕ್ತಿಗಳನ್ನೂ ಪೊಲೀಸರು ಬಂಧಿಸಿಲ್ಲ.

ತನಿಖೆಯನ್ನು ಕೈಗೆತ್ತಿಕೊಂಡಿರುವ ಅಪರಾಧ ಶಾಖೆಯ ತಂಡವೊಂದು ಮಂಗಳವಾರ ತನಿಖೆಯ ಅಂಗವಾಗಿ ವಿಶ್ವವಿದ್ಯಾಲಯ ಆವರಣಕ್ಕೆಭೇಟಿ ನೀಡಿ ಪರಿಶೀಲಿಸಿತು.

ವಿಶ್ವವಿದ್ಯಾಲಯ ಆವರಣ ಪ್ರವೇಶಿಸಲು ತಮಗೆ ಉಪಕುಲಪತಿ ಎಂ. ಜಗದೀಶ ಕುಮಾರ್ ಅವರಿಂದ ಭಾನುವಾರ ರಾತ್ರಿ ೭.೪೫ ಗಂಟೆಗಷ್ಟೇ ಲಿಖಿತ ಅನುಮತಿ ಲಭಿಸಿತ್ತು ಎಂದು ಪೊಲೀಸರು ತಿಳಿಸಿದರು.

ಆದಾಗ್ಯೂ, ಭಾನುವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಅಧಿಕಾರಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಮೊದಲ ಹಿಂಸಾಚಾರ ಘಟನೆ ಸಂಭವಿಸಿದ ಬಳಿಕ ಮಧ್ಯಾಹ್ನ ೩.೪೫ರ ವೇಳೆಗೆ ತಮಗೆ ಜೆಎನ್‌ಯುನಿಂದ ಮನವಿ ಪತ್ರ ಬಂದಿತ್ತು ಎಂದು ತಿಳಿಸಲಾಗಿದೆ.

ಜೆಎನ್ ಯು ಆಡಳಿತವು ವಸತಿ ಶುಲ್ಕ ಏರಿಕೆ ವಿರುದ್ಧ ನಡೆದ ವಿದ್ಯಾರ್ಥಿ ಚಳವಳಿಯನ್ನು ಹಾಳುಗೆಡವಲು ಜೆಎನ್‌ಯು ಆಡಳಿತವು ಗುಂಪಿನ ಜೊತೆಗೆ ಕೈಜೋಡಿಸಿದೆ ಎಂದು ಘೋಷ್ ಆಪಾದಿಸಿದ್ದರು.

ಗುಂಪೊಂದು ವಿಶ್ವವಿದ್ಯಾಲಯ ಆವರಣ ಪ್ರವೇಶಿಸುತ್ತಿದೆ ಎಂಬುದು ತನಗೆ ಗೊತ್ತಾದಾಗ ಸಮೀಪದ ಪೊಲೀಸ್ ಠಾಣೆಯ ಠಾಣಾಧಿಕಾರಿ, ಹಿರಿಯ ಅಧಿಕಾರಿಗಳು ಮತ್ತು ಜೆಎನ್‌ಯು ಭದ್ರತಾ ಸಿಬ್ಬಂದಿಯನ್ನು  ತಾನು ಸಂಪರ್ಕಿಸಿದ್ದೆ, ಆದರೆ ಯಾವುದೇ ಸ್ಪಂದನೆ ಲಭಿಸಲಿಲ್ಲ ಎಂದು ಕೂಡಾ ಆಕೆ ಆಪಾದಿಸಿದ್ದರು.

ಎಡಪಕ್ಷ ಬೆಂಬಲಿತ ಜೆಎನ್‌ಯು ಎಸ್ ಯು ಮತ್ತು ಆರ್ ಎಸ್ ಎಸ್‌ಗೆ ಸಂಯೋಜಿತವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿಪಿಪಿ) ಭಾನುವಾರ ಸಂಭವಿಸಿದ ಸುಮಾರು ಎರಡು ಗಂಟೆಗಳ ಹಿಂಸಾಚಾರಕ್ಕೆ ಪರಸ್ಪರ ದೂಷಣೆ ಮಾಡಿಕೊಂಡಿವೆ.

ಹಲ್ಲೆ ನಡೆಸಿದವರಲ್ಲಿ ಕೆಲವರು ಜೆಎನ್‌ಯುವಿನಲ್ಲಿದ್ದ ಎಬಿವಿಪಿ ಸದಸ್ಯರಾಗಿದ್ದು, ಹೊರಗಿನ ಕೆಲವು ವ್ಯಕ್ತಿಗಳನ್ನೂ ಕರೆಸಲಾಗಿತ್ತು ಎಂದು ಘೋಷ್ ಆಪಾದಿಸಿದ್ದರು.

‘ನಮಗೆ ಮುತ್ತಿಗೆ ಹಾಕುವ ಮುನ್ನ ಅವರು ಪಾರ್ಕ್ ಮಾಡಲಾಗಿದ್ದ ಕಾರೊಂದನ್ನು ಧ್ವಂಸಗೊಳಿಸಿದರು. ನನ್ನ ಸಹೋದರಿ ತಪ್ಪಿಸಿಕೊಂಡಳು, ಆದರೆ ನಾನು ಮತ್ತು ನನ್ನ ಗೆಳತಿಯನ್ನು ಗುಂಪು ಅಡ್ಡ ಹಾಕಿತು. ಅವರು ಮೊದಲು ನನ್ನ ತಲೆಗೆ ಕಬ್ಬಿಣದ ಸಲಾಖೆಯಿಂದ ಹೊಡೆದರು, ಬಳಿಕ ನನ್ನನ್ನು ತುಳಿಯುತ್ತಾ ಥಳಿಸಿದರು. ಅವರು ಬೆದರಲಿ ಎಂದು ನಾನು ಜೋರಾಗಿ ಬೊಬ್ಬೆ ಹೊಡೆದೆ. ಆದರೆ ಅವರು ಹಲ್ಲೆಯನ್ನು ನಿಲ್ಲಿಸಲಿಲ್ಲ ಎಂದು ಆಕೆ ಹೇಳಿದ್ದರು.

ಸೆಂಟರ್ ಫಾರ್ ವೆಸ್ಟ್ ಏಷ್ಯನ್ ಸ್ಟಡೀಸ್ (ಸಿಡಬ್ಲೂಎಎಸ್) ಅಧ್ಯಕ್ಷ ಆಶ್ವಿನಿ ಮೊಹಪಾತ್ರ ಕೂಡಾ ಹಲ್ಲೆ ನಡೆಸಿದ್ದ ಗುಂಪಿನಲ್ಲಿದ್ದು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು ಎಂದು ಘೋಷ್ ಆಪಾದಿಸಿದ್ದರು. ಆದರೆ ಮೊಹಪಾತ್ರ ಅವರು ಆಪಾದನೆಯನ್ನು ನಿರಾಕರಿಸಿದ್ದರು.

ಭಾನುವಾರ ಹಿಂಸಾಚಾರಕ್ಕೆ ಶುಲ್ಕ ಏರಿಕೆ ವಿರುದ್ಧ ಚಳವಳಿ ನಡೆಸುತ್ತಾ ಸೆಮೆಸ್ಟರ್ ನೋಂದಣಿಯನ್ನು ಬಹಿಷ್ಕರಿಸಿರುವ ವಿದ್ಯಾರ್ಥಿಗಳೇ ಹೊಣೆ ಎಂದು ಜೆಎನ್‌ಯು ಉಪ ಕುಲಪತಿ ಜಗದೀಶ್ ಕುಮಾರ್ ಸೋಮವಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಹೊಣೆ ಹೊತ್ತ ಹಿಂದು ರಕ್ಷಾ ದಳ
ಈ ಮಧ್ಯೆ, ಜೆಎನ್‌ಯು ಆವರಣದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ನಡೆದ ಹಲ್ಲೆಯ ಹೊಣೆಗಾರಿಕೆಯನ್ನು ಹಿಂದು ರಕ್ಷಾ ದಳ ಹೊತ್ತುಕೊಂಡಿತು.. ಸಂಘಟನೆಯ ನಾಯಕ ಪಿಂಕಿ ಚೌಧರಿ ಟ್ವಿಟ್ಟರಿನಲ್ಲಿ ಪ್ರಕಟಿಸಿದ ವಿಡಿಯೋ ಒಂದರಲ್ಲಿ ತಮ್ಮ ಸಂಘಟನೆಯ ಸದಸ್ಯರು ಈ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಪಾದಿಸಿದರು.

’ಜೆಎನ್‌ಯು ರಾಷ್ಟ್ರ ವಿರೋಧಿ ಚಟುವಟಿಕೆಗಳ ಕೇಂದ್ರವಾಗಿದೆ. ನಾವು ಇದನ್ನು ಸಹಿಸುವುದಿಲ್ಲ. ಜೆಎನ್‌ಯುನಲ್ಲಿ ನಡೆದ ದಾಳಿಯ ಪೂರ್ಣ ಹೊಣೆಯನ್ನು ನಾವು ಹೊರುತ್ತೇವೆ, ಮತ್ತು ಅವರು ನಮ್ಮ ಕಾರ್‍ಯಕರ್ತರು ಎಂದು ಹೇಳಲು ಇಚ್ಛಿಸುತ್ತೇವೆ
ಎಂದು ಚೌಧರಿ ವಿಡಿಯೋದಲ್ಲಿ ತಿಳಿಸಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು..

ಇಂತಹ ರಾಷ್ಟ್ರವಿರೋಧಿ ಕೃತ್ಯಗಳು ನಡೆದಲ್ಲೂ ಇತರ ವಿಶ್ವವಿದ್ಯಾಲಯಗಳಲ್ಲೂ ನಾವು ಇದೇ ಕ್ರಮ ಕೈಗೊಳ್ಳುತ್ತೇವೆ. ರಾಷ್ಟ್ರಕ್ಕಾಗಿ ಯಾವುದೇ ತ್ಯಾಗಕ್ಕೆ ನಾವು ಸಿದ್ಧರಿದ್ದೇವೆ ಎಂದೂ ಅವರು ಹೇಳಿದರು..

ಚೌಧರಿ ಪ್ರತಿಪಾದನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

No comments:

Advertisement