ಗ್ರಾಹಕರ ಸುಖ-ದುಃಖ

My Blog List

Wednesday, January 8, 2020

ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು ಇನ್ನಿಲ್ಲ

ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು ಇನ್ನಿಲ್ಲ
ಶಿರಸಿ: ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು 2020 ಜನವರಿ 07ರ ಮಂಗಳವಾರ  ಮಧ್ಯಾಹ್ನ ೨.೪೫ಕ್ಕೆ ನಿಧನ ಹೊಂದಿದರು. ಅವರು ಕಳೆದ ಒಂದು ತಿಂಗಳುಗಳಿಂದ ಸೋಂದಾ - ಹಳೆಯೂರಿನಲ್ಲಿರುವ ಶ್ರೀಪಾದ ಜೋಶಿ ಬಾಡಲಕೊಪ್ಪ ಅವರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಅವರಿಗೆ ೮೦ ವರ್ಷ ಪ್ರಾಯವಾಗಿತ್ತು.

ಹೊಸ್ತೋಟ ಮಂಜುನಾಥ ಭಾಗವತರು ಒಂದರ್ಥದಲ್ಲಿ ಯಕ್ಷಗಾನ ಕಲೆಗಾಗಿ ತನ್ನ ಸರ್ವಸ್ವವನ್ನೂ ಸಮರ್ಪಿಸಿಕೊಂಡಿದ್ದ ಕಲಾ ತಪಸ್ವಿ. ಅವರು ಬಡಗುತಿಟ್ಟಿನ ಯಕ್ಷಗಾನದ ಅಧ್ಯಯನ-ಪರಾಮರ್ಶೆ-ಪ್ರಸರಣೆಗಾಗಿ ಜಂಗಮರಂತೆ ಏಕಾಂಗಿಯಾಗಿ ಊರೂರು ಸುತ್ತುತ್ತಿದ್ದ ಯಕ್ಷ ಭೈರಾಗಿ.

ಶಿರಸಿ ತಾಲೂಕಿನ ಹನುಮಂತಿ ಗ್ರಾಮದ ಹೊಸ್ತೋಟದಲ್ಲಿ ಮಂಜುನಾಥ ಭಾಗವತರು ೧೯೪೦ರಲ್ಲಿ ಜನಿಸಿದರು. ಆರನೇ ತರಗತಿಗೆ ಮಂಜುನಾಥ ಭಾಗವತರ ಶಾಲಾ ಕಲಿಕೆ ನಿಂತರೂ ಯಕ್ಷಗಾನದ ಕಡೆಗೆ ಬಾಲ್ಯದಿಂದಲೇ ಅವರಿಗಿದ್ದ ಆಸಕ್ತಿ ಅವರನ್ನು ಕೆರೆಮನೆ ಶಿವರಾಮ ಹೆಗಡೆ ಮತ್ತು ಕೆರೆಮನೆ ಮಹಾಬಲ ಹೆಗಡೆ ಅವರ ಸಂಪರ್ಕಕ್ಕೆ ಬರುವಂತೆ ಮಾಡಿತು.  ಮುಂದೆ ಸುಮಾರು ೨೮ ವರ್ಷಗಳವರೆಗೆ ಯಕ್ಷಗಾನದ ಸರ್ವಾಂಗೀಣ ವಿಭಾಗಗಳಲ್ಲಿ ಪ್ರಾವಿಣ್ಯತೆಯನ್ನು ಸಾಧಿಸಿದ್ದು ಮಾತ್ರವಲ್ಲದೇ ಜೊತೆಯಲ್ಲೇ ಕನ್ನಡ ಸಾಹಿತ್ಯ ಹಾಗೂ ಛಂದಸ್ಸುಗಳ ಅಧ್ಯಯನವನ್ನೂ ಮಾಡಿದ್ದರು.

ಈ ನಡುವೆ ೧೯೬೬ರಲ್ಲಿ ಕಾರವಾರದ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಪ್ರಭಾನಂದಜೀ ಅವರಿಂದ ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದುಕೊಂಡು ಪಾರಿವ್ರಾಜಕ ವೃತವನ್ನು ಸ್ವೀಕರಿಸಿದರು. ಆ ಬಳಿಕ ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಸಂಪೂರ್ಣ ಜೀವನವನ್ನು ಯಕ್ಷಗಾನಕ್ಕಾಗಿಯೇ ಮುಡುಪಾಗಿಟ್ಟರು.

ಕರ್ನಾಟಕಾದ್ಯಂತ ಸಂಚರಿಸುತ್ತಾ ಹಲವಾರು ಕಡೆಗಳಲ್ಲಿ ಯಕ್ಷಗಾನ ಕಲಿಕಾ ಶಿಬಿರಗಳನ್ನು ನಡೆಸಿದ ಅವರು  ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಅಂಧರಿಗೆ ಯಕ್ಷಗಾನ ತರಬೇತಿ ನೀಡಿದ ಹೆಗ್ಗಳಿಕೆ ಹೊಂದಿದವರು.  ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ವಿವಿಧ ಮಟ್ಟುಗಳ ಅಧ್ಯಯನ ಹಾಗೂ ಸಂಗ್ರಹವನ್ನು ಮಾಡಿದ್ದರು.

ಯಕ್ಷಗಾನದ ಸಮಗ್ರ ವಿಚಾರಗಳ ಅಧ್ಯಯನ ಮತ್ತು ಅಧ್ಯಾಪನಕ್ಕೆ ತನ್ನ ಸಂಪೂರ್ಣ ಬದುಕನ್ನು ಸಮರ್ಪಿಸಿಕೊಂಡು ಒಂದರ್ಥದಲ್ಲಿ ‘ಯಕ್ಷ ಋಷಿ
ಯಾಗಿಯೇ ಬದುಕಿದವರು ಹೊಸ್ತೋಟ ಭಾಗವತರು. ಭಾಗವತಿಕೆ, ಮೃದಂಗ, ವೇಷಭೂಷಣ, ನೃತ್ಯ, ಭಾವಾಭಿನಯ,ಪ್ರಾತ್ಯಕ್ಷತೆಯ ಗೋಷ್ಠಿಗಳು, ಬೇಸಿಗೆ ಶಿಬಿರಗಳು, ಜಾನಪದ ವಿಚಾರ ಮಂಡನೆ ಸೇರಿದಂತೆ ತಮ್ಮ ಬದುಕಿನುದ್ದಕ್ಕೂ ಯಕ್ಷಗಾನದ ಬೆಳವಣಿಗೆಗಾಗಿ ಶ್ರಮಿಸಿದ ಸಂತ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು.

ರಾಮಾಯಣದ ೧೯ ಪ್ರಸಂಗಗಳು, ಮಹಾಭಾರತದ ೫೦ ಪ್ರಸಂಗಗಳು, ಭಾಗವತದ ೨೦ ಪ್ರಸಂಗಗಳನ್ನು ಹೊಸ್ತೋಟ ಭಾಗವತರು ರಚಿಸಿದ್ದಾರೆ. ಪಂಚತಂತ್ರ ಕಥೆಗಳನ್ನು ಆಧರಿಸಿ ಮಕ್ಕಳಿಗಾಗಿ ಚೈತ್ರ ಪೂರ್ಣಿಮಾ ಹೆಸರಿನಲ್ಲಿ ೧೫ ಪ್ರಸಂಗಗಳನ್ನು ರಚಿಸಿದ್ದಾರೆ. ಶೆಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕವನ್ನು ಆಧರಿಸಿ ‘ಮೇಘಕೇತ
, ಹೋಮರನ ಒಡಿಸ್ಸಿ ಕಾವ್ಯವನ್ನಾಧರಿಸಿ ‘ಉಲ್ಲಾಸದತ್ತ ಚರಿತ್ರೆ, ಕಾಳಿದಾಸನ ‘ಮೆಘದೂತ, ‘ಶಾಕುಂತಲ, ಉತ್ತರರಾಮಚರಿತೆ, ದೂತವಾಕ್ಯ ಸಹಿತ ೨೫೦ಕ್ಕೂ ಹೆಚ್ಚು ಪ್ರಸಂಗಗಳನ್ನು ಇವರು ರಚಿಸಿದ್ದಾರೆ.

ಹೊಸ್ತೋಟ ಭಾಗವತರು ರಚಿಸಿರುವ ‘ನಿಸರ್ಗಾನುಸಂಧಾನ
ಎಂಬ ಪರಿಸರ ರಕ್ಷಣೆಯ ಆಶಯಕ್ಕೆ ಪೂರಕವಾಗಿರುವ ಪ್ರಸಂಗವು ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ದೇಶಾದ್ಯಂತ ಹಲವಾರು ಪ್ರದರ್ಶನಗಳನ್ನು ಕಂಡಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ, ಜಾನಪದ ಅಕಾಡೆಮಿಯ ವಿಶೇಷ ಪ್ರಶಸ್ತಿ, ಅಗ್ನಿ ಟ್ರಸ್ಟ್ ನಿಂದ ಕೊಡಮಾಡುವ ಪರಮದೇವ ಪ್ರಶಸ್ತಿ, ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ, ಸೀತಾನದಿ ಗಣಪಯ್ಯ ಭಾಗವತ ಪ್ರಶಸ್ತಿ, ಕಲಾರಂಗ ಉಡುಪಿಯಿಂದ ಕೊಡಮಾಡುವ ಉಪ್ಪೂರು ನಾರಾಯಣ ಭಾಗವತ ಪ್ರಶಸ್ತಿ, ಪೇಜಾವರ ಮಠದ ರಾಮ ವಿಠಲ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಹೊಸ್ತೋಟ ಭಾಗವತರನ್ನು ಅರಸಿಕೊಂಡು ಬಂದಿವೆ.

No comments:

Advertisement