Tuesday, January 28, 2020

ಕೊರೋನಾವೈರಸ್: ಭಾರತೀಯರ ಸ್ಥಳಾಂತರಕ್ಕೆ ಏರ್ ಇಂಡಿಯಾ ಬೋಯಿಂಗ್ ೭೪೭ ಸಜ್ಜು

ಕೊರೋನಾವೈರಸ್: ಭಾರತೀಯರ ಸ್ಥಳಾಂತರಕ್ಕೆ ಏರ್ ಇಂಡಿಯಾ ಬೋಯಿಂಗ್ ೭೪೭ ಸಜ್ಜು
ಹೊಸ ವರ್ಷಾಚರಣೆಯ ರಜೆ ವಿಸ್ತರಣೆಗೆ ಚೀನಾ ನಿರ್ಧಾರ
ನವದೆಹಲಿ/ ಬೀಜಿಂಗ್: ನೂತನ ಮಾರಣಾಂತಿಕ ಕೊರೋನಾವೈರಸ್ ವ್ಯಾಧಿಗೆ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೮೦ಕ್ಕೇ ಏರಿದ್ದು, ವ್ಯಾಧಿಯ ಕೇಂದ್ರವಾಗಿರುವ ಚೀನಾದ ವುಹಾನ್ ನಗರದಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ಬೋಯಿಂಗ್ ೭೪೭ ವಿಮಾನವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು  2020 ಜನವರಿ 27ರ ಸೋಮವಾರ ತಿಳಿಸಿದರು.

ಈ ಮಧ್ಯೆ, ಸೋಂಕನ್ನು ಹರಡದಂತೆ ನಿಯಂತ್ರಿಸುವ ಸಲುವಾಗಿ ತನ್ನ ನೂತನ ಚಾಂದ್ರ ವರ್ಷದ ರಜೆಯನ್ನು ವಿಸ್ತರಿಸಲು ಚೀನಾ ಸರ್ಕಾರ ನಿರ್ಧರಿಸಿತು.

ನಾಗರಿಕರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರದ ನಿರ್ಧಾರಕ್ಕಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ಕಾದಿದ್ದಾರೆ.  "ಕೊರೊನಾವೈರಸ್ ಭಯದಿಂದಾಗಿ ಚೀನಾದ ವುಹಾನ್ ನಗರದಿಂದ ಭಾರತೀಯರನ್ನು ಸ್ಥಳಾಂತರಿಸಲು ಏರ್ ಇಂಡಿಯಾ ಬೋಯಿಂಗ್ ೭೪೭ ಸನ್ನದ್ಧವಾಗಿದೆ. ಸಂಸ್ಥೆಯು ಸರ್ಕಾರದ ನಿರ್ಧಾರಕ್ಕಾಗಿ ಕಾಯುತ್ತಿದೆ" ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.

ಸಾಂಕ್ರಾಮಿಕ ಕೊರೋನಾವೈರಸ್ ರೋಗಕ್ಕೆ ಚೀನಾದಲ್ಲಿ ಈವರೆಗೆ ೮೦ ಜನರು ಬಲಿಯಾಗಿದ್ದಾರೆ ಮತ್ತು ದೇಶದ ೨೭೪೪ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಚಿಕಿತ್ಸೆ ಪಡೆಯುತ್ತಿರುವ ೪೬೧ ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿತು.

ಕಳೆದ ೨೪ ಗಂಟೆಗಳಲ್ಲಿ ೭೬೯ ಹೊಸ ಪ್ರಕರಣಗಳು ದೃಢಪಟ್ಟಿವೆ. ೩೮೦೬ ಶಂಕಿತ ಪ್ರಕರಣಗಳು ದಾಖಲಾಗಿವೆ ಎಂದು ಆಯೋಗದ ವರದಿ ತಿಳಿಸಿತು.

ಕೊರೋನಾವೈರಸ್ ಮಹಾಮಾರಿಯು ಚೀನಾದ ಪ್ರಮುಖ ಸಾರಿಗೆ ಕೇಂದ್ರವಾದ ವುಹಾನ್ ನಗರದಲ್ಲೇ ಹುಟ್ಟಿಕೊಂಡಿದೆ. ನ್ಯುಮೋನಿಯಾ ಮಾದರಿಯ ಅಸ್ವಸ್ಥತೆಯಿಂದ ೮೦ ಮಂದಿ ಸಾವನ್ನಪ್ಪಿದ್ದಾರೆ. ೫೧ ಮಂದಿ ಚೇತರಿಸಿಕೊಂಡಿದ್ದು, ೫೭೯೪ ಮಂದಿಯಲ್ಲಿ ಇನ್ನೂ ಸೋಂಕಿನ ಶಂಕೆ ಇದೆ ಎಂದು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಷಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು.

No comments:

Advertisement