My Blog List

Sunday, January 19, 2020

ಅಪಘಾತ: ಖ್ಯಾತ ನಟಿ ಶಬಾನಾ ಆಜ್ಮಿಗೆ ಗಂಭೀರ ಗಾಯ

ಅಪಘಾತ: ಖ್ಯಾತ ನಟಿ ಶಬಾನಾ ಆಜ್ಮಿಗೆ  ಗಂಭೀರ ಗಾಯ
ಮುಂಬೈ -ಪುಣೆ ಹೆದ್ದಾರಿಯಲ್ಲಿ ಟ್ರಕ್ಗೆ ಗುದ್ದಿದ ಎಸ್ಯುವಿ
ನವದೆಹಲಿ: ಮಹಾರಾಷ್ಟ್ರದ ರಾಯಗಡದ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ 2020 ಜನವರಿ 18ರ ಶನಿವಾರ ಸಂಭವಿಸಿದ ಅಪಘಾತ ಒಂದರಲ್ಲಿ ಖ್ಯಾತ ಬಾಲಿವುಡ್ ಚಿತ್ರ ನಟಿ ಶಬಾನಾ ಆಜ್ಮಿ ಗಂಭೀರವಾಗಿ ಗಾಯಗೊಂಡರು.  ಅವರ ಕಾರಿನ ಚಾಲಕ ಕೂಡಾ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿದವು.

ಶಬಾನಾ ಆಜ್ಮಿ ಅವರ ಪತಿ ಜಾವೇದ್ ಅಖ್ತರ್ ಅವರು ಅಪಘಾತಕ್ಕೆ ಈಡಾದ ಕಾರಿನ ಹಿಂದಿನಿಂದಲೇ ಬರುತ್ತಿದ್ದ ಆಡಿ ಕಾರಿನಲ್ಲಿದ್ದರು ಎನ್ನಲಾಗಿದ್ದು ಅವರಿಗೆ ಯಾವುದೇ ಗಾಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.
ಮುಂಬೈಯಿಂದ ಸುಮಾರು ೬೦ ಕಿಮೀ ದೂರದ ಖಾಲಾಪುರದಲ್ಲಿ ಮಧ್ಯಾಹ್ನ .೩೦ರ ವೇಳೆಗೆ ಅಪಘಾತ ಸಂಭವಿಸಿದೆ. ಅಪಘಾತದ ಹೊತ್ತಿನಲ್ಲಿ ಕಾರು ಮುಂಬೈಯತ್ತ ಸಾಗುತ್ತಿತ್ತು. ೬೯ರ ಹರೆಯದ ನಟಿ ಶಬಾನಾ ಆಜ್ಮಿ ಅವರು ಪಯಣಿಸುತ್ತಿದ್ದ  ಟಾಟಾ ಸಫಾರಿ ಎಸ್ಯುವಿ ಕಾರು ಟ್ರಕ್ ಒಂದಕ್ಕೆ ಹಿಂದಿನಿಂದ ಗುದ್ದಿದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ವರದಿ ಹೇಳಿತು.

ಕಾರಿನಲ್ಲಿ ಚಾಲಕನ ಪಕ್ಕದ ಆಸನದಲ್ಲಿ ಕುಳಿತಿದ್ದ ಶಬಾನಾ ಆಜ್ಮಿ ಅವರನ್ನು ಇತರರ ನೆರವಿನಿಂದ ಹೊರತರಲಾಯಿತು. ಆಗ ಅವರ ಮುಖ ಮತ್ತು ಕಣ್ಣುಗಳು ಊದಿಕೊಂಡಿದ್ದವು. ಕತ್ತು ಮತ್ತು ಗಲ್ಲಕ್ಕೂ ಗಾಯಗಳಾಗಿದ್ದವು ಎಂದು ವರದಿಗಳು ಹೇಳಿದವು.
ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎಸ್ಯುವಿ ಸಂಪೂರ್ಣ ಹಾನಿಯಾಗಿದೆ. ಕಾರಿನ ಬಾನೆಟ್ ಸಂಪೂರ್ಣವಾಗಿ ಪುಡಿಯಾಗಿರುವುದನ್ನು ರೇಡಿಯೇಟರ್ ಮತ್ತು ಬಾನೆಟ್ ಸಂಪೂರ್ಣ ಧ್ವಂಸಗೊಂಡಿರುವುದನ್ನು ಚಿತ್ರಗಳು ತೋರಿಸಿವೆ.

ಆಜ್ಮಿ ಅವರು ಕುಳಿತಿದ್ದ ಸಫಾರಿ ಕಾರಿನ ಚಾಲಕ ಟ್ರಕ್ನ್ನು ಹಿಂದಕ್ಕೆ ಹಾಕಿ ಮುನ್ನುಗ್ಗಲು ಯತ್ನಿಸಿದಾಗ, ಕಾರು ಟ್ರಕ್ಗೆ ಎಡಬದಿಯಿಂದ ಡಿಕ್ಕಿ ಹೊಡೆಯಿತು ಎಂದು ಖಾಲಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಶ್ವಜೀತ್ ಕೈಂಜಾಡೆ ಹೇಳಿದರು.

ಅಪಘಾತ ಸಂಭವಿಸಿದ ಹದಿನೈದು ನಿಮಿಷಗಳ ಒಳಗಾಗಿ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿತ್ತು. ಆದರೆ ಅದಕ್ಕೂ ಮುನ್ನವೇ ಶಬಾನಾ ಅವರನ್ನು ಆಸ್ಪತ್ರೆಗೆಗೆ ಒಯ್ಯಲಾಗಿತ್ತು.

ಶಬಾನಾ ಆಜ್ಮಿ ಅವರನ್ನು ನವೀ ಮುಂಬೈಯ ಎಂಜಿಎಂ ಆಸ್ಪತ್ರೆಗೆ ದಾಖಲಿಸಿಲಾಗಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಯಗಡದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪಾರಸ್ಕರ್ ಹೇಳಿದ್ದನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

ಶಬಾನಾ ಆಜ್ಮಿ ಅವರಿಗೆ ೧೯೯೮ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದ್ದು, ಅವರು ಐದು ಬಾರಿ ರಾಷ್ಟ್ರೀಯ  ಚಲನಚಿತ್ರ ಪ್ರಶಸ್ತಿಯನ್ನು  ಪಡೆದಿದ್ದರು. ಅಂಕುರ್, ಆರ್ಥ್, ಮಂಡಿ ಇತ್ಯಾದಿ ಚಿತ್ರಗಳಲ್ಲಿನ ಅವರ ನಟನೆ ಅತ್ಯಂತ ಜನಪ್ರಿಯವಾಗಿದ್ದವು.

No comments:

Advertisement