Thursday, January 16, 2020

ಭದ್ರತಾ ಮಂಡಳಿಯ ದುರ್ಬಳಕೆ: ಪಾಕಿಸ್ತಾನಕ್ಕೆ ಭಾರತದ ಛೀಮಾರಿ

ಭದ್ರತಾ ಮಂಡಳಿಯ ದುರ್ಬಳಕೆ: ಪಾಕಿಸ್ತಾನಕ್ಕೆ ಭಾರತದ ಛೀಮಾರಿ
ವಿಶ್ವಸಂಸ್ಥೆಯಲ್ಲಿ ಚೀನಾ ಮೂಲಕ ಕಾಶ್ಮೀರ ಪ್ರಸ್ತಾಪ ಯತ್ನ
ನವದೆಹಲಿ: ಚೀನಾದ ಮೂಲಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಷಯ ಪ್ರಸ್ತಾಪಿಸಲು ಪಾಕಿಸ್ತಾನವು ನಡೆಸಿರುವ ಯತ್ನವನ್ನುವಿಶ್ವಸಂಸ್ಥೆ ಭದ್ರತಾ ಮಂಡಳಿಯ ದುರ್ಬಳಕೆಯ ಯತ್ನಎಂಬುದಾಗಿ ಭಾರತವು 2020 ಜನವರಿ 16ರ ಗುರುವಾರ ಪಾಕಿಸ್ತಾನಕ್ಕೆ ಛೀಮಾರಿ ಹಾಕಿತು.

ಭವಿಷ್ಯದಲ್ಲಿ ಇಂತಹ ದುಸ್ಸಾಹಸಗಳಿಗೆ ಕೈಹಾಕದೆ ದೂರ ಉಳಿಯುವ ಮೂಲಕ ಜಾಗತಿಕ ಮುಜುಗರ ತಪ್ಪಿಸಿಕೊಳ್ಳುವ ಆಯ್ಕೆ ಪಾಕಿಸ್ತಾನಕ್ಕೆ ಇದೆಎಂದು ಭಾರತದ ವಿದೇಶಾಂಗ ಸಚಿವಾಲಯವು ಹೇಳಿತು.

ಪಾಕಿಸ್ತಾನದ ಸರ್ವಋತು ಮಿತ್ರನಾಗಿರುವ ಚೀನಾಕ್ಕೆ ಕೂಡಾ ಜಾಗತಿಕ  ಸಹಮತವು ಇಂತಹ ಕೃತ್ಯಗಳಿಂದ ದೂರ ಉಳಿಯುವುದು ಒಳಿತು ಎಂಬ ಸ್ಪಷ್ಟ ಸೂಚನೆಯನ್ನು ನೀಡಿದೆಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಚೀನಾವು 2020 ಜನವರಿ 15ರ ಬುಧವಾರ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ರಹಸ್ಯ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲು ಯತ್ನಿಸಿದ್ದು ಅದಕ್ಕೆ ತಿರುಗುಬಾಣವಾಗಿ ಪರಿಣಮಿಸಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಗಳು ವಿಷಯವನ್ನು ಚರ್ಚಿಸುವ ವೇದಿಕೆ ಇದಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಚೀನಾದ ಯತ್ನಕ್ಕೆ ತಣ್ಣೀರು ಎರಚಿದ್ದವು. ಚೀನಾದ ಹೊರತಾಗಿ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ರಶ್ಯಾ, ಅಮೆರಿಕ ಮತ್ತು ಇಂಗ್ಲೆಂಡ್ ಸಭೆಯಲ್ಲಿ ಪಾಲ್ಗೊಂಡಿದ್ದವು.

ಬಹುತೇಕ ಸದಸ್ಯರು ಇದು ದ್ವಿಪಕ್ಷೀಯ ವಿಷಯ. ಆದ್ದರಿಂದ ರಹಸ್ಯ ಸಮಾವೇಶವು ಯಾವುದೇ ನಿರ್ಧಾರಕ್ಕೂ ಬರಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಅಭಿಪ್ರಾಯವನ್ನು ಬಹುತೇಕ ಸದಸ್ಯ ರಾಷ್ಟ್ರಗಳು ನೀಡಿದವು. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಏನಾದರೂ ಚರ್ಚಿಸಬೇಕಾದ ವಿಷಯ ಇದ್ದರೆ ಅದು ದ್ವಿಪಕ್ಷೀಯವಾಗಿಯೇ ಚರ್ಚಿಸಲ್ಪಡಬೇಕು ಎಂಬ ಸ್ಪಷ್ಟವಾದ ಸಂದೇಶ ಪಾಕಿಸ್ತಾನಕ್ಕೆ ಕಿವಿಗಡಚಿಕ್ಕುವಂತೆ ಅಪ್ಪಳಿಸಿದೆಎಂದು ಸಚಿವಾಲಯ ಹೇಳಿತು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದೀಚೆಗೆ ಜಮ್ಮು ಮತ್ತು ಕಾಶ್ಮೀರ ವಿಷಯ ಪ್ರಸ್ತಾಪಗೊಂಡದ್ದು ಇದು ಎರಡನೇ ಬಾರಿ ಆದರೆ ಎರಡೂ ಭಾರಿ ಫಲಿತಾಂಶ ಒಂದೇ ಆಗಿತ್ತು. ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಪಾಕಿಸ್ತಾನದಿಂದ ಪ್ರಚೋದಿತವಾದ ಚೀನಾ  ಎರಡು ಬಾರಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ವಿಷಯವನ್ನು ಪ್ರಸ್ತಾಪಿಸಲು ಯತ್ನಿಸಿತ್ತು. 
ಡಿಸೆಂಬರ್ ತಿಂಗಳಿನಲ್ಲಿ ವಿಷಯ ಪ್ರಸ್ತಾಪಕ್ಕೆ ಮೊದಲ ಯತ್ನ ನಡೆದಿತ್ತು.   
ಅವರು (ಚೀನಾ) ಏಕೆ ಪಾಕಿಸ್ತಾನದ ಪರವಾಗಿ ಇದನ್ನು ಮಾಡುತ್ತಿದ್ದಾರೆ? ಅವರು ಇಂತಹ ಕೃತ್ಯದಿಂದ ದೂರ ಉಳಿಯಬೇಕು ಎಂಬುದು ನನ್ನ ಸಲಹೆಎಂದು ಕುಮಾರ್ ನುಡಿದರು. 
ಬುಧವಾರದ ಸಭೆಯ ಬಳಿಕ ಚೀನೀ ರಾಯಭಾರಿ ಝಂಗ್ ಜುನ್ ಅವರು ಪಾಕಿಸ್ತಾನದ ವಿದೇಶಾಂಗ ಸಚಿವರು ಭದ್ರತಾ ಮಂಡಳಿಗೆ ಪತ್ರಗಳನ್ನು ಬರೆದು ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಪರಿಸ್ಥಿತಿ ಬಗ್ಗೆ ಗಮನ ಹರಿಸುವಂತೆ ಕೋರಿದ್ದರು ಎಂದು ಹೇಳಿದ್ದರು.  
ಸಭೆಯಲ್ಲಿ ಏನಾದರೂ ಪ್ರಗತಿಯಾಯಿತೇ ಎಂಬ ಪ್ರಶ್ನೆಗೆಸಭೆಯು ಉಭಯರಿಗೂ ಉದ್ವಿಗ್ನತೆ ಇನ್ನಷ್ಟು ಹೆಚ್ಚಿದರೆ ಆಗುವ ಅಪಾಯದ ಬಗ್ಗೆ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ ಎಂಬುದು ನನಗೆ ಖಚಿತವಿದೆ. ಇದು ಅವರಿಗೆ ಪರಸ್ಪರ ಸಂಪರ್ಕಿಸಲು ಮತ್ತು ಮಾತುಕತೆ ನಡೆಸಲು ಹಾಗೂ ಮಾತುಕತೆಯ ಮೂಲಕ ಪರಿಹಾರ ಕಂಡು ಹಿಡಿಯಲು ನೆರವಾಗುವುದು ಎಂಬುದು ನನ್ನ ಯೋಚನೆಎಂದು ಜುನ್ ಉತ್ತರಿಸಿದ್ದರು.  
ಇದು ಆಂತರಿಕ ವಿಷಯ ಎಂಬ ಭಾರತದ ನಿಲುವನ್ನು ಇತರ ಹಲವಾರು ರಾಷ್ಟ್ರಗಳು ಬೆಂಬಲಿಸಿವೆ. ಆದಾಗ್ಯೂ, ರಾಜಕೀಯ ನಾಯಕರ ಬಂಧನಗಳ ಬಗ್ಗೆ  ಮತ್ತು ಇಂಟರ್ನೆಟ್ ನಿರ್ಬಂಧಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿವೆ. ಅಮೆರಿಕ ಕೂಡಾ ಕಳೆದ ವಾರ ಬಗ್ಗೆ ತನ್ನ ಕಳವಳವನ್ನು ವ್ಯಕ್ತ ಪಡಿಸಿತ್ತು.   

No comments:

Advertisement