ಕರ್ನಾಟಕದ ಇಬ್ಬರು ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
ನವದೆಹಲಿ: ೨೦೧೯ರ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ 2020ರ ಜನವರಿ 21ರ ಮಂಗಳವಾರ ಪ್ರಕಟವಾಗಿದ್ದು, ಕರ್ನಾಟಕದ ಇಬ್ಬರು ಸೇರಿದಂತೆ ದೇಶದ ೨೨ ಮಕ್ಕಳು
’ಶೌರ್ಯ ಪ್ರಶಸ್ತಿ’ಗೆ ಭಾಜನರಾದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ಉಕ್ಕಿ ಹರಿಯುತ್ತಿದ್ದ ಪ್ರವಾಹದ ನೀರಿನ ಮಧ್ಯೆ ಆಂಬುಲೆನ್ಸ್ ಮುಂದಕ್ಕೆ ಸಾಗಲು ಸಾಧ್ಯವಾಗುವಂತೆ ದಾರಿ ತೋರಿಸಿ ಐವರನ್ನು ರಕ್ಷಿಸಿದ್ದ ಬಾಲಕ ವೆಂಕಟೇಶ ಮತ್ತು ಕೋಪೋದ್ರಿಕ್ತ ಹಸುವಿನ ದಾಳಿಯಿಂದ ಮನೆಯ ಬಳಿ ನಿಂತಿದ್ದ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದ ಆರತಿ ಸೇಠ್ ಪ್ರಶಸ್ತಿಗೆ ರಾಜ್ಯದಿಂದ ಆಯ್ಕೆಯಾದರು.
ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯು ಮಕ್ಕಳ ಸಾಹಸ ಕಾರ್ಯಗಳನ್ನು ಗುರುತಿಸಿ ಶೌರ್ಯ ಪ್ರಶಸ್ತಿಯನ್ನು ಘೋಷಿಸಿತು. ವೆಂಕಟೇಶ, ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಸಂಕನೂರು ಗ್ರಾಮದವರು ಮತ್ತು ಆರತಿ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ನವಿಲಗೋಣ ಗ್ರಾಮದವರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆ ಇದೆ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥೆ ಗೀತಾ ಸಿದ್ಧಾರ್ಥ ತಿಳಿಸಿದರು.
ರಾಯಚೂರಿನ ವೆಂಕಟೇಶ ಮತ್ತು ಉತ್ತರ ಕನ್ನಡದ ಆರತಿ ಸೇಠ್ ಶೌರ್ಯ ಅವರ ಹೆಸರುಗಳನ್ನು ಒಳಗೊಂಡ ೨೨ ಮಂದಿ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳ ಪಟ್ಟಿಯನ್ನು ದೆಹಲಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ಪ್ರಕಟಿಸಿತು.
ವೆಂಕಟೇಶನ ಶೌರ್ಯ: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೆಂಕಟೇಶ, ಪ್ರವಾಹ ಸಂದರ್ಭದಲ್ಲಿ ರಸ್ತೆ ಕಾಣದೆ ನಿಂತಿದ್ದ ಅಂಬುಲೆನ್ಸ್ಗೆ ದಾರಿ ತೋರಿಸುವ ಮೂಲಕ ಐದು ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ ದೇಹದೊಂದಿಗೆ ಇತರ ಐದು ಮಂದಿಯನ್ನು ಒಯ್ಯುತ್ತಿದ್ದ ಅಂಬುಲೆನ್ಸ್
ಜಾಗಟ್ಕಲ್ ನಿಂದ ಯಾದಗಿರಿ ಕಡೆಗೆ ಹೊರಟಿತ್ತು. ಕೃಷ್ಣಾ ನದಿಯಿಂದ ಉಂಟಾದ ಪ್ರವಾಹಕ್ಕೆ ಹಿರೇರಾಯಕುಂಪಿ- ಗೂಗಲ್ ಸೇತುವೆ ಮುಳುಗಡೆ ಆಗಿತ್ತು. ಸಂಪೂರ್ಣ ಪ್ರವಾಹದ ನೀರಿನಿಂದ ಆವೃತಗೊಂಡು ರಸ್ತೆ ಕಾಣದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಂಬುಲೆನ್ಸ್ ಚಾಲಕನಿಗೆ ರಸ್ತೆ ಎಲ್ಲಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆಗ ತನ್ನನ್ನು ಹಿಂಬಾಲಿಸುವಂತೆ ಆಂಬುಲೆನ್ಸ್ ಚಾಲಕನಿಗೆ ಸೂಚಿಸಿದ ಬಾಲಕ ವೆಂಕಟೇಶ ನೀರಿನಲ್ಲಿ ನಡೆದು ದಾರಿ ತೋರಿಸುವ ಮೂಲಕ ರಸ್ತೆ ದಾಟಲು ನೆರವು ನೀಡಿದ್ದ.
ಕೃಷ್ಣಾ ನದಿ ಪ್ರವಾಹದ ವೇಳೆ ಆಂಬುಲೆನ್ಸ್ಗೆ
ದಾರಿ ತೋರಿಸಿ ಸಾಹಸ ಮೆರೆದ ಬಾಲಕನನ್ನು ರಾಯಚೂರು ಜಿಲ್ಲಾಡಳಿತ ಕೂಡಾ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸಹೋದರನನ್ನು ರಕ್ಷಿಸಿದ ಆರತಿ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ನವಿಲಗೋಣು ಗ್ರಾಮದ ಬಾಲಕಿ ಆರತಿ ಸೇಠ್, ಕೋಪೊದ್ರಿಕ್ತ ಹಸುವಿನ ದಾಳಿಯಿಂದ ತನ್ನ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದಳು. ಉದ್ರಿಕ್ತ ಹಸು ಬಾಲಕನ ಮೇಲೆ ದಾಳಿ ಮಾಡಲು ಬರುತ್ತಿತ್ತು. ಕೊಂಬಿನಿಂದ ಇನ್ನೇನು ತಿವಿಯಬೇಕೆನ್ನಿಸುವಷ್ಟರಲ್ಲಿ ತಮ್ಮನ ರಕ್ಷಣೆಗೆ ಧಾವಿಸಿದ್ದ ಆರತಿ ಹಸು ಮತ್ತು ತಮ್ಮನ ನಡುವೆ ನಿಂತು ತಮ್ಮನ ಪ್ರಾಣ ರಕ್ಷಿಸಿದ್ದಳು. ಮಕ್ಕಳ ಈ ಧೈರ್ಯವನ್ನು ಪ್ರಶಂಸಿಸಿ ಈ ಪ್ರಶಸ್ತಿ ನೀಡಲಾಯಿತು.
No comments:
Post a Comment